ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಶೈಕ್ಷಣಿಕ ಮತ್ತು ಸಾಮಾಜಿಕ ಸಾಧಕ ಜಯರಾಮ ಶೇಕರಿಗೆ ಆರ್ಯಭಟ ಪ್ರಶಸ್ತಿ

ಮಂಗಳೂರು:  ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹಿರಿಯ ಸಾರಿಗೆ ಉದ್ಯಮಿ ಎ.ಕೆ.ಜಯರಾಮ ಶೇಕ ಅವರು 50ನೇ ವರ್ಷದ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 22ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.ಹಿರಿಯ ಸಾಧಕ ಎ.ಕೆ. :      ಪ್ರಸ್ತುತ 80 ವರ್ಷ ಪ್ರಾಯದವರಾದ ಹಿರಿಯ ಸಮಾಜ ಸೇವಕ ಎ.ಕೆ. ಜಯರಾಮ ಶೇಕರದ್ದು ಸಾರಿಗೆ ಮತ್ತು ಆಟೋಮೊಬೈಲ್ ಉದ್ಯಮದಲ್ಲಿ ದೊಡ್ಡ ಹೆಸರು. ಬಂಟ್ವಾಳ ತಾಲೂಕಿನ ಅರ್ಕುಳ ಕುಂಪಣ ಮಜಲಿನಲ್ಲಿ ದಿ.ಮಿಜಾರು ಬಾಬು ಶೇಕ ಮತ್ತು ಲಕ್ಷ್ಮಿ ಅವರ ನಾಲ್ಕು ಮಕ್ಕಳಲ್ಲಿ ಮೂರನೆಯವರಾಗಿ ಜನವರಿ 15, 1944 ರಂದು ಅವರು ಜನಿಸಿದರು. ಫರಂಗಿಪೇಟೆಯ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿ ತಮ್ಮ ಸೋದರ ಮಾವ ಎ.ಕೆ. ನಾರಾಯಣ ಶೆಟ್ಟಿಯವರ ಆಶ್ರಯದಲ್ಲಿ ಬೆಳೆದರು. ಹಲವಾರು ಸಂಕಷ್ಟಗಳನ್ನು ಎದುರಿಸಿ 1962 ರಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದರು. ಬಳಿಕ ಕೆಲಕಾಲ ಹೋಟೆಲ್ ವ್ಯವಹಾರವನ್ನು ನಡೆಸಿದರು.ಸಾರಿಗೆ ಉದ್ಯಮಿಯಾಗಿ:       ಆಟೋಮೋಟಿವ್ ಉದ್ಯಮದಲ್ಲಿ ಜಯರಾಮ ಶೇಕರದು ದೀರ್ಘವಾದ ಪ್ರಯಾಣ. 1972 ರಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸಾಕಷ್ಟು ಅನುಭವ ಗಳಿಸಿದ ನಂತರ, ಅವರು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಬಯಲಾಟದ ಬಸ್ಸೊಂದನ್ನು ಖರೀದಿಸಿ ‘ಜ್ಯೋತಿ ಮೋಟಾರ್ಸ್’ ಸ್ಥಾಪಿಸಿದರು. ಜಯರಾಮ ಶೇಕರ ನಾಯಕತ್ವದಲ್ಲಿ  ಪ್ರವರ್ಧಮಾನಕ್ಕೆ ಬಂದ  ಕಂಪನಿ ಮುಂದೆ ‘ಮಹೇಶ್ ಮೋಟಾರ್ಸ್’ ಎಂಬ ಹೆಸರಿನ ಪ್ರಮುಖ ಸಾರಿಗೆ ಉದ್ಯಮವಾಗಿ ಬೆಳೆಯಿತು. 1976 ರ ಹೊತ್ತಿಗೆ ಅದು ಹಲವು ಪ್ರವಾಸಿ ಬಸ್ ಸೇವೆಗಳನ್ನು ಆರಂಭಿಸಿತು.1981 ರಲ್ಲಿ  ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಮೇಘಾಲಯ ಸೇರಿದಂತೆ ಎಂಟು ರಾಜ್ಯಗಳನ್ನು ಒಳಗೊಂಡ ಮಹತ್ವಾಕಾಂಕ್ಷೆಯ ಅಖಿಲ ಭಾರತ ಪ್ರವಾಸವನ್ನು  ಆಯೋಜಿಸಿದುದು ಕಂಪನಿಯ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು.ಮಹೇಶ್ ಆಟೋ ಸ್ಟೋರ್ಸ್:      ಆಪ್ತ ಸ್ನೇಹಿತ ಮತ್ತು ಹಿತೈಷಿ, ಸೆಂಟ್ರಲ್ ಆಟೋ ಸ್ಟೋರ್ಸ್‌ನ ಮ್ಯಾನೇಜರ್  ಲೂಯಿಸ್ ಫುರ್ಟಾಡೊ ಅವರ ಸಲಹೆಯನ್ನು ಅನುಸರಿಸಿ 1992 ರಲ್ಲಿ ಶೇಕರು ಮಂಗಳೂರಿನ ಮೈದಾನ್ ಮೂರನೇ  ಅಡ್ಡರಸ್ತೆಯಲ್ಲಿ  ‘ಮಹೇಶ್ ಆಟೋ ಸ್ಟೋರ್’ ಎಂಬ ಬಿಡಿಭಾಗಗಳ  ಮಾರಾಟ ಮಳಿಗೆ ಸ್ಥಾಪಿಸುವ ಮೂಲಕ ಹೊಸ ಉದ್ಯಮದಲ್ಲಿ ತೊಡಗಿಸಿಕೊಂಡರು.ಕಳೆದ ದಶಕದಲ್ಲಿ ಮಂಗಳೂರಿನ ಮೂಲಸೌಕರ್ಯ ಕ್ಷೇತ್ರದ ಬೆಳವಣಿಗೆಯ ನಡುವೆ ಮಹೇಶ್ ಮೋಟಾರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಸ್ಥಳಗಳಿಗೆ ಸಿದ್ಧ-ಮಿಶ್ರ ಕಾಂಕ್ರೀಟ್ ಅನ್ನು ಸಮರ್ಥವಾಗಿ ಸಾಗಿಸಲು ಹೆವಿ-ಡ್ಯೂಟಿ ಕಾಂಕ್ರೀಟ್ ಮಿಕ್ಸರ್ ಟ್ರಕ್‌ಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ಕಟ್ಟಡ ನಿರ್ಮಾಣ ಕ್ಷೇತ್ರವನ್ನು ವೈವಿಧ್ಯಗೊಳಿಸಲು  ಅವಕಾಶವನ್ನು ಒದಗಿಸಿತು.       