ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮೈತ್ರಿ ಮಲ್ಲಿಗೆ ಮಿಸ್ಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ.200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಪರ್ಧಿಗಳಿದ್ದ ಕಣದಲ್ಲಿ ರಾಜ್ಯಕ್ಕೆ ಪ್ರಶಸ್ತಿ ಗೆದ್ದು ಕೊಟ್ಟ ಏಕೈಕ ಸಾಧಕಿ

ಮಂಗಳೂರು: ಹೊಸದಿಲ್ಲಿಯ ಲೀಲಾ ಪ್ಯಾಲೇಸ್‌ನಲ್ಲಿ ಜುಲೈ 12 ರಂದು ಗ್ಲಾಮರ್ ಗುರ್ಗಾಂವ್ ಆಯೋಜಿಸಿದ್ದ ಮಿಸ್ಸ್ ವಲ್ಡ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಮಂಗಳೂರಿನ ಮೈತ್ರಿ ಮಲ್ಲಿ ಅವರು ಮಿಸ್ಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ ಗೆಲ್ಲುವ ಮೂಲಕ ಕರಾವಳಿ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಇದು ಕರ್ನಾಟಕ ರಾಜ್ಯ ಗೆದ್ದ ಏಕೈಕ ಪ್ರಶಸ್ತಿಯಾಗಿದೆ. ದುಬೈ, ಆಸ್ಟ್ರೇಲಿಯಾ, ಲಂಡನ್, ಯುಎಸ್‌ಎ ಮುಂತಾದ ಅನೇಕ ದೇಶಗಳ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಮೈತ್ರಿ ಅವರ ವಿಭಾಗದಲ್ಲಿ 200ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರು.ಮೈತ್ರಿ ಮಲ್ಲಿ ಅವರು ದಿ. ಬನ್ನಂಪಳ್ಳಿ ಮಧುಕರ್ ಮಲ್ಲಿ ಮತ್ತು ಅಂಜಾರ ಬೀಡು ವಿಜಯಲಕ್ಷ್ಮಿ ಎಂ. ಮಲ್ಲಿ ಅವರ ಪುತ್ರಿ ಹಾಗೂ ವಿಕಾಸ್ ಮನೋಹರ್ ಅವರ ಪತ್ಮಿ. ಮೋಹಿತ್ ಮಲ್ಲಿಯವರ ಸಹೋದರಿ. ಎಂಬಿಎ, ಎಂಜಿನಿಯರ್ ಪದವೀಧರರಾಗಿರುವ ಇವರು ಅಟೊಮ್ ಫಿಟ್ನೆಸ್ ಕ್ಲಬ್ ಮಂಗಳೂರಿನ ಸಹ-ಸಂಸ್ಥಾಪಕಿಯೂ ಆಗಿದ್ದಾರೆ.ಮೈತ್ರಿ ಮಲ್ಲಿ ಅವರು ಈ ಹಿಂದೆಯೂ ಅನೇಕ ಪ್ರಶಸ್ತಿ ಗೆದ್ದಿದ್ದಾರೆ. 2003 ರಲ್ಲಿ ಮಿಸ್ ಮ್ಯಾಂಗಲೂರು, ಮತ್ತು 2012 ರಲ್ಲಿ ಮಿಸ್ ಬಂಟ್ ವರ್ಲ್ಡ್ ಕಿರೀಟ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್ ಕೂಡ ಆಗಿರುವ ಮೈತ್ರಿ ಅವರು ಅತ್ಯುತ್ತಮ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಓದುವ ಹವ್ಯಾಸದಿಂದ ವ್ಯಕ್ತಿತ್ವ ವಿಕಸನ-ಡಾ.ಮೀನಾಕ್ಷಿ ರಾಮಚಂದ್ರ

