ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ 5ನೇ ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆ.

ಧ ರ್ಮಸ್ಥಳ:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ 5ನೇ ಜಿಲ್ಲಾ ಸಮ್ಮೇಳನದ ಲಾಂಛನವನ್ನು ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಮತ್ತು ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿ, ಸಮ್ಮೇಳನ ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಧರ್ಮೋತ್ತಾನ ಟ್ರಸ್ಟ್ ಕಾರ್ಯದರ್ಶಿ ಎ. ವಿ ಶೆಟ್ಟಿ,ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ,ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಕಾರ್ಯಕಾರಿ ಸಮಿತಿಯ ಸದಸ್ಯ ರಾಜೇಶ್ ದಡ್ಡಂಗಡಿ, ಸಂಘದ ಸದಸ್ಯ ಶಶಿಕಾಂತ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಜ. 5, 2025 ರಂದು ಮಂಗಳೂರು ಧರ್ಮಪ್ರಾಂತದ ಪರಮ ಪವಿತ್ರ ಪ್ರಸಾದ ಮೆರವಣಿಗೆ. ಈ ಬಗ್ಗೆ ಬಿಷಪ್ ಹೌಸ್ ನಲ್ಲಿ ನಡೆಯಿತು ಪೂರ್ವಭಾವಿ ಸಭೆ.

ಮಂಗಳೂರು ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ ತಾ. 05-01-2025 ರಂದು ನಡೆಯಲಿದ್ದು, ಇದರ ಬಗ್ಗೆ ಪೂರ್ವಬಾವಿ ಸಭೆಯನ್ನು ಬಿಷಪ್ ಹೌಸ್‌ನಲ್ಲಿ ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ ವಹಿಸಿ, ಕಾರ್ಯಕ್ರಮದ ಬಗ್ಗೆ ರೂಪು ರೇಖೆಯನ್ನು ವಿವರಿಸಿದರು. ಈ ಸಭೆಯಲ್ಲಿ ಧರ್ಮಪ್ರಾತ್ಯದ ಶ್ರೇಷ್ಠ ಗುರು ವಂ| ಪಾ| ಮ್ಯಾಕ್ಸಿಂ ನೊರೊನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ಟಲಿನೋ, ಕಥೋಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು.ರೋಯ್ ಕ್ಯಾಸ್ಟಲಿನೋ ಮೆರವಣಿಗೆಯ ಬಗ್ಗೆ ಸಂಸೇವಕರ ಸೇವೆಯ ಬಗ್ಗೆ ರೂಪು ರೇಖೆ ನೀಡಿ ಪ್ರತಿ ಚರ್ಚಿನ ಸ್ವಯಂ ಸೇವಕರು ಅವರು ನಿಲ್ಲುವ ಸ್ಥಳವನ್ನು ತಿಳಿಸಿದರು.ಈ ಪರಮ ಪ್ರಸಾದದ ಮೆರವಣಿಗೆಯು ಆ ದಿನ ಸಂಜೆ 3 ಗಂಟೆಗೆ ಮಿಲಾಗ್ರಿಸ್ ಚರ್ಚಿನಲ್ಲಿ ಬಲಿಪೂಜೆಯೊಂದಿಗೆ ಪ್ರಾರಂಭಗೊಳ್ಳಲಿದ್ದು 4.30 ಕ್ಕೆ ಮಿಲಾಗ್ರಿಸ್ ಚರ್ಚಿನಿಂದ ಪಾಂಡೇಶ್ವರದ ರೊಸಾರಿಯೊ ಚರ್ಚಿಗೆ ಮೆರವಣಿಗೆ ಮೂಲಕ ಪರಮ ಪ್ರಸಾದ ಕೊಂಡೊಯ್ಯಲಾಗುವುದು. ಚರ್ಚಿನ ತೆರೆದ ಮೈದಾನದಲ್ಲಿ ಪ್ರವಚನ ಹಾಗೂ ಇತರ ಕಾರ್ಯಕ್ರಮಗಳು ಜರಗಲಿರುವುದು.

