ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಯೋಗದಿಂದ ದೇಶಕ್ಕೆ ವಿಶೇಷ ಸ್ಥಾನ: ಡಾ. ಮೋಹನ್ ಆಳ್ವ

ಮಂಗಳೂರು, ಜೂ. 11: ವಿವಿಧ ಕ್ಷೇತ್ರಗಳ ಮೂಲಕ ದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿರುವ ಜತೆಯಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಯೋಗ, ಧ್ಯಾನವೂ ಪ್ರಪಂಚದಲ್ಲಿ ವಿಶೇಷ ಸ್ಥಾನವನ್ನು ದೊರಕಿಸಿಕೊಟ್ಟಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿಪ್ರಾಯಿಸಿದ್ದಾರೆ.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜೂ. 12ರಿಂದ 24ರವರೆಗೆ ಪತ್ರಕರ್ತರು ಹಾಗೂ ಅವರು ಕುಟುಂಬ ಸದಸ್ಯರಿಗಾಗಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ದೇವಿಕಾ ಯೋಗ ಕ್ಲಾಸೆಸ್ ಸಹಭಾಗಿತ್ವದಲ್ಲಿ ನಡೆಯಲಿರುವ ಯೋಗ ತರಬೇತಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀಳುವುದು ಇಂತಹ ತರಬೇತಿಗೆ ಹೆಚ್ಚಿನ ಒತ್ತು ನೀಡುವುದು ಅಗತ್ಯವಾಗಿದೆ ಎಂದರು.ದೇವಿಕಾ ಯೋಗ ಕ್ಲಾಸೆಸ್‌ನ ನಿರ್ದೇಶಕಿ ದೇವಿಕಾ ಪುರುಷೋತ್ತಮ್ ಮಾತನಾಡಿ, ಪತ್ರಕರ್ತರ ದಿನಪೂರ್ತಿಯ ಒತ್ತಡದ ಕೆಲಸದ ನಡುವೆ ಕನಿಷ್ಟ ಒಂದು ಗಂಟೆಯ ಯೋಗ ಮಾನಸಿಕವಾಗಿ ಹಾಗೂದೈಹಿಕವಾಗಿ ಸಾಕಷ್ಟು ಪರಿಣಾಮವನ್ನು ಬೀರಲಿದೆ ಎಂದರು.ಯೋಗ ಗುರು ಅಯ್ಯಂಗಾರ್‌ರಿAದ ಯೋಗ ತರಬೇತಿ ಪಡೆದು ಕಳೆದ ಸುಮಾರು 20 ವರ್ಷಗಳಿಂದ ಉಚಿತ ತರಬೇತಿಗಳನ್ನು ರಾಜ್ಯದ ವಿವಿಧ ಕಡೆಗಳಲ್ಲಿ ನಡೆಸುತ್ತಾ ಬಂದಿರುವುದಾಗಿ ಹೇಳಿದ ದೇವಿಕಾ ಪುರುಷೋತ್ತಮ್, ತರಬೇತಿ ಸಂದರ್ಭದಲ್ಲಿ ಗುರುದಕ್ಷಿಣೆಯಾಗಿ ನೀಡುವ ಹಣವನ್ನು ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಉಪಯೋಗಿಸುತ್ತಿರುವುದಾಗಿ ಹೇಳಿದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಸಮಾಜಮುಖಿ ಚಿಂತನೆಯ ಜೊತೆ ಸಂಘ ಮುನ್ನಡೆದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ” -ಕರುಣಾಕರ ಎಂ. ಶೆಟ್ಟಿ. *ಬಂಟರ ಸಂಘ ಸುರತ್ಕಲ್ ನಿಂದ ಅಭಿನಂದನೆ, ಸಹಾಯ ಹಸ್ತ, ವಿದ್ಯಾರ್ಥಿ ವೇತನ ವಿತರಣೆ.

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ವತಿಯಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಬಂಟರ ಸಂಘದಲ್ಲಿ ನೆರವೇರಿತು.ಕಾರ್ಯಕ್ರಮವನ್ನು ಮುಂಬೈ ವಿ.ಕೆ. ಸಮೂಹ ಸಂಸ್ಥೆಯ ಮೆನೇಜಿಂಗ್ ಡೈರೆಕ್ಟರ್ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಸುರತ್ಕಲ್ ಬಂಟರ ಸಂಘವನ್ನು ಹಿರಿಯರು ಉತ್ಸಾಹದಿಂದ ಕಟ್ಟಿದ್ದಾರೆ. ಇದನ್ನು ಉಳಿಸಿ ಬೆಳೆಸಲು ಇಂದಿನ ಯುವಜನತೆ ಮುಂದಾಗಬೇಕು. ಸಮಾಜಮುಖಿ ಚಿಂತನೆಯ ಜೊತೆ ಸಂಘ ಮುನ್ನಡೆದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ. ಮಕ್ಕಳು ನಮ್ಮ ಮಣ್ಣಿನ ಸಂಸ್ಕೃತಿಯನ್ನು ಮರೆಯದೆ ಚೆನ್ನಾಗಿ ಓದಿ ಸಾಧನೆ ಮಾಡಬೇಕು. ತಮ್ಮ ಮುಂದಿನ ಜೀವನದ ಬಗ್ಗೆ ಈಗಲೇ ಗಂಭೀರವಾಗಿ ಚಿಂತಿಸಬೇಕು” ಎಂದರು. