Author name: editor

ಪ್ರಾದೇಶಿಕ ವಾರ್ತೆಗಳು

ಬಂಟ ಸಮಾಜದ ಅಮೂಲ್ಯ ಬಂಟ ರತ್ನ ವಸಂತ ಶೆಟ್ಟಿ. ಇದೀಗ ಜೆಪ್ಪು ಬಂಟರ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ.

ವಿಶೇಷ ಲೇಖನ: ಡಾ. ಅಶೋಕ್ ಶೆಟ್ಟಿ. ಬಿ. ಎನ್. ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಪ್ರಧಾನ ಕಾರ‍್ಯದರ್ಶಿಯಾಗಿ ಶ್ಲಾಘನೀಯ ಸೇವೆ ಸಲ್ಲಿಸಿದ್ದ, ಹಿರಿಯ, ಅನುಭವೀ ಮುಖಂಡ, ಯಶಸ್ವೀ ಸಂಘಟಕ ವಸಂತ ಶೆಟ್ಟಿಯವರು ಜೆಪ್ಪು ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಬಂಟ ಸಮಾಜಕ್ಕೆ ಸಂತಸದ ಸಂಗತಿಯಾಗಿದೆ. ಮಾಲಾಡಿ ಅಜಿತ್ ಕುಮಾರ್ ರೈಯವರು ಅಧ್ಯಕ್ಷರಾಗಿರುವ ಪ್ರತಿಷ್ಠಿತ ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ 2016 ರಿಂದ 2019ರವರೆಗೆ ಪ್ರಧಾನ ಕಾರ‍್ಯದರ್ಶಿಯಾಗಿ ಬಂಟ ಸಮಾಜದ ಶ್ರೇಯೋಭಿವೃದ್ಧಿಗಾಗಿ ದುಡಿದಿದ್ದ ವಸಂತ ಶೆಟ್ಟಿಯವರು ಬಂಟ ಸಮಾಜದ ಹೆಮ್ಮೆಯ ಸುಪುತ್ರರಾಗಿದ್ದಾರೆ.ಸಮಾಜಸೇವಕರಾಗಿ, ಸಂಘಟಕರಾಗಿ ಇವರ ಸೇವೆ ಅನನ್ಯ. ಪರರ ಕಷ್ಟಗಳಿಗೆ ಸದಾ ಸ್ಪಂದಿಸುವ ಇವರು ನಿಸ್ವಾರ್ಥಿ ಮತ್ತು ನೇರ ನಡೆನುಡಿಯ ಬಂಟನಾಯಕರಾಗಿದ್ದಾರೆ.ಎಲ್ಲೂರು ಮಾಣೇರು ದಿ. ಬಾಬು ಶೆಟ್ಟಿ ಮತ್ತು ಕಾಪು ಕಲ್ಯ ದೇವಸ್ಯ ಗೋಪಿ ಶೆಟ್ಟಿಯವರ ಮಗನಾಗಿ ನವೆಂಬರ್ 26,, 1956 ರಲ್ಲಿ ಜನಿಸಿದ ವಸಂತ ಶೆಟ್ಟಿಯವರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಅದಮಾರಿನಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣವನ್ನು ಓದಿದರು. ಮುಲ್ಕಿ ವಿಜಯ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದ ಅವರು ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಪಡೆದರು.ತದನಂತರ, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಎಕೌಂಟ್ಸ್ ಆಫ್ ಇಂಡಿಯಾದಲ್ಲಿ ಮೂರು ವರ್ಷದ ಆರ್ಟಿಕಲ್ ಶಿಪ್ ಪೂರೈಸಿ ಎರಡು ವರ್ಷಗಳ ಕಾಲ ಎರ್ಮಾಳ್ ಪಡುಬಿದ್ರಿ, ಮೂಲ್ಕಿ ಸರಕಾರಿ ಜ್ಯೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗಳಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ಅಲಂಕರಿಸಿ ಅಧಿಕಾರಿಯಾಗಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿ, ಬಳಿಕ ನಿವೃತ್ತರಾಗಿದ್ದಾರೆ.ಲಯನ್ಸ್ ಇಂಟರ್‌ನ್ಯಾಷನಲ್, 317-ಸಿ.ಯ ಲಯನ್ಸ್ ಕ್ಲಬ್ ಮುದರಂಗಡಿಯ ಅಧ್ಯಕ್ಷರಾಗಿ 317 ಸಿ.ಯ ವಲಯಾಧ್ಯಕ್ಷರಾಗಿ, ಸಂಪುಟ ಸದಸ್ಯರಾಗಿ ಎಂಜೆಎಫ್ ಮತ್ತು ಪಿಎಮ್‌ಜೆಎಫ್ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು.ಇದಕ್ಕೆ ಮೊದಲು ಪಡುಬಿದ್ರೆ ಜ್ಯೂನಿಯರ್ ಚೇಂಬರ್ ಆಫ್ ಇಂಟರ್‌ನ್ಯಾಷನಲ್ ಪಡುಬಿದ್ರಿ ಕ್ಲಬ್‌ನ ಅಧ್ಯಕ್ಷರಾಗಿ ಜನಪರ, ಸಮಾಜಮುಖಿ ಸೇವೆ ಗೈದ ಸಾಧನೆ, ಹಿರಿಮೆ ಇವರಿಗೆ ಸಲ್ಲುತ್ತದೆ. ಪ್ರಸ್ತುತ, ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ಕಾರ‍್ಯಕಾರಿ ಸಮಿತಿ ಸದಸ್ಯರಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕರಾಗಿ ಜವಾಬ್ದಾರಿ ಹೊತ್ತಿರುವ ಜೊತೆಗೆ, ಜೆಪ್ಪು ಬಂಟರ ಸಂಘದ ಅಧ್ಯಕ್ಷರಾಗಿ ಸದ್ರಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮಾದರಿ ಬಂಟರ ಸಂಘವಾಗಿ ಮುನ್ನಡೆಸುವ ಹೊಣೆಗಾರಿಕೆ ಹೊತ್ತಿದ್ದಾರೆ.ನಂದಿಗುಡ್ಡೆ ಸ್ಮಶಾನದ ಅಭಿವೃದ್ಧಿಗಾಗಿ ಶ್ರಮಿಸಿರುವ ಇವರು ಹಿಂದೂ ರುದ್ರಭೂಮಿ ಸಂರಕ್ಷಣಾ ವೇದಿಕೆ (ರಿ)ಯ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಜೊತೆಗೆ, ಹಿಂದೂ ಜಾಗರಣಾ ವೇದಿಕೆ ಮಂಗಳೂರು ಘಟಕದ ಗೌರವ ಅಧ್ಯಕ್ಷರಾಗಿದ್ದಾರೆ.ಮಂಗಳಾದೇವಿ ಮತ್ತು ಬೋಳಾರ ಘಟಕದ ಶನಿ ಪೂಜಾ ಸಮಿತಿಯ ಗೌರವ ಅಧ್ಯಕ್ಷರಾಗಿ, ಮಂಗಳೂರು ಬೋಳಾರ ಹಳೇಕೋಟೆ, ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.ಎಲ್ಲೂರು ಯುವಕ ಮಂಡಲ, ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ಸಕ್ರಿಯರಾಗಿರುವ ಇವರು ಮಂಗಳೂರಿನ ಜಯಾಂಬಿಕಾ ಚಿಟ್ ಪ್ರೈ.ಲಿ.ನ ಆಡಳಿತ ನಿರ್ದೇಶಕರಾಗಿದ್ದಾರೆ. ಇವರ ಧರ್ಮಪತ್ನಿ ಶ್ರೀಮತಿ ಶಾಂತಾ ವಿ.ಶೆಟ್ಟಿ, ಸುಪುತ್ರಿ ಆಶ್ರಯ, ಸುಪುತ್ರ ಸಿ.ಎ. ಅಕ್ಷಯ ಶೆಟ್ಟಿ.ಇವರ ಮಗಳು ಆಶ್ರಯ ಅವರು ಇಂಟೆಲ್ ಸಾಫ್ಟ್ವೇರ್ ಕಂಪೆನಿಯಲ್ಲಿ ಕರ್ತವ್ಯದಲ್ಲಿದ್ದು, ಅಳಿಯ ಚಿರಾಗ್ ಜಿ. ಶೆಟ್ಟಿಯವರು ಅಮೇರಿಕಾದ ಆಲ್ ಸ್ಟೇಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ವಸಂತ್ ಶೆಟ್ಟಿಯವರ ಮೊಮ್ಮಗ ಧ್ರುವ ಶೆಟ್ಟಿ. ಮಗ ಅಕ್ಷಯ ಶೆಟ್ಟಿಯವರು ಸಿ.ಎ. ಆಗಿದ್ದು,ಲೆಕ್ಕ ಪರಿಶೋಧಕರಾಗಿ ಕಾಮತ್ & ರಾವ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಸೊಸೆ ಡಾ. ಪವಿತ್ರಾ ಅಕ್ಷಯ ಶೆಟ್ಟಿಯವರು ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ನಲ್ಲಿ ಉನ್ನತ ವೈದ್ಯಕಿಯ ಶಿಕ್ಷಣ ಪಡೆಯುತ್ತಿದ್ದಾರೆ.ಬಂಟ ಸಮಾಜ ಕಂಡಿರುವ ಅಪೂರ್ವ ಸಮಾಜಸೇವಕ ವಸಂತ ಶೆಟ್ಟಿಯವರು ಬಂಟ ಸಮಾಜದ ಅಮೂಲ್ಯ ಬಂಟ ರತ್ನರಾಗಿದ್ದಾರೆ ಎಂಬುವುದು ಜನಮಾನಸದಲ್ಲಿ ಕೇಳಿಬರುತ್ತಿರುವ ಸುದ್ಧಿ. 47 ವರ್ಷಗಳ ಇತಿಹಾಸ ಹೊಂದಿರುವ ಜೆಪ್ಪು ಬಂಟರ ಸಂಘವು ಇವರ ಅಧ್ಯಕ್ಷತೆಯ ಅಧಿಕಾರ ಅವಧಿಯಲ್ಲಿ ಮಾದರಿ ಬಂಟರ ಸಂಘವಾಗಿ ರೂಪುಗೊಳ್ಳಲಿಲೆಂದು Mp mla’s ನ್ಯೂಸ್ ಶುಭ ಹಾರೈಸುತ್ತದೆ

ಪ್ರಾದೇಶಿಕ ವಾರ್ತೆಗಳು

ಸಾಹಿತಿ ನಳಿನಾಕ್ಷಿ ಉದಯರಾಜ್ ಅವರ ‘ಬದುಕಿನ ಸತ್ಯಗಳು’, ‘ಸ್ವಾತಿಮತ್ತು’ ಕೃತಿಗಳ ಬಿಡುಗಡೆ

ಮಂಗಳೂರು: ಸಾಹಿತಿ ನಳಿನಾಕ್ಷಿ ಉದಯರಾಜ್ ಅವರ ‘ಬದುಕಿನ ಸತ್ಯಗಳು’ ಸಮಕಾಲೀನ ಚಿಂತನೆಗಳ ಸಂಕಲನ ಮತ್ತು ‘ಸ್ವಾತಿಮುತ್ತು ’ಚುಟುಕು ಸಂಕಲನ ಶನಿವಾರ ನಗರದ ಮಹಿಳಾ ಸಭಾದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.ಕರಾವಳಿ ಲೇಖಕಿಯರ – ವಾಚಕೀಯರ ಸಂಘ ಹಾಗೂ ಸುಶಾಂತ ಪ್ರಕಾಶನ ವಸಂತಪುರ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಮಾತನಾಡಿ ‘ಲೇಖಕಿ ನಳಿನಾಕ್ಷಿ ಉದಯರಾಜ್ ಅವರು ಎರಡೂ ಕೃತಿಗಳು ಬದುಕಿನ ಸತ್ಯಗಳೊಂದಿಗೆ ಸಾರ್ವಕಾಲಿಕ ಸತ್ಯಗಳನ್ನು ಅನಾವರಣಗೊಳಿಸಿವೆ. ಅಂಕಣ ಬರಹಗಳನ್ನು ಈ ರೀತಿಯಾಗಿ ಕೃತಿ ರೂಪದಲ್ಲಿ ಕಟ್ಟಿಕೊಟ್ಟಾಗ ಅದು ಎಲ್ಲರಿಗೂ ಓದುವ ಆಸಕ್ತಿಯನ್ನು ಮೂಡಿಸುವುದರೊಂದಿಗೆ ಜೀವನಾನುಭವಗಳನ್ನು ನೀಡುವ ಸಂದೇಶಗಳಾಗಿ ಜನಸಾಮಾನ್ಯರಿಗೆ ತಲುಪಲು ಸಾಧ್ಯ ಎಂದರು.ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ನಳಿನಾಕ್ಷಿ ಉದಯರಾಜ್ ಅವರ ‘ಬದುಕಿನ ಸತ್ಯಗಳು’ ಕೃತಿಯನ್ನು ಹಿರಿಯ ಲೇಖಕಿ ಬಿ.ಎಂ ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವನ್ನು ಹಿರಿಯ ಲೇಖಕ ಸದಾನಂದ ನಾರಾವಿ ಅನಾವರಣಗೊಳಿಸಿದರು. ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಮತ್ತು ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕೃತಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಸೈನ್ಯಾಧಿಕಾರಿ ಹಾಗೂ ಕೆನರಾ ಬ್ಯಾಂಕಿನ ಪ್ರಬಂಧಕ ಸುಕುಮಾರ್ ಕುಂಬಳೆ , ಸುಶಾಂತ ಪ್ರಕಾಶನದ ಪ್ರಕಾಶಕ ಹಾಗೂ ಇನ್ಫೋಸಿಸ್ ಸಂಸ್ಥೆಯಲ್ಲಿ ಸಂಶೋಧಕರಾಗಿರುವ ಸುಶಾಂತ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಳಿನಾಕ್ಷಿ ಉದಯರಾಜ್ ಸ್ವಾಗತಿಸಿದರು. ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ಆಶಯ ಗೀತೆಯನ್ನು ಹಾಡಿದರು. ವಿಜಯ ಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಅನಿಕೇತ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

