ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ವಿಶ್ವ ಬಂಟರ ಐಕ್ಯತೆಯಲ್ಲಿ ಮೌನ ಕ್ರಾಂತಿ ಮಾಡಿದ ಮಾಧ್ಯಮ ಸಂಸ್ಥೆ ಬಂಟ್ಸ್ ನೌ – ಪ್ರವೀಣ್ ಭೋಜ ಶೆಟ್ಟಿ ಶ್ಲಾಘನೆ.

ಮಂಗಳೂರು :ಇತ್ತೀಚೆಗೆ ಮಂಗಳೂರು ನಗರದ ಪುರಭವನದಲ್ಲಿ ನಡೆದ ಅದ್ದೂರಿಯ ಕಾರ್ಯಕ್ರಮ ಅಂತರ್ಜಾಲ ಮಾಧ್ಯಮ ಸಂಸ್ಥೆ ಬಂಟ್ಸ್ ನೌ ತಾನು ಒಂದೂವರೆ ದಶಕ ಪೂರೈಸಿದ ಸಂಭ್ರಮವನ್ನು ತ್ರಿಪಂಚಕ ಅನುಬಂಧ ಎಂಬ ವಿಶೇಷ ಶೀರ್ಷಿಕೆಯಡಿ ದೇಶ ವಿದೇಶಗಳ ಪ್ರತಿಷ್ಠಿತ ಘಟಾನುಘಟಿ ಬಂಟ ನಾಯಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸಿ ಜಾಗತಿಕ ಮಟ್ಟದ ಬಂಟ ವಲಯದಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ಅಂದು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಬಂಟ ನಾಯಕ ಮಣಿಗಳನ್ನು ಬಂಟರತ್ನ, ಬಂಟ ವಿಭೂಷಣ ಹಾಗೂ ಯುವ ಬಂಟ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಜೊತೆಗೆ ಕೆಲವು ವಿಶಿಷ್ಟ ಕ್ಷೇತ್ರಗಳಲ್ಲಿ ಸಾಧನೆ ತೋರಿ ಗಮನ ಸೆಳೆಯುತ್ತಿರುವ ವ್ಯಕ್ತಿಗಳನ್ನು ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಸತ್ಕರಿಸಿ ಸ್ಮರಣಿಕೆ ನೀಡಲಾಯಿತು. ರಂಜಿತ್ ಶೆಟ್ಟಿ ಸ್ಥಾಪಿಸಿ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಂಟ್ಸ್ ನೌ ಅಂತರ್ಜಾಲ ಮಾಧ್ಯಮ ಬಂಟ ಬಾಂಧವರ ಚಟುವಟಿಕೆಗಳನ್ನು ಎಚ್ಚರಿಕೆ ಕಣ್ಣುಗಳಿಂದ ಗಮನಿಸುತ್ತಾ ವರದಿ ಮಾಡುವುದರ ಜೊತೆಗೆ ವಿಶೇಷ ಸುದ್ಧಿಗಳು, ವೈಚಾರಿಕ ಸಾಂದರ್ಭಿಕ ಲೇಖನಗಳು, ಅಂಕಣ ಬರಹಗಳು, ವ್ಯಕ್ತಿ ಪರಿಚಯ, ಸಾಧಕರ ಪರಿಚಯ ಹಾಗೂ ಬಂಟ ಬಾಂಧವರ ವ್ಯಾಪಾರ ಉದ್ದಿಮೆಗಳಿಗೆ ಸಂಬಂಧ ಪಟ್ಟ ಜಾಹೀರಾತುಗಳನ್ನು ಪ್ರಕಟಿಸುತ್ತಾ ವಿಶ್ವ ಮಟ್ಟದಲ್ಲಿ ಬಂಟ ಸಮುದಾಯದ ಗಮನ ಸೆಳೆಯುತ್ತಿದೆ. ಮೇ.19 ಮಂಗಳೂರು ಪುರಭವನದಲ್ಲಿ ಮೇಳವಿಸಿ ಕಳೆಗಟ್ಟಿದ ಈ ಸಮಾರಂಭದ ಅಧ್ಯಕ್ಷತೆಯನ್ನು ಬಹು ಪ್ರತಿಷ್ಠಿತ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ವಹಿಸಿದ್ದು, ಬಂಟ್ಸ್ ನೌ ಮಾಧ್ಯಮ ಬಳಗ ಅದರಲ್ಲೂ ಮುಖ್ಯವಾಗಿ ರಂಜಿತ್ ಶೆಟ್ಟಿ ಅವರ ಪರಿಶ್ರಮ ಸಾಧನೆ ಹಾಗೂ ಧ್ಯೇಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತಾಡುತ್ತಾ, ರಂಜಿತ್ ಅವರೊಬ್ಬ ಭಿನ್ನ ಚಿಂತನೆಯ ಆದರ್ಶ ಪತ್ರಕರ್ತ. ಸಮಾಜದವರ ಸಹಕಾರವನ್ನು ಮರೆಯದೆ ಅದರ ಋಣ ಸಂದಾಯ ಜೊತೆಗೆ, ವಿಶ್ವ ಬಂಟರ ಏಕತೆ ಸಮಗ್ರತೆಗೆ ಟೊಂಕ ಕಟ್ಟಿದ ಒಬ್ಬಂಟಿ ಹೋರಾಟಗಾರರು. ಇಂಥವರ ಕೆಲಸಕ್ಕೂ ತೊಡಕುಂಟು ಮಾಡಿ ವಿಘ್ನ ಸಂತೋಷಿಗಳಾಗಿ ಸಂತೋಷ ಪಡುವ ಕೀಳು ಮಾನಸಿಕತೆಗಳೂ ಇವೆ ಎಂಬ ವಿಚಾರ ಖೇದಕರ ಎಂದರಲ್ಲದೇ ರಂಜಿತ್ ದಂಪತಿ ಹಾಗೂ ಅವರ ಬಳಗದ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರು. ಅಂದಿನ ಸುಂದರ ಸಂಧ್ಯಾ ಸಂಧಿಯಲ್ಲಿ ಅನುಸಂಧಿಸಿದ ಅನುಬಂಧ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಗೌರವ ಅತಿಥಿಗಳಾಗಿ ಮಾಜಿ ಲೋಕಾಯುಕ್ತ ಜಸ್ಟಿಸ್ ಶ್ರ ಸಂತೋಷ್ ಹೆಗ್ಡೆ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ವಿಜಯ್ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಸಂತ ಶೆಟ್ಟಿ ಬೆಳ್ಳಾರೆ, ಚಂದ್ರಹಾಸ ಶೆಟ್ಟಿ, ಹರಿಪ್ರಸಾದ್ ರೈ, ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಲೋಕಯ್ಯ ಶೆಟ್ಟಿ, ಭವ್ಯ ಎ ಶೆಟ್ಟಿ ಮೊದಲಾದವರು ಉಪಸ್ಥತರಿದ್ದು ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು. ಅಂದಿನ ಕಾರ್ಯಕ್ರಮದ ಉದ್ಘಾಟಕರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಗೌರವಾಧ್ಯಕ್ಷ ಡಾ.ಎ ಸದಾನಂದ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಹಾಗೂ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮೊದಲಾದವರು ಆಗಮಿಸಿದ್ದರು. ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ರಂಜಿತ್ ಶೆಟ್ಟಿ ಅವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ಬಂಟರ ಒಗ್ಗಟ್ಟನ್ನು ಬಲಪಡಿಸುವುದಾಗಿದ್ದು ಸಮಾಜಕ್ಕೆ ಉಪಕಾರ ಮಾಡಿದ ಸಮಾಜದ ಸದಸ್ಯರನ್ನು ಗುರುತಿಸಿ ಸತ್ಕರಿಸುವುದು ಎಂದರು. ಚೇಳ್ಯಾರುಗುತ್ತು ದಿವಾಕರ್ ಸಾಮಾನಿ ಆಗಮಿಸಿದ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ವಿಶೇಷ ಗೌರವ ಅತಿಥಿಗಳು, ಸಂಮಾನ ಸ್ವೀಕರಿಸಲಿದ್ದ ಗಣ್ಯರನ್ನು ಹಾಗೂ ಸಾಧಕರನ್ನು ಶಾಲು ಹೊದಿಸಿ ಹೆಸರಾಂತ ಲೇಖಕರು ಬರೆದ ಪುಸ್ತಕಗಳನ್ನು ನೀಡಿ ಗೌರವಿಸಿದರು. ಯಕ್ಷಗಾನ ಭಾಗವತ ಧೀರಜ್ ರೈ ಸಂಪಾಜೆ ಅವರ ಯಕ್ಷಗಾನ ಶೈಲಿಯ ಪ್ರಾರ್ಥನೆಯೊಂದಿಗೆ ಅತಿಥಿ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿ ಮುಂದಿನ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಉದ್ಘಾಟಕರಲ್ಲಿ ಒಬ್ಬರಾದ ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ಮಾತಾಡುತ್ತಾ, ಕೇವಲ ಹಣ ಅಂತಸ್ತುಗಳನ್ನಷ್ಟೇ ಗೌರವಿಸುವುದಲ್ಲದೇ ಸಮಾಜದಲ್ಲಿ ಸಾಮಾನ್ಯರಾದರೂ ತಾವು ಸ್ವಾಭಿಮಾನದಿಂದ ಸತ್ಯ ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದರೊಂದಿಗೆ ತಮ್ಮ ವಿಶೇಷ ಸಾಮರ್ಥ್ಯಗಳಿಂದ ಗುರುತಿಸಿಕೊಂಡರೆ ಮಾಧ್ಯಮಗಳು ಅವರನ್ನು ಗುರುತಿಸಿ ಗೌರವಿಸುವ ಒಂದು ಹೊಸ ಪರಂಪರೆ ಆರಂಭವಾಗಬೇಕು. ಅದು ಬಂಟ್ಸ್ ನೌ ಮಾಧ್ಯಮ ಮೂಲಕ ರಂಜಿತ್ ಶೆಟ್ಟಿ ಮಾಡಿ ತೋರಿಸಿದ್ದಾರೆ ಎಂದರಲ್ಲದೆ ಬಂಟ ಸಮುದಾಯದ ಏಳಿಗೆಗೆ ಒಗ್ಗಟ್ಟಿಗೆ ಶ್ರಮಿಸುವ ಸಂಘಟಕರನ್ನು ಮಹಾದಾನಿಗಳನ್ನು ಪೋಷಕರನ್ನು ಸನ್ಮಾನಿಸಬೇಕು. ಇದರಿಂದ ಸಮಾಜದ ಇತರ ಬಂಧುಗಳಿಗೆ ಒಂದು ಸಂದೇಶ ಹಾಗೂ ಪ್ರೇರಣೆ ದೊರೆತಂತಾಗುತ್ತದೆ ಎಂದರು.ಇತರ ಗೌರವ ಅತಿಥಿಗಳು ಸಂದರ್ಭೋಚಿತವಾಗಿ ಮಾತಾಡುತ್ತಾ ಇದೊಂದು ಆದರ್ಶ ಮಾದರಿ ಕಾರ್ಯಕ್ರಮ. ಇಂದು ದೇಶದ ಭದ್ರತೆಗೆ ಪ್ರಾಣ ಪಣವೆಂಬ ಸಿದ್ಧಾಂತದ ಕರ್ನಲ್, ಹಿರಿಯ ಕೃಷಿಕರು, ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ, ಸಮಾಜಕ್ಕೆ ಅತೀ ವಿಶಿಷ್ಟ ಸೇವೆ ಸಲ್ಲಿಸುತ್ತಿರವ ವಿಶು ಶೆಟ್ಟಿ ಅಂಬಲಪಾಡಿ, ಹೀಗೆ ಭಿನ್ನವೂ ಮಾದರಿಯೂ ಆದ ರೀತಿಯ ಸಂಮಾನ ಹಾಗೂ ಸಾಧಕರಿಗೆ ನೀಡುತ್ತಿರುವ ಬಂಟರತ್ನ ಬಂಟ ವಿಭೂಷಣ ಬಿರುದುಗಳು ಇತರರಿಗೆ ಉತ್ತಮ ಕೆಲಸ ಮಾಡಲು ನೀಡುವ ಉತ್ತೇಜನ ಎಂದು ಏಕಮತದಿಂದ ಅಭಿಪ್ರಾಯ ಪಟ್ಟರು. ಸಮಾರಂಭದಲ್ಲಿ ಬಂಟರತ್ನ ಪ್ರಶಸ್ತಿ ಪಡೆದ ಕರ್ನಲ್ ಜಗಜೀವನ್ ಭಂಡಾರಿ, ಡಾ.ಆರ್.ಕೆ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಸಿ.ಎ. ಎಸ್ ಬಿ ಶೆಟ್ಟಿ ಮೊದಲಾದ ಸಮಾಜದ ಗಣ್ಯರಾದರೆ, ಬಂಟ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಮಹನೀಯರು ವಿಶು ಶೆಟ್ಟಿ ಅಂಬಲಪಾಡಿ, ಮುರಳಿ ಮೋಹನ ಶೆಟ್ಟಿ, ರಾಜೇಂದ್ರ ವಿ ಶೆಟ್ಟಿ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್, ರಾಕೇಶ್ ಶೆಟ್ಟಿ ಬೆಳ್ಳಾರೆ, ಎಂ.ಬಿ ಉಮೇಶ್ ಶೆಟ್ಟಿ ಹಾಗೂ ಶ್ರೀ ಪ್ರಭಾಕರ್ ವಿ ಶೆಟ್ಟಿ ಪುಣೆ. ಅದರಂತೆ ಯುವ ಸಾಧಕರಿಗೆ ಕೊಡ ಮಾಡುವ ಯುವ ಬಂಟರತ್ನ ಪ್ರಶಸ್ತಿ ಸ್ವೀಕರಿಸಿದ ಗಣ್ಯರು ಹಾರಾಡಿ ಮಂದರ ಶೆಟ್ಟಿ, ಎಚ್ ಪ್ರಸನ್ನ ಚಂದ್ರ ಶೆಟ್ಟಿ ಹಾಗೂ ಡಾ.ಹರ್ಷಕುಮಾರ್ ರೈ ಮಾಡಾವು. ಪ್ರಶಸ್ತಿ ಸ್ವೀಕರಿಸಿ ಉತ್ತರ ರೂಪದಲ್ಲಿ ಮಾತಾಡಿದವರೆಲ್ಲರೂ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಯ ಈ ವಿಶಿಷ್ಟ ಕಾರ್ಯಕ್ರಮವನ್ನು ಮನ ತುಂಬಿ ಕೊಂಡಾಡಿದರಲ್ಲದೆ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಸಮಾಜಪರ ಕಾರ್ಯೋನ್ಮುಖರಾಗುವ ಭರವಸೆ ನೀಡಿದರು. ಹಿರಿಯರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ತನ್ನ ಭಾಷಣದಲ್ಲಿ ಬಂಟರು ನಡೆದು ಬಂದ ದಾರಿ, ಅವರ ವಿಶೇಷ ನಾಯಕತ್ವ ಗುಣ, ಸಮಾಜದಲ್ಲಿ ಅವರಿಗೆ ದೊರೆಯುವ ಸ್ಥಾನ ಮಾನಗಳಿಗೆ ಮುಂದೆಯೂ ಕುಂದಾಗದಂತೆ ನಮ್ಮ ಹೊಸ ಪೀಳಿಗೆಗೆ ಮಾರ್ಗದರ್ಶನ ನೀಡಬೇಕೆಂದು ಕಿವಿಮಾತು ನೀಡಿದರು. ಪ್ರವೀಣ್ ಭೋಜ ಶೆಟ್ಟಿಯವರು ಅಧ್ಯಕ್ಷ ಭಾಷಣ ಸಂದರ್ಭದಲ್ಲಿ ರಂಜಿತ್ ಶೆಟ್ಟಿ ಅವರ ಸಂಘಟನಾ ಕೌಶಲವನ್ನು ಕಥನ ಪ್ರಯೋಗ ಮೂಲಕ ಕೊಂಡಾಡುತ್ತಾ, ಯುವಕ ರಂಜಿತ್ ಅವರ ಹಿಂದೆ ಮೂವರು ತರುಣಿಯರು ಹಿಂದೆ ಬಿದ್ದಿದ್ದರು. ಅವರು ಯಾರೆಂದರೆ ಯಕ್ಷಿಣಿ, ಯಶಸ್ವಿನಿ, ಸಂಪ್ರೀತಿನಿ. ಮೂವರನ್ನು ನಾನು ಸ್ವೀಕರಿಸುವುದು ಸಾಧ್ಯವಿಲ್ಲ. ಸಂಪ್ರೀತಿನಿ ನನ್ನ ಜೊತೆ ಬರಲಿ. ಹೀಗೆಂದ ಕೂಡಲೇ ಸಂಪ್ರೀತಿ ಜೊತೆಗೆ ಇತರ ಇಬ್ಬರೂ ಅವರನ್ನು ಹಿಂಬಾಲಿಸಿಕೊಂಡು ಬಂದರು. ಇದರ ಸಾರ ರಂಜಿತ್ ಎಲ್ಲರನ್ನೂ ಪ್ರೀತಿಸಿದರು. ಆದ ಕಾರಣ ಯಶಸ್ಸು ಕಲೆಗಳು ಅವರನ್ನು ಕೂಡಿಕೊಂಡವು ಎಂದು ಭಾವಪೂರ್ಣವಾಗಿ ನುಡಿದು ಮೆಚ್ಚುಗೆ ಹೇಳಿದುದರ ಜೊತೆಗೇ ರಂಜಿತ್ ದಂಪತಿಗಳನ್ನು ನಾವೆಲ್ಲ ಸಂಮಾನಿಸಲೇ ಬೇಕು. ಕಾರಣ ಅವರು ಇತರರನ್ನು ಸಂಮಾನಿಸುತ್ತ ತಾನು ತನಗಾಗಿ ವೇದಿಕೆ ಮೇಲೆ ಒಂದು ಆಸನವನ್ನೂ ಇಟ್ಟುಕೊಂಡಿಲ್ಲ ಎಂದರು. ರಂಜಿತ್ ದಂಪತಿಗೆ ಸಭಾಸದರ ಸನ್ಮಾನಿತರ ಪ್ರಶಸ್ತಿ ವಿಭೂಷಿತರ ಪರವಾಗಿ ಆತ್ಮೀಯವಾಗಿ ಸಂಮಾನಿಸಿದರು. ಅದೇ ರೀತಿ ತನ್ನ ಅಮೂಲ್ಯ ಸಮಯವನ್ನು ನೀಡಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರವೀಣ್ ಭೋಜ ಶೆಟ್ಟಿ ಅವರನ್ನು ಹೃದಯಸ್ಪರ್ಶಿ ರೀತಿಯಲ್ಲಿ ಅಭಿಮಾನ ಪೂರ್ವಕವಾಗಿ ಸಂಮಾನಿಸಲಾಯಿತು.