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮಾತನಾಡಿ, “ಹಣ ಎಲ್ಲರಲ್ಲೂ ಇರುತ್ತದೆ ಆದರೆ ಅದನ್ನು ಯೋಗ್ಯರಿಗೆ ದಾನ ಮಾಡಲು ಋಣಾನುಬಂಧ ಬೇಕು. ಸುರತ್ಕಲ್ ಬಂಟರ ಸಂಘದ ವತಿಯಿಂದ ನಡೆಯುವ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುತ್ತಿವೆ. ಸುರತ್ಕಲ್ ಬಂಟರ ಸಂಘ ಇನ್ನು ಮುಂದೆಯೂ ಇದೇ ರೀತಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಿ” ಎಂದರು.ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ರಂಗೋಲಿ ಮಾತನಾಡಿ, “ಸುರತ್ಕಲ್ ಬಂಟರ ಸಂಘ ಸದಾ ಕ್ರಿಯಾಶೀಲವಾಗಿದ್ದು ಸುತ್ತಮುತ್ತಲಿನ ಸಂಘಗಳ ಮಧ್ಯೆ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇಂಥ ಸಂಘ ಇತರ ಸಂಘಟನೆಗಳಿಗೆ ಮಾದರಿ” ಎಂದರು.ಸುರತ್ಕಲ್ ಬಂಟರ ಸಂಘದ ನೂತನ ಕಟ್ಟಡ ಸಮಿತಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ಮಧ್ಯಗುತ್ತು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಬಂಟರ ಸಂಘ ಸುರತ್ಕಲ್ ಆರ್ಥಿಕ ಸಹಾಯದೊಂದಿಗೆ ನೂತನವಾಗಿ ನಿರ್ಮಾಣಗೊಂಡ ಮನೆಯ ಕೀ ಅನ್ನು ಸೂರಜ್ ಶೆಟ್ಟಿ ಕಾಟಿಪಳ್ಳ ಅವರಿಗೆ ಹಸ್ತಾಂತರ ಮಾಡಲಾಯಿತು. ಭಿನ್ನ ಸಾಮರ್ಥ್ಯ ಹಾಗೂ ವಿಕಲ ಚೇತನರಿಗೆ ಸಹಾಯಹಸ್ತ ವಿತರಿಸಲಾಯಿತು. ಡಾ.ಪಿ.ವಿ. ಶೆಟ್ಟಿ ಮುಂಬೈ ಇವರಿಂದ ಪ್ರತೀ ವರ್ಷ ನೀಡಲ್ಪಡುವ 1 ಲಕ್ಷ ರೂ. ನಿರಂತರ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿ ಸಂಘ ಹಮ್ಮಿಕೊಳ್ಳುವ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಬೇಕು ಎಂದರು. ಮುಖ್ಯ ಅತಿಥಿ ಬೆಂಗಳೂರು ಯುವ ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ ಮಾರ್ಲ, ಮಾಜಿ ಅಧ್ಯಕ್ಷ ಎಂ ದೇವಾನಂದ ಶೆಟ್ಟಿ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ, ಮಹಿಳಾ ವೇದಿಕೆಯ ಅಧ್ಯಕ್ಷೆ ಭವ್ಯಾ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಮಧ್ಯ, ಸಾಂಸ್ಕ್ರತಿಕ ಕಾರ್ಯದರ್ಶಿ ಜಯರಾಮ ಶೆಟ್ಟಿ, ಜೊತೆ ಕಾರ್ಯದರ್ಶಿ ಸುಜೀರ್ ಶೆಟ್ಟಿ ಸೂರಿಂಜೆ, ಕ್ರೀಡಾ ಕಾರ್ಯದರ್ಶಿ ಶಿಶೀರ್ ಶೆಟ್ಟಿ ಪೆರ್ಮುದೆ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾನಿಧಿಗೆ ದೇಣಿಗೆ ನೀಡಿದ ಶ್ರೀಮತಿ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಶ್ರೀಕೃಷ್ಣ ಶೆಟ್ಟಿ, ರಾಜೇಶ್ವರಿ ದೇವೇಂದ್ರ ಶೆಟ್ಟಿ ದಂಪತಿಗಳನ್ನು, ಸುಜಾತ ಲೀಲಾಧರ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ, ಸನ್ಮಾನ, ನಿರಂತನ ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ವೇತನೆ ವಿತರಿಸಲಾಯಿತು. ಸಹಾಯ ಹಸ್ತ, ನೂತನ ಮನೆಯ ಕೀಯನ್ನು ಸೂರಜ್ ಶೆಟ್ಟಿಗೆ ಮಾಲಾಡಿ ಅಜಿತ್ ಕುಮಾರ್ ರೈ ಹಸ್ತಾಂತರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ‌ನಿರ್ವಹಿಸಿದರು.ಸಾಂಸ್ಕೃತಿಕ ಸ್ಪರ್ಧೆಯ ಫಲಿತಾಂಶನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸುರತ್ಕಲ್ ಗ್ರಾಮ, ದ್ವಿತೀಯ ಕಾಟಿಪಳ್ಳ -ಕೃಷ್ಣಾಪುರ ಗ್ರಾಮ,ತೃತೀಯ ಬಹುಮಾನವನ್ನು ಬಾಳ ಗ್ರಾಮ ಮತ್ತು ಇಡ್ಯಾ ಗ್ರಾಮ ಹಂಚಿಕೊಂಡಿತು.