“ನನ್ನನ್ನು ಅತ್ಯಧಿಕ ಬಹುಮತದೊಂದಿಗೆ ಗೆಲ್ಲಿಸಿ”-ಮತದಾರ ಭಾಂದವರಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನರೇಶ್ಚಂದ್ರ ಹೆಗ್ಡೆ ಹೆಬ್ರಿ ಬೀಡು ಪತ್ರಿಕಾಗೋಷ್ಠಿ ಮೂಲಕ ವಿನಂತಿ.

ಮಂಗಳೂರು : ಕರ್ನಾಟಕ ವಿಧಾನಮಂಡಲದ “ಮೇಲ್ಮನೆ ” ಎನಿಸಿದ ವಿಧಾನಪರಿಷತ್ತಿನ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಬರುವ ಜೂನ್ 3 ರಂದು ನಡೆಯಲಿದೆ .ನೈಋತ್ಯ ಶಿಕ್ಷಕರ ಕ್ಷೇತ್ರ ಎನ್ನುವಂತಹದ್ದು ಅತ್ಯಂತ ಸುಶಿಕ್ಷಿತ ಮತದಾರರ ಕ್ಷೇತ್ರವೆನಿಸಿದೆ. ಇಲ್ಲಿನ ಮತದಾರರು ಕನಿಷ್ಠ ಎರೆಡೆರಡು ಪದವಿಗಳನ್ನು ಪಡೆದವರು ಎಂಬುದು ಉಲ್ಲೇಖನೀಯ.ನೈರುತ್ಯ ಶಿಕ್ಷಕರ ಕ್ಷೇತ್ರ ಎಂಬುದು ರಚನೆಯಾದ ಬಳಿಕ ಎಲ್ಲೋ ಒಂದೆರಡು ಸಂದರ್ಭಗಳನ್ನು ಹೊರತುಪಡಿಸಿ ,ರಾಜಕಾರಣಿಗಳು ,ಶಿಕ್ಷಕರೇ ಅಲ್ಲದವರು ,ಕೆಲವೊಂದು ಸಂದರ್ಭಗಳಲ್ಲಿ ಪದವಿಯನ್ನೇ ಪಡೆಯದವರು ಈ ಸುಶಿಕ್ಷಿತ ಮತದಾರರ ಕ್ಷೇತ್ರದಿಂದ ಚುನಾಯಿತರಾಗಿದ್ದು ಮಾತ್ರ ವಿಪರ್ಯಾಸ .ಈ ಬಾರಿ ಜರುಗಲಿರುವ ಜೂನ್ -3 ರ ಚುನಾವಣೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸುಮಾರು 22 ಸಾವಿರಕ್ಕೂ ಅಧಿಕ ಮಂದಿ ಶಿಕ್ಷಕರು ಮತದಾರರಾಗಿ ನೊಂದಾಯಿಸಿಕೊಂಡಿದ್ದಾರೆ ಎಂದು ಅಂಕಿ -ಅಂಶಗಳು ತಿಳಿಸುತ್ತಿವೆ. ಕೊಡಗು ದಕ್ಷಿಣ ಕನ್ನಡ,ಉಡುಪಿ ,ಚಿಕ್ಕಮಗಳೂರು ,ಶಿವಮೊಗ್ಗ -ಹೀಗೆ ಐದು ಪೂರ್ತಿ ಕಂದಾಯ ಜಿಲ್ಲೆಗಳು ಹಾಗು ದಾವಣಗೆರೆ ಜಿಲ್ಲೆಯ ನ್ಯಾಮತಿ ,ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳು ಈ ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿವೆ. ಕರಾವಳಿ ,ಮಲೆನಾಡು ಮತ್ತು ಬಯಲುಸೀಮೆ…ಹೀಗೆ ಮೂರೂ ರೀತಿಯ ಭೌಗೋಳಿಕ ವಿಭಾಗಗಳನ್ನು ಈ ನಮ್ಮ ನೈರುತ್ಯ ಶಿಕ್ಷಕರ ಕ್ಷೇತ್ರವು ಒಳಗೊಂಡಿದೆ .ತಮಗೆ ಈಗಾಗಲೇ ತಿಳಿದಿರುವಂತೆ ಡಾ.ನರೇಶ್ಚಂದ್ರ ಹೆಗ್ಡೆ ,ಹೆಬ್ರಿಬೀಡು ಆದಂತಹ ನಾನು ಈ ಬಾರಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದು ಮೇ -16 ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅಧಿಕೃತವಾಗಿ ನನ್ನ ಉಮೇದ್ವಾರಿಕೆ ಯ ನಾಮಪತ್ರವನ್ನು ಸಲ್ಲಿಸಿದ್ದೇನೆಂದು ಡಾ. ನರೇಶ್ಚಂದ್ರ ಹೆಗ್ಡೆ, ಹೆಬ್ರಿ ಬೀಡು ಮಂಗಳೂರಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.ಸುಶಿಕ್ಷಿತರ ,ಮೇಧಾವಿಗಳ ಮತ್ತು ಬುದ್ದಿವಂತರ ಈ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಓರ್ವ ವಿದ್ಯಾವಂತ ಮತ್ತು ಸ್ವತಃ ಶಿಕ್ಷಕನೇ ಆಗಿರುವ ಅಭ್ಯರ್ಥಿಯೇ ಬೇಕು ಎಂಬ ಪರಿಕಲ್ಪನೆಯಡಿ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದ್ದೇನೆ .ಕರಾವಳಿ ಮತ್ತು ಮಲೆನಾಡಿನ ಸಂಗಮ ಸ್ಥಾನವಾದ ನಿಸರ್ಗ ರಮಣೀಯ ಹೆಬ್ರಿಯ ಪ್ರತಿಷ್ಠಿತ ಹೆಬ್ರಿಬೀಡು ಮನೆತನದಲ್ಲಿ ಜನಿಸಿರುವುದು ನನ್ನ ಸೌಭಾಗ್ಯ. ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು ಎಂ.ಬಿ.ಬಿ.ಎಸ್, ಎಂ.ಎಸ್ (ಸರ್ಜರಿ) ಮತ್ತು ಎಂ.ಸಿ.ಎಚ್ (ಸಿ.ಟಿ. ವಿ.ಎಸ್ ) ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ನಾನು ಈ ವರೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ, ಮೆಲಕಾ-ಮಣಿಪಾಲ ಮೆಡಿಕಲ್ ಕಾಲೇಜು ಮಲೇಷ್ಯಾ, ಸತ್ಯಸಾಯಿ ಉನ್ನತ ವೈದ್ಯಕೀಯ ಸಂಸ್ಥೆ, ಬೆಂಗಳೂರು, ಗೋಕುಲಂ ಸ್ಪೆಷಾಲಿಟಿ ಆಸ್ಪತ್ರೆ ಸೇಲಂ _ತಮಿಳ್ನಾಡು, ರಾಜರಾಜೇಶ್ವರಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಬೆಂಗಳೂರು ಮೊದಲಾದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾದ್ಯಾಪಕ ,ಪ್ರಾದ್ಯಾಪಕ, ಸಮಾಲೋಚಕ ಮತ್ತು ಹಿರಿಯ ಕುಲಸಚಿವ ಮೊದಲಾದ ಶೈಕ್ಷಣಿಕ ಹುದ್ದೆಗಳನ್ನು ನಿಭಾಯಿಸಿದ್ದೇನೆ .ನನ್ನ ತಂದೆ ಡಾ.ಮನೋರಂಜನ್ ದಾಸ್ ಹೆಗ್ಡೆಯವರು ಸರಕಾರಿ ವೈದ್ಯಾಧಿಕಾರಿಗಳಾಗಿ ತನ್ನ ಮಾನವೀಯ ಸೇವೆಯಿಂದ ಉಡುಪಿ ಜಿಲ್ಲೆಯಾದ್ಯಂತ ಚಿರಪರಿಚಿತರು ಎನ್ನಲು ನನಗೆ ಅತೀವ ಹೆಮ್ಮೆಯೆನಿಸುತ್ತಿದೆ . ನನ್ನ ತಾಯಿ ಶ್ರೀಮತಿ ಸರೋಜಾ.ಎಂ ಹೆಗ್ಡೆಯವರು ಪದವೀಧರೆಯಾಗಿದ್ದು, ಆದರ್ಶ ಗ್ರಹಿಣಿಯಾಗಿ ಮಹಿಳಾಪರ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.ನನ್ನ ಧರ್ಮಪತ್ನಿ ಡಾ. ಜ್ಯೋತಿರಾವ್ ಕೂಡಾ ವೃತ್ತಿಯಿಂದ ವೈದ್ಯೆಯಾಗಿದ್ದು ಫಾರ್ಮಕಾಲಜಿ ವಿಭಾಗದಲ್ಲಿ ವೈದ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ,ಮಾರ್ಗದರ್ಶನ ನೀಡುತ್ತಿದ್ದಾರೆನನ್ನ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, ಓರ್ವ ಹ್ರದ್ರೋಗ ಶಸ್ತ್ರಚಿಕಿತ್ಸಾ ತಜ್ಞನಾಗಿ ಹ್ರದ್ರೋಗ ಮತ್ತು ತತ್ಸಂಬಂಧೀ ವಿಷಯಗಳ ಒಟ್ಟು ಇಪ್ಪತ್ತು ವಿಧದ ಬಹು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಕೈಗೊಂಡು ,ಬಹು ದೊಡ್ಡ ಸಂಖ್ಯೆಯ ರೋಗಿಗಳಿಗೆ ಜೀವದಾನ ಮಾಡಿರುವ ವಿನೀತ ಮತ್ತು ವಿನಮ್ರ ಭಾವ ನನಗಿದೆ .ಅನೇಕ ಸಂಶೋಧನಾತ್ಮಕ ಹೃದ್ರೋಗ ಸಂಬಂಧೀ ಪ್ರಬಂಧಗಳನ್ನು ರಾಷ್ಟೀಯ -ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಂಡಿಸಿರುತ್ತೇನೆ . ಐವತ್ತಕ್ಕೂ ಹೆಚ್ಚಿನ ವೈದ್ಯಕೀಯ ಸಮ್ಮೇಳನಗಳು ಮತ್ತು ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತೇನೆ.ನಾನು ಸಿದ್ಧಪಡಿಸಿದ ಹೃದ್ರೋಗಕ್ಕೆ ಸಂಬಂಧಿಸಿದ ವಿಶೇಷ ಸಂಶೋಧನಾ ವರದಿ ದೇಶದ ಪ್ರಮುಖ ವೈದ್ಯಕೀಯ ಜರ್ನಲ್ ಗಳಲ್ಲಿ ಪ್ರಕಟವಾಗಿದೆ.ಬಹುಬೇಡಿಕೆಯ ಬಿ.ಎಸ್ಸಿ ಮತ್ತು ಎಂ.ಎಸ್ಸಿ (ಪರ್ಪ್ಯೂಷನ್ ಟೆಕ್ನಾಲಜಿ )ಕೋರ್ಸ್ ಗಳಿಗೆ ಸಂಪೂರ್ಣ ಪಠ್ಯಕ್ರಮ ಮತ್ತು ಶಿಷ್ಟಾಚಾರ ನಿಯಮಗಳನ್ನು ರಚಿಸುವ ಮೂಲಕ ಉನ್ನತ ಶಿಕ್ಷಣದ ಪಠ್ಯ ರಚನಾ ಕ್ಷೇತ್ರದಲ್ಲೂ ಕೈಯಾಡಿಸಿದ್ದೇನೆ.ನಾನು ವೈದ್ಯಕೀಯ ವಿದ್ಯಾರ್ಥಿಯಾಗಿರುವಾಗಲೇ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಗೆ ವಿದ್ಯಾರ್ಥಿ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗುವ ಸದಾವಕಾಶ ನನಗೆ ಲಭಿಸಿತ್ತು. ಮಣಿಪಾಲ ಕೆ.ಎಂ .ಸಿ ಯ ಇಂಟರ್ನ್ ಡಾಕ್ಟರ್ಸ್ ಆಸೋಸಿಯೇಷನ್ ನ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದೇನೆ . ಗಣನೀಯ ಸಂಖ್ಯೆಯ ಶ್ರೀ ಸಾಮಾನ್ಯರಿಗೆ ಉಚಿತ ಹೃದ್ರೋಗ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಿರುತ್ತೇನೆ .ಇಂತಹ ವೈದ್ಯಕೀಯ ಮತ್ತು ಶೈಕ್ಷಣಿಕ ಹಿನ್ನೆಲೆ ಹೊಂದಿರುವ ನಾನು ಇದೀಗ ಶಿಕ್ಷಣ ರಂಗದ ಸೇವಾಕಾಂಕ್ಷಿಯಾಗಿ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.ಪ್ರಾಥಮಿಕ ಶಾಲಾ ಹಂತದಿಂದ ವೃತ್ತಿ ಶಿಕ್ಷಣ ಕಾಲೇಜುಗಳವರೆಗಿನ ವಿವಿಧ ಹಂತಗಳ ಶೈಕ್ಷಣಿಕ ಸಂಸ್ಥೆಗಳ , ಭಾಷಾ ಮಾಧ್ಯಮದ, ಬೋಧಕ ವೃಂದದ,ಬೋಧಕೇತರರ,ಸರಕಾರಿ,ಅನುದಾನಿತ ಮತ್ತು ಅನುದಾನರಹಿತ ವಿದ್ಯಾಸಂಸ್ಥೆಗಳವರ ,ಆಡಳಿತ ಮಂಡಳಿಗಳವರ ಬಹುಮುಖಿ ಸಮಸ್ಯೆಗಳನ್ನು ಆಯಾ ವರ್ಗದಲ್ಲಿ ತಜ್ಞರೆನಿಸಿದವರಿಂದ ಸಲಹೆ ,ಮಾರ್ಗದರ್ಶನ ಪಡೆದು ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖವಾಗುವ ಬದ್ಧತೆ ಖಂಡಿತವಾಗಿಯೂ ನನಗಿದೆ.ಇಂದು ಇಲ್ಲಿ ಉಪಸ್ಥಿತರಿರುವ ಮಾಧ್ಯಮಗಳ ಎಲ್ಲಾ ಪ್ರತಿನಿಧಿ ಮಿತ್ರರು ನನ್ನೆಲ್ಲಾ ವಿಚಾರ, ಚಿಂತನೆ, ಶೈಕ್ಷಣಿಕ ಹಿನ್ನೆಲೆ ಮತ್ತು ಮುಖ್ಯವಾಗಿ ನಾನು ಈ ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸಿದ ಕಾರಣಗಳನ್ನು ಈ ಶೈಕ್ಷಣಿಕ ಸಮೃದ್ಧ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಿಕ್ಷಕ ಮತದಾರರಿಗೆ ತಂತಮ್ಮ ಮಾಧ್ಯಮ/ ವಾಹಿನಿಗಳ ಮುಖಾಂತರ ತಲುಪಿಸಿ ತನ್ಮೂಲಕ ಪಕ್ಷೇತರನಾದ ಶಿಕ್ಷಕನೇ ಆದ ಅಭ್ಯರ್ಥಿಯಾದ ನಾನು ಅತ್ಯಧಿಕ ಪ್ರಥಮ ಪ್ರಾಶ್ಯಸ್ತದ ಮತಗಳಿಂದ ಗೆಲುವು ಸಾಧಿಸಲು ಸಹಕರಿಸಬೇಕೆಂದುಪತ್ರಿಕಾಗೋಷ್ಠಿಯಲ್ಲಿ ನರೇಶ್ಚಂದ್ರಹೆಗ್ಡೆ ವಿನಂತಿಸಿದ್ದಾರೆ. ಚಿತ್ರ : ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ನಳಿನ್ ಕುಮಾರ್ ಕಟೀಲ್ ಅವರನ್ನು ಎಂಎಲ್ ಸಿ ಮಾಡಿ ವಿಧಾನ ಪರಿಷತ್ ನ ಪ್ರತಿಪಕ್ಷ ನಾಯಕನಾಗಿಸಲು ಬಿಜೆಪಿ ಮುಖಂಡರ ತೀರ್ಮಾನ. ಮೇ.30ರಂದು ನಿರ್ಧಾರ.

