Author name: editor

ಪ್ರಾದೇಶಿಕ ವಾರ್ತೆಗಳು

“ಬೇಗನೆ ಗುರುತಿಸುವಿಕೆ, ಸೂಕ್ತ ಚಿಕಿತ್ಸೆಯಿಂದ ಕ್ಯಾನ್ಸರ್ ಹಿಮ್ಮೆಟ್ಟಿಸಲು ಸಾಧ್ಯ“-ಡಾ. ಶಾಂತಾರಾಮ್ ಶೆಟ್ಟಿ

ಮಂಗಳೂರು: ತಪಸ್ಯ ಫೌಂಡೇಶನ್, ಎಲ್ ಸಿಐಎಫ್, ಲಯನ್ಸ್ ಇಂಟರ್ ನ್ಯಾಷನಲ್ ಮತ್ತು ಕಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಬಾಲ್ಯದ ಕ್ಯಾನ್ಸರ್ ಆರೈಕೆ ಕಾರ್ಯಕ್ರಮ “ಶೌರ್ಯ” ಇದರ ಉದ್ಘಾಟನಾ ಸಮಾರಂಭ ಗುರುವಾರ ಬೆಳಗ್ಗೆ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ತಪಸ್ಯ ಫೌಂಡೇಶನ್ ಸ್ಥಾಪಕರಾದ ಸಬಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಮಾತಾಡಿದ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ. ಅವರು, “ಮಕ್ಕಳಿಗೆ ಕ್ಯಾನ್ಸರ್ ಬಂದಾಗ ಅವರ ಇಡೀ ಕುಟುಂಬ ಅದರಲ್ಲಿ ಬಲಿಪಶು ಆಗುತ್ತದೆ. ಮಕ್ಕಳ ಕ್ಯಾನ್ಸರ್ ಆರೈಕೆಯನ್ನು ಮಾಡುತ್ತಿರುವ ತಪಸ್ಯ ಫೌಂಡೇಶನ್ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದೆ. ಲಯನ್ಸ್ ಸಂಸ್ಥೆ ಮನೆಮನೆಗೆ ಹೋಗಿ ಕ್ಯಾನ್ಸರ್ ರೋಗಿಗಳನ್ನು ಗುರುತಿಸಿ ಅವರಿಗೆ ಔಷಧಿ ಸಹಿತ ಆರ್ಥಿಕ ಸಹಾಯವನ್ನು ಮಾಡುವಲ್ಲಿ ತಪಸ್ಯ ಫೌಂಡೇಶನ್ ನೆರವನ್ನು ನೀಡುತ್ತಿದೆ. ಕ್ಯಾನ್ಸರ್ ಯಾವ ಪ್ರಾಯದಲ್ಲಿ ಬೇಕಾದರೂ ಬರಬಹುದು ಅದು ಗಂಭೀರ ಸ್ಥಿತಿ ತಲುಪಿದಾಗ ಮಾತ್ರ ಜನರು ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಬಾಲ್ಯದಲ್ಲೇ ಕ್ಯಾನ್ಸರ್ ಅನ್ನು ಗುರುತಿಸಿಕೊಂಡು ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಿ ಜೀವನಸಾಗಿಸಬಹುದು. ತಪಸ್ಯ ಫೌಂಡೇಶನ್ ಮೂಲಕ ಸಬಿತಾ ಶೆಟ್ಟಿಯವರು ಇನ್ನು ಮುಂದೆಯೂ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಂಡು ಕ್ಯಾನ್ಸರ್ ಪೀಡಿತರಿಗೆ ನೆರವಾಗಲಿ“ ಎಂದರು.ಬಳಿಕ ಮಾತಾಡಿದ ನಿಟ್ಟೆ ಯೂನಿವರ್ಸಿಟಿ ಉಪಕುಲಪತಿ ಡಾ. ಶಾಂತಾರಾಮ್ ಶೆಟ್ಟಿ ಅವರು, ”ಕ್ಯಾನ್ಸರ್ ಬಂದಾಗ ದೇವಸ್ಥಾನ, ಮಸೀದಿ, ಚರ್ಚ್ ಗೆ ಹೋಗಿ ಪ್ರಾರ್ಥನೆ ಮಾಡಿದರೆ ಪ್ರಯೋಜನವಿಲ್ಲ ಯಾಕೆಂದರೆ ವೈಜ್ಞಾನಿಕವಾಗಿ ಕ್ಯಾನ್ಸರ್ ರೋಗವನ್ನು ಸರಿಯಾದ ಚಿಕಿತ್ಸೆಯಿಂದಷ್ಟೇ ಹಿಮ್ಮೆಟ್ಟಿಸಬಹುದು ಎನ್ನುವುದು ದೃಢ ಪಟ್ಟಿದೆ. ಸರಿಯಾದ ಚಿಕಿತ್ಸೆ, ಸೂಕ್ತ ಸ್ಥಳ ಮತ್ತು ಆರೈಕೆಯಿಂದ ಕ್ಯಾನ್ಸರ್ ಗುಣಪಡಿಸಲು ಸಾಧ್ಯ“ ಎಂದರು.”ಕ್ಯಾನ್ಸರ್ ಚಿಕಿತ್ಸೆ ಇಂದು ದುಬಾರಿಯಾಗಿದೆ. ಈ ಕಾರಣಕ್ಕೆ ಬಡ ಅಥವಾ ಮಧ್ಯಮ ಕುಟುಂಬಗಳು ಚಿಕಿತ್ಸೆಯಿಂದ ದೂರ ಉಳಿಯುತ್ತವೆ. ಕ್ಯಾನ್ಸರ್ ಪೀಡಿತ ಮಕ್ಕಳು ಇಂದು ಗುಣಮುಖರಾಗಿ ಜೀವನದಲ್ಲಿ ಸಾಧನೆ ಮಾಡುತ್ತ ನಮ್ಮೆದುರು ಇದ್ದಾರೆ. ನಾವು ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಸಬಿತಾ ಶೆಟ್ಟಿಯವರಿಂದಾಗಿ ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದೇವೆ. ಕ್ಯಾನ್ಸರ್ ಅನ್ನುವ ಶಬ್ಧ ಮನೆ ಮಾತ್ರವಲ್ಲದೆ ಇಡೀ ಪರಿಸರದಲ್ಲಿ ನೋವಿನ ವಾತಾವರಣ ಸೃಷ್ಟಿಸುತ್ತೆ. ಕ್ಯಾನ್ಸರ್ ಅನ್ನುವ ಭಯಾನಕ ರೋಗ ಇಂದು ಯಾರನ್ನು ಬೇಕಾದರೂ ಬಾಧಿಸಬಹುದು. ಪ್ರತೀ ಸುರಂಗ ಮಾರ್ಗ ಮುಗಿದ ಬಳಿಕ ಅಲ್ಲೊಂದು ಬೆಳಕು ಕಾಣಿಸುತ್ತದೆ ಅಂತಹ ಕೆಲಸವನ್ನು ತಪಸ್ಯ ಫೌಂಡೇಶನ್ ಮಾಡುತ್ತ ಬಂದಿದೆ“ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಲಯನ್ ವಸಂತ ಶೆಟ್ಟಿ ಮಾತಾಡಿ, ”ಲಯನ್ಸ್ ಸಂಘಟನೆ ಮತ್ತು ದಾನಿಗಳ ನೆರವಿನಿಂದ 1.60 ಕೋಟಿ ರೂ. ವೆಚ್ಚದಲ್ಲಿ ಮುಡಿಪು ಬಳಿ ಮಕ್ಕಳ ಕ್ಯಾನ್ಸರ್ ಕೇರ್ ಸೆಂಟರ್ ಪ್ರಾರಂಭವಾಗಲಿದೆ. ಅದರ ಸಂಪೂರ್ಣ ಕೆಲಸವನ್ನು ತಪಸ್ಯ ಫೌಂಡೇಶನ್ ಮೂಲಕ ಸಬಿತಾ ಮತ್ತವರ ತಂಡ ಮಾಡುತ್ತಿದೆ. ಅದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಕ್ಯಾನ್ಸರ್ ಬೇಗನೆ ಮುಗಿಯುವ ರೋಗವಲ್ಲ ಅದು ತಿಂಗಳು, ವರ್ಷಗಟ್ಟಲೆ ನಮ್ಮನ್ನು ಕಾಡಬಹುದು. ಹೀಗಾಗಿ ಚಿಕಿತ್ಸೆಗೆ ಹಣವಿಲ್ಲದೆ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂಬ ಉದ್ದೇಶದಿಂದ ತಪಸ್ಯ ಈ ಕಾರ್ಯಕ್ಕೆ ಮುಂದಾಗಿದೆ ನಾವೆಲ್ಲರೂ ಅದರ ಜೊತೆ ಕೈಜೋಡಿಸೋಣ“ ಎಂದರು.ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ತಜ್ಞ ಡಾ.ಹರ್ಷ ಪ್ರಸಾದ್ ಎಲ್. ಮಾತನಾಡಿ, “ಕ್ಯಾನ್ಸರ್ ಚಿಕಿತ್ಸೆ ಪಡೆಯದೇ ಇರಲು ಆರ್ಥಿಕ ಸಂಕಷ್ಟ ಒಂದು ಕಾರಣವಾದರೆ ಕ್ಯಾನ್ಸರ್ ಪೀಡಿತರ ಮನೆ ಮತ್ತು ಸಮಾಜದ ತಿರಸ್ಕಾರ ಕೂಡಾ ಇನ್ನೊಂದು ಕಾರಣ. ಕ್ಯಾನ್ಸರ್ ಲಕ್ಷಣಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವುದೇ ರೋಗವನ್ನು ಹಿಮ್ಮೆಟ್ಟಿಸಲು ಇರುವ ಸೂಕ್ತ ಮಾರ್ಗವಾಗಿದೆ” ಎಂದರು.ವೇದಿಕೆಯಲ್ಲಿ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾಗೀರ್ ಸಿದ್ದಿಕಿ, ತಪಸ್ಯ ಟ್ರಸ್ಟಿ ಲಯನ್ ಮೋಹನ್ ಶೆಟ್ಟಿ, ಲಯನ್ ಅನಿಲ್, ಲಯನ್ ವಿಶ್ವಾಸ್ ರಾವ್, ಲಯನ್ ರಮಾನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸೆ. 