Author name: editor

ಪ್ರಾದೇಶಿಕ ವಾರ್ತೆಗಳು

ಬೊಂಡಾಲ ಪ್ರಶಸ್ತಿಗೆ ಹಾಸ್ಯಗಾರ ರವಿಶಂಕರ್ ವಳಕುಂಜ ಆಯ್ಕೆ. ಫೆ.14ರಂದು ಬೊಂಡಾಲದಲ್ಲಿ ಪ್ರಶಸ್ತಿ ಪ್ರದಾನ

ಮಂಗಳೂರು: ಹಿರಿಯ ಯಕ್ಷಗಾನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ದನ ಶೆಟ್ಟಿ ಹಾಗೂ ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ‌. ಬೊಂಡಾಲ ರಾಮಣ್ಣ ಶೆಟ್ಟಿಯವರ ಸ್ಮರಣಾರ್ಥ ನೀಡಲಾಗುವ ‘ಬೊಂಡಾಲ ಪ್ರಶಸ್ತಿ’ಗೆ ಕಟೀಲು ಮೇಳದ ಕಲಾವಿದ,ಯಕ್ಷಗಾನ ಹಾಸ್ಯಗಾರ ರವಿಶಂಕರ ವಳಕುಂಜ ಅವರು ಆಯ್ಕೆಯಾಗಿದ್ದಾರೆ. ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗಾಗಿ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆ ಸಮಿತಿ 2024 – 25ನೇ ಸಾಲಿಗೆ ವಳಕುಂಜ ಅವರ ಹೆಸರನ್ನು ಅಂತಿಮಗೊಳಿಸಿದೆ. ಪ್ರಶಸ್ತಿಯು ರೂ.10,000/- ನಗದು, ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ರವಿಶಂಕರ್ ವಳಕುಂಜ:ಕಾಸರಗೋಡು ಬದಿಯಡ್ಕದ ನಿವೃತ್ತ ಶಿಕ್ಷಕ ಮತ್ತು ಅರ್ಥಧಾರಿ ದಿ.ಸುಬ್ರಹ್ಮಣ್ಯ ಭಟ್ ಮತ್ತು ಲಕ್ಷ್ಮೀ ಅಮ್ಮ ದಂಪತಿಗೆ ಜನಿಸಿದ ರವಿಶಂಕರ ವಳಕುಂಜ ಅವರು ಕಳೆದ 27 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಟ್ಯಗುರು ಉಂಡೆಮನೆ ಶ್ರೀಕೃಷ್ಣ ಭಟ್ ಅವರಿಂದ ಯಕ್ಷಗಾನ ನೃತ್ಯಾಭ್ಯಾಸ ಮಾಡಿದ ರವಿಶಂಕರ ಭಟ್ ತನ್ನ ಸೋದರಮಾವ ಹಾಸ್ಯರತ್ನ ನಯನಕುಮಾರ್ ಅವರಿಂದ ಹಾಸ್ಯಗಾರನ ಪಟ್ಟುಗಳನ್ನು ಕಲಿತುಕೊಂಡರು.ಮೊದಲ ಮೂರು ವರ್ಷ ಕಟೀಲು ಒಂದನೇ ಮೇಳದಲ್ಲಿ ವೇಷಧಾರಿಯಾಗಿದ್ದ ಅವರು ಬಳಿಕ ಮುಖ್ಯ ಹಾಸ್ಯಗಾರನಾಗಿ ಭಡ್ತಿ ಪಡೆದು ನಾಲ್ಕನೇ ಮೇಳಕ್ಕೆ ಸೇರ್ಪಡೆಗೊಂಡರು. ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಕುಬಣೂರು ಶ್ರೀಧರ ರಾವ್, ಪಟ್ಲ ಸತೀಶ್ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಸಂಪಾಜೆ ಶೀನಪ್ಪ ರೈ, ಪೆರುವಾಯಿ ನಾರಾಯಣ ಶೆಟ್ಟಿ, ಮಂಜೇಶ್ವರ ಜನಾರ್ದನ ಜೋಗಿ, ಸುಣ್ಣಂಬಳ ವಿಶ್ವೇಶ್ವರ ಭಟ್, ತೊಡಿಕಾನ ವಿಶ್ವನಾಥ ಗೌಡ ಮೊದಲಾದ ಪ್ರಸಿದ್ಧರ ಒಡನಾಟದಿಂದ ಓರ್ವ ಪ್ರಬುದ್ಧ ಕಲಾವಿದರಾಗಿ ರೂಪುಗೊಂಡರು.