ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮೇ 12 ರ ಆದಿತ್ಯವಾರ ಸಂಜೆ 4ಕ್ಕೆ ಪಡೀಲ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ‘ಮೆಹಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ. ಇಲ್ಲಿ ಆಹಾರ ಪದಾರ್ಥಗಳಿಗೆ ಯಾವುದೇ ರಾಸಾಯನಿಕ ಬಳಸುವುದಿಲ್ಲ: ಮಾಲಕ ಪ್ರಕಾಶ್ ಕೆ. ಪಾಂಡೇಶ್ವರ.

ಮಂಗಳೂರು : ಪಡೀಲ್ ಬಳಿ ಇರುವ ಪಡೀಲ್ ಗೇಟ್‌ನಲ್ಲಿ ಮೇ 12ರಂದು ಸಂಜೆ 4 ಗಂಟೆಗೆ ‘ಮೆಹಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭಗೊಳ್ಳಲಿದೆ.ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಮಿಥುನ್ ರೈ, ವೈನ್ ಮರ್ಚಂಟ್ ಅಸೋಸಿಯೇಶನ್ ಅಧ್ಯಕ್ಷ ಎಂ. ಗಣೇಶ್ ಶೆಟ್ಟಿ,ಡೈಜಿವರ್ಲ್ಡ್‌ನ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ, ಶ್ರೀ ಡೆವಲಪರ್ಸ್‌ನ ಮಾಲಕ ಗಿರೀಶ್ ಎಂ. ಶೆಟ್ಟಿ ಕಟೀಲು, ಮನಪಾ ಸದಸ್ಯೆ ರೂಪಾಶ್ರೀ ಪೂಜಾರಿ, ಚಿತ್ರನಟ ನವೀನ್ ಡಿ.ಪಡೀಲ್ ಭಾಗವಹಿಸಲಿದ್ದಾರೆ ಎಂದು ಮೆಹಂದಿ ಫ್ಯಾಮಿಲಿ ರೆಸ್ಟೋರೆಂಟ್‌ನ ಮಾಲಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.ಮೆಹಂದಿ ರೆಸ್ಟೋರೆಂಟ್‌ನಲ್ಲಿ ಆಹಾರ ಪದಾರ್ಥಗಳಿಗೆ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಅರ್ಗಾನಿಕ್ (ಸಾವಯವ) ಉತ್ಪನ್ನಗಳನ್ನೇ ಆಹಾರ ಪದಾರ್ಥಗಳಿಗೆ ಬಳಸುವು ದರಿಂದ ನೈಜ ರುಚಿಯ ಆಸ್ವಾದನೆ ಗ್ರಾಹಕರಿಗೆ ಆಗುತ್ತದೆ. ಇಲ್ಲಿ ಉಪ್ಪಿನಿಂದ ಹಿಡಿದು ಎಲ್ಲ ಆಹಾರ ವಸ್ತುಗಳು ಸಾವಯವ ಆಗಿರುವುದರಿಂದ, ಕೃತಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಉಪಯೋಗಿಸುವುದಿಲ್ಲ.ವಿವಿಧ ವಿಭಾಗಗಳು:‘ಮೆಹಂದಿ’ ರೆಸ್ಟೋರೆಂಟ್‌ನಲ್ಲಿ ಕೌಟುಂಬಿಕ ವ್ಯಕ್ತಿಗಳಿಗಾಗಿ ಪ್ರತ್ಯೇಕ ಕ್ಯಾಬಿನ್‌ಗಳಿವೆ. ರೂಫ್ ಟಾಪ್, ಓಪನ್ ಗಾರ್ಡನ್ ಇದೆ. ತೋಟದ ಮಧ್ಯೆ ಕುಳಿತು ನೈಜ ಆಹಾರದ ಸ್ವಾದವನ್ನು ಸವಿಯಬಹುದು. ಯಾವುದೇ ಸಮಸ್ಯೆಯಿಲ್ಲದೆ ಆಹಾರದ ಸವಿಯೊಂದಿಗೆ ಕಳೆಯಬಹುದು. ಕಾರ್ಪೋರೆಟ್ ಸಂಸ್ಥೆಗಳು ಮೀಟಿಂಗ್, ಸಭೆ ಸಮಾರಂಭಗಳನ್ನು ನಡೆಸಲು ಇಚ್ಚಿಸಿದರೆ ಅವರಿಗೆ ಬೇಕಾದ ವ್ಯವಸ್ಥೆಯೂ ಇದೆ. ಎ.ಸಿ ಮತ್ತು ನಾನ್ ಎಸಿ ವಿಭಾಗಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ನಿರ್ವಹಿಸಲ್ಪಡುತ್ತದೆ. ಇಲ್ಲಿ ಸಂಪೂರ್ಣ ಸಸ್ಯಾಹಾರಿ ವಿಭಾಗವೂ ಇದೆ. ಸಮುದ್ರ ಖಾದ್ಯವನ್ನು ಸವಿಯುವವವರಿಗೆಂದೇ ಪ್ರತ್ಯೇಕ ವಿಭಾಗವಿದೆ.ಆಹ್ಲಾದಕರ ವಾತಾವರಣ:‘ಮೆಹಂದಿ’ ರೆಸ್ಟೋರೆಂಟ್ ಕೇವಲ ಖಾದ್ಯ ಸವಿಯಲು ಮಾತ್ರವಲ್ಲ, ದಕ್ಷಿಣ ಭಾರತದ ಸಂಸ್ಕೃತಿ, ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಉತ್ತಮ ಸ್ಥಳವಾಗಿದೆ. ಸಾಂಪ್ರದಾಯಿಕ ಶೈಲಿಯ ವಿನ್ಯಾಸದ ಕಟ್ಟಡದಲ್ಲಿ ನೆಲೆಗೊಂಡಿರುವ ‘ಮೆಹಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಹಸಿರಿನ ಮಿನುಗು, ಶಾಂತಿಯುತ, ಅಹ್ಲಾದಕರ ವಾತಾವರಣದೊಂದಿಗೆ ಗ್ರಾಹಕರನ್ನು ಸ್ವಾಗತಿಸಲು ಸಜ್ಜಾಗಿದೆ. ಕೈಗೆಟಕುವ ಬೆಲೆಯಲ್ಲಿ ಅಧಿಕೃತ ಸುವಾಸನೆಯೊಂದಿಗೆ ಇಲ್ಲಿನ ಆಹಾರ ಖಾದ್ಯಗಳನ್ನು ಸವಿಯಬಹುದಾಗಿದೆ ಎಂದು ಸಂಸ್ಥೆಯ ಮಾಲಕ ಪ್ರಕಾಶ್ ಪಾಂಡೇಶ್ವ‌ರ್ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಲಾಲ್ ಬಾಗ್ ವನಿತಾ ಪಾರ್ಕ್ ನಲ್ಲಿ ಸ್ವಚ್ಚತಾ ಜಾಗೃತಿ ಕಾರ್ಯ ಕ್ರಮ