7 ರಿಂದ 9 ರ ತನಕ ಬಂಟ್ಸ್ ಹಾಸ್ಟೇಲ್ ಓಂಕಾರ ನಗರದಲ್ಲಿ 18 ನೇ ವರ್ಷದ ಗಣೇಶೋತ್ಸವ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ನಾರೀಕೇಳ ಮಹಾಗಣಾಯಾಗವು ಸೆಪ್ಟೆಂಬರ್ ತಿಂಗಳ ತಾರೀಕು 7ರಿಂದ ಸೆಪ್ಟೆಂಬರ್ ತಿಂಗಳ ತಾರೀಕು 9ರವರೆಗೆ ಮಂಗಳೂರಿನ ‘ಓಂಕಾರ ನಗರ’, ಬಂಟ್ಸ್ ಹಾಸ್ಟೆಲ್ ಇಲ್ಲಿ ಜರಗಲಿದೆ ಎಂದು ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಡಾ ಆಶಾಜ್ಯೋತಿ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ದಿನಾಂಕ 06.09.2024ರ ಶುಕ್ರವಾರ ಶರವು ದೇವಸ್ಥಾನದ ಬಳಿಯಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಶ್ರೀ ರಾಮದಾಸ್ ಆಚಾರರವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೇಟ್ನ ‘ಓಂಕಾರ ನಗರ’ಕ್ಕೆ ಬರಮಾಡಿಕೊಳ್ಳುವುದು.ದಿನಾಂಕ 07.09.2024ರ ಬೆಳಿಗ್ಗೆ ಶನಿವಾರ 8.00 ಗಂಟೆಗೆ ಧ್ವಜರೋಹಣಾ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ತೆನೆ ವಿತರಣಾ ಕಾರ್ಯಕ್ರಮ ಜರಗುವುದು. ಸಂಜೆ ಗಂಟೆ 5.00ರಿಂದ 7.00 ರವರೆಗೆ ಭಾರ್ಮಿಕ ಸಭಾ ಕಾರ್ಯಕ್ರಮ ಜರಗಲಿರುವುದು.ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು.ರಾತ್ರಿ ಗಂಟೆ 8.00ರಿಂದ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು.ದಿನಾಂಕ 08.09.2024ರ ಸಂಜೆ ಗಂಟೆ 5.00ರಿಂದ 7.00ರವರೆಗೆ ಧಾರ್ಮಿಕ ಸಭೆ ನಡೆಯುವುದು. ಈ ಸಂದರ್ಭದಲ್ಲೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು. ರಾತ್ರಿ ಗಂಟೆ 8.000ಂದ ಎಸ್.ಡಿ.ಎಂ ಕಲಾವೈಭವ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು ಎಂದು ಸಂಚಾಲಕ ದಿವಾಕರ ಸಾಮಾನಿ ಚೇಳಾರ್ ಗುತ್ತು ತಿಳಿಸಿದರು.ದಿನಾಂಕ 09.09.2024ರ ಸೋಮವಾರದಂದು ಬೆಳಿಗ್ಗೆ ಗಂಟೆ 8.00ರಿಂದ ಲೋಕಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸ್ರನಾರಿಕೇಳ ಮಹಾಗಣಾಯಾಗ ಆರಂಭಗೊಂಡು ಬೆಳಿಗ್ಗೆ ಗಂಟೆ 11.30ಕ್ಕೆ ಪೂರ್ಣಾಹುತಿಗೊಳ್ಳಲಿದೆ. ಮಧ್ಯಾಹ್ನ 3.30ಕ್ಕೆ ಸಮಾಜದ ವಿವಿಧ ಗಣ್ಯರಿಂದ ಶೋಭಾಯಾತ್ರೆಗೆ ಚಾಲನೆ ದೊರೆಯಲಿದ್ದು, ಶೋಭಾಯಾತ್ರೆಯು ‘ಓಂಕಾರ ನಗರ’ದಿಂದ ಶ್ರದ್ಧಾ ಭಕ್ತಿಯಿಂದ ಹೊರಟು ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ಶೋಭಾಯಾತ್ರೆಯು ಬಂಟ್ಸ್ ಹಾಸ್ಟೇಲ್, ಪಿ.ಪಿಎಸ್ ವೃತ್ತ, ನ್ಯೂಚಿತ್ರಾ ಟಾಕೀಸ್, ರಥಬೀದಿ, ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಗುವುದು.ಈ ಮೂರು ದಿನಗಳ ಕಾಲ ವೈದಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಪೂಜೆಗಳು ಜರಗಲಿರುವುದು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಬಂಟ ಸಮಾಜಬಾಂಧವರು ಮತ್ತು ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಗಣೇಶೋತ್ಸವದ ವೇದಿಕೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿರುವುದು.ಪತ್ರಿಕಾಗೋಷ್ಟಿಯಲ್ಲಿ ಡಾ.ಆಶಾಜ್ಯೋತಿ ರೈ, ಟ್ರಸ್ಟಿ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ,, ದಿವಾಕರ ಸಾಮಾನಿ ಚೇಳಾರ್ ಗುತ್ತು ಸಂಚಾಲಕರು, ಶ್ರೀ ಕೃಷ್ಣಪ್ರಸಾದ್ ರೈ, ಟ್ರಸ್ಟಿ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ, ಶ್ರೀ ವಸಂತ ಶೆಟ್ಟಿ, ಸಂಚಾಲಕರು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ, ಶ್ರೀ ಮನೀಶ್ ರೈ, ಸಂಚಾಲಕರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ 5. ಶ್ರೀ ಅಶ್ವಥಾಮ ಹೆಗ್ಡೆ, ಸಂಚಾಲಕರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಸಂತೋಷ್ ಕುಮಾರ್ ಶೆಡ್ಡೆ, ಸಂಚಾಲಕರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು: ಮಂಜುನಾಥ ಭಂಡಾರಿ. ಪಿಲಿಕುಳ ಪುನಶ್ಚೇತನಕ್ಕೆ ಪಿಲಿಕುಳ ಉತ್ಸವ ಆಯೋಜನೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಂತ ನೀರಾಗಿದ್ದು ಜಿಲ್ಲೆಗೆ ಹೊರಗಿನಿಂದ ಬರುವ ಪ್ರವಾಸಿಗರ ಸಂಖ್ಯೆ ತೀರಾ ಇಳಿಮುಖವಾಗಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ಪಿಲಿಕುಳದಲ್ಲಿ ಉತ್ಸವವನ್ನು ಆಯೋಜಿಸುವ ಮೂಲಕ ಪಿಲಿಕುಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ಹೇಳಿದ್ದಾರೆ.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ದ.ಕ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳು ಸೀಮಿತಗೊಂಡಿದ್ದು, ದೇಶದ ಮಹಾನಗರಳಲ್ಲಿ ಇರುವಂತಹ ನೈಟ್ ಲೈಫ್ ಪರಿಕಲ್ಪನೆಯೇ ಇಲ್ಲವಾಗಿದೆ. ಹೀಗಾಗಿ ಇಲ್ಲಿ ಐಟಿ ಬಿಟಿ ಕಂಪನಿಗಳು ಹೂಡಿಕೆಗೆ ಹಿಂದೇಟು ಹಾಕುತ್ತಿವೆ. ಇಲ್ಲಿ ವಿದ್ಯಾರ್ಥಿಗಳು ಪರಸ್ಪರ ಮಾತನಾಡುವುದು, ತಿನ್ನುವ ಆಹಾರ, ಧರಿಸುವ ಬಟ್ಟೆಯ ಮೇಲಿನ ನಿರ್ಬಂಧಗಳು ಹೊರ ರಾಜ್ಯ, ದೇಶಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡಾ ಇಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಣ ಹಬ್ ಆಗಿರುವ ಜಿಲ್ಲೆಯಲ್ಲಿ ಹಿಂದೆಲ್ಲಾ ಹೊರ ರಾಜ್ಯಗಳ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮಂಗಳೂರನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಿಯುಸಿ ಮೇಲಿನ ಹಂತದ ಶಿಕ್ಷಣಕ್ಕೆ ಹೊರ ರಾಜ್ಯಗಳ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದವರು ಹೇಳಿದರು.ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ಮಂದಿ ಶಿಕ್ಷಣ ಪಡೆಯುತ್ತಾರೆ. ಆದರೆ 9 ಗಂಟೆಯ ಬಳಿಕ ಐಸ್‌ಕ್ರೀಂ ಪಾರ್ಲರ್‌ಗಳು ಕೂಡಾ ಇಲ್ಲಿ ಬಾಗಿಲು ಮುಚ್ಚುತ್ತವೆ.ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಪಾನ್ ಸಂಸ್ಥೆಯು ಈಗಾಗಲೇ ಕ್ಯಾಂಪಸ್ ಸೆಲೆಕ್ಷನ್ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಿದ್ದು, ಈ ದಿಸೆಯಲ್ಲಿ ಕಾಲೇಜಿನಲ್ಲಿ ಜಪಾನ್ ಭಾಷಾ ಕಲಿಕೆಯ ಕೋರ್ಸ್ ಕೂಡಾ ಆರಂಭಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಸರಕಾರಿ ಮಟ್ಟದಲ್ಲಿ ನಡೆಸಲು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ಮಂಜುನಾಥ ಭಂಡಾರಿ ಹೇಳಿದರು.ಗ್ರಾಮ ಪಂಚಾಯತ್‌ಗಳ ಸರಕಾರಿ ಶಾಲೆ, ಪಂಚಾಯತ್ ಕಟ್ಟಡಗಳ ದುರಸ್ತಿ ಸೇರಿದಂತೆ ರಸ್ತೆ ಅಭಿವೃದ್ಧಿ ಹೊರತುಪಡಿಸಿ ಇತರ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ ಗ್ರಾ.ಪಂ. ಒಂದಕ್ಕೆ ತಲಾ 5 ಲಕ್ಷ ರೂ.ನಂತೆ ಆರು ವರ್ಷಗಳ ಅವಧಿಯಲ್ಲಿ 380 ಪಂಚಾಯತ್‌ಗಳಿಗೆ ಅನುದಾನ ಹಂಚಿಕೆಗೆ ನಿರ್ಧಾರ ಮಾಡಿರುವುದಾಗಿ ಮಂಜುನಾಥ ಭಂಡಾರಿ ಹೇಳಿದರು.ಜಿಲ್ಲೆಯ ಬೀಚ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲು ಕೂಡಾ ಆದ್ಯತೆ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದರು.ಪಿಲಿಕುಳದಲ್ಲಿ ಉತ್ಸವ ಆಯೋಜನೆ!ಪಿಲಿಕುಳದಲ್ಲಿ ಹಿಂದೆ ನಡೆಯುತ್ತಿದ್ದ ಕಂಬಳ ಬಂದ್ ಆಗಿದೆ. ಹೀಗಾಗಿ ಪಿಲಿಕುಳದಲ್ಲಿ ಪಿಲಿಕುಳೋತ್ಸವ ಅಥವಾ ತುಳುನಾಡೋತ್ಸವ ರೀತಿ ಒಂದು ವಾರಗಳ ಕಾಲ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಪ್ರಚಾರ ಮಾಡಲು ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದೇವೆ. ಈಗಾಗಲೇ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಒಂದು ಸಭೆ ನಡೆದಿದ್ದು ಮುಂದೆ ಉತ್ಸವವನ್ನು ಯಾವ ರೀತಿ ನಡೆಸಬಹುದು ಎಂಬ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದೇವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯ, ದೇಶ, ವಿದೇಶಗಳ ಜನರು ತುಳುನಾಡಿನ ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗುವಂತೆ ಕಾರ್ಯಕ್ರಮ ಆಯೋಜನೆ, ಮಕ್ಕಳಿಗಾಗಿ ವಿನೂತನ ಸ್ಪರ್ಧೆ ಮತ್ತು ಕಾರ್ಯಕ್ರಮ ಆಯೋಜನೆ, ತುಳುನಾಡ ಕಂಬಳ ಇತ್ಯಾದಿ ಆಯೋಜಿಸಲಾಗುವುದು. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವುದಲ್ಲದೆ ಹೊರಗಿನ ಜನರಿಗೆ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ“ ಎಂದರು.ಶಾಲೆ ದತ್ತು ಪಡೆದು ಮಾದರಿ ಶಾಲೆಯಾಗಿ ಪರಿವರ್ತನೆ!“ಕೋಡಿ ಬೆಂಗ್ರೆ ಶಾಲೆ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಅಲ್ಲಿ ಭೇಟಿ ಕೊಟ್ಟು ಶಾಲೆಯನ್ನು ದತ್ತು ಪಡೆದು ನನ್ನ ಸ್ವಂತ ಹಣ ಮಾತ್ರವಲ್ಲದೆ ದಾನಿಗಳ ನೆರವಿನಿಂದ ಸಂಪೂರ್ಣ ಅಭಿವೃದ್ಧಿ ಮಾಡಿ ರಾಜ್ಯ ಮಾತ್ರವಲ್ಲದೆ ರಾಷ್ಟ್ರದಲ್ಲಿ ಮಾದರಿ ಶಾಲೆಯನ್ನಾಗಿ ಪತಿವರ್ತಿಸಲಾಗುವುದು. ಇದೇ ರೀತಿ ಬೆಂಜನಪದವು ಶಾಲೆಯನ್ನೂ ಅಭಿವೃದ್ಧಿ ಪಡಿಸಲಾಗುವುದು“ ಎಂದರು.”ಅಡಿಕೆ ಹಾಳೆ ಅಡಿಕೆ ತಟ್ಟೆಗಳು ನಮ್ಮ ಜಿಲ್ಲೆಯಿಂದಲೇ ರಫ್ತ್ತು ಆಗುತ್ತಿದೆ. ಇದನ್ನು ರಾಜ್ಯದೆಲ್ಲೆಡೆ ಪ್ರಚಾರ ಮಾಡುವ ಕೆಲಸ ಆಗಬೇಕು. ಪತ್ರಕರ್ತರ ಸಂಘದ ವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜನೆ ಮಾಡಬೇಕು“ ಎಂದು ಶಾಸಕರು ಒತ್ತಾಯಿಸಿದರು.ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಕುರಿತ ಪ್ರಶ್ನೆಗೆ ”ಮಂಗಳೂರಿನ ಬದಲು ಪುತ್ತೂರಲ್ಲಿ ಮೆಡಿಕಲ್ ಕಾಲೇಜು ಮಾಡಿ ಉಡುಪಿಯ ಬದಲು ಕುಂದಾಪುರದಲ್ಲಿ ಮಾಡಿ ಎಂದು ನಾನು ಮನವಿಯನ್ನು ಮಾಡಿದ್ದೇನೆ. ಯಾಕೆಂದರೆ ಮೂಲ ಸೌಕರ್ಯಗಳೇ ಇಲ್ಲದ ಕಡೆ ಇದನ್ನು ಮಾಡಿದಲ್ಲಿ ಒಳ್ಳೆಯದು ಎಂದರು.ಪಿಲಿಕುಳದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಡೆದು ಹೋಗಲು ಅವಕಾಶವವಿಲ್ಲ. ಇದಕ್ಕಾಗಿ ಪ್ರತ್ಯೇಕ ಹಣ ಕೊಡಬೇಕು. ದುಬಾರಿ ಶುಲ್ಕ ಕೊಟ್ಟರೂ ಪ್ರವಾಸಿಗರಿಗೆ ಇದು ಹೊರೆಯಾಗಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈ ಬಗ್ಗೆ ಕೂಡಲೇ ಅಧಿಕಾರಿಗಳ ಜೊತೆಗೆ ಮಾತಾಡಿ ಕ್ರಮ ಜರುಗಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಪಿಲಿಕುಳ ಗುತ್ತಿನ ಮನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಾಕಿರುವ ಮರದ ಪೀಠೋಪಕರಣಗಳು ಗೆದ್ದಲು ಹಿಡಿದಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರಾಜ್ಯದಲ್ಲಿ ವಿಘ್ನ ವಿನಾಯಕನಿಗೆ ವಿಘ್ನ. ಸರಕಾರದ ಕ್ರಮವನ್ನು ಪ್ರಶ್ನಿಸಿ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರಿಂದ ಸುದ್ದಿಗೋಷ್ಠಿ.

