Author name: editor

ಪ್ರಾದೇಶಿಕ ವಾರ್ತೆಗಳು

ಆ.12ರಂದು ವಿಶ್ವ ಅಂಗಾಂಗ ದಾನ ದಿನಾಚರಣೆ

ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಯೂತ್ ರೆಡ್‌ಕ್ರಾಸ್ ಘಟಕದ ವತಿಯಿಂದ ಆ.೧೩ರಂದು ಬೆಳಗ್ಗೆ ೧೧ಕ್ಕೆ ವಿಶ್ವ ಅಂಗಾಂಗ ದಾನ ದಿನಾಚರಣೆ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆಯಲಿದೆ. ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜೀವ ಸಾರ್ಥಕತೆಯ ರಾಜ್ಯ ಸಂಯೋಜಕ ಡಾ.ರವಿಶಂಕರ್ ಶೆಟ್ಟಿ ಕೆ., ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ.ಸದಾನಂದ ಪೂಜಾರಿ, ಎಎಂಸಿ ಮಂಗಳೂರು ಘಟಕದ ಅಧ್ಯಕ್ಷ ಡಾ.ಪ್ರಶಾಂತ್.ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಸತೀಶ್‌ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಆ.12ರಂದು ವಿಶ್ವ ಜಿನೇವಾ ಒಪ್ಪಂದ ದಿನಾಚರಣೆ

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಯೂತ್ ರೆಡ್‌ಕ್ರಾಸ್ ಘಟಕ ಮತ್ತು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿ ಆ.೧೨ರಂದು ಬೆಳಗ್ಗೆ ೧೧.೩೦ಕ್ಕೆ ವಿಶ್ವ ಜಿನೇವಾ ಒಪ್ಪಂದ ದಿನಾಚರಣೆ ದೇರಳಕಟ್ಟೆಯ ಎ.ಬಿ.ಶೆಟ್ಟೆ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ಆವಿಷ್ಕಾರ್ ಸಭಾಂಗಣದಲ್ಲಿ ನಡೆಯಲಿದೆ. ನಿಟ್ಟೆ ಪರಿಗಣಿತ ವಿ.ವಿ.ಯ ಉಪಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕರ್ನಲ್ ಎ.ಕೆ.ಜಯಚಂದ್ರನ್ ಗೌರವ ಅತಿಥಿಯಾಗಿ ಹಾಗೂ ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ, ಕಾರ್ಯದರ್ಶಿ ಡಾ.ಸತೀಶ್‌ಕುಮಾರ್ ಶೆಟ್ಟಿ, ಖಜಾಂಜಿ ಗುರುದತ್ ನಾಯಕ್ ಮತ್ತು ಯೂತ್ ರೆಡ್‌ಕ್ರಾಸ್ ಉಪ ಸಮಿತಿ ನಿರ್ದೇಶಕಿ ಡಾ.ಸುಮನಾ.ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಸಂತ ತೆರೆಸಾ ಚರ್ಚ್ ನ ಐ ಸಿ ವೈ ಎಂ ಸದಸ್ಯರಿಂದ ಪಾವ್ಸಾಂತ್ ಉಡ್ಕಣಾಂ ಕಾರ್ಯಕ್ರಮ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಐ ಸಿ ವೈ ಎಂ ಘಟಕದ ಸದಸ್ಯರಿಂದ ಪಾವ್ಸಾಂತ್ ಉಡ್ಕಣಾಂ (ಮಳೆಯಲ್ಲಿ ಆಟ) ಎಂಬ ವಾರ್ಡ್ ಮಟ್ಟದ ಆಟೋಟ ಸ್ಪರ್ಧೆಗಳನ್ನು ಚರ್ಚ್ ನ ತೆರೆದ ಮೈದಾನದಲ್ಲಿ ಆಯೋಜಿಸಲಾಗಿತ್ತು.ಪಂದ್ಯಾಟದ ಮೊದಲು ಚರ್ಚ್ ನ ಸಹಾಯಕ ಧರ್ಮ ಗುರು ವಂದನೀಯ ಫಾ. ಜೋಸೆಫ್ ಕುವೆಲ್ಲೊ ಪ್ರಾರ್ಥಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಂದನೀಯ ಫಾ. ರೋಶ್ವಿನ್ ಲೋಪೆಜ್ ಮಾತನಾಡಿ ಯುವ ಶಕ್ತಿಯ ಸದುಪಯೋಗ ಅಗತ್ಯ. ಇಂತಹ ಕ್ರೀಡೆಗಳಿಂದ ವಾರ್ಡುಗಳ ಸದಸ್ಯರ ಪ್ರತಿಭೆಗಳು ಹೊರ ಹೊಮ್ಮುತ್ತವೆ. ಸಂಘಟನೆ, ಏಕತೆ, ಒಗ್ಗಟ್ಟು ಹಾಗೂ ಸೇವಾ ಮನೋಭಾವನೆಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದರು.ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ವಿಜೇತ ವಾರ್ಡುಗಳ ಸದಸ್ಯರ ತಂಡಗಳಿಗೆ ಟ್ರೋಫಿಯನ್ನು ವಿತರಿಸಿ ಐ ಸಿ ವೈ ಎಂ ಸದಸ್ಯರ ಕಾರ್ಯ ವೈಖರಿಯನ್ನು ಕೊಂಡಾಡಿ ಮುಂದೆಯೂ ಚರ್ಚ್ ನ ಏಳಿಗೆಗಾಗಿ ಶ್ರಮಿಸ ಬೇಕೆಂದರು.