ಬೆಂಗಳೂರು : ಜೂನ್ 13 ರಂದು ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ 11 ಸ್ಥಾನಗಳಲ್ಲಿ ಬಿಜೆಪಿಗೆ ಲಭಿಸಲಿರುವ 3 ಸ್ಥಾನಗಳಿಗೆ 44 ಆಕಾಂಕ್ಷಿಗಳಿದ್ದು,ಕೋರ್ ಕಮಿಟಿ 12 ಮಂದಿಯ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನೆ ಮಾಡಿದೆ.ಇದರಲ್ಲಿ ದ.ಕ.ಸಂಸದರೂ ಆಗಿರುವ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರೂ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಜಾತಿವಾರು ಹಾಗೂ ಪ್ರದೇಶವಾರು ಆಧರಿಸಿ 12 ಮಂದಿಯ ಅಂತಿಮ ಪಟ್ಟಿ ತಯಾರು ಮಾಡಲಾಗಿದ್ದು ಈ ಪೈಕಿ ಮೂವರನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಮೇ 22 ರಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು.ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಮೂರು ಸ್ಥಾನ ಸಿಕ್ಕಿದ್ದು, ಆ ಮೂರು ಸ್ಥಾನಕ್ಕೆ ಪಟ್ಟಿ ಸಿದ್ದಪಡಿಸುವ ಕುರಿತು ಆಕಾಂಕ್ಷಿಗಳ ಪಟ್ಟಿಯೊಂದಿಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಆಕಾಂಕ್ಷಿಗಳ ಪಟ್ಟಿಯಲ್ಲಿ ಇಲ್ಲದ ಹೆಸರುಗಳ ಬಗ್ಗೆಯೂ ಪ್ರಸ್ತಾಪಿಸಿ ಚರ್ಚೆ ನಡೆಸಲಾಗಿದೆ. ಕಟೀಲ್‌ಗೆ ಪರಿಷತ್‌ನ ಪ್ರತಿಪಕ್ಷ ನಾಯಕ ಸ್ಥಾನ?: ಹಾಲಿ ಸಂಸದನಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರದ ಅವಧಿ ಇನ್ನೇನು ಮುಗಿಯಲಿದೆ.ಈ ಬಾರಿ ಲೋಕಸಭೆಗೆ ಅವರಿಗೆ ಅವಕಾಶ ನೀಡಲಾಗಿಲ್ಲ. ಈ ನಿಟ್ಟಿನಲ್ಲಿ ಅವರನ್ನು ಪರಿಷತ್‌ ಸದಸ್ಯನಾಗಿ ಮಾಡುವ ಜೊತೆಗೆ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಸ್ಥಾನ ನೀಡುವ ಕುರಿತು ಪಕ್ಷದ ಪ್ರಮುಖರು ತೀರ್ಮಾನಿಸಿದ್ದಾರೆ.ಪರಿಷತ್‌ನ ಪ್ರತಿಪಕ್ಷದ ನಾಯಕನಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ಈಗಾಗಲೇ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದಾರೆ. ಪ್ರಮುಖರ ಪಟ್ಟಿಯಲ್ಲಿ: ಸದ್ಯ ರಾಜ್ಯ ಬಿಜೆಪಿ ಸಿದ್ಧಪಡಿಸಿರುವ 12 ಜನರ ಪಟ್ಟಿಯಲ್ಲಿ ನಳಿನ್ ಕುಮಾರ್ ಕಟೀಲ್‌, ಸಿ.ಟಿ.ರವಿ, ಎನ್.ರವಿ ಕುಮಾರ್, ಬಿಜೆಪಿ ಮರಾಠ ಮುಖಂಡ ಮಾರುತಿ ರಾವ್‌ ಮೂಳೆ, ಬಿಜೆಪಿ ಮರಾಠ ನಾಯಕಿ ಧನಶ್ರೀ ಸರ್‌ದೇಸಾಯಿ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ, ಹಾವೇರಿ ಬಿಜೆಪಿ ನಾಯಕ ಬೋಜರಾಜು ಪ್ರಮುಖರಾಗಿದ್ದಾರೆ.ಡಿ.ವಿ.ಸದಾನಂದ ಗೌಡರ ಹೆಸರು ಸೇರ್ಪಡೆಯಾಗಿದೆಯೇ ಎನ್ನುವ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದು ಮೇ 30 ರ ನಂತರವಷ್ಟೇ ರಾಜ್ಯ ಬಿಜೆಪಿ ಕಳಿಸಿರುವ ಪಟ್ಟಿ ಬಗ್ಗೆ ಗಮನ ಹರಿಸಲಿದೆ ಮತ್ತು ಈ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಅಂತರಾಷ್ಟ್ರೀಯ ಗುಣ ಮಟ್ಟದ ನಗರವಾಗಿ ಬೆಳೆಯ ಬೇಕು- ರೋಹನ್ ಮೊಂತೇರೊ ಮಂಗಳೂರು ಪ್ರೆಸ್‌ ಕ್ಲಬ್ ಗೌರವ ಅತಿಥಿ.

