Author name: editor

ಪ್ರಾದೇಶಿಕ ವಾರ್ತೆಗಳು

1 ಲಕ್ಷದ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ : ಪದ್ಮರಾಜ್ ಆರ್.

ಮಂಗಳೂರು: ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಪ್ರಿಲ್ 27ರ ಶನಿವಾರ ಸಂಜೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪದ್ಮರಾಜ್ ಆರ್.ಅವರು ಜಿಲ್ಲಾ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಮತದಾರರಿಗೆ, ಮಾಧ್ಯಮ ಮಿತ್ರರಿಗೆ ಧನ್ಯವಾದ ಸಲ್ಲಿಸಿದರು. ಈ ಸಂದರ್ಭ Mp mla’s ನ್ಯೂಸ್ ಕೇಳಿದ ಪ್ರಶ್ನೆಗೆ ನಾನು 1 ಲಕ್ಷದ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ದ.ಕ. ಜಿಲ್ಲೆಯನ್ನು ಸಾಮರಸ್ಯ, ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಸರ್ವ ಪ್ರಯತ್ನ ಮಾಡುತ್ತೇನೆ ಎಂದರು. ಮೊದಲಿಗೆ, ಮಾಜಿ ಮೇಯರ್ ಶಶಿಧರ ಹೆಗ್ಡೆಯವರು ಸ್ವಾಗತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶುಭೋದಯ ಆಳ್ವ, ಮೊಹಮ್ಮದ್ ರಾಮಲ್ ಕಟ್ಟೆ ಉಪಸ್ಥಿತರಿದ್ದರು.

ಕರ್ನಾಟಕ ವಾರ್ತೆಗಳು, ರಾಜಕೀಯ ವಾರ್ತೆಗಳು

ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 26 ರಂದು ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಶೇಕಡವಾರು ವಿವರ.

ವಿಶೇಷ ವರದಿ:ಡಾ. ಅಶೋಕ್ ಶೆಟ್ಟಿ ಬಿ. ಎನ್. ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಶೇಕಡವಾರು ವಿವರವನ್ನು ಗಮನಿಸಿದರೆ ದ.ಕ. ಬೆಸ್ಟ್, ನಂತರದ ಸ್ಥಾನ ಉಡುಪಿಗೆ ಮತ್ತು ಬೆಂಗಳೂರು ನೀರಸ ಮತದಾನ ಪ್ರಕ್ರಿಯೆ ತೋರಿಸಿದೆ.ಲೋಕಸಭೆ ಕ್ಷೇತ್ರ –ದಕ್ಷಿಣ ಕನ್ನಡ – 72%(2024) 80%(2019)ಉಡುಪಿ – 73%(2024) 78%(2019)ಮೈಸೂರು – 67%(2024) 71%(2019)ಚಾಮರಾಜ ನಗರ- 70%(2024) 77%(2019)ಚಿತ್ರದುರ್ಗ – 68%(2024) 72%(2019)ಹಾಸನ – 72%(2024) 79%(2019)ತುಮಕೂರು – 72%(2024) 79%(2019)ಚಿಕ್ಕಬಳ್ಳಾಪುರ – 72%(2024) 77%(2019)ಮಂಡ್ಯ – 75%(2024) 82%(2019)ಕೋಲಾರ – 73%(2024) 79%(2019)ಬೆಂಗಳೂರು ಗ್ರಾಮಾಂತರ – 62%(2024) 68%(2019)ಬೆಂಗಳೂರು ದಕ್ಷಿಣ- 49%(2024) 55%(2019)ಬೆಂಗಳೂರು ಸೆಂಟ್ರಲ್ – 49%(2024) 56%(2019)ಬೆಂಗಳೂರು ಉತ್ತರ- 51%(2024) 55%(2019)

ಪ್ರಾದೇಶಿಕ ವಾರ್ತೆಗಳು

ಮೂರನೇ ಬಾರಿ ದೇಶದ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗಿಯಾಗಿ ಅಭೂತಪೂರ್ವ ಬೆಂಬಲ ಸೂಚಿಸೋಣ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಪ್ಟನ್‌ ಬ್ರಿಜೇಶ್‌ ಚೌಟ ಮನವಿ.

ಮಂಗಳೂರು: ಮಂಗಳೂರಿನಲ್ಲಿ ಬಾನುವಾರ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೃಹತ್‌ ರೋಡ್‌ ಶೋ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು. ಪ್ರಧಾನಿಯವರನ್ನು ಹತ್ತಿರದಿಂದ ಭೇಟಿ ಮಾಡುವ ಅವಕಾಶ ರೋಡ್ ಶೋ ಸಂದರ್ಭ ಸಿಗಲಿದ್ದು, ಮೂರನೇ ಬಾರಿ ದೇಶದ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗಿಯಾಗಿ ಅಭೂತಪೂರ್ವ ಬೆಂಬಲ ಸೂಚಿಸೋಣ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಪ್ಟನ್‌ ಬ್ರಿಜೇಶ್‌ ಚೌಟ ಮನವಿ ಮಾಡಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ, ಪ್ರಮುಖ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು. ಕಾರ್ಯಕರ್ತರ ಭೇಟಿಯ ಸಂದರ್ಭ ಸಿಗುವ ಸಲಹೆ, ಮೂಡುವ ಜನಾಭಿಪ್ರಾಯಗಳನ್ನು ಆಧರಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಇಚ್ಛೆ ಹೊಂದಿದ್ದೇನೆ. ಚುನಾವಣಾ ಪ್ರಚಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಕಾರ್ಯಕರ್ತರ ಉತ್ಸಾಹದಿಂದ ನನಗೆ ಹೆಚ್ಚಿನ ಬಲ ಬಂದಂತಾಗಿದೆ ಎಂದರು.ಆರಂಭದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ಕಂಡ ಭ್ರಷ್ಟಾಚಾರ ರಹಿತ ಅತ್ಯುತ್ತಮ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಗೆಲ್ಲಲೇ ಬೇಕಾದ ಎಂಪಿ ಅಭ್ಯರ್ಥಿ. ಈ ಬಗ್ಗೆ ಜನ ಸಮೀಕ್ಷೆ ಹೇಗಿದೆ?