ಪ್ರಚಾರ ಸಮಿತಿ ಸಂಚಾಲಕ ಸಂಕಬೈಲ್ ಮಂಜುನಾಥ ಅಡಪ ಹಾಗೂ ಸ್ವಾಗತ ಸಮಿತಿಯ ಸಂಚಾಲಕ ಚೇಳ್ಯಾರು ಗುತ್ತು ದಿವಾಕರ ಸಾಮಾನಿ ಹಾಗೂ ವಿಶೇಷ ಸಹಕಾರ ನೀಡಿದ ರಮೇಶ್ ಶೆಟ್ಟಿ ಸಿದ್ಧಕಟ್ಟೆ ಅವರನ್ನು ಗೌರವಿಸಲಾಯಿತು. ಅವರ ಪರವಾಗಿ ರಮೇಶ್ ಶೆಟ್ಟಿ ಸಿದ್ಧಕಟ್ಟೆ ಮಾತಾಡಿ ಮೆಚ್ಚುಗೆ ಸೂಚಿಸಿದರು. ಕದ್ರಿ ನವನೀತ ಶೆಟ್ಟಿ, ಡಾ.ಪ್ರಿಯಾ ಹರೀಶ್ ಶೆಟ್ಟಿ, ಆರ್ ಜೆ ನಯನಾ ಶೆಟ್ಟಿ ಹಾಗೂ ಯುವ ನಿರೂಪಕ ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಗಲು ಸಹಕರಿಸದ ನಾಲ್ವರು ನಿರೂಪಕರನ್ನು ಗೌರವಿಸಲಾಯಿತು. ದಿವಾಕರ ಸಾಮಾನಿ ಚೇಳ್ಯಾರು ಗುತ್ತು ಅಭಾರ ಮನ್ನಿಸಿದರು. ಮನರಂಜನೆ ಅಂಗವಾಗಿ ಸಂಗೀತಾ ರಸಮಂಜರಿ, ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆ ನೇತೃತ್ವದಲ್ಲಿ ಯಕ್ಷ ಹಾಸ್ಯ ವೈಭವ ಹಾಗೂ ಕಲ್ಜಿಗದ ಮಾಯ್ಕರೆ ಪಂಜುರ್ಲಿ ನಾಟಕ ಪ್ರದರ್ಶಿಸಲ್ಪಟ್ಟು ಕೊನೆಯಲ್ಲಿ ಪ್ರೀತಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಪ್ರಾದೇಶಿಕ ವಾರ್ತೆಗಳು

ರೆಡ್‌ಕ್ರಾಸ್‌ನಿಂದ ಪ್ರತಿ ವರ್ಷ 6 ಸಾವಿರ ಯುನಿಟ್ ಉಚಿತ ರಕ್ತದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾಹಿತಿ

ಮಂಗಳೂರು : ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಶಾಖೆ 5 ದಶಕಗಳಿಂದ ಜಿಲ್ಲೆಯಲ್ಲಿ ವಿವಿಧ ಮಾನವೀಯ ಸೇವೆಗಳಿಂದ ದೇಶದಲ್ಲೇ ಒಂದು ಉತ್ತಮ ಶಾಖೆ ಆಗಿ ಹೊರಹೊಮ್ಮಿದೆ. ಕಳೆದ 7 ವರ್ಷಗಳಲ್ಲಿ ಕರ್ನಾಟಕ ರಾಜ್ಯಪಾಲರಿಂದ ಗೌರವ ಪ್ರಶಸ್ತಿ, ರಾಜ್ಯದಅತೀ ಉತ್ತಮ ಶಾಖೆ ಪ್ರಶಸ್ತಿ, ಅತ್ಯುತ್ತಮ ರಕ್ತನಿಧಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ಪಡೆದಿದೆ ಎಂದು ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಪ್ರಸ್ತುತ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್‌ನಿಂದ ಅವಶ್ಯ ಇರುವ ನವಜಾತ ಶಿಶುಗಳ ತಾಯಂದಿರಿಗೆ ಪ್ರತಿ ವರ್ಷ ಸುಮಾರು 6000 ಯುನಿಟ್ ರಕ್ತ ಉಚಿತವಾಗಿ ಪೂರೈಸುತ್ತಿದೆ. ಯಾವುದೇ ಶುಲ್ಕ ನೀಡುವ ಅವಶ್ಯಕತೆ ಇಲ್ಲ. ಪರ್ಯಾಯ ರಕ್ತ ಕೂಡಾ ನೀಡಬೇಕಾಗಿಲ್ಲ ಎಂದರು.ಲೇಡಿಗೋಷನ್ ಆಸ್ಪತ್ರೆಯಲ್ಲಿ ಪ್ರತಿ ದಿನ ಜನಿಸುವ 20ರಿಂದ 25 ನವಜಾತ ಶಿಶುಗಳ ತಾಯಂದಿರಿಗೆ ರಕ್ತ ಪೂರೈಸುತ್ತಿದ್ದು, ಮಾಸಿಕ ಸುಮಾರು 500 ಯುನಿಟ್ ರಕ್ತ ಉಚಿತವಾಗಿ ಪೂರೈಸುತ್ತಿದ್ದೇವೆ. ಇದಕ್ಕಾಗಿ ರೆಡ್‌ಕ್ರಾಸ್ ಸಂಸ್ಥೆ ಪ್ರತಿ ತಿಂಗಳು ಸುಮಾರು 4 ಲಕ್ಷ ರೂ. ವಿನಿಯೋಗಿಸುತ್ತಿದೆ. ಪ್ರಸ್ತುತ ಲೇಡಿಗೋಶನ್‌ಆಸ್ಪತ್ರೆಗೆ ದಾಖಲಾದವರಿಗೆ ಉಚಿತ ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಶೇ.50 ರಿಯಾಯಿತಿ ದರದಲ್ಲಿ ರಕ್ತ ಪೂರೈಸಲಾಗುತ್ತಿದೆ. ಭವಿಷ್ಯದಲ್ಲಿ ಮಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ದಾಖಲಾದ ಬಿಪಿಎಲ್ ಕಾರ್ಡ್ ಹೊಂದಿದ ರೋಗಿಗಳಿಗೆ ಅವಶ್ಯವಿದ್ದರೆ ಉಚಿತವಾಗಿ ರಕ್ತ ಪೂರೈಸಲಿದ್ದೇವೆ ಎಂದರು.ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ರಕ್ತನಿಧಿ ನಿರ್ವಹಣೆಯಲ್ಲಿ 2022-23ನೇ ಸಾಲಿನಲ್ಲಿ ರಾಜ್ಯದ ಅತ್ಯುತ್ತಮ ಘಟಕ ಪ್ರಶಸ್ತಿ ಗಳಿಸಿದೆ. ಸ್ವಯಂ ಸೇವಾ ಸಂಸ್ಥೆಗಳು, ಯುವಕ ಸಂಘಟನೆಗಳು, ಕಾಲೇಜುಗಳ ಎನ್‌ಎಸ್‌ಎಸ್, ಎನ್‌ಸಿಸಿ, ಯೂತ್ ರೆಡ್‌ಕ್ರಾಸ್ ಘಟಕಗಳ ಸಹಯೋಗದಲ್ಲಿ ನಿರಂತರ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತದ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಅವಶ್ಯ ಇರುವವರಿಗೆ ರೆಡ್‌ಕ್ರಾಸ್ ಸಂಸ್ಥೆಯಿಂದ ವ್ಹೀಲ್ ಚೇರ್, ವಾಟರ್ ಬೆಡ್ ಸಹಿತ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸಂರಕ್ಷಣೆ ಸಂಬಂಧಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ.ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಶಾಶ್ವತವಾದ ಸಹಾಯವಾಣಿ ಮತ್ತು ಸಮುದಾಯ ವಾಚನಾಲಯ ತೆರೆದಿದ್ದು, ಪ್ರತಿ ದಿನ 15 ರಿಂದ 20 ಯುವ ರೆಡ್‌ಕ್ರಾಸ್ ವಿದ್ಯಾರ್ಥಿಗಳು ರೋಗಿಗಳಿಗೆ ಮತ್ತು ರೋಗಿಗಳ ಸಂಬಂಧಿಕರಿಗೆ ಸಹಾಯ ಮಾಡುತ್ತಿರುವುದು ದೇಶದಲ್ಲೇ ಯುವ ರೆಡ್‌ಕ್ರಾಸ್‌ನ ಮಾದರಿ ಕಾರ್ಯವಾಗಿದೆ ಎಂದು ಅವರು ತಿಳಿಸಿದರು.