ಸ್ಪರ್ಧೆಯಲ್ಲಿ ಸೆಲಿನ್ ಡಿ ಸೋಜಾ ನೇತೃತ್ವದ ಸಂತ ಸೆಬಾಸ್ಟಿಯನ್ ತಂಡ ಪ್ರಥಮ, ಶೀಲಾ ಡಿ ಸೋಜಾ ನೇತೃತ್ವದ ತಂಡ ದ್ವಿತೀಯ ಹಾಗೂ ರೋಷನ್ ಮೊಂತೇರೊ ನೇತೃತ್ವದ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.ಕಾರ್ಯಕ್ರಮದಲ್ಲಿ ಚರ್ಚ್ ನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ , ಕಾರ್ಯದರ್ಶಿ ಹಾಗೂ ಐ ಸಿ ವೈ ಎಂ ಘಟಕದ ಸಚೇತಕ ರೋಷನ್ ಮೊಂತೇರೊ , ಐ ಸಿ ವೈ ಎಂ ಘಟಕದ ಅಧ್ಯಕ್ಷ ಡ್ಯಾರನ್ ಅರಾನ್ಹಾ ಮುಂತಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸಂಸ್ಥೆಯ ಕಾರ್ಯಚಟುವಟಿಕೆ ದಾಖಲೀಕರಣ ಅಗತ್ಯ -ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ

ಮಂಗಳೂರು: ಸಂಘ, ಸಂಸ್ಥೆಗಳ ಕಾರ್ಯಚಟುವಟಿಕೆ ಹಾಗೂ ಸಾಧನೆಗಳ ದಾಖಲೀಕರಣ ಅಗತ್ಯ. ಇದರಿಂದ ಸಂಸ್ಥೆಯ ಸಾಧನೆಯನ್ನು ಪ್ರತಿಬಿಂಬಿಸಲು ಸಾಧ್ಯವಿದೆ ಎಂದು ದ.ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್‌ನ ಗೃಹ ಪತ್ರಿಕೆ “ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ” ಇದರ ೯ನೇ ಸಂಚಿಕೆಯನ್ನು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತರಾತುರಿ ಹಾಗೂ ಪೈಪೋಟಿಯಿಂದ ಪ್ರಸಾರವಾಗುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಅರಿಯುವುದು ಕಷ್ಟಕರವಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಮಾನವೀಯ ಹಾಗೂ ನೈಜ ಸುದ್ದಿಗಳನ್ನು ಸಮಾಜಕ್ಕೆ ನೀಡುವ ಮಹತ್ವದ ಜವಾಬ್ದಾರಿ ಪತ್ರಿಕೆಗಳ ಮೇಲಿದೆ ಎಂದು ಅವರು ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಇಂದಾಜೆ ಉಪಸ್ಥಿತರಿದ್ದರು.ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಡಾ.ಮಾಲತಿ ಶೆಟ್ಟಿ ಮಾಣೂರು ರವರಿಗೆ ಪ್ರದಾನ

ಬೆಂಗಳೂರಿನ ನಿರ್ಮಾತೃ ನಾಡ ಪ್ರಭು ಕೆಂಪೇಗೌಡ ಸ್ಮರಣಾರ್ಥ ಬೆಂಗಳೂರಿನ ಸಮಥ ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಗಸ್ಟ್ 9 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಇಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಾಹಿತಿ ,ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದು . ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು . ಕಾರ್ಯಕ್ರಮದ ಉದ್ಘಾಟನೆಯನ್ನು ಜೆ.ಕೆ ರಶ್ಮಿ ಐಪಿಎಸ್ ಪೊಲೀಸ್ ಮಹಾ ನಿರೀಕ್ಷಕರು ಬೆಂಗಳೂರು ಮಾಡಿದರು .ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಂ ಶ್ರೀನಿವಾಸ್ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಡಾ. ಶರವಣ , ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮ ಕನ್ನಡ ಪರ ಸಂಘದ ಸಂಘಟನೆಯ ಒಕ್ಕೂಟ ಅಧ್ಯಕ್ಷರಾದ ಎಂ .ತಿಮ್ಮಯ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದರು . ಕಾರ್ಯಕ್ರಮ ಸಂಯೋಜಕರಾದ ಎಸ್ ಆರ್ ವಿಜಯ ಸಮರ್ಥ ಸ್ವಾಗತಿಸಿದರು. ಶ್ರೀ ಮತಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರಕ್ತದಾನ ಶ್ರೇಷ್ಠ ದಾನ: ಡಾ ಭರತ್ ಶೆಟ್ಟಿಸುರತ್ಕಲ್ ಸ್ಫೋಟ್ಸ್೯, ಕಲ್ಚರಲ್ ಸೇವಾ ಟ್ರಸ್ಟ್ ನಿಂದ ರಕ್ತದಾನ ಶಿಬಿರ