ಎ.ಕೆ.ಜಯರಾಮರು 1998 ರಿಂದ ನಾಲ್ಕು ಅವಧಿಗೆ ದಕ್ಷಿಣ ಕನ್ನಡ ಬಸ್ ಮಾಲಿಕರ ಸಂಘದ ಅಧ್ಯಕ್ಷರಾಗಿ ಮತ್ತು ಮೂರು ವರ್ಷಗಳ ಕಾಲ ಕರ್ನಾಟಕ ಬಸ್ ಮಾಲಿಕರ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ  ‘ದಕ್ಷಿಣ ಕನ್ನಡ ಒಪ್ಪಂದ ವಾಹನ ಮಾಲಕರ ಸಂಘದ’ ಅಧ್ಯಕ್ಷರಾಗಿ ಖಾಸಗಿ ಬಸ್ ನಿರ್ವಾಹಕರ ಅಗತ್ಯತೆಗಳನ್ನು ಸಮರ್ಥಿಸಲು ದಣಿವರಿಯದ ಕೆಲಸ ಮಾಡುತ್ತಿದ್ದಾರೆ.           1971 ರಲ್ಲಿ ಶ್ರೀಮತಿ ಪದ್ಮಾವತಿಯವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ ಶೇಕರು ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡು ಮಕ್ಕಳನ್ನು ಪಡೆದಿದ್ದಾರೆ. ನಿರಂತರ ಕಾರ್ಯ ಚಟುವಟಿಕೆಗಳ ನಡುವೆಯೂ ತಮ್ಮ ಕುಟುಂಬ, ವ್ಯಾಪಾರ ಮತ್ತು ವಿವಿಧ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಚಲನಚಿತ್ರ ನಿರ್ಮಾಣ:      ತಮ್ಮ ಉದ್ಯಮದೊಂದಿಗೆ ಕಲೆ, ಸಂಸ್ಕೃತಿ ಮತ್ತು ಶಿಕ್ಷಣದ ಮೇಲೆ ಶೇಕರಿಗೆ ಅಪಾರ ಅಭಿಮಾನ. 1979ರಲ್ಲಿ ಪಿ.ಲಂಕೇಶ್ ಅವರ ‘ಎಲ್ಲಿಂದಲೋ ಬಂದವರು’ ಕನ್ನಡ ಚಲನಚಿತ್ರ ನಿರ್ಮಾಣದ ಪಾಲುದಾರರಾಗಿ ಚಿತ್ರ ರಂಗದಲ್ಲಿಯೂ ಅವರ ಸೇವೆ ಸಂದಿದೆ. ಹಿಂದಿ ಚಿತ್ರರಂಗದ ಸ್ಟಂಟ್ ಮಾಸ್ಟರ್ ರಾಮ್ ಶೆಟ್ಟಿ ಅವರ ‘ಬಂಗಾರ್ದ ಕುರಲ್’ ತುಳು ಚಲನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಯಕ್ಷಗಾನ ಮತ್ತು ಶಿಕ್ಷಣ ಸೇವೆ:     ಭಾರತೀಯ ಲಲಿತ ಕಲೆಗಳ ಮಹಾಪೋಷಕರಾಗಿ ಜಯರಾಮ ಶೇಕರು ಹಲವು ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ನೆರವಾಗಿದ್ದಾರೆ‌. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ವರ್ಷಂಪ್ರತಿ ಆಯೋಜಿಸುವ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದಲ್ಲಿ 1913 ರಿಂದ ನಿರಂತರ ತಮ್ಮ ಮಾವ ಹಿರಿಯ ಯಕ್ಷಗಾನ ಅರ್ಥಧಾರಿ ದಿ.ಎ.ಕೆ. ನಾರಾಯಣ ಶೆಟ್ಟರ ಸಂಸ್ಮರಣ ತಾಳಮದ್ದಳೆಯನ್ನು ನಡೆಸುತ್ತಿದ್ದಾರೆ.        ಶಿಕ್ಷಣದ ಮೇಲಿನ ಆಳವಾದ ಬದ್ಧತೆಯಿಂದ ಅವರು ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ತಾನು ಕಲಿತ ಫರಂಗಿಪೇಟೆ ಶ್ರೀ ರಾಮ ಹೈಯರ್ ಪ್ರೈಮರಿ ಸ್ಕೂಲಿಗಾಗಿ ಮೀಸಲಿಟ್ಟಿದ್ದಾರೆ. ಶಾಲೆಯ ಟ್ರಸ್ಟಿ, ಕಾರ್ಯದರ್ಶಿ ಮತ್ತು ಶತಮಾನೋತ್ಸವ ಆಚರಣೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ‘ಜಯಪದ್ಮ’ ಎಂಬ ನೂತನ ಸಭಾಂಗಣವನ್ನು ಕಟ್ಟಿಸಿಕೊಟ್ಟಿದ್ದಾರೆ.ಶಾಲಾ ಮಕ್ಕಳ ಮೇಲಿನ ವಾತ್ಸಲ್ಯ ಎಳೆಯ ಮಕ್ಕಳು ಅವರಲ್ಲಿ ಪ್ರೀತಿಯ ಅಜ್ಜನನ್ನು ಕಾಣುವಂತೆ ಮಾಡಿದೆ. ಸಂಘ ಸಂಸ್ಥೆಗಳಲ್ಲಿ:    ಜಯರಾಮ ಶೇಕರು 1972ರಲ್ಲಿ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ರಂಗದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 2019 ರಲ್ಲಿ ಫರಂಗಿಪೇಟೆಯ ರೋಟರಿ ಕ್ಲಬ್‌ ಅಧ್ಯಕ್ಷರಾಗಿ   ವಿವಿಧ ಸಮಾಜೋಪಯೋಗಿ ಕೆಲಸಗಳ ನೇತೃತ್ವ ವಹಿಸಿದ್ದರು. ಪರಿಸರದ ಹಲವು ದೇವಾಲಯಗಳ ಅಭಿವೃದ್ಧಿ ಮತ್ತು ನವೀಕರಣಕ್ಕೆ ಉದಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ಅಲ್ಲಿನ ಧಾರ್ಮಿಕ – ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಪ್ರಶಸ್ತಿ – ಪುರಸ್ಕಾರ:      ಎ.