ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಐಎಂಎ ಮಂಗಳೂರು ಘಟಕದಿಂದ “ವೈದ್ಯರ ನಡೆ ತಾಂಡಾ ದ ಕಡೆ” ಬೆಳ್ತಂಗಡಿಯಲ್ಲೊಂದು ವಿಶಿಷ್ಟ ಕಾರ್ಯಕ್ರಮ.

ಮಂಗಳೂರು: ಭಾರತೀಯ ವೈದ್ಯಕೀಯ ಸಂಘ (ರಿ), ಮಂಗಳೂರು ಘಟಕ ಇದರ ವತಿಯಿಂದ ಡಾ. ಅವಿನ್ ಆಳ್ವ ಕಾರ್ಯದರ್ಶಿ, ಭಾರತೀಯ ವೈದ್ಯಕೀಯ ಸಂಘ (ರಿ) ಮತ್ತು ಇವರ ತಂಡದ ನೇತೃತ್ವದಲ್ಲಿ “ವೈದ್ಯರ ನಡೆ ತಾಂಡಾದ ಕಡೆ” (ಬುಡಕಟ್ಟು ಜನಾಂಗದ ಆರೋಗ್ಯ ತಪಾಸಣೆ) ಎಂಬ ವಿಶಿಷ್ಟ ಕಾರ್ಯಕ್ರಮ ಇಂದು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಲ್ಲಿ ನಡೆಯಿತು. ಈ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಸ್ಥಳೀಯರು, ಸಾರ್ವಜನಿಕರು ಭಾಗವಹಿಸಿ, ಚಿಕಿತ್ಸೆಯ ಪ್ರಯೋಜನ ಪಡೆದು ಕೊಂಡರು. ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘ, ವಿದ್ಯಾ ಸರಸ್ವತಿ ಮಹಿಳಾ ಮಂಡಲ, ವಿದ್ಯಾ ಸರಸ್ವತಿ ಸ್ವಸಹಾಯ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ತುಳು ಸಿನಿಮಾಗಳನ್ನು ಸರ್ವ ಧರ್ಮದ ಪ್ರೇಕ್ಷಕರು ಪ್ರೋತ್ಸಾಹಿಸಬೇಕು: ಐವನ್ ಡಿ ಸೋಜಾ. “ಕಂಕನಾಡಿ” ಸಿನಿಮಾಕ್ಕೆ ಮುಹೂರ್ತ.

ಮಂಗಳೂರು: ಎಚ್‌ಪಿಆರ್ ಫಿಲ್ಮ್ಸ್, ಪುಳಿಮುಂಚಿ ಚಿತ್ರ ತಂಡದ, ಹರಿಪ್ರಸಾದ್ ರೈ ನಿರ್ಮಾಣದ, ತ್ರಿಶೂಲ್ ಶೆಟ್ಟಿ ನಿರ್ದೇಶನದ “ಕಂಕನಾಡಿ” ತುಳು ಚಲನಚಿತ್ರದ ಚಿತ್ರೀಕರಣದ ಮೂಹೂರ್ತ ಕಾರ್ಯಕ್ರಮ ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನೆರವೇರಿತು.ಐವನ್ ಡಿ ಸೋಜಾ ಕ್ಲ್ಯಾಪ್ ಮಾಡಿದರು. ಪ್ರಕಾಶ್ ಪಾಂಡೇಶ್ವರ್ ಕ್ಯಾಮರ ಚಾಲನೆ ನೀಡಿದರು. ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಉದ್ಘಾಟಿಸಿದರು. ಜಿಲ್ಲೆಯಲ್ಲಿ ಬಹಳಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ. ಕಲಾವಿದರಿಗೆ ಅವಕಾಶ ದೊರೆತು ಅವರು ಸಮಾಜದ ಎದುರು ಬರಲಿ.‌ ತುಳು ಸಿನಿಮಾಗಳನ್ನು ಎಲ್ಲಾ ಧರ್ಮದ ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸ ಬೇಕೆಂದರು. ತುಳು ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ ತುಳು ಭಾಷೆ ವಿಶ್ವದ ಎಲ್ಲೆಡೆ ಪಸರಿಸಿದೆ. ಇವತ್ತು ಭಾಷೆ ಉಳಿಯುವಲ್ಲಿ ತುಳು ನಾಟಕ, ತುಳು ಸಿನಿಮಾದ ಕೊಡುಗೆ ದೊಡ್ಡದಿದೆ. ತುಳು ಭಾಷೆಯ ರಾಯಭಾರಿಯಾಗಿ ನಾಟಕ ಸಿನಿಮಾಗಳು ಕೆಲಸ ಮಾಡುತ್ತಿದೆ ಎಂದರು. ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಳ್ವರಿಸ್ ಮಾತನಾಡಿ ಹಾಸ್ಯ ಸಿನಿಮಾದ ಜೊತೆಗೆ ಸದಭರುಚಿಯ ಸಮಾಜಕ್ಕೆ ಸಂದೇಶ ಭರಿತ ಸಿನಿಮಾಗಳು ತಯಾರಾಗಲಿ ಎಂದರು. ಡಾ ದೇವದಾಸ ಕಾಪಿಕಾಡ್ ಮಾತನಾಡಿ ತ್ರಿಶೂಲ್ ರಂತಹ ಪ್ರತಿಭಾವಂತರಿಗೆ ಇಲ್ಲಿ ಉತ್ತಮ ಭವಿಷ್ಯ ಇದೆ. ಕಲಾವಿದರು ಕೂಡಾ ಶ್ರದ್ದಾ ಭಕ್ತಿಯಿಂದ ನಟಿಸ ಬೇಕು ಎಂದರು. ನಿರ್ಮಾಪಕ ಹರಿಪ್ರಸಾದ್ ರೈ, ಪ್ರಕಾಶ್ ಪಾಂಡೃಶ್ವರ್, ಉದ್ಯಮಿ ಮುರಳೀಧರ್ ರೈ, ಅರವಿಂದ ಬೋಳಾರ್, ಬಾಲಕೃಷ್ಣ ಶೆಟ್ಟಿ, ಇಸ್ಮಾಯಿಲ್ ಮೂಡುಶೆಡ್ಡೆ, ರಾಹುಲ್ ಅಮೀನ್, ಮಾಸ್ಟರ್ ಫ್ಲವರ್ ಪಕೀರಬ್ಬ, ನವ್ಯ ಪೂಜಾರಿ, ಲಂಚುಲಾಲ್, ರೋಶನ್ ಶೆಟ್ಟಿ, ನವೀನ್ ಸಾಲ್ಯಾನ್ ಮಲ್ಪೆ, ಪ್ರಕಾಶ್ ಶೆಟ್ಟಿ ಧರ್ಮನಗರ ಮತ್ತಿತರರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.ಕಂಕನಾಡಿ ಸಿನಿಮಾಕ್ಕೆ ಹರಿಪ್ರಸಾದ್ ರೈ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಒಂದೇ ಹಂತದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಣ ನಡೆಸಲು ರೂಪುರೇಶೆ ಸಿದ್ದಪಡಿಸಿದ್ದಾರೆ. ತಾರಾಗಣದ ಆಯ್ಕೆ ನಡೆಯುತ್ತಿದೆ. ದಿಗ್ಗಜ ಕಲಾವಿದರೂ ಕಂಕನಾಡಿ ಸಿನಿಮಾದಲ್ಲಿದ್ದಾರೆ.