Author name: editor

ಹೊರ ರಾಜ್ಯ ವಾರ್ತೆಗಳು

ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ಎಕ್ಸೆಲೆನ್ಸ್ ಅವಾರ್ಡ್.

ಪುಣೆ : ಸುಪ್ರಸಿದ್ದ ಮಕ್ಕಳ ತಜ್ಞ ಡಾ.ಸುಧಾಕಾರ್ ಶೆಟ್ಟಿಯವರು ಪುಣೆಯಲ್ಲಿ ಕಳೆದ 30 ವರ್ಷಗಳಿಂದ ಬೇಬಿ ಫ್ರೆಂಡ್ ವೆಂಬ ಸುಸಜ್ಜಿತವಾದ ಮಕ್ಕಳ ವೈದ್ಯಕೀಯ ಕ್ಲಿನಿಕ್ ಮೂಲಕ ಸಾವಿರಾರು ಮಕ್ಕಳ ಚಿಕಿತ್ಸೆ ಮಾಡಿದ್ದಲ್ಲದೆ, ಸಹಸ್ರ ಸಹಸ್ರ ವೈದ್ಯಕೀಯ ಕ್ಯಾಂಪ್ ಗಳ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿ ವೈದ್ಯಕೀಯ ಸಮಾಜ ಸೇವೆಯಲ್ಲಿ ಮೇರು ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ, ಪುಣೆ ಪೊಲೀಸ್ ಹಾಸ್ಪಿಟಲ್, ಸ್ಟೇಟ್ ರಿಸರ್ವ್ ಪೊಲೀಸ್ ಫೋರ್ಸ್ ಹಾಸ್ಪಿಟಲ್, ರೆಡ್ ಕ್ರಾಸ್ ಸೊಸೈಟಿ ಮತ್ತು ಭಾರತೀಯ ವಿದ್ಯಾ ಪೀಠ ವಿಶ್ವ ವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಹೆಸರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ನಿಸ್ವಾರ್ಥ ಸೇವಾ ಮನೋಭಾವದ ಕಠಿಣ ಪರಿಶ್ರಮಿ ಸರಳ ಸಜ್ಜನ ವೈದ್ಯರಾಗಿರುವ ಇವರು ಮೂಡಬಿದ್ರೆಯಲ್ಲಿಯೂ ಸಂಚಾರಿ ಮಕ್ಕಳ ಕ್ಲಿನಿಕ್ ನ್ನು ಆರಂಭಿಸಿದ್ದು, ಇವರ ವೈದ್ಯಕೀಯ ಸಮಾಜ ಸೇವೆಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ದೊರಕಿವೆ. ಡಾ. ಸುಧಾಕರ್ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಸಿಕ್ಕಿದೆ. ಪುಣೆ ಕಂಟೋನೂಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ, 2022 ರಲ್ಲಿ ಕರ್ನಾಟಕ ಸರಕಾರದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪ್ರತಿಷ್ಠಿತ ಚಾರ್ ಸಹಿಬಜಾದೆ ಅವಾರ್ಡ್, ಹೊರನಾಡ ಕನ್ನಡ ರತ್ನ ಪ್ರಶಸ್ತಿ, ಇದೀಗ ರೋಟರಿ ಕ್ಲಬ್ ಪುಣೆಯಿಂದ ಪ್ರತಿಷ್ಠಿತ ಎಕ್ಸೆಲೆನ್ಸ್ ಅವಾರ್ಡ್ ದೊರಕಿದೆ. Mp mla’s news ಪತ್ರಿಕೆ ಮತ್ತು Mpmlasnewstv 24×7 ನ್ಯೂಸ್ ಪೋರ್ಟಲ್ ಇವರಿಗೆ ಅಕ್ಟೋಬರ್ 13 ರಂದು ಸಂಜೆ 4 ಗಂಟೆಗೆ ಮಂಗಳೂರು ಟೌನ್ ಹಾಲ್ ನಲ್ಲಿ ನಡೆಯುವ 13 ನೇ ಸೌಹಾರ್ದ ಸಂಗಮದಲ್ಲಿ ಸಮಾಜರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲು ನಿರ್ಧರಿಸಿದೆ.

ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ಚಲನ ಚಿತ್ರಗಳಿಗೆ ಸಬ್ಸಿಡಿ ಮತ್ತು ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಮುಖ್ಯಮಂತ್ರಿಗೆ ಮನವಿ

ಮಂಗಳೂರು: ಪ್ರಾದೇಶಿಕ ಚಲನ ಚಿತ್ರಗಳಿಗೆ ಸರಕಾರದಿಂದ ಸಬ್ಸಿಡಿ ನೀಡವಂತೆ ತುಳು ಚಲನ ಚಿತ್ರ ನಿರ್ಮಾಪಕರ ಸಂಘ (ರಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್ ಅವರು ಬೆಂಗಳೂರಿನಲ್ಲಿ ಮುಖ್ಯಂಮತ್ರಿಯವರಿಗೆ ಮನವಿ ನೀಡಿದ್ದಾರೆ.ಕರ್ನಾಟಕದಲ್ಲಿ ವರ್ಷಂಪ್ರತಿ ಸುಮಾರು 15 ರಿಂದ 20 ತುಳು ಸಿನಿಮಾಗಳು ತೆರೆ ಕಾಣುತ್ತಿದೆ. ಪ್ರಾದೇಶಿಕ ಭಾಷೆಗಳ ಅಭಿಮಾನದಿಂದ ನಿರ್ಮಾಪಕರು ಚಲನ ಚಿತ್ರ ನಿರ್ಮಿಸುತ್ತಾರೆ. ಯಾವು ಪರಭಾಷೆಗೆ ಕಡಿಮೆ ಇಲ್ಲದಂತೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸಿನಿಮಾ ನಿರ್ಮಿಸುತ್ತಾರೆ. ಮೂರ್ನಾಲ್ಕು ಸಿನಿಮಾಗಳಿಗೆ ಮಾತ್ರ ಸಬ್ಸಿಡಿ ನೀಡುವ ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ಕನಿಷ್ಠ ಹದಿನೈದು ಸಿನಿಮಾಗಳಿಗೆ ಸಬ್ಸಿಡಿ ನೀಡುವಂತೆ ಮನವಿ ನೀಡಿದರು. ನಿರ್ಮಾಪಕರ ಸಂಘಕ್ಕೆ ಕಟ್ಟಡ ನಿರ್ಮಿಸಲು ಜಾಗ ಮಂಜೂರಿಗೆ ಮನವಿಇದೇ ವೇಳೆ ಮಂಗಳೂರಿನಲ್ಲಿ ತುಳು ಚಲನ ಚಿತ್ರ ನಿರ್ಮಾಪಕರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಜಮೀನು ಮಂಜೂರು ಮಾಡುವಂತೆ ಅಧ್ಯಕ್ಷ ಆರ್ ಧನರಾಜ್ ಮನವಿ ಮಾಡಿದರು.ಸದ್ರಿ ಮಂಗಳೂರು ಹೋಬಳಿಯ ಕೊಡಿಯಾಲ್ ಬೈಲ್ ಎ ಗ್ರಾಮದ ಸರ್ವೆ ನಂಬ್ರ 1554 – 2 ಬಿ ಯಲ್ಲಿ ಖಾಲಿ ಜಮೀನು ಸರಕಾರದ ವಶದಲ್ಲಿದ್ದು, ಆ ಜಮೀನಿನಲ್ಲಿ ಐದು ಸೆಂಟ್ಸ್ ಜಾಗವನ್ನು ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿಮಿಸಲು ಜಾಗ ಮಂಜೂರು ಮಾಡಲು ಜಿಲ್ಲಾಧಿಕಾರಿಯವರಿಗೆ ಆದೇಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಯಿತು.ತುಳು ಚಲನ ಚಿತ್ರ ನಿರ್ಮಾಪಕರ ಸಂಘ ನೀಡಿದ ಮನವಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಪ್ರಾದೇಶಿಕ ವಾರ್ತೆಗಳು

ಐಪಿಎಸ್ ಅಧಿಕಾರಿಗಳ ವರ್ಗಾವಣೆ. ದಕ್ಷಿಣಕನ್ನಡ ಜಿಲ್ಲಾ ಎಸ್ ಪಿ ಯಾಗಿ ಯತೀಶ್ ಎನ್.