ಮಂಗಳೂರು:ಮಂಗಳೂರು ಅಂತರಾಷ್ಟ್ರೀಯ ಗುಣಮಟ್ಟದ ನಗರವಾಗಿ ಬೆಳೆಯಬೇಕು ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ರೋಹನ್ ಕಾರ್ಪೋರೇಷನ್‌ನ ಸ್ಥಾಪಕ ಮತ್ತು ಅಧ್ಯಕ್ಷ ರೋಹನ್ ಮೊಂತೇರೊ ತಿಳಿಸಿದ್ದಾರೆ.ಅವರು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.ಮಂಗಳೂರು ನಗರ ಇನ್ನಷ್ಟು ಬೆಳೆಯಲು ಬೇಕಾದ ನೈಸರ್ಗಿಕ ಸೌಲಭ್ಯ ವನ್ನು ಹೊಂದಿ ದೆ.ಮಂಗಳೂರು ಜಲ,ವಾಯು,ನೆಲ ಸಾರಿಗೆ ಸಂಪರ್ಕ ಹೊಂದಿರುವ ನಗರ.ಹೆಚ್ಚು ಸುಶಿಕ್ಷಿತ ಜನರು ಇದ್ದಾರೆ.ಜಾತಿ,ಮತದ ದೊಡ್ಡ ಸಮಸ್ಯೆ ಇಲ್ಲ.ಒಂದು ರೀತಿಯಲ್ಲಿ ಮಂಗಳೂರು ಸ್ವರ್ಗದ ರೀತಿಯ ಪ್ರದೇಶ.ಮಂಗಳೂರಿನ ಜನ ದುಬೈ ಗೆ ಹೋಗುತ್ತಾರೆ.ಮಂಗಳೂರನ್ನೇ ದುಬೈ ರೀತಿಯಲ್ಲಿ ಬೆಳೆಸಬೇಕು. ಇಲ್ಲಿನ ಜನರು ಹಲವು ಭಾಷೆಗಳಲ್ಲಿ ವ್ಯವಹಾರ ಮಾಡಬಲ್ಲವರಾಗಿದ್ದಾರೆ ನಾನು ಉದ್ಯಮ ಕ್ಷೇತ್ರದಲ್ಲಿ ಬೆಳೆಯಲು ಮಂಗಳೂರಿನ ಜನ ಸಹಕಾರ ನೀಡಿರುವುದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ರೋಹನ್ ಮೊಂತೆರೋ ತಿಳಿಸಿದ್ದಾರೆ. 9ನೇ ತರಗತಿ ಶಾಲೆ ತ್ಯಜಿಸಿದವ ಉದ್ಯಮಿಯಾದ ಬಗೆ……….ತಾನು ಒಂಭತ್ತನೇ ತರಗತಿಯವರೆಗೆ ಶಾಲೆಗೆ ಹೋದೆ.ನಂತರ ಔಪಚಾರಿಕ ಶಿಕ್ಷಣ ವ್ಯವಸ್ಥೆ ಯಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯ ವಾಗಲಿಲ್ಲ. ಉಳಾಯಿಬೆಟ್ಟು ಎನ್ನುವ ಸಣ್ಣ ಹಳ್ಳಿ ಯಲ್ಲಿ ನಮಗೆ ಸ್ವಲ್ಪ ಜಮೀನು ಇದೆ.ತಂದೆ ಕೃಷಿಕ.ನನ್ನನ್ನು ಕೃಷಿ ಕೆಲಸ ಮಾಡಿಕೊಂಡು ಇರಲು ಹೇಳಿದರು.ಆಗ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಹೊಲದಲ್ಲಿ ಊಳ ತೊಡಗಿದೆ.ಸ್ವಲ್ಪ ದಿನದಲ್ಲಿ ನನಗೆ ಕೃಷಿಯ ಕಷ್ಟ ನಷ್ಟದ ಅನುಭವ ವಾಯಿತು.ನಾನು ಅದರಲ್ಲಿ ಮುಂದುವರಿಯಲು ಇಷ್ಟ ಪಡಲಿಲ್ಲ.ಬಳಿಕ,ಒಂದು ಕ್ಯಾಂಟೀನ್ ನಲ್ಲಿ ಕೆಲಸಕ್ಕೆ ಸೇರಿದೆ.ಅಲ್ಲಿಯೂ ಸ್ವಲ್ಪ ದಿನದಲ್ಲಿ ಕೆಲಸ ಬಿಟ್ಟು ಒಂದು ಕಡೆ ಆಟೋ ಇಲೆಕ್ಟ್ರೀಶಿಯನ್ ಆಗಿ ಸೇರಿದೆ.ಬಳಿಕ ಏರ್ ಕಂಡೀಶನ್ ನಲ್ಲೂ ಕೆಲಸ ಮಾಡಿದೆ.ಅಲ್ಲೂ ಹೆಚ್ಚು ದಿನ ಇರಲಿಲ್ಲ.ನಂತರ ಒಂದು ಕ್ಯಾಟರಿಂಗ್ ನಲ್ಲಿ ಸೇರಿದೆ.ಬಳಿಕ ಒಂದು ಲಾಂಡ್ರಿ ಮಾಡಿದೆ.ಅದನ್ನು ಆರು ತಿಂಗಳಲ್ಲಿ ಮಾರಾಟ ಮಾಡಿದೆ.ಬಳಿಕ ಒಂದು ಬೇಕರಿ ಅಂಗಡಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಎಂಟು ವರ್ಷ ಕೆಲಸ ಮಾಡಿದೆ. ನಂತರ ಮನೆ ಬಾಡಿಗೆ ವ್ಯವಹಾರ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡು ಇಂದು ಬೃಹತ್ ಬಡಾವಣೆ ನಿರ್ಮಿಸುವ ಹಂತಕ್ಕೆ ತಲುಪಿದೆ. ನಾನು ರಿಯಲ್ ಎಸ್ಟೇಟ್ ನ ಸಣ್ಣ ಪುಟ್ಟ ಕೆಲಸದಲ್ಲಿ ಕಲ್ಲು ಹೊತ್ತು, ಮೇಸ್ತ್ರಿ ಕೆಲಸ ಮಾಡಿದ ಎಲ್ಲಾ ಕಷ್ಟ ನಷ್ಟದ ಅನುಭವ ನನಗೆ ಸಾಕಷ್ಟು ಪಾಠ ಕಲಿಸಿದೆ ಎಂದು ರೋಹನ್ ಮೊಂತೆರೋ ತಮ್ಮ ಅನುಭವವನ್ನು ಹಂಚಿಕೊಂಡರು. ರೋಹನ್ ಮೊಂತೆರೋ ಕಳೆದ 32 ವರ್ಷಗಳಲ್ಲಿ 40 ರಿಯಲ್ಎಸ್ಟೇಟ್ ಪ್ರೊಜೆಕ್ಟ್ ಗಳನ್ನು ಪೂರ್ಣ ಗೊಳಿಸಿ 1400 ಜನರಿಗೆ ಉದ್ಯೋಗ ನೀಡಿದ್ದಾರೆ.3000ಕ್ಕೂ ಅಧಿಕ ಮನೆ ನಿರ್ಮಿಸಿದ್ದಾರೆ.ಮಂಗಳೂರಿನ ಪಡೀಲ್ ,ಸುರತ್ಕಲ್ ,ಯೆಯ್ಯಾಡಿ,ಸುರತ್ಕಲ್ ನಲ್ಲಿ 8 ಸಾವಿರ ಕೋಟಿ ರೂಪಾಯಿಯ ಯೋಜನೆ ಕೈ ಗೆತ್ತಿಕೊಳ್ಳಲಿರುವುದಾಗಿ ಅವರು ತಿಳಿಸಿದರು. ಮುಂದಿನ ಹಂತದಲ್ಲಿ ಮೈಸೂರು, ಗೋವಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನು ವಿಸ್ತರಿಸುವ ಚಿಂತನೆ ಹೊಂದಿರುವುದಾಗಿ ರೋಹನ್ ಮೊಂತೆರೋ ವಿವರಿಸಿದರು.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಪೋರೇಟ್ ಸಂವಹನಾಧಿಕಾರಿ ಜೈದೀಪ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು.ಸಮಾರಂಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ , ಕಾರ್ಯಕ್ರಮ ನಿರ್ದೇಶಕ ವಿಲ್ಫೆಡ್ ಡಿ ಸೋಜ ಉಪಸ್ಥಿತರಿದ್ದರು.ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಜನ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆ-ಆ್ಯಂಟೋನಿ ಮರಿಯಪ್ಪ. 2024-25 ನೇ ಸಾಲಿನಲ್ಲಿ 5ಲಕ್ಷ ಗಿಡ ನೆಡುವ ಯೋಜನೆ.

ಮಂಗಳೂರು:ಜನ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆ ಒತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಗಿಡ ನೆಟ್ಟು ಬೆಳೆಸುವುದಕ್ಕೆ ಹಾಗೂ ಅರಣ್ಯ ಇಲಾಖೆಯ ವಿವಿಧ ಯೋಜನೆಗಳ ಮೂಲಕ ಗಿಡಗಳ ವಿತರಣೆ ಆರ್ಥಿಕ ನೆರವನ್ನು ಕೃಷಿಕರಿಗೆ ನೀಡಲಾ ಗುತ್ತಿದೆ. 2024-25ನೇ ಸಾಲಿನಲ್ಲಿ ರೈತರಿಗೆ 1,63,000ಗಿಡಗಳನ್ನು ವಿತರಿಸುವ ಗುರಿಹೊಂದಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ ತಿಳಿಸಿದ್ದಾರೆ.ಅವರು ನಗರದ ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಮಾಧ್ಯಮ ಸಂವಾದದಲ್ಲಿ ವಿವರಿಸಿದರು. ರೈತರಿಗೆ ತಮ್ಮ ಜಮೀನಿನಲ್ಲಿ ಗಿಡ ಬೆಳೆಸಲು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆಯ 9 ನರ್ಸರಿಗಳಲ್ಲಿ ಮತ್ತು ಸಾಮಾಜಿಕ ಅರಣ್ಯ ವಿಭಾಗದ 5 ನರ್ಸರಿಗಳ ಮೂಲಕ ಸುಮಾರು 30 ವಿವಿಧ ರೀತಿಯ ಸಸ್ಯಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಒಬ್ಬ ರೈತನಿಗೆ ಗರಿಷ್ಠ ಒಂದು ಹೆಕ್ಟೇರ್ ಗೆ 400 ಸಸಿ ವಿತರಿಸುವ ಯೋಜನೆ ಇದೆ. ಕೃಷಿ ಅರಣ್ಯ ವಿಕಾಸ ಯೋಜನೆಯಲ್ಲಿ ಪ್ರತಿ ಗಿಡ ನೆಟ್ಟು ಸಂರಕ್ಷಣೆ ಮಾಡಲು 125 ರೂಪಾಯಿ ಆರ್ಥಿಕ ನೆರವು ರೈತರಿಗೆ ನೀಡಲಾಗುತ್ತದೆ. ನರೇಗಾ ದಲ್ಲೂ ಗಿಡ ನೆಡಲು ಸಹಾಯ ನೀಡಲಾಗುತ್ತದೆ. ಕಳೆದ ವರ್ಷ 7,79,000 ಗಿಡಗಳನ್ನು ಅರಣ್ಯದಲ್ಲಿ,35,600 ಗಿಡಗಳನ್ನು ಅರಣ್ಯೇತರ ಕಡೆಗಳಲ್ಲಿ ನೆಡಲಾಗಿದೆ. 4,41,000 ಗಿಡಗಳನ್ನು ರೈತರಿಗೆ ನೀಡಲಾಗಿದೆ. 2024-25 ರಲ್ಲಿ 5ಲಕ್ಷ ಸಸಿ ನೆಡುವ ಯೋಜನೆ ಇದೆ.ಈ ರೀತಿಯ ಪ್ರತಿ ವರ್ಷ ಸುಮಾರು 7ಲಕ್ಷ ಗಿಡಗಳನ್ನು ನೆಡಲಾಗುತ್ತಿದೆ. ಆದರೆ, ರಸ್ತೆ ಕಟ್ಟಡ ಇನ್ನಿತರ ಅಭಿವೃದ್ಧಿ ಯೋಜನೆಗಳ ಸಂದರ್ಭದಲ್ಲಿ ಪ್ರತಿ ವರ್ಷ ಸಾಕಷ್ಟು ಮರಗಳ ನಾಶವಾಗುತ್ತದೆ.ಕಳೆದ ವರ್ಷ ಈ ರೀತಿ 1,70,000 ಸಾವಿರ ಮರಗಳನ್ನು ತೆರವುಗೊಳಿಸ ಬೇಕಾಯಿತು. ಸುಮಾರು 3ಸಾವಿರ ಮರಗಳನ್ನು ಅಪಾಯವನ್ನು ತಪ್ಪಿಸಲು ತೆರವುಗೊಳಿಸ ಬೇಕಾಯಿತು. ಆದರೂ ಶೇ 33ರಷ್ಟು ಅರಣ್ಯ ವನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ ಎಂದು ಮರಿಯಪ್ಪ ಹೇಳಿದರು.ಕಾಡು ಪ್ರಾಣಿಗಳ ಹಾವಳಿ ತಡೆಗೆ ಹಣ್ಣಿನ ಮರಗಳ ತೋಪು:- ಕಾಡು ಪ್ರಾಣಿಗಳು ಮುಖ್ಯ ವಾಗಿ,ಆನೆಗಳ ಹಾವಳಿ ತಡೆಯಲು ಕಾಡಿನಲ್ಲಿ ಅಕೇಶಿಯ ಮರಗಳನ್ನು ತೆರವುಗೊಳಿಸಿ ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿದೆ. ಇದುವರೆಗೆ ಸುಮಾರು 900 ಹೆಕ್ಟೇರ್ ಅಕೇಶಿಯ ಮರಗಳ ತೋಪು ತೆರವುಗೊಳಿಸಿ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಆನೆಗಳ ತಡೆಗೆ ಸೋಲಾರ್ ಬೇಲಿ ಸೇರಿದಂತೆ ಜನವಸತಿಗೆ ನುಗ್ಗದಂತೆ ತಡೆಗಳನ್ನು ನಿರ್ಮಿಸಲಾಗಿದೆ.ಆನೆಗಳ ಪಥ ಹಲವಾರು ವರ್ಷ ಗಳಿಂದ ಒಂದೇ ಆಗಿರುತ್ತದೆ.ರಸ್ತೆ ಇತರ ಕಾಮಗಾರಿಯ ಸಂದರ್ಬದಲ್ಲಿ ಈ ಪಥ ಬದಲಾದರೆ ಆನೆಗಳು ಗೊಂದಲಕ್ಕೆ ಒಳಗಾಗಿ ಹೊಸ ದಾರಿ ಹುಡುಕುತ್ತವೆ .ಇದರಿಂದ ಸಾಕಷ್ಟು ಬಾರಿ ಅವುಗಳು ನಾಡಿಗೆ ನುಗ್ಗಿದ ಉದಾಹರಣೆಗಳಿವೆ. ಕಳೆದ 2023-24ರಲ್ಲಿ ಆನೆ ದಾಳಿಯಿಂದ ನಾಲ್ಕು ಜೀವ ಹಾನಿಯಾಗಿದೆ. 2024-25ರಲ್ಲಿ ಯಾವುದೇ ಜೀವ ಹಾನಿ ಯಾಗಿಲ್ಲ . ಆನೆ,ಕಡವೆ, ಮಂಗಗಳು ಸೇರಿದಂತೆ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದರೆ ಅವರಿಗೆ ಪರಿಹಾರ ನೀಡುವ ಯೋಜನೆ ಇದೆ ಎಂದು ಡಿಸಿಎಫ್ ತಿಳಿಸಿದರು.ಚಾರಣ ಪ್ರಿಯರಿಗೆ ಆನ್ ಲೈನ್ ಮೂಲಕ ಬುಕ್ ಮಾಡಿ ಹೋಗಲು ಅವಕಾಶವಿದೆ. ಅರಣ್ಯದ ಕಾನೂನಿನಲ್ಲಿ ನೀಡಲಾದ ವಿನಾಯಿತಿಗಳ ಹೊರತಾಗಿ ಇನ್ನಿತರ ಚಟುವಟಿಕೆಗಳಿಗೆ ಮಾತ್ರ ಇಲಾಖೆ ಅನುಮತಿ ನೀಡುವುದಿಲ್ಲ. ಅರಣ್ಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ಈ ನಿಯಮ ರೂಪಿಸಲಾಗಿದೆ ಎಂದು ಡಿಸಿಎಫ್ ಎ.ಮರಿಯಪ್ಪ ವಿವರಿಸಿದರು.ಮಾಧ್ಯಮ ಸಂವಾದದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್,ಪ್ರೊಬೆಷನರಿ ಐಎಫ್ಎಸ್ ಅಧಿಕಾರಿ ಅಕ್ಷಯ್ ಪ್ರಕಾಶ್ಕರ್,ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಸಾಂಕೇತಿಕ ವಾಗಿ ಗಿಡಗಳನ್ನು ವಿತರಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಅವರಿಗೆ ‘ಹೊರನಾಡ ಕನ್ನಡ ರತ್ನ’ ಪ್ರಶಸ್ತಿ.