ಮಂಗಳೂರು,ಮೇ.11: ವನಿತಾ ಪಾರ್ಕ್ ನಲ್ಲಿ ಬೆಸೆಂಟ್ ಕಾಲೇಜಿನ ಯುವ ರೆಡ್ ಕ್ರಾಸ್‌ ಘಟಕ ಮತ್ತು ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ಶನಿವಾರ ಹಮ್ಮಿಕೊಂಡ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ ನಗರದ ಲಾಲ್ ಬಾಗ್ ಬಳಿಯ ವನಿತಾ ಪಾರ್ಕ್ ನಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಹಿರಿಯ ಸಲಹೆಗಾರರಾದ ಪ್ರಭಾಕರ ಶರ್ಮ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಸ್ವಚ್ಚತಾ ಕಾರ್ಯ ನಮ್ಮ ಮನೆಗಳಿಂದಲೇ ಆರಂಭವಾಗಬೇಕು ಯುವ ರೆಡ್ ಕ್ರಾಸ್ ಘಟಕ ವಿದ್ಯಾರ್ಥಿ ಗಳಲ್ಲಿ ಯುವ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಗೊಂಡಿದೆ ನಮ್ಮ ಪ್ರತಿ ನಿತ್ಯದ ಸಣ್ಣ ಪುಟ್ಟ ಕೆಲಸಗಳಲ್ಲಿ ಇತರರಿಗೆ ನೆರವಾಗುವ ಮೂಲಕ ನಾವು ಸಮಾಜಿಕ ಹೊಣೆಗಾರಿಕೆ ಯನ್ನು ನಿಭಾಯಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.ಇಂಡಿಯನ್ ರೆಡ್ ಕ್ರಾಸ್ ಘಟಕದ ಹಿರಿಯ ಸದಸ್ಯರಾದ ರವೀಂದ್ರನಾಥ ಉಚ್ಚಿಲ, ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ದೀಕ್ಷಿತಾ ಹಾಗೂ ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ಸದಸ್ಯರು ಉಪಸ್ಥಿ ತರಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ ಕೋಶಾಧಿಕಾರಿ ರೆಡ್ ಕ್ರಾಸ್ ಘಟಕದ ಸದಸ್ಯ ಪುಷ್ಪ ರಾಜ್ ಬಿ.ಎನ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇಕಡ 100 ಫಲಿತಾಂಶ

ಕೊಂಚಾಡಿ ಶ್ರೀರಾಮಾಶ್ರಮ ವಿದ್ಯಾ ಸಂಸ್ಥೆಯುಕೊಂಚಾಡಿ ಎಜ್ಯುಕೇಶನಲ್ ಟ್ರಸ್ಟ್ ಬೋರ್ಡ್ ನಿಂದ ನಡೆಸಲ್ಪಡುತ್ತಿರುವ ಸುಮಾರು 108 ವರ್ಷಗಳ ಕಾಲ ಇತಿಹಾಸವುಳ್ಳ ಒಂದು ವಿದ್ಯಾ ಕಾಶಿ ಯಾಗಿದೆ.“ಅಳಿಸಲಾಗದ ಸಂಪತ್ತೊಂದಿದ್ದರೆ ಅದು ಆಕ್ಷರ ಸಂಪತ್ತು ಮಾತ್ರ “ಎಂಬ ಸತ್ಯವನ್ನು ಅರಿತುಕೊಂಡಿರುವ ಇಲ್ಲಿನ ಆಡಳಿತ ಮಂಡಳಿಯು ಪರಿಸರದ ವಿದ್ಯಾಕಾಂಕ್ಷಿಗಳಿಗೆ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೆ ಗುಣಮಟ್ಟದ ಶಿಕ್ಷಣವನ್ನು ನುರಿತ ಶಿಕ್ಷಕರಿಂದ ನೀಡುತ್ತಾ ಬಂದಿರುವುದು ನಿಜಕ್ಕೂ ಕೊಂಚಾಡಿ ಟ್ರಸ್ಟ್ ಗೆ ಶಿಕ್ಷಣದ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ. ಈ ಶೈಕ್ಷಣಿಕ ಸಾಲಿನಲ್ಲಿ ಶ್ರೀರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಾಗಿದೆ.ಇಲ್ಲಿ ಶಿಕ್ಷಣ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಹೊರಬಂದಿದ್ದಾರೆ. ಹಿಂದೆ ಪದವಿಪೂರ್ವ ಫಲಿತಾಂಶದ ಸಂದರ್ಭದಲ್ಲಿ ಶ್ರೀ.ರಾಮಾಶ್ರಮ ಪದವಿ ಪೂರ್ವ ಕಾಲೇಜಿಗೆ ಶೇಕಡ 100 ಫಲಿತಾಂಶವನ್ನು ತಂದು ಕೊಡುವ ಮೂಲಕ ರಾಜ್ಯದ ಕೆಲವೇ ಕೆಲವು ಗುಣಮಟ್ಟದ ಕಾಲೇಜುಗಳ ಸಾಲಿನಲ್ಲಿ ರಾಮಾಶ್ರಮ ಪದವಿ ಪೂರ್ವ ಕಾಲೇಜು ಮಿಂಚಿತ್ತು.ಇದೀಗ ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಕೊಂಚಾಡಿ ಎಜುಕೇಶನಲ್ ಟ್ರಸ್ಟ್ ಬೋರ್ಡ್ ಹಾಗೂ ಶಾಲಾ ಶಿಕ್ಷಕರ ಪರಿಶ್ರಮದಿಂದ ಶೇಕಡಾ ನೂರು ಫಲಿತಾಂಶದ ಸಿಹಿ ಸುದ್ದಿಯನ್ನು ನೀಡಿದೆ ಎಂದು ಶಾಲಾ ಮುಖ್ಯೋಪಾಧ್ಯಯರಾಗಿರುವ ಡಾ. ರಾಜೇಶ್ ಕದ್ರಿ ಯವರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಉತ್ತಮ ಸಮಾಜ ನಿರ್ಮಾಣದ ಶಕ್ತಿ ಮಾಧ್ಯಮಗಳಿಗಿದೆ -ಪ್ರೊ.ಪಿ.ಎಲ್ .ಧರ್ಮ

ಮಂಗಳೂರು: ಮೇ.9; ಉತ್ತಮ ಸಮಾಜ ನಿರ್ಮಾಣದ ಶಕ್ತಿ ಮಾಧ್ಯಮಗಳಿಗಿದೆ. ಮುಖ್ಯವಾಗಿ ಯುವಜನರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಗುರುವಾರ ಹಮ್ಮಿಕೊಂಡ ಪ.ಗೋ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎಂ. ಇಸ್ಮಾಯಿಲ್ ಕಂಡ ಕರೆಯವರಿಗೆ ಪ.ಗೋ ಪ್ರಶಸ್ತಿ ವಿತರಿಸಿ ಮಾತನಾಡುತ್ತಿದ್ದರು.ಮಾಧ್ಯಮಗಳು ಪರಂಪರೆಯ ಕೊಂಡಿ ಯಾಗಿ ಕಾರ್ಯ ನಿರ್ವಹಿಸುತ್ತಾ ಉತ್ತಮ ಭವಿಷ್ಯ ರೂಪಿಸುವಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಮಂಗಳೂರು ವಿಶ್ವ ವಿದ್ಯಾನಿಲಯದ ಬೆಳವಣೆಗೆಯಲ್ಲಿ ಮಹತ್ವದ ಪಾತ್ರವಹಿಸಿದೆ.ಯುವ ಜನರಲ್ಲಿ ಕಲಿಕೆಯ ಬಗ್ಗೆ ಇರುವ ನಿರಾಸಕ್ತಿಯನ್ನು ದೂರ ಮಾಡಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಪಿ.ಎಲ್.ಧರ್ಮ ತಿಳಿಸಿದ್ದಾರೆ. ಮಾಧ್ಯಮಗಳು ಪದ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು.ಸಮಾಜದಲ್ಲಿನ ವಿಕೃತಿಗಳನ್ನು ಮೀರಿ ಮಾಧ್ಯಮಗಳು ಸಮಾಜದ ಉತ್ತಮ ಭವಿಷ್ಯವನ್ನು ರೂಪಿಸುವ ಶಕ್ತಿ ಯನ್ನು ಹೊಂದಿದೆ ಈ ನಿಟ್ಟಿನಲ್ಲಿ ಮಾಧ್ಯಮಗಳು ಗಮನಹರಿಸಲು ಮನವಿ ಮಾಡುವುದಾಗಿ ಪ್ರೊ.ಪಿ. ಎಲ್.ಧರ್ಮ ತಿಳಿಸಿದ್ದಾರೆ.ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ,ಹಿರಿಯ ಪತ್ರಕರ್ತ ದಿವಂಗತ ಪದ್ಯಾಣ ಗೋಪಾಲಕೃಷ್ಣರ ಒಡನಾಟದ ಬಗ್ಗೆ ಮಾತನಾಡಿ ಪತ್ರಕರ್ತರು ವರ್ತಮಾನ ಕಾಲದಲ್ಲಿದ್ದು ಭೂತಕಾಲದ ಜ್ಞಾನದೊಂದಿಗೆ ಭವಿಷ್ಯದ ಚಿಂತನೆ ಹೊಂದಿರಬೇಕಾದ ಅಗತ್ಯವಿದೆ ಎಂದರು. ಪ.ಗೋ ಪ್ರಶಸ್ತಿ ವಿಜೇತ ವಾರ್ತಾಭಾರತಿ ಪತ್ರಿಕೆಯ ವಿಶೇಷ ವರದಿಗಾರ ಇಸ್ಮಾಯಿಲ್ ಕಂಡಕೆರೆ ಮಾತನಾಡುತ್ತಾ,ಪತ್ರಿಕೆ ಗಳು ಗ್ರಾಮೀಣ ಪ್ರದೇಶದ ಸಮಸ್ಯೆ ಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆವಹಿಸಿದ್ದರು.ಸಮಾರಂಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ಆರ್,ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ ಬಂಟ್ವಾಳ,ಪದ್ಯಾಣ ಗೋಪಾಲಕೃಷ್ಣರವರ ಪುತ್ರ ವಿಶ್ವೇಶ್ವರ ಭಟ್ ,ಮ್ಯಾಮ್ ನ ಗೌರವಾಧ್ಯಕ್ಷ ವೇಣು ಶರ್ಮ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಡಸ್ಥಳ,ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತ,ಹರ್ಷ ಮೊದಲಾದ ವರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸಜ್ಜನಿಕ ನಡೆ, ಸಂಘರ್ಷದ ಹೋರಾಟ, ಸೌಜನ್ಯಯುತ ರಾಯಭಾರಿತ್ವ ಹೊಂದಿದ ಅಪರೂಪದ ರಾಜಕಾರಣಿ ವಸಂತ ಬಂಗೇರ – ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ:ಮೇ.8 – ಹಿರಿಯ ರಾಜಕಾರಣಿ ಮಾಜಿ ಶಾಸಕ ಶ್ರೀ ಕೆ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಕರ್ನಾಟಕದ ಪ್ರಮುಖ ಮೂರು ರಾಜಕೀಯ ಪಕ್ಷಗಳಡಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದ ಜಿಲ್ಲೆಯ ಏಕೈಕ ರಾಜಕಾರಣಿ ವಸಂತ ಬಂಗೇರರಾಗಿದ್ದು, ಪಕ್ಷಾತೀತವಾಗಿ ಜನತೆ ಅವರನ್ನು ಬೆಂಬಲಿಸಿದುದರ ನಿದರ್ಶನವಾಗಿದೆ. ಪ್ರಜಾಪ್ರಭುತ್ವಕ್ಕೆ ಕರಾಳವಾಗಿ ಜಾರಿಯಾಗಿದ್ದ ತುರ್ತುಪರಿಸ್ಥಿತಿ ವಿರುದ್ಧ ವಸಂತ ಬಂಗೇರರ ಹೋರಾಟ, 1983-85ರ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳ ಜನತೆ ಮಂಗನ ಖಾಯಿಲೆಯಿಂದ ತತ್ತರಿಸಿದಾಗ ಮಿಡಿದ ಅವರ ಸಹೃದಯಿ ಮನ. ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಬೆಳ್ತಂಗಡಿಯಿಂದ ಮಂಗಳೂರಿಗೆ ಅವರು ನಡೆಸಿದ ಜಾಥಾ ಇಂದಿಗೂ ಜನತೆಯ ಮನದಲ್ಲಿ ಹಚ್ಚ ಹಸಿರು.ಅವರ ನಿಧನ ವೈಯಕ್ತಿಕವಾಗಿಯೂ ತಾಲೂಕಿನ ಜನತೆಗೂ ಅಪಾರ ದುಃಖವನ್ನು ತಂದಿದ್ದು, ದಿವಂಗತರಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಶಾಸಕ ಹರೀಶ್ ಪೂಂಜ ತನ್ನ ನುಡಿನಮನ ಸಲ್ಲಿಸಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಕನ್ನಡ ಸಂಘ ಅಲ್ ಐನ್‌ನ 21ನೇ ವಾರ್ಷಿಕೋತ್ಸವ

ಮಂಗಳೂರು : ಅರಬ್ ಸಂಯುಕ್ತ ಸಂಸ್ಥಾನದ ಕನ್ನಡ ಸಂಘ ಅಲ್ ಐನ್ ಇದರ 21ನೇ ವಾರ್ಷಿಕೋತ್ಸವ ಅಲ್ ಐನ್‌ನ ಬು ್ಲರಾಡಿಸನ್ಸ್ ಹೋಟೆಲ್‌ನಲ್ಲಿ ನಡೆಯಿತು. ಉದ್ಯಮಿಗಳಾದ ಜೋಸೆಫ್ ಮಥಾಯಸ್, ಹರೀಶ್ ಶೇರಿಗಾರ್, ಮಹಮ್ಮದ್ ಇಬ್ರಾಹಿಂ, ಜಾನ್ ಲ್ಯಾನ್ಸಿ ಡಿಸೋಜಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.ಕರ್ನಾಟಕ ಸಂಘ ಶಾರ್ಜಾ ಪೂರ್ವಾಧ್ಯಕ್ಷ ಬಿ. ಕೆ.ಗಣೇಶ್, ಅಬುದಾಬಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ತೋನ್ಸೆ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ನೋವೆಲ್ ಡಿಅಲೈಡಾ, ಮಲ್ಲಿಕಾರ್ಜುನ ಗೌಡ, ಮನೋಹರ್ ಹೆಗ್ಡೆ ಇವರುಗಳನ್ನು ಗೌರವಿಸಲಾಯಿತು. ಶ್ಯಾಮಲ ಗಣಪತಿ, ವಿಕಾಸ್ ಶೆಟ್ಟಿ ಮತ್ತು ಡಾ. ಪ್ರದೀಪ್‌ಚಂದ್ರ ಇವರುಗಳಿಗೆ ಕನ್ನಡ ಸಂಘ ಅಲ್ ಐನ್‌ನ ಸಾಧಕ ಪ್ರಶಸ್ತಿ ಹಾಗೂ ನಿಶ್ಚಲ್ ನಿತ್ಯಾನಂದ ಶೆಟ್ಟಿ ಮತ್ತು ಮಿತುಲ್ ವಸಂತ್ ಕುಮಾರ್ ಇವರುಗಳಿಗೆ ಆದರ್ಶ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಮಾಡಲಾಯಿತು.ಅಲ್ ಐನ್ ಹೈಸ್ಕೂಲ್ನ ಕನ್ನಡ ಅಧ್ಯಾಪಕಿ ರುಬೀನಾ ಮತ್ತು ಕನ್ನಡ ಪಾಠ ಶಾಲೆ ದುಬೈಯ ಶಿಕ್ಷಕಿಯರಿಗೆ ಗುರುವಂದನೆ ಸಲ್ಲಿಸಲಾಯಿತು. ಕಲಾ ನಿರ್ದೇಶಕ ಬಿ.ಕೆ.ಗಣೇಶ್ ರೈ, ಸಂಯೋಜಕ ರಮೇಶ್.ಕೆ.ಬಿ. ಉಪಸ್ಥಿತರಿದ್ದರು.ಮುಖ್ಯ ಸಂಘಟಕಯು.ಪಿ.ಹರೀಶ್ ಸ್ವಾಗತಿಸಿ, ರಮೇಶ್ ಕೆ.ಬಿ.ವಂದಿಸಿದರು. ಶ್ಯಾಮಲ, ಆಯಿಶಾ, ಸವಿತಾ ನಾಯಕ್, ಉಮ್ಮರ್ ಫಾರೂಕ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.ಕನ್ನಡ ಸಂಘ ಅಲ್ ಐನ್‌ನ ಸಂಘಟನೆಯ ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ವೈಭವ , ಶರವ್ ಮತ್ತು ಆರ್ಯ ಇವರ ನಿರೂಪಣೆಯಲ್ಲಿ ಸಮಗ್ರ ಕರ್ನಾಟಕ ದರ್ಶನ ನೃತ್ಯ ರೂಪಕ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಜನರ ಪ್ರಾಣವನ್ನು ಪಣಕ್ಕಿಟ್ಟು ರಾಜಕೀಯ ಮಾಡುವುದೇ ಕಾಂಗ್ರೆಸ್‌ನ ಗ್ಯಾರಂಟಿ: ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು : ಜನರ ಜೀವ ಉಳಿಸಲು ಹಗಲಿರುಳು ದುಡಿಯುವ ಆಂಬ್ಯುಲೆನ್ಸ್ ಸಿಬ್ಬಂದಿಯ ಜೀವನಕ್ಕೆ ಗ್ಯಾರಂಟಿ ಇಲ್ಲದಿರುವುದು ದುರಂತ. ಸತತ ಮೂರು ತಿಂಗಳಿಂದ ಸಂಬಳ ನೀಡದೆ ಸತಾಯಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತ ಕೇವಲ ಪ್ರಚಾರಕಷ್ಟೇ ಸೀಮಿತವಾಗಿದೆಂದು ಬ್ರಿಜೇಶ್ ಚೌಟ ಹೇಳಿದ್ದಾರೆ. ಸಣ್ಣ ಸಮಸ್ಯೆಯಿಂದ ಸಂಬಳ ನೀಡುವಲ್ಲಿ ವಿಳಂಬವಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಆರೋಗ್ಯ ಸಚಿವರೇ, ಕನಿಷ್ಠ ಸಂಬಳಕ್ಕೆ ಜೀವದ ಹಂಗು ತೆರೆದು ಕೆಲಸ ಮಾಡುವ ಜೀವ ರಕ್ಷಕ ಆಂಬುಲೆನ್ಸ್ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡದಿರುವುದು ಸಣ್ಣ ಸಮಸ್ಯೆ..? ನೀವು ಹೇಳುವಂತಹ ಸಣ್ಣ ಸಮಸ್ಯೆಯನ್ನು ಪರಿಹಾರ ಮಾಡಲು ಇಷ್ಟು ತಿಂಗಳಾದರೂ ಸಾಧ್ಯವಾಗದೇ ಇರುವಾಗ ನಿಮಗೆ ರಾಜ್ಯದ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಿದೆಯೇ?ಆಂಬುಲೆನ್ಸ್ ಸೇವೆಯ ವ್ಯತ್ಯಾಯದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿದರೆ ಅದರ ನೇರ ಹೊಣೆಯನ್ನು ಕಾಂಗ್ರೆಸ್ ಸರ್ಕಾರ ಹೊರಬೇಕಾಗುತ್ತದೆ. ಆಂಬುಲೆನ್ಸ್ ಸಿಬ್ಬಂದಿಗಳ ವೇತನವನ್ನು ಬಿಡುಗಡೆ ಮಾಡುವ ಮೂಲಕ ಮುಷ್ಕರವನ್ನು ಶೀಘ್ರವಾಗಿ ಹಿಂಪಡೆಯುವಂತೆ ನೋಡಿಕೊಳ್ಳಬೇಕೆಂದು ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆಂದು ಬಿಜೆಪಿ ಪಕ್ಷದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ ಅವರು ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ದ.ಕ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ; ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೌಲಭ್ಯ -ಡಾ.ಎಚ್.ಆರ್.ತಿಮ್ಮಯ್ಯ