ಬಾಹುಕ, ಸಂಜಯ, ಅಕ್ರೂರ, ಬೃಹಸ್ಪತಿ, ಮಕರಂದ, ವಿಜಯ, ಮೂಕಾಸುರ, ನಾರದ… ಇತ್ಯಾದಿ ಹಾಸ್ಯ ಪಾತ್ರಗಳಲ್ಲಿ ಅವರದೇ ಆದ ಛಾಪನ್ನು ಮೂಡಿಸಿದ ವಳಕುಂಜರು ಓರ್ವ ಲೇಖಕನಾಗಿ ಮತ್ತು ಯಕ್ಷಗಾನ ಸಂಬಂಧೀ ವಿಷಯಗಳ ಸಂಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. ಯಕ್ಷಗಾನ ವಾಚಿಕ ಸಮಾರಾಧನೆ (ಭಾಗ ೧-೨), ಯಕ್ಷಗಾನ ಪ್ರಸಂಗ ದೃಶ್ಯಾವಳೀ (ಭಾಗ ೧-೨), ಯಕ್ಷ ಪಾತ್ರ ದೀಪಿಕಾ, ಯಕ್ಷಗಾನ ಪ್ರಸಂಗಗಳಲ್ಲಿ ‘ನಾರದ’ – ಹೀಗೆ 6 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಯಕ್ಷಗಾನ ಕಲಾವಿದರನ್ನು ಸಂದರ್ಶಿಸಿ ಸಿದ್ಧಪಡಿಸಿರುವ ಪುಸ್ತಕ ಮುದ್ರಣ ಹಂತದಲ್ಲಿದೆ.ಯಕ್ಷಗಾನದ ಅಭಿಮಾನಿಗಳು ಮತ್ತು ಸಂಸ್ಥೆಗಳಿಂದ ವಿವಿಧೆಡೆ ಸನ್ಮಾನಿತರಾಗಿರುವ ರವಿಶಂಕರ್ ಪ್ರಸ್ತುತ ಪುತ್ತೂರು ತಾಲೂಕಿನ ಮಾಡಾವಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.ಪ್ರಶಸ್ತಿ ಪ್ರದಾನ:ಫೆಬ್ರವರಿ 13ರಂದು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ ವತಿಯಿಂದ ಹತ್ತು ಸಮಸ್ತರ ಆಶ್ರಯದಲ್ಲಿ ಕಟೀಲು ಮೇಳದವರಿಂದ ‘ಹನುಮೋದ್ಭವ, ವೀರಮಣಿ ಮತ್ತು ಮಹಿರಾವಣ ಕಾಳಗ’ ಹಾಗೂ ಫೆ.14ರಂದು ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟಗಳು ನಡೆಯಲಿವೆ. ಫೆ. 14ರಂದು ರಾತ್ರಿ ಬಯಲಾಟದ ರಂಗಸ್ಥಳದಲ್ಲಿ ಜರಗುವ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು, ಕಟೀಲು ಕ್ಷೇತ್ರದ ಆಸ್ರಣ್ಣರು ಮತ್ತು ವಿಶೇಷ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು ಎಂದು ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಫೆ.9 ರಂದು ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ದಿನಾಚರಣೆ ಫೆ.9ರಂದು ಬೆಳಗ್ಗೆ 10ಕ್ಕೆ ನಗರದ ಮೋರ್ಗನ್ಸ್‌ಗೇಟ್ಬಳಿಯ ಪಾಲೆಮಾರ್ ಗಾರ್ಡನ್‌ಮಲ್ಲಿ ನಡೆಯಲಿದೆ. ಮಾಜಿ ಮೇಯರ್, ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಇಂಡಿಯಾದ ಜನರಲ್ ಮ್ಯಾನೇಜರ್ ದಿವಾಕರ್ ಕದ್ರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 2024ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆಆಯ್ಕೆಯಾಗಿರುವ ಮನಪಾ ಕಾರ್ಪೋರೇಟರ್ ಗಣೇಶ್ ಕುಲಾಲ್ ಇವರಿಗೆ ಮಾಜಿ ಸಚಿವ ಕೃಷ್ಣ.