ಮಂಗಳೂರು: ಪುಸ್ತಕ ಓದುವ ಹವ್ಯಾಸದಿಂದ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಅಪಾರ ಜ್ಞಾನ ಸಂಪತ್ತು ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳು ಜ್ಞಾನ, ಬುದ್ಧಿ, ಮೌಲ್ಯದ ಕ್ರಿಯಾಶೀಲ ವಿಕಸನಕ್ಕಾಗಿ ಪಠ್ಯಕ್ರಮಗಳ ಓದಿನ ಜತೆಗೆ ಪೂರಕ ಪುಸ್ತಕಗಳನ್ನು ಓದುವುದು ಅವಶ್ಯವಾಗಿದೆ ಎಂದು ಸಾಹಿತಿ, ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಶಾರದಾವಿದ್ಯಾಲಯದ ಗ್ರಂಥಾಲಯಕ್ಕೆ ನೂರು ಪುಸ್ತಕಗಳ ಹಸ್ತಾಂತರ ಸಮಾರಂಭದಲ್ಲಿ ಅವರು ಓದಿನ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.ಓದು ದೈನಂದಿನ ಬದುಕಿನ ಒಂದು ಅಂಗವಾಗಬೇಕು. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು ಪುಸ್ತಕ ಓದಲು ಸಮಯ ಮೀಸಲಿರಿಸಬೇಕು ಎಂದು ಅವರು ಹೇಳಿದರು.ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಮಾತನಾಡಿ ‘ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದಉಪಯುಕ್ತ ಪುಸ್ತಕಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮೂಲಕ ಸದ್ವಿನಿಯೋಗ ಪಡಿಸಿಕೊಳ್ಳಬೇಕು ಎಂದರು.ಅಭಾಸಾಪ ದ.ಕ.ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಶಾರದಾ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಚಂದ್ರಿಕಾ ಭಂಡಾರಿ, ಉಪ ಪ್ರಾಂಶುಪಾಲೆ ಲಕ್ಷ್ಮೀ ಉಡುಪ, ಸಹಾಯಕ ಪ್ರಾಂಶುಪಾಲೆ ಲಕ್ಷ್ಮೀ ಪೈ, ಯಕ್ಷಾರಾಧನಾ ಕಲಾ ಕೇಂದ್ರದ ನಿರ್ದೇಶಕ ರತ್ನಾಕರ್ ರಾವ್, ಅಭಾಸಾಪ ಜಿಲ್ಲಾ ಖಜಾಂಜಿ ಭಾಸ್ಕರ ರೈ ಕಟ್ಟ, ಸಾಹಿತ್ಯ ಕೂಟ ಪ್ರಮುಖ್ ಗೀತಾ ಲಕ್ಷ್ಮೀಶ್ ,ಸಮಿತಿ ಸದಸ್ಯ ಡಾ.ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಎಸ್.ಡಿ ಎಂ. ಕಾನೂನು ಕಾಲೇಜಿನಲ್ಲಿ ಪಾತಾಳ – ಶೆಟ್ಟಿಗಾರ್ ಅವರಿಗೆ ಶ್ರದ್ಧಾಂಜಲಿಮಾರ್ಗದರ್ಶಕ ಕಲಾವಿದರ ಕಣ್ಮರೆ: ಭಾಸ್ಕರ ಕುಕ್ಕುವಳ್ಳಿ

ಮಂಗಳೂರು: ‘ಯಕ್ಷಗಾನ ರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿದ ಮಾರ್ಗದರ್ಶಕ ಕಲಾವಿದರಿಬ್ಬರನ್ನು ಕೇವಲ ಎರಡು ದಿನಗಳ ಅಂತರದಲ್ಲಿ ಕಳೆದುಕೊಂಡಿದ್ದೇವೆ. ಶತಮಾನದ ಹಾದಿಯಲ್ಲಿದ್ದ 92ರ ಹರೆಯದ ಪಾತಾಳ ವೆಂಕಟರಮಣ ಭಟ್ಟರು ಯಕ್ಷಗಾನದ ವೇಷ ಭೂಷಣ, ನೃತ್ಯಾಭಿನಯಗಳಲ್ಲಿ ಹೊಸ ಪ್ರಯೋಗ ಶೀಲತೆಯ ಮೂಲಕ ಪರಂಪರೆಯನ್ನು ಎತ್ತಿ ಹಿಡಿದವರು; ಹಾಗೆಯೇ ಇನ್ನೂ ಬದುಕಿ ರಂಗದಲ್ಲಿ ಮೆರೆಯಬೇಕಾಗಿದ್ದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಬಣ್ಣದ ವೇಷಗಾರಿಕೆಯಲ್ಲಿ ಸೃಜನಶೀಲತೆಯನ್ನು ತೋರಿದವರು.ಇವರ ಕಣ್ಮರೆ ಯಕ್ಷಗಾನ ವಲಯದಲ್ಲಿ ಬಹುದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ ‘ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ‌.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಯಕ್ಷೋತ್ಸವ ಸಮಿತಿ ಮತ್ತು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಸಮಿತಿ ವತಿಯಿಂದ ಜುಲೈ 21ರಂದು ಕಾಲೇಜು ಸಭಾಂಗಣದಲ್ಲಿ ಜರಗಿದ ಪಾತಾಳ ವೆಂಕಟರಮಣ ಭಟ್ ಮತ್ತು ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂಸ್ಮರಣಾ ಜ್ಯೋತಿ ಬೆಳಗಿ ಅವರು ನುಡಿ ನಮನ ಸಲ್ಲಿಸಿದರು. ಯಕ್ಷೋತ್ಸವ ಸಮಿತಿ ಸಂಚಾಲಕ ಮತ್ತು ಪ್ರಾಧ್ಯಾಪಕ ಪ್ರೊ.ಪುಷ್ಪರಾಜ್ ಕೆ. ಅವರು ಪ್ರಾಸ್ತಾವಿಕ ಮಾತಿನೊಂದಿಗೆ ಅಗಲಿದ ಕಲಾವಿದದ್ವಯರ ಗುಣಗಾನ ಮಾಡಿದರು.ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಗತಿಸಿದ ಇಬ್ಬರು ಕಲಾವಿದರೊಂದಿಗಿನ ತನ್ನ ಒಡನಾಟವನ್ನು ಸ್ಮರಿಸಿ ಶ್ರದ್ಧಾಂಜಲಿ ಸಮರ್ಪಿಸಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ನುಡಿ ನಮನ ಸಲ್ಲಿಸಿದರು. ಯಕ್ಷಗಾನದ ಅಭಿಮಾನಿಗಳು ಮತ್ತು ಯಕ್ಷೋತ್ಸವ ಸಮಿತಿ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಅಗಲಿದ ಕಲಾವಿದರಿಗೆ ಮೌನ ಪ್ರಾರ್ಥನೆಯ ಮೂಲಕ ಸದ್ಗತಿ ಕೋರಲಾಯಿತು.