ಮಂಗಳೂರು,ಮೇ.6 : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ ತಾಲೂಕಿನಲ್ಲಿ ಎರಡು ಬೆಡ್ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದು ಬೆಡ್ ಗಳನ್ನು ಮೀಸಲಿಡಲಾಗಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಚ್. ಆರ್. ತಿಮ್ಮಯ್ಯ ತಿಳಿಸಿದ್ದಾರೆ.ಅವರು ಶುಕ್ರವಾರ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಂಡ ಮಾಧ್ಯಮ ಸಂವಾದ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಶಕಗಳ ತಾಪಮಾನವನ್ನು ಗಮನಿಸಿದಾಗ 32 ಡಿಗ್ರಿ ಸೆಲ್ಸಿಯಸ್ 33ಡಿ ಸೆ.ದಾಖಲಾ ಗುತ್ತಿತ್ತು. ಈ ಬಾರಿ ತಾಪಮಾನ 36ರಿಂದ 40 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ. ಈ ರೀತಿ ತಾಪಮಾನದಿಂದ ಬಿಸಿಲಿನಲ್ಲಿ ಹೆಚ್ಚು ಓಡಾಡುತ್ತಿರುವವರಿಗೆ ತಲೆ ನೋವು, ಸುಸ್ತು, ನಿಶ್ಯಕ್ತಿ, ಚರ್ಮ ತುರಿಕೆ, ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಕೆಲವೊಮ್ಮೆ ಬಿಸಿಲಿನಾಘಾತ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಕಷ್ಟು ಮುಂಜಾಗ್ರತೆಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಡಾ. ತಿಮ್ಮಯ್ಯ ತಿಳಿಸಿದ್ದಾರೆ. ಬಿಸಿಲಿನ ಜಳ ಹೆಚ್ಚಿರುವ ಸಂದರ್ಭದಲ್ಲಿ ಹೊರಗೆ ಓಡಾಡದೆ ಇರುವುದು ಸೂಕ್ತ. ಶುದ್ಧ ನೀರಿನ ಸೇವನೆ, ಮಜ್ಜಿಗೆ ಸೇವನೆ, ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಧರಿಸುವುದು ಬಿಸಿಲಿನ ನೇರ ಘಾತ ತಡೆಯಲು ಚಪ್ಪಲಿ ಧರಿಸುವುದು ಕೊಡೆ ಬಳಸುವುದು ಉತ್ತಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನಿರ್ಜಲೀಕರಣವಾಗದಂತೆ ಎಚ್ಚರ ವಹಿಸಬೇಕು ಎಂದು ಡಾ.ತಿಮ್ಮಯ್ಯ ಸಲಹೆ ನೀಡಿದರು.*ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ. ಮರಗಳ ನಾಶ, ವಾಹನಗಳ ದಟ್ಟಣೆ, ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾಪಮಾನದ ಏರಿಕೆಯಾಗುತ್ತಿದೆ ಎಂದು ಜಿಲ್ಲಾ ರೋಗ ವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.ತಾಪಮಾನ ಹೆಚ್ಚುತ್ತಿರುವ ಸಂದರ್ಭದಲ್ಲಿ ಸೊಳ್ಳೆಗಳು ಹೆಚ್ಚು ತ್ತಿರುವ ಕಾರಣ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ ಇದುವರೆಗೆ 108 ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆ. ಹೊರ ಜಿಲ್ಲೆಯ ಪ್ರಯಾಣಿಕರ ಜಿಲ್ಲೆಗೆ ಭೇಟಿ ನೀಡುತ್ತಿರುವ ಕಾರಣ ಡೆಂಗ್ಯೂ ಪೀಡಿತರ ಸಂಪರ್ಕದಿಂದಲೂ ಅಲ್ಪ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ನವೀನ್ ಚಂದ್ರ ಕುಲಾಲ್ ತಿಳಿಸಿದ್ದಾರೆ.ನಾವು ಸೇವಿಸುವ ಮಸಾಲೆಯುಕ್ತ ಆಹಾರ ಪದಾರ್ಥಗಳು ಬೇಸಗೆಯಲ್ಲಿ ಸೂಕ್ತ ವಲ್ಲ ಎಂದು ಡಾ.ನವೀನ್ ಕುಲಾಲ್ ಸಲಹೆ ನೀಡಿದರು.ಸಂವಾದ ಗೋಷ್ಠಿಯಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ತುಳುವರು ನಿರ್ಮಿಸಿದ ಪೀಡಿತ್ ಹಿಂದಿ ಸಿನಿಮಾ ನೈಜತೆಗೆ ಕೈಗನ್ನಡಿ : ಡಾ. ಮೀನಾಕ್ಷಿ ರಾಮಚಂದ್ರ.