ಮುಂಬಯಿ: ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಅವರು ಹೊರನಾಡ ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಸಂಘ ಆಂಧೇರಿ (ರಿ) ಪ್ರಸ್ತುತ ಪಡಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇವರ ಸಹಯೋಗದಲ್ಲಿ ಜೂನ್ 9ರ ಭಾನುವಾರ ರಾಧಾಬಾಯಿ ಟಿ. ಭಂಡಾರಿ ಸಭಾಗೃಹ, ಬಂಟರ ಭವನ ಕುರ್ಲಾ, ಮುಂಬಯಿಯಲ್ಲಿ ಬೆಳಿಗ್ಗೆ 9.30ರಿಂದ ಆರಂಭವಾಗುವ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ 2024ರಲ್ಲಿ ಕರ್ನಾಟಕ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಹೇರಂಬ ಇಂಡಸ್ಟ್ರೀಸ್‌ನ ಸಿ.ಎಂ.ಡಿ. ಕನ್ಯಾನ ಸದಾಶಿವ ಶೆಟ್ಟಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಡಾ. ಸುಧಾಕರ ಶೆಟ್ಟಿ ಅವರಿಗೆ ಹೊರನಾಡ ಕನ್ನಡ ಪ್ರಶಸ್ತಿ ಸೇರಿದಂತೆ ಹಲವು ಮಂದಿ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ. ಮೋಹನ್ ಆಳ್ವರ ಸಹಕಾರದೊಂದಿಗೆ ಮೂಡಬಿದ್ರೆಯಲ್ಲಿ ಬೇಬಿ ಫ್ರೆಂಡ್ ಸಂಚಾರಿ ಮಕ್ಕಳ ಕ್ಲಿನಿಕ್‌ನ್ನು ಕಳೆದ ಒಂದು ವರ್ಷದಿಂದ ಆರಂಭಿಸುತ್ತಾ ಬಂದಿರುವ ಕಠಿಣ ಶ್ರಮಿ, ವೈದ್ಯಕೀಯ ಸಮಾಜ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಸುಧಾಕರ ಶೆಟ್ಟಿಯವರು ಪುಣೆಯಲ್ಲಿ ಯಶಸ್ವಿಯಾಗಿ 30 ವರ್ಷಗಳಿಂದ ಬೇಬಿ ಫ್ರೆಂಡ್ ಮಕ್ಕಳ ಕ್ಲಿನಿಕ್ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ನಾಮರಾಗಿದ್ದಾರೆ.ದಿನವಿಡೀ ಮಕ್ಕಳ ಆರೋಗ್ಯ ತಪಾಸಣೆ, ಬಡ ಮಕ್ಕಳಿಗಾಗಿ ಸಾವಿರಾರು ವೈದ್ಯಕೀಯ ಶಿಬಿರಗಳನ್ನು ಸಂಘಟಿಸುತ್ತಾ ಬಂದಿರುವ ಡಾ. ಸುಧಾಕರ ಶೆಟ್ಟಿಯವರು ಕೋವಿಡ್ ಸಂದರ್ಭದಲ್ಲಿ ಕರ್ನಾಟಕ ಮೂಲದ 1,500ಕ್ಕೂ ಹೆಚ್ಚು ರೋಗಿಗಳಿಗೆ ತನ್ನ ಪರಿಣಿತ ವೈದ್ಯಕೀಯ ತಂಡದ ಮೂಲಕ ಗುಣಮುಖಗೊಳಿಸಿದ್ದಾರೆ.ಡಾ. ಸುಧಾಕರ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರ ಪ್ರತಿಷ್ಠಿತ ಪ್ರಶಸ್ತಿಯಾದ ರಕ್ಷಾ ಮಂತ್ರಿ ಅವಾರ್ಡ್ ದೊರಕಿದೆ.ಪುಣೆ ಕಂಟೋನ್ಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ ಪ್ರಶಸ್ತಿ,2023ರಲ್ಲಿ ಚಾರ್ ಸಹಿ ಬಜಾಡೆ ಅವಾರ್ಡ್ ಬಂದಿದೆ.

ಪ್ರಾದೇಶಿಕ ವಾರ್ತೆಗಳು

ವಿಶ್ವ ಬಂಟರ ಐಕ್ಯತೆಯಲ್ಲಿ ಮೌನ ಕ್ರಾಂತಿ ಮಾಡಿದ ಮಾಧ್ಯಮ ಸಂಸ್ಥೆ ಬಂಟ್ಸ್ ನೌ – ಪ್ರವೀಣ್ ಭೋಜ ಶೆಟ್ಟಿ ಶ್ಲಾಘನೆ.