ಪ್ರಾದೇಶಿಕ ವಾರ್ತೆಗಳು

ಜು.26ರಂದು ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡ ಉದ್ಘಾಟನೆ

ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ (ಐಆರ್‌ಸಿಎಸ್) ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು 6 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಶತಮಾನೋತ್ಸವ ಕಟ್ಟಡ ‘ದ ಉದ್ಘಾಟನಾ ಸಮಾರಂಭ ಜು.26ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ.ಕರ್ನಾಟಕದ ರಾಜ್ಯಪಾಲ ಹಾಗೂ ಐಆರ್‌ಸಿಎಸ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್.ಡಿ., ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಐಆರ್‌ಸಿಎಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ರಾವ್ ಐಪಿಎಸ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಐಆರ್‌ಸಿಎಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. *ಪ್ರೇರಣಾ ಸಭಾಂಗಣಸುಮಾರು 20 ಸಾವಿರ ಚದರ ಅಡಿಯ ಭವ್ಯ ಶತಮಾನೋತ್ಸವ ಕಟ್ಟಡ ತಳ ಅಂತಸ್ತು, ನೆಲ ಅಂತಸ್ತು ಸಹಿತ ಒಟ್ಟು 4 ಅಂತಸ್ತು ಹೊಂದಿದೆ. ನೆಲ ಅಂತಸ್ತಿನಲ್ಲಿ ಕಚೇರಿ, ಸಂದರ್ಶಕರ ಕೊಠಡಿ, ಮೀಟಿಂಗ್ ಹಾಲ್, 1ನೇ ಅಂತಸ್ತಿನಲ್ಲಿ 300 ಆಸನಗಳ ‘ಪ್ರೇರಣಾ‘ ಹವಾ ನಿಯಂತ್ರಿತ ಸಭಾಂಗಣ, 2ನೇ ಅಂತಸ್ತಿನಲ್ಲಿ ಸುಮಾರು 500 ಮಂದಿ ಸಾಮರ್ಥ್ಯದ ‘ಸೀ ವ್ಯೆ’ಸಭಾಂಗಣವಿದೆ. ಸಾರ್ವಜನಿಕ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ದಾನಿಗಳ ನೆರವಿನಿಂದ ನೂತನ ಕಟ್ಟಡ ನಿರ್ಮಾಣಗೊಂಡಿದೆ.ದಶಕಗಳ ಹಿಂದೆ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧಿಕಾರಿ ಕಛೇರಿಯ ಒಂದು ಸಣ್ಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.2007ರಲ್ಲಿ ಆಗಿನ ಜಿಲ್ಲಾಧಿಕಾರಿಯವರು ತಮ್ಮ ಕಚೇರಿ ಆವರಣದಲ್ಲಿಯೇ ರೆಡ್‌ಕ್ರಾಸ್‌ಗೆ ನಿವೇಶನ ನೀಡಿದ್ದು, 2011ರಲ್ಲಿಸ್ವಂತ ಕಟ್ಟಡ ಆ ಜಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಜಿಲ್ಲಾ ರೆಡ್‌ಕ್ರಾಸ್‌ನ ಸೇವಾ ಚಟುವಟಿಕೆಗಳ ವ್ಯಾಪ್ತಿವಿಸ್ತಾರವಾಗಿದ್ದು, ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ 2021ರಲ್ಲಿ ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, ಇದೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.

ಪ್ರಾದೇಶಿಕ ವಾರ್ತೆಗಳು

ಆಗೋಸ್ಟ್ 3 ರಂದು ಸುರತ್ಕಲ್ ಬಂಟರ ಸಂಘದಲ್ಲಿ “ಆಟಿದ ಪೊರ್ಲು”, ಅಭಿನಂದನಾ ಕಾರ್ಯಕ್ರಮ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ “ಆಟಿದ ಪೊರ್ಲು” ಮತ್ತು ಅಭಿನಂದನಾ ಕಾರ್ಯಕ್ರಮ ಆಗೋಸ್ಟ್ 3 ಭಾನುವಾರ ಬೆಳಿಗ್ಗೆ 9.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಮುಂಬೈ ವಿ.ಕೆ ಗ್ರೂಪ್ಸ್ ನ ಆಡಳಿತ ನಿರ್ದೇಶಕ, ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿಯ ಚೇರ್ಮೆನ್ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ.ಮೊಂಟೆಪದವು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾದ ಡಾ ಮಂಜುಳಾ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಅಡ್ಯಾರ್ ಗುತ್ತು, ಹೆಜಮಾಡಿ ಶಾರದಾ ಡೆವಲಪರ್ಸ್ ನ ಮಾಲಕ ಪ್ರೇಮ್ ನಾಥ್ ಎಂ ಶೆಟ್ಟಿ, ಮಲ್ಲಿಕಾ ಯಶವಂತ ಶೆಟ್ಟಿ ಬಳ್ಕುಂಜೆಗುತ್ತು ಬಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ವಹಿಸಲಿದ್ದಾರೆ. ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ ಉಪಸ್ಥಿತರಿರುವರು.ಸಾಧನೆಗೈದವರಿಗೆ ಸನ್ಮಾನಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಂತೋಷ್ ಕುಮಾರ್ ಎಸ್ ಶೆಟ್ಟಿ ಕುತ್ತೆತ್ತೂರು, ಸಹಕಾರ ಕ್ಷೇತ್ರದಲ್ಲಿ ವಿನಯಕುಮಾರ್ ಸೂರಿಂಜೆ, ಸಾಹಿತ್ಯ-ಶಿಕ್ಷಣ ಕ್ಷೇತ್ರದಲ್ಲಿ ಜ್ಯೋತಿ ಚೇಳಾರ್, ಮಾಧ್ಯಮ‌ ಕ್ಷೇತ್ರದಲ್ಲಿ ಲೋಕೇಶ್ ಸುರತ್ಕಲ್, ದೈವಾರಾಧನೆ ಕ್ಷೇತ್ರದಲ್ಲಿ ಭೋಜ ಪಾತ್ರಿ ಮಧ್ಯ ಅವರನ್ನು ಸನ್ಮಾನಿಸಲಾಗುವುದು. ಬೆಳಿಗ್ಗೆ 9.30 ರಿಂದ ಗ್ರಾಮವಾರು ಜಾನಪದ ನೃತ್ಯ, ರೂಪಕ ನಡೆಯಲಿದೆ. ಪುರುಷರಿಗೆ ತೆಂಗಿನಕಾಯಿ ಕುಟ್ಟುವುದು, ಮುಂಡಾಸು ಕಟ್ಟುವುದು, ಮಹಿಳೆಯರಿಗೆ ಹಿಡಿಸೂಡಿ ತಯಾರಿಸುವುದು, ಮಡಲು ಹೆಣೆಯುವುದು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗಚಲನ ಕಲಾವಿದರಿಂದ ತುಳುನಾಡಿನ ಸೌಹಾರ್ದ ಪರಂಪರೆನ್ನು ಬಿಂಬಿಸುವ “ಜಾಗ್೯ತೆ” ತುಳು ಕಿರುನಾಟಕ ಪ್ರದರ್ಶನಗೊಳ್ಳಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ವಿನಂತಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