ಕೆ.ಜಯರಾಮ ಶೇಕರಿಗೆ 75ವರ್ಷ ತುಂಬಿದ ಸಂದರ್ಭದಲ್ಲಿ ಅವರ ಕುಟುಂಬ ವರ್ಗ ಮತ್ತು ಬಂಧು ಮಿತ್ರರು ಅವರನ್ನು ಸಪತ್ನಿಕರಾಗಿ ಗೌರವಿಸಿ ಸಾರ್ವಜನಿಕ ಸಮ್ಮಾನ ನೀಡಿದ್ದಾರೆ. ಕಲಾ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ 2019 ರಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಿ ಗೌರವಿಸಿದೆ. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಹಿರಿಯ ರೊಟೇರಿಯನ್ ಎಂದು ಗೌರವಿಸಲ್ಪಟ್ಟಿದ್ದಾರೆ.ಆಟೋಮೊಬೈಲ್ ಉದ್ಯಮಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ ದ.ಕ. ಆಟೋಮೊಬೈಲ್ ಮತ್ತು ಟೈಯರ್ ಡೀಲರ್ಸ್ ಅಸೋಸಿಯೇಷನ್ (ರಿ.) ಸೆಪ್ಟೆಂಬರ್ 22, 2024 ರಂದು ಅವರನ್ನು ‘ಜೀವಮಾನ ಪ್ರಶಸ್ತಿ’ ಯೊಂದಿಗೆ ಸನ್ಮಾನಿಸಿದೆ.  ಹೀಗೆ ಇನ್ನೂ ಹಲವಾರು ಸಂಸ್ಥೆಗಳಿಂದ ಶೇಕರು ಗೌರವ ಸಮ್ಮಾನಗಳನ್ನು ಪಡೆದಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು: ಫಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ 11 ಮಕ್ಕಳಿಗೆ ಪ್ರಥಮ ಪರಮ ಪವಿತ್ರ ಪ್ರಸಾದ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಪ್ರಥಮ ಪರಮ ಪವಿತ್ರ ಪ್ರಸಾದ ಸಮಾರಂಭ ಭಾನುವಾರ ನಡೆಯಿತು.ಎಲ್ ರೊಯ್ ನೊರೊನ್ಹಾ, ವೀರಾ ರೇಚಲ್ ಡಿ ಸೋಜಾ, ಸ್ವಿಜಲ್ ಸಿಯಾ ಫೆರ್ನಾಂಡಿಸ್, ಅರ್ನಾಲ್ಡ್ ಜೋಸ್ಪಾ ಡಿ ಸಿಲ್ವಾ, ಕೆವಿನ್ ಡಿ ಸೋಜಾ, ರೊಸ್ವಿನ್ ಡಿ ಸೋಜಾ, ಈವಾ ಮೈರಾ ಡಿ ಮೆಲ್ಲೊ, ಜಿಯಾ ನಿಶಿತಾ ವೇಗಸ್, ನತಾಲಿಯಾ ಸಾರಾ ಕ್ರಾಸ್ತಾ, ನಿವಿಲ್ ನೀಲ್ ಡಿ ಸೋಜಾ, ಜೆಸೆಲ್ ವಿಯಾ ಕ್ರಾಸ್ತಾ ಎಂಬ 11 ಜನ ಮಕ್ಕಳು ಪ್ರಥಮವಾಗಿ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದರು.ಚರ್ಚಿನ ಪ್ರಧಾನ ಧರ್ಮ ಗುರು ಫಾ. ಆಲ್ಬನ್ ಡಿ ಸೋಜಾ ಮತ್ತು ಬೆಳ್ಳೂರಿನ ಫಾ. ಸಿರಿಲ್ ವಾಲ್ಡರ್ ಅವರ ಉಪಸ್ಥಿತಿಯಲ್ಲಿ ಸಂಭ್ರಮದ ಬಲಿ ಪೂಜೆ ನಡೆಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಕ್ರೈಸ್ತ ಶಿಕ್ಷಣ ಸಂಚಾಲಕಿ ಲಿಝೀ ಫೆರ್ನಾಂಡಿಸ್,ಶಿಕ್ಷಕಿ ರೆನಿಟಾ ಟೆಲ್ಲಿಸ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕಾಸರಗೋಡು ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರದಾನ. ತನಿಖಾ ಪತ್ರಿಕೋದ್ಯಮಕ್ಕಾಗಿ ಇಕ್ಬಾಲ್ ಕುತ್ತಾರ್ ಪ್ರಶಸ್ತಿ ಸ್ವೀಕಾರ