ಜೆ.ಪಾಲೆಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಅವರು ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಹಾಗೂ ಪ್ರೆಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಆನಂದ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಉಡುಪಿಯ ಪಲಿಮಾರು ಮಠದ ಪೂಜ್ಯ ಸ್ವಾಮೀಜಿಯವರೊಂದಿಗೆ ಪ್ರಯಾಗ್ ರಾಜ್‌ ಕುಂಭ ಮೇಳದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ

ಮಂಗಳೂರು: ಮಹಾಕುಂಭ ಮೇಳದಲ್ಲಿ ಪ್ರಯಾಗ್ ರಾಜ್ ನ ಪಲಿಮಾರು ಮಾಧ್ವ ಮಠದಲ್ಲಿ ಶ್ರೀ ಶ್ರೀ ಶ್ರೀ ವಿಧ್ಯಾಧೀಶ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಅಧ್ಯಕ್ಷರಾದ ಸತೀಶ್ ಶೆಟ್ಟಿ ಪಟ್ಲ ನೇತೃತ್ವದ ಕೇಂದ್ರೀಯ ಸಮಿತಿಯ ತಂಡವನ್ನು ಪೂಜ್ಯ ಸ್ವಾಮೀಜಿಯವರ ಶಿಷ್ಯ ವೃಂದದವರು ಆತ್ಮೀಯವಾಗಿ ಸ್ವಾಗತಿಸುವುದರೊಂದಿಗೆ ಊಟ ಫಲಹಾರಗಳನ್ನು ನೀಡಿ ಸತ್ಕರಿಸಿದರು. ಹಾಗೂ ಬ್ರಾಹ್ಮೀ ಮುಹೂರ್ತದಲ್ಲಿ ತ್ರಿವೇಣಿ ಸಂಗಮದ ಪುಣ್ಯ ತೀರ್ಥ ಸ್ನಾನವು ಸ್ವಾಮೀಜಿಯವರನೇತೃತ್ವದಲ್ಲಿ ನೆರವೇರಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಕೋಶಾಧಿಕಾರಿ ಸಿಎ ಸುರೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಅಶೋಕನಗರ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ತಂಡದಲ್ಲಿದ್ದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಫೆ.8ರಂದು ಸದಾಶಿವ ಶೆಟ್ಟಿ ಸೇವಾ ಬಳಗದ ವತಿಯಿಂದ ಸಹಾಯ ಹಸ್ತ ಮತ್ತು ಉಚಿತ ಅರೋಗ್ಯ ವಿಮೆ ಉದ್ಘಾಟನೆ

ಮಂಗಳೂರು: “ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿ ವತಿಯಿಂದ ಫೆ.8ರಂದು ಶನಿವಾರ ಸಂಜೆ 4 ಗಂಟೆಯಿಂದ ಮೀಂಜ ಬಂಟರ ಸಂಘ ಮೈದಾನ ಚಿಗುರುಪಾದೆಯಲ್ಲಿ ನಡೆಯುವ ಸದಾಶಿವ ಸಹಾಯ ಹಸ್ತ ವಿತರಣೆ ಮತ್ತು ಉಚಿತ ಅರೋಗ್ಯ ವಿಮೆ ಉದ್ಘಾಟನೆ ಹಾಗೂ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಹಾಗೂ ಹಿತೈಷಿಗಳಿಂದ ತುಳುನಾಡ ಕಣ್ಮಣಿ, ಕೊಡುಗೈ ದಾನಿ ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಸದಾಶಿವ ಶೆಟ್ಟಿ ಕನ್ಯಾನರವರಿಗೆ ಅಭಿನಂದನಾ ಕಾರ್ಯಕ್ರಮವು ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ಜಾನಪದ ನಾಟಕದೊಂದಿಗೆ ಸಮಾರೋಪಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸುಮಾರು 4000ಕ್ಕಿಂತ ಮೇಲ್ಪಟ್ಟು ಜನಸಾಮಾನ್ಯರು ಭಾಗವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಹಾರ ಮತ್ತು ಭೋಜನದ ವ್ಯವಸ್ಥೆ ಇದೆ. ಹಾಗೂ ಈ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ, ಉಚಿತ ಅರೋಗ್ಯ ಕುಟುಂಬ ವಿಮೆ (5 ಲಕ್ಷ) ಆಂಬುಲೆನ್ಸ್ ಹಸ್ತಾಂತರ, ಶಾಲಾ ವಾಹನ ಹಸ್ತಾಂತರ, ಶಾಲಾ ಅಭಿವೃದ್ಧಿಗೆ ಸಹಾಯ, ಅಂಗವಿಕಲರಿಗೆ ಕೃತಕ ಕಾಲು, ವೀಲ್‌ ಚೇರ್, ಹೊಲಿಗೆ ಮಿಷನ್, ಕ್ಯಾನ್ಸ‌ರ್ ರೋಗಿಗಳಿಗೆ ಹಾಗೂ ಇತರ ರೋಗಿಗಳಿಗೆ ವಿಶೇಷ ಸಹಕಾರ ನಡೆಯಲಿದೆ“ ಎಂದು ಸೇವಾ ಬಳಗದ ಉಪಾಧ್ಯಕ್ಷ ಕೆ. ನಾರಾಯಣ್ ನಾಯ್ಕ್ ನಡುಹಿತ್ತಿಲು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪಲ್ಲ ಕುಂಬಳೆ ಇದರ ಆಡಳಿತ ಮೊತ್ತೇಸರರಾದ ಕೆ.ಕೆ. ಶೆಟ್ಟಿ ಕುತ್ತಿಕ್ಕಾರ್ ವಹಿಸಲಿರುವರು. ಆಶೀರ್ವಚನವನ್ನು ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇವರು ನೀಡಲಿರುವರು.ಉದ್ಘಾಟನೆಯನ್ನು ಗೌರವಾನ್ವಿತ ವಿಧಾನ ಸಭಾ ಅಧ್ಯಕ್ಷರಾದ ಎ.ಎನ್.ಶಂಸೀರ್ ಮಾಡಲಿರುವರು. ಸಹಾಯ ಹಸ್ತ ಆರೋಗ್ಯ ವಿಮ ಉದ್ಘಾಟನೆಯನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಮಾಡಲಿರುವರು.ಡಾ.ಎಂ.ಶಾಂತಾರಾಮ್ ಶೆಟ್ಟಿ, ರೆ.ಫಾದರ್ ಮೆಲ್ವಿನ್ ಜೋಸೆಫ್ ಪಿಂಟೋ ಎಸ್‌ಜೆ, ಉಸ್ತಾದ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಉಪಸ್ಥಿತಿಯಿರಲಿದ್ದಾರೆ.ಮುಖ್ಯಅತಿಥಿಯಾಗಿ ಸ್ಪೀಕರ್ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಕಾಸರಗೋಡು ಎಸ್ಪಿ ಡಿ.ಶಿಲ್ಪಾ, ರಘುರಾಮ್ ಶೆಟ್ಟಿ ಕುಳೂರು ಕನ್ಯಾನ, ಸುಜಾತ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸತೀಶ್ ಕುಂಪಲ, ಐಕಳ ಹರೀಶ್ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ಸತೀಶ್ ಶೆಟ್ಟಿ ಪಟ್ಲ , ಐ.ಸುಬ್ಬಯ್ಯ ರೈ, ಗುರುಕಿರಣ್, ರಕ್ಷಿತ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ, ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.ಚಿತ್ರಗಳು ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