ಮಂಗಳೂರು: ತುಳುನಾಡಿನ ಉತ್ಸಾಹಿ ಯುವಕರೇ ಸೇರಿಕೊಂಡು ನಿರ್ಮಿಸಿದ “ಪೀಡಿತ್” ಹಿಂದಿ ಸಿನಿಮಾವು ನಮ್ಮ ಸಮಾಜದಲ್ಲಿನ ನೈಜತೆಗೆ ಕೈಗನ್ನಡಿಯಾಗಿದೆ. ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವಂತಹ ವಾತಾವರಣ ನಿರ್ಮಾಣ ಆಗಬೇಕು, ತಂತ್ರಜ್ಞತೆಗೆ ಹಾಗೂ ಅಭಿನಯಕ್ಕೆ ವಿಶೇಷ ಆಸ್ಪದ ನೀಡಿರುವ ಈ ಸಿನಿಮಾವು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳಿಸುವಂತಾಗಲಿ, ತುಳು ಚಿತ್ರರಂಗದ ಮೂಲಕ ಹಿಂದಿ ಭಾಷೆಯಲ್ಲಿ ನಿರ್ಮಿಸಿರುವ ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುವ ಕೆಲಸ ನಡೆಯಲಿ ಎಂದು ಕಲಾ ಸಂಘಟಕಿ, ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.ಅವರು ಮಂಗಳೂರಿನ ಬಿಗ್ ಸಿನಿಮಾ ಮಾಲ್‌ನಲ್ಲಿ ಶ್ರೀಗುರುನಮನಸಂತೃಪ್ತಿ ತಂಡದಿಂದ ನಿರ್ಮಾಣಗೊಂಡಿರುವ “ಪೀಡಿತ್” ಹಿಂದಿ ಸಿನಿಮಾದ ವಿಶೇಷ ಉಚಿತ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ಸೌತ್ ಕೆನರಾ ಫೋಟೋಗ್ರಾಫರ್ಸ್ ಅಶೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಅಧ್ಯಕ್ಷತೆಯನ್ನು ವಹಿಸಿ, ತುಳುನಾಡಿನ ಪ್ರತಿಭಾವಂತರು ಸೇರಿಕೊಂಡು ಮಾಡಿರುವ ಈ ಸಿನಿಮಾವನ್ನು ಪ್ರೇಕ್ಷಕರು ವೀಕ್ಷಿಸಿ ವಿಮರ್ಶಿಸಿ ಗೆಲ್ಲಿಸುವ ಎಲ್ಲಾ ಲಕ್ಷಣಗಳು ಇದೆ. ಒಂದು ವ್ಯವಸ್ಥಿತ ಸಮಾಜದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದನ್ನು ಚಿತ್ರ ಸಮಾಜಕ್ಕೆ ಪಾಠವಾಗುತ್ತದೆ ಎಂದು ಹೇಳಿದರು.ತುಳು ಸಿನಿಮಾ ರಾಜ್ ಸೌಂಡ್ಸ್ ಎಂಡ್ ಲೈಟ್ಸ್‌ನ ನಿರ್ಮಾಪಕ ಆನಂದ ಎನ್. ಬಂಟ್ವಾಳ ಶುಭ ಹಾರೈಸಿದರು.ಮನಪಾದ ಮಾಜಿ ಸದಸ್ಯ ಪ್ರಶಾಂತ್ ಆಳ್ವಾ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕಾರ್ಯಕ್ರಮ ನಿರೂಪಕಿ ಡಾ. ಪ್ರಿಯಾ ಹರೀಶ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಚೇತಕ್ ಪೂಜಾರಿ ಮತ್ತು ಸಂತೋಷ್ ಅಂಚನ್ ಕಾರ್ಕಳ, ಮುಂಬೈಯ ಉದ್ಯಮಿ ಸತ್ಯಶಂಕರ್ ನಾಯ್ಕ್, ಕಲಾ ವಿಮರ್ಶಕ ನಾಗರಾಜ ಸುವರ್ಣ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಸಹಕಾರಿ ಸಂಘದ ಮೂಲ್ಕಿ ವಲಯದ ನಿರ್ದೇಶಕ ಮೋಹನ್ ಭಟ್ ಹಳೆಯಂಗಡಿ, ಕಲಾ ಪೋಷಕ ತಾರಾನಾಥ ಕೋಟ್ಯಾನ್ ಫಲಿಮಾರು, ಚಿತ್ರದ ಸಹ ನಿರ್ಮಾಪಕ ಸುರೇಶ್ ಬಟ್ಟೆಕಲ್ ವರ್ಕಾಡಿ, ಸಮಾಜ ಸೇವಕ ಧರ್ಮಾನಂದ ಶೆಟ್ಟಿಗಾರ್ ತೋಕೂರು ಮತ್ತಿತರರು ಉಪಸ್ಥಿತರಿದ್ದರು.ಚಿತ್ರ ನಿರ್ದೇಶಕ ದೇವಿಪ್ರಕಾಶ್ ಸ್ವಾಗತಿಸಿದರು, ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ವಂದಿಸಿದರು, ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.