ಮಂಗಳೂರು: ಕನ್ನಡ ಪತ್ರಿಕೋದ್ಯಮಕ್ಕೆ ಸಲ್ಲಿಸುವ ಶ್ರೇಷ್ಠ ಸೇವೆಗಾಗಿ ಕರ್ನಾಟಕ, ಕೇರಳ ಹಾಗೂ ಮುಂಬೈಯ ಪತ್ರಕರ್ತರಿಗೆ ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ನೀಡಲ್ಪಡುವ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವು ನಿನ್ನೆ ಕಾಸರಗೋಡಿನಲ್ಲಿ ನಡೆದಿದ್ದು, ತನಿಖಾ ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಕಾಲ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಮಂಗಳೂರಿನ ಪತ್ರಕರ್ತ ಇಕ್ಬಾಲ್ ಕುತ್ತಾರ್ ಈ ಪ್ರಶಸ್ತಿಗೆ ಭಾಜನರಾಗಿ ಸದ್ರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.ಮೂರು ರಾಜ್ಯಗಳ ಅರ್ಹ 21 ಪತ್ರಕರ್ತರು ಸದ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪೈಕಿ ‘ಎನ್ಕೌಂಟರ್’ ಪತ್ರಿಕೆಯ ಸಂಪಾದಕರಾದ ಇಕ್ಬಾಲ್ ಕುತ್ತಾರ್ ರಾಜ್ಯದಲ್ಲಿ ತನಿಖಾ ವರದಿಗಾರಿಕೆಗೆ ಕಳೆದ 3 ದಶಕಗಳ ಕಾಲ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಎಡನೀರು ಮಠದ ಶ್ರೀಗಳಾದ ಸಚ್ಚಿದಾನಂದ ಭಾರತಿ ಶ್ರೀಪಾದಂಗಳ್ ಅವರ ಆಶೀರ್ವಚನದೊಂದಿಗೆ ಪ್ರಾರಂಭಗೊಂಡ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಸಚಿವರಾದ ಶ್ರೀ ಎನ್. ಚೆಲುವರಾಯ ಸ್ವಾಮಿ ಪ್ರಶಸ್ತಿ ಪ್ರದಾನಿಸಿದ್ದು, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆ. ಕೆ. ಶೆಟ್ಟಿ, ಸೋಮಣ್ಣ ಬೇವಿನ ಮರದ, ಟಿ. ಎಂ. ಶಹೀದ್, ಕನ್ಯಾನ ಸದಾಶಿವ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಕಾಸರಗೋಡು ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಯ್ಕಾಪು ಪ್ರಸ್ತಾವನೆ ಮಾಡಿದ ಕಾರ್ಯಕ್ರಮವನ್ನು ರಫೀಕ್ ಮಾಸ್ಟರ್ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ವಕೀಲರ ಸಂಘ ಬಂಟ್ವಾಳ: ನೂತನ ಅಧ್ಯಕ್ಷರಾಗಿ ರಿಚರ್ಡ್ ಕೋಸ್ತಾ ಎಂ. ಮರು ಆಯ್ಕೆ. ಪ್ರತಿಸ್ಪರ್ಧಿ ರಾಜೇಶ್ ಬೊಳ್ಳುಕಲ್ಲು ಪರಾಭವ.

(ಜಯಾನಂದ ಪೆರಾಜೆ ಬಂಟ್ವಾಳ)ವಕೀಲರ ಸಂಘ (ರಿ), ಬಂಟ್ವಾಳ ಇದರ 2025-27ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ಶನಿವಾರ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿ ರಿಚರ್ಡ್ ಕೋಸ್ತಾ ಎಂ. ಸ್ಪರ್ಧೆ ಮಾಡಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಎರಡನೇ ಬಾರಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದಯಾನಂದ ರೈ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ನರೇಂದ್ರನಾಥ ಭಂಢಾರಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷತಾ ಶೆಟ್ಟಿ, ಕೋಶಾಧಿಕಾರಿಯಾಗಿ ಜೆಸಿಂತಾ ಕ್ರಾಸ್ತಾ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರ ಚನಾವಣೆಗಾಗಿ 244 ಅರ್ಹ ಮತದಾರರ ಪಟ್ಟಿಯಲ್ಲಿ 222 ಮತಗಳು ಚಲಾವಣೆ ಯಾಗಿದ್ದು ರಿಚರ್ಡ್ ಕೋಸ್ತಾ ಎಂ. ರವರು 123 ಮತಗಳನ್ನು ಪಡೆದು ಜಯ ಗಳಿಸಿರುತ್ತಾರೆ.ಪ್ರತಿಸ್ಪರ್ಧಿಯಾಗಿ ಪೈಪೋಟಿ ನೀಡಿದ ರಾಜೇಶ್ ಬೊಳ್ಳುಕಲ್ಲು 95 ಮತಗಳನ್ನು ಪಡೆಯಲು ಸಮರ್ಥರಾದರು. ವಕೀಲರಾದ ಎಚ್. ಸತೀಶ್ ರಾವ್ ರವರು ಮುಖ್ಯ ಚುನಾವಣಾಧಿಕಾರಿಯಾಗಿದ್ದರು ಕೆ. ವಿ. ಭಟ್ ಮತ್ತು ಎಂ. ವಿ. ಭಟ್ ಉಪ ಚುನಾವಣಾಧಿಕಾರಿಗಳಾಗಿ ಸೀನಿಯರ್ ಕಮಿಟಿ ಸದಸ್ಯರಾದ ಎಂ. ಈಶ್ವರ ಉಪಾಧ್ಯಾಯರ ಮೇಲುಸ್ತುವಾರಿಯಲ್ಲಿ ಮತದಾನ ಪ್ರಕ್ರಿಯೆ ನಡೆದಿರುತ್ತದೆ.