ಸಮೀಕ್ಷಾ ವರದಿ : ಡಾ. ಅಶೋಕ್ ಶೆಟ್ಟಿ. ಬಿ. ಎನ್. ಉಡುಪಿ -ಚಿಕ್ಕ ಮಗಳೂರು:ಜಯಪ್ರಕಾಶ್ ಹೆಗ್ಡೆ ಯವರು ನಮ್ಮ ರಾಜ್ಯ ಕಂಡ ಅತ್ಯುತ್ತಮ ಜನ ನಾಯಕ ಮತ್ತು ಭ್ರಷ್ಟಾಚಾರ ರಹಿತ ರಾಜಕಾರಣಿ ಹಾಗೂ ಅವರು ಮುಖ್ಯಮಂತ್ರಿ ಹುದ್ದೆಗೂ ಅರ್ಹರು ಎಂದು ಕೆಲ ವರ್ಷಗಳ ಹಿಂದೆ ಮಂಗಳೂರಿನ ಸಮಾರಂಭವೊಂದಕ್ಕೆ ಆಗಮಿಸಿದ ವೇಳೆ ಹೆಸರಾಂತ ಹಿರಿಯ ರಾಜಕಾರಣಿ ಸಿ.ಎಂ. ಇಬ್ರಾಹಿಂ ಅವರು ಹೇಳಿದ್ದರು. ಇದು ವಾಸ್ತವ ಸತ್ಯ. ಜಯಪ್ರಕಾಶ್ ಹೆಗ್ಡೆಯವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದವರು. ಇಂಥ ಒಂದು ಸಾಧನೆಯನ್ನು ಮಾಡಿದವರು ಕರ್ನಾಟಕ ರಾಜ್ಯದಲ್ಲಿ ಯಾರೂ ಇಲ್ಲ. ತನ್ನ ವೈಯಕ್ತಿಕ ವರ್ಚಸ್ಸಿನಿಂದ ಜನ ಮನ್ನಣೆ ಗಳಿಸಿ ಶಾಸಕರಾಗಿ, ಮಂತ್ರಿಯಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವ ಜಯಪ್ರಕಾಶ್ ಹೆಗ್ಡೆಯವರು 2011ರಲ್ಲಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಉಡುಪಿ -ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದವರು. ಇದೀಗ ಅವರು ಮತ್ತೇ ಇದೇ ಕ್ಷೇತ್ರದಿಂದ ಎಂಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಕ್ಷೇತ್ರದಲ್ಲಿ ಅವರ ಗೆಲುವು ಅತ್ಯಗತ್ಯವಾಗಿದೆ ಮತ್ತು ಅನಿವಾರ್ಯವೂ ಆಗಿದೆಂದು ಇಲ್ಲಿನ ಜನಾಭಿಪ್ರಾಯಗಳಲ್ಲಿ ಸ್ಪಷ್ಟವಾಗುತ್ತಿದೆ. ಈ ಹಿಂದಿನ ಎಂಪಿ ಮತ್ತು ಕೇಂದ್ರದ ಮಂತ್ರಿ ಶೋಭಾ ಕರಂದ್ಲಾಜೆಯವರು ಗೆದ್ದ ನಂತರ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಹೆಚ್ಛೇಕೆ ಅವರು ಈ ಕಡೆ ಮುಖವೆತ್ತಿಯೂ ನೋಡಲಿಲ್ಲ. ಜನ ವಿರೋಧದ ಹಿನ್ನಲೆಯಲ್ಲಿ ಅವರು ಬೆಂಗಳೂರು ಉತ್ತರಕ್ಕೆ ಕ್ಷೇತ್ರ ಪಲಾಯನ ಮಾಡಬೇಕಾಯಿತು . ಇದು ಬಿಜೆಪಿಗೆ ಹಿನ್ನಡೆ ಉಂಟು ಮಾಡಿದ್ದೂ, ಒಟ್ಟು 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಇನ್ನು 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದೆ. ಬಿಜೆಪಿಯವರಿಗೆ ಮೋದಿ ಅಲೆ ಮೇಲೆ ಹೆಚ್ಚಿನ ನಂಬಿಕೆ ಇದ್ದರೆ, ಜಯಪ್ರಕಾಶ್ ಹೆಗ್ಡೆಯವರಿಗೆ ಅವರ ವೈಯಕ್ತಿಕ ವರ್ಚಸ್ಸು, ಅವರು ಸಲ್ಲಿಸಿದ ಅಭಿವೃದ್ಧಿ ಕೆಲಸ ಕಾರ್ಯಗಳೇ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಹೈಕೋರ್ಟ್ ವಕೀಲರಾಗಿ, ಅನುಭವಿ ರಾಜಕಾರಣಿಯಾಗಿ, ಜಾತ್ಯತೀತ ನಾಯಕರಾಗಿ, ನುಡಿದಂತೆ ನಡೆದ ಜನ ನೇತಾರರಾಗಿ, ಅಜಾತಶತ್ರುವಾಗಿ ಜಯಪ್ರಕಾಶ್ ಹೆಗ್ಡೆಯವರು ಸಮರ್ಥ ಅಭ್ಯರ್ಥಿಯೆಂದು ಜನ ಸಮೀಕ್ಷೆ ವೇಳೆ ಜನ Mp mlas news tv ಗೆ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಡಾ. ಸುಧಾಕರ್ ಶೆಟ್ಟಿಯವರಿಂದ ವೈದ್ಯಕೀಯ ತಪಾಸಣಾ ಶಿಬಿರ

