Author name: editor

ಪ್ರಾದೇಶಿಕ ವಾರ್ತೆಗಳು

ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಇದರ ಮೂರನೇ ವರುಷದ ಸಮಾಲೋಚನ ಸಭೆ

ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಇದರ ಮೂರನೇ ವರುಷದ ಸಮಾಲೋಚನ ಸಭೆಯು ಬಿ. ಸಿ ರೋಡಿನಲ್ಲಿ ನಡೆಯಿತು. ಮಳೆಗಾಲದಲ್ಲಿ ವೃತ್ತಿಪರ ಯಕ್ಷಗಾನ ಕಲಾವಿದರು ಜೀವನೋಪಾಯಕ್ಕಾಗಿ ಪರಂಪರೆಯಿಂದ ನಡೆದು ಬಂದ ಮಾರ್ಗವೇ ಮನೆಮನೆ ಯಕ್ಷಗಾನ ಇದು ವ್ಯಾಪಾರಿಕರಣವಾಗದೆ ದೇವರ ಸೇವೆ ಎಂಬ ಮನೋಭಾವನೆ ಯೊಂದಿಗೆ ಕಲಾಭಿಮಾನಿಗಳ ಮನಸಿಗೆ ಹಿತವಾಗುವ ಸಭ್ಯತೆಯ ಪ್ರದರ್ಶನವನ್ನು ನೀಡುವುದರೊಂದಿಗೆ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸಲಹೆ ನೀಡಿದರು.. ಚಿಕ್ಕ ಮೇಳದಲ್ಲಿ ದುಡಿಯುತ್ತಿದ್ದ ಕಲಾಮಾತೆಯ ಮಡಿಲು ಸೇರಿದ ಪ್ರವೀತ್ ಆಚಾರ್ಯ ಗುರುವಾಯನಕೆರೆ ಮತ್ತು ಸತೀಶ್ ಆಚಾರ್ಯ ವೇಣೂರು, ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಂದಿನ ಮಳೆಗಾಲದ ತಿರುಗಾಟವನ್ನು ತಳಕಲ ಕಾಶಿ ಶ್ರೀವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಜೂನ್ 5ನೇ ತಾರೀಕಿನಂದು ಗಣ್ಯರ ಉಪಸ್ಥಿತಿಯಲ್ಲಿ ಆರಂಭಿಸುವುದೆಂದು ತೀರ್ಮಾನಿಸಲಾಯಿತು. ಉಪಾಧ್ಯಕ್ಷರುಗಳಾದ ಭಾಗವತರಾದ ಮೋಹನ್ ಕಲಂಬಾಡಿ, ರಮೇಶ್ ಕುಲಶೇಖರ, ಕೋಶಾಧಿಕಾರಿ ದಿವಾಕರದಾಸ್ ಕಾವಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೇಮಾರ್ , ಪದಾಧಿಕಾರಿಗಳು ಮತ್ತು ತೆಂಕುತಿಟ್ಟು ಚಿಕ್ಕ ಮೇಳಗಳ ಸಂಚಾಲಕರು, ಮತ್ತು ಕಲಾವಿದರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಯಕ್ಷಬೊಳ್ಳಿ ಕಡಬ ದಿನೇಶ್ ರೈ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.

ಪ್ರಾದೇಶಿಕ ವಾರ್ತೆಗಳು

ನೂತನ ಪೊಲೀಸ್ ಕಮಿಷನರ್ ಅಧಿಕಾರ ಸ್ವೀಕಾರ

ಮಂಗಳೂರು – ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಸುಧೀರ್ ರೆಡ್ಡಿಯವರು ಇಂದು ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುಧೀರ್ ರೆಡ್ಡಿಯವರಿಗೆ ಅಧಿಕಾರ ಹಸ್ತಾಂತರಿಸಿದರು

ಪ್ರಾದೇಶಿಕ ವಾರ್ತೆಗಳು

ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ಗಣಿ ಇಲಾಖೆ ಉಪನಿರ್ದೇಶಕಿ, ಚಾಲಕ ಸಹಿತ ಇನ್ನೊಬ್ಬ ಸಿಬ್ಬಂದಿ.