“ಫೆ.22ರಂದು ಹೊಂಬೆಳಕು ಎರಡನೇ ಆವೃತ್ತಿಯ ಕಾರ್ಯಕ್ರಮ“-ಮಂಜುನಾಥ ಭಂಡಾರಿ

ಮಂಗಳೂರು: “ಫೆ.22ರಂದು ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಠಾನದ ಆಶ್ರಯದಲ್ಲಿ ಎರಡನೇ ಆವೃತ್ತಿಯ “ಹೊಂಬೆಳಕು“ ಕಾರ್ಯಕ್ರಮ ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 355 ಗ್ರಾಮ ಪಂಚಾಯತ್ ನ 6082 ಮಂದಿ ಚುನಾಯಿತ ಸದಸ್ಯರಿದ್ದಾರೆ. 2000-2500 ಮಂದಿ ಪಂಚಾಯತ್ ನೌಕರರಿದ್ದಾರೆ. ಅವರೆಲ್ಲರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತಿಗಳ ಸಹಕಾರದೊಂದಿಗೆ ಹೊಂಬೆಳಕು ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ“ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಸಂಘಟನೆಯ ಅಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಳೆದ ಬಾರಿ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಡೆದಿದ್ದ ಮೊದಲನೇ ಆವೃತ್ತಿಯ ಕಾರ್ಯಕ್ರಮದಲ್ಲಿ 6000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿತ್ತು. ಹೀಗಾಗಿ ಮತ್ತದೇ ಉತ್ಸಾಹದಿಂದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರಲು ಒಪ್ಪಿಗೆ ಸೂಚಿಸಿದ್ದಾರೆ. ಅಧಿಕಾರಿಗಳನ್ನು ಹಾಗೂ ಪಕ್ಷ ಬೇಧವಿಲ್ಲದೆ ಎಲ್ಲ ಜನಪ್ರತಿನಿಧಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು. ಗ್ರಾಮ ಪಂಚಾಯತ್ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಜನರಿಗೆ ಬಹಳಷ್ಟು ಹತ್ತಿರವಾಗಿರುವವರು. ಅವರನ್ನು ರಿಲ್ಯಾಕ್ಸ್ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಶಿಸ್ತುಬದ್ಧ ಪ್ರಥಮ ತಂಡಕ್ಕೆ 50,000 ರೂ., ದ್ವಿತೀಯ 25,000 ರೂ. ಬಹುಮಾನ ನೀಡಲಾಗುವುದು. ಪಥ ಸಂಚಲನಕ್ಕೆ ನನ್ನ ಕನಸಿನ ಭಾರತ, ಗ್ರಾಮ ಸ್ವರಾಜ್ಯ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಥೀಮ್ ಅನ್ನು ನೀಡಲಾಗಿದೆ.ವಾಲಿಬಾಲ್, ಉಪ್ಪಿನ ಮೂಟೆ, ಲಿಂಬೆ ಚಮಚ ಇತ್ಯಾದಿ ಕ್ರೀಡೆಗಳ ಜೊತೆಗೆ ದೇಶಭಕ್ತಿಗೀತೆ, ಸಮೂಹ ನೃತ್ಯ, ಜಾನಪದ ನೃತ್ಯ ಇತ್ಯಾದಿ ಸ್ಪರ್ಧೆ ಇರಲಿದೆ.