ಮಂಗಳೂರು :1.ರಾಜ್ಯದಲ್ಲಿ ವಿಘ್ನ ವಿನಾಯಕನಿಗೇ ವಿಘ್ನ:- ದೇಶದ ಅತ್ಯಂತ ದೊಡ್ಡ ಹಬ್ಬ ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಇದ್ದು ಮಂಗಳೂರು ನಗರದ ಅನೇಕ ಕಡೆ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಲು ಹೋಗಿರುವ ಆಯೋಜಕರಿಗೆ “ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ-ಅತಿಥಿಗಳ, ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ನೀಡಬೇಕು. ಭಾಗವಹಿಸುವ ಟ್ಯಾಬ್ಲೋಗಳ ತಂಡ ಯಾವುದು? ಯಾವ ವಾಹನದಲ್ಲಿ ಬರುತ್ತಾರೆ? ಅದರ ದಾಖಲೆ ನೀಡಬೇಕು, ಲೈಸೆನ್ಸ್ ನೀಡಬೇಕು,” ಎಂಬಿತ್ಯಾದಿ ಚಿತ್ರ ವಿಚಿತ್ರ ಅರ್ಥವಿಲ್ಲದ ನೀತಿ ನಿಯಮಗಳನ್ನು ಹೇರುವ ಮೂಲಕ ಗೊಂದಲ ಸೃಷ್ಟಿಸಿ, ಹಿಂದೂ ಬಾಂಧವರು ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಿಸುವುದನ್ನೇ ನಿಲ್ಲಿಸಬೇಕು ಎನ್ನುವ ವ್ಯವಸ್ಥಿತ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ. ವಿಘ್ನ ವಿನಾಯಕ ಇಡೀ ಬ್ರಹ್ಮಾಂಡದಲ್ಲೇ ತುಂಬಿಕೊಂಡಿದ್ದಾನೆ. ವೈಯಕ್ತಿಕ, ಸಾರ್ವಜನಿಕ, ಸರ್ಕಾರ ಹೀಗೆ ಯಾವುದೇ ಶುಭ ಕಾರ್ಯಗಳಲ್ಲೂ ಅವನಿಗೇ ಮೊದಲ ಪೂಜೆ. ಅಂತಹ ಪೂಜೆಗೆ ಇನ್ನಿಲ್ಲದ ಅಡೆತಡೆಗಳನ್ನು ಒಡ್ದುವ ಪ್ರಯತ್ನವೇಕೆವೆಂದು ಇಂದು ಸುದ್ದಿಗೋಷ್ಠಿ ಕರೆದ ಮಂಗಳೂರು ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಸರಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.ಈ ಕಾಂಗ್ರೆಸ್ಸಿಗರಿಗೆ ಗಣೇಶನ ಮೇಲೆ, ಹಿಂದೂ ಹಬ್ಬಗಳ ಮೇಲೆ ಯಾಕಿಷ್ಟು ಕೋಪ? ಕೂಡಲೇ ಇದನ್ನೆಲ್ಲ ಬಿಟ್ಟು ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆಂದಿದ್ದಾರೆ 2.ನಗರದಲ್ಲಿ ಧಿಡೀರ್ ಸಂಚಾರ ಬದಲಾವಣೆಯಿಂದ ಸಾರ್ವಜನಿಕರ ಪರದಾಟ:- ಯಾವುದೇ ಮಾಹಿತಿ ನೀಡದೇ ನಗರದಲ್ಲಿ ಧಿಡೀರ್ ಸಂಚಾರ ಬದಲಾವಣೆ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದ್ದು ಆಡಳಿತ ವ್ಯವಸ್ಥೆಯ ಏಕಪಕ್ಷೀಯ ನಿರ್ಧಾರದಿಂದ ಆಟೋರಿಕ್ಷಾ ಚಾಲಕರು ಸಹ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ಸುಗಳು ಸ್ಟೇಟ್ ಬ್ಯಾಂಕ್ ನಿಂದ ಹಂಪನಕಟ್ಟೆಯವರೆಗೆ ಎಲ್ಲಿಯೂ ನಿಲ್ಲಿಸದೇ ಬಲ ಬದಿಯಲ್ಲಿಯೇ ಹೋಗಬೇಕು ಎಂದು ಸೂಚನೆ ನೀಡಿ ಉದ್ದಕ್ಕೂ ಬ್ಯಾರಿಕೇಡ್ ಅಳವಡಿಸಿರುವುದರಿಂದ ಲೇಡಿಗೋಷನ್ ಆಸ್ಪತ್ರೆಯ ಬಳಿ ಇರುವ ಬಸ್ ನಿಲ್ದಾಣ, ಹಾಗೂ ಬಸ್ ಗಳ ಮಧ್ಯದಲ್ಲೇ ಬ್ಯಾರಿಕೇಡ್ ಬಂದಿದೆ!.ಆದ್ದರಿಂದ ಪ್ರಯಾಣಿಕರು ರಸ್ತೆಯ ಒಂದು ಬದಿಯನ್ನು ಅಪಾಯಕಾರಿಯಾಗಿ ದಾಟಿ ಓಡಿ ಬಂದು ಬ್ಯಾರಿಕೇಡ್ ಸರಿಸಿ ಬಸ್ ಹತ್ತುತ್ತಿರುವ ದೃಶ್ಯ ಪತ್ರಿಕೆಗಳಲ್ಲೂ ವರದಿಯಾಗಿದೆ. ಇಲ್ಲಿ ದುರದೃಷ್ಟವಶಾತ್ ಒಬ್ಬೇ ಒಬ್ಬ ನಾಗರಿಕನ ಅಮೂಲ್ಯ ಜೀವಕ್ಕೆ ಹಾನಿಯಾದರೂ ಅದರ ನೇರ ಹೊಣೆಯನ್ನು ಇಂತಹ ಅವೈಜ್ಞಾನಿಕ ನಿಯಮ ರೂಪಿಸಿದವರೇ ಹೊರಬೇಕೆಂದು ಶಾಸಕರು ಹೇಳಿದ್ದಾರೆ.“ಜಿಲ್ಲೆಯ ಕಾಂಗ್ರೆಸ್ ನಾಯಕರ ಒತ್ತಡ, ಸಚಿವರ ಮೌಖಿಕ ಆದೇಶವೆಂದು” ಏಕಾಏಕಿ ವಾಸ್ತವವನ್ನೇ ಅರಿಯದೇ ಸಂಚಾರ ಬದಲಾವಣೆ ಮಾಡುವ ಮೊದಲು ಕ್ಷೇತ್ರದ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯುವ ಸೌಜನ್ಯವೂ ಇಲ್ಲವೇ? ಹಲವಾರು ಕಡೆಗಳಲ್ಲಿ ಯೂ-ಟರ್ನ್‌, ಡಿವೈಡರ್‌ ಬಂದ್‌ ಮಾಡಲಾಗಿದೆ. ನಮಗಂತೂ ಈ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ಕೊನೆಪಕ್ಷ ದಿನನಿತ್ಯ ಇಲ್ಲೇ ಸಂಚರಿಸುವ ಸಾರ್ವಜನಿಕರಿಗಾದರೂ ತಿಳಿಸಬೇಡವೇ? ವೆಂಬುದು ಶಾಸಕರ ಪ್ರಶ್ನೆಯಾಗಿದೆ.3.ಅಕ್ರಮವಾಗಿ ಹಂಪನಕಟ್ಟೆ ವಿ.ವಿ. ಕಾಲೇಜು ಮುಂಭಾಗದ ಬಸ್ ನಿಲ್ದಾಣ ತೆರವು:- ಹಂಪನಕಟ್ಟೆಯ ವಿ.ವಿ. ಕಾಲೇಜು ಮುಂಭಾಗದಲ್ಲಿದ್ದ ಬಸ್ ನಿಲ್ದಾಣವನ್ನು ಕೇವಲ ಒಬ್ಬ ವ್ಯಕ್ತಿಯ ಅಂಗಡಿಯ ವ್ಯಾಪಾರದ ಉದ್ದೇಶಕ್ಕಾಗಿ ಯಾರಿಗೂ ಮಾಹಿತಿ ನೀಡದೇ ರಾತೋರಾತ್ರಿ ತೆರವು ಮಾಡಿದ ಪರಿಣಾಮ ಕಾಲೇಜು ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವವರು ಸೇರಿದಂತೆ ಸಾವಿರಾರು ಜನರು ಬಿಸಿಲು, ಮಳೆಯಲ್ಲಿ ನಿಲ್ಲುವಂತಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲೂ ಕೂಡಾ ಜಿಲ್ಲೆಯ ಕಾಂಗ್ರೆಸ್ ನಾಯಕರ ಒತ್ತಡ, ಸಚಿವ ದಿನೇಶ್‌ ಗುಂಡೂರಾವ್‌ ರವರ ಮೌಖಿಕ ಆದೇಶವೆನ್ನುವ ಮಾತು ಕೇಳಿ ಬಂದಿದೆ. ಹಾಗಾದರೆ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಪ್ರತಿಯೊಂದು ಅವ್ಯವಸ್ಥೆಗೂ ಅವರುಗಳೇ ನೇರ ಹೊಣೆ. ಕೂಡಲೇ ಜನಾಭಿಪ್ರಾಯದಂತೆ ಅದೇ ಜಾಗದಲ್ಲಿ ಮತ್ತೆ ಬಸ್ ನಿಲ್ದಾಣ ಮರು ನಿರ್ಮಾಣವಾಗಬೇಕು ಎಂದು ಆಗ್ರಹಿಸುತ್ತೇನೆಂದಿದ್ದಾರೆ4.ಸರ್ಕಾರದ ಆದೇಶದಿಂದ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ:- ರಾಜ್ಯ ಸರ್ಕಾರವು ಮಾರ್ಗಸೂಚಿ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿದ ಪರಿಣಾಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು ಇದು ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಬಗ್ಗೆ ನಗರ ವಾಸಿಗಳಲ್ಲಿ ನಕಾರಾತ್ಮಕ ಭಾವನೆ ಮೂಡಿಸುವ ಪ್ರಯತ್ನವಾಗಿದೆ. ಈ ಹಿಂದೆ ರಾಜ್ಯದಲ್ಲಿ ನಮ್ಮ ಆಡಳಿತದ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕವನ್ನು ಇಳಿಸುವ ಮೂಲಕ ಜನಪರ ಆಡಳಿತ ನೀಡಲಾಗಿತ್ತು. ಈಗ ಕಾಂಗ್ರೆಸ್‌ ಸರ್ಕಾರವಿದ್ದು ಆಸ್ತಿ ತೆರಿಗೆ ಹೆಚ್ಚಳದ ಆದೇಶವನ್ನು ಕೂಡಲೇ ಹಿಂಪಡೆದು ನಗರದ ಜನಸಾಮಾನ್ಯರಿಗೆ ಹೊರೆಯಾಗುವುದನ್ನು ತಪ್ಪಿಸಿ ನ್ಯಾಯ ಕೊಡಿಸುವಂತಹ ಕೆಲಸ ಮಾಡಲಿ. ಅದು ಬಿಟ್ಟು ಅವರಿವರ ಮೇಲೆ ಆರೋಪ ಹಾಕುತ್ತಾ ಕಾಲಹರಣ ಮಾಡುವುದಲ್ಲ. ಮೊದಲೇ ಮಂಗಳೂರಿಗೆ ಸರ್ಕಾರದಿಂದ ಇದುವರೆಗೆ ಬಿಡಿಗಾಸು ಅನುದಾನವೂ ಬಂದಿಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ. ಅದರ ನಡುವೆ ಈ ಆಸ್ತಿ ತೆರಿಗೆ ಏರಿಕೆ ಯಾವ ಪುರುಷಾರ್ಥಕ್ಕಾಗಿ?ವೆಂದು ಶಾಸಕರು ಕೇಳಿದ್ದಾರೆ.5.ಬಂದರು ಇಲಾಖೆಯಲ್ಲಿನ ಸರ್ಕಾರಿ ಜಾಗದ ಲೀಸ್ ಹಾಗೂ ಬಾಡಿಗೆ ದರವನ್ನು ಕೂಡಲೇ ಇಳಿಸಿ:-ರಾಜ್ಯದ ಬಂದರು ಇಲಾಖೆಯಲ್ಲಿನ ಸರ್ಕಾರಿ ಜಾಗವನ್ನು ಹಲವಾರು ವರ್ಷಗಳಿಂದ ನಿಗದಿತ ದರದಲ್ಲಿ ಬಾಡಿಗೆಗೆ ಹಾಗೂ ಲೀಸ್ ಗೆ ನೀಡಲಾಗಿದೆ. ಇದೀಗ ಆ ದರವು ಹೆಚ್ಚಾಗಿದ್ದು ಈ ಕೂಡಲೇ ಕಡಿಮೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆಂದು ಶಾಸಕರು ತಿಳಿಸಿದ್ದಾರೆ.ಅಂತಿಮವಾಗಿ, ನಗರದಲ್ಲಿ ಈಗಾಗಲೇ ಟ್ರಾಫಿಕ್‌ ಸಮಸ್ಯೆ ಮಿತಿ ಮೀರಿದ್ದು ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಡಳಿತ-ಪೊಲೀಸ್‌ ಇಲಾಖೆ,-ಕ್ಷೇತ್ರದ ಜನಪ್ರತಿನಿಧಿಗಳು-ಸ್ಥಳೀಯರನ್ನೊಳಗೊಂಡಂತೆ ಸಂಚಾರ ಬದಲಾವಣೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಿ. ಅದು ಬಿಟ್ಟು ಏಕಪಕ್ಷೀಯವಾಗಿ, ಅವೈಜ್ಞಾನಿಕ ನಿರ್ಧಾರ ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಬಿಡಲಿ ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಪ್ರಮುಖರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್ ಉಪಸ್ಥಿತರಿದ್ದರು.