ಪ್ರಾದೇಶಿಕ ವಾರ್ತೆಗಳು

ರಾಷ್ಟ್ರೀಯ ಪತ್ರಿಕಾ ದಿನಾಚರಣೆ : ‘ಪತ್ರಕರ್ತರಿಂದ ಸಮಾಜವನ್ನು ಎಚ್ಚರಿಸುವ ಕಾರ್ಯ’ : ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಆಶಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ನಗರಾಭಿವವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಮಾತನಾಡಿ ‘ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಪತ್ರಕರ್ತರು ಸಮಾಜವನ್ನು ಕಾಲಕಾಲಕ್ಕೆ ಎಚ್ಚರಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ದಿನ ನಿತ್ಯದ ಆಗುಹೋಗುಗಳನ್ನು ಜನರಿಗೆ ತಲುಪಿಸುವ ಮಾಧ್ಯಮದ ಬಗ್ಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ ಎಂದರು.ಹಿರಿಯ ಪತ್ರಿಕಾ ವಿತರಕ ನಾಗರಾಜ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕಾ ವಿತರಕರಾಗಿರುವ ನಮ್ಮಂತವರನ್ನು ಗುರುತಿಸಿ ಸನ್ಮಾನಿಸಿರುವುದು ಅತೀವ ಸಂತಸ ತಂದಿದೆ ಎಂದು ಅವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಮಾತನಾಡಿ ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಈ ಬಾರಿ ಬದಲಾಗುತ್ತಿರುವ ಮಾಧ್ಯಮಗಳ ಸ್ವರೂಪ ವಿಷಯದ ಬಗ್ಗೆ ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸುತ್ತಿದೆ. ಸುದ್ದಿಯನ್ನು ಪರಿಶೀಲನೆ ನಡೆಸದೆ ನೇರವಾಗಿ ನವ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು ಈಗ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಇದನ್ನು ತಡೆಯಲು ಒಂದು ಹೊಸ ಕಾಯ್ದೆಯನ್ನು ಜಾರಿ ಮಾಡಿದೆ ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ಪತ್ರಕರ್ತ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಭುವನೇಂದ್ರ ಪುದುವೆಟ್ಟು ಅವರಿಗೆ ಸಭೆ ಆರಂಭದ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಭಾಸ್ಕರ ರೈ ಕುಕ್ಕುವಳ್ಳಿಯವರ ಕವನ ಸಂಕಲನ ಬಿಡುಗಡೆ – ವಿಚಾರಗೋಷ್ಠಿ. ‘ಸೀಯನ’ ತುಳು ಬದುಕಿನ ನೈಜ ಚಿತ್ರಣ: ಪ್ರೊ. ಎ.ವಿ.ನಾವಡ

ಮಂಗಳೂರು: ‘ತುಳು ಭಾಷೆಯಲ್ಲಿ ಬರೆಯುವ ಹೆಚ್ಚಿನ ಲೇಖಕರು ಭಾಷೆಯ ಬಗ್ಗೆ ಗಂಭೀರವಾಗಿ ಯೋಚಿಸುವುದಿಲ್ಲ. ಆದರೆ ಭಾಸ್ಕರ ರೈ ಕುಕ್ಕುವಳ್ಳಿಯವರ ಸೀಯನ ಕೃತಿಯಲ್ಲಿ ವಸ್ತುವೈವಿಧ್ಯತೆಯೊಂದಿಗೆ ಭಾಷೆಯನ್ನು ಸಶಕ್ತವಾಗಿ ಬಳಸಲಾಗಿದೆ. ಸೀಯನ ಶೀರ್ಷಿಕೆಯೇ ಅಪ್ಪಟ ತುಳು ದೇಸಿ ಪದ. ಮೂರು ವಿಭಾಗಗಳಲ್ಲಿ ಪ್ರಕಟವಾಗಿರುವ ನೂರಕ್ಕೂ ಹೆಚ್ಚಿನ ಅವರ ಕವಿತೆಗಳಲ್ಲಿ ತುಳು ಬದುಕಿನ ನೈಜ ಚಿತ್ರಣವನ್ನು ವಿವಿಧ ಆಯಾಮಗಳಲ್ಲಿ ಕಟ್ಟಿ ಕೊಡಲಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಹಿರಿಯ ಜಾನಪದ ಸಂಶೋಧಕ ಪ್ರೊ.