ತ್ರಿಶೂಲ್ ಶೆಟ್ಟಿ ನಿರ್ದೇಶಿಸಿರುವ ಸಿನಿಮಾಕ್ಕೆ ಛಾಯಾಗ್ರಾಹಣ ಮಯೂರ್ ಆರ್ ಶೆಟ್ಟಿ ಸಂಗೀತ ಕಿಶೋರ್ ಕುಮಾರ್ ಶೆಟ್ಟಿ ಸಂಭಾಷಣೆ ಡಿಬಿಸಿ ಶೇಖರ್, ಕಲಾನಿರ್ದೇಶನ ಹರೀಶ್ ನಾಯಕ್, ಸಂಕಲನ ಗಣೇಶ್ ನಿರ್ಚೇಲ್ , ಪಬ್ಲಿಸಿಟಿ ಡಿಸೈನರ್ ದೇವಿ ರೈ, ಸಾಹಸ ಚಂದ್ರು ಬಂಡೆ, ನೃತ್ಯ ದಿಕ್ಷೀತ್ ಕುಮಾರ್ ಮತ್ತು ನವೀನ್ ಇದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕಲೆ, ಸಂಸ್ಕೃತಿ, ಆಚಾರ ವಿಚಾರ ಮುಂದಿನ ಪೀಳಿಗೆಗೆ ಕೊಂಡ್ಯೂಯುವುದು ಎಲ್ಲರ ಜವಾಬ್ದಾರಿ ಯು ಟಿ ಖಾದರ್

ಮಂಗಳೂರು, ಸೆಪ್ಟೆಂಬರ್ 8, ಭಾರತ ದೇಶವು ವಿವಿಧ ಸಂಸ್ಕೃತಿ ಸಂಸ್ಕಾರ ಗಳಿಂದ ಕೂಡಿದ್ದರೂ ಎಲ್ಲರೂ ಪ್ರೀತಿ ಸಾಮರಸ್ಯದ ಮೂಲಕ ಜೀವನ ಸಾಗಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನ ಸಭೆ ಸಭಾಪತಿ ಯು ಟಿ ಖಾದರ್ ಹೇಳಿದರು.ಮಂಗಳೂರು ಲಯನ್ಸ್ ಸೇವಾ ಮಂದಿರ ದಲ್ಲಿ ತೆಲುಗು ಕಲಾ ಸಂಘ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ ಸಭಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಕಲೆ ಸಂಸ್ಕೃತಿ, ಆಚಾರ, ವಿಚಾರ ಗಳನ್ನು ಮುಂದಿನ ಪೀಳಿಗೆಗ ಕೊಂಡ್ಯೂಯುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ಈ ರೀತಿಯ ಹಬ್ಬದ ಆಚರಣೆ ಸಾಮರಸ್ಯ ದ ಸಂಕೇತ ವಾಗಿದೆ ಎಂದು ಹೇಳಿದರು. ಇದೇ ವೇಳೆ ತೆಲುಗು ಕಲಾ ಸಂಘದ ವತಿಯಿಂದ ಸ್ಪೀಕರ್ ಯು ಟಿ ಖಾದರ್ ಅವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ತೆಲುಗು ಕಲಾ ಸಂಘದ ಗೌರವಾಧ್ಯಕ್ಷ ಸಾಂಬಾಶಿವ ರಾವ್, ಅಧ್ಯಕ್ಷ ಡಾ ಕರ್ರ ರಾಮ,ಉಪಾಧ್ಯಕ್ಷ ವಡೆಲ್ಲಾ ವೆಂಕಟ್ ಫಣಿ, ರಾವುರಿ ನಾಗಫಣಿ, ಕಾರ್ಯದರ್ಶಿ ಇನ್ನುಮಲ ಶ್ರೀನಿವಾಸ, ಕೋಶಾಧಿಕಾರಿ ನಾಗವರು ಶ್ರೀನಿವಾಸ, ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಉಪಸ್ಥಿತರಿದ್ದರು.ಸಂಗೀತ, ನ್ರತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ತೆಲುಗು ಕಲಾ ಸಂಘದ ಸದಸ್ಯರಿಂದ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಭಾರತದ ಸಂಸ್ಕೃತಿ ಅತ್ಯುನ್ನತ: ಯು. ಟಿ. ಖಾದರ್. ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆ

ಮಂಗಳೂರು: ಭಾರತ ದೇಶವು ವಿವಿಧ ಸಂಸ್ಕ್ರತಿ, ಸಂಸ್ಕಾರಗಳ ನೆಲೆವೀಡಾಗಿದ್ದು, ಹಬ್ಬ -ಉತ್ಸವಗಳು ಪರಸ್ಪರ ಬಾಂಧವ್ಯ ಬೆಳೆಸಲು ಪೂರಕವಾಗಿದೆ ಎಂದು ವಿಧಾನ ಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆಯುತ್ತಿರುವ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೊದಲ ದಿನದ ಧಾರ್ಮಿಕ ಸಭೆಯ ಮುಖ್ಯ ಅತಿಥಿಯಾಗಿದ್ದರು.ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರು ಮಾತನಾಡಿ, ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ಶೀಘ್ರದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಸಮಗ್ರ ಸಮಾಜಕ್ಕೆ ನೂತನ ಕಟ್ಟಡದ ಪ್ರಯೋಜನ ಸಿಗಲಿದೆ ಎಂದರು.ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಾತನಾಡಿ ಬಂಟರ ನೂತನ ಕಟ್ಟಡಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಅಪೂರ್ವ ನಾಯಕತ್ವ ಗುಣ ಹೊಂದಿರುವ ಬಂಟ ಸಮಾಜ ಬಾಂಧವರು ಅತ್ಯಂತ ಶ್ರದ್ದಾ-ಭಕ್ತಿ ಯಿಂದ ಆಯೋಜಿಸುತ್ತಿರುವ ಇಲ್ಲಿನ ಗಣೇಶೋತ್ಸವ ಮಾದರಿಯಾಗಿದೆ ಎಂದರು.ಮೇಯರ್ ಸುಧೀರ್ ಶೆಟ್ಟಿ, ಉದ್ಯಮಿ ರಘುನಾಥ ಸೋಮಯಾಜಿ, ಕಾರ್ಪೊರೇಟರ್ ಮನೋಹರ್ ಶೆಟ್ಟಿ, ಯೂನಿಯನ್ ಬ್ಯಾಂಕಿನ ಎಜಿಎಂ ವಿನೋದ್ ಅತಿಥಿಗಳಾಗಿದ್ದರು.