ಮಂಗಳೂರು ಜುಲೈ 19: ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು. ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ಸಂಚಾಲಕರು ವಂದನೀಯ ಗುರು ಬೊನವೆಂಚರ್ ನಜರೆತ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವೃಧ್ದಿಸಿಕೊಳ್ಳುವುದು. ನಾಯಕನಾದವನು ಶಿಸ್ತುಬದ್ಧತೆ, ಸಮಯದ ಪಾಲನೆ ಉತ್ತಮ ನಡೆ ನುಡಿ ಹೊಂದಿ ಇತರರಿಗೆ ಮಾಧರಿಯಾಗಬೇಕೆಂದು ಹೇಳಿದರು.ಮುಖ್ಯ ಅತಿಥಿಯಾದ ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರ‍್ರಾಂಶುಪಾಲರಾದ ವಂದನೀಯ ಗುರು ಮೈಕಲ್ ಸಾಂತುಮಾಯರ್ ಹಾಗೂ ಶ್ರೀ ಸಿಲ್ವೆಸ್ಟರ್ ಮಸ್ಕರೇನಸ್, ಉಪಾಧ್ಯಕ್ಷರು, ಪ್ಯಾರಿಷ್ ಪಾಸ್ಟೋರಲ್ ಕೌನ್ಸಿಲ್ ಮಿಲಾಗ್ರಿಸ್ ಚರ್ಚ್,್ಲ ಉಪಸ್ಥಿತರಿದ್ದರು.ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಶ್ರೀ ಮೇಲ್ವಿನ್ ವಾಸ್‌ವರು ನೂತನ ವಿದ್ಯಾರ್ಥಿ ಸಂಘದ ನಾಯಕರಿಗೆೆ ಪ್ರತಿಜ್ಞಾ ವಿಧಿ ಬೋಧಿಸಿದರು.ಶ್ರೀಮತಿ ಜ್ಯೋತಿ ರತ್ನ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಪುಲ್ ಶೆಟ್ಟಿ ವಂದಿಸಿದರು. ಶ್ರೀಮತಿ ಶೆರೆಲ್ ಡಿಸೋಜ ನಿರೂಪಿಸಿದರು. ಈ ಕಾರ್ಯಕ್ರಮ ಕಾಲೇಜು ಗೀತೆಯೊಂದಿಗೆ ಮುಕ್ತಾಯಗೊಂಡಿತು.