ಮಂಗಳೂರು: ಮನೆ ನಿರ್ಮಿಸುವುದಕ್ಕೆ ಭೂಮಿಯ ಕಲ್ಲು ತೆರವು ಮಾಡಿ ಸಮತಟ್ಟು ಮಾಡಲು ಅಗತ್ಯ ಅನುಮತಿ ನೀಡುವುದಕ್ಕೆ 50 ಸಾವಿರ ರೂ. ಲಂಚ ಬೇಡಿಕೆ ಇರಿಸಿದ ಮಂಗಳೂರು ಗಣಿ ಇಲಾಖೆ ಉಪನಿರ್ದೇಶಕಿ ಮತ್ತು ಚಾಲಕ ಸಹಿತ ಇನ್ನೊಬ್ಬ ಸಿಬ್ಬಂದಿ ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ, ಸಿಬ್ಬಂದಿ ಪ್ರದೀಪ್ ಹಾಗೂ ಉಪನಿರ್ದೇಶಕರ ಚಾಲಕ ಮಧು ಭ್ರಷ್ಟಾಚಾರ ಆರೋಪ ಸಂಬಂಧ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದವರು. ವ್ಯಕ್ತಿಯೊಬ್ಬರು ತನ್ನ ಪರಿಚಯದವರ ಹೆಸರಿನಲ್ಲಿ ಇರುವ ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೆ ನಂಬ್ರ 279/5ರಲ್ಲಿ 1.39 ಎಕ್ರೆ ವಿಸ್ತೀರ್ಣದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆಯನ್ನು ಕಟ್ಟಲು ಕಟ್ಟಡ ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ಕೋರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕಳೆದ ವರ್ಷ ಅ. 28ರಂದು ಅರ್ಜಿ ಸಲ್ಲಿಸಿದ್ದರು. ಉಳ್ಳಾಲ ತಹಶೀಲ್ದಾರರು ಜಮೀನಿನಲ್ಲಿ ಲಭ್ಯವಿರುವ ಕಟ್ಟಡ ಕಲ್ಲು ತೆಗೆಯಲು ಪ್ರಮಾಣ ಪತ್ರ/ದೃಢೀಕರಣ ಪತ್ರ ನೀಡಬಹುದು ಎಂದು 2025ರ ಮಾರ್ಚ್ 21ರಂದು ವರದಿ ಸಲ್ಲಿಸಿದ್ದರು. ಆದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿರಲಿಲ್ಲ.ಈ ಬಗ್ಗೆ ವಿಚಾರಿಸಲು ದೂರುದಾರರು ಗಣಿ ಇಲಾಖೆ ಕಚೇರಿಗೆ ತೆರಳಿದ್ದು ಉಪನಿರ್ದೇಶಕಿ ಕೃಷ್ಣವೇಣಿ ಅವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ಫೈಲಿಗೆ 50 ಸಾವಿರ ರೂ. ತೆಗೆದುಕೊಳ್ಳಿ. ಅನಂತರ ಸಹಿ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.ಬುಧವಾರ ಉಪನಿರ್ದೇಶಕಿ ಕೃಷ್ಣವೇಣಿ ಅವರು ಚಾಲಕ ಮಧು ಎಂಬವರ ಮೂಲಕ 50,000 ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪ್ರಭಾರ ಎಸ್.ಪಿ. ಕುಮಾರಚಂದ್ರ, ಡಿವೈಎಸ್‌ಪಿ ಡಾ| ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ಹಾಗೂ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯ್ಕ ಮತ್ತಿತರರು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಬಹು ನಿರೀಕ್ಷಿತ ಮಕ್ಕಳ ಚಿತ್ರ “ಸ್ಕೂಲ್ ಲೀಡರ್” ರಾಜ್ಯಾದ್ಯಂತ ಬಿಡುಗಡೆ