“ಪೀಡಿತ್” ಸಿನಿಮಾ : ಬಡ ಸುಶೀಕ್ಷಿತ ಕುಟುಂಬದ ಅಮಾಯಕ ಯುವಕನೋರ್ವ ಸಮಾಜದ ವ್ಯವಸ್ಥಿತ ಚಕ್ರವ್ಯೂಹದಲ್ಲಿ ಸಿಲುಕಿಕೊಂಡು ಹೊರಬರಲಾರದ ತುಡಿತದ ಚಿತ್ರಣವೇ ಸಿನಿಮಾದ ಕಥಾಂಶವಾಗಿದೆ. ಕೊನೆಯ ಕ್ಷಣದವರೆಗೂ ಚಿತ್ರದ ರೋಚಕ ತಿರುವುಗಳು ಕಾಣುತ್ತಾ ಕ್ಲೈಮಾಕ್ಸ್ ಹಂತದಲ್ಲಿಯೂ ಕುತೂಹಲ ಕೆರಳಿಸುವ ಚಿತ್ರ ಕಥೆ ಹಾಗೂ ಮುಖ್ಯ ಪಾತ್ರದೊಂದಿಗೆ ನಿರ್ದೇಶನವನ್ನು ದೇವಿಪ್ರಕಾಶ್ ಮಾಡಿದ್ದಾರೆ. ಕ್ಯಾಮಾರಾ ಕೈಚಳಕದಲ್ಲಿ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು, ಸಂಗೀತ, ಸಂಕಲನ, ಮಿಕ್ಸಿಂಗ್ ಕೆಲಸವನ್ನು ದೇವ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಮಾಡಿದೆ. ಬೊಳ್ಳಿಬೆಟ್ಟು ಶೇಖರ್ ಶೆಟ್ಟಿ ಗುರುಪುರ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸುರೇಶ್ ಬಟ್ಟೆಕಲ್ ವರ್ಕಾಡಿ ಅವರು ಪಾತ್ರವೊಂದರಲ್ಲಿಯೂ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ನರೇಂದ್ರ ಕೆರೆಕಾಡು, ಪೂಜಾ ಶಕ್ತಿನಗರ, ಧರ್ಮಾನಂದ ಶೆಟ್ಟಿಗಾರ್ ತೋಕೂರು, ನಯನ ಪಡುಬಿದ್ರಿ, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಡಿ.ಕೆ. ಆಚಾರ್ಯ ಕುಂಬಳೆ, ವಿನೋದ್ ಸಂತೆಕಟ್ಟೆ, ದೀಪಕ್, ಶ್ರಾವಣ್ ಎಸ್. ದೇವಾಡಿ, ಧೀರಜ್ ಡಿ. ಆಚಾರ್ಯ, ತೇಜಾಕ್ಷಿ ಮೆಂಡನ್ ಸಸಿಹಿತ್ಲು, ಡಿಜೆ ಅವಿನಾಶ್, ಸುನಿಲ್, ಆದರ್ಶ, ಅಶ್ವಿನಿ ಬಳ್ಳಾರಿ ಅಭಿನಯಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪ.ಗೋ. ಪ್ರಶಸ್ತಿಗೆ ವಾರ್ತಾಭಾರತಿ ಕೊಡಗು ವರದಿಗಾರ ಇಸ್ಮಾಯಿಲ್ ಕಂಡಕೆರೆ ಆಯ್ಕೆ.

ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪ್ರತಿಷ್ಠಿತ ಪ.ಗೋ. ಪ್ರಶಸ್ತಿಗೆ ವಾರ್ತಾಭಾರತಿ ವರದಿಗಾರ ಕೆ.ಎಂ. ಇಸ್ಮಾಯಿಲ್ ಕಂಡಕರೆ ಆಯ್ಕೆಯಾಗಿದ್ದಾರೆ.2023 ರ ಏ. 6ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ “ರಸ್ತೆ ಕೊಡಿ ಇಲ್ಲದಿದ್ದರೆ ಸಾವಿಗೆ ದಾರಿ ಮಾಡಿಕೊಡಿ” ಎಂಬ ವರದಿ ಪ್ರಶಸ್ತಿ ಗೆ ಆಯ್ಕೆ ಯಾಗಿದೆ.ಹಿರಿಯ ಪತ್ರಕರ್ತ ಕೇಶವ ಕುಂದರ್, ಪತ್ರಿಕೋದ್ಯಮ ಉಪನ್ಯಾಸಕ ಗುರುಪ್ರಸಾದ್ ಟಿ.ಎನ್.ನೇತೃತ್ವದ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ. ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿವೆ.ಪರಿಚಯ:ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಇನ್ ಜರ್ನಲಿಸಮ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಪಡೆದಿರುವ ಇಸ್ಮಾಯಿಲ್ ಚಿತ್ತಾರ ವಾಹಿನಿ, ಜನಮಿತ್ರ ಪ್ರಾದೇಶಿಕ ದಿನ ಪತ್ರಿಕೆ ಕೊಡಗು ಜಿಲ್ಲಾ ವರದಿಗಾರ, ಪ್ರಜಾಸತ್ಯ ಮತ್ತು ಆಂದೋಲನ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.ಈಗ ವಾರ್ತಾಭಾರತಿ ದಿನ ಪತ್ರಿಕೆಯ ಕೊಡಗು ವರದಿಗಾರರಾಗಿ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಮತ್ತು ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ, ಪಡೆದಿದ್ದಾರೆ.2021ರಲ್ಲಿ ಇಸ್ಮಾಯಿಲ್ ಅವರ ಚೊಚ್ಚಲ ಕೃತಿ “ಮರಿಯಮ್” ಬಿಡುಗಡೆಗೊಂಡಿತ್ತು.ಫುಟ್ಬಾಲ್ ಕ್ರೀಡಾಪಟು ಮತ್ತು ತರಬೇತುದಾರರಾಗಿದ್ದು, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭ ಮೇ 9ರಂದು ಬೆಳಗ್ಗೆ 11:00 ಗಂಟೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿದೆ.ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸುವರು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top