Author name: editor

ಪ್ರಾದೇಶಿಕ ವಾರ್ತೆಗಳು

ಸಹಾಯಕ ನಗರ ಯೋಜನಾಧಿಕಾರಿ ಎನ್ ನಾಗೇಂದ್ರ ಇವರಿಗೆ ಮೂರನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ

ದಿನಾಂಕ 11.1.2026ನೇ ರಂದು ಧಾರವಾಡದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಕನ್ನಡ ಪರಿಷತ್ ಸ್ನೇಹಜೀವಿ ಫೌಂಡೇಶನ್ ಮುಂಬೈ ಅಕ್ಷರ ದೀಪ ಫೌಂಡೇಶನ್ ಧಾರವಾಡ ಸ್ನೇಹಜೀವಿ ಫೌಂಡೇಶನ್ ಕರ್ನಾಟಕ ಇವರ ಸಹಯೋಗದಲ್ಲಿ ನಡೆದ ವೀರ ಭಾರತೀಯ ಎಂಬ ಸಮಾರಂಭದಲ್ಲಿ ಸಹಾಯಕ ನಗರ ಯೋಜನಾಧಿಕಾರಿ ಎನ್ ನಾಗೇಂದ್ರ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಯನ್ನು ಸ್ವೀಕರಿಸಿದ್ದಾರೆ. ಈಗಾಗಲೇ ಇವರು ಎರಡು ರಾಷ್ಟ್ರೀಯ ಪ್ರಶಸ್ತಿ ಒಂದು ಅಂತರಾಷ್ಟ್ರೀಯ ಪ್ರಶಸ್ತಿ,ರಾಜ್ಯ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ, ಹಾಗೂ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಪ್ರಶಸ್ತಿ , ರೋಟರಿ ಪ್ರಶಸ್ತಿ ಪಡೆದಿರುತ್ತಾರೆ

ಪ್ರಾದೇಶಿಕ ವಾರ್ತೆಗಳು

ಸಾಮಾಜಿಕ, ಧಾರ್ಮಿಕ ಔದ್ಯಮಿಕ ಕ್ಷೇತ್ರಗಳ ಸಮರ್ಥ ಬಂಟ ನಾಯಕ: ಪಿ.ಮಹಾಬಲ ಚೌಟ ಕೋಡಿಕಲ್

ಶ್ರೀ ಕುರು ಅಂಬಾ ರಾಜರಾಜೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನ, ಕೋಡಿಕಲ್ ಇದರ ಆಡಳಿತ ಮೊಕ್ತೇಸರಾಗಿರುವ ಪಿ.ಮಹಾಬಲ ಚೌಟ ಅವರು ಸಾಮಾಜಿಕ, ಧಾರ್ಮಿಕ, ಔದ್ಯಮಿಕ ಕ್ಷೇತ್ರಗಳಲ್ಲಿ ತಮ್ಮ ನಿಸ್ವಾರ್ಥ ಸೇವಾ ಮನೋಭಾವದಿಂದ ಜನಜನಿತರಾಗಿದ್ದಾರೆ. ಇವರು ಕೊಟ್ಟಾರ ಕೋಡಿಕಲ್ ಬಂಟರ ಸಂಘದ ಅಧ್ಯಕ್ಷರಾಗಿದ್ದಾರೆ. ಮೂಲಕೆರೆ ನಾಗಬನ ಟ್ರಸ್ಟ್ ನ ಅಧ್ಯಕ್ಷರು, ಕೆಲಿಂಜ-ಉಳ್ಳಾಲ್ದಿ ಅಮ್ಮ ಕುಟುಂಬಿಕರ ಟ್ರಸ್ಟ್ ನ ಅಧ್ಯಕ್ಷರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಡಿಕಲ್‍ನ ನಿಕಟಪೂರ್ವ ಅಧ್ಯಕ್ಷರು, ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರು, ಜೈನ್ಸ್ ಗ್ರೂಪ್ ಇಂಟರ್‍ನ್ಯಾಷನಲ್ ಇದರ ಅಧ್ಯಕ್ಷರು ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮುಡಿಪು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಬೆಂಗಳೂರಿನಲ್ಲಿ ತಾಂತ್ರಿಕ ತರಬೇತಿ, 1987ರಲ್ಲಿ ರುಡ್‍ಶೆಡ್ ಧರ್ಮಸ್ಥಳದಲ್ಲಿ ತರಬೇತಿ, 1988ರಲ್ಲಿ ಶ್ರೀ ಕುರು ಅಂಬಾ ದೇವಸ್ಥಾನ ರಸ್ತೆಯ ದುಗ್ಗಮ್ಮ ಟವರ್ಸ್ ಕೋಡಿಕಲ್‍ನಲ್ಲಿ ಶ್ರೀ ದುರ್ಗಾ ಫರ್ನಿಚರ್ ಎಂಬ ಇಂಟಿರೀಯರ್ ಡೆಕೊರೇಟರ್ಸ್ ಮತ್ತು ಫರ್ನಿಚರ್ಸ್ ಉದ್ಯಮವನ್ನು ಸ್ಥಾಪಿಸಿ ಔದ್ಯಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಾ ಇದ್ದಾರೆ.ಇವರ ಸಾಧನೆಗೆ ಇವರ ಪತ್ನಿ ಅನುಸೂಯ ಎಂ. ಚೌಟ ಮಕ್ಕಳಾದ ಯು.ಎ.ಎಸ್.ನಲ್ಲಿ ಉದ್ಯೋಗದಲ್ಲಿರುವ ಚೈತ್ರ, ರಿಷಿಕಾ ಅವರು ಸ್ಪೂರ್ತಿಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಮಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಹಾಗೂ ನಾಟ್ಯಮಯೂರಿ ನೃತ್ಯ ಟ್ರಸ್ಟ್ ರಿಜಿಸ್ಟ್ರಾರ್ ವಿರಾಜಪೇಟೆ ಕೊಡಗು ಜಂಟಿ ಆಶ್ರಯದಲ್ಲಿ ಜನವರಿ 18ರಂದು ಯುವಶಕ್ತಿಯ ಸಕಾರ ಮೂರ್ತಿ ಸ್ವಾಮಿ ವಿವೇಕಾನಂದ ಜಯಂತಿ ಉತ್ಸವ ಪ್ರಯುಕ್ತ ನಡೆದ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಯನ್ನು ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ಹಾಸನದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಚೆನ್ನಬಸವೇಶ್ವರ ಕ್ಷೇತ್ರದ ಮಲ್ಲಿಕಾರ್ಜುನ ಸ್ವಾಮೀಜಿ ,ಅರಕಲಗೂಡು ವಿಧಾನಸಭಾ ಮಾಜಿ ಶಾಸಕ ಎ ಮಂಜು, ಕನ್ನಡ ಸಾಹಿತ್ಯ ಪರಿಷತ್ ಹಾಸನ ಗೌರವ ಕಾರ್ಯದರ್ಶಿ ಬೊಮ್ಮೇ ಗೌಡ, ಉದ್ಯಮಿ ಸಮಾಜಸೇವಕ ಸಾಧಿಕ್ ಅಹಮದ್ ಉಡುಪಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್, ಕಾರ್ಕಳದ ಉದ್ಯಮಿ ಶಕೀರ್ ಅಹಮದ್, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಚಿತ್ರದುರ್ಗ ರಾಜ್ಯ ಕಾರ್ಯದರ್ಶಿ ಸುರೇಶ್ ಜಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಆಶಾ ಆರ್ , ಅತಿಥಿಗಳಾಗಿ ಉಪಸ್ಥಿತರಿದ್ದರು. ನಾಟ್ಯಮಯೂರಿ ನೃತ್ಯ ಸಂಸ್ಥೆಯ ರೂವಾರಿ ಪ್ರೇಮಾಂಜಲಿ ಆಚಾರ್ಯ ಸ್ವಾಗತಿಸಿ , ಕಾರ್ಯದರ್ಶಿ ದೀಪಕ್ ವಂದಿಸಿದರು ವೆಂಕಟೇಶ್ ಆರ್ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರು ಕಳೆದ 21 ವರುಷಗಳಿಂದ ಸಾಹಿತ್ಯ, ಪತ್ರಿಕೋದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದಾರೆ. ಕಳೆದ 13 ವರುಷಗಳಿಂದ ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆಯನ್ನು ನಡೆಸುತ್ತಿದ್ದಾರೆ 9 ಕೃತಿಗಳನ್ನು ಪ್ರಕಟಿಸಿದ್ದಾರೆ.ಇತರ ಹಿರಿಯ ಕಿರಿಯ ಲೇಖಕರ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ 49 ಕೃತಿಯನ್ನು ಪತ್ರಿಕೆಯ ವತಿಯಿಂದ ಬಿಡುಗಡೆಗೊಳಿಸಿದ್ದಾರೆ .ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಸಲುವಾಗಿ ಈಗಾಗಲೇ 117 ಶಾಲಾ-ಕಾಲೇಜುಗಳಲ್ಲಿ ಉಚಿತ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ಅತ್ತಾವರದಲ್ಲಿ ಪತಿ ಸತ್ಯ ಪ್ರಕಾಶ್ ಶೆಟ್ಟಿ ಜೊತೆ ಸಾಹಿತ್ಯ ನಂದನದಲ್ಲಿ ವಾಸವಾಗಿದ್ದಾರೆ. ಇವರ ತಂದೆ ಹಿರಿಯ ಯಕ್ಷಗಾನ ಕಲಾವಿದರಾದ ದಿವಂಗತ ಕಿಟ್ಟಣ್ಣ ಶೆಟ್ಟಿ ಮಾಣೂರು ಹಾಗೂ ರೇವತಿ ಶೆಟ್ಟಿ ಮಾಣೂರು ದಂಪತಿಗಳ ಸುಪುತ್ರಿ.

ಪ್ರಾದೇಶಿಕ ವಾರ್ತೆಗಳು

ಜ. 25ರಂದು ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟಜ.25ರಂದು ಬೆಳಗ್ಗೆ 9ಕ್ಕೆ ನಗರದ ಕದ್ರಿಯ ಕೆ.ಪಿ.ಟಿ. ಮೈದಾನದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್. ಬಿ.ಎನ್. ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಕೆಪಿಟಿಯ ಪ್ರಾಂಶುಪಾಲ ಹರೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿರುವರು ಎಂದು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್.ಕೆ .ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಗಮ್ಮತ್ ಕಲಾವಿದೆರ್ ದುಬೈ ಅಧ್ಯಕ್ಷರಾಗಿ ವಾಸು ಕುಮಾರ್ ಶೆಟ್ಟಿ ಆಯ್ಕೆ