ಸುರತ್ಕಲ್: ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ ಜಾತಿ, ಮತ, ಧರ್ಮಗಳನ್ನು ಮರೆತು ನಾವು ನೀಡುವ ರಕ್ತದಿಂದ ಎಷ್ಟೋ ಜೀವಗಳನ್ನು ಉಳಿಸಬಹುದಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ! ಭರತ್ ವೈ ಶೆಟ್ಟಿ ನುಡಿದರುಅವರು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಮತ್ತು ಬಿ.ಎ.ಎಸ್.ಎಪ್ ಇಂಡಿಯಾ ಲಿಮಿಟೆಡ್‌, ಶ್ರೀ ರಾಮ್ ಪೈನಾನ್ಸ್ ಮಂಗಳೂರು, ಸುರತ್ಕಲ್ ಪೋಲಿಸ್ ಠಾಣೆ ಇದರ ಜಂಟಿ ಆಶ್ರಯದಲ್ಲಿ ಕೆ,ಎಂ,ಸಿ ಅಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲಾ ವಜ್ರಮಹೋತ್ಸವ ಸಭಾಂಗಣದಲ್ಲಿ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ,ವಿದ್ಯಾರ್ಥಿ ವೇತನ ಹಾಗೂ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ನವರು ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದು ಅದರ ಜೊತೆಗೆ ರಕ್ತದಾನದಂತಹ ಶಿಬಿರವನ್ನು ಇತರ ಸಂಸ್ಥೆಗಳ ಜೊತೆ ಅಯೋಜನೆ ಮಾಡಿರುವುದು ಶ್ಲಾಘನೀಯ ಮುಂದೆಯೂ ಇಂತಹ ಸೇವೆಗಳು ಮುಂದುವರಿಯಲಿ ಎಂದರು. ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಆಯುಕ್ತರಾದ ರವೀಶ್ ನಾಯಕ್ ಮಾತನಾಡಿ ನಮಗೆ ಪ್ರತಿಯೊಬ್ಬರಿಗೂ ಬೇಕಾಗಿರುವುದು ಆರೋಗ್ಯ ಅದನ್ನು ನಾವು ಮೊದಲು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದರು ಬಾಳ ಬಿ.ಎ.ಎಸ್.ಎಫ್ ಸಂಸ್ಥೆಯ ಎಚ್ ಅರ್ ವಿಭಾಗದ ಪ್ರಭಂದಕರಾದ ಸಂತೋಷ್ ಪೈ, ಶ್ರೀರಾಮ ಪೈನಾನ್ಸ್ ಲಿಮಿಟೆಡ್ ವಲಯ ಮುಖ್ಯಸ್ಥರಾದ ಶರಚ್ಚಂದ್ರ ಭಟ್ ಕೆ, ಗಡಿಪ್ರಧಾನರಾದ ಪಿ ಟಿ ರೈ ಯಾನೆ ಮಂಜು ಕಾವ,ಡಾ! ದಿವಾಕರ್ ರಾವ್ ಸುರತ್ಕಲ್, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಶೋಕ್ ಶೆಟ್ಟಿ, ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಎಚ್ ಶ್ರೀರಂಗ, ಯಕ್ಷಗಾನ ಕಲಾವಿದ ರವಿಕುಮಾರ್ ಸುರತ್ಕಲ್,ಶ್ರೀ ರಾಮ್ ಪೈನಾನ್ಸ್ ನ ಚೇತನ್ ಅರಸ್,ಉದ್ಯಮಿ ಮೋಹನ್ ಶೆಟ್ಟಿ ಬೊಳ್ಳಾರುಗುತ್ತು, ಮಂಗಳೂರು ಕೆ.ಎಂ.ಸಿ ಅಸ್ಪತ್ರೆ ವೈದ್ಯರಾದ ಡಾ! ಕಾರ್ತಿಕ್ ಕೆ.ಎಸ್,ಸುರತ್ಕಲ್ ಪೋಲೀಸ್ ಠಾಣೆಯ ಉಪಠಾಣಾಧಿಕಾರಿ ಶಶಿಧರ್ ಶೆಟ್ಟಿ, ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ವಿರಾಜಪೇಟೆ ಡಿ,ವೈ ಎಸ್ ಪಿ ಮಹೇಶ್ ಕುಮಾರ್ ,ಗೌರವಾಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷರಾದ ಮನೋಹರ ಶೆಟ್ಟಿ ಸೂರಿಂಜೆ, ಉಪಾಧ್ಯಕ್ಷ ನಾಗರಾಜ್ ಕಡಂಬೋಡಿ, ಕೋಶಾಧಿಕಾರಿ ಜಗದೀಪ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಕಿರಣ್ ಅಚಾರ್ಯ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು ಇದೇ ಸಂದರ್ಭದಲ್ಲಿ ಪೋಲೀಸ್ ಇಲಾಖೆಯಲ್ಲಿ ಪಿ ಎಸ್ ಐ ಹುದ್ದೆಯಿಂದ ನಿವೃತ್ತಿ ಹೊಂದಿದ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿರುವ ಕುಶಲ ಮಣಿಯಾಣಿ ಅವರನ್ನು ಸನ್ಮಾನಿಸಲಾಯಿತು ಶ್ರೀ ರಾಮ್ ಪೈನಾನ್ಸ್ ವತಿಯಿಂದ ಆರ್ಥಿಕವಾಗಿ ತೀರಾ ಹಿಂದುಳಿದ ಸುಮಾರು 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್ ಬಂಟರ ಸಂಘದ ಒಗ್ಗಟ್ಟು ಇತರರಿಗೆ ಮಾದರಿ: ಐಕಳ ಹರೀಶ್ ಶೆಟ್ಟಿ. ಸುರತ್ಕಲ್ ಬಂಟರ ಸಂಘದಲ್ಲಿ ಆಟಿದ ಪೊರ್ಲು ಕಾರ್ಯಕ್ರಮ, ಸಾಧಕರಿಗೆ ಅಭಿನಂದನೆ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ “ಆಟಿದ ಪೊರ್ಲು” ಮತ್ತು ಅಭಿನಂದನಾ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಆಟಿ ತಿಂಗಳಲ್ಲಿ ಮನೆ ಮನೆಗೆ ತಿರುಗಾಟ ನಡೆಸುವ “ಚಿಕ್ಕಮೇಳ” ಗುತ್ತಿನ ಮನೆಯ ಚಾವಡಿಗೆ ಆಗಮಿಸುವ ಮೂಲಕ ಉದ್ಘಾಟಿಸಲಾಯಿತು.ಬಳಿಕ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘದ ಒಗ್ಗಟ್ಟು ಇತರರಿಗೆ ಮಾದರಿಯಾಗಿದೆ. ಯಾಕೆಂದರೆ “ಆಟಿದ ಪೊರ್ಲು” ಕಾರ್ಯಕ್ರಮದಲ್ಲೂ ಗಡಿ ಪ್ರಧಾನರನ್ನು, ಹಿರಿಯರನ್ನು ಗುರುತಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹಿರಿಯರನ್ನು ಮುಂದಿಟ್ಟು ಕಿರಿಯರ ಒಗ್ಗೂಡುವಿಕೆಯಿಂದ ಜರುಗುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಖುಷಿಯ ವಿಚಾರ” ಎಂದರು. ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಮಾತಾಡಿ, “ಬಂಟರ ವೇದಿಕೆಯಲ್ಲಿ ಪಕ್ಷಬೇಧವಿಲ್ಲ. ಬಂಟ ಸಮಾಜದ ಎಲ್ಲರೂ ಜೊತೆಯಾಗಿ ಸಮಾಜಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬಂಟ ಸಮಾಜದ ಯಾವುದೇ ಕಾರ್ಯಕ್ರಮವಿರಲಿ ಅದರಲ್ಲಿ ನಾನು ನಿಮ್ಮ ಜೊತೆಯಿದ್ದೇನೆ” ಸುರತ್ಕಲ್ ಬಂಟರ ಸಂಘ ಹೊಸ ಕಟ್ಟಡ ನಿರ್ಮಾಣದ ಉದ್ದೇಶವನ್ನು ಇಟ್ಟುಕೊಂಡಿದೆ. ಅದಕ್ಕೆ ನಾವೆಲ್ಲರೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಪಾದುವಾ ಕಾಲೇಜ್ ಇದರ ಪ್ರೊಫೆಸರ್ ಅಕ್ಷಯ ಆರ್. ಶೆಟ್ಟಿ ಅವರು ದಿಕ್ಸೂಚಿ ಭಾಷಣದಲ್ಲಿ “ಆಟಿ ತಿಂಗಳು ಇಂದು ಸೆಲೆಬ್ರೇಷನ್ ಆಗ್ತಾ ಇದೆ. ಹಿಂದೆ ನಮ್ಮ ಹಿರಿಯರು ಅನುಭವಿಸಿದ ಆಟಿ ತಿಂಗಳ ಕಷ್ಟ ಇಂದು ಉಳಿದಿಲ್ಲ. ಧಾರಾಕಾರವಾಗಿ ಸುರಿಯುವ ಮಳೆಯೂ ಇಲ್ಲ. ನಮ್ಮ ಹಿರಿಯರು ಆಟಿ ತಿಂಗಳಲ್ಲಿ ಪ್ರಕೃತಿದತ್ತವಾಗಿ ಸಿಗುವ ಆಹಾರವನ್ನು ಸೇವಿಸಿ ತಮ್ಮ ಅರೋಗ್ಯವನ್ನು ತಾವೇ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಆಟಿ ತಿಂಗಳು ಇಂದು ಆಚರಣೆಗಷ್ಟೇ ಸೀಮಿತವಾಗಿದೆ. ಆಟಿ ತಿಂಗಳ ಮಹತ್ವವನ್ನು ಅರಿತು ಆಚರಣೆ ಮಾಡಿದಲ್ಲಿ ಹಿರಿಯರ ಶ್ರಮ ಸಾರ್ಥಕ“ ಎಂದರು.ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಬಾಳ ಜಗನ್ನಾಥ ಶೆಟ್ಟಿ ಅವರು, ”ಆಟಿದ ಪೊರ್ಲು ಕಾರ್ಯಕ್ರಮದಲ್ಲಿ ಸಂಘದ ಎಲ್ಲರ ಶ್ರಮವಿದೆ. ಒಂದು ತಿಂಗಳು ತಯಾರಿ ನಡೆಸಿ ಕಾರ್ಯಕ್ರಮ ಯಶಸ್ಸುಗೊಳಿಸಲು ಶ್ರಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಂಟ ಸಮಾಜ ಮಾತ್ರವಲ್ಲದೆ ಇತರ ಸಮಾಜದವರನ್ನು ಗುರುತಿಸಲಾಗಿದೆ. ಇದಕ್ಕಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳು“ ಎಂದರು.