ಈ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ. ಜಯಶಂಕರ್ ಮಾರ್ಲ, ಶಂಕರ್ ಎಲೆಕ್ಟ್ರಿಕಲ್ ಮಾಲಕ ರಾಜೇಶ್ ಶೆಟ್ಟಿ ಹಾಗೂ ಇಸ್ಕಾನ್ ನ ಗುಣಕರ್ ರಾಮದಾಸ್ ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿ ಎ ರಾಮ ಮೋಹನ್ ರೈ, ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಆಶಾಜ್ಯೋತಿ ರೈ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಕೃಷ್ಣ ಪ್ರಸಾದ್ ರೈ, ಗಣೇಶೋತ್ಸವ ಸಮಿತಿಯ ಸಂಚಾಲಕರುಗಳಾದ ಅಶ್ವತ್ತಾಮ ಹೆಗ್ಡೆ, ಮನೀಶ್ ರೈ ಹಾಗೂ ಸಂತೋಷ್ ಶೆಟ್ಟಿ ಶೆಡ್ಡೆ ಉಪಸ್ಥಿತರಿದ್ದರು.ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವನೆಗೈದು ,ಸ್ವಾಗತಿಸಿದರು. ಸಮಿತಿಯ ಸಂಚಾಲಕ ದಿವಾಕರ ಸಾಮಾನಿ ಚೇಳಾರುಗುತ್ತು ವಂದಿಸಿದರು. ಪ್ರಕಾಶ್ ಮೇಲಂಟ ಹಾಗೂ ನಯನಾ ಶೆಟ್ಟಿ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವ ಉದ್ಘಾಟನೆ. ಗಣೇಶೋತ್ಸವ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆಯಾಗಲಿ: ಮುಲ್ಲೈ ಮುಗಿಲನ್

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ಸೆ.7ರಿಂದ 9ರ ವರೆಗೆ ನಡೆಯುವ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನಾ ಸಮಾರಂಭ ಜರಗಿತು.ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ 115 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಬಂಟರ ಮಾತೃ ಸಂಘದ ನೇತೃತ್ವದಲ್ಲಿ ಕಳೆದ 18 ವರ್ಷಗಳಿಂದ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುತ್ತಿರುವ ಇಲ್ಲಿನ ಗಣೇಶೋತ್ಸವ ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ನೀಡಿ ಎಲ್ಲರಿಗೂ ಶುಭ ತರಲಿ ಎಂದು ಹಾರೈಸಿದರು.ಬುದ್ಧಿವಂತರ ಜಿಲ್ಲೆ ಎಂದೇ ಖ್ಯಾತಿಯುಳ್ಳ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಪ್ರಕೃತಿಗೆ ಹೆಚ್ಚಿನ ಮಹತ್ವ ನೀಡುವವರಾಗಿದ್ದು, ಗಣೇಶೋತ್ಸವದ ಸಂದರ್ಭದಲ್ಲಿ ತೆನೆ ವಿತರಣೆ ಮಾಡುವ ಮೂಲಕ ದೇವರ ಆರಾಧನೆ ಜೊತೆಗೆ ಪ್ರಕೃತಿಯೊಂದಿಗೆ ನಮ್ಮ ಬದುಕನ್ನು ಜೋಡಿಸಿಕೊಂಡಿರುವುದು ಪ್ರಶಂಸನೀಯವಾಗಿದೆ ಎಂದರು. ಸಾಂಕೇತಿಕ ತೆನೆ ವಿತರಿಸಿದ ಮೋಹನ್ ದೇವ ಆಳ್ವ ಅವರು ಮಾತನಾಡಿ, ಅಜಿತ್ ಕುಮಾರ್ ರೈ ಮಾಲಾಡಿ ಅವರ ನೇತೃತ್ವದಲ್ಲಿ ಆಯೋಜಿಸಲಾದ ಗಣೇಶೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು. ಧ್ವಜಾರೋಹಣ ನೆರವೇರಿಸಿದ ಗ್ರೂಪ್ ಕ್ಯಾಪ್ಟನ್ ಪ್ರದೀಪ್ ಎಸ್. ಶೆಟ್ಟಿ ಅವರು ಸಂಘಟಕರನ್ನು ಅಭಿನಂದಿಸಿದರು.ಅಶ್ವಿನಿ ಮಣಿ ಮುಲ್ಲೈ ಮುಗಿಲನ್, ಡಾ. ಶೈಲಜಾ ಮೋಹನ್ ದೇವ್ ಆಳ್ವ ಹಾಗೂ ಜಯಂತಿ ಮೆನನ್ ಮುಖ್ಯ ಅತಿಥಿಗಳಾಗಿದ್ದರು.ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿ ಎ ರಾಮ ಮೋಹನ್ ರೈ, ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಆಶಾಜ್ಯೋತಿ ರೈ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಕೃಷ್ಣ ಪ್ರಸಾದ್ ರೈ, ಗಣೇಶೋತ್ಸವ ಸಮಿತಿಯ ಸಂಚಾಲಕರುಗಳಾದ ದಿವಾಕರ ಸಾಮಾನಿ ಚೇಳಾರ್ ಗುತ್ತು, ಅಶ್ವತ್ತಾಮ ಹೆಗ್ಡೆ, ಮನೀಶ್ ರೈ ಹಾಗೂ ಸಂತೋಷ್ ಶೆಟ್ಟಿ ಶೆಡ್ಡೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮೋಹನ್ ದೇವ ಆಳ್ವ ದಂಪತಿಗಳನ್ನು ಸನ್ಮಾನಿಸಲಾಯಿತು.ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು. ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಹಾಗೂ ಕವಿತಾ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪುತ್ತಿಲ ವಿರುದ್ಧ ಕಟೀಲು ಬ್ರಹ್ಮಾಸ್ತ್ರ ಪ್ರಯೋಗಿಸಿದರೆ?