ಮಂಗಳೂರು: ವಿದೇಶದಲ್ಲಿ ಕಳೆದ ಒಂದೂವರೆ ದಶಕಕ್ಕೂ ಅಧಿಕ ವರ್ಷಗಳಿಂದ ನಿರಂತರ ತುಳು, ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಸರಣಿ ಕಾರ್ಯಕ್ರಮ ಸಮಾರಂಭ ಹಾಗೂ ಸಾಮಾಜಿಕ ಕಳಕಳಿಯ ಸೇವೆ ನಡೆಸಿ ಮುನ್ನಡೆಯುತ್ತಿರುವ ಗಮ್ಮತ್ ಕಲಾವಿದೆರ್ ದುಬೈ ಇದರ 2026-27ನೇ ಸಾಲಿನ ಅಧ್ಯಕ್ಷರಾಗಿ ಹಿರಿಯ ನಾಟಕ ಹಾಗೂ ಕಿರುಚಿತ್ರ ಕಲಾವಿದ ವಾಸು ಕುಮಾ‌ರ್ ಶೆಟ್ಟಿ ಆಯ್ಕೆಯಾಗಿದ್ದಾರೆ.ದುಬೈನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ನಾಟಕ ಹಾಗೂ ಯಕ್ಷಗಾನ ಕಲಾವಿದೆ ಸಮಂತಾ ಗಿರೀಶ್, ಕೋಶಾಧಿಕಾರಿಯಾಗಿ ಅನುಭವಿ ರಂಗಕಲಾವಿದೆ ಜೆನೆಟ್ ಸಿಕ್ಕೇರ, ಸಲಹಾ ಸಮಿತಿಯ ಗೌರವ ಪೋಷಕರಾಗಿ ಉಧ್ಯಮಿ ಹರೀಶ್ ಬಂಗೇರ, ತಂಡದ ಕಲಾತ್ಮಕ ಮಾರ್ಗದರ್ಶಕರಾಗಿ ರಂಗ ನಿರ್ದೇಶಕ ವಿಶ್ವನಾಥ ಬಿ. ಶೆಟ್ಟಿ ಆಯ್ಕೆಯಾಗಿದ್ದಾರೆ.ಗಮ್ಮತ್ ಕಲಾವಿದರ್ ಯುಎಇ ವಾರ್ಷಿಕ ಸಭೆಯುಎಇಯ ಪ್ರಸಿದ್ಧ ತುಳು ನಾಟಕ ತಂಡ ಗಮ್ಮತ್ ಕಲಾವಿದರ್ ಯುಎಇ 2011ರಲ್ಲಿ ಸ್ಥಾಪನೆಗೊಂಡು ತುಳು ರಂಗಭೂಮಿಯನ್ನು ಸಕ್ರಿಯವಾಗಿ ಮರಳುನಾಡಿನಲ್ಲಿ ಬೆಳೆಸಿಕೊಂಡು ಬರುತ್ತಿದ್ದು, ಗುಣಮಟ್ಟದ ನಾಟಕ ಪ್ರದರ್ಶನಗಳು, ಪರಿಪಕ್ವವಾದ ಅಭಿನಯಗಳ ಮೂಲಕ ಕೊಲ್ಲಿ ರಾಷ್ಟ್ರದಲ್ಲಿ ಮಾತ್ರವಲ್ಲದೆ ತಾಯ್ನಾಡಿನ ತುಳು ರಂಗಭೂಮಿಯಲ್ಲಿ ತನ್ನದೇ ಆದ ಗೌರವಾನ್ವಿತ ಸ್ಥಾನವನ್ನು ಗಳಿಸಿದೆ.ರಂಗಭೂಮಿಯ ಚಟುವಟಿಕೆಗಳಷ್ಟೇ ಅಲ್ಲದೆ, ಗಮ್ಮತ್ ಕಲಾವಿದರ್ ಯುಎಇ ಕಳೆದ ಒಂದು ದಶಕಕ್ಕಿಂತ ಹೆಚ್ಚು ಕಾಲ ಸ್ವದೇಶದಲ್ಲಿನ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಸಹಾಯ ಹಸ್ತ ನೀಡುತ್ತಾ ಸಾಂಸ್ಕೃತಿಕ ಪ್ರಚಾರದ ಜೊತೆಗೆ ಅರ್ಥಪೂರ್ಣ ಸಾಮಾಜಿಕ ಸೇವೆಯನ್ನು ಸಮತೋಲನದಿಂದ ಮುಂದುವರೆಸುತ್ತಿರುವುದು ಗಮನಾರ್ಹ ಅಂಶ.