ಎ.ವಿ.ನಾವಡ ಹೇಳಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಸಹಯೋಗದಲ್ಲಿ ನ. 17 ರಂದು ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಜರಗಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿ ‘ಸೀಯನ’ ಚೀಪೆ ಕೋಪೆದ ಪಾಕ ಪದೊಕುಲು ಕವನ ಸಂಕಲನ ಬಿಡುಗಡೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಆಧುನಿಕ ಕವಿತೆಗಳು ನವೋದಯ ಕಾವ್ಯದ ದಾರಿಯಲ್ಲಿ ಸಾಗುತ್ತಿವೆ. ಅಲ್ಲಿ ಕನ್ನಡ, ಸಂಸ್ಕೃತ, ಇಂಗ್ಲಿಷ್ ಪದಗಳು ಧಾರಾಳ ಬಳಕೆಯಾಗುತ್ತವೆ. ತುಳುಕವಿಗಳೂ ಅದನ್ನು ಅನುಸರಿಸುತ್ತಿರುವುದು ಖೇದಕರ. ನಮ್ಮ ಕವಿಗಳು ಹೆಚ್ಚೆಚ್ಚು ತುಳು ಪಾಡ್ದನಗಳನ್ನು ಓದಬೇಕಾದ ಅಗತ್ಯವಿದೆ. ಜೊತೆಗೆ ತುಳು ಕೃತಿಗಳ ಭಾಷಾಂತರ ಪ್ರಕ್ರಿಯೆಯೂ ಬಿರುಸಾಗಿ ನಡೆಯಬೇಕು; ಅಕಾಡೆಮಿ ಅದನ್ನು ಪ್ರಕಟಿಸಬೇಕು. ಸೀಯನದ ಹಾಡುಗಳು ಕನ್ನಡದಲ್ಲೂ ಬರಲಿ’ ಎಂದವರು ಆಶಿಸಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಕೃತಿಕರ್ತ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ರವೀಂದ್ರ ರೈ ಕಲ್ಲಿಮಾರು ಕೃತಿ ಪರಿಚಯ ನೀಡಿದರು. ಎ.ಕೆ.ಜಯರಾಮ ಶೇಖ, ರಾಜಾರಾಮ ಶೆಟ್ಟಿ ಮನವಳಿಕೆ, ಲಕ್ಷ್ಮೀನಾರಾಯಣ ರೈ ಹರೇಕಳ, ವಾಸಪ್ಪ ಶೆಟ್ಟಿ ಬೆಳ್ಳಾರೆ, ನಿವೇದಿತಾ ಎನ್. ಶೆಟ್ಟಿ, ಸುಮಾ ಪ್ರಸಾದ್ ವೇದಿಕೆಯಲ್ಲಿದ್ದರು. ಜಿಲ್ಲೆಯ ಖ್ಯಾತ ಗಾಯಕ, ಆರ್ಯಭಟ ಪ್ರಶಸ್ತಿ ಪುರಸ್ಕೃತ ತೋನ್ಸೆ ಪುಷ್ಕಳ ಕುಮಾರ್ ಮತ್ತು ತಂಡದವರು ‘ಸೀಯನ ಪದರಂಗಿತ’ ಕಾರ್ಯಕ್ರಮದಲ್ಲಿ ಕವನ ಸಂಕಲನದ ಪ್ರಮುಖ ಹಾಡುಗಳನ್ನು ಸ್ವರ ಸಂಯೋಜಿಸಿ ಹಾಡಿದರು.ಯಕ್ಷಗಾನ ‌ವಿಚಾರಗೋಷ್ಠಿ:ಇದೇ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ತುಳು ಆಟೊ: ಪ್ರಸಂಗ ಬೊಕ್ಕ ಪ್ರಯೋಗ’ ಯಕ್ಷಗಾನ ವಿಚಾರಗೋಷ್ಠಿ ಜರಗಿತು. ಯಕ್ಷಗಾನ ಕಲಾವಿದ ಮತ್ತು ಪ್ರಸಂಗಕರ್ತ ತಾರಾನಾಥ ವರ್ಕಾಡಿ ‘ತುಳುಟು ಪುರಾಣ ಪ್ರಸಂಗೊಲು’ ವಿಷಯದ ಕುರಿತು ಮಾತನಾಡಿದರು. ಶಿಕ್ಷಕ,ಭಾಗವತ ಮತ್ತು ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡ ‘ ತುಳು ಜಾನಪದ ಪ್ರಸಂಗೊ ಬೊಕ್ಕ ಕಲ್ಪ ಕತೆಕ್ಲು’ ವಿಚಾರವಾಗಿ ಪ್ರಬಂಧ ಮಂಡಿಸಿದರು. ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಸಮನ್ವಯಗೊಳಿಸಿದರು. ಮಹಾಬಲ ಶೆಟ್ಟಿ ಕೂಡ್ಲು ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಪ್ರತಿಕ್ರಿಯೆ ಸಲ್ಲಿಸಿದರು. ‘ರೆಂಜೆ ಬನೊತ ಲೆಕ್ಯೆಸಿರಿ’ ತಾಳಮದ್ದಳೆ:ಕಾರ್ಯಕ್ರಮದ ಅಂಗವಾಗಿ ಹರೀಶ್ ಶೆಟ್ಟಿ ಸೂಡ ವಿರಚಿತ ‘ರೆಂಜೆ ಬನೊತ ಲೆಕ್ಯೆಸಿರಿ’ ತುಳು ಯಕ್ಷಗಾನ ತಾಳಮದ್ದಳೆ ಜರಗಿತು. ಭಾಸ್ಕರ ರೈ ಕುಕ್ಕುವಳ್ಳಿ , ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಡಾ. ದಿನಕರ ಎಸ್. ಪಚ್ಚನಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಅವಿನಾಶ್ ಶೆಟ್ಟಿ ಉಬರಡ್ಕ, ಜಯರಾಮ ಪೂಜಾರಿ ನರಿಕೊಂಬು ಅರ್ಥಧಾರಿಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಹರೀಶ್ ಶೆಟ್ಟಿ ಸೂಡಾ, ಚೆಂಡೆ-ಮದ್ದಳೆಗಳಲ್ಲಿ ಕೋಳ್ಯೂರು ಭಾಸ್ಕರ ಮತ್ತು ರೋಹಿತ್ ಉಚ್ಚಿಲ್ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮೂಲ್ಕಿಯ ಪಾಯಲ್ ಅವರಿಗೆ ಅವಳಿ ಚಿನ್ನದ ಪದಕ

ಮೂಲ್ಕಿ: ಮೂಲ್ಕಿ ಕೆ.ಎಸ್.ರಾವ್ ನಗರದ ಪಾಯಲ್ ಪಿ. ಉಡುಪಿಯ ಬುಡಕಾನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಇದರ ಆಶ್ರಯದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ಮಾಧವಂಗಣದಲ್ಲಿ 17/11/2024 ರಂದು ಜರುಗಿದ ಉಡುಪಿ ಓಪನ್ ಕರಾಟೆ ಚ್ಯಾಂಪಿಯನ್ ಶಿಪ್ 2024ರ ಸ್ಪರ್ಧೆಯ 12ರ ಹರೆಯದ ಹಳದಿ ಬೆಲ್ಟ್‌ನ ವೈಯಕ್ತಿಕ ವಿಭಾಗದ ಕುಮುಟಿಯಲ್ಲಿ ಪ್ರಥಮ ಮತ್ತು ಕಟಾದಲ್ಲಿ ಪ್ರಥಮ ಸ್ಥಾನ ಪಡೆದು ಅವಳಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಮೂಲ್ಕಿ ಕೆ.ಎಸ್.ರಾವ್ ನಗರದ ನಿವೃತ್ತ ಯೋಧ ಪ್ರಶಾಂತ್ ಬಿ. ಮತ್ತು ನಯನ ಪಡುಬಿದ್ರಿ ದಂಪತಿಯ ಪುತ್ರಿಯಾಗಿದ್ದು, ಪಾವಂಜೆ ಶ್ರೀ ವಾಣಿ ಸ್ಕೂಲ್‌ನ ಆರನೇ ತರಗತಿಯ ವಿದ್ಯಾರ್ಥಿನಿ, ಎಸ್.ಕೋಡಿಯ ಕರಾಟೆ ಶಿಕ್ಷಣ ಕೇಂದ್ರದ ಕರಾಟೆ ತರಬೇತುದಾರ ನಾಗರಾಜ್ ಕುಲಾಲ್ ಕುಬೆವೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವಿತ್ತೆ ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಭಾರತ @2047 ಪುಸ್ತಕವನ್ನು ಪ್ರಸ್ತುತ ಪಡಿಸಿದ ರೆಶೆಲ್ ಫೆರ್ನಾಂಡಿಸ್

ಮಂಗಳೂರಿನಲ್ಲಿ ನಡೆದ ಸಿಟಿಜನ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಮಂಗಳೂರಿನ ಲೇಖಕಿ ರೆಶೆಲ್ ಬಿ ಫೆರ್ನಾಂಡಿಸ್ ಅವರು ಅಮೃತಕಾಲದ ಕಾಲದಲ್ಲಿ ಯುವಕರ ಪಾತ್ರವನ್ನು ಆಧರಿಸಿದ ಭಾರತ @2047 ಯುವಜನತೆಯ ಪಾತ್ರ ಎಂಬ ಎರಡನೇ ಪುಸ್ತಕವನ್ನು ಪ್ರಸ್ತುತಪಡಿಸಿದರು.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ 5 ವರ್ಷಗಳ ಅವಧಿಗೆ ನಿರ್ದೇಶಕರುಗಳ ಆಯ್ಕೆ.