ಸ್ಪೆಷಲ್ ಸ್ಟೋರಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.ಮಂಗಳೂರು: ಕಳೆದ ಒಂದು ವಾರದಿಂದ ಪ್ರಬಲ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲರ ಮೇಲೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯರೊಬ್ಬರಿಂದ ದೂರು ನೀಡಲ್ಪಟ್ಟು ಐಪಿಸಿ ಸೆಕ್ಷನ್ 354 (ಎ),417, 506ರಂತೆ ದಾಖಲಾದ ಲೈಂಗಿಕ ದೌರ್ಜನ್ಯದ ಕೇಸಿನ ಬಗ್ಗೆ ಜನರು ಕುತೂಹಲದಿಂದ ಮಾತನಾಡುತ್ತಿದ್ದಾರೆ.ಇದರ ಹಿಂದೆ ಪುತ್ತಿಲರ ವಿರೋಧಿಗಳ ಷಡ್ಯಂತ್ರವಿದೆಯೆಂದು ಸುದ್ದಿಯಾಗುತ್ತಿದೆ.ಏನದು ಕೇಸು?ಕಳೆದ ವರ್ಷ ಜೂನ್ 3ರಂದು ಬೆಂಗಳೂರಿನ ಖಾಸಗಿ ಲಾಡ್ಜ್ವೊಂರಲ್ಲಿ ಪುತ್ತೂರು ಮೂಲದ 47ರ ಹರೆಯದ ವಿವಾಹಿತ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪುತ್ತೂರು ಮಹಿಳಾ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.ದೂರು ನೀಡಿದ ಮಹಿಳೆ ಮೂಲತಃ ಆಂಧ್ರ ಮೂಲದವರಾಗಿದ್ದು, ಪುತ್ತೂರಿನಲ್ಲಿ ಸಂಸಾರ ಹೂಡಿದ್ದರು. ಆಕೆಗೆ ಮಗಳೊಬ್ಬಳಿದ್ದಾಳೆ.ಆಕೆ ಪುತ್ತಿಲರ ವರ್ಚಸ್ಸಿನಿಂದ ಪ್ರಭಾವಿತರಾಗಿ ಪುತ್ತಿಲರ ಜೊತೆ ಪರಿಚಯ ಬೆಳೆಸಿದ್ದರು. ಆದರೆ, ಪುತ್ತಿಲ ತನ್ನನ್ನು ಬೆಂಗಳೂರಿನ ಖಾಸಗಿ ಲಾಡ್ಜ್ ನ ಕೊಠಡಿಗೆ ಕರೆಯಿಸಿ ಲೈಂಗಿಕ ದೌರ್ಜನ್ಯವೆಸಗಿದರೆಂದು ಘಟನೆ ನಡೆದ ಒಂದು ವರ್ಷದ ಬಳಿಕ ತಡವಾಗಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಆ ದಿವಸ ಪುತ್ತಿಲ ಬೆಂಗಳೂರಿನ ಆ ಖಾಸಗಿ ಲಾಡ್ಜ್ ನಲ್ಲಿದ್ದಾರಾ? ದೂರು ನೀಡಿದ ಮಹಿಳೆ ಪುತ್ತಿಲರ ರೂಮಿಗೆ ಹೋಗಿದ್ದು ನಿಜನಾ? ಎಂಬುವುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಾಗಿದ್ದು, ಯಾರೂ ಬಂದು ದೂರು ನೀಡಿದರೂ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಬೇಕಾದದ್ದು ಪೊಲೀಸರ ಮೊದಲ ಕರ್ತವ್ಯವಾಗಿರುವುದ್ದರಿಂದ ಸಹಜವಾಗಿಯೇ ಪುತ್ತೂರು ಮಹಿಳಾ ಠಾಣಾ ಪೊಲೀಸರು ಪುತ್ತಿಲರ ವಿರುದ್ಧ ಕೇಸು ದಾಖಲಿಸಿದ್ದಾರೆ.ಇದು ಅತ್ಯಾಚಾರವಲ್ಲ. ಲೈಂಗಿಕ ದೌರ್ಜನ್ಯದ ಕೇಸು. ಪೊಲೀಸ್ ಠಾಣೆಯಲ್ಲಿ ಜಾಮೀನು ಸಿಗಬಹುದಾದ ಪ್ರಕರಣ. ಅದರಂತೆ ಪುತ್ತಿಲರು ಪುತ್ತೂರಿನ ನ್ಯಾಯಾಲಯದಿಂದ ಜಾಮೀನು ಪಡೆದು ಪ್ರಕರಣದ ಬಗ್ಗೆ ಕಾನೂನು ಸಮರ ನಡೆಸುವುದಾಗಿ ಹೇಳಿದ್ದಾರೆ.ತನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಸತ್ಯ ಯಾವತ್ತೂ ಸಾಯುವುದಿಲ್ಲವೆಂದು ಕೋರ್ಟು ಮೂಲಕ ಜಾಮೀನು ಪಡೆದಿರುವ ಪುತ್ತಿಲರು ಈ ಪ್ರಕರಣದ ಬಗ್ಗೆ ವಿರೋಧಿಗಳ ಷಡ್ಯಂತ್ರವೆಂದು ಭಾವಿಸಿದ್ದಾರೆ.ಪುತ್ತಿಲರ ವಿರೋಧಿಗಳ್ಯಾರು? ಕಟೀಲ್ ಬ್ರಹ್ಮಾಸ್ತ್ರ ಪ್ರಯೋಗಿಸಿದರೆ?ಆರ್‌ಎಸ್‌ಎಸ್ ಸಂಘಟನೆಯಲ್ಲಿದ್ದು ಬಿಜೆಪಿ ಸೇರಿದ ಅರುಣ್ ಪುತ್ತಿಲರು ಕಳೆದ ವರ್ಷ ಬಿಜೆಪಿಯಲ್ಲಿ ಎಂಎಲ್‌ಎ ಟಿಕೇಟು ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಿ 62,458 ಮತಗಳನ್ನು ಪಡೆದಿದ್ದರು.66,607 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್‌ಕುಮಾರ್ ರೈ ಅವರು 4,148 ಮತಗಳಂತರದಿಂದ ಗೆದ್ದಿದ್ದರು. ಪುತ್ತಿಲರ ಕಾರಣದಿಂದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನೆಲಕಚ್ಚಿ ಒಂದು ಎಂಎಲ್ಎ ಸ್ಥಾನ ಕಳೆದುಕೊಂಡಿತ್ತು.