ಶತಮಾನೋತ್ಸವ ಕಟ್ಟಡಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಶತಮಾನೋತ್ಸವ ಹಿನ್ನೆಲೆಯಲ್ಲಿ ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಶಾಖೆ ವತಿಯಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಶತಮಾನೋತ್ಸವ ಕಟ್ಟಡ ನಿರ್ಮಾಣವಾಗುತ್ತಿದ್ದು, ಮುಂದಿನ 6 ತಿಂಗಳ ಒಳಗೆ ಲೋಕಾರ್ಪಣೆ ಯಾಗಲಿದೆ. 16,000 ಚದರ ಅಡಿಯ 3 ಅಂತಸ್ತಿನ ಈ ಕಟ್ಟಡ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಶತಮಾನೋತ್ಸದ ಕಟ್ಟಡದ ನಿರ್ಮಾಣಕ್ಕೆ ಹಲವು ಸಂಸ್ಥೆಗಳು ಮತ್ತು ದಾನಿಗಳು ನೆರವಾಗಿದ್ದಾರೆ. ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಶಾಖೆಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇತ್ತೀಚೆಗೆ ಶತಮಾನೋತ್ಸವ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಎಂದು ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದರು.ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಖಜಾಂಚಿ ಮೋಹನ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ವಿಠಲ, ಗುರುದತ್ ಕಾಮತ್, ಡಾ. ಸುಮನ ಬೋಳಾರ್, ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಶ್ರೀ ಸಂಸ್ಥಾನ ಗೋಕರ್ಣ ಪರ್ಥಗಾಳಿಜೀವೋತ್ತಮ ಮಠದ ಮೂಲಕ ‘ರಾಮ ನಾಮ ತಾರಕ ಮಂತ್ರ ಜಪ ಅಭಿಯಾನ’ : 550 ಕೋಟಿ ಮಂತ್ರ ಜಪದ ಗುರಿ

ಮಂಗಳೂರು, ಮೇ.22; ಶ್ರೀ ಸಂಸ್ಥಾನ ಗೋಕರ್ಣ ಪರ್ಥಗಾಳಿಜೀವೋತ್ತಮ ಮಠದ 550 ವರ್ಷದ ಪರ್ವ ಕಾಲದ ಸಂಭ್ರಮದ ಅಂಗವಾಗಿ ಅಕ್ಟೋಬರ್ 18,2025 ರೊಳಗೆ 550ಕೋಟಿ ರಾಮ ನಾಮ ತಾರಕ ಮಂತ್ರ ಜಪಿಸುವ ಗುರಿ ಹೊಂದಲಾಗಿದೆ.ಇದುವರೆಗೆ 34 ದಿನಗಳಲ್ಲಿ 80 ಲಕ್ಷ ರಾಮ ತಾರಕ ಮಂತ್ರ ಜಪ ಮಾಡಲಾಗಿದೆ.ಈ ಜಪವು ಪರಮ ಪೂಜ್ಯ ಗುರುವರ್ಯ ಶ್ರೀ ವಿದ್ಯಾಧೀಶ ವಡೇರ ಸಂಕಲ್ಪದಂತೆ 17ನೇ ಏಪ್ರಿಲ್ 2024 ರ ರಾಮ ನವಮಿಯಂದು ಕರ್ನಾಟಕ, ಮುಂಬಯಿ ಸೇರಿದಂತೆ ಸಂಸ್ಥಾನದ ಎಲ್ಲಾ ಮಠಗಳ ಶಾಖೆಗಳಲ್ಲಿ ಆರಂಭಗೊಂಡಿದೆ. ಈ ಜಪ 18 ಅಕ್ಟೋಬರ್ 2025 ರವರೆಗೆ ಮುಂದು ವರಿಯುತ್ತದೆ. ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಈ ಅಭಿಯಾನದ ಅಂಗವಾಗಿ ಮಂಗಳೂರು ರಥ ಬೀದಿಯ ಶ್ರೀಗೋಕರ್ಣ ಪರ್ಥಗಾಳಿ ಜೀವೋತ್ತಮ ಶಾಖಾ ಮಠದಲ್ಲಿ ಶ್ರೀರಾಮ ನವಮಿಯಂದು ಆರಂಭಗೊಂಡು ಮೂರು ನಾಲ್ಕು ಪಾಳಿಗಳಲ್ಲಿ ನಡೆಯುತ್ತದೆ. ಮೇ 19 ರಂದು 1580 ಜಪಕರು ಒಟ್ಟು 20.83 ಲಕ್ಷ ರಾಮನಾಮ ತಾರಕ ಮಂತ್ರ ಜಪ ಮಾಡಿ ದರು ಈ ಅಭಿಯಾನದಲ್ಲಿ ಕಾಸರಗೋಡು, ಕಾಂಞಗಾಡ್,ಪುತ್ತೂರು,ಉಳ್ಳಾಲ,ಸುರತ್ಕಲ್, ಗುರುಪುರ ಸೇರಿದಂತೆ ವೈದಿಕರು ಭಾಗವ ಹಿಸುವ ಮೂಲಕ ಉತ್ತಮ ಪ್ರತಿಕ್ರೀಯೆ ದೊರೆತಿದೆ.ಪ್ರತಿದಿನ ಸರಾಸರಿ 2.4 ಲಕ್ಷ ಜಪವನ್ನು ಮಾಡಲಾ ಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಯಿದೆ.ಒಂದೂವರೆ ಸಂವತ್ಸ ರದವರೆಗೆ ನಡೆಯುವ ಈ ಅಭಿಯಾನದಲ್ಲಿ ಸಮಾಜ ಬಾಂಧವರು ಶ್ರದ್ಧೆ, ಭಕ್ತಿಯಿಂದ ಭಾಗವಹಿಸುವಂತೆ ಅಭಿಯಾನದ ಸಂಘಟಕರ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ವಿಮಾನ ದುರಂತ ಸ್ಮಾರಕ ದಲ್ಲಿ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ

ಮಂಗಳೂರು,ಮೇ.22; ದೇಶದ ಜನರನ್ನು ಬೆಚ್ಚಿ ಬೀಳಿಸಿದ ಮಂಗಳೂರು ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ದುರಂತ ಸಂಭವಿಸಿ ಇದೀಗ 14 ವರ್ಷ ತುಂಬುತ್ತಿದೆ. ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ ಹಲವರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದು, ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ದಫನ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಪಾರ್ಕ್‌ ನಿರ್ಮಿಸಲಾಗಿದೆ. ಇಂದು ಬೆಳಗ್ಗೆ 9.30 ಗಂಟೆಗೆ ಜಿಲ್ಲಾಡಳಿತ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಪುಷ್ಪ ಗುಚ್ಛ ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.2010ರ ಮೇ 22ರಂದು ಬೆಳಗ್ಗೆ 6.20ಕ್ಕೆ ದುಬಾೖಯಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಲ್ಯಾಂಡ್‌ ಆಗುವ ಹಂತದಲ್ಲಿ ಚಾಲಕನ ಲೆಕ್ಕಾಚಾರ ತಪ್ಪಿ ಮಿತಿಗಿಂತ ಸ್ವಲ್ಪ ಮೀಟರ್‌ ದೂರದಲ್ಲಿ ಇಳಿದ ಕಾರಣ ಹತೋಟಿ ತಪ್ಪಿ ಟರ್ಮಿನಲ್ ಬಳಿ ಕೆಂಜಾರಿನ ಕಡಿದಾದ ಗುಡ್ಡದಿಂದ ಕೆಳಗೆ ಉರುಳಿತ್ತು ಬೆಂಕಿ ಹತ್ತಿ ಕೊಂಡ ವಿಮಾನದಲ್ಲಿ ಪೈಲಟ್, ಸಿಬ್ಬಂದಿ ಸಹಿತ 158 ಮಂದಿ ಮೃತರಾಗಿದ್ದರು. ಈ ಪೈಕಿ 19 ಮಕ್ಕಳು ಹಾಗೂ 6 ಮಂದಿ ಶಿಶುಗಳು, 6 ವಿಮಾನ ಸಿಬ್ಬಂದಿ ಸೇರಿ 166 ಮಂದಿ ಪ್ರಯಾಣಿಸುತ್ತಿದ್ದರು.