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ಇತ್ತೀಚೆಗೆ ನಡೆಯಿತು. ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ದಕ್ಷಿಣ ಕನ್ನಡ, ಮಂಗಳೂರು ಇದರ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಗಳಿಗೆ ನ.16ರಂದು11 ಇಲಾಖೆಯ 14 ಕ್ಷೇತ್ರಗಳ ಚುನಾವಣೆಯಲ್ಲಿ ನಿರ್ದೇಶಕರುಗಳು ಚುನಾಯಿತರಾಗಿದ್ದಾರೆ. ನಿರ್ದೇಶಕರುಗಳಾಗಿ ನವೀನ್ ಕುಮಾರ್ ಎಂ.ಎಸ್., ಸುರೇಶ್, ಪದ್ಮನಾಭ ಜೋಗಿ, ಜಗದೀಶ್ ಪಿ, ಕಾರ್ತಿಕ, ಮಹಾಲಕ್ಷ್ಮಿ ಮತ್ತು ಸಿದ್ದಪ್ಪ, ಪ್ರಸನ್ನ ಕುಮಾರ್ ಪಕ್ಕಳ, ಡಾ. ಆನಂದ್ ಬಂಜನ್, ಉಮೇಶ್ ನಾಯಕ್, ಉಮೇಶ್ ಕೆ.. ಜಯಲಕ್ಷ್ಮಿ, ಡಾ.ಅಜಿತ್, ಸುರೇಶ್ ಮೋರಸ್, ಒಟ್ಟು 66 ಸ್ಥಾನಗಳ ಪೈಕಿ 52 ಅಭ್ಯರ್ಥಿಗಳು ಈಗಾಗಲೇ ವಿವಿಧ ಇಲಾಖೆಯಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ. ಜಗಜೀವನ್ ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ಕಾಲೇಜಿನಲ್ಲಿ ಸಂಸ್ಥೆಯ ಆವರಣದಲ್ಲಿ ‘ಜವಾಬ್ದಾರಿಯುತ ಸಂಸ್ಕೃತಿಯ ನಿರ್ಮಾಣ’ ಕಾರ್ಯಾಗಾರ

ವಿದ್ಯಾಗಿರಿ: ದೌರ್ಜನ್ಯ ಕುರಿತು ಕೇವಲ ನೊಂದ ಮಹಿಳೆ ಮಾತ್ರವಲ್ಲ, ಅವರ ಪರವಾಗಿ ಯಾರು ಬೇಕಾದರೂ ದೂರು ನೀಡಬಹುದು. ಮಹಿಳೆ ಮೇಲೆ ಮಹಿಳೆಯೇ ದೌರ್ಜನ್ಯ ಎಸಗಿದರೂ ಅಪರಾಧ ಎಂದು ಹೊಳ್ಳ ಆ್ಯಂಡ್ ಹೊಳ್ಳ ಅಸೋಸಿಯೇಟ್ಸ್ನ ಮೇಘನಾ ಆರ್. ಬಲ್ಲಾಳ್ ಹೇಳಿದರು.ಆಳ್ವಾಸ್ (ಸ್ವಾಯತ್ತ) ಕಾಲೇಜು ಆಂತರಿಕ ಗುಣಮಟ್ಟ ಮೌಲ್ಯಮಾಪನ ಘಟಕ (ಐಕ್ಯೂಎಸಿ), ಲೈಂಗಿಕ ದೌರ್ಜನ್ಯ ತಡೆ ಘಟಕ, ಸಮಾಜಕಾರ್ಯ ವಿಭಾಗವು ಬೋಧನಾಂಗ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ‘ ಸಂಸ್ಥೆಯ ಆವರಣದಲ್ಲಿ ಜವಾಬ್ದಾರಿಯುತ ಸಂಸ್ಕೃತಿಯ ನಿರ್ಮಾಣ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಮೂಡುಬಿದಿರೆ ಮನೆತನದ ಅಬ್ಬಕ್ಕ ನಮ್ಮ ಹೆಮ್ಮೆ. ಆಕೆಯ ಸಾಧನೆ ಎಲ್ಲರಿಗೂ ಮಾದರಿಯಾಗಬೇಕು ಎಂದರು.