ಮಂಗಳೂರು: ಸನ್ ಮ್ಯಾಟ್ರಿಕ್ಸ್ ಸಿನಿಮಾಸ್ ಮತ್ತು ಫಿಲ್ಮ್ ವೀಲ್ ಸ್ಟುಡಿಯೋಸ್ ಅರ್ಪಿಸುವ “ಸ್ಕೂಲ್ ಲೀಡರ್” ಸಿನಿಮಾ ನಗರದ ಬಿಗ್ ಸಿನಿಮಾಸ್ ನಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಸಿಎ ಎಸ್ ಎಸ್ ನಾಯಕ್ ಅವರು, “ಇದು ನಿರ್ಮಾಪಕ ಸತ್ಯೇಂದ್ರ ಪೈ ಅವರ ಮೂರನೇ ಸಿನಿಮಾ. ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಒತ್ತಡದಿಂದ ಹೊರಬಂದು ಹೇಗೆ ಜೀವನದಲ್ಲಿ ಸಾಧನೆ ಮಾಡಬಹುದು ಅನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕನ್ನಡ ಶಾಲೆಗಳ ಇಂದಿನ ಪರಿಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಎಲ್ಲರೂ ಸಿನಿಮಾ ನೋಡಿ ಮಕ್ಕಳನ್ನು ಪ್ರೋತ್ಸಾಹಿಸಿ“ ಎಂದರು.ಬಳಿಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ”ಸ್ಕೂಲ್ ಲೀಡರ್ ಹೈಸ್ಕೂಲ್ ಜೀವನದ ಕಥೆ ಎಲ್ಲರಿಗೂ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ, ಎಲ್ಲರೂ ಸಿನಿಮಾ ನೋಡಿ“ ಎಂದು ಶುಭ ಹಾರೈಸಿದರು. ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ”ಪೆನ್ಸಿಲ್ ಬಾಕ್ಸ್ ಕೊಟ್ಟಿದ್ದ ಚಿತ್ರ ನಿರ್ದೇಶಕ ರಝಾಕ್ ಪುತ್ತೂರು ಈಗ ಸ್ಕೂಲ್ ಲೀಡರ್ ನಂತಹ ಉತ್ತಮ ಗುಣಮಟ್ಟದ ಸಿನಿಮಾ ಕೊಟ್ಟಿದ್ದಾರೆ. ಇಂತಹ ಇನ್ನಷ್ಟು ಸಿನಿಮಾಗಳು ಬರಲಿ, ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಭರತ್ ಮಾತಾಡಿ, ”ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಸರಕಾರಿ ಶಾಲೆಗಳಲ್ಲಿ ಮಕ್ಕಳನ್ನು ಯಾವ ರೀತಿ ಬೆಳೆಸುತ್ತಾರೆ ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಸಿನಿಮಾ ನೂರು ದಿನ ಪೂರೈಸಲಿ“ ಎಂದರು.ಸಮಾರಂಭದಲ್ಲಿ ನಿರ್ಮಾಪಕ ಸತ್ಯೇಂದ್ರ ಪೈ, ನಿರ್ದೇಶಕ ರಝಾಕ್ ಪುತ್ತೂರು, ವಾಲ್ಟರ್ ನಂದಳಿಕೆ, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಚಿತ್ರ ನಿರ್ದೇಶಕ ರಜಾಕ್ ಪುತ್ತೂರು, ಭೋಜರಾಜ್ ವಾಮಂಜೂರ್, ಪ್ರಸನ್ನ ಶೆಟ್ಟಿ, ವಾಮನ ಕಾಮತ್, ಸುಚಿತ್ರ ನಾಯಕ್, ತ್ರಿಶುಲ್ ಶೆಟ್ಟಿ, ಮಯೂರ್ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಬಿ ರವೀಂದ್ರ ಶೆಟ್ಟಿ, ಸುದರ್ಶನ್ ಶಂಕರ್, ರಮೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಕುಮಾರ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