ಅಪಘಾತದಲ್ಲಿ ಬದುಕುಳಿದವರು 8ಮಂದಿ ಮಾತ್ರ.ಇಂದು ಶ್ರದ್ದಾಂಜಲಿ ಸಲ್ಲಿಸಿದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ , ಮಂಗ ಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್,ಸಂತ್ರಸ್ತರ ಕುಟುಂಬದ ಸದಸ್ಯರಾದ ಶೊಭಾ ಶೆಟ್ಟಿ, ಶ್ರೇಯ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಶ್ರೀನಿಧಿ, ರಿಷಿಕಾಗೆ ಅನಂತ ಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ

ಮಂಗಳೂರು: ಮಂಗಳೂರು ಸಿಟಿ ರೋಟರಿ ಕ್ಲಬ್ ನ ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿಗೆ ( ಯಂಗ್ ಅಚೀವರ್ ಅವಾರ್ಡ್ಸ್) ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರ ಮತ್ತು ಶಿಕ್ಷಣ ಅ್ಯಪ್ ಡೆವೆಲೆಪರ್ ಶ್ರೀನಿಧಿ ಆಯ್ಕೆಯಾಗಿದ್ದಾರೆ.ಕೊಡಿಯಾಲಬೈಲ್ ಉತ್ಸವ ಹೋಟೇಲ್ ಸಭಾಂಗಣದಲ್ಲಿ ಮೇ 22 ರಂದು ರಾತ್ರಿ‌ 8 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಪ್ರಶಸ್ತಿ ಪ್ರದಾನ ಮಾಡುವರು. ರೋಟರಿ ಅಧ್ಯಕ್ಷ ಪ್ರಶಾಂತ್ ರೈ, ಪ್ರಧಾನ ಕಾರ್ಯದರ್ಶಿ ಗಣೇಶ್, ಸ್ಥಾಪಕಾಧ್ಯಕ್ಷ ಡಾ.ರಂಜನ್ ಶೆಟ್ಟಿ ಉಪಸ್ಥಿತರಿರುವರು.ಮೇ ತಿಂಗಳು ಯುವ ಸೇವಾ ಮಾಸ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ರಾಜೇಂದ್ರ ಕಲ್ಬಾವಿ ಅವರು ತಮ್ಮ ಹೆತ್ತವರಾದ ಅನಂತ ಕಲ್ಬಾವಿ ಸುಮಿತ್ರಾ ಕಲ್ಬಾವಿ ಹೆಸರಲ್ಲಿ ಪ್ರಶಸ್ತಿ ನಿಧಿ ಸ್ಥಾಪಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ 2024” ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮೆರುಗು, ಕಲಾವಿದರಿಗೆ ವಿವಿಧ ಯೋಜನೆ.

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ( ರಿ) ಮಂಗಳೂರು ಇದರ ಆಶ್ರಯದಲ್ಲಿ ಮೇ 26 ರಂದು ಭಾನುವಾರ ಅಡ್ಯಾರ್ ನಲ್ಲಿರುವ ಅಡ್ಯಾರ್ ಗಾರ್ಡನ್ ನಲ್ಲಿ “ಯಕ್ಷಧ್ರುವ ಪಟ್ಲ ಸಮಾರಂಭ 2024” ಜರಗಲಿದೆ.ಸಮಾರಂಭದಲ್ಲಿ ಬೆಳಿಗ್ಗೆ 7.45 ಕ್ಕೆ ಚೌಕಿಪೂಜೆ, ಅಬ್ಬರ ತಾಳ, ಬಳಿಕ ಮಹಿಳಾ ಯಕ್ಷಗಾನ‌ ನಡೆಯಲಿದೆ. ಬಳಿಕ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ವೆಂಕಟ್ರಮಣ ಆಸ್ರಣ್ಣ ಆರ್ಶೀರ್ವಚನ ನೀಡಲಿದ್ದಾರೆ.ಕಾರ್ಯಕ್ರಮವನ್ನು ಮುಂಬೈ ಹೇರಂಭ ಕೆಮಿಕಲ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಸಿಎಂಡಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಶುಭಶಂಸನೆಗೈಯಲಿದ್ದಾರೆಆರೋಗ್ಯ ಶಿಬಿರದ ಉದ್ಘಾಟನೆಯನ್ನು ಡಾ ರವೀಶ್ ತುಂಗಾ ನೆರವೇರಿಸಲಿದ್ದಾರೆ. ರಕ್ತದಾನ ಶಿಬಿರವನ್ನು ಡಾ ಶ್ರೀಧರ್ ಉದ್ಘಾಟಿಸಲಿದ್ದಾರೆ. ಉಚಿತ ಕಣ್ಣು ಪರೀಕ್ಷೆ, ಕನ್ನಡ ವಿತರಣೆಯೂ ಇದೆ.ಬೆಳಿಗ್ಗೆ 11 ಗಂಟೆಗೆ ಯುವ ಭಾಗವತರಿಂದ “ಗಾನ ವೈಭವ” ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಶಶಿ ಕ್ಯಾಟರರ್ಸ್ ಸಂಸ್ಥೆ, ಉಜಿರೆ ಕಾಶಿ ಪ್ಯಾಲೇಸ್ ಸಂಸ್ಥೆಯ ಮಾಲಕ ಶಶಿಧರ್ ಬಿ ಶೆಟ್ಟಿ ಬರೋಡಾ ವಹಿಸಲಿದ್ದಾರೆ. ಅತಿಥಿಗಳಾಗಿ ಜಮ್ಮು ಕಾಶ್ಮೀರ ಸರಕಾರದ ಪ್ರಿನ್ರಿಪಾಲ್ ಸೆಕ್ರೆಟರಿ ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್, ಮುಂಬಯಿ ಭವಾನಿ ಶಿಪ್ಪಿಂಗ್ ಮಾಲಕ ಕೆ.ಡಿ ಶೆಟ್ಟಿ, ಮುಂಬಯಿ ಮೆಕಯ್ ಸಂಸ್ಥೆಯ ಅಧ್ಯಕ್ಷ ಕೆ ಎಂ ಶೆಟ್ಟಿ ಮಧ್ಯಗುತ್ತು ಮೊದಲಾದವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 3.30 ಕ್ಕೆ ಪಾರಂಪರಿಕ ಯಕ್ಷಗಾನ “ಕಿರಾತಾರ್ಜುನ” ಪ್ರದರ್ಶನಗೊಳ್ಳಲಿದೆ.