Author name: editor

ಪ್ರಾದೇಶಿಕ ವಾರ್ತೆಗಳು

ಭಾನುಪ್ರಕಾಶ್ ಅವರ ಆದರ್ಶ ಕಾರ್ಯಕರ್ತರಿಗೆ ದಾರಿದೀಪವಾಗಿದೆ : ನಳಿನ್ ಕುಮಾರ್ ಕಟೀಲು.

ಮಂಗಳೂರು : ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎಂ.ಬಿ. ಭಾನುಪ್ರಕಾಶ್ ಅವರು ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲ ಕಾಯಕರ್ತರ ಪ್ರೀತಿಗೆ ಪಾತ್ರರಾದವರು. ವಿಧಾನ ಪರಿಷತ್‌ನ ಸದಸ್ಯರಾಗಿಯೂ ಜನತೆಗೆ ಸೇವೆ ನೀಡಿದ ಹಿರಿಯ ನಾಯಕ. ಪಕ್ಷದ ಎಲ್ಲ ಸ್ತರದ ನಾಯಕರಿಗೆ ಅವರು ಮಾರ್ಗದರ್ಶಕವಾಗಿದ್ದರು. ಅವರ ಅಗಲುವಿಕೆಯಿಂದ ಓರ್ವ ಅನುಭವಿ ನಾಯಕ ಹಾಗೂ ಮಾರ್ಗದರ್ಶಕನನ್ನು ಕಳಕೊಂಡಿದ್ದೇವೆ. ಭಾನುಪ್ರಕಾಶ್ ಅವರ ಆದರ್ಶಗಳು ಬಿಜೆಪಿ ಕಾರ್ಯಕರ್ತರಿಗೆ ಸದಾ ದಾರಿದೀಪವಾಗಿದೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಎಂ.ಬಿ.ಭಾನುಪ್ರಕಾಶ್ ಅವರ ನಿಧನಕ್ಕೆ ವಿಜಯೇಂದ್ರ ಸಂತಾಪ.

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ (68 ವರ್ಷ)ಅವರ ನಿಧನ ಅತ್ಯಂತ ದುಃಖಕರ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.ನಮ್ಮೆಲ್ಲ ಹಿರಿಯರು, ಮಾರ್ಗದರ್ಶಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು, ವಿಧಾನಪರಿಷತ್ ಮಾಜಿ ಸದಸ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾತ್ರವಲ್ಲದೆ, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಹಾಗೂ ಕರಾವಳಿ ಕರ್ನಾಟಕದ ಲೋಕಸಭಾ ಕ್ಲಸ್ಟರ್ ಪ್ರಮುಖರಾಗಿ ಅವರು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡಿದವರು ಎಂದು ತಿಳಿಸಿದ್ದಾರೆ.ಅವರ ಕುಟುಂಬಸ್ಥರು ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆಂದು ಬಿಜೆಪಿ ಕರ್ನಾಟಕದ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆಯವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ.

ಮಂಗಳೂರು :ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರ ಬದುಕಿಗೆ ಬರೆ ಎಳೆದಿರುವುದನ್ನು ಖಂಡಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಪ್ರತಿಭಟನೆ ನಡೆಯಿತು. ಈ ಸಭೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಮೇಯರ್ ಸುಧೀರ್ ಶೆಟ್ಟಿ,ಮಾಜಿ ಮೇಯರ್ ಗಳಾದ ಜಯಾನಂದ ಅಂಚನ್, ಕವಿತಾ ಸನಿಲ್, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಜಗದೀಶ್ ಶೇಣವ, ಸಂಜಯ್ ಪ್ರಭು, ಮತ್ತಿತರರು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ವಾಹನ ಜಾಥಾ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಮಂಗಳೂರು : ಲೋಕಸಭಾ ಕ್ಲಸ್ಟರ್ ಸಂಚಾಲಕರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಬಿಜೆಪಿ ನಾಯಕರಾದ ಭಾನುಪ್ರಕಾಶ್ ಅವರು ನಿಧನರಾಗಿದ್ದಾರೆ.ಈ ಕಾರಣಕ್ಕೆ ಇಂದು ನಡೆಯಬೇಕಾಗಿದ್ದ ವಾಹನ ಜಾಥಾ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏಕಾಏಕಿ ಹೆಚ್ಚಳ ಮಾಡಿದ ಕಾಂಗ್ರೆಸ್ ಸರಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ.

ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏಕಾಏಕಿ ಶೇ.4ರಷ್ಟು ಹೆಚ್ಚಿಸುವ ಮೂಲಕ ತನ್ನ ಜನವಿರೋಧಿ ನೀತಿಯನ್ನು ಮತ್ತೆ ಪ್ರದರ್ಶಿಸಿದೆ. ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಮತ್ತು ಸಚಿವರುಗಳ ನಡೆಸಿದಭ್ರಷ್ಟಾಚಾರದಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು ಈಗ ತೆರಿಗೆ ಹೆಚ್ಳಳ ಮಾಡುವ ಮೂಲಕ ಜನತೆಗೆ ಶಾಕ್ ನೀಡಿದೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ವಿದ್ಯುತ್ ದರ, ಮುದ್ರಾಂಕ ಶುಲ್ಕ ಸಹಿತ ಎಲ್ಲ ರೀತಿಯ ಶುಲ್ಕಗಳನ್ನು ಏರಿಸಿ ಜನರಿಗೆ ಅನ್ಯಾಯ ಮಾಡಿದೆ. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿರುವುದರಿಂದ ಸಾಗಾಟ ವೆಚ್ಚ ಹೆಚ್ಚಳವಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ರಾಜ್ಯದ ಜನತೆ ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಇನ್ನೊಂದೆಡೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಜನತೆ ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ರಾಜ್ಯಕ್ಕೆ ಉಳಿಗಾಲವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಳಿನ್‌ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಧಿಕಾರವಿರಲಿ, ಇಲ್ಲದಿರಲಿ ನಳಿನ್‌ಕುಮಾರ್ ಕಟೀಲು ಅವರು ನಿಜವಾದ ಜನನಾಯಕ.

ಜನಾಭಿಪ್ರಾಯ ವರದಿ: ಡಾ.ಅಶೋಕ್ ಶೆಟ್ಟಿ ಬಿ.ಎನ್.