ನಂತರ, ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಪುತ್ತೂರಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ನೀಡಿ ಗೆಲುವು ಸಾಧಿಸಿತ್ತು. ಬಿಜೆಪಿಯಿಂದ 4ನೇ ಬಾರಿಗೆ ನಳಿನ್‌ಕುಮಾರ್ ಕಟೀಲು ಅವರು ಸ್ಪರ್ಧಿಸಿದರೆ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಲಾಯಿತು.ಬಿಜೆಪಿಯಲ್ಲಿ ತನ್ನ ಬದಲು ಪುತ್ತೂರಲ್ಲಿ ಮಹಿಳಾ ಅಭ್ಯರ್ಥಿಗೆ ಎಂಎಲ್‌ಎ ಟಿಕೇಟ್ ಕೊಟ್ಟು ಕಟೀಲ್ ತನ್ನನ್ನು ತುಳಿದರೆಂಬ ಸಿಟ್ಟು, ಆಕ್ರೋಶ ಪುತ್ತಿಲರವರಲ್ಲಿತ್ತು.ಈ ಕಾರಣಕ್ಕೆ ಪುತ್ತಿಲರು ಕಟೀಲ್ ಅವರಿಗೆ ಎಂಪಿ ಟಿಕೆಟ್ ಸಿಗದಂತೆ ಸರ್ವ ಪ್ರಯತ್ನವನ್ನು ಮಾಡಿ, ಯಡಿಯೂರಪ್ಪ, ಕಲ್ಲಡ್ಕ ಪ್ರಭಾಕರ ಭಟ್ ಸಹಕಾರದಿಂದ ಅದರಲ್ಲಿ ಯಶಸ್ವಿಯೂ ಆದರು.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಟೀಲ್‌ಗೆ ಕೊಕ್ ಕೊಟ್ಟು ಪಕ್ಷದ ಹೈಕಮಾಂಡ್ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಎಂಪಿ ಟಿಕೆಟ್ ಕೊಟ್ಟಾಗ ಪುತ್ತಿಲ ಪರಿವಾರ ಮೋದಿ ಪರಿವಾರ ಒಗ್ಗಟ್ಟಾಗಿ ದುಡಿಯುತ್ತೇವೆಂದು ಪುತ್ತಿಲರು ಬಿಜೆಪಿ ಸೇರಿದರು. ಬ್ರಿಜೇಶ್ ಚೌಟರು ಗೆದ್ದು ಎಂಪಿಯಾದರು. ಕೈಯಲ್ಲಿ ಯಾವುದೇ ಅಧಿಕಾರವಿಲ್ಲದ ನಳಿನ್‌ಕುಮಾರ್ ಕಟೀಲ್ ಅವರು ತನಗಿನ್ನು ಅಧಿಕಾರ ಬೇಡ, ಸ್ವಲ್ಪ ಸಮಯ ಕಾದು ನೋಡೋಣ. ಜನಸೇವೆಯನ್ನು ಮುಂದುವರಿಸುತ್ತೇನೆಂದು ಹಿತೈಷಿಗಳಲ್ಲಿ ಹೇಳಿಕೊಂಡರು. ಮೂರು ಬಾರಿ ಎಂಪಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದೇ ಒಂದು ಕಪ್ಪುಚುಕ್ಕೆಯಿಲ್ಲದೆ ದಣಿವರಿಯದ ಜನನಾಯಕನಾಗಿ ಜನರ ಹೃದಯ ಗೆದ್ದಿದ್ದ ನಳಿನ್‌ಕುಮಾರ್ ಕಟೀಲು ಅವರ ಸದ್ಯದ ಪರಿಸ್ಥಿತಿಗೆ ಅವರ ಅಭಿಮಾನಿಗಳು, ಹಿತೈಷಿಗಳು ಪುತ್ತಿಲರೇ ಕಾರಣ ಎನ್ನುತ್ತಿದ್ದು, ಪ್ರಸ್ತುತ ಪುತ್ತಿಲರ ಪ್ರಕರಣ ಸದ್ದಾಗುತ್ತಿರುವ ಹಿನ್ನಲೆಯಲ್ಲಿ ಇದರ ಹಿಂದೆ ಕಟೀಲ್ ಅವರು ಬ್ರಹ್ಮಾಸ್ತ್ರ ಪ್ರಯೋಗಿಸಿದರೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.ಯಾರ ತಂಟೆಗೂ ಹೋಗದ ಸಹನಾಮೂರ್ತಿ ನಳಿನ್‌ಕುಮಾರ್ ಕಟೀಲ್:ನಳಿನ್‌ಕುಮಾರ್ ಅವರು ಪುತ್ತಿಲರಂತೆ ಆರ್‌ಎಸ್‌ಎಸ್ ಹಿನ್ನಲೆಯಿಂದ ಬಂದವರು. ಅದ್ಬುತ ವಾಗ್ಮಿ, ಮಾತುಗಾರ, ನಿಸ್ವಾರ್ಥ ಜನಸೇವಕ, ನಿಷ್ಕಳಂಕ ರಾಜಕಾರಣಿ.ಕಳೆದ 6 ವರ್ಷಗಳಿಂದ ಅವರ ಏಳ್ಗೆಯನ್ನು ಸಹಿಸದ ಮಂದಿ ಅವರಿಗೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಾ ಬಂದರು. ಟ್ರೋಲ್ ಮಾಡಿದರು.ತನ್ನ ಕೈಯಲ್ಲಿ ಅಧಿಕಾರವಿದ್ದಾಗಲೂ ಕಟೀಲ್ ಅವರು ಯಾರೊಬ್ಬರ ಮೇಲೂ ರೇಗಲಿಲ್ಲ,ದೂರು ದಾಖಲಿಸಲಿಲ್ಲ. ಸೇಡು ತೀರಿಸಲಿಲ್ಲ. ಅವರು ತಾಳ್ಮೆವಂತ. ಆದರೆ, ನೇರ ನಡೆ ನುಡಿಯ ನಿರ್ಭೀತ ಮಾತುಗಾರ.ಕಟೀಲು ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಪರಮ ಭಕ್ತರಾಗಿರುವ ಕಟೀಲು ಅವರು ದೇವರು, ಧರ್ಮದ ಬಗ್ಗೆ ಅಚಲ ಶ್ರದ್ಧೆಯಿಟ್ಟವರು. ಇಂಥ ಉನ್ನತ ವ್ಯಕ್ತಿತ್ವದ ಕಟೀಲ್ ಪುತ್ತಿಲರ ವಿರುದ್ಧ ಷಡ್ಯಂತ್ರ ನಡೆಸಿರಲಿಕ್ಕಿಲ್ಲ. ಸೇಡಿಗೆ ಪ್ರತಿಸೇಡು ಎಂದು ಮುಯ್ಯಿಗೆ ಮುಯ್ಯಿ ತೀರಿಸಿರಲಿಕ್ಕಿಲ್ಲ. ಪುತ್ತಿಲರ ವಿರುದ್ಧ ಕಟೀಲ್ ಬ್ರಹ್ಮಾಸ್ತ್ರ ಪ್ರಯೋಗಿಸಿರಲಿಕ್ಕಿಲ್ಲ ಎಂಬುವುದು ವಾಸ್ತವ ಸತ್ಯ.ಆದರೆ ಗಾಳಿ ಬರದೆ ಎಲೆ ಅಲುಗಾಡುವುದಿಲ್ಲ ಎಂಬ ಮಾತೊಂದಿದೆ.ಸತ್ಯ ಎಂಬುವುದು ನಿಗೂಢವಾಗಿಯೇ ಇರುತ್ತದೆ. ಪುತ್ತಿಲರ ಪ್ರಕರಣದಲ್ಲಿ ಕಟೀಲು ಬ್ರಹ್ಮಾಸ್ತ್ರ ಪ್ರಯೋಗಿಸಿದರೇ ಎಂಬುವುದು ಎಲ್ಲೆಡೆ ಕೇಳಿ ಬರುತ್ತಿರುವ ಸದ್ದಾಗುತ್ತಿರುವ ಸುದ್ದಿ. ಈ ಬಗ್ಗೆ ಕಟೀಲು ಅವರು ಮೌನ ಮುರಿದು ಉತ್ತರಿಸಬೇಕಾಗಿದೆ.