ಪ್ರಹಸನ ಸ್ಪರ್ಧೆಯಲ್ಲಿ ಪ್ರಥಮ ಇಡ್ಯ ಗ್ರಾಮ, ದ್ವಿತೀಯ ಸುರತ್ಕಲ್ ಗ್ರಾಮ, ತೃತೀಯ ಬಹುಮಾನವನ್ನು ಚೇಳಾರು ಗ್ರಾಮ ಪಡೆದುಕೊಂಡಿದೆ.ತೀರ್ಪುಗಾರರಾಗಿ ನರೇಶ್ ಕುಮಾರ್ ಸಸಿಹಿತ್ಲು, ಸೂರಜ್ ಶೆಟ್ಟಿ ಬಜಪೆ, ಶ್ರೀ ಶೈಲಾ ಮುಲ್ಕಿ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್ ಬಂಟರ ಸಂಘದ ನೂತನ ಕಟ್ಟಡ ಸಮಿತಿಯ ಚೆಯರ್ ಮೆನ್ ಆಗಿ ಕರುಣಾಕರ ಶೆಟ್ಟಿ ಮಧ್ಯಗುತ್ತು ಆಯ್ಕೆ

ಸುರತ್ಕಲ್ : ಸುರತ್ಕಲ್ ಬಂಟರ ಸಂಘದ ನೂತನ ಕಟ್ಟಡ ಸಮಿತಿಯ ಚೆಯರ್ ಮೆನ್ ಆಗಿ ಸಮಾಜಸೇವಕ, ಉದ್ಯಮಿ ಮುಂಬೈ ವಿ.ಕೆ.ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಕರುಣಾಕರ ಶೆಟ್ಟಿ ಮಧ್ಯಗುತ್ತು ಆಯ್ಕೆಯಾಗಿದ್ದಾರೆ. ಸುರತ್ಕಲ್ ಬಂಟರ ಸಂಘದ ಮಹಾಸಭೆಯಲ್ಲಿ ಕರುಣಾಕರ ಎಂ ಶೆಟ್ಟಿ ಅವರನ್ನು ಸುರತ್ಕಲ್ ಬಂಟರ ಸಂಘದ ನೂತನ ಕಟ್ಟಡ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲು ಠರಾವು ಮಂಡಿಸಲಾಯಿತು. ಬಳಿಕ ಸಂಜೆ ನಡೆದ ಬಹಿರಂಗ ಅಧಿವೇಶನದಲ್ಲಿ ಕರುಣಾಕರ ಶೆಟ್ಟಿ ಅವರನ್ನು ನೂತನ ಕಟ್ಟಡ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಬಳಿಕ ಸಂಘದ. ವತಿಯಿಂದ ಕರುಣಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು.ಬಳಿಕ ಮಾತನಾಡಿದ ಕರುಣಾಕರ ಶೆಟ್ಟಿ ಅವರು ದೊಡ್ಡ ಜವಾಬ್ದಾರಿಯನ್ನು ನೀಡಿದ್ದೀರಿ. ಇದಕ್ಕೆ ಪ್ರತಿಯೊಬ್ಬ ಸದಸ್ಯರ ಸಹಕಾರ ಬೇಕು. ಸುರತ್ಕಲ್ ನಲ್ಲಿ ಭವ್ಯವಾದ ಹವಾನಿಯಂತ್ರಿತ ಕಟ್ಟಡವನ್ನು ನಿರ್ಮಿಸೋಣ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಕೋಶಾಧಿಕಾರಿ ಅವಿನಾಶ್ ಶೆಟ್ಟಿ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಮಾಜೀ ಅಧ್ಯಕ್ಷರಾದ ದೇವಾನಂದ ಶೆಟ್ಟಿ, ಉಲ್ಲಾಸ್ ಶೆಟ್ಟಿ ಪೆರ್ಮುದೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬಹುನಿರೀಕ್ಷಿತ “ತುಡರ್” ತುಳು ಸಿನಿಮಾ ಜೂನ್ 14 ರಂದು ತೆರೆಗೆ

ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಜೂನ್ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿತು.ಚಿತ್ರದ ಬಗ್ಗೆ ಮಾತಾಡಿದ ಮೋಹನ್ ರಾಜ್ ಅವರು, “2019ರಲ್ಲಿ ಚಿತ್ರಕ್ಕೆ ಕಥೆ ಬರೆದಿದ್ದು ತುಳು ಚಿತ್ರರಂಗದಲ್ಲಿ ಹೊಸತನ ತರಲು ನಿರ್ಮಾಪಕರು ನೆರವಾಗಿದ್ದಾರೆ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಕೂಡ ನಮ್ಮ ಪ್ರಯತ್ನವನ್ನು ಮೆಚ್ಚಿದ್ದಾರೆ. ಸುಮುಖ ಬ್ಯಾನರ್ ನಲ್ಲಿ ಬಂದಿರುವ ಮೊದಲ ಸಿನಿಮಾ ಇದಾಗಿದ್ದು ಎಲ್ಲರೂ ಸಿನಿಮಾವನ್ನು ಹೊಗಳಿದ್ದಾರೆ. ಇದು ನಮ್ಮ ಕೆಲಸಕ್ಕೆ ಇನ್ನಷ್ಟು ಸ್ಫೂರ್ತಿಯನ್ನು ನೀಡಿದೆ” ಎಂದರು.