“ಪಿಲಿ ಪಂಜ” ಸಿನಿಮಾದ ಟೀಸರ್ ಬಿಡುಗಡೆ. ನವಂಬರ್ 7 ರಂದು ಸಿನಿಮಾ ತೆರೆಗೆ

ಮಂಗಳೂರು: ಯಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ತಯಾರಾದ ಬಹು ನಿರೀಕ್ಷಿತ “ಪಿಲಿಪಂಜ” ತುಳು ಸಿನಿಮಾದ ಟೀಸರ್ ನ್ನು ನಿರ್ದೇಶಕ ದೇವದಾಸ ಕಾಪಿಕಾಡ್ ಬಿಡುಗಡೆಗೊಳಿಸಿದರು. ಟೀಸರ್ ನ್ನು ವೀಕ್ಷಿಸಿದ ದೇವದಾಸ್ ಕಾಪಿಕಾಡ್ ಅವರು ತುಳುವಿನಲ್ಲಿ ಮತ್ತೊಂದು ಸದಭಿರುಚಿಯ ಸಿನಿಮಾವನ್ನು ಪಿಲಿಪಂಜದ ಮೂಲಕ ನೋಡಲು ಸಾಧ್ಯವಿದೆ ಎಂದರು. ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.ತುಳು ಸಿನಿಮಾರಂಗದಲ್ಲಿ ವಿಭಿನ್ನ ತಂತ್ರಜ್ಞಾನದಿಂದ ತಯಾರಾದ “ಪಿಲಿಪಂಜ” ಸಿನಿಮಾ ನವೆಂಬರ್ 7ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ, ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದೆ, ಟೀಸರ್ ನಮ್ಮನ್ನು ಇನ್ನಷ್ಟು ಕುತೂಹಲ ಮೂಡಿಸವಂತೆ ಮಾಡಿದೆ, ಸಿನಿಮಾ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ. ತುಳು ಕಲಾಭಿಮಾನಿಗಳು ನವೆಂಬರ್ 7ರಂದು ಬಿಡುಗಡೆಯಾಗುವ ಈ ಸಿನಿಮಾವನ್ನು ನೋಡಿ ಚಿತ್ರತಂಡವನ್ನು ಬೆಂಬಲಿಸಬೇಕೆಂದು ಚಿತ್ರತಂಡ ವಿನಂತಿಸಿದೆಈ ಸಂದರ್ಭದಲ್ಲಿ ನಿರ್ಮಾಪಕ ಪ್ರತೀಕ್ ಯು ಪೂಜಾರಿ ಕಾವೂರು , ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಹಾಗೂ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು..