ಪ್ರಾದೇಶಿಕ ವಾರ್ತೆಗಳು

ಸೆ.10 ರಂದು ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಸಿನಿಮಾದ ಹಾಡು ಬಿಡುಗಡೆ

ಮಂಗಳೂರು: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ ಕುಂಪಲ ರವರ ನಿರ್ಮಾಣ ಹಾಗೂರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾದ ವೀಡಿಯೋ ಸಾಂಗ್ ಸೆಪ್ಟಂಬರ್ 10 ರಂದು ಮಂಗಳವಾರ ಸಂಜೆ 4 ಗಂಟೆಗೆ ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ವಿಜೃಂಭಣೆಯಿಂದ ಸಾರ್ವಜನಿಕರ ಹಾಗೂ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಆಗಲಿದೆ.ತುಳು ಸಿನಿಮಾ ರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತುಳು ಸಿನಿಮಾದ ಹಾಡೊಂದು ಸಿಂಗಲ್ ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳುತ್ತಿರುವುದು ಇದೇ ಮೊದಲನೇ ಬಾರಿಯಾಗಿದೆ.‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇಲ್ಲಿ ದುಡಿದಿದ್ದಾರೆ. ಮುಖ್ಯವಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಇಲ್ಲೂ ನಿರ್ದೇಶಕರಾಗಿದ್ದಾರೆ‌. ವಿನೀತ್ ಕುಮಾರ್ ನಾಯಕ ನಟನಾಗಿ ಸಮತಾ ಅಮೀನ್ ನಾಯಕಿಯಾಗಿ ಹಾಗೂ ತುಳು ಚಿತ್ರರಂಗದ ಮೇರು ಕಲಾವಿದರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪ ವರ್ಕಾಡಿ, ರವಿ ರಾಮಕುಂಜ ಮತ್ತಿತ್ತರು ಅಭಿನಯಿಸಿದ್ದಾರೆ‌. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ.ಸೆ. 10 ರಂದು ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿರುವ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಸಿನಿಮಾದ ಹಾಡು ಬಿಡುಗಡೆ ಸಂದರ್ಭದಲ್ಲಿ ವಿವಿಧ ಪಕ್ಷದ ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಗಣ್ಯರು, ತುಳು ಚಿತ್ರರಂಗದ ಹಿರಿಯ ಕಿರಿಯ ಕಲಾವಿದರು ಭಾಗವಹಿಸುವುದರೊಂದಿಗೆ, ಉಡುಪಿ ಭಾಗದ ತುಳುವರನ್ನು ಸೆಳೆಯಲು ಚಿತ್ರತಂಡ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿ, ಸರ್ವರಿಗೂ ಭಾಗವಹಿಸಲು ಅವಕಾಶ ನೀಡಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಸೆ. 8 ರಂದು ಉರ್ವಾ ಮಾರಿಗುಡಿಯಲ್ಲಿ ಕಂಕನಾಡಿ ತುಳು ಸಿನಿಮಾಕ್ಕೆ ಮುಹೂರ್ತ

ಮಂಗಳೂರು: ಎಚ್ ಪಿ ಆರ್ ಪ್ರೊಡಕ್ಷನ್ ಲಾಂಛನದಲ್ಲಿ ತ್ರಿಶೂಲ್ ಶೆಟ್ಟಿ ನಿರ್ದೇಶನ ಹರಿಪ್ರಸಾದ್ ರೈ ನಿರ್ಮಾಣದಲ್ಲಿ ತಯಾರಾಗುತ್ತಿರುವ “ಕಂಕನಾಡಿ” ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಸೆಪ್ಟಂಬರ್ 8 ಭಾನುವಾರ ಬೆಳಿಗ್ಗೆ 9.30 ಕ್ಕೆ ಉರ್ವಾ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿದೆ.ತ್ರಿಶೂಲ್ ಶೆಟ್ಟಿ ಅವರು ಸಿನಿಮಾರಂಗದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿದ್ದಾರೆ. ಪುಳಿಮುಂಚಿ ತುಳು ಸಿನಿಮಾವನ್ನು ನಿರ್ದೇಶಿಸಿ ಯಶಸ್ವಿಯಾದವರು. ಹರಿಪ್ರಸಾದ್ ರೈ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಒಂದೇ ಹಂತದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಣ ನಡೆಸಲು ರೂಪುರೇಶೆ ಸಿದ್ದಪಡಿಸಿದ್ದಾರೆ. ತಾರಾಗಣದ ಆಯ್ಕೆ ನಡೆಯುತ್ತಿದೆ. ದಿಗ್ಗಜ ಕಲಾವಿದರೂ ಕಂಕನಾಡಿ ಸಿನಿಮಾದಲ್ಲಿದ್ದಾರೆ.ತ್ರಿಶೂಲ್ ಶೆಟ್ಟಿ ನಿರ್ದೇಶಿಸಿರುವ ಸಿನಿಮಾಕ್ಕೆ ಛಾಯಾಗ್ರಾಹಣ ಮಯೂರ್ ಆರ್ ಶೆಟ್ಟಿ ಸಂಗೀತ ಕಿಶೋರ್ ಕುಮಾರ್ ಶೆಟ್ಟಿ ಸಂಭಾಷಣೆ ಡಿಬಿಸಿ ಶೇಖರ್, ಕಲಾನಿರ್ದೇಶನ ಹರೀಶ್ ನಾಯಕ್, ಸಂಕಲನ ಗಣೇಶ್ ನಿರ್ಚೇಲ್ , ಪಬ್ಲಿಸಿಟಿ ಡಿಸೈನರ್ ದೇವಿ ರೈ, ಸಾಹಸ ಚಂದ್ರು ಬಂಡೆ, ನೃತ್ಯ ದಿಕ್ಷೀತ್ ಕುಮಾರ್ ಮತ್ತು ನವೀನ್ ಇದ್ದಾರೆ.ಇದೇ ಭಾನುವಾರ ಗಣ್ಯರ ಉಪಸ್ಥಿತಿಯಲ್ಲಿ “ಕಂಕನಾಡಿ” ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ನೆರವೇರಲಿದೆ.