ಪ್ರತೀ ತಾಲೂಕಿನ ಉತ್ತಮ ಗ್ರಾಮ ಪಂಚಾಯತ್ ಗೆ ಪುರಸ್ಕಾರ ನೀಡಲಾಗುವುದು. ಕ್ರೀಡಾಳುಗಳಿಗೆ ಟಿ ಶರ್ಟ್, ಊಟ ಉಪಚಾರ ವ್ಯವಸ್ಥೆ ಇರಲಿದೆ.ಕಳೆದ ಬಾರಿ ಸರಕಾರದಿಂದ 10 ಲಕ್ಷ ರೂ. ಹಣ ಬಂದಿತ್ತು, ಈ ಬಾರಿ ಹೆಚ್ಚಿನ ಅನುದಾನದ ಭರವಸೆ ಇದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ ಕುಳಾಲು, ಗೌರವ ಸಲಹೆಗಾರ ಹರೀಶ್ ಕುಮಾರ್, ಲಾರೆನ್ಸ್ ಡಿಸೋಜ, ಪ್ರವೀಣ್ ಆಳ್ವ, ಟ್ರಸ್ಟ್ ಸದಸ್ಯ ಅನಿಲ್ ಕುಮಾರ್, ಸುರೇಂದ್ರ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಶತಮಾನೋತ್ಸವ ಸಮಾರಂಭದ ಉದ್ಘಾಟನೆ

ಎಸ್.ಎಸ್.ವಿ.ಪಿ. ಎಂದು ಜನಪ್ರಿಯವಾಗಿರುವ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ, ಮಂಗಳೂರು ಕ್ಯಾಥೊಲಿಕ್ ಧರ್ಮಸಭೆಯಲ್ಲಿ ತನ್ನ ಅಸ್ತಿತ್ವದ ನೂರು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. ಇದೇ 2025ರ ಫೆಬ್ರವರಿ 9ರ ಭಾನುವಾರದಂದು ಬಿಜೈ ಚರ್ಚ್ ಸಭಾಂಗಣದಲ್ಲಿ ಶತಮಾನೋತ್ಸವದ ಉದ್ಘಾಟನೆ ನೆರವೇರಲಿದೆ. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಞರ್ ಅತೀ ವಂದನೀಯ ಫಾ| ಮ್ಯಾಕ್ಸಿಮ್ ನೊರೊನ್ಹಾರವರು ಶತಮಾನೋತ್ಸವದ ಲಾಂಛನವನ್ನು ಬಿಡುಗಡೆ ಮಾಡಲಿದ್ದಾರೆ. ಮಂಗಳೂರ್ ಸೆಂಟ್ರಲ್ ಕೌನ್ಸಿಲ್‌ನ ಆಧ್ಯಾತ್ಮಿಕ ಸಲಹೆಗಾರ ವಂದನೀಯ ಫಾ| ಫ್ರಾನ್ಸಿಸ್ ಡಿಸೋಜಾರವರು ಶತಮಾನೋತ್ಸವದ ಘೋಷಣಾ ವಾಕ್ಯವನ್ನು ಬಿಡುಗಡೆ ಮಾಡುವರು. ಬಿಜೈ ಚರ್ಚ್ನ ಧರ್ಮಗುರು ವಂದನೀಯ ಫಾ| ಡಾ| ಜೆ.ಬಿ.ಸಲ್ಡಾನ್ಹಾ ಇವರು ಶತಮಾನೋತ್ಸವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪಶ್ಚಿಮ ಭಾರತದ ಪ್ರಾದೇಶಿಕ ಮಂಡಳಿಯ ಸಂಯೋಜಕ ಬ್ರ| ವಾಲ್ಟರ್ ಮಾರ್ಟಿಸ್, ಸೆಂಟ್ರಲ್ ಕೌನ್ಸಿಲ್ ಇದರ ಮಾಜಿ ಅಧ್ಯಕ್ಷ ಬ್ರ| ಗಿಲ್ಬರ್ಟ್ ಪಿಂಟೊ, ಸೆಂಟ್ರಲ್ ಕೌನ್ಸಿಲ್ ಹಾಲಿ ಅಧ್ಯಕ್ಷ ಬ್ರ| ಜ್ಯೋ ಕುವೆಲ್ಲೊ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.ವಿಶ್ವದ ಅತಿ ದೊಡ್ಡ ಕ್ಯಾಥೊಲಿಕ್ ಸಮಾನ ಮನಸ್ಕ ಸೇವಾ ಸಂಸ್ಥೆಯಾದ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರಿನ ಬೆಂದೂರ್ ಚರ್ಚ್ನಲ್ಲಿ ಜನವರಿ 1926ರಲ್ಲಿ ಅಸ್ತಿತ್ವಕ್ಕೆ ಬಂತು. ಅದೇ ತಿಂಗಳಲ್ಲಿ ಮಿಲಾಗ್ರಿಸ್ ಘಟಕದ ಸ್ಥಾಪನೆಯಾಯಿತು. ನಂತರ 1926 ಇಸವಿಯ ಮೇ ತಿಂಗಳಲ್ಲಿ ಇನ್ನೂ ಎರಡು ಘಟಕಗಳು ರೊಸಾರಿಯೊ ಕೆಥಡ್ರಾಲ್ ಮತ್ತು ಬಿಜೈ ಚರ್ಚ್ನಲ್ಲಿ ಅಸ್ತಿತ್ವಕ್ಕೆ ಬಂದವು. ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಪ್ರಮುಖ ಸೇವಾ ಕೆಲಸವೆಂದರೆ ಬಡವರು ಮತ್ತು ನಿರ್ಗತಿಕರನ್ನು ಬೇಟಿಯಾಗುವುದು ಮತ್ತು ಅವರಿಗೆ ತಮ್ಮದೇ ಪರಿಸರದಲ್ಲಿ ಪರಿಹಾರವನ್ನು ವಿತರಿಸುವುದು. ಹೀಗೆ ಪರಿಹಾರವನ್ನು ವಿತರಿಸುವಾಗ ಎಸ್.ಎಸ್.ವಿ.ಪಿ. ಅವರ ಆತ್ಮಗೌರವ ಮತ್ತು ಅನಾಮಧೇಯತೆಯನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಪ್ರತೀ ಘಟಕವು ತಮ್ಮ ಪರಿಸರದಲ್ಲಿ ಕನಿಷ್ಠ 5 ಕುಟಂಬಗಳನ್ನು ದತ್ತು ಪಡೆದು ಅವರನ್ನು ತಮ್ಮದೇ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಇಂದು ಮಂಗಳೂರು ಸೆಂಟ್ರಲ್ ಕೌನ್ಸಿಲ್ ಇದರ ಆಶ್ರಯದಲ್ಲಿ ಸೇವೆ ಮಾಡುವ ಘಟಕಗಳು, 623 ದತ್ತು ಕುಟಂಬಗಳನ್ನು ಹಾಗೂ 1765 ಕುಟಂಬದ ಸದಸ್ಯರನ್ನು ಹೊಂದಿದೆ. 1926 ಇಸವಿಯಲ್ಲಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರಿನಲ್ಲಿ ಅಸ್ತಿತ್ವಗೊಂಡ ಮೇಲೆ ಅದು ಇಡೀ ಮಂಗಳೂರು ಧರ್ಮಪ್ರಾಂತ್ಯಕ್ಕೆಹರಡಿದೆ. ಇಂದು ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ 111 ಘಟಕಗಳು ಮತ್ತು 3 ಯುವ ಘಟಕಗಳು ಸಕ್ರೀಯವಾಗಿವೆ. 1539 ಸದಸ್ಯ ಬಲ ಹೊಂದಿರುವ ಎಸ್.ಎಸ್.ವಿ.ಪಿ. ಬಡವರ ಸೇವೆಯಲ್ಲಿ ಯಾವುದೇ ಪ್ರಚಾರವಿಲ್ಲದೆ ತೊಡಗಿಸಿಕೊಂಡಿದೆ. ಪ್ರಸ್ತುತ ಎಸ್.ಎಸ್.ವಿ.ಪಿ.ಯ ವಜ್ರಮಹೋತ್ಸವ ಆರೋಗ್ಯ ಯೋಜನೆ ತುಂಬಾ ಜನಪ್ರಿಯವಾಗಿದೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಮಂಗಳೂರು ಮತ್ತು ತುಂಬೆ ಇವರ ಸಹಯೋಗದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯು ದತ್ತು ಪಡೆದ ಕುಟುಂಬಗಳ ಸದಸ್ಯರಿಗೆ ಉಚಿತ ವೈದ್ಯಕೀಯ ಮತ್ತು ಡಯಾಲಿಸಿಸ್ ಆರೈಕೆಯನ್ನು ಒದಗಿಸುತ್ತದೆ.ಶತಮಾನೋತ್ಸವದ ಸವಿನೆನಪಿಗಾಗಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳಲ್ಲಿ ಪ್ರಮುಖ ಯೋಜನೆಗಳೆಂದರೆ, ಎಸ್.ಎಸ್.ವಿ.ಪಿ.