ದೇಶದಲ್ಲಿ 1990 ಬಳಿಕ ಮಹಿಳೆಯರು ಕೆಲಸಕ್ಕೆ ಬರುವ ಸಂಖ್ಯೆ ಹೆಚ್ಚಾಯಿತು. ರಾಜಸ್ಥಾನದ ಭವಾರಿ ದೇವಿ ಅತ್ಯಾಚಾರಕ್ಕೆ ಒಳಗಾದ ಸಂದರ್ಭದಲ್ಲಿ ವಿಶಾಖ ಸಂಸ್ಥೆಯ ಹೋರಾಟದ ಫಲವಾಗಿ ಕಾಯಿದೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಹೀಗಾಗಿ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆ, ಮುಂಜಾಗ್ರತೆ ಹಾಗೂ ಪುನರ್ವಸತಿ) ಕಾಯಿದೆ -2013′ ಜಾರಿಗೆ ಬಂತು ಎಂದರು.ಈ ಕಾಯಿದೆ ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ. ಪುರುಷರು ಮಾತ್ರವಲ್ಲ, ಯಾರೇ ದೌರ್ಜನ್ಯ ನಡೆಸಿದರೂ ಶಿಕ್ಷೆಗೆ ಒಳಗಾಗುತ್ತಾರೆ. ದೌರ್ಜನ್ಯ ತಿಳಿದರೆ ತಕ್ಷಣವೇ ದೂರು ನೀಡಿ ಎಂದರು. ಭೌತಿಕ ಸಂಪರ್ಕ ಮಾತ್ರವಲ್ಲ ಮಾನಸಿಕವಾಗಿ ಎಸಗುವ ಲೈಂಗಿಕ ದೌರ್ಜನ್ಯವೂ ಶಿಕ್ಷೆಗೆ ಅರ್ಹ ಎಂದರು.ಸಹೋದ್ಯೋಗಿಗಳ ಕುರಿತು ಗಾಸಿಪ್ ಮಾಡುವುದೂ ದೌರ್ಜನ್ಯ. ಭಾವನಾತ್ಮಕ ಮತ್ತು ಮಾನಸಿಕ ನೋವು ನೀಡುವುದೂ ದೌರ್ಜನ್ಯ. ಭೌತಿಕ, ನೋಟ, ಮಾತು, ಆನ್ ಲೈನ್ ಸಂದೇಶ- ಕರೆ ಇತ್ಯಾದಿಗಳೂ ದೌರ್ಜನ್ಯದ ಭಾಗ ಎಂದರು.ಪ್ರತಿ ಸಂಸ್ಥೆಯಲ್ಲಿ ಮಹಿಳಾ ದೌರ್ಜನ್ಯ ತಡೆ ಘಟಕ ಕಡ್ಡಾಯವಾಗಿ ಇರಬೇಕು. ಸಾರ್ವಜನಿಕವಾಗಿಯೂ ಘಟಕಗಳಿವೆ. ಈ ಬಗ್ಗೆ ಕಾರ್ಮಿಕ ನ್ಯಾಯಾಲಯದಲ್ಲೂ ದೂರು ದಾಖಲಿಸಬಹುದು ಎಂದರು.ದೌರ್ಜನ್ಯ ಪ್ರಕರಣದಲ್ಲಿ ಸಂಧಾನ ಒಳ್ಳೆಯದಲ್ಲ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕಾಯಿದೆ ಪ್ರಕಾರ ವಿದ್ಯಾರ್ಥಿನಿಯರೂ ದೂರು ನೀಡಬಹುದು ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟ್ ವಿವೇಕ್ ಆಳ್ವ ಮಾತನಾಡಿ, ಮಹಿಳೆಯರ ಭೌತಿಕ ಸುರಕ್ಷತೆಯಷ್ಟೇ ಮಾನಸಿಕ ಸುರಕ್ಷತೆಯು ಮುಖ್ಯ. ಭಾರತವು ಸೇರಿದಂತೆ ಪ್ರಪಂಚದ ವಿವಿಧ ದೇಶಗಳಲ್ಲಿ ಮಹಿಳೆ, ಪುರುಷರಿಗೆ ಸಮನಾಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ಸಹಜವಾಗಿ ಆ ದೇಶಗಳ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ)ದ ವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರ. ಯಾವ ದೇಶ ಮಹಿಳೆಯರನ್ನು ನಿರ್ಲಕ್ಷಿಸುತ್ತಿದೆಯೋ ಅಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂದರು.ಸಮಾಜದಲ್ಲಿ ಉಸಿರುಗಟ್ಟುವಿಕೆ ವಾತಾವರಣ ದೂರವಾಗಬೇಕು. ಸಮಸ್ಯೆಗಳ ಬಗ್ಗೆ ಮಾತನಾಡಿ, ಜಾಗೃತರಾಗಿ, ಸಮಾಜವನ್ನು ಎಚ್ಚರಿಸಿ. ಮಹಿಳೆಯರಿಗೆ ಗೌರವ ನೀಡುವ ಮೌಲ್ಯಯುತ ಸಂಸ್ಕೃತಿಯ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ತಾಯಿಯ ಅಸುರಕ್ಷಿತ ಭಯವು ಒಂದು ಸಮುದಾಯವನ್ನೇ ಹಲವು ಶತಮಾನಗಳ ಹಿಂದೆ ಕೊಂಡೊಯ್ಯಬಹುದು ಎಂದರು.ಮಹಿಳೆ ರಾತ್ರಿ ಅಡ್ಡಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಪುರುಷರು ಯೋಚಿಸಬೇಕಾಗಿದೆ ಎಂದರು. ಸುರಕ್ಷತೆಯ ಪಟ್ಟಿಯಲ್ಲಿ ಭಾರತವು 190 ರಾಷ್ಟ್ರಗಳ ಪೈಕಿ 134ನೇ ಸ್ಥಾನದಲ್ಲಿದೆ. ಮಹಿಳೆಯ ಸುರಕ್ಷತೆ ನಿಟ್ಟಿನಲ್ಲಿ ಪುರುಷರು ಜವಾಬ್ದಾರಿ ವಹಿಸಬೇಕು ಎಂದರು.ಘಟಕ ಸಂಯೋಜಕಿ ಡಾ ಸ್ವಪ್ನಾ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರೆಹಮಾನ್ ಸ್ವಾಗತಿಸಿದರು. ಇಂಶಾ ವಂದಿಸಿದರು.Greetings,

ಪ್ರಾದೇಶಿಕ ವಾರ್ತೆಗಳು

ಮಂಗಳೂರು ವಿ ವಿ ಅಂತರ್ ಕಾಲೇಜು ಕುಸ್ತಿ ಪಂದ್ಯಾಟ : ಆಳ್ವಾಸ್‌ಗೆ ಸತತ 14 ನೇ ಬಾರಿ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇವರ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಸ್ಪರ್ಧೆಯ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ 14 ಚಿನ್ನ, 03 ಬೆಳ್ಳಿ ಹಾಗೂ 02 ಕಂಚಿನ ಪದಕದೊಂದಿಗೆ ಮೂಡುಬಿದಿರೆಯ ಆಳ್ವಾಸ್ ಕುಸ್ತಿಪಟುಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಫಲಿತಾಂಶ :ಪುರುಷರ ವಿಭಾಗದಲ್ಲಿ : ನಿಖಿಲ್ – 61 ಕೆಜಿ ವಿಭಾಗದಲ್ಲಿ (ದ್ವಿತೀಯ), ಗುಡ್ಡಪ್ಪ – 61 ಕೆಜಿ ವಿಭಾಗದಲಿ (ತೃತೀಯ), ರಾಕೇಶ್ – 65 ಕೆಜಿ ವಿಭಾಗದಲ್ಲಿ (ಪ್ರಥಮ), ಶಿವರಾಜು – 70 ಕೆಜಿ ವಿಭಾಗದಲ್ಲಿ (ಪ್ರಥಮ), ಸುರೇಂದ್ರ – 74 ಕೆಜಿ ವಿಭಾಗದಲ್ಲಿ (ದ್ವಿತೀಯ), ಚೇತನ್ – 79 ಕೆಜಿ ವಿಭಾಗದಲ್ಲಿ (ಪ್ರಥಮ), ಕೀರ್ತಿ – 86 ಕೆಜಿ ವಿಭಾಗದಲ್ಲಿ (ಪ್ರಥಮ), ಪ್ರಜ್ವಲ್ – 92 ಕೆಜಿ ವಿಭಾಗದಲ್ಲಿ (ಪ್ರಥಮ), ಕಾರ್ತಿಕ್ – 97 ಕೆಜಿ ವಿಭಾಗದಲ್ಲಿ (ಪ್ರಥಮ), ಬಸವರಾಜು – 97+ ಕೆಜಿ ವಿಭಾಗದಲ್ಲಿ (ಪ್ರಥಮ) ಬಹುಮಾನ ಗಳಿಸಿದ್ದಾರೆ.