ಗಮ್ಮತ್ ಕಲಾವಿದರ್ ಯುಎಇ ತಮ್ಮ ಮುಂದಿನ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ಬಲ ತುಂಬುವ ಉದ್ದೇಶದಿಂದ, 2026–27 ಅವಧಿಯ ನೂತನ ಕಾರ್ಯಕಾರಿ ಸಮಿತಿಯನ್ನು 18 ಜನವರಿ 2026ರಂದು ದುಬೈಯ ಬರ್ ದುಬೈಯಲ್ಲಿರುವ ಗ್ರ್ಯಾಂಡ್ ಎಕ್ಸೆಲ್ಸಿಯರ್ ಹೋಟೆಲ್‌ನ ಘಜಲ್ ರೆಸ್ಟೋರೆಂಟ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ರಚಿಸಲಾಯಿತು.ವಾರ್ಷಿಕ ಸಭೆಯು ಸಂಸ್ಥೆಯ ಗೌರವ ಪೋಷಕರು ಹಾಗೂ ಕನ್ನಡ ಚಿತ್ರ ನಿರ್ಮಾಪಕರಾದ ಶ್ರೀ ಹರೀಶ್ ಬಂಗೇರ ಹಾಗೂ ನಾಟಕ ನಿರ್ದೇಶಕ “ರಂಗಸಾರಥಿ” ವಿಶ್ವನಾಥ್ ಶೆಟ್ಟಿ ಅವರು ಮಾರ್ಗದರ್ಶನ ಜರುಗಿದ್ದು, ಸಭೆಯಲ್ಲಿ ಹಿರಿಯ ನಾಟಕ ಹಾಗೂ ಕಿರುಚಿತ್ರ ಕಲಾವಿದರಾದ ವಾಸು ಕುಮಾರ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನಾಟಕ ಹಾಗೂ ಯಕ್ಷಗಾನ ಕಲಾವಿದೆಯಾದ ಸಮಂತಾ ಗಿರೀಶ್ ಅವರನ್ನು ಕಾರ್ಯದರ್ಶಿಯಾಗಿ, ಹಾಗೂ ಅನುಭವೀ ರಂಗಕಲಾವಿದೆಯಾದ ಜೆನೆಟ್ ಸಿಕ್ವೇರಾ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಹರೀಶ್ ಬಂಗೇರ ಅವರು ಪೋಷಕರಾಗಿ ಮುಂದುವರಿಯಲಿದ್ದು, ನಿರ್ದೇಶಕ “ರಂಗಸಾರಥಿ” ವಿಶ್ವನಾಥ್ ಶೆಟ್ಟಿ ಅವರು ತಂಡದ ಕಲಾತ್ಮಕ ಮಾರ್ಗದರ್ಶನವನ್ನು ಮುಂದುವರೆಸಲಿದ್ದಾರೆ.ನೂತನ ಅಧ್ಯಕ್ಷರಾದ ವಾಸು ಕುಮಾರ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮರಳುನಾಡಿನಲ್ಲಿ ತುಳು ರಂಗಭೂಮಿಯ ಬೆಳವಣಿಗೆ ಹಾಗೂ ತುಳು ಸಂಸ್ಕೃತಿಯ ಸಂರಕ್ಷಣೆಗೆ ಪೋಷಕರು , ತುಳು ರಂಗಭೂಮಿ ಅಭಿಮಾನಿಗಳು , ಸದಸ್ಯರು ಮತ್ತು ಹಿತೈಷಿಗಳು ತಮ್ಮ ಸಹಕಾರ ಮತ್ತು ಬೆಂಬಲವನ್ನು ಮುಂದುವರೆಸಬೇಕಾಗಿ ಮನವಿ ಮಾಡಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸಚಿವ ತಿಮ್ಮಾಪುರ ವಿರುದ್ಧದ ಆರೋಪಕ್ಕೆ ಅಶೋಕ್ ಪೂಜಾರ್ ಆಕ್ರೋಶ.