ನಮ್ಮ ನಾಡಿನಲ್ಲಿ ಅದೆಷ್ಟೋ ವೈದ್ಯರು ವಿವಿಧ ಬಗೆಯ ರೋಗಿಗಳ ಆರೋಗ್ಯ ಕಾಳಜಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೇವಲ ಹಣ ಸಂಪಾದನೆ ಮಾತ್ರ ತಮ್ಮ ವೃತ್ತಿಯ ಲಕ್ಷ್ಯವಲ್ಲವೆಂದು ಸಾಬೀತು ಪಡಿಸಿ ಜನರ ಪ್ರೀತಿ ವಿಶ್ವಾಸ ಗೆದ್ದಿದ್ದಾರೆ. ಅಂಥವರ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ್ ಶೆಟ್ಟಿ ಅವರನ್ನು ಹೆಸರಿಸಬಹುದು. ಡಾ ಸುಧಾಕರ್ ಶೆಟ್ಟಿಯವರು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸಮಸ್ಯೆಗಳಿಗೆ ಸದಾ ಪರಿಹಾರ ಕಾರ್ಯಗಳಲ್ಲಿ ತಕ್ಷಣ ಸ್ಪಂದಿಸುತ್ತಾರೆ. ಬಡವರು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ಸೇವೆಯಲ್ಲಿ ಸುಖ ಕಾಣುವ ಇವರು ಆಧುನಿಕ ರೀತಿಯ ವೈದ್ಯೋಪಚಾರಗಳಿಂದ ವಂಚಿತರಾಗಿರುವ ಪ್ರದೇಶದ ಜನರ ಬಗ್ಗೆ ಅತೀವ ಕಾಳಜಿ ವಹಿಸುತ್ತಾ ಜನರ ಗಮನ ಸೆಳೆಯುತ್ತಿದ್ದಾರೆ. ಇದೀಗ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಆರೋಗ್ಯ ಕುರಿತಂತೆ ಅವರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ ಸೂಕ್ತ ಚಿಕಿತ್ಸೆ, ವ್ಯವಸ್ಥೆ ಮಾಡುವಂಥಹ ಒಂದು ನವೀನ ಅಭಿಯಾನವನ್ನು ಡಾ. ಸುಧಾಕರ್ ಶೆಟ್ಟರು ಹಮ್ಮಿಕೊಂಡಿದ್ದು ವೇಣೂರಿನ ಬಜ್ರೆ ಎಂಬಲ್ಲಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದು ತಿಂಗಳ ಅಭಿಯಾನವನ್ನು ಎಪ್ರಿಲ್ 2 ರಂದು ಚಾಲನೆ ನೀಡಿದರು. ಪುಣೆಯ ಖ್ಯಾತ ಮಕ್ಕಳ ವೈದ್ಯರಾಗಿರುವ ಡಾ. ಸುಧಾಕರ ಶೆಟ್ಟಿ ಅವರ ಸೂಕ್ತ ಸಲಹೆ ಸಹಕಾರದೊಂದಿಗೆ ಮೂಡಬಿದಿರೆಯ ಡಾ. ವಿನಯ ಆಳ್ವ ಅವರ ಸಂಯೋಜನೆಯಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್ ನ ಆಡಳಿತಾಧಿಕಾರಿ ಡಾ ಭಾಸ್ಕರ್ ರಾವ್, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ ಸಜಿತ್, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಡಾ ರೋಷನ್ ಮೊದಲಾದವರ ಸಹಕಾರದೊಂದಿಗೆ ಕಾರ್ಯೋನ್ಮುಖರಾಗಿದ್ದು ಮೂಡಬಿದಿರೆ ವೇಣೂರು ಪರಿಸರದ ವಿದ್ಯಾರ್ಥಿಗಳು ಹಾಗೂ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ಪ್ರಕಟನೆ ತಿಳಿಸಿದೆ.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಬೋಂದೆಲ್ ಚರ್ಚ್ ಕಟ್ಟಡ ನವೀಕರಣ ಯೋಜನೆಯ ಸಹಾಯಾರ್ಥ ವೊಜೆಂ ಉತ್ಸವ್ – 2024