ವೇದಿಕೆಯಲ್ಲಿ ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಬಂಟವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಕಟೀಲು ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಬಂಟರ ಸಂಘ ಸುರತ್ಕಲ್ ಮಾಜಿ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಪಿ. ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಮಹಿಳಾ ಘಟಕದ ಕಾರ್ಯದರ್ಶಿ ರಾಜೇಶ್ವರಿ ಡಿ. ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ. ಶೆಟ್ಟಿ, ಉಪಾಧ್ಯೆಕ್ಷೆ ಜಯಂತಿ ಪಿ.ಟಿ. ರೈ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ವಾಮನ ಶೆಟ್ಟಿ ಸೂರಿಂಜೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಗೀತಾ ಸುರತ್ಕಲ್, ಭರತನಾಟ್ಯ ಕ್ಷೇತ್ರದಲ್ಲಿ ಚಂದ್ರಶೇಖರ ನಾವಡ ಚೇಳಾಯರು, ಲಲಿತಕಲೆ ಕ್ಷೇತ್ರದಲ್ಲಿ ಧನಪಾಲ್ ಶೆಟ್ಟಿಗಾರ್ ತಡಂಬೈಲ್, ಗುಡಿ ಕೈಗಾರಿಕೆಯಲ್ಲಿ ವಾರಿಜ ಡಿ.ಬಂಗೇರ ಕುಳಾಯಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾಲ್ಗೊಂಡ ಎನ್ ಎಸ್ಎಸ್ ಅತ್ಯುತ್ತಮ ಸ್ವಯಂ ಸೇವಕಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಯುಕ್ತಿ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ಡಾ ಸುಧಾಚಂದ್ರಶೇಖರ ಶೆಟ್ಟಿ ಮತ್ತು ಸೌಮ್ಯ ಭಂಡಾರಿ ಹೊಸಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.ಬಳಿಕ ಮಹಿಳೆಯರಿಂದ ರಾಜೇಶ್ವರಿ ಡಿ ಶೆಟ್ಟಿ ಅವರ ನಿರ್ದೇಶನದಲ್ಲಿ ಸುಮಾರು 50 ಮಂದಿ ಮಹಿಳೆಯರು ಭಾಗವಹಿಸಿದ್ದ “ಸೆರಗು” ಎಂಬ ಕಿರು ಪ್ರಹಸನ ನಡೆಯಿತು. ಮಕ್ಕಳಿಂದ ಹಾಡು, ನೃತ್ಯ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಅಂತಾರಾಷ್ಟ್ರೀಯ ವಾರ್ತೆಗಳು

ಮಂಗಳೂರು ಮೂಲದ ಡಾ ದಿನಕರ್ ಬಿ ರೈ ಇವರಿಂದ ನ್ಯೂಯಾರ್ಕ್‌ನಲ್ಲಿ ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ

ನ್ಯೂಯಾರ್ಕ್, ಜುಲೈ 25: ಗಾಲ್ಫ್ ಆಟದಲ್ಲಿ ನಿಖರತೆ ಹಾಗೂ ಸ್ಥಿರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ಮೂಲದ ಖ್ಯಾತ ರಕ್ತನಾಳ ಶಸ್ತ್ರಚಿಕಿತ್ಸಕ, ವಿಜ್ಞಾನಿ, ಕ್ರೀಡಾಪಟು ಹಾಗೂ ಆವಿಷ್ಕಾರಕ ಡಾ. ದಿನಕರ್ ಬಿ. ರೈ ಅಭಿವೃದ್ಧಿಪಡಿಸಿರುವ ‘ರೈಸ್ ಸೂಪರ್ ಟಿ’ ಮತ್ತು ‘ರೈಸ್ ಡಿವೈಸ್’ ಎಂಬ ಎರಡು ನೂತನ ಗಾಲ್ಫ್ ಅಲೈನ್‌ಮೆಂಟ್ ಸಾಧನಗಳನ್ನು ನ್ಯೂಯಾರ್ಕ್‌ನ ವಿಲೇಜ್ ಕ್ಲಬ್ ಆಫ್ ಲೇಕ್ ಸಕ್ಸೆಸ್‌ನಲ್ಲಿ ಜುಲೈ 25ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗಾಲ್ಫ್ ಆಟಗಾರರು, ಕ್ಲಬ್ ಸದಸ್ಯರು, ವೃತ್ತಿಪರರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು. ಗಾಲ್ಫ್ ಆಟದಲ್ಲಿ ಅತ್ಯಂತ ಪ್ರಮುಖವಾದ ಅಲೈನ್‌ಮೆಂಟ್‌ ಅನ್ನು ಇನ್ನಷ್ಟು ನಿಖರವಾಗಿ ಮತ್ತು ಸುಲಭವಾಗಿ ಅರ್ಥೈಸಿಕೊಳ್ಳುವ ಉದ್ದೇಶದಿಂದ ಡಾ. ರೈ ಅವರು ಅಭಿವೃದ್ಧಿಪಡಿಸಿರುವ ಸಾಧನಗಳ ಕುರಿತು ಕಾರ್ಯಕ್ರಮದಲ್ಲಿ ವಿವರಿಸಲಾಯಿತು.