ಬಳಿಕ ಮಾತಾಡಿದ ನಾಯಕನಟ ಸಿದ್ಧಾರ್ಥ್ ಶೆಟ್ಟಿ ಅವರು, “ಒಂದೇ ಕುಟುಂಬ ಎನ್ನುವಂತೆ ನಾವೆಲ್ಲರೂ ಒಟ್ಟಿಗೆ ಸೇರಿ ಸಿನಿಮಾವನ್ನು ಮಾಡಿದ್ದೇವೆ. ಸಿನಿಮಾ ಕಥೆ, ಪ್ರತಿಯೊಬ್ಬರ ನಟನೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಎಲ್ಲ ತುಳುವರು ಜೂ.14ರಂದು ಸಿನಿಮಾ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ” ಎಂದರು.ನಿರ್ದೇಶಕ ತೇಜೇಶ್ ಪೂಜಾರಿ ಮಾತನಾಡಿ, “ನಾನು ಬಾಲಿವುಡ್ ನಲ್ಲಿ ಕಳೆದ 25 ವರ್ಷಗಳಿಂದ ಸಿನಿಮಾಗಳಲ್ಲಿ ತೊಡಗಿದ್ದೇನೆ. ತುಳು ಚಿತ್ರರಂಗದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಆದರೆ ಸಹ ನಿರ್ದೇಶಕ ಎಲ್ಟನ್ ನನ್ನನ್ನು ಇಲ್ಲಿಗೆ ಕರೆತಂದರು. ಈ ಸಿನಿಮಾವನ್ನು ಪ್ರೀತಿಯಿಟ್ಟು ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಹರಸಿ” ಎಂದರು.ಈಗಾಗಲೇ ತುಡರ್ ಸಿನಿಮಾ ವಿದೇಶ ಸಹಿತ ಮಂಗಳೂರು, ಉಡುಪಿ, ಪುತ್ತೂರು, ಸುರತ್ಕಲ್, ಪಡುಬಿದ್ರೆಯಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಪ್ರೇಕ್ಷಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಉತ್ತಮ ಚಿತ್ರಕತೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ. ನಾಯಕ ನಟ ಸಿದ್ದಾಥ್೯ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ‌. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ವಿಲ್ಸನ್ ರೆಬೆಲ್ಲೋ, ವಿದ್ಯಾ, ಸಂಪತ್, ಹರೀಶ್ ಶೆಟ್ಟಿ, ನಟ ಸಿದ್ಧಾರ್ಥ್ ಶೆಟ್ಟಿ, ವಿಕಾಸ್ ಪುತ್ರನ್, ಉದಯ್ ಪೂಜಾರಿ, ಮೋಹನ್ ರಾಜ್, ನಿರ್ದೇಶಕ ತೇಜೇಶ್ ಪೂಜಾರಿ, ಹಂಚಿಕೆದಾರ ಸಚಿನ್ ಎಸ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಿನಿಮಾ ತಂಡ:ಸಿನಿಮಾಕ್ಕೆ ವಿಲ್ಸನ್ ರೆಬೆಲ್ಲೊ, ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಬಂಡವಾಳ ಹೂಡಿದ್ದಾರೆ.ತೇಜೇಶ್ ಪೂಜಾರಿ ಎಲ್ಟನ್ ಮಸ್ಕರೇನಸ್ ನಿರ್ದೇಶಕರಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ: ಮೋಹನ್ ರಾಜ್. ಸಂಗೀತ: ಪ್ಯಾಟ್ಟ್ಸನ್ ಪಿರೇರಾ , ಸಾಯೀಶ್ ಭಾರದ್ವಾಜ್ ಛಾಯಾಗ್ರಹಣ: ಚಂತೂ ಮೆಪ್ಪಯುರು, ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ, ನೃತ್ಯ ಸಂಯೋಜಕ ವಿಜೇತ್ R ನಾಯಕ್, ಸಂಕಲನ ಗಣೇಶ್ ನೀರ್ಚಾಲ್, ಪ್ರಚಾರ ವಿನ್ಯಾಸ ದೇವಿ ನಿರ್ವಹಿಸಿದ್ದಾರೆ.ತುಡರ್ ಸಿನಿಮಾಕ್ಕೆ ಮಂಗಳೂರು ಮತ್ತು ಉಡುಪಿಯ ಆಸುಪಾಸಿನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ.ತಾರಾಗಣದಲ್ಲಿ ಸಿದ್ಧಾರ್ಥ್ ಎಚ್ ಶೆಟ್ಟಿ, ದೀಕ್ಷಾ ಭಿಷೇ, ಅರವಿಂದ ಬೋಳಾರ್, ರೂಪ ವರ್ಕಾಡಿ, ಸದಾಶಿವ ಅಮೀನ್, ನಮಿತಾ ಕೂಳೂರು, ಎಲ್ಟನ್ ಮಶ್ಚರೇನ್ಹಸ್, ವಿಕಾಸ್ ಪುತ್ರನ್, ಪ್ರಜ್ವಲ್ ಶೆಟ್ಟಿ, ಹರ್ಷಿತಾ ಶೆಟ್ಟಿ, ರಾಧೇಶ್ ಶೆಣೈ ಅನ್ವಿತಾ ಸಾಗರ್, ಜಯಶೀಲ, ಉಮೇಶ್ ಮಿಜಾರ್, ಅಶೋಕ್ ಕುಮಾರ್ , ಉದಯ ಪೂಜಾರಿ, ಮೋಹನ್ ರಾಜ್ ಇದ್ದಾರೆ. ಚಿತ್ರಗಳು : ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಭಾರತೀಯ ಪಶು ವೈದ್ಯಕೀಯ ಪರಿಷತ್ ಸದಸ್ಯರಾಗಿ ಮಂಗಳೂರಿನ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಆಯ್ಕೆ.