ಯ ದತ್ತು ಕುಟಂಬಗಳ ಸುಮಾರು 405 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು. ಆಸ್ರೊ – ನೂರು ಕುಟಂಬಗಳಿಗೆ ತಮ್ಮ ಮನೆಗಳನ್ನು ನಿರ್ಮಿಸಲು ಅಥವಾ ದುರಸ್ತಿ ಮಾಡಲು ಧನ ಸಹಾಯ.ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಇತಿಹಾಸ:1833 ಇಸವಿಯಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್‌ನ 22 ವರ್ಷದ ತರುಣ ಪೂಜ್ಯ ಫ್ರೆಡ್ರಿಕ್ ಒಜಾನಮ್ ಮತ್ತು ಅವರ 6 ಒಡನಾಡಿಗಳು ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯನ್ನು ಸ್ಥಾಪಿಸಿದರು. ಇಂದು ಇದು ವಿಶ್ವದ 158 ದೇಶಗಳಲ್ಲಿ ಹರಡಿದೆ. 8 ಲಕ್ಷಕ್ಕೂ ಅಧಿಕ ಸದಸ್ಯರು ಮತ್ತು ಹತ್ತು ಲಕ್ಷಕ್ಕೂ ಮಿಕ್ಕಿ ಸ್ವಯಂಸೇವಕರು ದೀನ ದಲಿತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ 1863 ಇಸವಿಯಲ್ಲಿ ಮುಂಬಯಿಯಲ್ಲಿ ಸ್ಥಾಪನೆಗೊಂಡು, ಪ್ರಸ್ತ್ತುತ ಭಾರತದಲ್ಲಿ 7225 ಘಟಕಗಳು ಮತ್ತು 65546 ಸದಸ್ಯರನ್ನು ಹೊಂದಿದೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಅಮೇರಿಕಾ ದ ಉದ್ಯಮಿಯಿಂದ 1.25 ಕೋಟಿ ದೇಣಿಗೆ

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ಪರಮಭಕ್ತರೂ,ಪಟ್ಲ ಸತೀಶ್ ಶೆಟ್ಟಿಯವರ ಕಟ್ಟಾ ಅಭಿಮಾನಿ ಶ್ರೀ ಶಾರದಾ ಪ್ರಸಾದ್ ರವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನಳಿನಿ ಪ್ರಸಾದ್ ರವರು ಪಟ್ಲ ಸತೀಶ್ ಶೆಟ್ಟಿಯವರ ಗೃಹಪ್ರವೇಶಕ್ಕೆ ಆಗಮಿಸಿ ಅವರು ಮಾಡುವ ಸತ್ಕಾರ್ಯಗಳನ್ನು ಮೆಚ್ಚಿ ಗೃಹಪ್ರವೇಶದ ಶುಭದಿನವೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೆ ಒಂದು ಕೋಟಿ ಇಪ್ಪತ್ತೈದು ಲಕ್ಷ ಮೊತ್ತದ ದೇಣಿಗೆಯನ್ನು ನೀಡಿ ಆಶೀರ್ವದಿಸಿದರು.ಸಂಜೆ ನಡೆದ ಪಾವಂಜೆ ಮೇಳದ ಶ್ರೀ ದೇವಿಮಹಾತ್ಮೆ ಯಕ್ಷಗಾನದ ಸಂದರ್ಭದಲ್ಲಿ ಶ್ರೀ ಶಾರದಾಪ್ರಸಾದ್ ಹಾಗೂ ಶ್ರೀಮತಿ ನಳಿನಿ ಶಾರದಾ ಪ್ರಸಾದ್ ದಂಪತಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಆಡಳಿತ ಮೊಕ್ತೇಸರರು ಶಶೀ0ದ್ರ ಕುಮಾರ್ , ಪಟ್ಲ ಫೌಂಡೇಶನ್ ಪದಾಧಿಕಾರಿಗಳಾದ ಪಟ್ಲ ಗುತ್ತು ಮಹಾಬಲ ಶೆಟ್ಟಿ,CA ಸುದೇಶ್ ಕುಮಾರ್ ರೈ, CA ದಿವಾಕರ್ ರಾವ್, ಡಾ. ಸತೀಶ್ ಭಂಡಾರಿ, ಪ್ರದೀಪ್ ಆಳ್ವ ಕದ್ರಿ, ಲಕ್ಷ್ಮೀಶ್ ಭಂಡಾರಿ (ಭಂಡಾರಿ ಬಿಲ್ಡರ್ಸ್ ),ಉಪಸ್ಥಿತರಿದ್ದರು.

Scroll to Top