ಸಂಜೆ 5.15 ಕ್ಕೆ ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿಯವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ‌ ನಡೆಯಲಿದೆ. ಪಟ್ಲ ಫೌಂಡೇಶನ್ ನ ಟ್ರಸ್ಟಿ, ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಚಲನ ಚಿತ್ರ ನಟ ಕಿಚ್ಚ ಸುದೀಪ್ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಎಂಆರ್ ಜಿ ಗ್ರೂಪ್ ನ ಚೆಯರ್ ಮೆನ್ ಕೆ ಪ್ರಕಾಶ್ ಶೆಟ್ಟಿ, ಉದ್ಯಮಿ ತೋನ್ಸೆ ಆನಂದ ಶೆಟ್ಟಿ, ಡಾ ಎಚ್ ಎಸ್ ಬಲ್ಲಾಳ್, ಕೆ ಕೆ ಶೆಟ್ಟಿ, ವಕ್ವಾಡಿ ಪ್ರವೀಣ್ ಶೆಟ್ಟಿ, ಕನ್ಯಾನ ರಘುರಾಮ ಶೆಟ್ಟಿ, ಡಾ ಎಂ ಮೋಹನ್ ಆಳ್ವ ಮೊದಲಾದವರು ಭಾಗವಹಿದಲಿದ್ದಾರೆ. ಯಕ್ಷಧ್ರುವ ಪಟ್ಲ ಪ್ರಶಸ್ತಿಸಮಾರಂಭದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರನ್ನು 2024 ರ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಗುವುದು.2024 ರ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು CA ದಿವಾಕರ್ ರಾವ್ ಮತ್ತು ಶ್ರೀಮತಿ ಶೈಲಾ ದಿವಾಕರ್ ಪಡೆಯಲಿದ್ದಾರೆ.ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ 18 ಮಂದಿ ಕಲಾ ಗೌರವವನ್ನು ಸ್ವೀಕರಿಸಲಿದ್ದಾರೆ.2024 ರ ಸೇವಾ ಯೋಜನೆಪಟ್ಲ ಪ್ರಶಸ್ತಿ ರೂ 1 ಲಕ್ಷ ಗೌರವ ಧನ.3,500 ಕಲಾವಿದರಿಗೆ (ಯಕ್ಷಗಾನ, ನಾಟಕ -ರಂಗಭೂಮಿ, ದೈವಾರಾಧನೆ) ಅಪಘಾತ ವಿಮಾ ಯೋಜನೆ, 20 ಸಾವಿರ ನಗದಿನೊಂದಿಗೆ ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳ ಹಿರಿಯ ಸಾಧಕರಿಗೆ ಯಕ್ಷಧ್ರುವ ಕಲಾ ಗೌರವ. ವೈದ್ಯಕೀಯ, ಆರ್ಥಿಕ ನೆರವು, ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ‌ ತಪಾಸಣೆ, ಕನ್ನಡಕ ಹಾಗೂ ಔಷಧ ವಿತರಣೆ, ಆಶಕ್ತರಿಗೆ ಧನಸಹಾಯ, ಗೃಹ ನಿರ್ಮಾಣಕ್ಕೆ ಸಹಾಯ ಧನ, ಸರಕಾರಿ ಫ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಯೋಜನೆ.11.5 ಕೋಟಿ ಮೊತ್ತದ ಸೇವಾ ಯೋಜನೆ ಅನುಷ್ಠಾನಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಎಂಟು ವರ್ಷಗಳಲ್ಲಿ ಸುಮಾರು 11.5 ಕೋಟಿ ರೂಪಾಯಿ ಮೊತ್ತದ ಸೇವಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ.ಪಟ್ಲ ಯಕ್ಷಾಶ್ರಯದ ಮೂಲಕ 26 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಲಾಗಿದೆ. 12 ಮನೆಗಳು ನಿರ್ಮಾಣ ಹಂತದ ಕೊನೆಯ ಹಂತದಲ್ಲಿದೆ. ಗೃಹ ನಿರ್ಮಾಣ ಯೋಜನೆಯಲ್ಲಿ 162 ಕಲಾವಿದರಿಗೆ ತಲಾ 25 ಸಾವಿರ ಮನೆ ರಿಪೇರಿಗೆ ಸಹಾಯ ಧನ ವಿತರಿಸಲಾಗಿದೆ. 160 ಮಂದಿ ತೀರಾ ಅಶಕ್ತ ಕಲಾವಿದರಿಗೆ 50 ಸಾವಿರ ವಿತರಿಸಲಾಗಿದೆ. ಪ್ರಖ್ಯಾತ ಆರು ಮಂದಿ ಕಲಾವಿದರಿಗೆ ತಲಾ ಒಂದು ಲಕ್ಷ ರೂಪಾಯಿಯೊಂದಿಗೆ ಪಟ್ಲ ಪ್ರಶಸ್ತಿ ನೀಡಲಾಗಿದೆ. ಪ್ರಾದೇಶಿಕ ಘಟಕಗಳ ವ್ಯಾಪ್ತಿಯಲ್ಲಿ ಸುಮಾರು 410 ಮಂದಿ ಕಲಾವಿದರು ಸಂಮಾನ ಮತ್ತು ಗೌರವ ಧನ ಪಡೆದಿರುತ್ತಾರೆ. ಯಕ್ಷಗಾನದಲ್ಲಿ ದಾಖಲೆ ಬರೆದ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನಯಕ್ಷಧ್ರುವ ಯಕ್ಷ ಶಿಕ್ಣಣ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 3,500 ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ಬೇರೆ ಬೇರೆ ಆಯಾಮಗಳ ಸ್ಪರ್ಧೆ, ಇದರಲ್ಲಿ 1,700 ವಿದ್ಯಾರ್ಥಿಗಳು ವೇಷಭೂಷಣಗಳೊಂದಿಗೆ ಒಂದೇ ದಿನ ರಂಗ ಪ್ರವೇಶ ಮಾಡಿರುವುದು ಯಕ್ಷಗಾನದಲ್ಲಿ ದಾಖಲೆಯಾಗಿದೆ.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಸಂಸ್ಥೆಯೊಂದಿಗೆ ಮಹಿಳಾ ಘಟಕ ಮತ್ತು ವಿದೇಶದಲ್ಲಿರುವ ಘಟಕಗಳು ಸೇರಿದಂತೆ ಒಟ್ಟು 40 ಪ್ರಾದೇಶಿಕ ಘಟಕಗಳು ಕೆಲಸ ಮಾಡುತ್ತಿದೆ.2024 ನೇ ಸಾಲಿನ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಈ ಬಾರಿ ವೃತ್ತಿಪರ ಕಲಾವಿದರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿ (ಕಲಾ, ವಾಣಿಜ್ಯ ಹಾಗು ವಿಜ್ಞಾನ ಹೀಗೆ ಒಟ್ಟು 4 ವಿಭಾಗಗಳಲ್ಲಿ) ಯಲ್ಲಿ 90% ಕ್ಕಿಂತ ಮೇಲ್ಪಟ್ಟು ಗರಿಷ್ಟ ಅಂಕ ಗಳಿಸಿದ ತಲಾ ಒಬ್ಬ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರವನ್ನು 2024ರ ಪಟ್ಲ ಸಂಭ್ರಮದಂದು ನೀಡಲಾಗುವುದು.ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಕೋಶಾಧಿಕಾರಿ CA ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ , ಪ್ರದೀಪ್ ಆಳ್ವ ಕದ್ರಿ, ಉಪಾಧ್ಯಕ್ಷ ಡಾ ಮನು ರಾವ್, ಜೊತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ರವಿ ಶೆಟ್ಟಿ ಅಶೋಕನಗರ

ಪ್ರಾದೇಶಿಕ ವಾರ್ತೆಗಳು

ಭಜನೆ ಇದ್ದಲ್ಲಿ ವಿಭಜನೆ ಇಲ್ಲ , ಭಜನೆಯ ಮೂಲಕ ಸಾಂಸ್ಕೃತಿಕ ಸಾಮಾಜಿಕ ಹಾಗೂ ಆರೋಗ್ಯದ ಜನಜಾಗೃತಿ ಸಾದ್ಯ:ಅರುಣ್ ಐತಾಳ್.