ಮಂಗಳೂರು: ಭಾರತೀಯ ಪಶು ವೈದ್ಯಕೀಯ ಪರಿಷತ್ (ವಿಸಿಐ)ಗೆ 11 ಸದಸ್ಯರನ್ನು ಆಯ್ಕೆ ಮಾಡಲು ಶನಿವಾರ ಆನ್‌ಲೈನ್ ಮೂಲಕ ಚುನಾವಣೆ ನಡೆಯಿತು. ದೇಶದ ನಾನಾ ರಾಜ್ಯಗಳಿಂದ ನಾನಾ ವಿಭಾಗದಲ್ಲಿ 93 ಅಭ್ಯರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ಕೆಪಿಎಫ್‌ಬಿಎ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹಾಗೂ ರೈಸನ್ಸ್ ನ್ಯೂಟ್ರಿಷನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಮಂಗಳೂರು ಮೂಲದ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಅತ್ಯಧಿಕ ಮತಗಳನ್ನು ಗಳಿಸಿ ಭಾರತೀಯ ಪಶು ವೈದ್ಯಕೀಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಡಾ. ಸುಶಾಂತ್ ರೈ ಅವರು ನಾಲ್ಕು ವರ್ಷಗಳ ಅವಧಿಗೆ ಕೆಪಿಎಫ್‌ಬಿಎ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಕೆವಿಎಎಫ್‌ಎಸ್‌ಯು ಮತ್ತು ಕೆಪಿಎಫ್‌ಬಿಎ ಕುಕ್ಕುಟ ತರಬೇತಿ ಕೇಂದ್ರ ಮತ್ತು ರೋಗನಿರ್ಣಯ ಪ್ರಯೋಗಾಲಯವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಕೆಪಿಎಫ್ ಬಿಎ ಅಧಿಕಾರಾವಧಿಯಲ್ಲಿ, ಕುಕ್ಕುಟ ವಿಜ್ಞಾನ ಕ್ಷೇತ್ರದಲ್ಲಿ ಸಹಕಾರಿ ಸಂಶೋಧನೆಗಾಗಿ ಹಲವು ಕ್ರಮ ಕೈಗೊಂಡಿದ್ದರು. ಬೆಂಗಳೂರಿನ ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸ್ ನ ಪಶುವೈದ್ಯಕೀಯ ಕಾಲೇಜಿನಿಂದ ಪಶು ವೈದ್ಯಕೀಯ ಪದವೀಧರರಾಗಿದ್ದಾರೆ. ಅವರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕುಕ್ಕುಟ ಉದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ರೈತರಿಗೆ ತರಬೇತಿ ನೀಡಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನೈಸರ್ಗಿಕ ಸಂಪನ್ಮೂಲದ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ -ಶ್ರೀಧರ್ *ದೇರಳಕಟ್ಟೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ.

ಮಂಗಳೂರು, ಜೂ.10;ನಮಗೆ ಉಚಿತವಾಗಿ ದೊರೆಯುವ ನೈಸರ್ಗಿಕ ಸಂಪನ್ಮೂಲದ ಸಂರಕ್ಷಣೆ ಯೂ ನಮ್ಮೆಲ್ಲರ ಹೊಣೆಗಾರಿಕೆ ಯಾಗಬೇಕು ಎಂದು ಅರಣ್ಯ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.ಅವರು ಇಂದು ದೇರಳಕಟ್ಟೆಯ ರತ್ನ ಎಜುಜೇಶನ್ ಟ್ರಸ್ಟ್ ನ ವತಿಯಿಂದ ನಡೆಯುತ್ತಿರುವ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ದಕ್ಷಿಣ ಕನ್ನಡ ಅರಣ್ಯ ಇಲಾಖೆ,ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಕೇಂದ್ರ, ವಿದ್ಯಾರತ್ನ ಶಿಕ್ಷಣ ಸಂಸ್ಥೆ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರ ಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಮರ ಗಿಡಗಳ ಮೂಲಕ ದೊರೆಯುವ ಶುದ್ಧವಾದ ಗಾಳಿ,ಮಳೆಯ ಮೂಲಕ ದೊರೆಯುವ ನೀರು ನಮಗೆ ಜೀವನಾ ಧಾರವಾಗಿದೆ.ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಬದುಕನ್ನು ಇನ್ನಷ್ಟು ಆರಾಮದಾಯಕವಾಗಿ ಮಾಡಲು ಹೊರಟು ನಾವು ನಮ್ಮ ಸುತ್ತ ಮುತ್ತಲಿನ ಪರಿಸರಕ್ಕೆ ಹಾನಿ ಮಾಡಲು ಹೊರಟಿದ್ದೇವೆ.ಆದರೆ ಇದರಿಂದ ಏರುತ್ತಿರುವ ತಾಪಮಾನ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆ ಹವಾಮಾನ ವೈಪರೀತ್ಯಗಳ ಸಮಸ್ಯೆ ನಮ್ಮ ನ್ನು ಕಾಡಲಾರಂಭಿಸಿದೆ ಇಂತಹ ಸಂದರ್ಭದಲ್ಲಿ ಪರಿಸರವನ್ನು ಉಳಿಸಿ ಮುಂದಿನ ಜನಾಂಗದ ಒಳಿತಿಗಾಗಿ ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ನಾವು ವಹಿಸಿಕೊಳ್ಳಬೇಕಾಗಿದೆ ಎಂದು ಶ್ರೀಧರ್ ಮಾಹಿತಿ ನೀಡಿದರು.ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಶಾಂತರಾಮ ಶೆಟ್ಟಿ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಪರಿಸರ ಜಾಗೃತಿ ಕಾರ್ಯಕ್ರಮ ವನ್ನು ಶಾಲಾ ವಿದ್ಯಾರ್ಥಿ ಗಳಿಗೆ ಬಟ್ಟೆ ಚೀಲ ಮತ್ತು ಗಿಡಗಳನ್ನು ವಿತರಿಸಿ ಉದ್ಘಾಟಿಸಿದರು. ಬಳಿಕ ಮಾತನಾ ಡಿದ ಅವರು ಪರಿಸರ ಸಂರಕ್ಷಣೆ ಶಿಕ್ಷಣದ ಭಾಗವಾಗಬೇಕು ಈ ನಿಟ್ಟಿನಲ್ಲಿ ವೈಯಕ್ತಿಕ ಜಾಗೃತಿ ಅಗತ್ಯ ಎಂದುಶುಭ ಹಾರೈಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮತ್ತು ರತ್ನ ಎಜುಕೇಶನ್ ಟ್ರಸ್ಟ್ ನ ಸಂಸ್ಥಾಪಕರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾ ಡುತ್ತಾ,ನಮ್ಮ ಪರಿಸರದಲ್ಲಿ ಗಿಡಗಳನ್ನು ನೆಡುವುದು,ನಮ್ಮ ಪರಿಸರವನ್ನು ಸ್ವಚ್ಛ ವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಈ ಕೆಲಸವನ್ನು ನಾವೆಲ್ಲರೂ ನಿಷ್ಠೆಯಿಂದ ಮಾಡಬೇಕಾಗಿದೆ. ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ ವನ್ನು ಕಡಿತ ಮಾಡಬೇಕಾಗಿದೆ ಎಂದರು.ಸಮಾರಂಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಉಳ್ಳಾಲ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ ಶುಭ ಹಾರೈಸಿದರು. ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕೋಶಾಧಿಕಾರಿ ಮೋಹನ್ ಶೆಟ್ಟಿ,ವಿಶ್ರಾಂತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ವಿದ್ಯಾರತ್ನ ಶಿಕ್ಷಣ ಸಂಸ್ಥೆ ಗಳ ಸಂಚಾಲಕಿ ಸೌಮ್ಯ ಆರ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ನೈಯಿಮ್ ಹಮೀದ್ ಶೇಖ್,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ ಪೊಯ್ಯತಬೈಲ್ ಮೊದಲಾದವರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ ದರು, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಡಾ.ಸುಧಾಕರ ಶೆಟ್ಟಿ ಅವರಿಗೆ “ಹೊರನಾಡ ಕನ್ನಡ ರತ್ನ” ಪ್ರಶಸ್ತಿ ಪ್ರದಾನ

ಖ್ಯಾತ ಮಕ್ಕಳ ತಜ್ಞ, ಪುಣೆಯ ಬೇಬಿ ಕ್ಲಿನಿಕ್ ನ, ಮೂಡುಬಿದಿರೆ ಮೂಲದ ಡಾ.ಸುಧಾಕರ ಶೆಟ್ಟಿ ಅವರಿಗೆ ಮುಂಬಯಿಯ ಕುರ್ಲಾ ಬಂಟರ ಭವನದ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಭಾನುವಾರ ನಡೆದ “ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ” ಕಾರ್ಯಕ್ರಮದಲ್ಲಿ “ಹೊರನಾಡ ಕನ್ನಡ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರ್ನಾಟಕ ಸಂಘ ಅಂಧೇರಿ ಇದರ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಾ.ಸುಧಾಕರ ಶೆಟ್ಟಿ ಅವರ ಮೂರು ದಶಕಗಳ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು.ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ,ಹೇರಂಬ ಇಂಡಸ್ಟ್ರೀಸ್ ನ ಸಿ.ಎಂ.ಡಿ ಕನ್ಯಾನ ಸದಾಶಿವ ಶೆಟ್ಟಿ ಮತ್ತಿತರ ಪ್ರಮುಖರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ವಿಕಲಾಂಗ ಚೇತನರು ಸ್ವಾವಲಂಬಿಗಳಾಗಲು ಫ್ರೋತ್ಸಾಹ ಅಗತ್ಯ-ಡಾ.ಎಂ.ಶಾಂತರಾಮ ಶೆಟ್ಟಿ.

ಮಂಗಳೂರು:ವಿಕಲಾಂಗ ಚೇತನರು ಸ್ವಾವಲಂಬಿಗಳಾಗುವಂತಾಗಬೇಕು.ಈ ನಿಟ್ಟಿನಲ್ಲಿ ಅವರಿಗೆ ಸಮಾಜದಿಂದ ಫ್ರೋತ್ಸಾಹ ದೊರೆಯಬೇಕು ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಹಾಗೂ ಖ್ಯಾತ ವೈದ್ಯರಾದ ಡಾ.ಎಂ. ಶಾಂತರಾಮ ಶೆಟ್ಟಿ ತಿಳಿಸಿದ್ದಾರೆ.ದಕ್ಷಿಣ ಕನ್ನಡ ,ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘ,ಭಾರತೀಯ ರೆಡ್‌ ಕ್ರಾಸ್ ದಕ್ಷಿಣ ಕನ್ನಡ ಶಾಖೆ,ಮಂಗಳೂರು ವಿಶ್ವವಿದ್ಯಾಲಯ ಯುವ ರೆಡ್ ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ರವಿವಾರ ಹಮ್ಮಿಕೊಂಡ ಸಂಘದ 32ನೇ ವಾರ್ಷಿಕ ದಿನಾಚರಣೆ, ವೈದ್ಯಕೀಯ ನೆರವು ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿಶಿಷ್ಟ ಚೇತನರು ಸಮಾಜದಲ್ಲಿ ತಮ್ಮ ಮಾನಸಿಕ ದೃಢತೆಯಿಂದ ಬದುಕಿದವರು.ಅವರಿಗೆ ಸ್ಫೂರ್ತಿ ನೀಡುವ,ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅವರು ಇತರರಂತೆ ಸ್ವತಂತ್ರ ವಾಗಿ ಬದುಕಲು ಶಾಶ್ವತವಾದ ನೆರವು ನೀಡುವಲ್ಲಿ ಸಾಮೂಹಿಕವಾದ ಪ್ರಯತ್ನ ಆಗಬೇಕು.