ಗಾಲ್ಫ್ ಆಟಗಾರರು ಸಾಮಾನ್ಯವಾಗಿ ತಾವು ಹೊಡೆಯಬೇಕಾದ ಗುರಿಯನ್ನು ಗುರುತಿಸಿ, ಚೆಂಡಿನಿಂದ ಗುರಿಯವರೆಗೆ ಮನಸ್ಸಿನಲ್ಲಿ ಒಂದು ಕಾಲ್ಪನಿಕ ರೇಖೆಯನ್ನು ಕಲ್ಪಿಸಿಕೊಳ್ಳುತ್ತಾರೆ. ಬಳಿಕ ಕ್ಲಬ್‌ಫೇಸ್, ಕಾಲು, ಭುಜ ಹಾಗೂ ಸೊಂಟವನ್ನು ಆ ರೇಖೆಗೆ ಅನುಗುಣವಾಗಿ ಹೊಂದಿಸಿಕೊಳ್ಳುತ್ತಾರೆ. ಆದರೆ ಈ ಕಾಲ್ಪನಿಕ ರೇಖೆ ಕಣ್ಣಿಗೆ ಕಾಣುವುದಿಲ್ಲ. ಡಾ. ರೈ ಅವರ ಆವಿಷ್ಕಾರಗಳು ಈ ಅಲೈನ್‌ಮೆಂಟ್ ಪ್ರಕ್ರಿಯೆಯನ್ನು ದೃಶ್ಯವಾಗಿ ಹಾಗೂ ಪುನರಾವರ್ತಿಸಲು ಸಾಧ್ಯವಾಗುವ ರೀತಿಯಲ್ಲಿ ಸರಳಗೊಳಿಸುವ ಉದ್ದೇಶ ಹೊಂದಿವೆ.‘ರೈಸ್ ಸೂಪರ್ ಟಿ’ಯನ್ನು ಗಾಲ್ಫ್ ಕೋರ್ಸ್‌ನಲ್ಲಿ ನೇರವಾಗಿ ಬಳಸಬಹುದಾದ ದಿಕ್ಕು ಸೂಚಿಸುವ ಟೀ ಆಗಿ ವಿನ್ಯಾಸಗೊಳಿಸಲಾಗಿದೆ. ‘ರೈಸ್ ಡಿವೈಸ್’ ಅನ್ನು ಗಾಲ್ಫ್ ಅಭ್ಯಾಸ ಮೈದಾನದಲ್ಲಿ ತರಬೇತಿ ಮತ್ತು ಬೋಧನೆಗಾಗಿ ಬಳಸಬಹುದಾಗಿದೆ. ಎರಡೂ ಸಾಧನಗಳು ಪರಸ್ಪರ ಲಂಬವಾಗಿರುವ ದಿಕ್ಕು ಮತ್ತು ಅಲೈನ್‌ಮೆಂಟ್ ಭಾಗಗಳ ಮೂಲಕ ಗುರಿಯ ರೇಖೆಯನ್ನು ಗುರುತಿಸಲು, ಕ್ಲಬ್‌ಫೇಸ್ ಅನ್ನು ಸರಿಯಾಗಿ ಹೊಂದಿಸಲು, ದೇಹವನ್ನು ಅಲೈನ್ ಮಾಡಲು ಹಾಗೂ ಪುನರಾವರ್ತಿತ ಸ್ವಿಂಗ್ ಪಥವನ್ನು ಬೆಳೆಸಿಕೊಳ್ಳಲು ನೆರವಾಗುತ್ತವೆ.ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಂವಾದ ಕಾರ್ಯಕ್ರಮವನ್ನು ಆರ್‌ಆರ್ ಗಾಲ್ಫ್ ಅಕಾಡೆಮಿಯ ರಾಜೀವ್ ರುದ್ರಾ ನಿರ್ವಹಿಸಿದರು. ವಿಲೇಜ್ ಕ್ಲಬ್‌ನ ಗಾಲ್ಫ್ ಪ್ರೊ ರೋಬಿ ಮಿಸ್ಟ್ರೆಟ್ಟಾ ಹಾಗೂ ಡಾ. ದಿನಕರ್ ಬಿ. ರೈ ಅವರು ಅಲೈನ್‌ಮೆಂಟ್‌ನ ಮಹತ್ವ, ಸಾಧನಗಳ ಅಭಿವೃದ್ಧಿಯ ಹಿಂದಿನ ಚಿಂತನೆ ಹಾಗೂ ಗಾಲ್ಫ್ ಆಟಗಾರರು, ತರಬೇತುದಾರರು ಮತ್ತು ವಿದ್ಯಾರ್ಥಿಗಳಿಗೆ ಇದರ ಉಪಯೋಗಗಳ ಕುರಿತು ಚರ್ಚಿಸಿದರು. ಸಾಧನಗಳ ಬಳಕೆಯನ್ನು ವಿವರಿಸುವ ತರಬೇತಿ ವಿಡಿಯೊಗಳು ಹಾಗೂ ಡಾ. ರೈ ಅವರ ಕ್ರೀಡಾ ಮತ್ತು ವೃತ್ತಿಜೀವನದ ಕುರಿತ ವಿಡಿಯೊಗಳನ್ನೂ ಪ್ರದರ್ಶಿಸಲಾಯಿತು.ಭಾರತದ ಖ್ಯಾತ ಗಾಲ್ಫ್ ಆಟಗಾರ ಹಾಗೂ Professional Golf Tour of Indiaಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮನ್ದೀಪ್ ಝೋಲ್, ನಾರ್ತ್ ಶೋರ್ ಕಂಟ್ರಿ ಕ್ಲಬ್‌ನ ಗಾಲ್ಫ್ ವೃತ್ತಿಪರ ಆಡಮ್ ಲೇರ್ಡ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಗಾಲ್ಫ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ರಿಷಿ ನಾರಾಯಣ್ ಅವರು ಸಾಧನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಸಾಧನಗಳನ್ನು ನೇರವಾಗಿ ವೀಕ್ಷಿಸುವ ಹಾಗೂ ಡಾ. ರೈ ಮತ್ತು ಕಾರ್ಯಕ್ರಮದ ತಂಡದೊಂದಿಗೆ ಸಂವಾದ ನಡೆಸುವ ಅವಕಾಶವೂ ಕಲ್ಪಿಸಲಾಗಿತ್ತು.ಗಲ್‌ವಿಂಗ್ ಮೋಟಾರ್ ಕಾರ್ಸ್, ಅಸ್ಟೋರಿಯಾ ಸಂಸ್ಥೆಯ ಅಧ್ಯಕ್ಷ ಪೀಟರ್ ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದರು. ವಿಲೇಜ್ ಕ್ಲಬ್ ಆಫ್ ಲೇಕ್ ಸಕ್ಸೆಸ್ ಹಾಗೂ ಅದರ ಆಡಳಿತ ಮಂಡಳಿಯೂ ಕಾರ್ಯಕ್ರಮಕ್ಕೆ ಬೆಂಬಲ ನೀಡಿತು. ಸಾಧನಗಳ ಅಭಿವೃದ್ಧಿಯ ಸಂದರ್ಭದಲ್ಲಿ ನೀಡಿದ ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕಾಗಿ ಕ್ಲಬ್‌ನ ಗಾಲ್ಫ್ ಪ್ರೊ ರೋಬಿ ಮಿಸ್ಟ್ರೆಟ್ಟಾ ಅವರಿಗೆ ಡಾ. ರೈ ಕೃತಜ್ಞತೆ ಸಲ್ಲಿಸಿದರು.