ಮಂಗಳೂರು : ಕೊಂಕಣಿ ಕ್ಯಾಥೊಲಿಕ್ ಕ್ರೈಸ್ತರ ಸಂಸ್ಕೃತಿಯಲ್ಲಿ ಹೊರೆ ಕಾಣಿಕೆಗೆ ವಿಶಿಷ್ಟವಾದ ಸ್ಥಾನವಿದೆ. ಅದು ಕೊಂಕಣಿ ಕ್ಯಾಥೊಲಿಕ್ ಕ್ರೈಸ್ತರ ವಿವಾಹ ಸಂಸ್ಕೃತಿಯ ಒಂದು ಭಾಗವಾಗಿದೆ. ಮದುವೆಯ ಮುಂಚಿತವಾಗಿ ನಡೆಯುವ ರೋಸ್ ಸಂಭ್ರಮದ ವೇಳೆ ನಡೆಯುವ ವಿವಿಧ ಕಾರ್ಯಕ್ರಮಗಳ ಪೈಕಿ ಹೊರೆ ಕಾಣಿಕೆಯೂ ಒಂದಾಗಿದೆ. ಇದನ್ನು ಕೊಂಕಣಿಯಲ್ಲಿ ವೊಜೆಂ ಎಂದು ಹೇಳುತ್ತಾರೆ. ರೋಸ್ ಸಮಾರಂಭದ ವೇಳೆ ವರ ಅಥವಾ ವಧುವಿನ ಮನೆಯಲ್ಲಿ ನಡೆಯುವ ಮೊದಲ ಕಾರ್ಯಕ್ರಮ ಇದಾಗಿದೆ. ಮದುವೆ ಸಮಾರಂಭಕ್ಕೆ ತಗಲುವ ಖರ್ಚು ವೆಚ್ಚದ ಹೊರೆಯನ್ನು ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸುವ ನಿಟ್ಟಿನಲ್ಲಿ ತರಕಾರಿ, ದವಸ ಧಾನ್ಯ ಇತ್ಯಾದಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ತಲುಪಿಸುವ ಉದ್ದೇಶದಿಂದ ಪೂರ್ವಜರು ಈ ವೊಜೆಂ ಅಥವಾ ಹೊರೆ ಕಾಣಿಕೆ ಸಂಪ್ರದಾಯವನ್ನು ಜಾರಿಗೆ ತಂದಿದ್ದರು ಎಂದು ತಿಳಿದು ಬರುತ್ತದೆ. ಈ ಸಂಪ್ರದಾಯವು ಅನಾಚೂನವಾಗಿ ಬೆಳೆದು ಬಂದಿದೆ.ಇದೀಗ ಸಾಂಗಾತಿ ಮಂಗ್ಲುರ್ ಸಂಸ್ಥೆಯು ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ಸಹಯೋಗದಲ್ಲಿ ಬೋಂದೆಲ್ ಚರ್ಚಿನ ನವೀಕರಣ ಯೋಜನೆಯ ಸಹಾಯಾರ್ಥ ಹೊರೆ ಕಾಣಿಕೆ ಉತ್ಸವ ಅಥವಾ ವೊಜೆಂ ಉತ್ಸವ್ ಸ್ಪರ್ಧೆಯನ್ನು ಆಯೋಜಿಸಿದೆ. ಮೇ 19 ರಂದು ವಾಮಂಜೂರು ಚರ್ಚ್ ಸಭಾಂಗಣದಲ್ಲಿ ಈ ವೊಜೆಂ ಉತ್ಸವ್ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಈ ಸ್ಪರ್ಧೆ ಆರಂಭವಾಗಲಿದೆ.ಸ್ಪರ್ಧೆಯ ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 50,000 ರೂ., ದ್ವಿತೀಯ ಬಹುಮಾನ 25,000 ರೂಪಾಯಿ ಹಾಗೂ ತೃತೀಯ ಬಹುಮಾನ 15,000 ನಗದು ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.ವಿಶಾಲಿನ್ ಸಲ್ದಾನ್ಹಾ ಅಧ್ಯಕ್ಷರಾಗಿರುವ, ವಿಕ್ರಮ್ ಪೆರ್ಮನ್ನೂರು ಉಪಾಧ್ಯಕ್ಷರಾಗಿರುವ ಮತ್ತು ಸ್ಟೀಫಾ ಡಿ ಸೋಜಾ ಕಾರ್ಯದರ್ಶಿ ಆಗಿರುವ ಉತ್ಸವ ಸಮಿತಿಯು ಇದನ್ನು ಹಮ್ಮಿಕೊಂಡಿದೆ.ಹೆಚ್ಚಿನ ವಿವರಗಳಿಗೆ 8660015203 ಅಥವಾ 8904373405 ಸಂಖ್ಯೆಗೆ ಸಂಪರ್ಕಿಸ ಬಹುದು.ವೊಜೆಂ ಉತ್ಸವ್ – 2024ಸ್ಪರ್ಧೆಯ ನಿಯಮಗಳು:ಕ್ಯಾಥೋಲಿಕ್ ಕ್ರೈಸ್ತರಿಗೆ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶ. ಒಬ್ಬರು ಒಂದು ತಂಡದಲ್ಲಿ ಮಾತ್ರ ಪಾಲ್ಗೊಳ್ಳ ಬಹುದು. ಒಂದು ತಂಡಕ್ಕೆ ಪ್ರದರ್ಶನ ನೀಡಲು 15 ನಿಮಿಷಗಳ ಕಾಲಾವಕಾಶ ಇರುತ್ತದೆ. ಒಂದು ತಂಡದಲ್ಲಿ ಗರಿಷ್ಠ 25 ಮಂದಿಗೆ ಪಾಲ್ಗೊಳ್ಳಲು ಅವಕಾಶವಿದೆ. ಒಂದು ತಂಡದಲ್ಲಿ ಗುರ್ಕಾರ್ ಮತ್ತು ಗುರ್ಕಾರ್ನ್ (ಮಹಿಳೆ), ವಧು ಅಥವಾ ವರ ಮತ್ತು ತಾಯಿ ತಂದೆಯರ ಪಾತ್ರ ಕಡ್ಡಾಯ. ಹೊರೆ ಕಾಣಿಕೆಗೆ ಬ್ಯಾಂಡ್ ಮತ್ತು ಬೇಕಾಗಿರುವ ಕೆಲವು ಸಾಮಗ್ರಿಗಳನ್ನು ಸಂಘಟಕರು ಒದಗಿಸುತ್ತಾರೆ. (ಹೆಚ್ಚುವರಿ ವಸ್ತುಗಳು ಬೇಕಿದ್ದರೆ ಸ್ಪರ್ಧಿಗಳು ತರ ಬಹುದು). ಬೆಂಕಿ, ನೀರು, ಪಟಾಕಿ ಮತ್ತು ಪ್ರಾಣಿ/ ಜಾನುವಾರುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಕೃತಕ ಪ್ರಾಣಿ/ ಜಾನುವಾರುಗಳನ್ನು ಬಳಸ ಬಹುದು. ಸ್ಪರ್ಧಿಗಳು ಕಾರ್ಯಕ್ರಮ ಪ್ರಸ್ತುತ ಪಡಿಸುವಾಗ ಕೊಂಕಣಿಯ ಹೊರತಾಗಿ ಅವಶ್ಯಕತೆ ಇಲ್ಲದೆ ಬೇರೆ ಯಾವುದೇ ಭಾಷೆಯನ್ನು ಬಳಸುವಂತಿಲ್ಲ. ಮಾತಿನಲ್ಲಿ ಅಥವಾ ಕೃತ್ಯದಲ್ಲಿ ಯಾವುದೇ ವ್ಯಕ್ತಿಗೆ, ಸಂಸ್ಥೆಗೆ ಅಥವಾ ಒಂದು ಮತ ಧರ್ಮಕ್ಕೆ ಅವಮಾನ ಅಥವಾ ನಿಂದನೆ ಹಾಗೂ ಅಸಭ್ಯ, ಅಶ್ಲೀಲ ಅಥವಾ ಸ್ಪರ್ಧೆಗೆ ಕಳಂಕ ತರುವ ರೀತಿಯ ಪ್ರದರ್ಶನವನ್ನು ನಿಷೇಧಿಸಲಾಗಿದೆ. ರಾಜಕೀಯ ವಿಷಯ ಹಾಗೂ ದ್ವಂದ್ವಾರ್ಥದ ಶಬ್ದಗಳ ಬಳಕೆಯನ್ನು ಮಾಡುವಂತಿಲ್ಲ. ಸ್ಪರ್ಧೆಯ ಯಾವುದೇ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಪ್ರವೇಶಾವಕಾಶವನ್ನು ಅಮಾನತಿನಲ್ಲಿಡುವ ಅಧಿಕಾರ ಸ್ಪರ್ಧೆಯ ಸಂಚಾಲಕರಿಗೆ ಇರುತ್ತದೆ. ಸ್ಪರ್ಧೆಯ ಸಂದರ್ಭದಲ್ಲಿ ವ್ಯವಸ್ಥಾಪಕರು ನೇಮಿಸುವ ವ್ಯಕ್ತಿಗಳ ಹೊರತಾಗಿ ಬೇರೆ ಯಾರೂ ಫೋಟೋ ಅಥವಾ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ವೀಕ್ಷಕರಿಗೆ ಮತ್ತು ತೀರ್ಪುಗಾರರಿಗೆ ಅಡ್ಡಿಯಾಗುವ ರೀತಿಯಲ್ಲಿ ಫೋಟೋ ತೆಗೆಯುವುದನ್ನು ಕೂಡಾ ನಿಷೇಧಿಸಲಾಗಿದೆ. ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೇ ಅಂತಿಮ. ಸ್ಪರ್ಧೆಯ ಫಲಿತಾಂಶವನ್ನು ಸಂಪೂರ್ಣ ಪ್ರದರ್ಶನದ ಕೊನೆಯಲ್ಲಿ ಘೋಷಿಸಿ ಬಹುಮಾನ ವಿತರಣೆ ಮಾಡಲಾಗುವುದು.ತಂಡದ ಪ್ರವೇಶ ಶುಲ್ಕ 10,000 ರೂಪಾಯಿ ಆಗಿರುತ್ತದೆ. ನೋಂದಣಿಯು ಮೇ 19 ಭಾನುವಾರ ಬೆಳಗ್ಗೆ 8.30 ಕ್ಕೆ ಆರಂಭವಾಗುತ್ತದೆ. ನೋಂದಣಿ ಬಗ್ಗೆ ಹೆಚ್ಚಿನ ಮಾಹಿತಿಗೆ 8904373405, 8660015203 ನಂಬರಿಗೆ ಸಂಪರ್ಕಿಸ ಬಹುದು. ಹೊರೆ ಕಾಣಿಕೆ ಮೆರವಣಿಗೆಯ ರೀತಿ ಮತ್ತು ಡ್ರೆಸ್, ಹಾಡು, ಗುರ್ಕಾರ್ ಮತ್ತು ಗುರ್ಕಾರ್ನ್ ಅವರ ಸಂಭಾಷಣೆ, ಭಾಗವಹಿಸಿದ ಎಲ್ಲರ ನೃತ್ಯ, ಹಾಸ್ಯ ಪಾತ್ರದ ಮಾನ ದಂಡಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಎ. 3ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ.