ಈ ನಿಟ್ಟಿನಲ್ಲಿ ಅವರದೇ ಆದ ಒಂದು ಸಂಘವನ್ನು ನಿರ್ಮಿಸಿಕೊಂಡು ತಮ್ಮಂತೆ ಇರುವವರಿಗೆ ಪರಸ್ಪರ ಸಹಾಯ ಮಾಡುವಲ್ಲಿ 32ವರ್ಷಗಳ ಹಿಂದೆ ಸಂಘ ರಚಿಸಿರುವುದು ಶ್ಲಾಘನೀಯ.ಮೂರು ದಶಕಗಳ ಹಿಂದೆ ವೆನ್ಲಾಕ್ ಆಸ್ಪತ್ರೆಯಲ್ಲಿಕಾರ್ಯ ನಿರ್ವಹಿಸುತ್ತಿದ್ದಾಗ ಪ್ರಮಾಣ ಪತ್ರ ದಾಖಲೆ ಪಡೆಯಲು ವಿಶಿಷ್ಟ ಚೇತನರ ಬವಣೆಯನ್ನು ನಾನು ಗಮನಿಸಿ ವಿಕಾಲಾಂಗ ,ವಿಶಿಷ್ಟ ಚೇತನರಿಗೆ ಒಂದು ಸಂಘಟನೆ ಅಗತ್ಯವಿದೆ ಎನ್ನುವ ಆಸೆ ಇಂದು ಸಂಸ್ಥೆ ಬೆಳೆದು 32ನೇ ವಾರ್ಷಿಕ ಉತ್ಸವ ಆಚರಿಸುವ ಮೂಲಕ ಸಾರ್ಥಕಗೊಂಡಿದೆ.ಈ ನಿಟ್ಟಿನಲ್ಲಿ ಸಮಾಜದ ಎಲ್ಲರ ಕೊಡುಗೆ ವಿಕಲಾಂಗ ಚೇತನರು ಸ್ವಾವಲಂಬಿಗಳಾಗಿ ಬದುಕಲು ನೆರವಾಗು ತಾಗಬೇಕು ಎಂದು ಶಾಂತರಾಮ ಶೆಟ್ಟಿ ಶುಭ ಹಾರೈಸಿದರು. ಭಾರತೀಯ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಭಾಪತಿ ಸಿ.ಎ.ಶಾಂತರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡುತ್ತಾ,ಸಮಾಜದಲ್ಲಿ ವಿವಿಧ ಕಾರಣಗಳಿಂದ ವಿಕಲಾಂಗರಾಗುವ ಸಂದರ್ಭದಲ್ಲಿ ಅವರನ್ನು ಅವಲಂಬಿಸಿ ಕೊಂಡಿರುವವರು ಸಂಕಷ್ಟಕ್ಕೆ ಈಡಾಗುತ್ತಾರೆ. ಈ ಸಂದರ್ಭದಲ್ಲಿ ಅಂತವರಿಗೆ ಸಹಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಪರಸ್ಪರ ಸಹಕಾರ ನೀಡುವ ನಿಟ್ಟಿನಲ್ಲಿ ವಿಶಿಷ್ಟ ಚೇತನರ ಸಂಘದ ಕೆಲಸ ಮಹತ್ವ ಪೂರ್ಣವಾಗಿದೆ ಎಂದರು.ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿ ಮಾತನಾಡುತ್ತಾ, ದಿವ್ಯಾಂಗರಾದ ವ್ಯಕ್ತಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಂಘದ ವತಿಯಿಂದ ಸೇವಾ ಕಾರ್ಯಗಳು ನಡೆಯುತ್ತಿರುವುದು ಮತ್ತು ಅದಕ್ಕೆ ರೆಡ್ ಕ್ರಾಸ್ ನಂತಹ ಇತರ ಸಂಘಟನೆ ಗಳು ಬೆಂಬಲ ನೀಡುತ್ತಿರುವುದು ಶ್ಲಾಘ ನೀಯ. ಸಮಾಜದಲ್ಲಿ ವಿಕಲಚೇತನರು ತಮ್ಮ ಆತ್ಮ ಬಲದಿಂದ ಮಾಡುತ್ತಿರುವ ಸಾಧನೆ ಇತರರಿಗೆ ಸ್ಪೂರ್ತಿ ಎಂದರು.ಸಮಾರಂಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಗೌಡ,ವೆನ್ಲಾಕ್ ರೆಡ್ ಕ್ರಾಸ್ ವಿಕಲಾಂಗ ಕೋಶದ ಅಧ್ಯಕ್ಷ ಡಾ.ಕೆ‌.ಆರ್.,ಮಂಗಳೂರು ವಿಶ್ವ ವಿದ್ಯಾನಿಲಯದ ಯುವ ರೆಡ್ ಕ್ರಾಸ್ ವಿಭಾಗದ ನೋಡಲ್ ಅಧಿಕಾರಿ ಡಾ.ಗಾಯತ್ರಿ, ದಕ್ಷಿಣ ಕನ್ನಡ , ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಡಾ.ವಿ.ಮುರಳೀಧರ ಸ್ವಾಗತಿಸಿದರು.ಪ್ರದಾನ ಕಾರ್ಯದರ್ಶಿ ಜಯಪ್ರಕಾಶ್ ಫಲಾನುಭವಿಗಳ ವಿವರ ನೀಡಿದರು. ಸಮಾರಂಭದಲ್ಲಿ ಅತಿಥಿಗಳು ವಿಕಲಾಂಗರಿಗೆ ನೆರವು,ವಿದ್ಯಾರ್ಥಿ ವೇತನ ಕಾರ್ಯಕ್ರಮ ನೆರವೇರಿಸಿದರು.ದಿನಮಣಿ ರಾವ್ ಕಾರ್ಯಕ್ರಮ ನಿರೂಪಿಸಿದರು.ನಾಗೇಶ್ ಶೆಟ್ಟಿ ವಂದಿಸಿದರು.ಇದೇ ಸಂದರ್ಭದಲ್ಲಿ ವಿಕಲಾಂಗ ಚೇತನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ದೆಹಲಿಗೆ ತೆರಳುವ ಮುನ್ನ ಬಿಎಸ್‌ವೈ ಮಾರ್ಗದರ್ಶನ ಪಡೆದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಲೋಕಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಬಿಜೆಪಿಯ ಸಂಸದರಿಗೆ ಹೈಕಮಾಂಡ್ ಬುಲಾವ್ ಕೊಟ್ಟಿದ್ದು ಈ ಸಭೆಯಲ್ಲಿ ಭಾಗವಹಿಸಲು ದೆಹಲಿ ಕಡೆ ಪ್ರಯಾಣ ಬೆಳೆಸಿರುವ ಮಧ್ಯದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ರಾಜ್ಯದಲ್ಲಿ ಚುನಾವಣೆಯ ಯಶಸ್ವಿ ನಿರ್ವಹಣೆಗೆ ಅಭಿನಂದಿಸಿದರು, ಆ ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಅವರ ಮಾರ್ಗದರ್ಶನ ಪಡೆದರು ಇದಾದ ನಂತರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿ ದೆಹಲಿ ಕಡೆ ಪ್ರಯಾಣಿಸಿದರು. ಎನ್ ಡಿಎ ಮೈತ್ರಿಕೂಟದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇದೇ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು ಈ ಸಮಾರಂಭದಲ್ಲಿ ಭಾಗವಹಿಸಿ ಮಂಗಳೂರಿಗೆ ವಾಪಸ್ ಆಗುವ ಮಾಹಿತಿ ಇದೆ.