ಪ್ರಾದೇಶಿಕ ವಾರ್ತೆಗಳು

“ಬೇಗನೆ ಗುರುತಿಸುವಿಕೆ, ಸೂಕ್ತ ಚಿಕಿತ್ಸೆಯಿಂದ ಕ್ಯಾನ್ಸರ್ ಹಿಮ್ಮೆಟ್ಟಿಸಲು ಸಾಧ್ಯ“-ಡಾ. ಶಾಂತಾರಾಮ್ ಶೆಟ್ಟಿ

ಮಂಗಳೂರು: ತಪಸ್ಯ ಫೌಂಡೇಶನ್, ಎಲ್ ಸಿಐಎಫ್, ಲಯನ್ಸ್ ಇಂಟರ್ ನ್ಯಾಷನಲ್ ಮತ್ತು ಕಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಬಾಲ್ಯದ ಕ್ಯಾನ್ಸರ್ ಆರೈಕೆ ಕಾರ್ಯಕ್ರಮ “ಶೌರ್ಯ” ಇದರ ಉದ್ಘಾಟನಾ ಸಮಾರಂಭ ಗುರುವಾರ ಬೆಳಗ್ಗೆ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ತಪಸ್ಯ ಫೌಂಡೇಶನ್ ಸ್ಥಾಪಕರಾದ ಸಬಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಮಾತಾಡಿದ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ. ಅವರು, “ಮಕ್ಕಳಿಗೆ ಕ್ಯಾನ್ಸರ್ ಬಂದಾಗ ಅವರ ಇಡೀ ಕುಟುಂಬ ಅದರಲ್ಲಿ ಬಲಿಪಶು ಆಗುತ್ತದೆ. ಮಕ್ಕಳ ಕ್ಯಾನ್ಸರ್ ಆರೈಕೆಯನ್ನು ಮಾಡುತ್ತಿರುವ ತಪಸ್ಯ ಫೌಂಡೇಶನ್ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದೆ. ಲಯನ್ಸ್ ಸಂಸ್ಥೆ ಮನೆಮನೆಗೆ ಹೋಗಿ ಕ್ಯಾನ್ಸರ್ ರೋಗಿಗಳನ್ನು ಗುರುತಿಸಿ ಅವರಿಗೆ ಔಷಧಿ ಸಹಿತ ಆರ್ಥಿಕ ಸಹಾಯವನ್ನು ಮಾಡುವಲ್ಲಿ ತಪಸ್ಯ ಫೌಂಡೇಶನ್ ನೆರವನ್ನು ನೀಡುತ್ತಿದೆ. ಕ್ಯಾನ್ಸರ್ ಯಾವ ಪ್ರಾಯದಲ್ಲಿ ಬೇಕಾದರೂ ಬರಬಹುದು ಅದು ಗಂಭೀರ ಸ್ಥಿತಿ ತಲುಪಿದಾಗ ಮಾತ್ರ ಜನರು ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಬಾಲ್ಯದಲ್ಲೇ ಕ್ಯಾನ್ಸರ್ ಅನ್ನು ಗುರುತಿಸಿಕೊಂಡು ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಿ ಜೀವನಸಾಗಿಸಬಹುದು. ತಪಸ್ಯ ಫೌಂಡೇಶನ್ ಮೂಲಕ ಸಬಿತಾ ಶೆಟ್ಟಿಯವರು ಇನ್ನು ಮುಂದೆಯೂ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಂಡು ಕ್ಯಾನ್ಸರ್ ಪೀಡಿತರಿಗೆ ನೆರವಾಗಲಿ“ ಎಂದರು.ಬಳಿಕ ಮಾತಾಡಿದ ನಿಟ್ಟೆ ಯೂನಿವರ್ಸಿಟಿ ಉಪಕುಲಪತಿ ಡಾ. ಶಾಂತಾರಾಮ್ ಶೆಟ್ಟಿ ಅವರು, ”ಕ್ಯಾನ್ಸರ್ ಬಂದಾಗ ದೇವಸ್ಥಾನ, ಮಸೀದಿ, ಚರ್ಚ್ ಗೆ ಹೋಗಿ ಪ್ರಾರ್ಥನೆ ಮಾಡಿದರೆ ಪ್ರಯೋಜನವಿಲ್ಲ ಯಾಕೆಂದರೆ ವೈಜ್ಞಾನಿಕವಾಗಿ ಕ್ಯಾನ್ಸರ್ ರೋಗವನ್ನು ಸರಿಯಾದ ಚಿಕಿತ್ಸೆಯಿಂದಷ್ಟೇ ಹಿಮ್ಮೆಟ್ಟಿಸಬಹುದು ಎನ್ನುವುದು ದೃಢ ಪಟ್ಟಿದೆ. ಸರಿಯಾದ ಚಿಕಿತ್ಸೆ, ಸೂಕ್ತ ಸ್ಥಳ ಮತ್ತು ಆರೈಕೆಯಿಂದ ಕ್ಯಾನ್ಸರ್ ಗುಣಪಡಿಸಲು ಸಾಧ್ಯ“ ಎಂದರು.”ಕ್ಯಾನ್ಸರ್ ಚಿಕಿತ್ಸೆ ಇಂದು ದುಬಾರಿಯಾಗಿದೆ. ಈ ಕಾರಣಕ್ಕೆ ಬಡ ಅಥವಾ ಮಧ್ಯಮ ಕುಟುಂಬಗಳು ಚಿಕಿತ್ಸೆಯಿಂದ ದೂರ ಉಳಿಯುತ್ತವೆ. ಕ್ಯಾನ್ಸರ್ ಪೀಡಿತ ಮಕ್ಕಳು ಇಂದು ಗುಣಮುಖರಾಗಿ ಜೀವನದಲ್ಲಿ ಸಾಧನೆ ಮಾಡುತ್ತ ನಮ್ಮೆದುರು ಇದ್ದಾರೆ. ನಾವು ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಸಬಿತಾ ಶೆಟ್ಟಿಯವರಿಂದಾಗಿ ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದೇವೆ. ಕ್ಯಾನ್ಸರ್ ಅನ್ನುವ ಶಬ್ಧ ಮನೆ ಮಾತ್ರವಲ್ಲದೆ ಇಡೀ ಪರಿಸರದಲ್ಲಿ ನೋವಿನ ವಾತಾವರಣ ಸೃಷ್ಟಿಸುತ್ತೆ. ಕ್ಯಾನ್ಸರ್ ಅನ್ನುವ ಭಯಾನಕ ರೋಗ ಇಂದು ಯಾರನ್ನು ಬೇಕಾದರೂ ಬಾಧಿಸಬಹುದು. ಪ್ರತೀ ಸುರಂಗ ಮಾರ್ಗ ಮುಗಿದ ಬಳಿಕ ಅಲ್ಲೊಂದು ಬೆಳಕು ಕಾಣಿಸುತ್ತದೆ ಅಂತಹ ಕೆಲಸವನ್ನು ತಪಸ್ಯ ಫೌಂಡೇಶನ್ ಮಾಡುತ್ತ ಬಂದಿದೆ“ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಲಯನ್ ವಸಂತ ಶೆಟ್ಟಿ ಮಾತಾಡಿ, ”ಲಯನ್ಸ್ ಸಂಘಟನೆ ಮತ್ತು ದಾನಿಗಳ ನೆರವಿನಿಂದ 1.60 ಕೋಟಿ ರೂ. ವೆಚ್ಚದಲ್ಲಿ ಮುಡಿಪು ಬಳಿ ಮಕ್ಕಳ ಕ್ಯಾನ್ಸರ್ ಕೇರ್ ಸೆಂಟರ್ ಪ್ರಾರಂಭವಾಗಲಿದೆ. ಅದರ ಸಂಪೂರ್ಣ ಕೆಲಸವನ್ನು ತಪಸ್ಯ ಫೌಂಡೇಶನ್ ಮೂಲಕ ಸಬಿತಾ ಮತ್ತವರ ತಂಡ ಮಾಡುತ್ತಿದೆ. ಅದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಕ್ಯಾನ್ಸರ್ ಬೇಗನೆ ಮುಗಿಯುವ ರೋಗವಲ್ಲ ಅದು ತಿಂಗಳು, ವರ್ಷಗಟ್ಟಲೆ ನಮ್ಮನ್ನು ಕಾಡಬಹುದು. ಹೀಗಾಗಿ ಚಿಕಿತ್ಸೆಗೆ ಹಣವಿಲ್ಲದೆ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂಬ ಉದ್ದೇಶದಿಂದ ತಪಸ್ಯ ಈ ಕಾರ್ಯಕ್ಕೆ ಮುಂದಾಗಿದೆ ನಾವೆಲ್ಲರೂ ಅದರ ಜೊತೆ ಕೈಜೋಡಿಸೋಣ“ ಎಂದರು.ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ತಜ್ಞ ಡಾ.ಹರ್ಷ ಪ್ರಸಾದ್ ಎಲ್. ಮಾತನಾಡಿ, “ಕ್ಯಾನ್ಸರ್ ಚಿಕಿತ್ಸೆ ಪಡೆಯದೇ ಇರಲು ಆರ್ಥಿಕ ಸಂಕಷ್ಟ ಒಂದು ಕಾರಣವಾದರೆ ಕ್ಯಾನ್ಸರ್ ಪೀಡಿತರ ಮನೆ ಮತ್ತು ಸಮಾಜದ ತಿರಸ್ಕಾರ ಕೂಡಾ ಇನ್ನೊಂದು ಕಾರಣ. ಕ್ಯಾನ್ಸರ್ ಲಕ್ಷಣಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವುದೇ ರೋಗವನ್ನು ಹಿಮ್ಮೆಟ್ಟಿಸಲು ಇರುವ ಸೂಕ್ತ ಮಾರ್ಗವಾಗಿದೆ” ಎಂದರು.