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಎ. 3ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.ಕ್ಷೇತ್ರದ ಉಸ್ತುವಾರಿ ಕೆ.ಜೆ. ಜಾರ್ಜ್ ಸಹಿತ ಇತರ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಂದು ಬೆಳಗ್ಗೆ 11ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಸಣ್ಣ ಸಭೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ನಡೆಯಲಿದೆ. ಎ. 6ರಂದು ನಡೆಸಲು ಉದ್ದೇಶಿಸಿರುವ ಸಾರ್ವತ್ರಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗ ವಹಿಸುವ ಸಾಧ್ಯತೆಗಳಿದ್ದು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಉಡುಪಿಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪುತ್ತೂರು: ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ

ಪುತ್ತೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ದರ್ಬೆ ಬೈಪಾಸ್ ಜಂಕ್ಷನಿನ ಆರ್.ಸಿ.ಬಿ. ಎನ್’ಕ್ಲೇವ್’ನಲ್ಲಿ ಉದ್ಘಾಟನೆಗೊಂಡಿತು. ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಅಶೋಕ್ ಕುಮಾರ್ ರೈ, ಅಭ್ಯರ್ಥಿ ಪದ್ಮರಾಜ್ ಆರ್. ಕಚೇರಿಯನ್ನು ಉದ್ಘಾಟಿಸಿದರು.ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ನೈಋತ್ಯ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ, ಡಾ. ರಾಜಾರಾಮ್, ಎಂ.ಎಸ್. ಮಹಮ್ಮದ್, ಮಹಮ್ಮದ್ ಆಲಿ, ಮಹಮ್ಮದ್ ಬಡಗನ್ನೂರು, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಶ್ರೀಪ್ರಸಾದ್ ಪಾಣಾಜೆ, ರಮಾನಾಥ್ ವಿಟ್ಲ, ನವೀನ್ ರೈ, ಫಾರೂಕ್ ಪೆರ್ನೆ, ಶ್ರೀನಿವಾಸ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಉಪ್ಪಿನಂಗಡಿ ಕಂಬಳೋತ್ಸವದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಭ್ಯರ್ಥಿ. ಕನ್ನಡ ಸಿನಿಮಾ ‘ಕಲಹ’ದ ಪೋಸ್ಟರ್ ಬಿಡುಗಡೆ ಮಾಡಿದ ಪದ್ಮರಾಜ್ ಆರ್.

ಉಪ್ಪಿನಂಗಡಿ: ಇಲ್ಲಿನ ವಿಜಯ – ವಿಕ್ರಮ ಜೋಡುಕರೆ ಕಂಬಳೋತ್ಸವದಲ್ಲಿ ಪಾಲ್ಗೊಂಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು, ಕಲಹ ಕನ್ನಡ ಸಿನಿಮಾದ ಪೋಸ್ಟರ್ ಅನಾವರಣಗೊಳಿಸಿದರು. ಪುತ್ತೂರು ಶಾಸಕ, ಉಪ್ಪಿನಂಗಡಿ ವಿಜಯ – ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರೂ ಆಗಿರುವ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಕಂಬಳಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡಿರುವ ವಲೇರಿಯನ್ ಡಯಾಸ್ (ಅಪ್ಪಣ್ಣ) ಅವರನ್ನು ಇದೇ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನ್ಯಾಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಕೋಟಿ- ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ವಿಜಯ್- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹಗ್ಡೆಹಿತ್ತು, ಪ್ರಮುಖರಾದ ರೋಶನ್ ರೈ ಬನ್ನೂರು, ಸಾಜ ಶಿವರಾಂ ಆಳ್ವ, ಇರುವೈಲು ಪಾಣಿಲ ಸತೀಶ್ಚಂದ್ರ ಪೂಜಾರಿ, ಪ್ರಜ್ವಲ್ ರೈ ಪಾತಾಜೆ, ಪಂಜಿಗುಡ್ಡೆ ಈಶ್ವರ ಭಟ್, ಪ್ರವೀಣ್ ಕುಮಾರ್ ಕದಿಕ್ಕಾರು ಬೀಡು, ದಾಸಪ್ಪ ಗೌಡ ಕೋಡಿಯಡ್ಕ, ಕೃಷ್ಣಪ್ರಸಾದ್‌ ಆಳ್ವ, ನಳಿನಿ ಪಿ. ಶೆಟ್ಟಿ, ಅನಿಲ್ ಶೆಟ್ಟಿ, ಶಕೀಲಾ ಶೆಟ್ಟಿ, ನಳಿನಿ ಪಿ. ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಬಾರ್ಕೂರು ಶಾಂತರಾಮ ಶೆಟ್ಟಿ, ಮಹಾಲಿಂಗ ಕಜೆಕ್ಕಾರು, ಭಾರತಿ ಕಜೆಕ್ಕಾರು, ಜಾನ್ ಕೆನ್ಯೂಟ್, ಪ್ರಸನ್ನ ಶೆಟ್ಟಿ, ಕಂಬಳ ಸಮಿತಿಯ ಉಪಾಧ್ಯಕ್ಷರಾದ ನಟೇಶ್ ಪೂಜಾರಿ, ವಿದ್ಯಾಧರ ಜೈನ್ ಪದ್ಮವಿದ್ಯಾ, ವಿಠಲ ಶೆಟ್ಟಿ ಕೊಳ್ಕೊಟ್ಟು, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಾರಿಸೇನ ಜೈನ್ ಕೋಡಿಯಾಡಿಗುತ್ತು, ರಾಜೀವ ಶೆಟ್ಟಿ ಕೇದಗೆ, ಶಿವಪ್ರಸಾದ್ ರೈ ಮಠಂತಬೆಟ್ಟು, ಮುರಳೀಧರ ರೈ ಮಠಂತಬೆಟ್ಟು, ಸುದೇಶ್ ಶೆಟ್ಟಿ ಶಾಂತಿನಗರ, ಗೌರವ ಸಲಹೆಗಾರ ಯು. ರಾಮ, ಕಾರ್ಯದರ್ಶಿಗಳಾದ ಶಿವರಾಮ ಶೆಟ್ಟಿ ಗೋಳ್ತಮಜಲು, ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗೈ, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಕುಮಾರನಾಥ ಪಲ್ಲತ್ತಾರು ಕೋಡಿಂಬಾಡಿ, ಸತೀಶ್ ಶೆಟ್ಟಿ ಹೆನ್ನಾಳ, ಜಯಾನಂದ ಪಿಲಿಗುಂಡ, ರಾಕೇಶ್ ಶೆಟ್ಟಿ ಕೆಮ್ಮಾರ, ಜಗದೀಶ್ ಪೂಜಾರಿ ಪರಕ್ಕಜೆ, ಉಮೇಶ ನಟ್ಟಿಬೈಲು ಮತ್ತಿತರರು ಉಪಸ್ಥಿತರಿದ್ದರು. ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಸಮಿತಿಯ ನಿಹಾಲ್ ಶೆಟ್ಟಿ ವಂದಿಸಿದರು. ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಸಂದರ್ಶನ