ಐದು ದಶಕಗಳಿಗೂ ಹೆಚ್ಚು ಕಾಲ ರಕ್ತನಾಳ ಶಸ್ತ್ರಚಿಕಿತ್ಸಕ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ. ಡಿಂಕರ್ ಬಿ. ರೈ ಅವರು ಕ್ರೀಡೆಯಲ್ಲಿಯೂ ಸಕ್ರಿಯರಾಗಿದ್ದು, ರಾಷ್ಟ್ರೀಯ ಮಟ್ಟದ ಮಾಜಿ ಕ್ರಿಕೆಟಿಗರಾಗಿದ್ದಾರೆ. ವೈದ್ಯಕೀಯ, ವಿಜ್ಞಾನ ಮತ್ತು ಕ್ರೀಡೆಯ ಅನುಭವದ ಹಿನ್ನೆಲೆಯಲ್ಲಿ ಗಾಲ್ಫ್ ಆಟದಲ್ಲಿ ಅಲೈನ್‌ಮೆಂಟ್ ಅನ್ನು ಸರಳ ಜ್ಯಾಮಿತೀಯ ತತ್ವಗಳ ಮೂಲಕ ದೃಶ್ಯವಾಗಿ ಅರ್ಥೈಸಿ, ಕಲಿತು ಹಾಗೂ ಪುನರಾವರ್ತಿಸಲು ಸಾಧ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ.“ಅಲೈನ್‌ಮೆಂಟ್ ಅನ್ನು ದೃಶ್ಯವಾಗಿ, ನಿಖರವಾಗಿ ಮತ್ತು ಪುನರಾವರ್ತಿಸಲು ಸಾಧ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ. ಇದರಿಂದ ಗಾಲ್ಫ್ ಆಟಗಾರರು ಆತ್ಮವಿಶ್ವಾಸದಿಂದ ನಿಂತು, ತಮ್ಮ ಸಂಪೂರ್ಣ ಗಮನವನ್ನು ಸ್ವಿಂಗ್‌ನತ್ತ ಕೇಂದ್ರೀಕರಿಸಬಹುದು,” ಎಂದು ಡಾ. ರೈ ಹೇಳಿದರು.‘ರೈಸ್ ಸೂಪರ್ ಟಿ’ ಹಾಗೂ ‘ರೈಸ್ ಡಿವೈಸ್’ ಎರಡೂ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿರುವ ಆವಿಷ್ಕಾರಗಳಾಗಿವೆ. ‘ರೈಸ್ ಸೂಪರ್ ಟಿ’ಯನ್ನು ಗಾಲ್ಫ್ ಕೋರ್ಸ್‌ನಲ್ಲಿ ಬಳಸಲು ಹಾಗೂ ‘ರೈಸ್ ಡಿವೈಸ್’ ಅನ್ನು ಅಭ್ಯಾಸ ಮೈದಾನದಲ್ಲಿ ಗಾಲ್ಫ್ ಆಟಗಾರರು ಮತ್ತು ತರಬೇತುದಾರರ ಬಳಕೆಗೆ ವಿನ್ಯಾಸಗೊಳಿಸಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಮೂಲ್ಕಿ ಬಳಿಯ ಕೆರೆಕಾಡು ಅಕ್ಷಯ ಮಹಿಳಾ ಮಂಡಳಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಧವ ಶೆಟ್ಟಿಗಾರ್ ದಂಪತಿಯನ್ನು ಸನ್ಮಾನಿಸಲಾಯಿತು. ‘ತುಳುನಾಡಿನ ಆಹಾರ ಪದ್ಧತಿ ಶ್ರೇಷ್ಟ’: ಅಮೂಲ್ಯ ಶೆಟ್ಟಿ

ಮೂಲ್ಕಿ: ಆಟಿ ತಿಂಗಳಲ್ಲಿ ಹಿಂದಿನ ಜೀವನ ಶೈಲಿಯ ನೆನಪನ್ನು ಮಾಡಿಕೊಂಡು, ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಹೇಳಿ ಕೊಡುವ ಅನಿವಾರ್ಯತೆ ಇದೆ, ಇಂದು ಮಹಿಳೆಯರು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದೃಢವಾಗಿ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಜಗತ್ತಿಗೆ ಶ್ರೇಷ್ಠತೆಯನ್ನು ಸಾರಿದ ತುಳುನಾಡಿನ ಆಹಾರ ಪದ್ಧತಿಗಳ ಬಗ್ಗೆ ವಿಶೇಷ ಮಾಹಿತಿ ಪಡೆದುಕೊಳ್ಳುವ ಜವಬ್ದಾರಿ ಮಹಿಳೆಯರದ್ದಾಗಿದೆ ಎಂದು ಕಿನ್ನಿಗೋಳಿ ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಅಮೂಲ್ಯ ಶೆಟ್ಟಿ ಕಟೀಲು ಹೇಳಿದರು.ಅವರು ಮೂಲ್ಕಿ ಬಳಿಯ ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ಅಕ್ಷಯ ಮಹಿಳಾ ಮಂಡಳಿಯ ಸಂಯೋಜನೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಸಹಕಾರದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಆಟಿ ತಿಂಗಳ ಮಾಹಿತಿ ನೀಡಿದರು.ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಪಿ.ಆರ್.ರಾಜೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಂದಿರದ ಪ್ರಧಾನ ಅರ್ಚಕ ರಾಘವೇಂದ್ರ ರಾವ್ ಕೆರೆಕಾಡು ಮಾತನಡಿದರು.