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿಯಾಗಿ ಯತೀಶ್ ಎನ್. ಅವರನ್ನು ನೇಮಕ ಮಾಡಲಾಗಿದೆ . ಈಗಿನ ಎಸ್ಪಿ ಸಿ.ಬಿ.ರಿಷ್ಯಂತ್ ಅವರನ್ನು ಬೆಂಗಳೂರಿನ ವೈರ್‌ಲೆಸ್ ಎಸ್ ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.2016 ರ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಯತೀಶ್ ಎನ್. ಅವರು ಮಂಡ್ಯ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಇನ್ನೂ ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಗುಪ್ತಚರ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಲಾಭು ರಾಮ್ ಅವರನ್ನು ಬೆಂಗಳೂರಿನ ಕೇಂದ್ರ ಶ್ರೇಣಿಯ ಪೊಲೀಸ್ ಮಹಾನಿರೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ.ತ್ಯಾಗರಾಜನ್ ಅವರನ್ನು ವರ್ಗಾವಣೆ ಮಾಡಿ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರೀಕ್ಷಕರಾಗಿ ನಿಯೋಜನೆ ಮಾಡಲಾಗಿದೆ.ಮೈಸೂರು ನಗರ ಪೊಲೀಸ್ ಕಮಿಷನರ್ ಬಿ.ರಮೇಶ್ ಅವರನ್ನು ಉಪ ಪೊಲೀಸ್ ಮಹಾನಿರೀಕ್ಷಕರು, ಪೂರ್ವ ವಲಯ, ದಾವಣಗೆರೆಗೆ ವರ್ಗಾವಣೆ ಮಾಡಲಾಗಿದೆ.ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಮಾಡಿ ಮೈಸೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.ಬೆಂಗಳೂರು ನಗರ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಿ.ಕೆ.ಬಾಬಾ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.ಹೀಗೇ ಐಪಿ ಎಸ್ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಬಗ್ಗೆ ರಾಜ್ಯ ಸರಕಾರ ಆದೇಶ ಹೋರಾಡಿಸಿರುವ ಬಗ್ಗೆ ಬೆಂಗಳೂರು ವರದಿ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

“ಧರ್ಮದೈವ” ತುಳುನಾಡಿನ ಆರಾಧನೆಯ ಭಕ್ತಿ -ನಂಬಿಕೆಯ ಸಿನಿಮಾ: ಯು.ಟಿ ಖಾದರ್. ಪೋಸ್ಟರ್ ಬಿಡುಗಡೆಗೊಳಿಸಿದ ಸ್ಪೀಕರ್

ಮಂಗಳೂರು: ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯಾರಾದ “ಧರ್ಮದೈವ” ಸಿನಿಮಾದ ಪೋಸ್ಟರ್ ನ್ನು ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್ ಅವರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಿದರು.ತುಳುನಾಡಿನ ಆರಾಧನೆ, ಭಕ್ತಿ ಶಕ್ತಿಯನ್ನು ಒಳಗೊಂಡ ದೈವಾರಾಧನೆಯ ಬಗ್ಗೆ ಜನರಿಗೆ ಅಪಾರ ಆಸಕ್ತಿ ನಂಬಿಕೆ ಇದೆ‌. ಕಾಂತಾರ ದ ಬಳಿಕ ದೈವಕ್ಕೆ ಮಹತ್ವ ನೀಡುವ ಮತ್ತು ದೈವದ ಕಾರಣಿಕವನ್ನು ಪ್ರತಿಬಿಂಬಿಸುವ “ಧರ್ಮದೈವ” ಸಿನಿಮಾ ಜುಲೈ 5ರಂದು ತೆರೆ ಕಾಣಲಿದೆ. ತುಳುನಾಡಿನ ಕತೆ, ದೈವದ ಕತೆ, ಇದು ತುಳುವರ ನಂಬಿಕೆಯನ್ನು ಉಳಿಸಿ ಭಕ್ತಿಭಾವದ ಕತೆ. ಇದನ್ನು ಮನೆಮಂದಿ ವೀಕ್ಷಿಸ ಬಹುದಾಗಿದೆ. ಈಗಾಗಲೇ ಸಿನಿಮಾದ ಟೀಸರ್ ನೋಡಿದೆ. ಕಾಂತಾರದ ಬಳಿಕ ದೈವಭಕ್ತಿಯ ಧರ್ಮದೈವ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡವನ್ನು ಪ್ರೋತ್ಸಾಹಿಸಿ ಎಂದು ಯುಟಿ ಖಾದರ್ ತಿಳಿಸಿದರು.ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕ ನಿತಿನ್ ರೈ ಮತ್ತು ನಿರ್ಮಾಪಕ ರಾಕೇಶ್ ಶೆಟ್ಟಿಯವರನ್ನು ಅಭಿನಂದಿಸಿ ಸಿನಿಮಾಕ್ಕೆ ಶುಭಹಾರೈಸಿ, ಬಿಡುವುಮಾಡಿಕೊಂಡು ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ನಾರಾಯಣ ರೈ ಕುಕ್ಕುವಳ್ಳಿ, ಅರುಣ್ ಪುತ್ತೂರು, ಸುಧೀರ್ ಪೂಜಾರಿ ಕಲ್ಲಡ್ಕ, ರವಿ ಸಾಲ್ಯಾನ್, ರಾಧೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮಾಜಿ ಸಚಿವ ಬಿ. ರಮಾನಾಥ ರೈ ಯವರ ಕಳ್ಳಿಗೆ ಮನೆಗೆ ಭೇಟಿ ನೀಡಿ ರಾಜಕೀಯ ಸುವ್ಯವಸ್ಥೆ ಬಗ್ಗೆ ಚರ್ಚಿಸಿದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ.

ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈಯವರ ಬಂಟ್ವಾಳದ ಕಳ್ಳಿಗೆ ಮನೆಗೆ ಭೇಟಿ ನೀಡಿದ ಕರ್ನಾಟಕ ಸರಕಾರದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ರೈಯವರನ್ನು ಸನ್ಮಾನಿಸಿದ್ದಲ್ಲದೆ, ರಾಜಕೀಯ ಸುವ್ಯವಸ್ಥೆ ಬಗ್ಗೆ ಚರ್ಚಿಸಿದರು. ರಾಜ್ಯ ರಾಜಕಾರಣದಲ್ಲಿ ರೈಯವರಿಗೆ ಮಹತ್ವದ ಅಧಿಕಾರ ನೀಡಬೇಕೆಂದು ಒತ್ತಾಯಗಳು ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಈಶ್ವರ್ ಖಂಡ್ರೆಯವರ ಭೇಟಿ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.

ಪ್ರಾದೇಶಿಕ ವಾರ್ತೆಗಳು

ಪತ್ರಿಕಾ ದಿನಾಚರಣೆ ಮತ್ತು ಮೊಗ್ಲಿಂಗ್ ಸ್ಮರಣೆ

ರೆl ಹರ್ಮನ್ ಮೊಗ್ಲಿಂಗ್ 1843 ರ ಜುಲೈ 1 ರಂದು ಪ್ರಕಟಣೆ ಆರಂಭಿಸಿದ ‘ಮಂಗಳೂರ ಸಮಾಚಾರ’ಕ್ಕೆ ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆ. ನಿನ್ನೆ ‘ಮಂಗಳೂರ ಸಮಾಚಾರ’ ಪ್ರಕಟವಾಗುತ್ತಿದ್ದ ನೆಲದಲ್ಲಿ (ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಆವರಣದಲ್ಲಿರುವ ರೆl ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ಅವರ ಪುತ್ಥಳಿಯ ಮುಂದೆ) ಪತ್ರಿಕಾ ದಿನಾಚರಣೆ ಮತ್ತು ಮೊಗ್ಲಿಂಗ್ ಸ್ಮರಣೆ.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್., ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾನಿ ಅಲ್ವಾರಿಸ್, ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾl ಎಚ್.ಎಮ್. ವಾಟ್ಸನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು, ಕಾರ್ಯದರ್ಶಿ ಗಿರಿಧರ್ ಶೆಟ್ಟಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಸ್ಕೇಟಿಂಗ್ ಸಾಧಕರಿಗೆ ಸನ್ಮಾನಶಿಕ್ಷಣದ ಜತೆಗೆ ಕ್ರೀಡೆಗೂ ಆದ್ಯತೆ-ಮುಡಾ ಆಯುಕ್ತೆ ನೂರ್ ಜಹರ ಖಾನಂ ಆಶಯ.

ಮಂಗಳೂರು : ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಣದ ಜತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು. ಮಕ್ಕಳಲ್ಲಿ ಇರುವ ಕ್ರೀಡಾ ಪ್ರತಿಭೆಯನ್ನು ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಿದರೆ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನೂರ್ ಜಹರ ಖಾನಂ ಹೇಳಿದರು.ನಗರದ ಬೆಂದೂರ್‌ನ ಸೆಬಾಸ್ಟಿಯನ್ ಹಾಲ್‌ನಲ್ಲಿ ನಡೆದ ಹೈ ಫ್ಲೈಯರ್ಸ್‌ ಸ್ಕೇಟಿಂಗ್ ಕ್ಲಬ್ ಇದರ ವಾರ್ಷಿಕ ದಿನಾಚರಣೆ ಹಾಗೂ ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ (ಆರ್‌ಎಸ್‌ಎಫ್‌ಐ)ದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದೈಹಿಕ ಶಿಕ್ಷಣ ಶಿಕ್ಷಕ್ಷರ ಸಂಘದ ಜಿಲ್ಲಾಧ್ಯಕ್ಷೆ ಲಿಲ್ಲಿ ಪಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆರ್‌ಎಸ್‌ಎಫ್‌ಐ ರಾಷ್ಟ್ರೀಯ ಮಟ್ಟದಸಾಧಕರಾದ ಶಾಮಿಲ್, ಅರ್ಪಿತಾ, ಡಾಶಿಯಲ್ ,ಮೋಕ್ಷ , ಡೇನಿಯಲ್ ಮತ್ತು ಆರ್‌ಎಸ್‌ಎಫ್‌ಐ ಮಟ್ಟದ ಸಾಧಕರಾದ ಹಿಮಾನಿ, ಕೇಟ್, ತನ್ಮಯ್ ಮತ್ತು ವಿವೇಕ್ ಇವರುಗಳಿಗೆ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ನೀಡಿ ಗೌರವಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಜುಲೈ5ರ ಶುಕ್ರವಾರದಂದು ಪಣೋಲಿಬೈಲ್ ನಲ್ಲಿ ಆಗೇಲು ಸೇವೆ ಮತ್ತು ಕೋಲ ಇರುವುದಿಲ್ಲ

ಪಣೋಲಿಬೈಲು: ಶ್ರೀ ಕಲ್ಲುರ್ಟಿ ದೈವಸ್ಥಾನ,ಪಣೋಲಿಬೈಲ್, ಸಜೀಪಮೂಡ ಬಂಟ್ವಾಳ ತಾಲೂಕು,ದ.ಕ ಇಲ್ಲಿ ದಿನಾಂಕ 5-7-2024ರ ಶುಕ್ರವಾರದಂದು “ಅಮಾವಾಸ್ಯೆ” ಇರುವುದರಿಂದ ಕ್ಷೇತ್ರದಲ್ಲಿ “ಆಗೇಲು ಸೇವೆ” ಮತ್ತು “ಕೋಲ ಸೇವೆ” ಇರುವುದಿಲ್ಲವೆಂದು ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಜು.9ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರು ಅಮೇರಿಕಕ್ಕೆ ಪ್ರಯಾಣ

ಮಂಗಳೂರು: “ಜುಲೈ 9ನೇ ತಾರೀಕು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಲಾವಿದರ ತಂಡ ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದೆ. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) USA ಇದರ ಆಯೋಜನೆಯನ್ನು ಮಾಡುತ್ತಿದೆ. ಅಮೇರಿಕಾ ಸರಕಾರದ ಮಾನ್ಯತೆ ಪಡೆದ ಕಾರಣ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಯುಎಸ್ಎ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ , ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್, ಮುಂತಾದ ಪ್ರಮುಖರು ನಮ್ಮ ಯಕ್ಷಗಾನ ತಂಡದ ಕಾರ್ಯಕ್ರಮಗಳನ್ನು ಅಮೇರಿಕಾದ 20 ರಾಜ್ಯಗಳ ಮುಖ್ಯ ನಗರಗಳಲ್ಲಿ ನಿಶ್ಚಯಿಸಿರುತ್ತಾರೆ” ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.“ತಂಡದಲ್ಲಿ ಹಿಮ್ಮೇಳದ ಕಲಾವಿದರಾಗಿ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಮುಮ್ಮೇಳದಲ್ಲಿ ಪ್ರೊ.ಎಂಎಲ್ ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಹೀಗೆ ಒಂಬತ್ತು ಮಂದಿಯ ತಂಡ ಸುಮಾರು 75 ದಿವಸಗಳ ಕಲಾ ಪ್ರವಾಸ ಕೈಗೊಳ್ಳಲಿದೆ. ಪುತ್ತಿಗೆ ಮಠಗಳು, ಕನ್ನಡ ಕೂಟದವರು, ಯಕ್ಷಗಾನ ಸಂಘದವರು, ದೇವಸ್ಥಾನಗಳು ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ನಮಗೆ ಸಹಕಾರ ನೀಡಲಿದ್ದಾರೆ. ಪೌರಾಣಿಕ ಕಥಾನಕಗಳನ್ನು ಆಯ್ದುಕೊಂಡು ನಾವು ಪ್ರದರ್ಶನ ನೀಡಲಿದ್ದೇವೆ. ಕೆಲವು ಕಡೆ ಕಿರು ತರಬೇತಿ ಶಿಬಿರ ಪ್ರಾತ್ಯಕ್ಷಿಕೆಗಳನ್ನು ಕೂಡಾ ನಡೆಸಲಿದ್ದೇವೆ” ಎಂದರು.“ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ಬಲು ವಿಜೃಂಭಣೆಯ ಅಕ್ಕ ಸಮ್ಮೇಳನದಲ್ಲಿಯೂ ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ ಕಾರ್ಯಕ್ರಮ ನೀಡಲಿದೆ ಎನ್ನುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಅಮೆರಿಕದ ಸ್ಯಾನೋಸೆ, ಸಿಯಾಟಲ್, ಫೀನಿಕ್ಸ್, ಲಾಸ್ ಎಂಜಲೀಸ್, ಆಸ್ಟಿನ್, ಹ್ಯೂಸ್ಟನ್, ಡೆಟ್ರೈಟ್, ಇಜಾಮ್ಸ್ ವಿಲ್ಲೆ, ಮೇರಿಲ್ಯಾಂಡ್, ಟಂಪಾ, ಮಿಲ್ವಾಕಿ, ಶಾರ್ಲೋಟ್, ರಾಲೆ, ಎಡಿಸನ್, ಕೊಲಂಬಸ್, ಬಾಸ್ಟನ್, ಒರ್ಲಾಂಡೊ, ಅಟ್ಲಾಂಟಾ, ಚಿಕಾಗೋ ಡಲ್ಲಾಸ್, ನ್ಯೂಜೆರ್ಸಿ, ರಿಚ್ಮಂಡ್, ಎಡಿಸನ್ ಮುಂತಾದ ಕಡೆ ಪ್ರದರ್ಶನಗೊಂಡು ನಮ್ಮ ಭಾರತೀಯರನ್ನು ರಂಜಿಸಲಿದ್ದೇವೆ” ಎಂದು ಹೇಳಿದರು.ಪ್ರೊ. ಎಂ.ಎಲ್. ಸಾಮಗ ಮಾತನಾಡಿ, “ಕಳೆದ 2023ರ ಜೂನ್ ಜುಲೈ ತಿಂಗಳಲ್ಲಿ ನಮ್ಮ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕರಾದ ವಾಸುದೇವ ಐತಾಳ್ ಪಣಂಬೂರು ಇವರ ನೇತೃತ್ವದಲ್ಲಿ ನಮ್ಮ ತಂಡವು ಯುರೋಪ್ ಖಂಡದ ಲಂಡನ್, ಸ್ಕಾಟ್ಲ್ಯಾಂಡ್, ಜರ್ಮನಿ ,ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಪ್ಯಾರಿಸ್ ಮುಂತಾದ ಕಡೆ ಕಾರ್ಯಕ್ರಮಗಳನ್ನು ನೀಡಿ ವಿದೇಶಿಗರಿಗೂ, ಭಾರತೀಯರಿಗೂ , ಕೆಲವು ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೂ ಯಕ್ಷಗಾನದ ಕಲೆಯನ್ನು ಪರಿಚಯಿಸುವಲ್ಲಿ ಸಫಲವಾಗಿದೆ. ಅಲ್ಲಿನ ಲೀಡ್ಸ್ ಹಾಗೂ ಡರ್ ಹಮ್ ಯುನಿವರ್ಸಿಟಿಗಳಲ್ಲಿ ಯಕ್ಷಗಾನ ತರಬೇತಿ ಶಿಬಿರ ಮತ್ತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ, ಯೋಗ ಮತ್ತೆ ಕ್ರೀಡೆಗಳಲ್ಲೂ ಕಲೆ ಯಾವ ರೀತಿ ನಂಟು ಹೊಂದಿದೆ ಎಂಬುದನ್ನು ತೋರ್ಪಡಿಸಿ ಅಲ್ಲಿಯ ಯುನಿವರ್ಸಿಟಿಗಳ ವಿದ್ಯಾರ್ಥಿಗಳಿಗೆ ಯಕ್ಷಗಾನದ ತರಬೇತಿ ನೀಡಿ ಬೇರೆ ಬೇರೆ ದೇಶದಿಂದ ಬಂದಂತಹ ಆ ವಿದ್ಯಾರ್ಥಿಗಳಿಂದಲೂ ನಮ್ಮ ಕಲೆಯ ಪ್ರದರ್ಶನವನ್ನು ಏರ್ಪಡಿಸಿತ್ತು” ಎಂದರು.ಪತ್ರಿಕಾಗೋಷ್ಠಿಯಲ್ಲಿ , ಪ್ರೊ ಎಂ ಎಲ್ ಸಾಮಗ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