ಮುಂಬೈ ಯಕ್ಷಲೋಕದ ಶಿಲ್ಪಿ , ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ

‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬಂತೆ ಮಾನವನು ತನ್ನ ಉದರ ಪೋಷಣೆಗಾಗಿ ನಿಂತಲ್ಲಿ ನಿಲ್ಲದೆ ಜಂಗಮನಾಗಿ ಊರೂರು ಸುತ್ತಿ ಆವಿಷ್ಕಾರ ಮಾಡಿ ಹೊಸ ಜೀವನವನ್ನು ಅಳವಡಿಸಿಕೊಂಡು ಅಲ್ಲಿಯೇ ನೆಲೆಸಿ ಉದರ ಪೋಷಣೆಯೊಂದಿಗೆ ಇತರ ಪೋಷಣೆಗಳನ್ನು ಮಾಡಿ ತನ್ನ ಹೊಟ್ಟೆಪಾಡು ಮಾತ್ರವಲ್ಲದೆ ಇತರರ ಅಂದರೆ ಸಮಾಜಕ್ಕೂ ಉಣಬಡಿಸಿ ಪರೋಪಕಾರದ ಕೃತ್ಯಗಳನ್ನು ಮಾಡಿ ಸಮಾಜ ಜೀವಿ ಎನಿಸಿಕೊಳ್ಳುತ್ತಾನೆ.ಅಸನ ವಸನ ವಸತಿಗಳು ತನ್ನ ಮತ್ತು ತನ್ನ ಕುಟುಂಬದ ಪೋಷಣೆಗಳಿಗಾದರೆ ಕಲೆ, ಸಂಗೀತ, ನಾಟ್ಯ, ಪ್ರವಚನ ಮುಂತಾದ ಸಾಮಾಜಿಕ ಸೇವೆಗಳು ಸಮಾಜ ಸುಧಾರಣೆಯ ಏಳಿಗೆಯ ಪ್ರತೀಕಗಳು. ತಾನು ಉಂಡು ಇತರರಿಗೂ ಉಣಿಸಿ ಸಂತಸಪಡುವ ಪ್ರವೃತ್ತಿಯೇ ಸಾರ್ಥಕ ಜೀವನ. ಅಂಥಾ ಉದಾರ ಜೀವಿಗಳೇ ಸಮಾಜ ಸೇವಕರು. ಅಜೆಕಾರು ಶ್ರೀ ಬಾಲಕೃಷ್ಣ ಶೆಟ್ಟಿಯವರು ಅಜೆಕಾರು ಕಲಾಭಿಮಾನಿಗಳ ಬಳಗವನ್ನು 2002ರಲ್ಲಿ ಮುಂಬೈ ಮಹಾನಗರಿಯಲ್ಲಿ ಕಟ್ಟಿ ಬೆಳೆಸಿದ ರೋಚಕ ಬೆಳವಣಿಗೆಯು ರೋಮಾಂಚನವೇ ಸರಿ. ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಗೆಜ್ಜೆ ಕಟ್ಟಿ ಕುಣಿದ ಬಾಲಕೃಷ್ಣ ಶೆಟ್ಟಿಯವರು ಹಂತ ಹಂತವಾಗಿ ವಿವಿಧ ಸಂಘಟನೆಗಳನ್ನು ಮಾಡಿ ಮುಂಬೈಯಲ್ಲಿ 2002ರಲ್ಲಿ ಅಜೆಕಾರು ಕಲಾಭಿಮಾನಿಗಳ ಬಳಗವನ್ನು ಸ್ಥಾಪಿಸಿ ಪುಣೆ ಮತ್ತು ಮುಂಬೈಯಲ್ಲಿ ಕರಾವಳಿಯ ಗಂಡುಕಲೆಯಾಟ ಯಕ್ಷಗಾನವನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ತರಿಸಿ ಮುಂಬೈಯಲ್ಲಿ ವಿವಿಧೆಡೆ ಪ್ರದರ್ಶಿಸಿ ಅಜೆಕಾರು ಯಕ್ಷಗಾನ ಬಳಗವನ್ನು ಪ್ರಸಿದ್ದಿಗೆ ತಂದರು. ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಮತ್ತು 24 ಸಂಘ- ಸಂಸ್ಥೆಗಳಲ್ಲಿ ಯಕ್ಷಗಾನದ ತರಬೇತಿಯನ್ನು ನಡೆಸಿ ಯಕ್ಷಗಾನ ಪ್ರದರ್ಶಿಸಲಾಗಿರುವುದು. ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ 10 ಯಕ್ಷಗಾನ ಅರ್ಥ ಸಹಿತ ಪುಸ್ತಕವನ್ನು ಪ್ರಕಟಿಸಿದೆ. ಅಜೆಕಾರು ಕಲಾರಂಗವು ಪ್ರತಿವರ್ಷ ‘ಯಕ್ಷರಕ್ಷಾ ಪ್ರಶಸ್ತಿ’ -50,000/-, 25,000/-, 10,000/- ನಗದು ಪ್ರಶಸ್ತಿ ಹೀಗೆ ಒಟ್ಟು ವರ್ಷಕ್ಕೆ 20 ಲಕ್ಷಗಳಷ್ಟು ಸಮಾಜ ಸೇವೆಯ ರೂಪದಲ್ಲಿ ಸಂಘದ ವತಿಯಿಂದ ದಾನ ಮಾಡುತ್ತಾರೆ. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕಾಟಿಪಳ್ಳ, ಸುರತ್ಕಲ್ ಇವರು ‘ಯಕ್ಷ ರಕ್ಷಕ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.