ಮಹಿಳೆಯರ ವಿಭಾಗದಲ್ಲಿ : ಶಾಮಲ – 50 ಕೆಜಿ ವಿಭಾಗದಲ್ಲಿ (ಪ್ರಥಮ), ಚಂದ್ರಿಕಾ – 53 ಕೆಜಿ ವಿಭಾಗದಲಿ (ಪ್ರಥಮ), ಮನ್ವಿತಾ – 57 ಕೆಜಿ ವಿಭಾಗದಲ್ಲಿ (ತೃತೀಯ), ಚೈತ್ರಾ – 59 ಕೆಜಿ ವಿಭಾಗದಲ್ಲಿ (ಪ್ರಥಮ), ದೀಪಾ – 62 ಕೆಜಿ ವಿಭಾಗದಲ್ಲಿ (ಪ್ರಥಮ), ಮಾನ್ಯ – 65 ಕೆಜಿ ವಿಭಾಗದಲ್ಲಿ (ಪ್ರಥಮ), ನೇಹಾ – 68 ಕೆಜಿ ವಿಭಾಗದಲ್ಲಿ (ಪ್ರಥಮ), ವೈಶಾಲಿ – 72 ಕೆಜಿ ವಿಭಾಗದಲ್ಲಿ (ದ್ವಿತೀಯ), ಧನ್ಯಾ- 76 ಕೆಜಿ ವಿಭಾಗದಲ್ಲಿ (ಪ್ರಥಮ) ಬಹುಮಾನ ಗಳಿಸಿದ್ದಾರೆ.ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವರು ಅಭಿನಂದಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬೋಳೂರು ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ತ್ರಿಕಾರ್ತಿಕಾ ಪೂಜಾ ಸಂಭ್ರಮ

ಮಂಗಳೂರು ನಗರದ ಬೋಳೂರು ಅಮೃತ ವಿದ್ಯಾಲಯಂ ಆವರಣದಲ್ಲಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ವಿಶೇಷ ಕೃತ್ತಿಕಾ ಪೂಜೆ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಸಂಜೆ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಮಂಗಳೂರಿನ ಕಲಾಮೃತ ತಂಡದವರು ನಡೆಸಿಕೊಟ್ಟ ಸುಮಧುರ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಮಾಲಿನಿ ಕೇಶವ ಪ್ರಸಾದ್ ರವರ ಸುಶ್ರಾವ್ಯ ಕಂಠದ ಹಾಡುಗಳು ,ವೈಷ್ಣವಿಯವರ ಸ್ಯಾಕ್ಸೋಫೋನ್ ,ಅಭಿಷೇಕ್ ಸುರತ್ಕಲ್, ಪೂರ್ವಿ ಕಾಮತ್,ದೀಕ್ಷಿತಾ ಮತ್ತು ತಂಡದವರಿಂದ ಮೂಡಿಬಂದ ಭಕ್ತಿ ಭಾವದ ಸ್ವರಮಾಧುರ್ಯ ಜನಮಾನಸದ ಮೆಚ್ಚುಗೆ ಗಳಿಸಿತು.ಬ್ರಹ್ಮಚಾರಿ ರತೀಶ್ ಇವರು ಕೃತ್ತಿಕಾ ನಕ್ಷತ್ರದ ಪ್ರಯುಕ್ತ ಜರುಗುವ ಜ್ಯೋತಿ ಪೂಜೆ ಹಾಗೂ ಭಗವತಿ ಸೇವೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿ ,ಅಮೃತ ಯುವ ಧರ್ಮಧಾರದ ಪದಾಧಿಕಾರಿಗಳು, ಅಮ್ಮನವರ ಭಕ್ತರು ಮತ್ರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಆಗಮಿಸಿದ ಎಲ್ಲರಿಗೂ ಮಹಾಪ್ರಸಾದ ವಿತರಣೆ ಮಾಡಲಾಯಿತು.

Scroll to Top