ಮಂಗಳಾದೇವಿ :ಕುಣಿತ ಭಜನೆ ಎಂಬುದು ದೈಹಿಕ ಮಾನಸಿಕ ಸಾಮಾಜಿಕ ಆರೋಗ್ಯ ನೀಡುವುದಲ್ಲದೇ ಸಾಹಿತ್ಯ ಸಂಸ್ಕೃತಿಯ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ. ಜಾತಿ ನೀತಿ ಗುಂಪು ಪಂಗಡ ಪಕ್ಷ ಮೇಲು ಕೀಳು ಬಡವ ಬಲ್ಲಿದ ಭಾವನೆಗಳನ್ನು ತೊಡೆದು ಹಾಕಿ, ಆಡಂಬರದ ತೋರಿಕೆಯ ಹಮ್ಮು ಬಿಮ್ಮು ಇಲ್ಲದೇ ಎಲ್ಲರೊಳಗೇ ಒಂದಾಗಿ ಭಗವಂತನನ್ನು ಅತೀ ಸುಲಭವಾಗಿ ಒಲಿಸಿ ಕೊಳ್ಳುವ ಏಕೈಕ ಮಾರ್ಗವೇ ಭಜನೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲಎಂದು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರತಿಸ್ತಾಮಹೋತ್ಸವದ ಅಂಗವಾಗಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಹಾಗೂ ಸನಾತನ ಶ್ರೀರಾಮ ಭಜಕರ ಒಕ್ಕೂಟದ ಆಶ್ರಯದಲ್ಲಿ ಜರುಗಿದ ಸೇವಾ ರೂಪದ ಕುಣಿತ ಭಜನಾ ಪ್ರದರ್ಶನ ಉದ್ಘಾಟಿಸಿದ ದೇವಸ್ಥಾನದ ಆಡಳಿತ ಮುಕ್ತೇಸರರಾದ ಅರುಣ್ ಐತಾಳ ಅಭಿಪ್ರಾಯ ಪಟ್ಟರು. ಕಳೆದ ಹತ್ತಾರು ವರ್ಷಗಳಿಂದ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ರಿ. ಕುಣಿತ ಭಜನ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಒತ್ತು ಕೊಡುತ್ತಾ ಬಂದಿದ್ದು. ಭಜನೆಯನ್ನ ಗತಕಾಲದ ವೈಭವಕ್ಕೆ ತೆಗೆದುಕೊಂಡು ಹೋಗಬೇಕು ಯುವಕರನ್ನು ದುಶ್ಚಟಗಳಿಂದ ಮುಕ್ತಮಾಡಬೇಕು ಎಂಬ ಚಿಂತನೆಯಿಂದ ಮಂಗಳೂರಿನ ಸಮಾನ ಮನಸ್ಕರ ಹಾಗೂ ಹಿರಿಯ ಭಜನಾ ಮಂಡಳಿ ಹಾಗೂ ತಂಡಗಳ ಸಹಾಯ ಸಹಕಾರದಿಂದ ಶ್ರೀ ರಾಮ ಸನಾತನ ಭಜಕರ ಒಕ್ಕೂಟ ಮಂಗಳೂರು ಎಂಬ ಸಂಸ್ಥೆಯನ್ನ ಹುಟ್ಟು ಹಾಕಿ ಭಜನೆಗೆ ಬೆಂಬಲ ನೀಡಲಾಗುತ್ತಿದ್ದು. ಇದಕ್ಕೆ ನಗರದ ಪ್ರಮುಖ ಭಜನಾ ತಂಡಗಳು ಹಾಗೂ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಹಿತೈಷಿ ಸಂಘಟನೆಗಳ ನೂರಾರು ಮಂದಿ ಭಜನಾಪ್ರಿಯರು ಸಾಥ್ ನೀಡಿ ಕಳೆತಂದಿರುವುದು ಸಮಾಜಕ್ಕೆ ಒಂದು ಒಗ್ಗಟ್ಟಿನ ಸಂದೇಶ ಕೊಟ್ಟಿದೆ ಎಂದು ನಗರದ ಖ್ಯಾತ ಲೆಕ್ಕ ಪರಿಶೋಧಕ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಮಾರ್ಗದರ್ಶಿಗಳಲ್ಲಿ ಓರ್ವರಾದ ಎಸ್.ಎಸ್. ನಾಯಕ್ ಹೇಳಿದರು.ನಗರದ ಮಂಗಳಾದೇವಿ ಪರಿಸರದ ಹಿರಿಯ ಭಜನಾ ತಂಡಗಳಾದ ಅಂಬಾಮಹೇಶ್ವರಿ , ವಿಶ್ವೇಶ್ವರ ಮಾರಿಗುಡಿ , ಮುಖ್ಯಪ್ರಾಣ ರಾಮಮಂದಿರ , ವಿದ್ಯೋದಯ , ಆದಿ ಮಹೇಶ್ವರಿ ಭಜನಾ ತಂಡದ ಸದಸ್ಯರುಗಳ ಉಪಸ್ಥಿತಿಯಲ್ಲಿ ಜಗದೀಶ್ ಶೇಣವ ಗೋಪಾಲ್ ಕುತ್ತಾರ್ ಯಜ್ಞೇಶ್ ಬರ್ಕೆ ರಾಜೇಶ್ ಉಳ್ಳಾಲ್ ಅಜಿತ್ ರೈ ಮಾಲಾಡಿ ಡಾ ಕೆ ಆರ್ ಕಾಮತ್, ಡಾ ರಂಜನ್ ಪದ್ಮನಾಭ ಅಮೀನ್ ರಮಾನಂದ ಪೂಜಾರಿ. ಐರೋಡಿ ಸಂತೋಷ್ ಶೆಟ್ಟಿ ಸುಧಾಕರ್ ಪೇಜಾವರ ಸಹಿತ ಶ್ರೀದೇವಿ ಕ್ರಿಕೆಟರ್ಸ್ ಒಸಿ ಫ್ರೆಂಡ್ಸ್ ಮುಳಿಹಿತ್ಲು ಫ್ರೆಂಡ್ಸ್ ಮುಂತಾದ ಹತ್ತಾರು ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಸನಾತನ ಶ್ರೀ ರಾಮ ಭಜಕರ ಒಕ್ಕೂಟವನ್ನ ಉದ್ಘಾಟಿಸಿ ಕುಣಿತ ಭಜನೆಗೆ ಚಾಲನೆ ನೀಡಿದರು. ಉಲ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ , ಬೈಂದೂರು ತ್ರಾಸಿಯ ಶ್ರೀ ಮಾಣಿ ಸಿದ್ದೇಶ್ವರ ತಂಡ, ಉಡುಪಿ ಬಿಜಾಡಿಯ ಶ್ರೀ ರಾಮ ಭಜನಾ ತಂಡ, ಮಂಗಳೂರು ಕುಳಾಯಿ ಹೊಸಬೆಟ್ಟಿನ ಬಾಲ ವಿಕಾಸ ಭಜನಾ ಮಂಡಳಿಗಳು ಭಕ್ತಿ ಭಾವ ಪರಾಕಾಸ್ಟೆಯ ಭಜನಾ ನೃತ್ಯ ಪ್ರದರ್ಶನ ಮಾಡಿ ನೆರೆದ ಭಜಕರ ಮೆಚ್ಚುಗೆಗೆ ಪಾತ್ರರಾದರು.ನವಕೀರ್ತಿ ಯುವಕ ಮಂಡಲ ವೀರನಗರ ಪಡೀಲ್ ಶಿವ ಫ್ರೆಂಡ್ಸ್ ಕ್ಲಬ್ ಕೊಡಾಕಲ್ ಐಎಂಎ. ವೆನ್ಲಾಕ್ ಹಾಗೂ ಕುಟುಂಬ ವೈದ್ಯರ ಸಂಘಟನೆಯ ಹಿರಿಯ ವೈದ್ಯಮಿತ್ರರು, ನಗರದ ಬಂಟ , ಬಿಲ್ಲವ , ಮಲೆಯಾಳಿ ಬಿಲ್ಲವ , ಮೊಗವೀರ, ಕುಲಾಲ್, ರಾಮಕ್ಷತ್ರಿಯ , ಸಂಘಗಳ ನಾಯಕರ ಜೊತೆ ಕುಂದಾಪುರ ಕಾರ್ಕಳ ಉಡುಪಿ ಕಾಪು ಸುರತ್ಕಲ್ ಕುಳಾಯಿ ನೀರುಮಾರ್ಗ ಮಂಗಳೂರು ಬಂಟ್ವಾಳ ವ್ಯಾಪ್ತಿಯ ಕುಲಾಲ ಸಂಘ ಹಾಗೂ ಯುವ ವೇದಿಕೆಯ ನಾಯಕರುಗಳು ಭಾಗವಹಿಸಿ ಸೇವಾ ಸಹಕಾರ ನೀಡಿದ್ದರು.ಸನಾತನ ಶ್ರೀರಾಮ ಭಜಕರ ಒಕ್ಕೂಟದ ಸಂಚಾಲಕರುಗಳಾದ ಸಂತೋಷ್ ಶೆಟ್ಟಿ, ಸುರೇಶ್ ಆಚಾರ್ ,ನಿಶ್ಚಿತ್ ಪಡೀಲ್ ,ದೇವದಾಸ್ ಶೆಟ್ಟಿ ಕೊಡಾಕಲ್ ,ಸುಧಾಕರ್ ಸಾಲ್ಯಾನ್ , ಶ್ರೀಮತಿ ಮಮತಾ ಕುಲಾಲ್ , ಮಹಾಬಲ ಕುಲಾಲ್ , ಶರತ್ ಮಂಕಿಸ್ಟಾಂಡ್ , ಹರೀಶ್ ಶೆಟ್ಟಿ ಜಪ್ಪು , ದಿನೇಶ್ ಕರ್ಕೇರ ಮಹಾಕಾಳಿಪಡ್ಪು, ಅಜಿತ್ ಬೋಳಾರ , ಅನನ್ಯ ಕುಲಾಲ್ ಕಾರ್ಯಕ್ರಮವನ್ನ ಸಂಯೋಜಿಸಿದರು. ಗಣೇಶ್ ಶೆಟ್ಟಿ ವೀರನಗರ ಕಾರ್ಯಕ್ರಮ ನಿರ್ವಹಿಸಿದರು. ಒಕ್ಕೂಟದ ಪ್ರಧಾನ ಸಂಚಾಲಕರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಲ್ತೂರು ಸ್ವಾಗತಿಸಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಸಂಸದ ನಳಿನ್‌ಕುಮಾರ್ ಕಟೀಲು ಅವರಿಗೆ ಜನಸೇವಾ ರಾಷ್ಟ್ರೀಯ ಪ್ರಶಸ್ತಿ.13ನೇ ಸೌಹಾರ್ದ ಸಂಗಮದಲ್ಲಿ ಪ್ರಶಸ್ತಿ ಪ್ರದಾನ.