ಸಾಮಾಜಿಕ ಧಾರ್ಮಿಕ ಕ್ಷೇತ್ರ ಹಾಗೂ ಕೈಮಗ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾಧವ ಶೆಟ್ಟಿಗಾರ್ ಹಾಗೂ ದಮಯಂತಿ ದಂಪತಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ತ್ರಿವೇಣಿ ಕೆರೆಕಾಡು ಅವರನ್ನು ಸನ್ಮಾನಿಸಲಾಯಿತು.ಅಕ್ಷಯ ಮಹಿಳಾ ಮಂಡಳಿಯ ಅಧ್ಯಕ್ಷೆ ಲಲಿತಾ ಭಾಸ್ಕರ ಶೆಟ್ಟಿಗಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.ಚೇತನ್ ಶೆಟ್ಟಿಗಾರ್ ಪುನರೂರು ಸ್ವಾಗತಿಸಿದರು. ನವ್ಯಾ ಶೆಟ್ಟಿಗಾರ್ ಕೆರೆಕಾಡು ವಂದಿಸಿದರು. ಉಷಾ ನರೇಂದ್ರ ಕೆರೆಕಾಡು ನಿರೂಪಿಸಿದರು. ಸುಮಾರು 35 ಪಾರಂಪರಿಕ ಆಹಾರ ಖಾದ್ಯಗಳಿಂದ ಊಟೋಪಚಾರ ನಡೆಸಲಾಯಿತು. ಸ್ಥಳೀಯ ಪ್ರತಿಭೆಗಳಿಂದ ತುಳು ಜಾನಪದ ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು

ಪ್ರಾದೇಶಿಕ ವಾರ್ತೆಗಳು

ಟಾಗೋರ್ ಪಾರ್ಕ್ ನಲ್ಲಿ ಕ್ವಿಟ್ ಇಂಡಿಯಾ ದಿನಾಚರಣೆ

ಮಂಗಳೂರು,ಆ.9;ಮಂಗಳೂರು ಟಾಗೋರ್ ಪಾರ್ಕ್ ನಲ್ಲಿರುವ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಕ್ವಿಟ್ ಇಂಡಿಯಾ ದಿನಾಚರಣೆ ರವಿವಾರ ಟಾಗೋರ್ ಪಾರ್ಕನಲ್ಲಿ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ನಿಕಟ ಪೂರ್ವ ಕಾರ್ಪೊರೇಟರ್ ಎ. ಸಿ ವಿನಯರಾಜ್ ಅವರು ಧ್ವಜಾರೋಹಣ ಗೈದು ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿ ದೇಶದ ಜನರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದ ಮಹಾತ್ಮ ಗಾಂಧಿಯವರ ನಾಯಕತ್ವದ ಬಗ್ಗೆ ವಿವರಿಸಿದರು.ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ‌ಬಿ.ಎನ್ . ಗಾಂಧಿ ಪ್ರತಿಮೆಗೆ ಮಾಲಾರ್ಪಣೆಗೆ ಗೈದು ಸ್ವಾತಂತ್ರ್ಯ ಹೋರಾಟದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಪಾತ್ರದ ಬಗ್ಗೆ ವಿವರಿಸಿದರು.ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾದಕ ವಸ್ತು ಮುಕ್ತನಾಡು ನನ್ನ ಪಾತ್ರ ಪ್ರಬಂಧ ಸ್ಪರ್ಧೆಯಲ್ಲಿ ದಯಾನಂದ ಪೈ ಸತೀಶ್ ಪೈ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪ್ರಣಮ್ಯ ಭಟ್ ಪ್ರಥಮ,ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಕಾಲೇಜಿನ ವಿದ್ಯಾರ್ಥಿನಿ ರುಕ್ಸಾನ ದ್ವಿತೀಯ ಮತ್ತು ಕಾವೂರು ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧನ್ವಿತಾ ತೃತೀಯ ಬಹುಮಾನ ಗಳಿಸಿದ್ದಾರೆ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ,ಸ್ಮರಣಿಜೆ,ನಗದು ಪುರಸ್ಕಾರ ನೀಡಲಾಯಿತು.ಕಾಲೇಜು ವಿಭಾಗದ ಪ್ರಬಂಧ ಸ್ಪರ್ಧೆಯ ತೀರ್ಫುಗಾರರಾಗಿ ಪ್ರೊ.ಶಿವರಾಮಶೆಟ್ಟಿ, ಡಾ.ರಮೇಶ್ ಬಿ ,ಡಾ.ಅಮಿತಾ ಭಾಗವಹಿಸಿದ್ದರು.ಇತರ ವಿಭಾಗದ ತೀರ್ಪು ಗಾರರಾಗಿ ಸವಿತಾ ವೈ,ಗೀತಾ ಶೆಟ್ಟಿ ಹಾಗೂ ವಿಜಯ ಲಕ್ಷ್ಮಿ ಕಾರ್ಯನಿರ್ವಹಿಸಿದ್ದರು.ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ ಇಸ್ಮಾಯಿಲ್ ಎನ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಕಲ್ಲೂರು ನಾಗೇಶ್ ಮತ್ತು ಉಷಾ ಎಂ ಕಾರ್ಯಕ್ರಮ ನಿರೂಪಿಸಿದರು. ಸಹ ಕೋಶಾಧಿಕಾರಿ ಪ್ರೇಮ್ ಚಂದ್ ವಂದಿಸಿದರು. ಜತೆ ಕಾರ್ಯದರ್ಶಿ ಎನ್ ಜಿ ಮೋಹನ್ ಉಪಸ್ಥಿತರಿದ್ದರು.

Scroll to Top