ಮಂಗಳೂರು: ಅಧಿಕಾರವಿರಲಿ. ಇಲ್ಲದಿರಲಿ, ನಳಿನ್‌ಕುಮಾರ್ ಕಟೀಲು ಅವರೇ ನಿಜವಾದ ಜನನಾಯಕ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಮೊನ್ನೆ ಬೋಳಿಯಾರ್ ಪ್ರಕರಣದಲ್ಲಿ ಆಸ್ಪತ್ರೆಗೆ ಸೇರಿದ ಬಿಜೆಪಿ ಕಾರ‍್ಯಕರ್ತರನ್ನು ಕಟೀಲು ಅವರು ಭೇಟಿಯಾಗಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿ ಅವರೊಬ್ಬ ನಿಜವಾದ ಜನನಾಯಕ ಎಂಬುವುದನ್ನು ಜನ ಎಲ್ಲೆಡೆ ಅವರನ್ನು ಶ್ಲಾಘಿಸುವಂತೆ ಮಾಡಿದೆ.ಮೂರು ಬಾರಿ ದಕ್ಷಿಣ ಕನ್ನಡದ ಎಂಪಿಯಾಗಿ 2 ಲಕ್ಷಕ್ಕೂ ಅಧಿಕ ಕೋಟಿ ರೂಪಾಯಿ ಅನುದಾನವನ್ನು ತಂದಿದ್ದ ನಿಷ್ಕಳಂಕ ನಾಯಕ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಅತೀ ಹೆಚ್ಚು ಬಾರಿ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ತಳಮಟ್ಟದಲ್ಲೇ ಕಟ್ಟಿ ಬಲಿಷ್ಠವಾಗಿಸಿದ್ದರು. ಕಟೀಲು ಅವರ ವರ್ಚಸ್ಸನ್ನು ಸಹಿಸಲಾಗದೆ ಹೊಟ್ಟೆ ಉರಿ ನಂಜು ಮತ್ಸರದಿಂದ ಅಪಪ್ರಚಾರ ನಡೆಸಿದ ಕೈಲಾಗದ ಮಂದಿ ಕಟೀಲು ಅವರಿಗೆ ನಾಲ್ಕನೇ ಬಾರಿಗೆ ಎಂಪಿ ಟಿಕೇಟು ಸಿಗದಿದ್ದಾಗ ಸಂತೋಷದಿಂದ ಹಿಗ್ಗಿ ಹೋಗಿದ್ದರು.ಇದರ ಜೊತೆಗೆ, ಯಡಿಯೂರಪ್ಪನವರು ಕಟೀಲ್‌ ಅವರಿಗೆ ಟಿಕೇಟ್ ಸಿಗದಂತೆ ಮಾಡಿ ಕಟೀಲ್‌ರವರ ಬೆಳವಣಿಗೆಯನ್ನು ಚಿವುಟಲು ನೋಡಿದ್ದರು. ಆದರೆ, ಕಟೀಲು ಅವರು ಎಲ್ಲವನ್ನು ಸಹಿಸಿಕೊಂಡರು. ಯಾರ ಮೇಲೂ ಕೋಪಗೊಳ್ಳದೆ ಜಾಣ ನಡೆ ಅನುಸರಿಸಿದರು.ಪ್ರಸ್ತುತ,ಕಟೀಲು ಅವರು ಮಾಜಿ ಸಂಸದ.ಆದರೆ,ಅವರ ಬಳಿ ಬರುವ ಜನ ಸಾಗರ ಕಡಿಮೆಯಾಗಲಿಲ್ಲ.ಕಟೀಲು ಅವರಿಗೆ ಲಕ್ಷ ಲಕ್ಷ ಅಭಿಮಾನಿಗಳಿದ್ದು,ಕಟೀಲು ಅವರು ಅಧಿಕಾರವಿರಲಿ, ಇಲ್ಲದಿರಲಿ ನಿಜವಾದ ಜನನಾಯಕ ಎಂಬ ಜನಾಭಿಪ್ರಾಯಗಳು Mp mla’s ನ್ಯೂಸ್‌ಗೆ ವ್ಯಕ್ತವಾಗಿವೆ. ಚಿತ್ರಗಳು :ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ರಾಜ್ಯದ ಎರಡನೇ ಕೇಂದ್ರ ನಗರವಾಗಿ ಮಂಗಳೂರು ಅಭಿವೃದ್ಧಿಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಆಶಯ

ಮಂಗಳೂರು : ಕರ್ನಾಟಕದಲ್ಲಿ ಬೆಂಗಳೂರು ಬಳಿಕ ಮಂಗಳೂರು ನಗರವನ್ನು ಎರಡನೆ ರಾಜ್ಯದ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ವಿಪುಲ ಅವಕಾಶವಿದೆ. ಮಂಗಳೂರನ್ನು ಮಿನಿ ದುಬೈಯಂತೆ ಅಭಿವೃದ್ಧಿ ಮಾಡಬಹುದು. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ತಿಳಿಸಿದರು.ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ‘ ಬಂದರು,ವಿಮಾನ ನಿಲ್ದಾಣ, ರೈಲು, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸೌಲಭ್ಯ ಹೊಂದಿರುವ ಮಂಗಳೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ. ಇಲ್ಲಿನ ಸಮುದ್ರಕ್ಕೆ, ನದಿಗಳಿಗೆ ನಗರದ ಕಸ , ತ್ಯಾಜ್ಯ ನೀರು ಸೇರಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಂಗಳೂರು ಅಭಿವೃದ್ಧಿ ಬಗ್ಗೆ ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಮುಖ್ಯ ಮಂತ್ರಿಯಾಗಿದ್ದಾಗ ಸರ್ಕಾರಕ್ಕೆ ಸಮಗ್ರ ವರದಿ ನೀಡಿದ್ದೆ ಎಂದರು.ನಾನು ಹುಟ್ಟಿ ಬೆಳೆದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವುದು ನನ್ನ ಗುರಿಯಾಗಿತ್ತು. ದುಡಿಮೆಯಉಳಿತಾಯದಲ್ಲಿ ಬಡಜನರಿಗೆ,ಸಮಾಜಕ್ಕೆ ಒಂದು ಪಾಲು ಮೀಸಲಿಡಲು ತೀರ್ಮಾನಿಸಿದ್ದೆ. ಮದುವೆಯ ಸಂದರ್ಭದಲ್ಲಿಯೂ ಈ ಬಗ್ಗೆ ಪ್ರಮಾಣ ಸ್ವೀಕರಿಸಿದ್ದೆ, ನನ್ನ ಪತ್ನಿಯೂ ಇದಕ್ಕೆ ಸಮ್ಮತಿಸಿದ್ದಳು. ಕೊಲ್ಲಿ ರಾಷ್ಟ್ರದಲ್ಲಿ ವೃತ್ತಿ ಬದುಕು ಮತ್ತು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಬಳಿಕ ಸಮಾಜಮುಖಿ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಅದೇ ನನ್ನ ಬದುಕಿನ ಸಾಧನೆ ಎಂದರು.ನನ್ನ ಸಾಮಾಜಿಕ ಚಟುವಟಿಕೆಗೆ ಜಾತಿ,ಧರ್ಮ ಎಂದೂ ಅಡ್ಡಿಯಾಗಿಲ್ಲ . ರಾಜ್ಯದ ಕೆಲವು ಹಳ್ಳಿಗಳಿಗೆ ಕುಡಿಯುವ ನೀರು,ರಸ್ತೆ ನಿರ್ಮಾಣ ದೇವಸ್ಥಾನ ನಿರ್ಮಾಣ ಮಾಡಿ ಜನರಿಗೆ ಸೇವೆ ನೀಡಲು ಸಾಧ್ಯವಾಗಿದೆ . ಕಠಿಣ ಪರಿಶ್ರಮ ಮತ್ತು ಸಾಮಾಜಿಕ ಸೇವಾ ಮನೋಭಾವದಿಂದ ನಮ್ಮ ಯುವಕರು ಬದುಕಿನಲ್ಲಿ ಯಶಸ್ಸು ಸಾಧಿಸ ಬಹುದು ಎಂದು ಅವರು ಹೇಳಿದರು.ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾೃನಿ ಆಳ್ವಾರಿಸ್, ಜೀನ್ ಕೊಲಾಸೊ , ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ , ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ವಾಲ್ಟರ್ ನಂದಳಿಕೆ, ಡೆನಿಸ್ ಡಿಸಿಲ್ವ, ಶ್ರೀನಿವಾಸ ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಷ್ಮಿತಾ ಕೋಟ್ಯಾನ್ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್.ವಂದಿಸಿದರು. ಆರ್.ಸಿ. ಭಟ್ ಕಾರ್ಯ ಕ್ರಮ ನಿರೂಪಿಸಿದರು.