ಮಂಗಳೂರು: ಇಲಾಖೆಯಲ್ಲಿ ನಡೆದಿದೆಯೆನ್ನಲಾದ ಬಾರ್ ಲೈಸನ್ಸ್ ನೀಡಿಕೆಯಲ್ಲಿ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಸಚಿವ ಆರ್.ಬಿ. ತಿಮ್ಮಾಪುರರ ಪಾತ್ರ ಕಿಂಚಿತ್ತೂ ಇಲ್ಲ. ಆದರೂ ವಿರೋಧ ಪಕ್ಷದ ಬಿಜೆಪಿ ನಾಯಕರು ವೃಥಾ ಸಚಿವರ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಪೂಜಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಚಿವರು ದಕ್ಷತೆ, ಪ್ರಾಮಾಣಿಕತೆಯಿಂದ ಅಬಕಾರಿ ಇಲಾಖೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದು, ಅವರ ಏಳಿಗೆ ಸಹಿಸದೇ ವಿರೋಧಿಗಳು ಷಡ್ಯಂತ್ರ ರೂಪಿಸಿದ್ದಾರೆ. ತಿಮ್ಮಾಪುರ ಅವರೊಬ್ಬ ದಲಿತರಾಗಿರುವುದರಿಂದ ಅವರನ್ನು ಸಿಲುಕಿಸಲು ಕುತಂತ್ರ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಚಿವರು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಅಧಿಕಾರಿಯ ಪಾತ್ರವಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ತಪ್ಪೆಸಗಿಲ್ಲ. ಆ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಮಿಗಿಲಾಗಿ ‘ಉಪ್ಪು ತಿಂದವರು ನೀರು ಕುಡಿಯಲೇಬೇಕು” ಎಂದು ಸ್ವತಃ ಸಚಿವ ತಿಮ್ಮಾಪುರ ಅವರೇ ಹೇಳಿದ್ದಾರೆ. ಆದರೂ ಬಿಜೆಪಿಯವರು ಈ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.ಸಚಿವ ತಿಮ್ಮಾಪುರ ಅವರು ಯಾವುದೇ ಕಾರಣಕ್ಕೂ ವಿರೋಧ ಪಕ್ಷದ ಷಡ್ಯಂತ್ರಕ್ಕೆ ಮಹತ್ವ ನೀಡಬಾರದು. ಇಡೀ ದಲಿತ ಸಮುದಾಯ. ಅದರಲ್ಲೂ ಮಾದಿಗೆ ಸಮಾಜ ಅವರೊಟ್ಟಿಗಿದೆ. ಒಂದೊಮ್ಮೆ ವಿರೋಧ ಪಕ್ಷದವರು ಸಚಿವರ ವಿರುದ್ಧ ಕುತಂತ್ರ ಮುಂದುವರಿಸಿದರೆ ಇಡೀ ಸಮಾಜವೇ ಬೀದಿಗಿಳಿದು ಹೋರಾಡಲಿದೆ ಎಂದು ಅಶೋಕ್ ಪೂಜಾರ್ ಎಚ್ಚರಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕೊರಗಜ್ಜ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ: ದೈವದ ಬಗ್ಗೆ ರೀಲ್ಸ್ ಅಲ್ಲ -ಸುಧೀರ್ ಅತ್ತಾವರ್