ಪ್ರಾದೇಶಿಕ ವಾರ್ತೆಗಳು

“ಫೌಟ್ ಲೈಕ್ ಎ ಲಯನ್” ಎಂದು ಪದ್ಮರಾಜ್ ಅವರನ್ನು ಶ್ಲಾಘಿಸಿದ ರಾಷ್ಟ್ರೀಯ ಕಾಂಗ್ರೆಸ್ ನಾಯಕರು.ಜನಪರವಾಗಿ ಸಾಗುವೆನೆಂದ ಪದ್ಮರಾಜ್.

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು. ಆದರೆ, ಶೇಕಡವಾರು ಮತದಾನದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ನಿನ್ನೆ ರಾಷ್ಟ್ರೀಯ ನಾಯಕರು ಕರೆ ಮಾಡಿ ಶ್ಲಾಘಿಸಿ, ನನ್ನ ಸ್ಪರ್ಧೆ ಬಗ್ಗೆ “ಫೈಟ್ ಲೈಕ್ ಎ ಲಯನ್” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪದ್ಮರಾಜ್ ಆರ್. ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಟಿಕೇಟ್ ಘೋಷಣೆ ವೇಳೆ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ವಾತಾವರಣವಿತ್ತು. ಆದರೆ, ಕಾಂಗ್ರೆಸ್ ಉತ್ತಮವಾಗಿ ಹೋರಾಟ ಮಾಡಿ ಗಮನ ಸೆಳೆದಿದೆ.ಈ ಸಲ ಕಾಂಗ್ರೆಸ್ 6,14,924 ಮತಗಳನ್ನು ಪಡೆದ ಶೇ. 43.43 ಸಾಧನೆ ಮಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 4,99,664 ಮತಗಳನ್ನು ಪಡೆದು ಶೇ. 37.14 ದಾಖಲಿಸಿತ್ತು.ಸೋಲಿನ ನೈತಿಕ ಹೊಣೆ ನಾನೇ ಹೊರುತ್ತೇನೆ. ಇದು ಅಂತ್ಯವಲ್ಲ. ಆರಂಭ. ಮುಂದಿನ ದಿನಗಳಲ್ಲಿಯೂ ಪಕ್ಷದಲ್ಲಿ ಸಕ್ರಿಯವಾಗಿ ಜನಪರವಾಗಿ, ಸೌಹಾರ್ದದಿಂದ ತೊಡಗಿಸಿಕೊಳ್ಳುತ್ತಾ ಬೂತ್ ಮಟ್ಟದಿಂದಲೇ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವತ್ತ ಸಾಗುತ್ತೇನೆ ಎಂದು ಪದ್ಮರಾಜ್ ಆರ್. ಪೂಜಾರಿ ಹೇಳಿದರು.ಈ ಚುನಾವಣೆಯಲ್ಲಿ ಪಕ್ಷದ ಕಾರ‍್ಯಕರ್ತರ, ನಾಯಕರ ಬೆಂಬಲವನ್ನು ಮರೆಯುವಂತಿಲ್ಲ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದವರು ನುಡಿದರು. ಈ ಸಲ ಕಾಂಗ್ರೆಸ್ ಸೋತರೂ ನೈತಿಕವಾಗಿ ನಾವು ಗೆದ್ದಿದ್ದೇವೆ. ಬಿಜೆಪಿ ನೈತಿಕವಾಗಿ ಸೋತಿದೆ. ಮುಂದೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮಂಗಳೂರು ನಗರಪಾಲಿಕೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಶುಭೋದಯ ಆಳ್ವ, ಅಶ್ರಫ್, ಲ್ಯಾನ್ಸಿಲೋಟ್ ಪಿಂಟೋ, ಸಂಶುದ್ದೀನ್, ಅಬ್ದುಲ್ ಲತೀಫ್, ಅಬುಲ್ ಖಾದರ್, ಅಬ್ದುಲ್ ರವೂಫ್, ಕೇಶವ ಮರೋಳಿ, ಸುಹಾನ್ ಆಳ್ವ, ನಜೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Scroll to Top