ಪ್ರಾದೇಶಿಕ ವಾರ್ತೆಗಳು

ಜಾಗತಿಕ ಬಂಟರ ಸಂಘಗಳ ಒಕ್ಕೂಟ: ಆಡಳಿತ ಮಂಡಳಿ ಸಭೆ ಹಾಗೂ ಸಮಾಜ ಕಲ್ಯಾಣ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ 50 ಲಕ್ಷ ರೂಪಾಯಿ ಅನುದಾನ ವಿತರಣೆ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಇದರ ಆಡಳಿತ ಮಂಡಳಿಯ ಸಭೆ ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವರದಿ ವಾಚಿಸಿದರು.‌ ಕೋಶಾಧಿಕಾರಿ ಉಳ್ತೂರು ಮೋಹನ ದಾಸ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಬಳಿಕ ಒಕ್ಕೂಟದಿಂದ ಸಮಾಜ ಕಲ್ಯಾಣ ಕಾರ್ಯಕ್ರಮ‌ ನೆರವೇರಿತು.ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ವೈದ್ಯಕೀಯ ಚಿಕಿತ್ಸೆಗೆ, ಮದುವೆಗೆ, ವಿದ್ಯಾಭ್ಯಾಸಕ್ಕೆ, ಮನೆ ರಿಪೇರಿಗೆ, ಕ್ರೀಡೆಗೆ, 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (95%) ಹೀಗೆ ಹತ್ತಾರು ಸಮಾಜಮುಖಿ ಕೆಲಸಗಳಿಗೆ ಒಕ್ಕೂಟದಿಂದ ಸುಮಾರು 50 ಲಕ್ಷ ರೂಪಾಯಿಗೂ ಮಿಕ್ಕಿದ ಅನುದಾನವನ್ನು ವಿತರಿಸಲಾಯಿತು. ಕಳೆದ ಏಳು ವರ್ಷಗಳಿಂದ ಒಕ್ಕೂಟದಿಂದ ಈ ವರೆಗೆ 30 ಕೋಟಿ ರೂಪಾಯಿಗೂ ಮಿಕ್ಕಿದ ಅನುದಾನವನ್ನು ವಿತರಿಸಲಾಗಿದೆ ಎಂದು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಮುಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ತೋನ್ಸೆ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯಲ್ಲಿ , ಕನ್ಯಾನ ಸದಾಶಿವ ಶೆಟ್ಟಿ ಹವಾನಿಯಂತ್ರಿತ ಸಭಾಂಗಣ ರಚನೆಯಾಗುತ್ತಿದೆ ಎಂದರು.ಸುಮಾರು 1,200 ಆಸನಗಳ ಸೌಲಭ್ಯ ಇರುವ ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣವನ್ನು ನಿರ್ಮಿಸಲು ಎಲ್ಲರ ಸಹಕಾರ ಬೇಕು. ಸಭಾಂಗಣವನ್ನು ನಿರ್ಮಾಣ ಮಾಡಿ ಸಮಾಜಕ್ಕೆ ಅರ್ಪಿಸಲಾಗುವುದು ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಒಂದು ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣದ ಅಗತ್ಯ ಇದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ದಾನಿಗಳ ನೆರವಿನಿಂದ ನಿರ್ಮಾಣ ಆಗುತ್ತಿರುವ ಹವಾ ನಿಯಂತ್ರಿತ ಸಭಾಂಗಣದ ಕಟ್ಟಡವು ವೇಗವನ್ನು ಪಡೆಯಬೇಕು. ಇದಕ್ಕೆ ನನ್ನ ಸಂಪೂರ್ಣ ಸಹಕಾರವೂ ಇದೆ. ಜೊತೆಗೆ ಎಲ್ಲಾ ದಾನಿಗಳು ಕೈಜೋಡಿಸಿ ಸಹಕಾರ ನೀಡಬೇಕು. ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣದಿಂದ ಸಾಮಾನ್ಯ ಜನರಿಗೂ ಪ್ರಯೋಜನ ಆಗಬೇಕು. ಸಮಾಜವನ್ನು ಗಟ್ಟಿಗೊಳಿಸುವ ಜವಾಬ್ದಾರಿ ಇದೆ. ಸಭಾಂಗಣದ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕು. ಐಕಳ ಹರೀಶ್ ಶೆಟ್ಟಿ ಅವರ ಸಮಾಜ ಸೇವೆಯನ್ನು ಯಾವಾಗಲೂ ಸ್ಮರಿಸುವಂತದ್ದು, ಸಮಾಜದ ಬಗ್ಗೆ ಅವರಿಗೆ ಇರುವ ಕಾಳಜಿ ಮತ್ತು ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಇಂತಹ ನಾಯಕರನ್ನು ಪಡೆದ ಬಂಟ ಸಮಾಜ ಯಾವತ್ತೂ ಅವರಿಗೆ ಚಿರಋಣಿಯಾಗಿರುತ್ತದೆ ಎಂದು ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾ ನಿರ್ದೇಶಕರಾದ ಡಾ ಆರ್ ಕೆ ಶೆಟ್ಟಿ ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದೆ. ಐಕಳ ಹರೀಶ್ ಶೆಟ್ಟಿ ಅವರು ಇಂತಹ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಿ ಎಂದರು.ಸಮಾರಂಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಆಯ್ಕೆಯಾದ ಪ್ರತಿಭಾ ಕುಳಾಯಿ ಅವರನ್ನು ಒಕ್ಕೂಟದಿಂದ ಐಕಳ ಹರೀಶ್ ಶೆಟ್ಟಿ ಸನ್ಮಾನಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕಾರ್ಯಗಳು ಶ್ಲಾಘನೀಯ. ಒಕ್ಕೂಟದಿಂದ ಸನ್ಮಾನ ಪಡೆಯುತ್ತಿರುವುದು ಅತೀವ ಸಂತೋಷವನ್ನುಂಟು ಮಾಡಿದೆ. ಇದು ನನ್ನ ಸಮಾಜಕ್ಕೆ, ಮಹಿಳೆಯರಿಗೆ ಮಾಡಿದ ಗೌರವ ಎಂದರು.ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಸಿಎ ದಯಾಚರಣ್ ಶೆಟ್ಟಿ, ವಕೀಲ ಪೃಥ್ವಿರಾಜ ರೈ, ಮಹಾ ನಿರ್ದೇಶಕರಾದ ಡಾ.ಆರ್ ಕೆ. ಶೆಟ್ಟಿ, ನಿರ್ದೇಶಕರಾದ ಶಶಿಧರ್ ಶೆಟ್ಟಿ ಇಂನ್ನಜೆ, ಪೋಷಕ ಸದಸ್ಯರುಗಳಾದ ಗಿರೀಶ್ ಶೆಟ್ಟಿ ತೆಳ್ಳಾರ್, ಸತೀಶ್ ವಿ. ಶೆಟ್ಟಿ ಮಾಳ, ಹುಂತ್ರಿಕೆ ಸುಧಾಕರ್ ಶೆಟ್ಟಿ, ಲೋಕೇಶ್ ಶೆಟ್ಟಿ ಕುಳ, ಜಗನ್ನಾಥ್ ಚೌಟ, ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಶ್ರೀಧರ್ ವಿ.ಶೆಟ್ಟಿ ಆರೂರು, ಅಕ್ಕುಂಜೆ ಸತಿಶ್ಚಂದ್ರ ಶೆಟ್ಟಿ, ಶ್ರೀಮತಿ ಕಲ್ಪನಾ ಕೃಷ್ಣ ಶೆಟ್ಟಿ, ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಬಂಟರ ಸಂಘಗಳ ಅಧ್ಯಕ್ಷರನ್ನು, ಮಹಿಳಾ ಘಟಕದ ಅಧ್ಯಕ್ಷರನ್ನು ಗೌರವಿಸಲಾಯಿತು.ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಚಂದ್ರಹಾಸ ಶೆಟ್ಟಿ ವಂದಿಸಿದರು.ಇದೇ ಸಂದರ್ಭದಲ್ಲಿ ಶೇಖಡ 95 ಕ್ಕೂ ಮಿಕ್ಕಿ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಶಿಕ್ಷಕ ಸಾಯಿನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಐಕಳ ಹರೀಶ್ ಶೆಟ್ಟಿ ಅವರು ಬಂಟರಿಗೆ ಒಂದು ಶಕ್ತಿ.‌ ಸಮಾಜದಲ್ಲಿ ಅವರು ವಿಶ್ವ ಮಟ್ಟಕ್ಕೆ ಬೆಳೆಯಲು ಅವರು ಒಕ್ಕೂಟದ ಮೂಲಕ ಮಾಡಿರುವ ಸಮಾಜ ಸೇವಾ ಕಾರ್ಯಗಳೇ ಕಾರಣ ಎಂದರು.ಹಾಗೂ ಶ್ರೀಲಂಕಾದಲ್ಲಿ ಮಾಸ್ಟಸ್೯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಪಡೆದ ಬಬಿತಾ ಶೆಟ್ಟಿ ಸಹಿತ ಕ್ರೀಡೆಯಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಕಳೆದ ಎಸ್ ಎಸ್ ಎಲ್ ಸಿ ಪಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಗಳಿಸಿದ ಶ್ರೀರಾಮ್ ಶೆಟ್ಟಿಯನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಡಿ ಶೆಟ್ಟಿ ಸುರತ್ಕಲ್, ಆಶಾಕಿರಣ್ ರೈ ಸುರತ್ಕಲ್ ಸನ್ಮಾನ ಪತ್ರ ವಾಚಿಸಿದರು. ಯೊಗೀಶ್ ಆಳ್ವ ಪ್ರಾರ್ಥನೆಗೈದರು.‌ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ‌ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಶಿಕ್ಷಕ ರಕ್ಷಕ ಸಂಘದ ಸಭೆ

ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕರಿಮಣೇಲು ಇದರ ಶಿಕ್ಷಕ ರಕ್ಷಕ ಸಂಘದ ಸಭೆಯು ದಿನಾಂಕ 16/7/2025ರಂದು ಜರಗಿತು.ಶಾಲಾ ಸಂಚಾಲಕರಾದ ವಂದನೀಯ ಎಡ್ವಿನ್ ಸಂತೋಷ್ ಮೋನಿಸ್ ರವರು ಅಧ್ಯಕ್ಷತೆ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿ ನಿವೃತ್ತ ಶಿಕ್ಷಕ ಶ್ರೀ ಎಲ್ ಜೆ ಫೆರ್ನಾಂಡಿಸ್ ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಪಾತ್ರದ ಬಗ್ಗೆ ಮಾತಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ ವಂದನೀಯ ಎಡ್ವಿನ್ ಸಂತೋಷ್ ಮೋನಿಸ್ ರವರು ಸಹಕಾರಕ್ಕಾಗಿ ಹೆತ್ತವರನ್ನು ಅಭಿನಂದಿಸಿದರು.ಶಾಲಾ ಮುಖ್ಯಶಿಕ್ಷಕಿಶ್ರೀಮತಿ ಮಾರ್ಸೆಲಿನ್ ಪಿರೇರ ಸ್ವಾಗತಿಸಿದರು.ಸುಮಲತಾ ವರದಿ ಓದಿದರು.ಶಿಕ್ಷಕಿ ಶ್ರಿಮತಿ ಮೀನಾ ಮೋನಿಸ್ ನಿರ್ವಹಿಸಿದರು.ಸುಪ್ರೀತ ವಂದಿಸಿದರು.ಶ್ರೀ ದಿನೇಶ್ ಗೌಡ,ಪಂಚಾಯತ್ ಸದಸ್ಯ ಶ್ರೀ ಜಿನ್ನು ಮತ್ತು ಶ್ರೀಮತಿ ಗಾಯತ್ರಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜ್ ನಲ್ಲಿ ಡಾ.ಸುಧಾಕರ್ ಶೆಟ್ಟಿ ಅವರಿಂದ ವಿಶೇಷ ಉಪನ್ಯಾಸ.