ಯಕ್ಷಗಾನ ಕಲಾವಿದ, ಕಲಾಪೋಷಕ, ಸಂಘಟಕ, ಯಕ್ಷ ನಾಟ್ಯ ಗುರು ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅಜೆಕಾರು ಕಲ್ಕುಡಮಾರ್ ಮನೆಯ ದಿ. ಸುಬ್ಬಯ್ಯ ಶೆಟ್ಟಿ ಮತ್ತು ಸಂಪಾ ಶೆಟ್ಟಿ ದಂಪತಿಯ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಅಜೆಕಾರು ಇಲ್ಲಿ ಮುಗಿಸಿ, 1977ರಲ್ಲಿ ಮುಂಬಯಿ ಸೇರಿ ಕ್ಯಾಂಟೀನ್, ಹೊಟೇಲುಗಳಲ್ಲಿ ದುಡಿದು ರಾತ್ರಿ ಹೊತ್ತು ಬಂಟರ ಸಂಘ ಸಂಚಾಲಿತ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸದೊಂದಿಗೆ ಯಕ್ಷಗಾನ ತರಬೇತಿಯನ್ನು ಯಕ್ಷಗುರು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇವರಿಂದ ಪಡೆದುಕೊಂಡರು. ಶ್ರೀ ಗೀತಾಂಬಿಕಾ ಕೃಪಾ ಪೋಷಿತ ಯಕ್ಷಗಾನ ಕಲಾಮಂಡಳಿಯಲ್ಲಿ ಮೊದಲ ಗೆಜ್ಜೆ ಕಟ್ಟಿದರು. ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟರ ಪ್ರೋತ್ಸಾಹದೊಂದಿಗೆ ವಿವಿಧ ಪಾತ್ರಗಳನ್ನು ಯಕ್ಷಗಾನದಲ್ಲಿ ಅಭಿನಯಿಸಿ ಪರಿಣತಿ ಪಡೆದರು. ಸದ್ಯ ಮಂಡಳಿಯ ಗೌರವ ಸದಸ್ಯರಾಗಿದ್ದಾರೆ. 2001ರಲ್ಲಿ ಪುರುಷೋತ್ತಮ ಪೂಂಜರು ಯಕ್ಷಗಾನ ತಾಳಮದ್ದಳೆ ಕಾರ್ಯವನ್ನು ಆರಂಭ ಮಾಡಿದಾಗ ಬಾಲಕೃಷ್ಣ ಶೆಟ್ಟಿ ಅವರು ಅವರೊಂದಿಗೆ ಕಾರ್ಯಕ್ರಮ ಸಂಯೋಜಿಸಿದ್ದರು. ಈ ಅನುಭವಗಳಿಂದ 2002ರಲ್ಲಿ ತಾನೇ ಅಭಿಮಾನಿಗಳನ್ನು ಒಟ್ಟುಗೂಡಿಸಿ ಅಜೆಕಾರು ಕಲಾಭಿಮಾನಿ ಬಳಗ ಹೆಸರಲ್ಲಿ ಯಕ್ಷಗಾನ ಸಂಯೋಜಿಸಿ, ಇಂದಿಗೂ ಹದಿನೇಳು ವರ್ಷಗಳಿಂದ ಸತತ ವಿವಿಧ ಸಂಘ ಸಂಸ್ಥೆಗಳಿಂದ ಕಾರ್ಯಕ್ರಮಗಳು ಜರಗುತ್ತಿವೆ. ಯಕ್ಷಗಾನದೊಂದಿಗೆ ಊರಿನಿಂದ ಪ್ರಸಿದ್ಧ ಅರ್ಥಧಾರಿಗಳನ್ನು ಮುಂಬೈಗೆ ಕರೆಸಿ ತಾಳಮದ್ದಳೆಗಳನ್ನು ಸಂಯೋಜಿಸಿ ತಾಳಮದ್ದಳೆಯ ಅಭಿರುಚಿಯನ್ನು ಮುಂಬೈಗರಿಗೆ ಹುಟ್ಟಿಸಿದರು. ‘ನಾದಲೋಲ’ ಅಭಿನಂದನ ಗ್ರಂಥಗಳ ಬಿಡುಗಡೆ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಉಜಿರೆ ಅಶೋಕ್ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಮುಂತಾದ ಅನೇಕ ಗಣ್ಯ ಯಕ್ಷಗಾನ ಕಲಾವಿದರನ್ನು ರೂ. 1,00,000/- ಹಾಗೂ 50,000/- ನಗದುವಿನೊಂದಿಗೆ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಸನ್ಮಾನಿಸುವ ಕೆಲಸ ಮಾಡಿದವರು. ಇದು ಬಾಲಕೃಷ್ಣ ಶೆಟ್ಟಿಯವರ ಅವಿರತ ಶ್ರಮ ಹಾಗೂ ಸಂಯೋಜನಾ ಶಕ್ತಿಯ ಫಲ. ಜನಪ್ರಿಯ ಯಕ್ಷಗಾನ ಗುರುಗಳಾದ ಇವರಲ್ಲಿ ತರಬೇತಿ ಪಡೆದು ಪಳಗಿದ ಶಿಷ್ಯದಿಂದಿರು ಹೆಸರುವಾಸಿ. ಇದಕ್ಕೆ ಸಂಘಗಳ ಸಂಖ್ಯೆಯೇ ಸಾಕ್ಷಿ. ಮುಂಬಯಿ ಬಂಟರ ಸಂಘ ಕುರ್ಲಾ, ಬೋಂಬೆ ಬಂಟ್ಸ್ ಎಸೋಸಿಯೇಶನ್, ದತ್ತಾತ್ರೇಯ ದುರ್ಗಾಂಬಿಕಾ ಮಂದಿರ ಫಾಸ್ಕೋಪರ್, ವಿ. ಪಿ. ಎಂ. ಕಾಲೇಜು ಮುಲುಂಡು, ಕನ್ನಡ ಸಂಘ ಥಾಣೆ ಕಿಸನ್ ನಗರ, ವಿ. ಪಿ. ಎಂ. ಕಾಲೇಜು ಮತ್ತು ಅನೇಕ ಸಂಘ ಸಂಸ್ಥೆಗಳಿಗೆ ಶಿಕ್ಷಣವಿತ್ತಿದ್ದಾರೆ. ಒಟ್ಟು ಎರಡು ಸಾವಿರ ಮಕ್ಕಳಿಗೆ ತರಬೇತಿ ಕೊಟ್ಟು ಪಳಗಿಸಿದರು. ಶಿಷ್ಯ ವರ್ಗದಲ್ಲಿ ಚಿಣ್ಣರ ಬಿಂಬದ ಬಯಲಾಟ ಪ್ರದರ್ಶನ, ಪತ್ತನಾಜೆ ಸಿನೇಮಾದ ನಾಯಕಿ ನಟಿ ರೇಷ್ಮಾ ಶೆಟ್ಟಿ ಬಾಲಕೃಷ್ಣ ಶೆಟ್ಟಿಯವರಿಂದ ತರಬೇತಿ ಪಡೆದು ಪ್ರಸಿದ್ದಿ ಪಡೆದಿದ್ದಾರೆ.