ಮಂಗಳೂರು :ಇತ್ತೀಚೆಗೆ ಮಂಗಳೂರು ನಗರದ ಪುರಭವನದಲ್ಲಿ ನಡೆದ ಅದ್ದೂರಿಯ ಕಾರ್ಯಕ್ರಮ ಅಂತರ್ಜಾಲ ಮಾಧ್ಯಮ ಸಂಸ್ಥೆ ಬಂಟ್ಸ್ ನೌ ತಾನು ಒಂದೂವರೆ ದಶಕ ಪೂರೈಸಿದ ಸಂಭ್ರಮವನ್ನು ತ್ರಿಪಂಚಕ ಅನುಬಂಧ ಎಂಬ ವಿಶೇಷ ಶೀರ್ಷಿಕೆಯಡಿ ದೇಶ ವಿದೇಶಗಳ ಪ್ರತಿಷ್ಠಿತ ಘಟಾನುಘಟಿ ಬಂಟ ನಾಯಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸಿ ಜಾಗತಿಕ ಮಟ್ಟದ ಬಂಟ ವಲಯದಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ಅಂದು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಬಂಟ ನಾಯಕ ಮಣಿಗಳನ್ನು ಬಂಟರತ್ನ, ಬಂಟ ವಿಭೂಷಣ ಹಾಗೂ ಯುವ ಬಂಟ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಜೊತೆಗೆ ಕೆಲವು ವಿಶಿಷ್ಟ ಕ್ಷೇತ್ರಗಳಲ್ಲಿ ಸಾಧನೆ ತೋರಿ ಗಮನ ಸೆಳೆಯುತ್ತಿರುವ ವ್ಯಕ್ತಿಗಳನ್ನು ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಸತ್ಕರಿಸಿ ಸ್ಮರಣಿಕೆ ನೀಡಲಾಯಿತು. ರಂಜಿತ್ ಶೆಟ್ಟಿ ಸ್ಥಾಪಿಸಿ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಂಟ್ಸ್ ನೌ ಅಂತರ್ಜಾಲ ಮಾಧ್ಯಮ ಬಂಟ ಬಾಂಧವರ ಚಟುವಟಿಕೆಗಳನ್ನು ಎಚ್ಚರಿಕೆ ಕಣ್ಣುಗಳಿಂದ ಗಮನಿಸುತ್ತಾ ವರದಿ ಮಾಡುವುದರ ಜೊತೆಗೆ ವಿಶೇಷ ಸುದ್ಧಿಗಳು, ವೈಚಾರಿಕ ಸಾಂದರ್ಭಿಕ ಲೇಖನಗಳು, ಅಂಕಣ ಬರಹಗಳು, ವ್ಯಕ್ತಿ ಪರಿಚಯ, ಸಾಧಕರ ಪರಿಚಯ ಹಾಗೂ ಬಂಟ ಬಾಂಧವರ ವ್ಯಾಪಾರ ಉದ್ದಿಮೆಗಳಿಗೆ ಸಂಬಂಧ ಪಟ್ಟ ಜಾಹೀರಾತುಗಳನ್ನು ಪ್ರಕಟಿಸುತ್ತಾ ವಿಶ್ವ ಮಟ್ಟದಲ್ಲಿ ಬಂಟ ಸಮುದಾಯದ ಗಮನ ಸೆಳೆಯುತ್ತಿದೆ. ಮೇ.19 ಮಂಗಳೂರು ಪುರಭವನದಲ್ಲಿ ಮೇಳವಿಸಿ ಕಳೆಗಟ್ಟಿದ ಈ ಸಮಾರಂಭದ ಅಧ್ಯಕ್ಷತೆಯನ್ನು ಬಹು ಪ್ರತಿಷ್ಠಿತ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ವಹಿಸಿದ್ದು, ಬಂಟ್ಸ್ ನೌ ಮಾಧ್ಯಮ ಬಳಗ ಅದರಲ್ಲೂ ಮುಖ್ಯವಾಗಿ ರಂಜಿತ್ ಶೆಟ್ಟಿ ಅವರ ಪರಿಶ್ರಮ ಸಾಧನೆ ಹಾಗೂ ಧ್ಯೇಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತಾಡುತ್ತಾ, ರಂಜಿತ್ ಅವರೊಬ್ಬ ಭಿನ್ನ ಚಿಂತನೆಯ ಆದರ್ಶ ಪತ್ರಕರ್ತ. ಸಮಾಜದವರ ಸಹಕಾರವನ್ನು ಮರೆಯದೆ ಅದರ ಋಣ ಸಂದಾಯ ಜೊತೆಗೆ, ವಿಶ್ವ ಬಂಟರ ಏಕತೆ ಸಮಗ್ರತೆಗೆ ಟೊಂಕ ಕಟ್ಟಿದ ಒಬ್ಬಂಟಿ ಹೋರಾಟಗಾರರು. ಇಂಥವರ ಕೆಲಸಕ್ಕೂ ತೊಡಕುಂಟು ಮಾಡಿ ವಿಘ್ನ ಸಂತೋಷಿಗಳಾಗಿ ಸಂತೋಷ ಪಡುವ ಕೀಳು ಮಾನಸಿಕತೆಗಳೂ ಇವೆ ಎಂಬ ವಿಚಾರ ಖೇದಕರ ಎಂದರಲ್ಲದೇ ರಂಜಿತ್ ದಂಪತಿ ಹಾಗೂ ಅವರ ಬಳಗದ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರು. ಅಂದಿನ ಸುಂದರ ಸಂಧ್ಯಾ ಸಂಧಿಯಲ್ಲಿ ಅನುಸಂಧಿಸಿದ ಅನುಬಂಧ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಗೌರವ ಅತಿಥಿಗಳಾಗಿ ಮಾಜಿ ಲೋಕಾಯುಕ್ತ ಜಸ್ಟಿಸ್ ಶ್ರ ಸಂತೋಷ್ ಹೆಗ್ಡೆ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ವಿಜಯ್ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಸಂತ ಶೆಟ್ಟಿ ಬೆಳ್ಳಾರೆ, ಚಂದ್ರಹಾಸ ಶೆಟ್ಟಿ, ಹರಿಪ್ರಸಾದ್ ರೈ, ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಲೋಕಯ್ಯ ಶೆಟ್ಟಿ, ಭವ್ಯ ಎ ಶೆಟ್ಟಿ ಮೊದಲಾದವರು ಉಪಸ್ಥತರಿದ್ದು ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು. ಅಂದಿನ ಕಾರ್ಯಕ್ರಮದ ಉದ್ಘಾಟಕರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಗೌರವಾಧ್ಯಕ್ಷ ಡಾ.ಎ ಸದಾನಂದ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಹಾಗೂ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮೊದಲಾದವರು ಆಗಮಿಸಿದ್ದರು. ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ರಂಜಿತ್ ಶೆಟ್ಟಿ ಅವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ಬಂಟರ ಒಗ್ಗಟ್ಟನ್ನು ಬಲಪಡಿಸುವುದಾಗಿದ್ದು ಸಮಾಜಕ್ಕೆ ಉಪಕಾರ ಮಾಡಿದ ಸಮಾಜದ ಸದಸ್ಯರನ್ನು ಗುರುತಿಸಿ ಸತ್ಕರಿಸುವುದು ಎಂದರು. ಚೇಳ್ಯಾರುಗುತ್ತು ದಿವಾಕರ್ ಸಾಮಾನಿ ಆಗಮಿಸಿದ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ವಿಶೇಷ ಗೌರವ ಅತಿಥಿಗಳು, ಸಂಮಾನ ಸ್ವೀಕರಿಸಲಿದ್ದ ಗಣ್ಯರನ್ನು ಹಾಗೂ ಸಾಧಕರನ್ನು ಶಾಲು ಹೊದಿಸಿ ಹೆಸರಾಂತ ಲೇಖಕರು ಬರೆದ ಪುಸ್ತಕಗಳನ್ನು ನೀಡಿ ಗೌರವಿಸಿದರು. ಯಕ್ಷಗಾನ ಭಾಗವತ ಧೀರಜ್ ರೈ ಸಂಪಾಜೆ ಅವರ ಯಕ್ಷಗಾನ ಶೈಲಿಯ ಪ್ರಾರ್ಥನೆಯೊಂದಿಗೆ ಅತಿಥಿ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿ ಮುಂದಿನ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಉದ್ಘಾಟಕರಲ್ಲಿ ಒಬ್ಬರಾದ ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ಮಾತಾಡುತ್ತಾ, ಕೇವಲ ಹಣ ಅಂತಸ್ತುಗಳನ್ನಷ್ಟೇ ಗೌರವಿಸುವುದಲ್ಲದೇ ಸಮಾಜದಲ್ಲಿ ಸಾಮಾನ್ಯರಾದರೂ ತಾವು ಸ್ವಾಭಿಮಾನದಿಂದ ಸತ್ಯ ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದರೊಂದಿಗೆ ತಮ್ಮ ವಿಶೇಷ ಸಾಮರ್ಥ್ಯಗಳಿಂದ ಗುರುತಿಸಿಕೊಂಡರೆ ಮಾಧ್ಯಮಗಳು ಅವರನ್ನು ಗುರುತಿಸಿ ಗೌರವಿಸುವ ಒಂದು ಹೊಸ ಪರಂಪರೆ ಆರಂಭವಾಗಬೇಕು. ಅದು ಬಂಟ್ಸ್ ನೌ ಮಾಧ್ಯಮ ಮೂಲಕ ರಂಜಿತ್ ಶೆಟ್ಟಿ ಮಾಡಿ ತೋರಿಸಿದ್ದಾರೆ ಎಂದರಲ್ಲದೆ ಬಂಟ ಸಮುದಾಯದ ಏಳಿಗೆಗೆ ಒಗ್ಗಟ್ಟಿಗೆ ಶ್ರಮಿಸುವ ಸಂಘಟಕರನ್ನು ಮಹಾದಾನಿಗಳನ್ನು ಪೋಷಕರನ್ನು ಸನ್ಮಾನಿಸಬೇಕು. ಇದರಿಂದ ಸಮಾಜದ ಇತರ ಬಂಧುಗಳಿಗೆ ಒಂದು ಸಂದೇಶ ಹಾಗೂ ಪ್ರೇರಣೆ ದೊರೆತಂತಾಗುತ್ತದೆ ಎಂದರು.ಇತರ ಗೌರವ ಅತಿಥಿಗಳು ಸಂದರ್ಭೋಚಿತವಾಗಿ ಮಾತಾಡುತ್ತಾ ಇದೊಂದು ಆದರ್ಶ ಮಾದರಿ ಕಾರ್ಯಕ್ರಮ. ಇಂದು ದೇಶದ ಭದ್ರತೆಗೆ ಪ್ರಾಣ ಪಣವೆಂಬ ಸಿದ್ಧಾಂತದ ಕರ್ನಲ್, ಹಿರಿಯ ಕೃಷಿಕರು, ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ, ಸಮಾಜಕ್ಕೆ ಅತೀ ವಿಶಿಷ್ಟ ಸೇವೆ ಸಲ್ಲಿಸುತ್ತಿರವ ವಿಶು ಶೆಟ್ಟಿ ಅಂಬಲಪಾಡಿ, ಹೀಗೆ ಭಿನ್ನವೂ ಮಾದರಿಯೂ ಆದ ರೀತಿಯ ಸಂಮಾನ ಹಾಗೂ ಸಾಧಕರಿಗೆ ನೀಡುತ್ತಿರುವ ಬಂಟರತ್ನ ಬಂಟ ವಿಭೂಷಣ ಬಿರುದುಗಳು ಇತರರಿಗೆ ಉತ್ತಮ ಕೆಲಸ ಮಾಡಲು ನೀಡುವ ಉತ್ತೇಜನ ಎಂದು ಏಕಮತದಿಂದ ಅಭಿಪ್ರಾಯ ಪಟ್ಟರು. ಸಮಾರಂಭದಲ್ಲಿ ಬಂಟರತ್ನ ಪ್ರಶಸ್ತಿ ಪಡೆದ ಕರ್ನಲ್ ಜಗಜೀವನ್ ಭಂಡಾರಿ, ಡಾ.ಆರ್.ಕೆ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಸಿ.ಎ. ಎಸ್ ಬಿ ಶೆಟ್ಟಿ ಮೊದಲಾದ ಸಮಾಜದ ಗಣ್ಯರಾದರೆ, ಬಂಟ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಮಹನೀಯರು ವಿಶು ಶೆಟ್ಟಿ ಅಂಬಲಪಾಡಿ, ಮುರಳಿ ಮೋಹನ ಶೆಟ್ಟಿ, ರಾಜೇಂದ್ರ ವಿ ಶೆಟ್ಟಿ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್, ರಾಕೇಶ್ ಶೆಟ್ಟಿ ಬೆಳ್ಳಾರೆ, ಎಂ.ಬಿ ಉಮೇಶ್ ಶೆಟ್ಟಿ ಹಾಗೂ ಶ್ರೀ ಪ್ರಭಾಕರ್ ವಿ ಶೆಟ್ಟಿ ಪುಣೆ. ಅದರಂತೆ ಯುವ ಸಾಧಕರಿಗೆ ಕೊಡ ಮಾಡುವ ಯುವ ಬಂಟರತ್ನ ಪ್ರಶಸ್ತಿ ಸ್ವೀಕರಿಸಿದ ಗಣ್ಯರು ಹಾರಾಡಿ ಮಂದರ ಶೆಟ್ಟಿ, ಎಚ್ ಪ್ರಸನ್ನ ಚಂದ್ರ ಶೆಟ್ಟಿ ಹಾಗೂ ಡಾ.ಹರ್ಷಕುಮಾರ್ ರೈ ಮಾಡಾವು. ಪ್ರಶಸ್ತಿ ಸ್ವೀಕರಿಸಿ ಉತ್ತರ ರೂಪದಲ್ಲಿ ಮಾತಾಡಿದವರೆಲ್ಲರೂ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಯ ಈ ವಿಶಿಷ್ಟ ಕಾರ್ಯಕ್ರಮವನ್ನು ಮನ ತುಂಬಿ ಕೊಂಡಾಡಿದರಲ್ಲದೆ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಸಮಾಜಪರ ಕಾರ್ಯೋನ್ಮುಖರಾಗುವ ಭರವಸೆ ನೀಡಿದರು. ಹಿರಿಯರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ತನ್ನ ಭಾಷಣದಲ್ಲಿ ಬಂಟರು ನಡೆದು ಬಂದ ದಾರಿ, ಅವರ ವಿಶೇಷ ನಾಯಕತ್ವ ಗುಣ, ಸಮಾಜದಲ್ಲಿ ಅವರಿಗೆ ದೊರೆಯುವ ಸ್ಥಾನ ಮಾನಗಳಿಗೆ ಮುಂದೆಯೂ ಕುಂದಾಗದಂತೆ ನಮ್ಮ ಹೊಸ ಪೀಳಿಗೆಗೆ ಮಾರ್ಗದರ್ಶನ ನೀಡಬೇಕೆಂದು ಕಿವಿಮಾತು ನೀಡಿದರು. ಪ್ರವೀಣ್ ಭೋಜ ಶೆಟ್ಟಿಯವರು ಅಧ್ಯಕ್ಷ ಭಾಷಣ ಸಂದರ್ಭದಲ್ಲಿ ರಂಜಿತ್ ಶೆಟ್ಟಿ ಅವರ ಸಂಘಟನಾ ಕೌಶಲವನ್ನು ಕಥನ ಪ್ರಯೋಗ ಮೂಲಕ ಕೊಂಡಾಡುತ್ತಾ, ಯುವಕ ರಂಜಿತ್ ಅವರ ಹಿಂದೆ ಮೂವರು ತರುಣಿಯರು ಹಿಂದೆ ಬಿದ್ದಿದ್ದರು. ಅವರು ಯಾರೆಂದರೆ ಯಕ್ಷಿಣಿ, ಯಶಸ್ವಿನಿ, ಸಂಪ್ರೀತಿನಿ. ಮೂವರನ್ನು ನಾನು ಸ್ವೀಕರಿಸುವುದು ಸಾಧ್ಯವಿಲ್ಲ. ಸಂಪ್ರೀತಿನಿ ನನ್ನ ಜೊತೆ ಬರಲಿ. ಹೀಗೆಂದ ಕೂಡಲೇ ಸಂಪ್ರೀತಿ ಜೊತೆಗೆ ಇತರ ಇಬ್ಬರೂ ಅವರನ್ನು ಹಿಂಬಾಲಿಸಿಕೊಂಡು ಬಂದರು. ಇದರ ಸಾರ ರಂಜಿತ್ ಎಲ್ಲರನ್ನೂ ಪ್ರೀತಿಸಿದರು. ಆದ ಕಾರಣ ಯಶಸ್ಸು ಕಲೆಗಳು ಅವರನ್ನು ಕೂಡಿಕೊಂಡವು ಎಂದು ಭಾವಪೂರ್ಣವಾಗಿ ನುಡಿದು ಮೆಚ್ಚುಗೆ ಹೇಳಿದುದರ ಜೊತೆಗೇ ರಂಜಿತ್ ದಂಪತಿಗಳನ್ನು ನಾವೆಲ್ಲ ಸಂಮಾನಿಸಲೇ ಬೇಕು. ಕಾರಣ ಅವರು ಇತರರನ್ನು ಸಂಮಾನಿಸುತ್ತ ತಾನು ತನಗಾಗಿ ವೇದಿಕೆ ಮೇಲೆ ಒಂದು ಆಸನವನ್ನೂ ಇಟ್ಟುಕೊಂಡಿಲ್ಲ ಎಂದರು. ರಂಜಿತ್ ದಂಪತಿಗೆ ಸಭಾಸದರ ಸನ್ಮಾನಿತರ ಪ್ರಶಸ್ತಿ ವಿಭೂಷಿತರ ಪರವಾಗಿ ಆತ್ಮೀಯವಾಗಿ ಸಂಮಾನಿಸಿದರು. ಅದೇ ರೀತಿ ತನ್ನ ಅಮೂಲ್ಯ ಸಮಯವನ್ನು ನೀಡಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರವೀಣ್ ಭೋಜ ಶೆಟ್ಟಿ ಅವರನ್ನು ಹೃದಯಸ್ಪರ್ಶಿ ರೀತಿಯಲ್ಲಿ ಅಭಿಮಾನ ಪೂರ್ವಕವಾಗಿ ಸಂಮಾನಿಸಲಾಯಿತು.ಪ್ರಚಾರ ಸಮಿತಿ ಸಂಚಾಲಕ ಸಂಕಬೈಲ್ ಮಂಜುನಾಥ ಅಡಪ ಹಾಗೂ ಸ್ವಾಗತ ಸಮಿತಿಯ ಸಂಚಾಲಕ ಚೇಳ್ಯಾರು ಗುತ್ತು ದಿವಾಕರ ಸಾಮಾನಿ ಹಾಗೂ ವಿಶೇಷ ಸಹಕಾರ ನೀಡಿದ ರಮೇಶ್ ಶೆಟ್ಟಿ ಸಿದ್ಧಕಟ್ಟೆ ಅವರನ್ನು ಗೌರವಿಸಲಾಯಿತು. ಅವರ ಪರವಾಗಿ ರಮೇಶ್ ಶೆಟ್ಟಿ ಸಿದ್ಧಕಟ್ಟೆ ಮಾತಾಡಿ ಮೆಚ್ಚುಗೆ ಸೂಚಿಸಿದರು. ಕದ್ರಿ ನವನೀತ ಶೆಟ್ಟಿ, ಡಾ.ಪ್ರಿಯಾ ಹರೀಶ್ ಶೆಟ್ಟಿ, ಆರ್ ಜೆ ನಯನಾ ಶೆಟ್ಟಿ ಹಾಗೂ ಯುವ ನಿರೂಪಕ ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಗಲು ಸಹಕರಿಸದ ನಾಲ್ವರು ನಿರೂಪಕರನ್ನು ಗೌರವಿಸಲಾಯಿತು. ದಿವಾಕರ ಸಾಮಾನಿ ಚೇಳ್ಯಾರು ಗುತ್ತು ಅಭಾರ ಮನ್ನಿಸಿದರು. ಮನರಂಜನೆ ಅಂಗವಾಗಿ ಸಂಗೀತಾ ರಸಮಂಜರಿ, ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆ ನೇತೃತ್ವದಲ್ಲಿ ಯಕ್ಷ ಹಾಸ್ಯ ವೈಭವ ಹಾಗೂ ಕಲ್ಜಿಗದ ಮಾಯ್ಕರೆ ಪಂಜುರ್ಲಿ ನಾಟಕ ಪ್ರದರ್ಶಿಸಲ್ಪಟ್ಟು ಕೊನೆಯಲ್ಲಿ ಪ್ರೀತಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಅಂತಾರಾಷ್ಟ್ರೀಯ ವಾರ್ತೆಗಳು

ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ ಅಬುಧಾಬಿ ಅಧ್ಯಕ್ಷರಾಗಿ ಮಿತ್ರಂಪಾಡಿ ಜಯರಾಮ್ ರೈ. ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡ ಸಂಘಟನೆ 2018-19ರಲ್ಲಿ ಉಪಾಧ್ಯಕ್ಷರಾಗಿದ್ದ ಏಕೈಕ ಕನ್ನಡಿಗ.

ಅಬುದಾಬಿ: ಅಬುದಾಬಿಯಲ್ಲಿರುವ ಅನಿವಾಸಿ ಭಾರತೀಯರ ಭವ್ಯ ಸೌಧ ‘ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ (ಐಎಸ್‌ಸಿ) ಕಳೆದ 57 ವರ್ಷಗಳಿಂದ ಕಾರ್ಯೋನ್ಮುಖವಾಗಿರುವ, ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡದಾಗಿರುವ ಸಂಘಟನೆಯಾಗಿದೆ. ಐಎಸ್‌ಸಿಯಲ್ಲಿ ಎರಡು ಸಾವಿರ ಸದಸ್ಯರಿದ್ದು, ಬೃಹತ್ ಉದ್ಯಮಿಗಳು, ವೃತ್ತಿಪರ ಗಣ್ಯರು ಆಡಳಿತ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದೆ. 2018-19ನೇ ಸಾಲಿನಲ್ಲಿ ಮಿತ್ರಂಪಾಡಿ ಜಯರಾಮ್ ರೈ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದ ಅಬುದಾಬಿಯಲ್ಲಿರುವ, ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡ ಸಂಘಟನೆಯಾಗಿರುವ ‘ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ ನ 2024-2025 ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ಮೇ.13ರಂದು ನಡೆದ ಚುನಾವಣೆಯಲ್ಲಿ ಮಿತ್ರಂಪಾಡಿ ಜಯರಾಮ್ ರೈಯವರು ಬಹುಮತಗಳೊಂದಿಗೆ ಜಯಶೀಲರಾಗಿದ್ದಾರೆ. ಅಬುದಾಬಿಯಲ್ಲಿರುವ ಅನಿವಾಸಿ ಭಾರತೀಯರ ಭವ್ಯ ಸೌಧ ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ (ಐಎಸ್‌ಸಿ), ಕಳೆದ 57 ವರ್ಷಗಳಿಂದ ಕಾರ್ಯೋನ್ಮುಖವಾಗಿರುವ ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡದಾಗಿರುವ ಸಂಘಟನೆಯಾಗಿದೆ. ಭಾರತೀಯ ವೈವಿಧ್ಯಮಯ ಕಲೆ ಸಂಸ್ಕೃತಿ, ಕಲಾಪ್ರಕಾರಗಳಿಗೆ ಇಲ್ಲಿ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ. ಈಗಾಗಲೇ ನೂರಾರು ಕಲಾ ಪ್ರತಿಭೆಗಳು ಹೊರಹೊಮ್ಮಿದ್ದು, ವಿಶ್ವದ ವಿವಿಧ ಕಡೆಗಳಿಂದ ಪ್ರೇಕ್ಷಕರು ಆಸೀನರಾಗುವ ಹವಾನಿಯಂತ್ರಿತ ಸಭಾಂಗಣ ಮತ್ತು ಮುನ್ನೂರು ಮಂದಿ ಆಸೀನರಾಗುವ ಎರಡು ಕಿರಿಯ ಸಭಾಂಗಣಗಳನ್ನು ಹೊಂದಿದೆ. ಈಜು ಕೊಳ, ಜಿಮ್ ಒಳಾಂಗಣ ಕ್ರೀಡಾ ವ್ಯವಸ್ಥೆ, ಉಪಹಾರ ಮಂದಿರದ ವ್ಯವಸ್ಥೆ ಇದ್ದು ಎಂಟು ಸಾವಿರ ಮಂದಿ ಸೌಲಭ್ಯ ಪಡೆಯುತ್ತಿದ್ದಾರೆ. ಐಎಸ್‌ಸಿಯಲ್ಲಿ ಎರಡು ಸಾವಿರ ಸದಸ್ಯರಿದ್ದು, ಬೃಹತ್ ಉದ್ಯಮಿಗಳು, ವೃತ್ತಿಪರ ಗಣ್ಯರು ಆಡಳಿತ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿವರ್ಷ ಗಣ್ಯರು ಆಡಳಿತ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದೆ. 2018-19ನೇ ಸಾಲಿನಲ್ಲಿ ಉಪಾಧ್ಯಕ್ಷರಾಗಿ ಬಹುತದಿಂದ ಮಿತ್ರಂಪಾಡಿ ಜಯರಾಮ್ ರೈ ಆಯ್ಕೆಯಾಗಿದ್ದರು. ಅಂದಿನ ದಿನಗಳಲ್ಲಿ ಇವರು ಏಕೈಕ ಕನ್ನಡಿಗರಾಗಿದ್ದು, ತುಳುನಾಡಿಗೆ ಕರ್ನಾಟಕಕ್ಕೆ ಸಂದ ಗೌರವವಾಗಿತ್ತು. ಪುತ್ತೂರಿನ ಕೆದಂಬಾಡಿ ಗ್ರಾಮದ ಪ್ರಗತಿಪರ ಕೃಷಿಕರಾಗಿದ್ದ ದಿ. ಮಿತ್ರಂಪಾಡಿ ಚೆನ್ನಪ್ಪ ರೈ ಮತ್ತು ದಿ.ಡಿಂಬ್ರಿ ಗುತ್ತು ಸರಸ್ವತಿ ರೈಯವರು ಪುತ್ರನಾಗಿರುವ ಜಯರಾಮ ರೈಯವರು ಬೆಂಗಳೂರಿನ ಯುವ ಬಂಟ ಸಮಾಜದ ಅಧ್ಯಕ್ಷರಾಗಿ, ಕನ್ನಡ ಮತ್ತು ತುಳುವೆರೆಂಕುಳು, ಲಯನ್ಸ್ ಕ್ಲಬ್ ಹಾಗೂ ಇನ್ನಿತರ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಮತ್ತು ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1999ರಲ್ಲಿ ಕೊಲ್ಲಿರಾಷ್ಟ್ರ ಅರಬ್ ಸಂಯುಕ್ತ ಸಂಸ್ಥಾನದ ಅಬುದಾಬಿಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ರೈಯವರು ಬಿನ್ ಫರ್ದಾನ್ ಗ್ರೂಫ್‌ನ ಫೈನಾನ್ಸ್ ಮ್ಯಾನೇಜರ್ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಲ್ಲಿ ರೈಯವರ ಕೊಡುಗೆ ಅಪಾರವಾಗಿದ್ದು ಅಭಿನಂದಿಸಲ್ಪಟ್ಟು ಸಿ.ಎಫ್.ಒ. ಆಗಿ ಎತ್ತರದ ಸ್ಥಾನ ಲಭಿಸಿದ್ದು, ಪ್ರಸ್ತುತ ಗೌರವದ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಿದ್ದು ತಮ್ಮ ಬಿಡುವಿನ ಸಮಯವನ್ನು ಸಮಾಜಸೇವೆಗಾಗಿ ಮೀಸಲಾಗಿಟ್ಟಿದ್ದಾರೆ. ಇಂಡಿಯ ಸೋಶಿಯಲ್ ಸೆಂಟರ್ ಟೋಸ್ಟ್ ಮಾಸ್ಟರ್ ಇಂಟರ್ ನ್ಯಾಷನಲ್ ಅಬುದಾಬಿ ಇದರ ಸ್ಥಾಪಕ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿರುವ ಇವರು ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್‌ನ ಸೆಂಟರ್‌ನ ಗೌರವಾನ್ವಿತ ಲೆಕ್ಕ ಪರಿಶೋಧಕರಾಗಿ, ಚೀಫ್ ಪೋಲಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿ ಜನಪ್ರಿಯತೆ ಪಡೆದಿದ್ದಾರೆ. ಇದರ ಫಲವಾಗಿ ಅತ್ಯಧಿಕ ಬಹುಮತದಿಂದ 2018-19ನೇ ಸಾಲಿನ ಉಪಾಧ್ಯಕ್ಷರಾಗಿ ಜಯಗಳಿಸಿ ಮತ್ತು ಅಧಿಕಾರದ ಅವಧಿಯಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ಸಾಂಸ್ಕೃತಿಕ ಬಾಂಧವ್ಯವನ್ನು ಉತ್ತುಂಗಕ್ಕೆ ಏರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಯು.ಎ.ಇ. ಯಲ್ಲಿ ಅನಿವಾಸಿ ಭಾರತೀಯ ಸಂಘಟನೆಗಳು ಭಾರತೀಯ ಸಂಸ್ಕೃತಿ ಆಚಾರ ವಿಚಾರಗಳನ್ನು ಗಲ್ಫ್ ನಾಡಿನಲ್ಲಿ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ. ಇದೇ ರೀತಿಯಲ್ಲಿ ಕರ್ನಾಟಕ ಪರ ಸಂಘಟನೆಗಳು ಕನ್ನಡ, ತುಳು, ಕೊಂಕಣಿ, ಬ್ಯಾರಿ ಮತ್ತು ಕೊಡವ ಭಾಷಾ ಚಟುವಟಿಕೆಗಳನ್ನು ನಡೆಸಿಕೊಂಡು ಕಾರ್ಯೋನ್ಮುಖವಾಗಿವೆ. ಇಂತಹ ಸಂಘಟನೆಗಳಿಗೆ ರೈಯವರು ಸದಾ ಬೆಂಬಲ, ಪ್ರೋತ್ಸಾಹ ಮತ್ತು ಪ್ರಾಯೋಜಕತ್ವ ನೀಡುತ್ತಾ ಬರುತ್ತಿದ್ದಾರೆ. ರೈಯವರು ಉತ್ತಮ ರಂಗ ಕಲಾವಿದರೂ ಆಗಿದ್ದು ಯು.ಎ.ಇ.ಯಲ್ಲಿ ನಡೆಯುವ ಕನ್ನಡ ಮತ್ತು ತುಳು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಐತಿಹಾಸಿಕ ಸಾಮಾಜಿಕ ನಾಟಕಗಳಲ್ಲಿ ಮುಖ್ಯವಾಗಿ ದೇವ ಪೂಂಜ ಮತ್ತು ಸಂಗೊಳ್ಳಿ ರಾಯಣ್ಣ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಇವರು ರಚಿಸಿ ನಿರ್ದೇಶಿಸಿ, ನಟಿಸಿರುವ ಮಂತ್ರಿಮಂಡಲ ಮತ್ತು ಅಪ್ಪೆನ ತ್ಯಾಗ ನಾಟಕಗಳನ್ನು ವೀಕ್ಷಿಸಿರುವ ಯು.ಎ.ಇ.ಯ ಹಿರಿಯ ಉದ್ಯಮಿ ಡಾ| ಬಿ.ಆರ್. ಶೆಟ್ಟಿಯವರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ದುಬಾಯಿಯಲ್ಲಿ ನಡೆದ ಯು.ಎ.ಇ. ಬಂಟ್ಸ್ ಸ್ನೇಹ ಮಿಲನ, ತುಳುಕೂಟ, ಕರ್ನಾಟಕ ಸಂಘ ಮತ್ತು ಬದಿಯಡ್ಕದಲ್ಲಿ ನಡೆದ ವಿಶ್ವಸಮ್ಮೇಳನದ ವೇದಿಕೆಗಳಲ್ಲಿ ಜಯರಾಮ ರೈಯವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಯು.ಎ.ಇ.ಯಲ್ಲಿ ನಡೆಯುವ ಸ್ನೇಹ ಮಿಲನ, ವಿಹಾರ ಕೂಟ, ಕ್ರೀಡಾ ಕೂಟ, ಪೂಜಾ ಸಮಾರಂಭ, ಸಾಹಿತ್ಯ ಸಮ್ಮೇಳನಗಳಿಗೆ ಸಹಾಯ ಹಸ್ತ ನೀಡುವುದರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಸಮಾರಂಭಗಳ ಯಶಸ್ಸಿನಲ್ಲಿ ಇವರು ಭಾಗಿಯಾಗಿರುತ್ತಾರೆ. ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಸ್ಥಾಪನೆಯಾಗಿರುವ ಯಕ್ಷ ದ್ರುವ ಪಟ್ಲ ಪೌಂಢೇಶನ್ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಹುಟ್ಟೂರಿನಲ್ಲಿಯೂ ವಿದ್ಯಾಸಂಸ್ಥೆಗಳಿಗೆ, ದೇವಸ್ಥಾನಗಳಿಗೆ ದೇಣಿಗೆ, ಬಡ ವಿದ್ಯಾರ್ಥಿಗಳು ಮತ್ತು ನೊಂದವರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. 2022 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಇಂಟರ್‌ನ್ಯಾಷನಲ್ ಐಕಾನಿಕ್ ಪ್ರಶಸ್ತಿ, ಗಡಿನಾಡ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ಗ್ಲೋಬಲ್ ಮೆನ್ ಅವಾರ್ಡ್ ಸಹಿತ ಹಲವು ಪ್ರಶಸ್ತಿ, ಸನ್ಮಾನಗಳನ್ನು ಮುಡಿಗೇರಿಸಿಕೊಂಡಿರುವ ಜಯರಾ ರೈಯವರು ಡಿಸ್ಟಿಂಗ್ವಿಶ್ ಟೋಸ್ಟ್ ಮಾಸ್ಟರ್ ಮತ್ತು ಟ್ರಿಪಲ್ ಕ್ರೌನ್ ಅವಾರ್ಡ್ ಪುರಸ್ಕೃತರೂ ಆvದ್ದಾರೆ. ಪತ್ನಿ ಶ್ರೀಮತಿ ಆಶಾ ಜೆ.ರೈ, ಪುತ್ರ ತಾರಾನಾಥ ರೈ ಮತ್ತು ಪುತ್ರಿ ಪ್ರಾಂಜಲ ರೈಯವರೊಂದಿಗೆ ಜಯರಾಮ ರೈಯವರು ಸುಖೀ ಸಂಸಾರಿಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ರೆಡ್‌ಕ್ರಾಸ್‌ನಿಂದ ಪ್ರತಿ ವರ್ಷ 6 ಸಾವಿರ ಯುನಿಟ್ ಉಚಿತ ರಕ್ತದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾಹಿತಿ

ಮಂಗಳೂರು : ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಶಾಖೆ 5 ದಶಕಗಳಿಂದ ಜಿಲ್ಲೆಯಲ್ಲಿ ವಿವಿಧ ಮಾನವೀಯ ಸೇವೆಗಳಿಂದ ದೇಶದಲ್ಲೇ ಒಂದು ಉತ್ತಮ ಶಾಖೆ ಆಗಿ ಹೊರಹೊಮ್ಮಿದೆ. ಕಳೆದ 7 ವರ್ಷಗಳಲ್ಲಿ ಕರ್ನಾಟಕ ರಾಜ್ಯಪಾಲರಿಂದ ಗೌರವ ಪ್ರಶಸ್ತಿ, ರಾಜ್ಯದಅತೀ ಉತ್ತಮ ಶಾಖೆ ಪ್ರಶಸ್ತಿ, ಅತ್ಯುತ್ತಮ ರಕ್ತನಿಧಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ಪಡೆದಿದೆ ಎಂದು ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಪ್ರಸ್ತುತ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್‌ನಿಂದ ಅವಶ್ಯ ಇರುವ ನವಜಾತ ಶಿಶುಗಳ ತಾಯಂದಿರಿಗೆ ಪ್ರತಿ ವರ್ಷ ಸುಮಾರು 6000 ಯುನಿಟ್ ರಕ್ತ ಉಚಿತವಾಗಿ ಪೂರೈಸುತ್ತಿದೆ. ಯಾವುದೇ ಶುಲ್ಕ ನೀಡುವ ಅವಶ್ಯಕತೆ ಇಲ್ಲ. ಪರ್ಯಾಯ ರಕ್ತ ಕೂಡಾ ನೀಡಬೇಕಾಗಿಲ್ಲ ಎಂದರು.ಲೇಡಿಗೋಷನ್ ಆಸ್ಪತ್ರೆಯಲ್ಲಿ ಪ್ರತಿ ದಿನ ಜನಿಸುವ 20ರಿಂದ 25 ನವಜಾತ ಶಿಶುಗಳ ತಾಯಂದಿರಿಗೆ ರಕ್ತ ಪೂರೈಸುತ್ತಿದ್ದು, ಮಾಸಿಕ ಸುಮಾರು 500 ಯುನಿಟ್ ರಕ್ತ ಉಚಿತವಾಗಿ ಪೂರೈಸುತ್ತಿದ್ದೇವೆ. ಇದಕ್ಕಾಗಿ ರೆಡ್‌ಕ್ರಾಸ್ ಸಂಸ್ಥೆ ಪ್ರತಿ ತಿಂಗಳು ಸುಮಾರು 4 ಲಕ್ಷ ರೂ. ವಿನಿಯೋಗಿಸುತ್ತಿದೆ. ಪ್ರಸ್ತುತ ಲೇಡಿಗೋಶನ್‌ಆಸ್ಪತ್ರೆಗೆ ದಾಖಲಾದವರಿಗೆ ಉಚಿತ ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಶೇ.50 ರಿಯಾಯಿತಿ ದರದಲ್ಲಿ ರಕ್ತ ಪೂರೈಸಲಾಗುತ್ತಿದೆ. ಭವಿಷ್ಯದಲ್ಲಿ ಮಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ದಾಖಲಾದ ಬಿಪಿಎಲ್ ಕಾರ್ಡ್ ಹೊಂದಿದ ರೋಗಿಗಳಿಗೆ ಅವಶ್ಯವಿದ್ದರೆ ಉಚಿತವಾಗಿ ರಕ್ತ ಪೂರೈಸಲಿದ್ದೇವೆ ಎಂದರು.ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ರಕ್ತನಿಧಿ ನಿರ್ವಹಣೆಯಲ್ಲಿ 2022-23ನೇ ಸಾಲಿನಲ್ಲಿ ರಾಜ್ಯದ ಅತ್ಯುತ್ತಮ ಘಟಕ ಪ್ರಶಸ್ತಿ ಗಳಿಸಿದೆ. ಸ್ವಯಂ ಸೇವಾ ಸಂಸ್ಥೆಗಳು, ಯುವಕ ಸಂಘಟನೆಗಳು, ಕಾಲೇಜುಗಳ ಎನ್‌ಎಸ್‌ಎಸ್, ಎನ್‌ಸಿಸಿ, ಯೂತ್ ರೆಡ್‌ಕ್ರಾಸ್ ಘಟಕಗಳ ಸಹಯೋಗದಲ್ಲಿ ನಿರಂತರ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತದ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಅವಶ್ಯ ಇರುವವರಿಗೆ ರೆಡ್‌ಕ್ರಾಸ್ ಸಂಸ್ಥೆಯಿಂದ ವ್ಹೀಲ್ ಚೇರ್, ವಾಟರ್ ಬೆಡ್ ಸಹಿತ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸಂರಕ್ಷಣೆ ಸಂಬಂಧಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ.ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಶಾಶ್ವತವಾದ ಸಹಾಯವಾಣಿ ಮತ್ತು ಸಮುದಾಯ ವಾಚನಾಲಯ ತೆರೆದಿದ್ದು, ಪ್ರತಿ ದಿನ 15 ರಿಂದ 20 ಯುವ ರೆಡ್‌ಕ್ರಾಸ್ ವಿದ್ಯಾರ್ಥಿಗಳು ರೋಗಿಗಳಿಗೆ ಮತ್ತು ರೋಗಿಗಳ ಸಂಬಂಧಿಕರಿಗೆ ಸಹಾಯ ಮಾಡುತ್ತಿರುವುದು ದೇಶದಲ್ಲೇ ಯುವ ರೆಡ್‌ಕ್ರಾಸ್‌ನ ಮಾದರಿ ಕಾರ್ಯವಾಗಿದೆ ಎಂದು ಅವರು ತಿಳಿಸಿದರು.ಶತಮಾನೋತ್ಸವ ಕಟ್ಟಡಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಶತಮಾನೋತ್ಸವ ಹಿನ್ನೆಲೆಯಲ್ಲಿ ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಶಾಖೆ ವತಿಯಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಶತಮಾನೋತ್ಸವ ಕಟ್ಟಡ ನಿರ್ಮಾಣವಾಗುತ್ತಿದ್ದು, ಮುಂದಿನ 6 ತಿಂಗಳ ಒಳಗೆ ಲೋಕಾರ್ಪಣೆ ಯಾಗಲಿದೆ. 16,000 ಚದರ ಅಡಿಯ 3 ಅಂತಸ್ತಿನ ಈ ಕಟ್ಟಡ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಶತಮಾನೋತ್ಸದ ಕಟ್ಟಡದ ನಿರ್ಮಾಣಕ್ಕೆ ಹಲವು ಸಂಸ್ಥೆಗಳು ಮತ್ತು ದಾನಿಗಳು ನೆರವಾಗಿದ್ದಾರೆ. ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಶಾಖೆಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇತ್ತೀಚೆಗೆ ಶತಮಾನೋತ್ಸವ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಎಂದು ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದರು.ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಖಜಾಂಚಿ ಮೋಹನ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ವಿಠಲ, ಗುರುದತ್ ಕಾಮತ್, ಡಾ. ಸುಮನ ಬೋಳಾರ್, ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು.

Scroll to Top