ಮೂಡಬಿದಿರೆ – ಪುಣೆಯ ಖ್ಯಾತ ಮಕ್ಕಳ ತಜ್ಞ ,ಸಮಾಜರತ್ನ ಡಾ. ಸುಧಾಕರ್ ಶೆಟ್ಟಿ ಮೂಡಬಿದಿರೆ ಅವರು ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜ್ ನಲ್ಲಿ Approach to Pediatric pratice ವಿಷಯದ ಬಗ್ಗೆ ಅತಿಥಿ ಉಪನ್ಯಾಸಕರಾಗಿ ವಿಶೇಷ ಉಪನ್ಯಾಸ ನೀಡಿದರು. ಡಾ.ಸುಧಾಕರ್ ಶೆಟ್ಟಿ ಅವರು ವೈದ್ಯಕೀಯ ಸಮಾಜ ಸೇವಕರಾಗಿ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ,ಕೆಲಸ ಕಾರ್ಯಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಜನ ಮನ್ನಣೆ ಗಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಹಸಿರು ಹೊದಿಕೆಯಿಂದ ಸುಸ್ಥಿರ ನಗರ-ಮಾಜಿ ಮೇಯರ್ ದಿವಾಕರ ಕದ್ರಿ ಆಶಯ

ಮಂಗಳೂರು: ನಗರ ಅರಣ್ಯೀಕರಣವು ಹಸಿರು ಹೊದಿಕೆಯನ್ನು ಹೆಚ್ಚಿಸಿ ಭವಿಷ್ಯದಲ್ಲಿ ಸುಸ್ಥಿರ ನಗರ ನಿರ್ಮಾಣಕ್ಕೆ ಪೂರಕವಾಗಲಿದೆ. ಮಂಗಳೂರು ನಗರದಲ್ಲಿ ಹೆಚ್ಚು ಗಿಡ ನೆಡಲು ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮಿಯಾವಾಕಿ ಆರಣ್ಯ ನಿರ್ಮಿಸಲು ಆದ್ಯತೆ ನೀಡಬೇಕೆಂದು ಮಾಜಿ ಮೇಯರ್ ದಿವಾಕರ ಕದ್ರಿ ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದಲ್ಲಿ ಭಾನುವಾರ ನಗರದ ಲಾಲ್ ಬಾಗ್ ನ ಇಂದಿರಾ ಪ್ರಿಯದರ್ಶಿನಿ ಪಾರ್ಕ್ ನಲ್ಲಿ ನಡೆದ ವನಮಹೋತ್ಸವ ಮತ್ತು ಹನಿ ಇಬ್ಬನಿ- ಸಿಹಿ ಸಿಂಚನ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವನ ಮಹೋತ್ಸವಕ್ಕೆ ಚಾಲನೆ ನೀಡಿದ ಮಂಗಳೂರು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಮಾತನಾಡಿ ನಗರದಲ್ಲಿ ತಾಪಮಾನ ಏರಿಕೆ ತಡೆಯಲು ಮಿಯಾವಾಕಿ ಅರಣ್ಯ ಮಾತ್ರ ಪರಿಹಾರೋಪಾಯವಾಗಿದೆ ಎಂದರು.ಅಭಾಸಾಪ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ ಮುಖ್ಯ ಅತಿಥಿಯಾಗಿದ್ದರು.ಹಿರಿಯ ಕವಿ, ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ಅವರ ಅಧ್ಯಕ್ಷತೆಯಲ್ಲಿ ಬಹು ಭಾಷಾ ಕವಿಗೋಷ್ಠಿ ನಡೆಯಿತು.30 ಕವಿಗಳು ಸ್ವರಚಿತ ಕವನ ವಾಚಿಸಿದರು. ಡಾ.ಸುರೇಶ್ ನೆಗಳಗುಳಿ, ರೇಮಂಡ್ ಡಿಕುನ್ಹ ಮುಂತಾದವರು ಉಪಸ್ಥಿತರಿದ್ದರು.ಅಭಾಸಾಪ ಜಿಲ್ಲಾ ಜತೆ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಸ್ವಾಗತಿಸಿದರು.ಕವಿಗೋಷ್ಠಿಯ ಸಂಘಟಕಿ ಗೀತಾ ಲಕ್ಷ್ಮೀಶ್ ಕಾರ್ಯಕ್ರಮ ನಿರೂಪಿಸಿದರು.

Scroll to Top