ಅಂತಾರಾಷ್ಟ್ರೀಯ ವಾರ್ತೆಗಳು

ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಅನಿವಾಸಿ ಭಾರತೀಯರ ಸಂಘಟನೆ ಅಬುಧಾಬಿಯಲ್ಲಿರುವ ಪ್ರತಿಷ್ಠಿತ ಇಂಡಿಯಾ ಸೋಷಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್‌ನ ಅಧ್ಯಕ್ಷರಾಗಿ ಮಿತ್ರಂಪಾಡಿ ಜಯರಾಮ ರೈಯವರು ಅಧಿಕಾರ ಸ್ವೀಕಾರ.

ಅಬುಧಾಬಿ: ಪ್ರತಿಷ್ಠಿತ ‘ಆರ್ಯಭಟ ಇಂಟರ್‌ನ್ಯಾಷನಲ್ ಅವಾರ್ಡ್-2024’ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮಿತ್ರಂಪಾಡಿ ಜಯರಾಮ ರೈಯವರು ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿರುವ ಅನಿವಾಸಿ ಭಾರತೀಯರ ಭವ್ಯ ಸೌಧ ಇಂಡಿಯಾ ಸೋಷಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡ ಸಂಘಟನೆಯಾಗಿದ್ದು, ಇದರ 2024-25ನೇ ಸಾಲಿನ ಅಧ್ಯಕ್ಷರಾಗಿ ಮೇ.13ರಂದು ನಡೆದ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗಿದ್ದರು . ಅವರು ಜೂನ್ 8 ರಂದು ಅಧಿಕಾರ ಸ್ವೀಕಾರ. ರಂದು ಅಧಿಕಾರ ಸ್ವೀಕರಿಸಿದ್ದಾರೆ. ಪ್ರಸ್ತುತ ಅಬುಧಾಬಿಯಲ್ಲಿರುವ ಬಿನ್ ಫರ್ದನ್ ಸಂಸ್ಥೆಯ ಸಿಎಫ್‌ಓ ಆಗಿ ಯಶಸ್ವಿ ಉದ್ಯಮಿಯಾಗಿರುವ ಮಿತ್ರಂಪಾಡಿ ಜಯರಾಮ ರೈಯವರು ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ದಿ. ಮಿತ್ರಂಪಾಡಿ ಚೆನ್ನಪ್ಪ ರೈ ಮತ್ತು ಡಿಂಬ್ರಿಗುತ್ತು ಸರಸ್ವತಿ ರೈ ಅವರ ಪುತ್ರ. ಧಾರ್ಮಿಕ ಹಾಗೂ ಸಮಾಜಸೇವೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಇವರು ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿಯನ್ನು ಮೂಡಿಸಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹಾಗೂ ಅವರನ್ನೂ ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ನಡೆಸಲ್ಪಡುವ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷ ವಾಕ್ಯದಲ್ಲಿ 22 ಗ್ರಾಮ ಪಂಚಾಯತ್ ವ್ಯಾಪ್ತಿಯ 32 ಗ್ರಾಮಗಳಲ್ಲಿ ಪ್ರತಿ ತಿಂಗಳು ನಡೆಯುವ ಸಾಹಿತ್ಯ ಸಂಭ್ರಮದ ಕಾರ್ಯಕ್ರಮದ ಮಹಾಪೋಷಕರಾಗಿದ್ದಾರೆ. ಈ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ‘ಕನ್ನಡದಲ್ಲೂ ಐಎಎಸ್ ಬರೆಯಿರಿ’ ಅಭಿಯಾನ, ಕವಿಗೋಷ್ಠಿ ಕಥಾಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉಪನ್ಯಾಸ, ಸಾಧಕರಿಗೆ ಸನ್ಮಾನ ನಡೆಯುತ್ತಿದ್ದು, ಈಗಾಗಲೇ ಸುಮಾರು 5 ಸಾವಿರ ಪುಟಾಣಿ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಗೌರವ ಹಾಗೂ 50 ಸಾವಿರಕ್ಕೂ ಅಧಿಕ ಪ್ರೇಕ್ಷಕ ವರ್ಗ ವೀಕ್ಷಿಸಿ, ಆನಂದಿಸಿದ ಗೌರವ ಇವರಿಗೂ ಸಲ್ಲುತ್ತದೆ. ಕಳೆದ 25 ವರ್ಷಗಳಿಂದ ಅರಬ್ ರಾಷ್ಟ್ರದಲ್ಲೂ ಕನ್ನಡ ಸೇವೆ ಹಾಗೂ ಕನ್ನಡಿಗರ ಸೇವೆ ಮಾಡುತ್ತಿರುವ ಇವರು ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟಿನಲ್ಲಿ ಅನೇಕ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನ, ವಿಶ್ವ ತುಳು ಸಮ್ಮೇಳನ, ಕವಿ ಸಮ್ಮೇಳನ, ನಾಟಕ ಯಕ್ಷಗಾನ, ಸಂಗೀತ ರಸಮಂಜರಿ, ಇನ್ನಿತರ ಸಾಮಾಜಿಕ ಚಟುವಟಿಕೆಗಳಿಗೆ ನಿರಂತರ ಬೆಂಬಲ, ಪ್ರೋತ್ಸಾಹ ನೀಡುತ್ತಿದ್ದಾರೆ. ಜಯರಾಮ ರೈಯವರು ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಇದೀಗ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು ಇಂಡಿಯಾ ಸೋಷಿಯಲ್ ಸೆಂಟರ್ ಟೋಸ್ಟ್ ಮಾಸ್ಟರ್ ಇಂಟಕ್ ನ್ಯಾಷನಲ್ ಅಬಧಾಬಿ ಇದರ ಸ್ಥಾಪಕಾಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಿಜೆಪಿ ಯುವ ಮೋರ್ಚಾ ನಾಯಕರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು “ಸತ್ಯ ಧರ್ಮಕ್ಕೆ ಸಂದ ಜಯ” – ಹರೀಶ್ ಪೂಂಜ