ಮಂಗಳೂರು: ಹೊಸವರ್ಷದ ಶುಭಾರಂಭದಂದು ‘ಸಾಂಗ್ಸ್ ಪ್ರೀಮಿಯರ್’ ಎನ್ನುವ ವರ್ಣರಂಜಿತ ಕಾರ್ಯಕ್ರಮದಲ್ಲಿ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ “ಕೊರಗಜ್ಜ” ಚಿತ್ರದ ಎಲ್ಲಾ ಹಾಡುಗಳನ್ನು ನಮ್ಮ ಚಿತ್ರತಂಡ ಸುಮಾರು ಮುನ್ನೂರಕ್ಕೂ ಹೆಚ್ಚು ಆಡಿಯೋ ಪ್ಲಾಟ್ ಫಾರ್ಮ್ ಗಳಲ್ಲಿ ಝೀ ಮ್ಯೂಜಿಕ್ ಮುಖೇನ ಹರಿಯಬಿಟ್ಟಿತ್ತು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಹಾಲಿಡೇ ಇನ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವು ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆಯನ್ನು ಘೋಷಿಸಿದ್ದೆವೆಯೇ ಹೊರತು, ತ್ರಿವಿಕ್ರಮ ಸಪಲ್ಯ ನಿರ್ಮಾಣ ದಲ್ಲಿರುವ “ಕೊರಗಜ್ಜ” ಚಿತ್ರದ ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ. ನಮ್ಮ ಮಾತನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರ ತಿಳಿಸಿದ್ದಾರೆ. ರೀಲ್ಸ್ ಎಂದರೆ ವೀಡಿಯೋ ತುಣುಕುಗಳು. ಈಗಾಗಲೇ ದೈವಗಳ ಬಗ್ಗೆ ಮತ್ತು ದೈವದ ಆರಾಧನಾ ಕ್ರಮಗಳಾದ ಕೋಲ, ನೇಮ, ತಂಬಿಲ, ಅಗೆಲು…ಹೀಗೆ ದೈವದ ವಿಚಾರವಾಗಿ ಸಹಸ್ರಾರು ರೀಲ್ಸ್ ಗಳು ಸೋಷಿಯಲ್ ಮೇಡಿಯಾಗಳಲ್ಲಿ ಹರಿದಾಡುತ್ತಿದೆ. ಹಾಗಿರುವಾಗ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ ಏರ್ಪಡಿಸಿದರೆ ತಪ್ಪೇನು? ಈದಾಗ್ಯೂ ಅಶ್ಲೀಲ, ಅಸಂಬದ್ದ ಮತ್ತು ಅಪಹಾಸ್ಯ ಮಾಡುವ ರೀತಿಯ ರೀಲ್ಸ್ ಗಳ ವಿರುದ್ಧ ಕಾನೂನು ಕ್ರಮ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯನ್ನು ನಾವೀಗಾಗಲೇ ಕೊಟ್ಟಿದ್ದೇವೆ ಎಂದು ಸುಧೀರ್ ಅತ್ತಾವರ ತಿಳಿಸಿದ್ದಾರೆ.ನಾವು ಕಳಸ ದಲ್ಲಿ ಶೂಟಿಂಗ್ ಮಾಡಿದಾಗ, ದೈವ ನರ್ತಕರೇ ಲಾಂಗು- ಮಚ್ಚು ತಂದು ಬೆದರಿಸಿ, ಶೂಟಿಂಗ್ ನಿಲ್ಲಿಸಿ, ಇಲ್ಲದ ರಗಳೆ ಮಾಡಿ ಲಕ್ಷಾಂತರ ರುಪಾಯಿ ನಷ್ಟ ಮಾಡಿದ್ದರು. ಪ್ರತೀ ಬಾರಿ “ಕತ್ತಲೆ” ಯ ಹೆಸರನ್ನು ಹೇಳಿ ಬೆದರಿಸುತ್ತಿದ್ದರು.ಮೂರು ಭಾರಿ ರೌಡಿಗಳ ಧಾಳಿ ಆದಾಗೆಲ್ಲ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿಯ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.