ವೇದಿಕೆಯಲ್ಲಿ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾಗೀರ್ ಸಿದ್ದಿಕಿ, ತಪಸ್ಯ ಟ್ರಸ್ಟಿ ಲಯನ್ ಮೋಹನ್ ಶೆಟ್ಟಿ, ಲಯನ್ ಅನಿಲ್, ಲಯನ್ ವಿಶ್ವಾಸ್ ರಾವ್, ಲಯನ್ ರಮಾನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸೆ. 7 ರಿಂದ 9 ರ ತನಕ ಬಂಟ್ಸ್ ಹಾಸ್ಟೇಲ್ ಓಂಕಾರ ನಗರದಲ್ಲಿ 18 ನೇ ವರ್ಷದ ಗಣೇಶೋತ್ಸವ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ನಾರೀಕೇಳ ಮಹಾಗಣಾಯಾಗವು ಸೆಪ್ಟೆಂಬರ್ ತಿಂಗಳ ತಾರೀಕು 7ರಿಂದ ಸೆಪ್ಟೆಂಬರ್ ತಿಂಗಳ ತಾರೀಕು 9ರವರೆಗೆ ಮಂಗಳೂರಿನ ‘ಓಂಕಾರ ನಗರ’, ಬಂಟ್ಸ್ ಹಾಸ್ಟೆಲ್ ಇಲ್ಲಿ ಜರಗಲಿದೆ ಎಂದು ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಡಾ ಆಶಾಜ್ಯೋತಿ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ದಿನಾಂಕ 06.09.2024ರ ಶುಕ್ರವಾರ ಶರವು ದೇವಸ್ಥಾನದ ಬಳಿಯಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಶ್ರೀ ರಾಮದಾಸ್ ಆಚಾರರವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೇಟ್ನ ‘ಓಂಕಾರ ನಗರ’ಕ್ಕೆ ಬರಮಾಡಿಕೊಳ್ಳುವುದು.ದಿನಾಂಕ 07.09.2024ರ ಬೆಳಿಗ್ಗೆ ಶನಿವಾರ 8.00 ಗಂಟೆಗೆ ಧ್ವಜರೋಹಣಾ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ತೆನೆ ವಿತರಣಾ ಕಾರ್ಯಕ್ರಮ ಜರಗುವುದು. ಸಂಜೆ ಗಂಟೆ 5.00ರಿಂದ 7.00 ರವರೆಗೆ ಭಾರ್ಮಿಕ ಸಭಾ ಕಾರ್ಯಕ್ರಮ ಜರಗಲಿರುವುದು.ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು.ರಾತ್ರಿ ಗಂಟೆ 8.00ರಿಂದ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು.ದಿನಾಂಕ 08.09.2024ರ ಸಂಜೆ ಗಂಟೆ 5.00ರಿಂದ 7.00ರವರೆಗೆ ಧಾರ್ಮಿಕ ಸಭೆ ನಡೆಯುವುದು. ಈ ಸಂದರ್ಭದಲ್ಲೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು. ರಾತ್ರಿ ಗಂಟೆ 8.000ಂದ ಎಸ್.ಡಿ.ಎಂ ಕಲಾವೈಭವ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು ಎಂದು ಸಂಚಾಲಕ ದಿವಾಕರ ಸಾಮಾನಿ ಚೇಳಾರ್ ಗುತ್ತು ತಿಳಿಸಿದರು.ದಿನಾಂಕ 09.09.2024ರ ಸೋಮವಾರದಂದು ಬೆಳಿಗ್ಗೆ ಗಂಟೆ 8.00ರಿಂದ ಲೋಕಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸ್ರನಾರಿಕೇಳ ಮಹಾಗಣಾಯಾಗ ಆರಂಭಗೊಂಡು ಬೆಳಿಗ್ಗೆ ಗಂಟೆ 11.30ಕ್ಕೆ ಪೂರ್ಣಾಹುತಿಗೊಳ್ಳಲಿದೆ. ಮಧ್ಯಾಹ್ನ 3.30ಕ್ಕೆ ಸಮಾಜದ ವಿವಿಧ ಗಣ್ಯರಿಂದ ಶೋಭಾಯಾತ್ರೆಗೆ ಚಾಲನೆ ದೊರೆಯಲಿದ್ದು, ಶೋಭಾಯಾತ್ರೆಯು ‘ಓಂಕಾರ ನಗರ’ದಿಂದ ಶ್ರದ್ಧಾ ಭಕ್ತಿಯಿಂದ ಹೊರಟು ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ಶೋಭಾಯಾತ್ರೆಯು ಬಂಟ್ಸ್ ಹಾಸ್ಟೇಲ್, ಪಿ.ಪಿಎಸ್ ವೃತ್ತ, ನ್ಯೂಚಿತ್ರಾ ಟಾಕೀಸ್, ರಥಬೀದಿ, ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಗುವುದು.ಈ ಮೂರು ದಿನಗಳ ಕಾಲ ವೈದಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಪೂಜೆಗಳು ಜರಗಲಿರುವುದು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಬಂಟ ಸಮಾಜಬಾಂಧವರು ಮತ್ತು ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಗಣೇಶೋತ್ಸವದ ವೇದಿಕೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿರುವುದು.ಪತ್ರಿಕಾಗೋಷ್ಟಿಯಲ್ಲಿ ಡಾ.ಆಶಾಜ್ಯೋತಿ ರೈ, ಟ್ರಸ್ಟಿ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ,, ದಿವಾಕರ ಸಾಮಾನಿ ಚೇಳಾರ್ ಗುತ್ತು ಸಂಚಾಲಕರು, ಶ್ರೀ ಕೃಷ್ಣಪ್ರಸಾದ್ ರೈ, ಟ್ರಸ್ಟಿ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ, ಶ್ರೀ ವಸಂತ ಶೆಟ್ಟಿ, ಸಂಚಾಲಕರು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ, ಶ್ರೀ ಮನೀಶ್ ರೈ, ಸಂಚಾಲಕರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ 5. ಶ್ರೀ ಅಶ್ವಥಾಮ ಹೆಗ್ಡೆ, ಸಂಚಾಲಕರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಸಂತೋಷ್ ಕುಮಾರ್ ಶೆಡ್ಡೆ, ಸಂಚಾಲಕರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಸ್ಥಿತರಿದ್ದರು.

Scroll to Top