ಪ್ರಾದೇಶಿಕ ವಾರ್ತೆಗಳು

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

ಈ ವಷ೯ದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಮೂಡಬಿದ್ರೆ ಎಕ್ಸಲೆಂಟ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾಥಿ೯ ಅನೀಷ್ ಮುಹಮ್ಮದ್ ಹುಸೈನ್ ಅವರು 572 ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.ಇವರು ಆಕು೯ಳ ನಡುಗುಡ್ಡೆ ನಿವಾಸಿ ಅಬ್ದುಲ್ ರಹಿಮಾನ್ ಮತ್ತು ಆಯಿಷಾ ಅವರ ಪುತ್ರ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಬಜ್ಪೆ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ, ದುಷ್ಕರ್ಮಿಗಳ ಪತ್ತೆ ಹಚ್ಚಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ ಸಭಾಧ್ಯಕ್ಷ ಯು.ಟಿ.ಖಾದರ್

ಮಂಗಳೂರು – ಬಜ್ಪೆ ಕಿನ್ನಿಪದವು ಪ್ರದೇಶದಲ್ಲಿ ಸುಹಾಸ್ ಶೆಟ್ಟಿ ಎಂಬವರ ಕೊಲೆ ನಡೆದಿದ್ದು ,ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ,ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಾಡಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಭಾಧ್ಯಕ್ಷ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆಯೊಂದಿಗೂ ಚರ್ಚೆ ನಡೆಸಿದ ಯು.ಟಿ ಖಾದರ್ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಬೇಕಾದ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚನೆ ನೀಡಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವಾರ್ತಾ ಇಲಾಖೆ ವಿಶ್ವನಾಥ ಜೋಗಿ ನಿವೃತ್ತಿ. ಬೀಳ್ಕೊಡುಗೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಇಲ್ಲಿ ಕಳೆದ 25 ವರ್ಷಗಳಿಂದ ಸಿಬ್ಬಂದಿಯಾಗಿದ್ದ ವಿಶ್ವನಾಥ ಜೋಗಿಯವರು ಎಪ್ರಿಲ್ 30ರಂದು ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಅವರಿಗೆ ವಾರ್ತಾ ಇಲಾಖೆ ಮಂಗಳೂರಿನ ಕಚೇರಿಯಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಷಾ ಅವರ ನೇತೃತ್ವದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೇಪಾಡಿ, ಪತ್ರಕರ್ತರು ಮತ್ತು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ನಿಟಿಲಾಪುರದಲ್ಲಿ‌ ಅತಿಮಹಾರುದ್ರಯಾಗ. ಮೇ 2ರಿಂದ 4ರ ವರೆಗೆ

ಬಂಟ್ವಾಳ: ಅತಿಮಹಾರುದ್ರಯಾಗ ಸಮಿತಿ ವತಿಯಿಂದ ಮೊಗರ್ನಾಡು ಸಾವಿರ ಸೀಮೆ,ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ.2 ರಿಂದ ಮೇ. 4 ರವರಗೆ ಅತಿಮಹಾರುದ್ರಯಾಗ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ತಿಳಿಸಿದ್ದಾರೆ.ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.ಈ ಯಾಗದ ಅಂಗವಾಗಿ ಚಾಂದ್ರಮಾನ ಯುಗಾದಿಯ ಸಂದರ್ಭದಲ್ಲಿ ದೀಪ ಪ್ರಜ್ವಲಿಸಿ ಪ್ರಾರಂಭವಾದ ಪಾರಾಯಣ ಎ. 29 ರ ವರೆಗೆ 18158 ಪಾರಾಯಣಗಳು ಪೂರ್ತಿಯಾಗಿದೆ.ವಾರಣಾಸಿಯ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ,ಮಾರ್ಗದರ್ಶನದಲ್ಲಿ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ನಾಡಿನ ಸಮಸ್ತ ಸಂಸ್ಥಾನದ‌ಮಠಾದೀಶರುಗಳ ದಿವ್ಯ ಉಪಸ್ಥಿತಿ,ವಿವಿಧ ಪುಣ್ಯ ಕ್ಷೇತ್ರಗಳ ಧರ್ಮಾಧಿಕಾರಿಗಳು ,ಧರ್ಮದರ್ಶಿಗಳು, ಧಾರ್ಮಿಕ ಮುಖಂಡರುಗಳ ಸಹಭಾಗಿತ್ವದಲ್ಲಿ ಸಹಕಾರದಲ್ಲಿ ಲೋಕಲ್ಯಾಣಾರ್ಥವಾಗಿ ಅತಿಮಹಾರುದ್ರಯಾಗ ಸಂಕಲ್ಪದಂತೆ ನಡೆಯಲಿದೆ ಎಂದು ಅವರು ತಿಳಿಸಿದರು. ಸಾರ್ವಜನಿಕವಾಗಿಯೇ ಏರ್ಪಡಿಸುತ್ತಿರುವುದು ಯಾಗದ ವಿಶೇಷವಾಗಿದೆ ಎಂದು ಹೇಳಿದರು.