ಈಗ ನಮ್ಮ ಹಾಡನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಡುಗಳಿಗೆ ರೀಲ್ಸ್ ಮಾಡುವ ಸ್ಪರ್ಧೆಗೆ ಆಕ್ಷೇಪಣೆ ಒಡ್ಡುತ್ತಿದ್ದಾರೆ. ನಮ್ಮ ಸಿನಿಮಾಗೆ ಪ್ರತೀ ಹಂತದಲ್ಲೂ ತೊಂದರೆ ಕೊಡುವುದು, ಆಕ್ಷೇಪಣೆ ಮಾಡುವುದು, ವಿರೋಧಿಸುವುದು ಹೀಗೆ ನಡೆಯುತ್ತಲೇ ಬಂದಿದೆ.ಆದರೆ ಕೊರಗಜ್ಜ ದೈವಾಶಿರ್ವಾದದಿಂದಲೇ ಇಂತಹ ಹಲವಾರು ಅಗ್ನಿ ಪರೀಕ್ಷೆಗಳನ್ನು ಧಾಟಿ ಈಗ ಚಿತ್ರ ಬಿಡುಗಡೆ ಮಾಡುವ ಹಂತಕ್ಕೆ ಬಂದಿದ್ದೇವೆ ಎಂದು ಸುಧೀರ್ ತಿಳಿಸಿದ್ದಾರೆ.ತುಳುನಾಡಿನ ಕೆಲಭಾಗಗಳಲ್ಲಿ ಕೊರಗಜ್ಜ ಮತ್ತು ಇನ್ನಿತರ ದೈವಗಳ ಕೋಲದ ಸಮಯದಲ್ಲಿ, ದೈವದ ಪಾತ್ರ ಮಾಡುವ ವ್ಯಕ್ತಿಯ ಬಾಯಿಯಿಂದಲೇ ಅವಾಚ್ಯ, ಅಶ್ಲೀಲ ಪದಗಳನ್ನು ಹೇಳಿಸುವುದು ವಾಡಿಕೆ ಇದೆ. ಸಭ್ಯರ, ಸಣ್ಣ ಮಕ್ಕಳ ಮುಂದೆಯೇ ಕೋಲ ಸೇವೆಯ ಸಮಯದಲ್ಲಿ ಕೇಳಲು ಹೇಸಿಗೆ ಎನಿಸುವ ಅಶ್ಲೀಲ ಪದಗಳನ್ನು ವಾಡಿಕೆ ಅಥವ ಪಾರಂಪರಿಕೆ ಎನ್ನುವ ಕಾರಣದಿಂದ ಹೇಳುತ್ತಾ ಬಂದಿದ್ದಾರೆ. ಅಂತಹ ಪದ್ಧತಿಗಳ ಅಶ್ಲೀಲತೆಯನ್ನು, ಸಂಸ್ಕ್ರತಿಯ ನೆಪದಲ್ಲಿ ಕೀಳು ಪದಗಳನ್ನು ಕೋಲಸೇವೆಯ ವೇಳೆ ದೈವದ ಹೆಸರಿನಲ್ಲಿ ಹೇಳುವುದನ್ನು ನಾಗರಿಕ ಸಮಾಜ ಒಪ್ಪಬೇಕೇ ಎಂದವರು ಪ್ರಶ್ನಿಸಿದ್ದಾರೆ.ಪರಂಪರೆಯ ಹೆಸರಿನಲ್ಲಿ‌ ದೈವಗಳಿಗೆ ಅವಹೇಳನಕಾರಿ ಅಥವ ಆಶ್ಲೀಲ ಪದ ಪ್ರಯೋಗಗಳ ಮುಖೇನ ಕೋಲಸೇವೆಯ ಕೈಂಕರ್ಯ ನಡೆಸುವುದು ಒಳ್ಳೆ ಸಂಸ್ಕ್ರತಿಯೇ?ಕೆಲಭಾಗಗಳ ಕೋಲದ ಸಮಯದಲ್ಲಿ ದೈವದ ವೇಷ ಹಾಕಿಕೊಂಡವರು ಜಾತಿಯ ಆಧಾರದಲ್ಲಿ‌ ಗೌರವ ಕೊಡುವಂತಹ ಪರಿಪಾಠ ನಾಗರಿಕ ಸಮಾಜ ಒಪ್ಪುವಂತಹ ಆಚರಣೆಯೇ?ಇದೆಲ್ಲ ಹಿಂದಿನಿಂದ ನಡೆದುಕೊಂಡು ಬಂದಿರುವ ಆಚರಣೆ ಎಂಬ ಸಮಜಾಯಿಸಬಹುದು. ಸತಿ ಸಹಗಮನ ಪದ್ದತಿ, ವಿಧವೆಗೆ ತಲೆ ಬೋಳಿಸಿ ಒಳಗೆ ಕೂರಿಸುವಂತ ದರಿದ್ರ ಪದ್ದತಿಗಳೂ ನಮ್ಮ ಸಮಾಜದಲ್ಲಿ ಇತ್ತು ತಾನೆ? ಅದೆಲ್ಲವನ್ನು ಕಿತ್ತೊಗೆದಾಗಿದೆ. ಹಾಗಿರುವಾಗ ಜಾತಿಪದ್ದತಿಯನ್ನು ಯಾಕೆ ಕೋಲದ ಸಮಯದಲ್ಲಿ ಅನುಸರಿಸಬೇಕು? ದೈವದ ಎದುರು ಎಲ್ಲಾ ಜಾತಿಯೂ ಒಂದೇ. ಮೇಲ್ಜಾತಿ ಕೀಳು ಜಾತಿ ಎನ್ನುವುದು ದೈವದ ಪರಿಕಲ್ಪನೆಯಂತೂ ಅಲ್ಲ. ದೈವವು ನಂಬುವ ಎಲ್ಲರಿಗೂ ಸೇರಿರುವ ಶಕ್ತಿ.ನಂಬಿದವರಿಗೆ ಇಂಬುಕೊಡುವ ಶಕ್ತಿ ಎಂದು ಸುಧೀರ್ ಅತ್ತಾವರ ತಿಳಿಸಿದ್ದಾರೆ.

Scroll to Top