ಹೊರ ರಾಜ್ಯ ವಾರ್ತೆಗಳು

ಮುಲುಂಡ್ ಬಂಟ್ಸ್ ಆಶ್ರಯದಲ್ಲಿ ಅಜೆಕಾರು ಸರಣಿ ತಾಳಮದ್ದಳೆ ಸಮಾರೋಪ. ‘ತವರೂರ ಕಲಾವಿದರಿಂದ ಮುಂಬೈಯಲ್ಲಿ ಯಕ್ಷಗಾನ ಹವಾ’: ಸಿ.ಎ.ಕರುಣಾಕರ ಶೆಟ್ಟಿ

ಮುಂಬೈ: ‘ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನವಿಂದು ಮಹಾನಗರ ಮುಂಬೈಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಇದಕ್ಕೆ ಪ್ರತಿವರ್ಷವೂ ತವರೂರಿಂದ ಬಂದು ಬಯಲಾಟ ಮತ್ತು ತಾಳಮದ್ದಳೆಗಳ ಮೂಲಕ ನಮ್ಮನ್ನು ರಂಜಿಸುವ ಹೆಸರಾಂತ ಯಕ್ಷಗಾನ ಕಲಾವಿದರೇ ಮುಖ್ಯ ಕಾರಣವಾಗಿದ್ದಾರೆ. ಆದರೆ ಅವರನ್ನು ಕರೆತಂದು ಮುಂಬೈಯಲ್ಲಿ ಯಕ್ಷಗಾನ ಹವಾ ಮೂಡಿಸಿದ ಬಲುದೊಡ್ಡ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟರಂತಹ ಕಲಾಸಂಘಟಕರಿಗೆ ಸಲ್ಲುತ್ತದೆ’ ಎಂದು ಮುಲುಂಡ್ ಬಂಟ್ಸ್ ಅಧ್ಯಕ್ಷ ಸಿಎ ಕರುಣಾಕರ ಶೆಟ್ಟಿ ಹೇಳಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗದ 23ನೇ ವರ್ಷದ ಸರಣಿ ತಾಳಮದ್ದಳೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ತಂಡದ ಎಲ್ಲಾ ಕಲಾವಿದರನ್ನು ಮುಲುಂದು ಬಂಟ್ಸ್ ವತಿಯಿಂದ ಗೌರವಿಸಲಾಯಿತು.ಅವಿಸ್ಮರಣೀಯ ಸಹಕಾರ:ತವರೂರ ಹಿರಿಯ ಅರ್ಥಧಾರಿ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಕಳೆದ ಎರಡು ದಶಕಗಳಿಂದ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ವರ್ಷಂಪ್ರತಿ ಎರಡು ತಂಡಗಳಾಗಿ ಮುಂಬೈ ನಗರದ ಉದ್ದಗಲಕ್ಕೆ ಜರಗುವ ತಾಳಮದ್ದಳೆ ಕಾರ್ಯಕ್ರಮಗಳು ಹಾಗೂ ವಿವಿಧ ಮೇಳಗಳ ಪ್ರಸಿದ್ಧ ವೃತ್ತಿ ಕಲಾವಿದರನ್ನು ಸಂಯೋಜಿಸಿ ನೀಡಲಾಗುವ ಯಕ್ಷಗಾನ ಬಯಲಾಟಗಳಿಗೆ ಮುಂಬೈಯ ಜನತೆ ಅವಿಸ್ಮರಣೀಯವಾದ ಸಹಕಾರವನ್ನು ನೀಡುತ್ತಿರುವುದು ತಾಯ್ನಾಡಿನ ಕಲಾವಿದರಿಗೆ ಧನ್ಯತೆಯನ್ನು ತಂದುಕೊಟ್ಟಿದೆ. ಅದರಲ್ಲೂ ಮುಲುಂಡ್ ಬಂಟ್ಸ್ ಆರಂಭದಿಂದಲೂ ಪ್ರತಿ ವರ್ಷ ಶಿಸ್ತು ಬದ್ಧವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದರು. ಮುಂಬೈ ಮಹಾನಗರದ ಎಲ್ಲಾ ಸಂಘಟಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಅಜೆಕಾರು ಕಲಾಭಿಮಾನಿ ಬಳಗ ಮತ್ತು ಕಲಾವಿದರ ಪರವಾಗಿ ಅವರು ಕೃತಜ್ಞತೆ ಸಲ್ಲಿಸಿದರು. ಸಂಘಟಕರಿಗೆ ಗೌರವಾರ್ಪಣೆ:ಮುಲುಂಡ್ ಬಂಟ್ಸ್ ಅಧ್ಯಕ್ಷರು ಸಿ/ಎ ಕರುಣಾಕರ ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಗೌರವಿಸಿದರು. ವಿಶ್ವಸ್ಥರಾದ ಎಸ್.ಬಿ. ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ಪ್ರಸಾದ ಶೆಟ್ಟಿ, ಕೊಶಾಧಿಕಾರಿ ಸಿ/ಎ ಗಣೇಶ ಶೆಟ್ಟಿ, ಜೊತೆ ಕೊಶಾಧಿಕಾರಿ ಉದಯ ಶೆಟ್ಟಿ ಯಚ್, ಜೊತೆ ಕಾರ್ಯದರ್ಶಿಗಳಾದ ಸುರೇಶ ಶೆಟ್ಟಿ ಕಡಂದಲೆ ಮತ್ತು ಶೇಖರ ಶೆಟ್ಟಿ ಕಡಂದಲೆ; ಮಹಿಳಾ ವಿಭಾಗದ ಅಧ್ಯಕ್ಷೆ ಆರತಿ.ವೈ ಶೆಟ್ಟಿ, ಉಪಾಧ್ಯಕ್ಷೆ ಶಶಿಪ್ರಭಾ.ಕೆ.ಶೆಟ್ಟಿ, ಕೋಶಾಧಿಕಾರಿ ಪ್ರತಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಪೂರ್ಣಿಮ ಶೆಟ್ಟಿ ಅಲ್ಲದೆ ಸಮಿತಿಯ ಹರ್ಷವರ್ಧನ ಶೆಟ್ಟಿ ,ಯೋಗೇಶ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ ವಂದಿಸಿದರು. ‘ಭೀಷ್ಮ ಪರಶುರಾಮ – ತುಳುನಾಡ ಬಲೀಂದ್ರೆ’ ತಾಳಮದ್ದಳೆ:ಸಭೆಯ ಬಳಿಕ ಸರಣಿಯ ಕೊನೆಯ ತಾಳಮದ್ದಳೆ ‘ಭೀಷ್ಮ-ಪರಶುರಾಮ (ಕನ್ನಡ); ತುಳುನಾಡ ಬಲೀಂದ್ರೆ (ತುಳು)’ ಜರಗಿತು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ, ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಿದ್ದರು.ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಬಲಿ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಪರಶುರಾಮ), ದಿನೇಶ್ ಶೆಟ್ಟಿ ಕಾವಳಕಟ್ಟೆ (ಭೀಷ್ಮ), ಸದಾಶಿವ ಆಳ್ವ ತಲಪಾಡಿ (ವಾಮನ), ಗುರುತೇಜ ಶೆಟ್ಟಿ ಒಡಿಯೂರು (ಶುಕ್ರಾಚಾರ್ಯ) ಅರ್ಥಧಾರಿ ಗಳಾಗಿದ್ದರು.