ಪ್ರಾದೇಶಿಕ ವಾರ್ತೆಗಳು

‘ಗಂಭೀರ ಕಥಾವಸ್ತು ಇರುವ ತುಳು ಸಿನಿಮಾಗಳನ್ನು ಪ್ರೋತ್ಸಾಹಿಸಿ’ ನಟ ನವೀನ್ ಡಿ.ಪಡೀಲ್ ಮನವಿ

ಮಂಗಳೂರು : ತುಳುನಾಡಿನ ಪ್ರೇಕ್ಷಕರು ನಾಟಕ ಮತ್ತು ಸಿನಿಮಾದಲ್ಲಿ ಹೆಚ್ಚಾಗಿ ಹಾಸ್ಯವನ್ನು ಬಯಸುತ್ತಾರೆ. ಕೇವಲ ಹಾಸ್ಯದಿಂದ ತುಳು ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ. ಹಾಸ್ಯದ ಜತೆಗೆ ಗಂಭೀರ ಕಥಾವಸ್ತು ಇರುವ ಸಿನಿಮಾಗಳನ್ನು ಪ್ರೋತ್ಸಾಹಿಸ ಬೇಕು ಎಂದು ಜನಪ್ರಿಯ ನಟ ನವೀನ್ ಡಿ.ಪಡೀಲ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಅವರು ‘ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ’ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ತುಳು ಸಿನಿಮಾದಲ್ಲಿ ಇತ್ತೀಚೆಗೆ ಹೊಸಬರು ಹಾಸ್ಯದ ಜತೆಗೆ ಉತ್ತಮ ಕಥಾವಸ್ತು ಕೂಡ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಹಾಸ್ಯದ ಜತೆಗೆ ಒಂದು ಗಂಭೀರ ವಸ್ತು ವಿಷಯಕ್ಕೆ ಆದ್ಯತೆ ನೀಡಿರುವ ಕಾರಣಕ್ಕೆ ಮಲಯಾಳಂನ ಚಿತ್ರಗಳು ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದಿದೆ ಎಂದರು.ಇತ್ತೀಚಿನ ರಿಯಾಲಿಟಿ ಶೋ, ಚಲನಚಿತ್ರಗಳಲ್ಲಿ ನೈಜ ಹಾಸ್ಯಕ್ಕೆ ಬೆಲೆ ಇಲ್ಲ. ಗಂಭೀರ ವಸ್ತು ವಿಷಯದ ಸಂದರ್ಭದಲ್ಲಿ ಹಾಸ್ಯ ಮಾಡಲೇಬಾರದು. ಇದುವರೆಗೂ ಆ ನಿಯಮ ಪಾಲಿಸಿಕೊಂಡು ಬಂದಿದ್ದೇನೆ. ಇತ್ತೀಚೆಗೆ ನಾನು ಪೋಷಕ ಪಾತ್ರಗಳನ್ನು ಹೆಚ್ಚಾಗಿ ಮಾಡುತ್ತಿದ್ದು ಅದಕ್ಕೆ ನಾಡಿನ ಹಿರಿಯ ಕಲಾವಿದರಿಂದ ಮೆಚ್ಚುಗೆ ಸಿಗುತ್ತಿದೆ. ಮತ್ತೆ ಹಾಸ್ಯ ಪಾತ್ರಗಳನ್ನೇ ಮಾಡಬೇಕೆ ಎಂಬ ಗೊಂದಲ ನನ್ನಲ್ಲಿದೆ ಎಂದರು.ನಮ್ಮಲ್ಲಿ ಸೌಹಾರ್ದತೆ, ಹೊಂದಾಣಿಕೆ ಬೇಕು. ಇದೇ ವಿಷಯವನ್ನಿಟ್ಟುಕೊಂಡು ‘ನಿರೆಕರೆ’ ಸಿನೆಮಾ ಮಾಡುತ್ತಿದ್ದೇವೆ. ಸಿನೆಮಾದಲ್ಲಿ ದೈವರಾಧನೆ ತೋರಿಸುವುದು ತಪ್ಪಲ್ಲ. ಆದರೆ ಅದನ್ನು ಇದ್ದ ಹಾಗೆ ತೋರಿಸಬೇಕು. ವಿಕ್ಕೃತವಾಗಿ ತೋರಿಸಬಾರದು. ‘ಕಾಂತಾರ’ ಸಿನೆಮಾದಲ್ಲಿ ದೈವಾರಾಧನೆ ತೋರಿಸಿದ ಬಗ್ಗೆ ಕೆಲವರು ಟ್ರೋಲ್ ಮಾಡಿರಬಹುದು. ಆದರೆ ‘ಕಾಂತಾರ’ದಿಂದಾಗಿ ದೈವಾರಾಧನೆಯಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ಪಡೀಲ್ ಹೇಳಿದರು.ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸದ್ಯ ಜಗನ್ನಾಥ ಶೆಟ್ಟಿ ಬಾಳ ಕಾರ್ಯಕ್ರಮ, ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಮಾಜಿ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು. ಪುಷ್ಪರಾಜ್ ಬಿ.ಎನ್. ವಂದಿಸಿದರು. ಪತ್ರಕರ್ತರ ಸಂಘದ ಪ್ರಧಾನಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಕ್ಯಾಥೊಲಿಕ್ ಸಭಾ ಕೂಳೂರು ಘಟಕದ ವತಿಯಿಂದ ನಿವೇಶನ ರಹಿತರಿಗೆ ಉಚಿತ ಮನೆ ನಿರ್ಮಾಣ