ಮಂಗಳೂರು: ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲು ಅವರನ್ನು ಜನಸೇವಾ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಸತತ ಮೂರು ಬಾರಿ ದಕ್ಷಿಣ ಕನ್ನಡದ ಎಂಪಿಯಾಗಿ ಒಂದು ಲಕ್ಷಕ್ಕೂ ಅಧಿಕ ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರದಿಂದ ತಂದು ದಕ್ಷಿಣ ಕನ್ನಡದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ನಳಿನ್‌ಕುಮಾರ್ ಕಟೀಲು ಅವರು ನೇರ ನಡೆ ನುಡಿಯ ನಿಷ್ಕಳಂಕ ವ್ಯಕ್ತಿತ್ವದ ಜನ ಮೆಚ್ಚಿದ ಜನನಾಯಕರಾಗಿದ್ದು, ಅವರ ನಿಷ್ಪಕ್ಷಪಾತೀಯ ಹಾಗೂ ಪ್ರಾಮಾಣಿಕ ಜನಸೇವೆಯನ್ನು ಪರಿಗಣಿಸಿ ಅವರನ್ನು ಜನಸೇವಾ ರಾಷ್ಟ್ರೀಯ ಪ್ರಶಸ್ತಿಗೆ ಅರ್ಹವಾಗಿ ಆಯ್ಕೆ ಮಾಡಲಾಗಿದೆ.ಜನಸೇವಾ ರಾಷ್ಟ್ರೀಯ ಪ್ರಶಸ್ತಿಯನ್ನು Mp mla’s ನ್ಯೂಸ್ ಪತ್ರಿಕೆ ಮತ್ತು Mp mla’s news tv 24×7ನ್ಯೂಸ್ ಪೋರ್ಟಲ್ ಮಾಧ್ಯಮ ಸಂಸ್ಥೆಯು ಅಕ್ಟೋಬರ್ 13 ರಂದು ಮಂಗಳೂರು ಟೌನ್ ಹಾಲ್ ನಲ್ಲಿ ಆಯೋಜಿಸಿರುವ 13ನೇ ಸೌಹಾರ್ದ ಸಂಗಮದಲ್ಲಿ ಗಣ್ಯರ ಸಮ್ಮುಖದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರಿಗೆ ಪ್ರದಾನ ಮಾಡಲಿದೆಂದು ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್ ತಿಳಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಮೇ 23ರಂದು ರೋಹನ್ ಮೊಂತೆರೊ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮೇ 23ರಂದು ಬೆಳಗ್ಗೆ 11.30 ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ರೋಹನ್ ಕಾರ್ಪೋರೇಷನ್‌ನ ಸ್ಥಾಪಕ ಮತ್ತು ಚೇರ್ಮನ್ ರೋಹನ್ ಮೊಂತೆರೊಭಾಗವಹಿಸಿ ಗೌರವ ಸ್ವೀಕರಿಸಲಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಪೋರೆಟ್ ಸಂವಹನಾಧಿಕಾರಿ ಜೈದೀಪ್ ಶೆಣೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜೀವ -ಜಲ ಉಳಿಸಲು ಸ್ವಯಂ ಪ್ರೇರಣೆಯ ಪಾಲ್ಗೊಳ್ಳುವಿಕೆ ಮುಖ್ಯ-ಪ್ರಭಾಕರ ಶರ್ಮಾ

ಮಂಗಳೂರು, ಮೆ.18; ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ಇತಿ ಮಿತಿಯಲ್ಲಿ ಸಣ್ಣ ಕೊಡುಗೆಗಳನ್ನು ನೀಡುವ ಮೂಲಕ ಪಾಲ್ಗೊಳ್ಳಬೇಕಾದ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಅಪರ ಜಿಲ್ಲಾಧಿಕಾರಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಹಿರಿಯ ಸಲಹೆಗಾರ ಪ್ರಭಾಕರ ಶರ್ಮಾ ತಿಳಿಸಿದ್ದಾರೆ.ಅವರು ಇಂದು ನಗರದ ಲಾಲ್ ಬಾಗ್ ವನಿತಾ ಪಾರ್ಕ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ,ಬ್ಯಾಂಕ್ ಆಫ್ ಬರೋಡಾ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಜೀವ -ಜಲ ಉಳಿಸಿ ಅಭಿಯಾನ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.ನಗರದಲ್ಲಿ ಕಾಂಕ್ರೀಟ್ ಕಟ್ಟಡ ಗಳು ಸೇರಿದಂತೆ ವಿವಿಧ ಕಾಮಗಾರಿಗಳ ಸಂದರ್ಭದಲ್ಲಿ ಪರಿಸರದ ಮೇಲೆ ಆಕ್ರಮಣ ನಡೆಯುತ್ತಿದೆ.ಈ ಸಂದರ್ಭದಲ್ಲಿ ಪ್ರತಿಯೊಬ್ಬ ರು ತಮ್ಮ ಮಿತಿಯಲ್ಲಿ ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಗೆ ಭವಿಷ್ಯದ ದೃಷ್ಟಿಯಿಂದ ಕೊಡುಗೆ ನೀಡುವ ಅಗತ್ಯವಿದೆ ಎಂದು ಪ್ರಭಾಕರ ಶರ್ಮಾ ಮನವಿ ಮಾಡಿದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕ ಜಯರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಈ ಬೇಸಗೆಯ ಸಂದರ್ಭ ದಲ್ಲಿ ಪ್ರಾಣಿ, ಪಕ್ಷಿಗಳ ಜೀವ ರಕ್ಷಣೆಯ ಜೊತೆಗೆ ನೀರನ್ನು ಮಿತವಾಗಿ ಬಳಸಲು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾರ್ವಜನಿಕರು ಜೀವ -ಜಲ ಅಭಿಯಾನದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಸಕಲ ಜೀವ ರಾಶಿಗಳಿಗೆ ಆಧಾರವಾದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ಕಾರ್ಯಕ್ರಮ ದಲ್ಲಿ ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಿಭಾಗದ ಹಿರಿಯ ಪ್ರಬಂಧಕರಾದ ಎಡ್ರಿಚ್ ಡಿ ಸೋಜ ,ಮುಖ್ಯ ಪ್ರಬಂಧಕ ಸತೀಶ್ ಪಾಟ್ಕರ್ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂ ರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ,ದ.ಕ ಜಿಲ್ಲೆ, ದೇವಿಕಾ ಯೋಗ ತರಬೇತಿ ಕೇಂದ್ರದ ನಿರ್ದೇಶಕಿ ದೇವಿಕಾ ಪುರುಷೋ ತ್ತಮ, ಇನ್ನರ್ ವ್ಹೀಲ್ ಕ್ಲಬ್ ಮಂಗಳೂರು ನಾರ್ತ್ ನ ಅಧ್ಯಕ್ಷೆ ಗೀತಾ ಬಿ.ರೈ,ನಿಕಟ ಪೂರ್ವ ಅಧ್ಯಕ್ಷೆ ವಸಂತಿ ಕಾಮತ್,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ಇರಾ ಸೇರಿ ದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿ ತರಿದ್ದರು. ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿ ದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ವಂದಿಸಿದರು.

Scroll to Top