ಅಂತಾರಾಷ್ಟ್ರೀಯ ವಾರ್ತೆಗಳು

ಜಗತ್ತಿನಲ್ಲೇ ಅತೀ ದೊಡ್ಡ ಅನಿವಾಸಿ ಭಾರತೀಯರ ಸಂಘಟನೆ ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ತುಳುನಾಡಿನ ಹೆಮ್ಮೆಯ ಸುಪುತ್ರ, ಪುತ್ತೂರಿನ ಮುತ್ತು ಮಿತ್ರಂಪಾಡಿ ಜಯರಾಮ ರೈ

ದುಬೈ: ವಿಶ್ವದಲ್ಲಿ ಅತೀ ದೊಡ್ಡ ಅನಿವಾಸಿ ಭಾರತೀಯ ಸಂಸ್ಥೆ ಇಂಡಿಯಾ ಸೋಶಿಯಲ್ ಅಂಡ್ ಕಲ್ಬರಲ್ ಸೆಂಟರ್ ಅಬುಧಾಬಿ ಅಧ್ಯಕ್ಷರಾಗಿ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ಅಧಿಕಾರ ಸ್ವೀಕರಿಸಿದ್ದಾರೆ.ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿರುವ ಅನಿವಾಸಿ ಭಾರತೀಯರ ಭವ್ಯ ಸೌಧ ಇಂಡಿಯಾ ಸೋಶಿಯಲ್ ಅಂಡ್ ಕಲ್ಬರಲ್ ಸೆಂಟರ್ ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡದಾಗಿರುವ ಸಂಘಟನೆಯ 2024 ನೇ ಸಾಲಿನ ಅಧ್ಯಕ್ಷರಾಗಿ ಶ್ರೀಯುತ ಜಯರಾಮ್ ರೈಯವರು ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತ ಜಯರಾಮ್ ರೈಯವರು ನಡೆದು ಬಂದಿರುವ ಹಾದಿಯನ್ನು ಅವಲೋಕಿಸುವುದಾದರೆ ಮಿತ್ರಂಪಾಡಿ ಜಯರಾಮ್ ರೈ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ದಿವಂಗತ ಮಿತ್ರಂಪಾಡಿ ಚನ್ನಪ್ಪ ರೈ ಹಾಗೂ ದಿಂಬಿ ಗುತ್ತು ಸರಸ್ವತಿ ರೈ ಅವರ ಸುಪುತ್ರ.ಪ್ರಸ್ತುತ ಬಿನ್ ಫರ್ದನ್ ಸಂಸ್ಥೆಯ ಸಿ. ಎಫ್. ಓ. ಗ್ರೂಫ್ ಫೈನಾನ್ಸ್ ಮ್ಯಾನೇಜರ್ ಆಗಿರುವ ಶ್ರೀ ಮಿತ್ರಂಪಾಡಿ ಜಯರಾಮ್ ರೈಯವರ ಸಮಾಜ ಸೇವೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಆರ್ಯಭಟ ಕಲ್ಬರಲ್ ಆರ್ಗನೈಸೇಶನ್ (ರಿ) ಬೆಂಗಳೂರು ಇವರು ಕೊಡಮಾಡುವ ಆರ್ಯಭಟ ಇಂಟರ್ ನ್ಯಾಶನಲ್ ಅವಾರ್ಡ್ 2024 ಪುರಸ್ಕೃತರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಾ ಪೋಷಕರಾಗಿದ್ದು ಪರಿಷತ್ತಿನ ಮೂಲಕ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’ ದ ಮೂಲಕ ಹಳ್ಳಿಹಳ್ಳಿಗೂ ಕನ್ನಡದ ಕಂಪನ್ನು ಪಸರಿಸುವ ಜೊತೆಗೆ ದೇಶ ವಿದೇಶಗಳಲ್ಲಿಲ್ಲೂ ಕನ್ನಡದ ಕಂಪು ಪಸರಿಸಲು ಕಾರಣೀಭೂತರಾದ ಇವರ ಕನ್ನಡ ಪರ ಸೇವೆಯನ್ನು ಸಹ ಗುರುತಿಸಲಾಗಿದೆ.ಧಾರ್ಮಿಕ ಹಾಗೂ ಸಮಾಜ ಸೇವೆ: ಇವರು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೈವ, ದೇವಸ್ಥಾನಗಳ ಜೀರ್ಣೋದ್ಧಾರ ದಲ್ಲಿ ಗೌರವಾಧ್ಯಕ್ಷರಾಗಿ, ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ ಮಹತ್ತರ ಕಾರ್ಯವನ್ನು ಮಾಡುವ ಜೊತೆಗೆ ನೂರಕ್ಕೂ ಅಧಿಕ ಬಡಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ, ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯವನ್ನು ಮಾಡಿರುತ್ತಾರೆ. ಕೊರೊನಾ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಸಾವಿರಕ್ಕೂ ಅಧಿಕ ಬಡಕುಟುಂಬಗಳಿಗೆ ಅಕ್ಕಿಯನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹಾಗೂಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಪುತ್ತೂರು ತಾಲೂಕು ಘಟಕದಿಂದ ನಡೆಸಲ್ಪಡುವ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ.ಘೋಷವಾಕ್ಯದಲ್ಲಿ ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್ ವ್ಯಾಪ್ತಿಯ 32 ಗ್ರಾಮದಲ್ಲಿ ಪ್ರತಿತಿಂಗಳು ನಡೆಯುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಮಹಾ ಪೋಷಕರಾಗಿರುತ್ತಾರೆ. ಈ ಗ್ರಾಮಸಾಹಿತ್ಯ ಸಂಭ್ರಮದಲ್ಲಿ, ಕನ್ನಡದಲ್ಲೂ ಐಎಎಸ್ ಬರೆಯಿರಿ ಅಭಿಯಾನ, ಕವಿಗೋಷ್ಠಿಕಥಾ ಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ನಡೆಯುತ್ತಿದ್ದು ಸುಮಾರು 5000 ಪುಟಾಣಿ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಗೌರವ ಹಾಗೂ 50 ಸಾವಿರಕ್ಕೂ ಅಧಿಕ ಪ್ರೇಕ್ಷಕ ವರ್ಗ ಇದನ್ನ ನೋಡಿ ಆನಂದಿಸಿದ ಗೌರವ ಇವರಿಗೆ ಸಲ್ಲುತ್ತದೆ. ಈ ರೀತಿಯ ಕಾರ್ಯಕ್ರಮವನ್ನು *ಗ್ರಾಮ ಮಟ್ಟದಲ್ಲಿ ಆಯೋಜಿಸಿರುವುದು ಬಹುಶಃ ಭಾರತದಲ್ಲಿಯೇ ಪ್ರಥಮ ಎನ್ನಬಹುದು.ಕಳೆದ ಇಪ್ಪತ್ತೈದು ವರ್ಷಗಳಿಂದ ಅರಬ್ ರಾಷ್ಟ್ರದಲ್ಲೂ ಕನ್ನಡ ಸೇವೆ ಹಾಗೂ ಕನ್ನಡಿಗರ ಸೇವೆ ಮಾಡುವ ಇವರು ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳಿಗೆ ತನು ಮನ ಧನ ಗಳಿಂದ ಸಹಕಾರ ನೀಡುತ್ತಾ ಬಂದಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನಡೆಯುವ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನ, ವಿಶ್ವ ತುಳು ಸಮ್ಮೇಳನ, ಕವಿ ಸಮ್ಮೇಳನ, ನಾಟಕ ಯಕ್ಷಗಾನ, ಸಂಗೀತ ರಸಮಂಜರಿ, ಇನ್ನಿತರ ಸಾಮಾಜಿಕ ಚಟುವಟಿಕೆಗಳಿಗೆ ಸದಾ ಬೆಂಬಲ ಪ್ರೋತ್ಸಾಹ, ಪ್ರಾಯೋಜಕತವ ನೀಡುತ್ತಾ ಬಂದಿರುವ ಪೋಷಕರಾಗಿದ್ದಾರೆ.ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ನಾಯಕನಾಗಿ, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಬಂದವರು. ಬೆಂಗಳೂರಿನ ಯುವ ಬಂಟ ಸಮಾಜದ ಅಧ್ಯಕ್ಷರಾಗಿ, ಕನ್ನಡ ಮತ್ತು ತುಳುವೆರೆಂಕುಳು, ಲಯನ್ಸ್ ಕ್ಲಬ್ ಮತ್ತು ಇನ್ನಿತರ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವರು. ಇಂಡಿಯಾ ಸೋಶಿಯಲ್ ಸೆಂಟರ್ ಟೋಸ್ಟ್ ಮಾಸ್ಟರ್ ಇಂಟರ್ನ್ಯಾಶನಲ್ ಅಬುಧಾಬಿ ಇದರ್ ಸ್ಥಾಪಕ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಡಿಯಾ ಸೋಶಿಯಲ್ ಅಂಡ್ ಕಲ್ಬರಲ್ ಸೆಂಟರ್ ಇದರ್ ಗೌರವಾನ್ವಿತ ಲೆಕ್ಕ ಪರಿಶೋಧಕರಾಗಿ, ಚೀಫ್ ಪೋಲಿಂಗ್ ಆಫಿಸರ್ ಆಗಿ ಸೇವೆ ಸಲ್ಲಿಸ್ ಅಪಾರ ಜನಪ್ರಿಯತೆಯನ್ನು ಪಡೆದಿದ್ದಾರೆ.ಕಳೆದ 25ವರ್ಷಗಳಿಂದ ಇವರ ಧಾರ್ಮಿಕ, ಶೈಕ್ಷಣಿಕ, ಸಮಾಜಸೇವೆ ಹಾಗೂ ಕನ್ನಡಪರ ಸೇವೆಯನ್ನು ಗುರುತಿಸಿ 2022 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ‘2023 ರ ‘ಗಡಿನಾಡ ಸದ್ಭಾವನ ಭೂಷಣ ಪ್ರಶಸ್ತಿ’ ಇಂಟರ್ನ್ಯಾಷನಲ್ ಐಕಾನ್ ಪ್ರಶಸ್ತಿ’ ಟೋಸ್ಟ್ ಮಾಸ್ಟರ್ ಅಂತರಾಷ್ಟ್ರೀಯ ಪ್ರಶಸ್ತಿಯಾದ DTM ಮತ್ತು “ಟ್ರಿಪಲ್ ಕೌನ್” ಪ್ರಶಸ್ತಿ, ದುಬೈನಲ್ಲಿ ಇಂಟರ್‌ನ್ಯಾಷನಲ್ ಕಲ್ಬರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿರುವ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ‘ವಿಶ್ವಮಾನ್ಯ ಪ್ರಶಸ್ತಿ 2024 ಬಂಟ್ಸ್ ನೌ ಅನುಬಂಧ “ಬಂಟ ರತ್ನ 2024 ಪ್ರಶಸ್ತಿ, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾಗಿದ್ದಾರೆ ಜನ್ಮ ಭೂಮಿ ಭಾರತ ಮತ್ತು ಕರ್ಮ ಭೂಮಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಹಲವಾರು ಸಂಘ-ಸಂಸ್ಥೆಗಳಿಂದಲೂ ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಯೇರಿದೆ.ಉದ್ಯೋಗ ನಿಮಿತ್ತ ದೂರದ ಗಲ್ಫ್ ರಾಷ್ಟ್ರದಲ್ಲಿ ಇದ್ದರೂ ಸದಾ ಭಾರತ ದೇಶ, ಕನ್ನಡ ನಾಡು, ಕನ್ನಡ ನುಡಿ, ಕನ್ನಡ ನೆಲ ಜಲದ ಶ್ರೇಯೋಭಿವೃದ್ಧಿಗಾಗಿ ಸದಾ ತನ್ನನ್ನು ತಾನು ಅರ್ಪಿಸಿಕೊಂಡು ಕನ್ನಡಪರ ಸೇವೆಯನ್ನು ಹುಟ್ಟೂರಿನಲ್ಲಿ ಮಾತ್ರವಲ್ಲದೇ ಗಲ್ಫ್ ರಾಷ್ಟ್ರದಲ್ಲೂ ಕನ್ನಡಪರ ಸೇವೆಯನ್ನು ಹಾಗೂ ಸಮಾಜ ಸೇವೆಯನ್ನು ಮಾಡುತ್ತಾ ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸುವ ಹಾಗೂ ಸದಾ ಕನ್ನಡಪರ ವಿಚಾರವನ್ನು ಚಿಂತಿಸುವ ಅಬುದಾಬಿಯಲ್ಲಿರುವ ಕನ್ನಡದ ರಾಯಭಾರಿ ಮಿತ್ರಂಪಾಡಿ ಜಯರಾಮ ರೈ ಅವರ ಸಮಾಜ ಸೇವೆ ನಿಜವಾಗಿಯೂ ಅಭಿನಂದನೀಯ ಹಾಗೂ ಶ್ರೇಷ್ಠವೆನಿಸುತ್ತದೆ.