ಮೇ.2 ರಂದು ಶತರುದ್ರಾಭಿಷೇಕ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೇ.3 ರಂದು ಕ್ಷೇತ್ರಕ್ಕೆ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆ ಶೋಭಯಾತ್ರೆ ನಡೆಯಲಿದೆ.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೇ. 4 ರಂದು ಅತಿಮಹಾರುದ್ರಯಾಗ ನಡೆಯಲಿದ್ದು, ಸಂಜೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.ಮೂರು ದಿನಗಳಲ್ಲಿ ಸಾವಿರಾರು ಭಕ್ತರು ಯಾಗದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.ಸಚಿನ್ ರೈ ಮಾಣಿ, ಅಜಿತ್ ಕುಮಾರ್ ಬರಿಮಾರ್, ಗಣೇಶ್ ಶೆಟ್ಟಿ ಗೋಳ್ತಮಜಲು, ತೋಟ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು. ಕಲ್ಲಡ್ಕದಿಂದ ನೆಟ್ಲ ಕ್ಷೇತ್ರಕ್ಕೆ ವಾಹನ ವ್ಯವಸ್ಥೆ ಮಾಡಲಾಗುವುದು.ಪ್ರತಿದಿನ ಸಹಸ್ರಾರು ಮಂದಿ ಬರುವ‌ ಭಕ್ತಾದಿಗಳಿಗೆ ಅನ್ನಸಂತರ್ಪಣೆ,ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಕ್ರೀಡಾ ಪ್ರತಿಭೆಗಳಿಗೆ ಉದ್ಯೋಗ ಭದ್ರತೆ ಕಲ್ಪಿಸುವುದು ಅವಶ್ಯ-ಅಂತಾರಾಷ್ಟ್ರೀಯ ದೇಹದಾಡ್ಯ ಪಟು ರೇಮಂಡ್ ಡಿಸೋಜಾ

ಮಂಗಳೂರು: ಛಲ, ಶಿಸ್ತು, ಕಠಿಣ ಪರಿಶ್ರಮ ಇದ್ದರೆ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಯುವ ಕ್ರೀಡಾಪ್ರತಿಭೆಗಳು ವೈಯಕ್ತಿಕ ಸಾಧನೆಯ ಜತೆಗೆ ದೇಶಕ್ಕೆ ಕೀರ್ತಿ ತರುವ ಉನ್ನತ ಕನಸು ಕಾಣಬೇಕು ಎಂದು ಅಂತಾರಾಷ್ಟ್ರೀಯ ದೇಹದಾಡ್ಯ ಪಟು, ಮಿ. ವರ್ಲ್ಡ್ ರೇಮಂಡ್ ಡಿಸೋಜಾ ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಪ್ರತಿಭೆಗಳಿಗೆ ಬ್ಯಾಂಕ್ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಇಲ್ಲದಾಗಿದೆ. ಉದ್ಯೋಗದಲ್ಲಿ ಕ್ರೀಡಾ ಕೋಟಾ ಕಡಿಮೆಯಾದ ಕಾರಣ ವಿದ್ಯಾರ್ಥಿಗಳು ಕ್ರೀಡೆಯಿಂದ ವಿಮುಖರಾಗುವ ವಾತಾವರಣ ನಿರ್ಮಾಣವಾಗಿದೆ. ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕು ’ಎಂದರು.ಹದಿ ಹರೆಯದಲ್ಲೇ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಛಲ ಮೂಡಿತು. ಹಾಗಾಗಿ ಬಡತನ ಇದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಿದೆ. ಬಂಟ್ವಾಳದ ಮೊಡಂಕಾಪುವಿನಲ್ಲಿ ಪ್ರೌಢ ಶಿಕ್ಷಣ ಪಡೆದ ಬಳಿಕ ಬಡತನದ ಕಾರಣ ವಿದ್ಯಾಭ್ಯಾಸ ಮುಂದುವರಿಸಲು ಆಗಲಿಲ್ಲ. ಓದಿನಲ್ಲಿ ಹೆಚ್ಚಿನ ಉದ್ಯೋಗ ಆಸಕ್ತಿಯೂ ಇರಲಿಲ್ಲ. ಉದ್ಯೋಗ ಅರಸಿ ಮಂಗಳೂರಿಗೆ ಬಂದವನು ಅಲೋಶಿಯಸ್ ಹಾಸ್ಟೆಲ್‌ನಲ್ಲಿ ಕೆಲಸಕ್ಕೆ ಸೇರಿದೆ. ಸುಮಾರು ನೂರು ವಿದ್ಯಾರ್ಥಿಗಳಿಗೆ 3 ಸಿಬ್ಬಂದಿ ಅಡುಗೆ ಮಾಡಬೇಕಿತ್ತು. ತುಂಬಾ ಕಷ್ಟದ ಕೆಲಸದ ಮಧ್ಯೆಯೂ ಸಾಯಂಕಾಲ ಜಿಮ್‌ಗೆ ಹೋಗಿ ಅಭ್ಯಾಸ ಮಾಡುತ್ತಿದ್ದೆ. ಈಗಿನಂತೆ ಟ್ರಾಕ್ ಸೂಟ್, ಶೂ, ಪೌಷ್ಟಿಕ ಆಹಾರ ಯಾವ ಸೌಲಭ್ಯವೂ ಇರಲಿಲ್ಲ. ಮಣ್ಣಿನ ಅಖಾಡದಲ್ಲಿ ಅಭ್ಯಾಸ ಮಾಡಬೇಕಿತ್ತು. ಜಿಮ್‌ನಲ್ಲಿ ತರಬೇತುದಾರ ರಾಮಕೃಷ್ಣ ಅವರು , ಬಳಿಕ ಗುರುಗಳಾದ ಗಣೇಶ್ ಪಾಂಡೇಶ್ವರ, ಎಂ.ಎಸ್.