ಊರಿಂಗೆ ದಾರಿಯನು ಆರು ತೋರಿದಡೇನು । ಸಾರಾಯದ ನಿಜವ ತೋರುವವನೇ ನಿಜಗುರು’ ಎಂಬಂತೆ ಯಕ್ಷ ವಿದ್ಯೆಯಲ್ಲಿ ಮೋಕ್ಷದ ತನಕ ಅಂದರೆ ಪರಿಪೂರ್ಣ ವಿದ್ಯೆಯನ್ನು ಕಲಿಸಿ ಪರಿಪೂರ್ಣ ಗುರು ಎಂದೆನಿಸಿಕೊಂಡವರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರು. ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಯಕ್ಷಲೋಕಕ್ಕೆ ಸಮರ್ಪಿಸಿದ ಧನ್ಯರು ಗುರುಗಳಾದ ಅಜೆಕಾರರು. ಬೆಂಕಿಯಲ್ಲಿ ಬೆಂದ ಚಿನ್ನದಂತೆ ಅಜೆಕಾರು ಬಾಲ್ಯದಲ್ಲಿ ಕಷ್ಟಪಟ್ಟು ಕಲಾರಂಗದ ಸ್ವಾನುಭವದಲ್ಲಿ ಬೆಂದು ಪಳಗಿದವರು. ಚಿನ್ನಕ್ಕೆ ಪುಟವಿಟ್ಟಂತೆ ಅವರ ಅನುಭವವು ಅವರನ್ನು ಪರಿಪೂರ್ಣ ಯಕ್ಷಗಾನ ಕಲಾವಿದ ಹಾಗೂ ಸಂಯೋಜಕನಾಗಿ ಮಾಡಿ ಅವರ ಅನುಭವವು ನೀರಿನಲ್ಲಿ ಎಣ್ಣೆ ಪಸರಿಸಿದಂತೆ ಯಕ್ಷಗಾನ ಕಲೆಯು ಕಲಾಭಿಮಾನಿಗಳಿಗೆ ಅವರ ಅನುಭವದ ಉತ್ತಮ ಕಲಾರಸವು ದೊರೆಯುವಂತೆ ಮಾಡಿದ್ದಾರೆ.ಹಾಲು- ಮೊಸರು- ಬೆಣ್ಣೆಗಳಿಂದ ಬಂದ ತುಪ್ಪವು ಅವುಗಳಿಗಿಂತ ಹೆಚ್ಚು ಪರಿಮಳಯುಕ್ತವಾಗಿ ಬರುವಂತೆ ಯಕ್ಷ ಕಲೆಯು ಅನುಭವದ ಮಥನದ ಕತೆಯಾದುದರಿಂದ ಅವರ ಯಕ್ಷಕಲೆಯು ಸಮುದ್ರ ಮಥನದಿಂದ ಎದ್ದು ಬಂದ ಅಮೃತದಂತೆ ಅವರು ಯಕ್ಷಕಲೆಯನ್ನು ಕರಗತ ಮಾಡಿಕೊಂಡು ತಾನು ಸಂಭ್ರಮಿಸಿ ಇತರರನ್ನು ಸಂಭ್ರಮಿಸಿ ಸಾರ್ಥಕತೆಯ ಜೀವನ ನಡೆಸಿ ಉತ್ತಮ ಯಕ್ಷಗುರು, ಕಲಾ ಸಂಘಟಕ ಎನಿಸಿಕೊಂಡರು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ ತನ್ನ ವೃತ್ತಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಧನ್ಯತಾ ಭಾವನೆಯಿಂದ ತಾನೂ ಸಂತೃಪ್ತರಾಗಿ ಶಿಷ್ಯವರ್ಗ, ಶೋತೃವರ್ಗಗಳನ್ನು ಸಂತೃಪ್ತರಾಗುವಂತೆ ಮಾಡಿ ಆದರ್ಶ ಗುರು ಎನಿಸಿ ಸಾರ್ಥಕ ಜೀವನ ನಡೆಸಿದರು. ಅವರ ಸಾರ್ಥಕ ಜೀವನ ಎಲ್ಲರಿಗೂ ಆದರ್ಶ. ಅವರಿಗೆ ಇನ್ನೂ ಪ್ರೋತ್ಸಾಹ ದೊರೆತು ಯಕ್ಷ ಕಲೆಯು ಉನ್ನತಕ್ಕೇರಲಿ. ಅವರ ಜೀವನವು ಬರುವ ಪೀಳಿಗೆಗೆ ಆದರ್ಶವಾಗಿ ಅಜೆಕಾರು ಅವರ ಯಕ್ಷಕಲೆಯ ಶ್ರೇಯೋಭಿವೃದ್ಧಿ ಹೊಂದಲಿ, ದೇವರು ಅವರಿಗೆ ಆಯುರಾರೋಗ್ಯವನ್ನಿತ್ತು ಯಕ್ಷ ವಿದ್ಯೆಯು ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಿ ‘ಯಕ್ಷಗಾನಂ ಗೆಲ್ಗೆ ಎನ್ನೋಣ. ಜೈಹಿಂದ್, ಜೈ ಭಾರತ್ ಮಾತೆ.— ಕೃಷ್ಣ ಎ. ಶೆಟ್ಟಿ ವಿಶ್ರಾಂತ ಸೀನಿಯರ್ ಬ್ಯಾಂಕ್ ಮ್ಯಾನೇಜರ್ ಉಪಾಧ್ಯಕ್ಷರು, ಯಕ್ಷಕಲಾರಂಗ ಕಾರ್ಕಳ ಸಂತೃಪ್ತಿ, ತೆಳ್ಳಾರು ರಸ್ತೆ, ಕಾರ್ಕಳ : 9611474445

Scroll to Top