ಹೊರ ರಾಜ್ಯ ವಾರ್ತೆಗಳು

ನವೆಂಬರ್ 10 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ ರಾಜ್ಯ ಮಕ್ಕಳ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

ಕಾಸರಗೋಡು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ 2024 ನವೆಂಬರ್ 10ರಂದು ನಡೆಯಲಿರುವ ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು.ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸಭೆಯ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನಗರ ಸಭೆಯ ಸದಸ್ಯೆ ಶ್ರೀಮತಿ ಶಾರದಾ ಉದ್ಘಾಟಿಸಿದರು. ಕರ್ನಾಟಕ ಕಲಾ ಮತ್ತು ಸಾಂಸ್ಕೃತಿಕ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಯು.ಆರ್ ಶೆಟ್ಟಿ, ನಿರಂಜನ ಕೊರಕ್ಕೋಡು, ಕೆ. ಗುರುಪ್ರಸಾದ್ ಕೋಟೆಕಣಿ, ಲವ ಮೀಪುಗುರಿ, ದಿವಾಕರ ಅಶೋಕ್ ನಗರ, ಕುಶಲಕುಮಾರ್ ಪಾರಕಟ್ಟೆ ಮೊದಲಾದವರು ಸಲಹೆ ಸೂಚನೆಯಿತ್ತರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಅನಿಲ್ ರಾಜ್ ನಾಗರಕಟ್ಟೆ ವಂದಿಸಿದರು.ಸಂಘಟನೆಗಳ ಸಮಾಲೋಚನಾ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಿವರಾಮ ಕಾಸರಗೋಡು, ಪ್ರಧಾನ ಸಂಚಾಲಕರಾಗಿ ಕೆ. ಜಗದೀಶ ಕೂಡ್ಲು ಹಾಗೂ ಕಾರ್ಯಕ್ರಮ ಸಂಯೋಜನ ಸಮಿತಿಯ ಅಧ್ಯಕ್ಷರಾಗಿ ಗುರುಪ್ರಸಾದ್ ಕೋಟೆ ಕಣಿ, ಗೌರವ ಸಲಹೆಗಾರರಾಗಿ ಕೆ. ನಿರಂಜನ ಕೊರಕ್ಕೋಡು, ಸಂಚಾಲಕರಾಗಿ ಯು. ಆರ್ ಶೆಟ್ಟಿ ಮಂಗಳೂರು, ಪ್ರದೀಪ್ ಬೇಕಲ್, ದಿವಾಕರ ಅಶೋಕ್ ನಗರ್, ಶ್ರೀಕಾಂತ್ ಕಾಸರಗೋಡು, ಕುಶಲಕುಮಾರ್ .ಕೆ, ಅನಿಲ್ ರಾಜ್ ನಾಗರಕಟ್ಟೆ, ಇವರನ್ನು ಆಯ್ಕೆ ಮಾಡಲಾಯಿತು.2024 ನವೆಂಬರ್ 10 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿರುವ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಇದರ ಪ್ರಚಾರ ಪತ್ರವನ್ನು ಕಾಸರಗೋಡು ನಗರಸಭಾ ಸದಸ್ಯೆ ಶ್ರೀಮತಿ ಶಾರದಾ ಅವರು ಮಕ್ಕಳಿಗೆ ನೀಡಿ ಬಿಡುಗಡೆಗೊಳಿಸಿದರು.

ಪ್ರಾದೇಶಿಕ ವಾರ್ತೆಗಳು

ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಪುಚ್ಚಾಡಿ ಸೂರಿಂಜೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಪುಚ್ಚಾಡಿ ಸೂರಿಂಜೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಆದಿತ್ಯವಾರ ನಡೆಯಿತು. ಗೌರವ ಅಧ್ಯಕ್ಷರಾಗಿ ಶಂಕರ್ ಶೆಟ್ಟಿ ಅಡುಮನೆ ಶಿಬರೂರು ಹಾಗೂ ಗಣನಾಥ್ ಶೆಟ್ಟಿ ನುರ್ಗೆದಡಿ ಸೂರಿಂಜೆ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪುನೀತ್ ಕುಮಾರ್, ಉಪಾಧ್ಯಕ್ಷರಾಗಿ ಅಭಿಷೇಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಕಾರ್ಯದರ್ಶಿಯಾಗಿ ಅರ್ಜುನ್ ಕುಂದರ್ ಮತ್ತು ಲೋಹಿತ್ ಸಾಲಿಯಾನ್, ಕೋಶಾಧಿಕಾರಿಯಾಗಿ ಪುರಂದರ ಗುಜರನ್, ಜೊತೆ ಕೋಶಾಧಿಕಾರಿಯಾಗಿ ರವೀಂದ್ರ, ಕ್ರೀಡೆ ಶರತ್ ಮತ್ತು ಪ್ರಜಾಯ್, ಸಂಘಟನೆಯ ಜವಾಬ್ದಾರಿಯನ್ನು ಬಾಲಕೃಷ್ಣ ಶೆಟ್ಟಿ , ಸುಧಾಕರ್ ಬಂಗೇರ, ವಿಜಯ್, ಮನೋಜ್ ಅವರಿಗೆ ನೀಡಲಾಯಿತು.ಸದಸ್ಯರು ಮೋಹನದಾಸ ಮತ್ತು ರವಿ ಸಾಲಿಯಾನ್ .ಗುರುವಾರ ವಿಶೇಷ ಪೂಜೆ, ಅನ್ನ ಸಂತರ್ಪಣೆ:ಸುರತ್ಕಲ್ ನಿಂದ ಕೆಲವೇ ದೂರದಲ್ಲಿರುವ ಶಿಬರೂರು-ಕಟೀಲು-ಸುರತ್ಕಲ್ ರಸ್ತೆ ಹಾದು ಹೋಗುವಾಗ ಸಿಗುವ ಪುಚ್ಚಾಡಿ ಸಾಯಿಬಾಬಾ ಮಂದಿರದಲ್ಲಿ ನಿತ್ಯ ಪೂಜೆ ಮತ್ತು ಪ್ರತಿ ಗುರುವಾರ ಭಕ್ತರ ಸೇವಾ ರೂಪದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಕಳೆದು ಹತ್ತು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ.ಭಕ್ತರು ತಮ್ಮ ತಮ್ಮ ವಿಶೇಷ ದಿನಗಳು ಅಂದರೆ ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ ಮತ್ತು ಹರಕೆ ರೂಪದಲ್ಲಿ ಶ್ರೀ ಸಾಯಿಬಾಬಾ ಕ್ಷೇತ್ರದಲ್ಲಿ ಅನ್ನ ಸಂತರ್ಪಣೆ ಸೇವೆಯನ್ನು ನೀಡುತ್ತಿರುತ್ತಾರೆ. ಸೇವಾರ್ಥಿಗಳು ಸೇವೆ ನೀಡಲು ಇಚ್ಚಿಸಿದಲ್ಲಿ +91 81975 74625, 9743010099 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜನಸಾಮಾನ್ಯರಿಗೆ ಅತ್ಯುತ್ತಮ ಅಂಚೆ ವಿಮಾ ಯೋಜನೆ -ಸುಧಾಕರ ಮಲ್ಯ

ಮಂಗಳೂರು,ಸೆ.1; ಅಂಚೆ ಅಪಘಾತ ವಿಮಾ ಯೋಜನೆ ದೇಶದ ಅತ್ಯುತ್ತಮ ಸರಳವಾದ ಜನಸಾಮಾನ್ಯರ ಕೈಗೆಟುಕುವ ವಿಮಾ ಯೋಜನೆಯಾಗಿದೆ ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ತಿಳಿಸಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಇದರ ನೇತೃತ್ವದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗೆ ಪತ್ರಕರ್ತರ ಕ್ಷೇಮಾ ಭಿವೃದ್ಧಿ ಯೋಜನೆಯಿಂದ ಪತ್ರಿಕಾ ಭವನದ ಲ್ಲಿ ರವಿವಾರ ಹಮ್ಮಿಕೊಂಡ ಅಂಚೆ ಅಪಘಾತ ವಿಮಾಯೋಜನೆಯ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾ ಡುತ್ತಿದ್ದರು.ಭಾರತೀಯ ಅಂಚೆ ಇಲಾಖೆಯು ದೇಶಾದ್ಯಂತ ಒಂದು ಲಕ್ಷ ಅರುವತ್ತನಾಲ್ಕು ಸಾವಿರ ಅಂಚೆ ಕಚೇರಿಗಳನ್ನು ಹೊಂದಿರುವ ಬಲಿಷ್ಠವಾದ ಸೇವಾ ಜಾಲವನ್ನು ಹೊಂದಿದೆ. ನೂತನ ಅಂಚೆ ಪಾವತಿ ಬ್ಯಾಂಕ್ ಆರು ವರ್ಷ ಪೂರ್ಣ ಗೊಳಿಸಿ 7ನೆ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ.ಅಂಚೆ ಇಲಾಖೆಯ ಅಪಘಾತ ವಿಮಾಯೋಜನೆ ಆದಿತ್ಯ ಬಿರ್ಲಾ ಸಂಸ್ಥೆಯ ಜೊತೆ ಒಡಂಬಡಿಕೆಯೊಂದಿಗೆ ಜಾರಿಯಾಗಿದೆ ಇದನ್ನು ಇದು 10 ಮತ್ತು 15ಲಕ್ಷ ರೂಪಾಯಿ ಮೊತ್ದ ಅಪಘಾತ ವಿಮಾಯೋಜನೆಗೆ ಕ್ರಮವಾಗಿ ರೂ. 549,ರೂ.749 ವಿಮಾ ಕಂತು ಪಾವತಿಸಿದ ಬಳಿಕ ಯಾವುದೇ ಅಂಚೆ ಕಚೇರಿಯ ಮೂಲಕ ದಾಖಲೆ ಸಲ್ಲಿಸಿ ಸಣ್ಣ ಪುಟ್ಟ ಅಪಘಾತ ಸಂಭವಿಸಿದಾಗ ನಿರ್ದಿಷ್ಟ ವಿಮಾ ಪರಿಹಾರ ಮೊತ್ತ ಪಡೆಯಬಹುದು. ಶಾಶ್ವತ ಅಂಗ ವೈಕಲ್ಯದ ಸಂದರ್ಭದಲ್ಲಿ ಮತ್ತು ಮರಣ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ವಿಮಾ ಮೊತ್ತ ಪಡೆಯಬಹುದು.ಇದಲ್ಲದೆ ಅಂಚೆ ಪಾವತಿ ಬ್ಯಾಂಕ್ ಆದ ಬಳಿಕ ಭಾರತೀಯ ಅಂಚೆ ಇಲಾಖೆ ಆಧಾರ್ ನೋಂದಣಿ, ಠೇವಣಿ ಸ್ವೀಕಾರ,ಕೇಂದ್ರ ಸರಕಾರದ ವಿವಿಧ ಯೋಜನೆ,ಸುಕನ್ಯಾ ಸಮೃದ್ಧಿ,ಮಹಿಳಾ ಸಮ್ಮಾನ್,ಕಿಸಾನ್ ವಿಕಾಸ್ ಸರ್ಟಿಫಿಕೇಟ್ ,ಅಟಕ್ ಪೆನ್ಷನ್ ಯೋಜನೆ ಸೇರಿದಂತೆ ವಿಸ್ತೃತ ವಾದ ಸೇವೆ ನೀಡುತ್ತಿದೆ ಎಂದು ಸುಧಾಕರ ಮಲ್ಯ ವಿವರಿಸಿದರು.ಪತ್ರಕರ್ತರಿಗೆ ವಿಮಾ ನೋಂದಾವಣೆ ಉಚಿತ ವಾಗಿದೆ.ಪ್ರತಿಯೊಬ್ಬರ ವಿಮಾ ವಾರ್ಷಿಕ ಪಾಲಿಸಿ ರೂ.549 ವೆಚ್ಚವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆ ಯಿಂದ (ಒಂದು ವರ್ಷಕ್ಕೆ ) ಪಾವತಿಸ ಲಾಗುತ್ತಿದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾಹಿತಿ ನೀಡಿದ್ದಾರೆ.ಸಮಾರಂಭದಲ್ಲಿ ಇಂಡಿಯನ್ ಪೋಸ್ಟಲ್ ಬ್ಯಾಂಕ್ ಮಂಗಳೂರು ಇದರ ವ್ಯವಸ್ಥಾಪಕರಾದ ಶಿಯಾಝ್ ಬಿ,, ಭಾರತೀಯ ಅಂಚೆ ಇಲಾಖೆಯ ಮಂಗಳೂರು ಪ್ರದಾನ ಅಂಚೆ ಕಚೇರಿಯ ಅಸಿಸ್ಟೆಂಟ್ ಪೋಸ್ಟ ಮಾಸ್ಟರ್, ಎಚ್ .ಆರ್. ಚಂದ್ರಶೇಖ ರ್ ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ನಿಕಟ ಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಹಿರಿಯ ಪತ್ರಕರ್ತ ರಾದ ಆನಂದ ಶೆಟ್ಟಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮ ಕೃಷ್ಣ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ಆರಿಫ್ ಪಡುಬಿದ್ರೆ,ಸಂದೇಶ್ ಜಾರ,ಸತೀಶ್ ಇರಾ ಮೊದಲಾದವರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

Scroll to Top