ಕುಮಾರ್ ಪ್ರೋತ್ಸಾಹ ನೀಡಿದರು. ಬಾಡಿ ಬಿಲ್ಡಿಂಗ್ ಬಗ್ಗೆ ಯಾವುದೇ ಜ್ಞಾನ ಇಲ್ಲದ ನನ್ನಂತ ಹಳ್ಳಿ ಹುಡುಗನನ್ನು ಸ್ಪರ್ಧೆಗೆ ಅಣಿಗೊಳಿಸಿದರು ಎಂದು ರೇಮಂಡ್ ಡಿಸೋಜಾ ಹಿಂದಿನ ದಿನಗಳನ್ನು ಸ್ಮರಿಸಿಕೊಂಡರು.ಸುರತ್ಕಲ್‌ನಲ್ಲಿ ನಡೆದ ಮೊದಲ ಒಂದು ಸ್ಪರ್ಧೆಯಲ್ಲೇ ಪ್ರಥಮ ಬಹುಮಾನ ಗಳಿಸಿದೆ. ಮುಂದೆ ಪ್ರತೀ ಸ್ಪರ್ಧೆಯಲ್ಲೂ ಗೆಲುವು ಸಾಧಿಸಿದೆ. ಆತ್ಮ ವಿಶ್ವಾಸ ಮೂಡಿತು. ಅದೇ ವೇಳೆ ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಕ್ರೀಡಾ ಕೋಟಾದಲ್ಲಿ ಉದ್ಯೋಗ ದೊರೆಯಿತು. ಬ್ಯಾಂಕ್ ನೀಡಿದ ಪ್ರೋತ್ಸಾಹದಿಂದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. 23ನೇ ವಯಸ್ಸಿಗೆ ಭಾರತ್ ಕಿಶೋರ್, ಭಾರತ್ ಕುಮಾರ್, ಭಾರತ್ ಶ್ರೀ ಪ್ರಶಸ್ತಿಗಳನ್ನು ಗೆದ್ದಿದೆ. 1990ರಲ್ಲಿ ಜಪಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮಿ.ವರ್ಲ್ಡ್ ಪ್ರಶಸ್ತಿ ಗೆದ್ದೆ. ಪ್ರಥಮ ಬಾರಿಗೆ ಭಾರತೀಯನೊಬ್ಬ ಈ ಪ್ರಶಸ್ತಿ ಗೆದ್ದ ಹೆಮ್ಮೆ ನನ್ನದು . ಹಿಂದೆ ಕ್ರೀಡೆಯಲ್ಲಿ ನಗದು ಬಹುಮಾನ ಇರಲಿಲ್ಲ. ದೇಶಕ್ಕೆ ಪದಕ ಗೆಲ್ಲುವುದೇ ನಮಗೆ ಖುಷಿಯ ವಿಷಯವಾಗಿತ್ತು ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಕೇಶವ ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ , ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಆಯ್ಕೆ: ಮೇ 22 ಕ್ಕೆ ಪ್ರಶಸ್ತಿ ಪ್ರದಾನ

ಮಂಗಳೂರು: ಶೈಕ್ಷಣಿಕ ಸೇವಾಸಕ್ತ, ಸಮಾಜ ಸೇವಕ ಮತ್ತು ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ಸುವರ್ಣ ಸಂಭ್ರಮದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ 2024 – 25 ನೇ ಸಾಲಿಗೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಭಾರತೀಯ ಪ್ರಜೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ. ಬೊಂಡಾಲ ಸಚ್ಚಿದಾನಂದ ಶೆಟ್ಟಿ:ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ 1961 ಸಪ್ಟೆಂಬರ್ 25 ರಂದು ಜನಿಸಿದ ಸಚ್ಚಿದಾನಂದ ಶೆಟ್ಟರು ನರಿಕೊಂಬು ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪಾಣೆಮಂಗಳೂರು ಶಾರದಾ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ, ಬಂಟ್ವಾಳದ ಎಸ್‌.ವಿ.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಮುಂಬೈ ಮಹಾನಗರದಲ್ಲಿ ವೃತ್ತಿಜೀವನ ಆರಂಭಿಸಿದ ಅವರು ಭಾರತೀಯ ವಿಮಾನಯಾನ ಹಾಗೂ ವಿವಿಧ ಕಂಪನಿಗಳ ಲೆಕ್ಕಪತ್ರ ವಿಭಾಗದಲ್ಲಿ ಸುಮಾರು 14 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಊರಿಗೆ ಹಿಂತಿರುಗಿ ದುರ್ಗಾ ಫೆಸಿಲಿಟೀಸ್ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈ. ಲಿ. ಎಂಬ ಸಂಸ್ಥೆಯನ್ನು 2007 ರಲ್ಲಿ ಸ್ಥಾಪಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಅದರ ಶಾಖೆಗಳನ್ನು ತೆರೆದು ತಮ್ಮ ಸೇವೆಯನ್ನು ವಿಸ್ತರಿಸಿರುತ್ತಾರೆ. ಶಿಕ್ಷಣ ಸಂಸ್ಥೆ ದತ್ತು ಸ್ವೀಕಾರ:ಸಮಾಜ ಸೇವೆ ಮತ್ತು ಶೈಕ್ಷಣಿಕ ಆಸಕ್ತಿ ಹೊಂದಿರುವ ಬೊಂಡಾಲ ಸಚ್ಚಿದಾನಂದ ಶೆಟ್ಟರು 2012 ರಲ್ಲಿ ಶಂಭೂರು ಸರಕಾರಿ ಪ್ರೌಢಶಾಲೆಯನ್ನು ದತ್ತು ಪಡೆದುಕೊಂಡು ತಮ್ಮ ಸ್ವಂತ ಹಣದಿಂದ ಹಾಗೂ ಇತರರ ನೆರವಿನಿಂದ ಅದರ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಿದ್ದಾರೆ. ಅವರ ಸಹೋದರ ದಿ.