“ಧರ್ಮದೈವ” ತುಳು ಚಲನಚಿತ್ರ ಜುಲೈ 5ರಂದು ತೆರೆಗೆ

ಮಂಗಳೂರು: “ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಧರ್ಮದೈವ ತುಳು ಸಿನಿಮಾ ಜುಲೈ 5 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಪುಣೆ, ಮುಂಬೈನಲ್ಲಿನಡೆದ ಪ್ರೀಮಿಯರ್ ಶೋ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.“ಧರ್ಮ ದೈವ” ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ನಟರಾಜ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ” ಎಂದು ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಳಿಕ ಮಾತಾಡಿದ ರಮೇಶ್ ರೈ ಕುಕ್ಕುವಳ್ಳಿ ಅವರು, “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಸೇರಿದಂತೆ ಅನೇಕ ಸಾನಿಧ್ಯ ಸ್ಥಳಗಳು, ದೈವಾರಾಧನೆ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿವೆ. ಇಂದು ತುಳುನಾಡು, ತುಳು ಭಾಷೆ, ದೇಶ-ವಿದೇಶ ತುಂಬಾ ಮಾನ್ಯತೆ ಪಡೆದಿದೆ.ಸಿನಿಮಾ ಮಾಧ್ಯಮ ಇಂದು ಪರಿಣಾಮಕಾರಿ ಶ್ರೀಮಂತ ಮಾಧ್ಯಮವಾಗಿ ಬೆಳಗುತ್ತಿದೆ.ಈ ನಾಡಿನ ರೈತಾಪಿ ಜನರು ತಮ್ಮ ಬೇಸಾಯ- ಕೃಷಿ,ತೋಟಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ತುಳುನಾಡಿನ ದೈವ- ದೇವರು, ನೇಮ- ಕೋಲ-ತಂಬಿಲ, ನಾಗಾರಾಧನೆ -ದೈವಾರಾಧನೆ. ಮೂಲಕ ಈ ಮಣ್ಣಿನ, ಬದುಕಿನ ಕಥೆಯನ್ನು ಕಟ್ಟಿಕೊಡುವ ತುಳು ಚಲನಚಿತ್ರ “ಧರ್ಮ ದೈವ” ಬೆಳ್ಳಿ ತೆರೆಯಲ್ಲಿ ಮೂಡಿಬರಲು ಸಿದ್ಧವಾಗಿದೆ. ತುಳುವರು ಸಿನಿಮಾ ನೋಡಿ ಕಲಾವಿದರನ್ನು ಬೆಳೆಸಿ” ಎಂದರು. ನಟ ಚೇತನ್ ರೈ ಮಾಣಿ ಮಾತನಾಡಿ, “ಇಂದು ನಮ್ಮ ಯುವ ಜನಾಂಗ ತಮ್ಮ ಹಿರಿಯರು ಬಾಳಿಬೆಳಗಿದ ರೀತಿ- ನೀತಿ, ನಂಬಿಕೆ- ಸಂಸ್ಕೃತಿ, ನಡವಳಿಕೆಗಳಿಗೆ ಪ್ರಾಧಾನ್ಯತೆ ಕೊಟ್ಟು ಚಿತ್ರ-ಕಥೆಗಳನ್ನು ನಿರ್ಮಿಸುವ ಮೂಲಕ ಹಿರಿಯರ, ಸಂಘ- ಸಂಸ್ಥೆಗಳ ಅಭಿಮಾನಕ್ಕೂ ಪಾತ್ರರಾಗಿರುವರು. ಅವಿಭಜಿತ. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ವಿಶೇಷವಾಗಿ ಉಡುಪಿ, ಮಂಗಳೂರು ಮತ್ತು ಪುತ್ತೂರಿನ ಯುವಕರು ತಾವೇ ಸೇರಿಕೊಂಡು “ಧರ್ಮದೈವ ಪ್ರೊಡಕ್ಷನ್ಸ್ ಲಾಂಛನದಲ್ಲಿ” “ಧರ್ಮ ದೈವ”ಎಂಬ ಹೆಸರಿನಲ್ಲಿ ಒಂದು ಪೂರ್ಣ ಚಲನಚಿತ್ರವನ್ನು ನಿರ್ಮಾಣ ಮಾಡಿ ಸೆನ್ಸಾರ್ ಮಂಡಳಿಯಿಂದ ಮಾನ್ಯತೆ ಪಡೆದು ಜುಲೈ 5 ರಂದು ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ. ಯುವ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ, “ಧರ್ಮದೈವ” ತುಳು ಚಲನ ಚಿತ್ರವನ್ನು ಭಕ್ತಿ -ಶಕ್ತಿ ಶ್ರದ್ಧೆಯಿಂದ ನಿರ್ಮಾಣ ಮಾಡಿಕೊಟ್ಟಿರುವರು, ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಕೇರಳ ಗಡಿಭಾಗದಲ್ಲಿರುವ ಕರ್ನುರಿನಲ್ಲಿ ಮತ್ತು ಸುಳ್ಯ, ಪುತ್ತೂರು ತಾಲೂಕಿನ ಸುತ್ತಮುತ್ತ ಸುಮಾರು 25 ದಿನ ನಡೆದಿದೆ” ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ , ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ಅರುಣ್ ರೈ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.ಚಿತ್ರ ಕಥೆ- ಸಂಭಾಷಣೆಯನ್ನು ಹಮೀದ್ ಪುತ್ತೂರು ಬರೆದಿದ್ದಾರೆ. ಅರುಣ್ ರೈ ಪುತ್ತೂರು ಇವರ ಛಾಯಾಗ್ರಹಣ, ಸಂಗೀತ ಮತ್ತು ಹಿನ್ನೆಲೆ ಸಂಗೀತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇವರ ಶಿಷ್ಯ ನಿಶಾನ್ ರೈ ಮಠಂತಬೆಟ್ಟು, ಸಾಹಿತ್ಯ :ಕೆ.ಕೆ ಪೇಜಾವರ್ , ಸುಮಂತ್ ಬೈಲಾಡಿ, ಹಿನ್ನೆಲೆ ಗಾಯನ: ಖ್ಯಾತ ಯಕ್ಷಗಾನ ಭಾಗವತರು ಪಟ್ಲ ಸತೀಶ್ ಶೆಟ್ಟಿ, ಕು.ಸಮನ್ವಿ ಆರ್.ರೈ ನುಳಿಯಾಲು, ಚಿತ್ರ ಸಂಕಲನ: ರಾಧೇಶ್ ರೈ ಮೊಡಪ್ಪಾಡಿ ಮತ್ತು ಶ್ರೀನಾಥ್ ಪವಾರ್,ಸಹ ಸಂಕಲನ: ಚರಣ್ ಆಚಾರ್ಯ, ಶೀರ್ಷಿಕೆ ವಿನ್ಯಾಸ: ನಿತಿನ್ ಕಾನಾವು, ವಸ್ತ್ರ ವಿನ್ಯಾಸ: ಸಾತ್ವಿಕಾ ನಿತಿನ್ ರೈ ಕುಂಜಾಡಿ, ಮನೋಜ್ ಕುಮಾರ್, ಸ್ಥಿರಚಿತ್ರ: ಅಭಿಪೂಜಾರ್, ಪ್ರಣವ್ ಭಟ್, ಧ್ವನಿ ಸಂಕಲನ:ಚಿದಾನಂದ ಕಡಬ. ಟಿ.ಟಿ.ಎಸ್ :ಲಾಯ್ ವೇಲೆಂಟೈನ್, ಪ್ರಸಾಧನ: ಕಿಶೋರ್ ಉಪ್ಪಿನಂಗಡಿ, ನಿರ್ಮಾಣದಲ್ಲಿ ಸುಧೀರ್ ಕುಮಾರ್ ಕಲ್ಲಡ್ಕ ಮತ್ತು ರಾಕೇಶ್ ಶೆಟ್ಟಿ ಜಿ ಅವರ ಸಹಕಾರವು ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ದೈವದ ನಂಬಿಕೆ- ಇರುವಿಕೆಯನ್ನು ಮಾತ್ರ ಸಾದರ ಪಡಿಸಲಾಗಿದೆ. ನವರಸ ಭರಿತವಾಗಿರುವ “ಧರ್ಮದೈವ” ತುಳು ಚಲನ ಚಿತ್ರದ ತಾರಾಗಣದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ರೂಪಶ್ರೀ ವರ್ಕಾಡಿ, ದಯಾನಂದ ರೈ ಬೆಟ್ಟಂಪಾಡಿ, ಭರತ್ ಶೆಟ್ಟಿ, ರವಿ ಸಾಲ್ಯಾನ್ (ಸ್ನೇಹಿತ್), ಸಂದೀಪ್ ಪೂಜಾರಿ, ಪುಷ್ಪರಾಜ್ ಬೊಳ್ಳರ್ ,ರಂಜನ್ ಬೋಳಾರ್, ಕೌಶಿಕ್ ರೈ ಕುಂಜಾಡಿ,ದೀಕ್ಷಾ ಡಿ.ರೈ, ಹಾಗೂ ಗ್ರೇಷಿಯಲ್ ಕಲಿಯಂಡ ಕೊಡಗು ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಗಳು : ಸತೀಶ್ ಕಾಪಿಕಾಡ್

Scroll to Top