ಬೆಳ್ತಂಗಡಿ:ಜೂ.13: ರಾಜಕೀಯ ಪ್ರೇರಿತವಾಗಿ ಬಿಜೆಪಿ ಯುವ ಮೋರ್ಚಾ ನಾಯಕರಾದ ಶಶಿರಾಜ್ ಶೆಟ್ಟಿಮತ್ತು ಪ್ರಮೋದ್ ಮೇಲೆ ತಾಲೂಕು ಆಡಳಿತ ವ್ಯವಸ್ಥೆ ದಾಖಲಿಸಿದ್ದ ಸುಳ್ಳು ಪ್ರಕರಣಕ್ಕೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುವುದು ಸತ್ಯ ಧರ್ಮಕ್ಕೆ ಸಂದ ಜಯವೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.ರಾಜಕೀಯವಾಗಿ ಮುಂಚೂಣಿಗೆ ಬರುತ್ತಿರುವ ಉದಯೋನ್ಮಖ ನಾಯಕರ ಮನೋಸ್ಥೈರ್ಯವನ್ನು ಕುಗ್ಗಿಸುವ ದುರುದ್ದೇಶದಿಂದ ಕಾಂಗ್ರೆಸ್ ದ್ವೇಷ ರಾಜಕೀಯ ಪ್ರೇರಿತ ಬಂಧನದಿಂದ ಯಾರೂ ವಿಚಲಿತರಾಗುವ ಅಗತ್ಯವಿಲ್ಲ. ರಾತ್ರಿ ಕಳೆದ ಮೇಲೆ ಬೆಳಕು ಹರಿಯುವಂತೆ ಒಂದಲ್ಲ ಒಂದು ದಿನ ನ್ಯಾಯ ದೊರಕಲೇಬೇಕು. ಬಿಜೆಪಿ ಇಂತಹ ಕುಕೃತ್ಯಗಳಿಗೆ ಧೃತಿಗೆಡದೆ ಸತ್ಯ ಧರ್ಮದ ಹಾದಿಯಲ್ಲೇ ಕಾನೂನು ಪ್ರಕಾರ ಇಂತಹ ಸುಳ್ಳು ಪ್ರಕರಣಗಳ ಆಪಾದನೆಯನ್ನು ಮೆಟ್ಟಿನಿಂತು ಹೊರ ಬರಲಿದೆಯೆಂಬ ವಿಶ್ವಾಸವನ್ನು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

“ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ” -ಗಣೇಶ್ ರಾವ್ *ಬಹುನಿರೀಕ್ಷಿತ “ತುಡರ್” ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ.

ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಯಿತು. ನಗರದ ಭಾರತ್ ಸಿನೆಮಾಸ್ ನಲ್ಲಿ ಜರುಗಿದ ಸಮಾರಂಭದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.ಬಳಿಕ ಮಾತಾಡಿದ ಕರಾವಳಿ ಗ್ರೂಪ್ ಆಫ್ ಎಜುಕೇಷನ್ ಸಂಸ್ಥೆಯ ಚೇರ್ ಮೆನ್ ಗಣೇಶ್ ರಾವ್ ಅವರು, “ತುಡರ್ ಅಂದರೆ ಕನ್ನಡದಲ್ಲಿ ಬೆಳಕು ಅಂತ ಅರ್ಥ. ಒಂದು ಬೆಳಕಿನಿಂದ ಎಷ್ಟೋ ದೀಪಗಳನ್ನು ಬೆಳಗಿಸಬಹುದು. ಅದೇ ರೀತಿ ಬಿಡುಗಡೆಯಾಗಿರುವ ತುಳು ಸಿನಿಮಾ ತುಳು ತುಡರ್ ಚಿತ್ರರಂಗದಲ್ಲಿ ಹೊಸ ಬೆಳಕಾಗಿ ಮೂಡಿಬರಲಿ. ಸಿನಿಮಾ ತಂಡವನ್ನು ನೋಡಿದರೆ ಖಂಡಿತ ಈ ಸಿನಿಮಾ ಗೆಲ್ಲುವ ವಿಶ್ವಾಸವಿದೆ. ಸಮಾಜಕ್ಕೆ ಮನೋರಂಜನೆಯ ಜೊತೆಗೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಲಿ. ಚಿತ್ರತಂಡದಿಂದ ಇನ್ನಷ್ಟು ಸದಭಿರುಚಿಯ ಸಿನಿಮಾಗಳು ಬರಲಿ. ಸಂಸ್ಕೃತಿಗೆ ಪೂರಕವಾದ ಜಾತಿ ಧರ್ಮ ದ್ವೇಷವನ್ನು ಪಸರಿಸದೆ ಜನರನ್ನು ಒಂದುಮಾಡುವ ಸಿನಿಮಾಗಳು ಬರಲಿ” ಎಂದು ಶುಭ ಹಾರೈಸಿದರು.ಬಳಿಕ ಮಾತಾಡಿದ ಅರವಿಂದ್ ಬೋಳಾರ್, “ತುಳು ಸಿನಿಮಾ ಬಿಡುಗಡೆ ಎಂದರೆ ಭಯವಾಗುತ್ತದೆ. ಯಾಕೆಂದರೆ ಸಿನಿಮಾ ಎಷ್ಟು ದಿನ ನಡೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ತುಡರ್ ಸಿನಿಮಾ ವೀಕ್ಷಿಸಿದವರು ಚಿತ್ರತಂಡವನ್ನು ಮೆಚ್ಚಿ ಬೆನ್ನುತಟ್ಟಿದ್ದಾರೆ. ಹೀಗಾಗಿ ನಮಗೆ ಧೈರ್ಯ ಬಂದಿದೆ. ಈ ಸಿನಿಮಾ ಗೆಲ್ಲಲು ತುಳುವರು ಥಿಯೇಟರ್ ಗೆ ಬಂದು ಸಿನಿಮಾ ನೋಡಬೇಕು” ಎಂದರು.ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, “ಸಿನಿಮಾ ಕುರಿತು ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ಗೆಲ್ಲಲು ತುಳುವರ ಆಶೀರ್ವಾದ ಅಗತ್ಯ” ಎಂದರು.ವಾಲ್ಟರ್ ನಂದಳಿಕೆ ಮಾತಾಡಿ, “ಸಿನಿಮಾ ನೋಡಿದವರು ಬಹಳ ಸಮಯದ ಬಳಿಕ ಒಳ್ಳೆಯ ಸಿನಿಮಾ ನೋಡಿದ್ದಾಗಿ ಹೇಳುತ್ತಿದ್ದಾರೆ. ಸಿನಿಮಾ ಖಂಡಿತ ಗೆಲ್ಲಲಿದೆ” ಎಂದರು. ವೇದಿಕೆಯಲ್ಲಿ ಭಾರತ್ ಸಿನೆಮಾಸ್ ನ ಬಾಲಕೃಷ್ಣ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಮನೋಹರ್ ಶೆಟ್ಟಿ, ಉದಯ ಪೂಜಾರಿ ಬಲ್ಲಾಳ್ ಬಾಗ್, ಉಮೇಶ್ ರೈ ಪದವು ಮೇಗಿನ‌ಮನೆ, ಸ್ವರಾಜ್ ಶೆಟ್ಟಿ, ನಟ ಸಿದ್ದಾರ್ಥ್ ಶೆಟ್ಟಿ, ನಟಿ ದೀಕ್ಷಾ ಭಿಸೆ, ರೂಪ ವರ್ಕಾಡಿ, ನಿರ್ದೇಶಕ ತೇಜೇಶ್ ಪೂಜಾರಿ, ಪ್ರಕಾಶ್ ಮಹಾದೇವನ್, ವಿಲ್ಸನ್ ರೆಬೆಲ್ಲೋ, ವಿದ್ಯಾ, ಸಂಪತ್, ಹರೀಶ್ ಶೆಟ್ಟಿ, ವಿಕಾಸ್ ಪುತ್ರನ್, ಮೋಹನ್ ರಾಜ್, ಹಂಚಿಕೆದಾರ ಸಚಿನ್ ಎಸ್. ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು. ಚಿರಾಗ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.ತುಡರ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು.ಈಗಾಗಲೇ ತುಡರ್ ಸಿನಿಮಾ ವಿದೇಶ ಸಹಿತ ಮಂಗಳೂರು, ಉಡುಪಿ, ಪುತ್ತೂರು, ಸುರತ್ಕಲ್, ಪಡುಬಿದ್ರೆಯಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಪ್ರೇಕ್ಷಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಉತ್ತಮ ಚಿತ್ರಕತೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ. ನಾಯಕ ನಟ ಸಿದ್ದಾಥ್೯ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ‌.

Scroll to Top