ಬೊಂಡಾಲ ಜಗನ್ನಾಥ ಶೆಟ್ಟರ ಹೆಸರಿನಲ್ಲಿರುವ ಈ ಶಾಲೆ ಪ್ರಸ್ತುತ ರಾಜ್ಯದ ಮಾದರಿ ಶಾಲೆಯೆಂಬ ಗೌರವಕ್ಕೆ ಪಾತ್ರವಾಗಿದೆ. ಶಾಲೆಗೆ ಬರುವವರು ಬಡ ವಿದ್ಯಾರ್ಥಿಗಳಾಗಿದ್ದು ಸುಸಜ್ಜಿತ ತರಗತಿ ಕೊಠಡಿ, ವಾಚನಾಲಯ, ಅಡುಗೆ ಶಾಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಒದಗುವ ಎಲ್ಲಾ ಬಗೆಯ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತಿದೆ. ಇದಲ್ಲದೆ ತಮ್ಮ ದುರ್ಗಾ ಫೆಸಿಲಿಟೀಸ್ ಸಂಸ್ಥೆಯ ಮೂಲಕ ಸುಮಾರು 800 ಮಂದಿ ಬಡ – ಮಧ್ಯಮ ವರ್ಗದ ಪುರುಷರು ಮತ್ತು ಮಹಿಳೆಯರಿಗೆ ಅವರು ಉದ್ಯೋಗ ಕಲ್ಪಿಸಿ ಕೊಟ್ಟಿದ್ದಾರೆ. ಸಮಾಜ ಸೇವೆ:ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿರುವ ಬಿ.ಎಸ್. ಶೆಟ್ಟರು ಅದರ ಮೂಲಕ ವಿವಿಧ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಸ್ಥಳೀಯ ಯುವ ಸೇವಾ ಟ್ರಸ್ಟ್ ಇದರ ಬೆಳ್ಳಿ ಹಬ್ಬದ ಗಣೇಶೋತ್ಸವ ಮತ್ತು ಬೊಂಡಾಲ ಬಯಲಾಟ ಸಮಿತಿಗಳ ಅಧ್ಯಕ್ಷರಾಗಿ ರಜತ ಮಹೋತ್ಸವ ಮತ್ತು ಸುವರ್ಣ ಸಂಭ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಮಾಜದ ಸಾಧಕರಿಗೆ ಗೌರವ ಪುರಸ್ಕಾರಗಳನ್ನು ನೀಡುತ್ತಿದ್ದಾರೆ. ಬೊಂಡಾಲ ಪ್ರಶಸ್ತಿ:ಖ್ಯಾತ ಯಕ್ಷಗಾನ ಅರ್ಥಧಾರಿಗಳಾಗಿದ್ದ ತಮ್ಮ ಅಜ್ಜ ಪಟೇಲ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ತಂದೆ ನಿವೃತ್ತ ಭೂಮಾಪನ ಅಧಿಕಾರಿ ಬೊಂಡಾಲ ರಾಮಣ್ಣ ಶೆಟ್ಟರ ಸ್ಮರಣಾರ್ಥ ವರ್ಷಂಪ್ರತಿ ಹಿರಿಯ ಯಕ್ಷಗಾನ ಕಲಾವಿದರನ್ನು ಆಯ್ದು ‘ಬೊಂಡಾಲ ಪ್ರಶಸ್ತಿ ಪ್ರದಾನ’ ಮಾಡುತ್ತಿರುವ ಶೆಟ್ಟರು ಕಲಾವಿದರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ಧಾರ್ಮಿಕ ಸಂಘಟನೆಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ. ಪ್ರತಿ ವರ್ಷ ತಮ್ಮ ಬೊಂಡಾಲ ಮನೆಯಲ್ಲಿ ಹಿರಿಯರ ಕಾಲದಿಂದ ನಡೆಯುತ್ತಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.ಪ್ರಶಸ್ತಿ – ಪುರಸ್ಕಾರ:ತಮ್ಮ ಬಿಡುವಿಲ್ಲದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಬಿ.ಎಸ್. ಶೆಟ್ಟರು 2017ರಲ್ಲಿ ಕರ್ನಾಟಕ ಸರಕಾರದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯಿಂದ ಗೌರವ ಸನ್ಮಾನಗಳನ್ನು ಪಡೆದಿದ್ದಾರೆ. ಉದ್ಯಮ ಕ್ಷೇತ್ರದ ಸಾಧನೆಗಾಗಿ ದೇಶದ ಅತ್ಯುತ್ತಮ ಪ್ರಶಸ್ತಿಗಳಾದ ಸ್ಕಾಚ್ ಆರ್ಡರ್ ಆಫ್ ಮೆರಿಟ್ ಅವಾರ್ಡ್ (Skoch order of merit award) ಮತ್ತು ಇಂಡಿಯಾ 5000 ಬೆಸ್ಟ್ ಎಂ.ಎಸ್.ಎಂ.ಇ (India 5000 best MSME) ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ.ಕಡಂಬೆಟ್ಟು ಅನುಸೂಯ ಅವರನ್ನು ವಿವಾಹವಾಗಿ ದೇವಿಕಾ ಮತ್ತು ದೇವಿಪ್ರಸಾದ್ ಎಂಬ ಇಬ್ಬರು ಮಕ್ಕಳನ್ನು ಹೊಂದಿರುವ ಸಚ್ಚಿದಾನಂದ ಶೆಟ್ಟರು ಪ್ರಸ್ತುತ ಮಂಗಳೂರಿನ ಪಡೀಲಿನಲ್ಲಿ ನೆಲೆಸಿದ್ದಾರೆ.ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ:ಇದೇ ಮೇ 22, 2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗುವ 50ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೊಂಡಾಲ ಸಚ್ಚಿದಾನಂದ ಶೆಟ್ಟರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

Scroll to Top