ಕೂಳೂರು, ಮೇ ೨೬: ಕಷ್ಟದಲ್ಲಿದ್ದವರಿಗೆ ನೆರವಾಗುವುದು ದೇವರ ಸೇವೆ ಮಾಡಿದಂತೆ. ಕೆಥೋಲಿಕ್ ಸಭಾ ಕೂಳೂರು ಘಟಕದ ವತಿಯಿಂದ ನಿವೇಶನ ರಹಿತರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಟ್ಟಿರುವ ಕಾರ್ಯ ಶ್ಲಾಘನೀಯ. ಇಂತಹ ಮಾನವೀಯ ಕಾರ್ಯಗಳು ನಿರಂತರವಾಗಿ ಮುಂದುವರೆಯಲಿ. ಇದು ಇತರರಿಗೂ ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರಣೆಯಾಗಲಿ ಎಂದು ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಧರ್ಮಾಧ್ಯಕ್ಷ ಅ|ವಂ|ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಹೇಳಿದರು.ಕೂಳೂರು ಸಂತ ಅಂತೋನಿ ಚರ್ಚ್‌ನ ಕೆಥೋಲಿಕ್ ಸಭಾ ಘಟಕದ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಹಮ್ಮಿಕೊಳ್ಳಲಾದ ಸಮಾಜಮುಖಿ ಕಾರ್ಯಗಳ ಪೈಕಿ ಒಂದಾಗಿರುವ ಬಡಕುಟುಂಬಕ್ಕೆ ಬಂಗ್ರಕೂಳೂರಿನಲ್ಲಿ ಸುಮಾರು ೧೫ ಲ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಮನೆ ಹಸ್ತಾಂತರ ಹಾಗೂ ಆಶೀರ್ವಚನ ನೆರವೇರಿಸಿ ಅವರು ಮಾತನಾಡಿದರು.ದೈಜಿವರ್ಲ್ಡ್ ಸಂಸ್ಥೆಯ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರು ಮಾತನಾಡಿ, ಕೂಳೂರು ಘಟಕದ ಏಕತೆ ಮತ್ತು ಸಮರ್ಪಣೆ ಶ್ಲಾಘನೀಯ. ಇದು ಕೇವಲ ಮನೆಯಲ್ಲ ಬದಲಾಗಿ, ಸಾಮೂಹಿಕ ಸಹಾನುಭೂತಿಯ ಸಂಕೇತವಾಗಿದೆ. ನಮ್ಮಲ್ಲಿ ಒಳ್ಳೆಯ ಮನಸ್ಸು ಇದ್ದಾಗ ಮಾತ್ರವೇ ಕಷ್ಟದಲ್ಲಿದ್ದವರಿಗೆ ನೆರವಾಗಲು ಸಾಧ್ಯ. ಕೂಳೂರು ಕ್ಯಾಥೊಲಿಕ್ ಸಭಾ ಘಟಕದ ಮನಸ್ಥಿತಿ ಅಗತ್ಯವಿರುವವರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧ ಎಂಬಂತಿದೆ. ಘಟಕದಲ್ಲಿರುವ ಏಕತೆಯಿಂದ ಇದು ಸಾಧ್ಯವಾಗಿದೆ. ಇತರ ಘಟಕಗಳಿಂದಲೂ ಇಂತಹ ಮಾನವೀಯ ಕಾರ್ಯಗಳು ನಡೆಯಬೇಕಿದೆ ಎಂದರು.ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಸಮುದಾಯದಲ್ಲಿ ನಡೆಯುವ ಉದಾರ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಿದಾಗ ಹೆಚ್ಚಿನ ನೆರವು ಕಾರ್ಯವಾಗಲಿದೆ ಎಂದರು.ಕೆಥೋಲಿಕ್ ಸಭಾ ಕೂಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಕೂಳೂರು ಸಂತ ಅಂತೋನಿ ಚರ್ಚ್‌ನ ಧರ್ಮಗುರು ವಂ| ವಿಕ್ಟರ್ ವಿಜಯ್ ಲೋಬೊ ಅಧ್ಯಕ್ಷತೆ ವಹಿದ್ದರು.ಕೆಥೋಲಿಕ್ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್ ಡಿ’ಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಸವಿತಾ ವೇಗಸ್ ವಂದಿಸಿದರು. ಕ್ಲೆವಿಟಾ ಡಿ’ಸೋಜಾ ನಿರೂಪಿಸಿದರು.ಎಪಿಸ್ಕೋಪಲ್ ಸಿಟಿ ವಲಯದ ಕೆಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ವಂ| ಜಾನ್ ವಾಸ್, ಕೆಥೋಲಿಕ್ ಸಭಾದ ವಲಯ ಅಧ್ಯಕ್ಷರಾದ ಐಡಾ ಫುರ್ಟಾಡೊ ಉಪಸ್ಥಿತರಿದ್ದರು. ಗುತ್ತಿಗೆದಾರ ದೀಪಕ್ ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಮೇ 30,ಕುತ್ಲುರು ಸರಕಾರಿ ಶಾಲೆ ಯಲ್ಲಿ ಶಾಲಾ ಆರಂಭೋತ್ಸವ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ

ಮಂಗಳೂರು,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಮಾಡಿದ ಕುತ್ಲುರು ಸರಕಾರಿ ಶಾಲೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಾಲಾ ಆರಂಭೋತ್ಸವ ಮೇ 30 ರಂದು ನಸೆಯಲಿದೆ. ಕಾಮಗಾರಿಗಳ ಉದ್ಘಾಟನೆ ನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗರಾರ ಕೆ ವಿ ಪ್ರಭಾಕರ್ ನೆರವೇರಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಈ ಸರಕಾರಿ ಶಾಲೆಗೆ ಮುಖ್ಯಮಂತ್ರಿಗಳ ಮಾಧ್ಯಮ ಕೆ ವಿ ಪ್ರಭಾಕರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ 2 ಕಂಪ್ಯೂಟರ್ಸ್ ಹಾಗೂ ಪ್ರಾಜೆಕ್ಟ್ರ ರ್ ನೀಡಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಪ್ಯಾಂಟ್, ಟೀ ಶರ್ಟ್ ಹಾಗೂ ಸ್ಕೂಲ್ ಬ್ಯಾಗ್ ಗಳನ್ನು ವೈಯಕ್ತಿಕ ಕೊಡುಗೆ ನೀಡಿದ್ದಾರೆ. ಅಲ್ಲದೆ ಶಾಲೆಗೆ ಪೈಂಟ್ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಶಾಲಾ ಮಕ್ಕಳಿಗೆ ಕರೆದುಕೊಂಡು ಬರಲು ವಾಹನ ವ್ಯವಸ್ಥೆ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ. ಈ ಸರಕಾರಿ ಶಾಲೆಗೆ ಭರಪೂರ ಕೊಡುಗೆ ನೀಡಿರುವ ಕೆ ವಿ ಪ್ರಭಾಕರ್ ಅವರನ್ನು ಎಲ್ಲರ ಪರವಾಗಿ ವಿದ್ಯಾರ್ಥಿಗಳು ಸನ್ಮಾನಿಸಲಿದ್ದಾರೆಕುತ್ಲುರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆ ಎಂ ಆರ್ ಪಿ ಎಲ್ ಸಿ ಎಸ್ ಆರ್ ನಿಧಿಯಿಂದ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಸೌಚಾಲಯ ಹಾಗೂ 8 ಲಕ್ಷ ರೂಪಾಯಿ ದಲ್ಲಿ ಶಾಲಾ ಕೊಥಡಿಗಳಿಗೆ ಟೈಲ್ಸ್ ಹಾಕಲಾಗಿದೆ. ಇದರ ಉದ್ಘಾಟನೆ ಯನ್ನು ಎಂ ಆರ್ ಪಿ ಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ನೆರವೇರಲಿಸಲಿದ್ದಾರೆ. ಶಾಲಾ ಪೈಂಟಿಂಗ್ ನ್ನು ದಕ್ಷಿಣ ಕನ್ನಡ ಪ್ರಭಾರ ಜಿಲ್ಲಾಧಿಕಾರಿ ಡಾ ಆನಂದ್ ಉದ್ಘಾಟಿಸಲಿದ್ದಾರೆ. ಕಂಪ್ಯೂಟರ್ ಕೊಠಡಿ ಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟ್ಟಧಿಕಾರಿ ಯತೀಶ್ ಎನ್ ಉದ್ಘಾಟಿಸಲಿದ್ದಾರೆ. ಶಾಲಾ ನಾಮ ಫಲಕ ವನ್ನು ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ಉದ್ಘಾಟಿಸಲಿದ್ದಾರೆ. ಹಸಿರೇ ಉಸಿರು ಕಾರ್ಯಕ್ರಮ ವನ್ನು ಧರ್ಮೋತ್ತಾನ ಟ್ರಸ್ಟ್ ಕಾರ್ಯದರ್ಶಿ ವೀರು ಶೆಟ್ಟಿ ನೆರವೇರಿಸಲಿಲಿದ್ದಾರೆ. ಎಲೆಕ್ಟ್ರಿಕಲ್ ವ್ಯವಸ್ಥೆ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಬಿಎಎಸ್ಎಫ್ ಇಂಡಿಯಾ ಲಿಮಿಟೆಡ್ ಸೈಟ್ ಡೈರೆಕ್ಟರ್ ಶ್ರೀನಿವಾಸ್ ಪ್ರಾಣೇಶ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಂತೋಷ್ ಪೈ, ಎಂಎಸ್ಇ ಝೆಡ್ ಮುಖ್ಯ ನಿರ್ವಹಣಾಧಿಕಾರಿ ಸೂರ್ಯ ನಾರಾಯಣ್,,ಜಿಲ್ಲಾ ವಾರ್ತಾ ಅಧಿಕಾರಿ ಖಾದರ್ ಷಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಶಾಲೆಯ ಕೊಠಡಿ ಗಳಲ್ಲಿ ಪ್ರೇಕ್ಷಣಿಯ ಸ್ಥಳಗಳ ಕುರಿತು, ಪರಿಸರ ಕುರಿತು ಚಿತ್ರಗಳನ್ನು ಬಿಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲೆಗೆ ಪೈಂಟಿಂಗ್ ಮಾಡಲಾಗಿದೆ ಎಂದು ಕುತ್ಲುರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ತಿಳಿಸಿದರು.ಪತ್ರಿಕಾಗೋಷ್ಠಿ ಯಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಪ್ರಧಾನ ಕಾರ್ಯದರ್ಶಿ ಜಿತೇ0ದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ ಎನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಚೆಂಡೆಯಲ್ಲಿ ಪುಳಿಂಚ ಪ್ರಶಸ್ತಿ ಪ್ರದಾನ – ಕೃತಿ ಬಿಡುಗಡೆ. ‘ಧರ್ಮ ಪ್ರಸಾರಕ್ಕೆ ಯಕ್ಷಗಾನದ ಕೊಡುಗೆ ಅಮೂಲ್ಯ’: ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ‘ಭಾರತದಲ್ಲಿ ಹಿಂದೂವಾಗಿ ಹುಟ್ಟುವುದು ಪುಣ್ಯವಾಗಿದ್ದು, ಧರ್ಮ ಪ್ರಸಾರಕ್ಕೆ ಯಕ್ಷಗಾನ ಅತ್ಯಮೂಲ್ಯ ಕೊಡುಗೆ ನೀಡಿದೆ. ಯಕ್ಷಗಾನಕ್ಕೆ ಪುಳಿಂಚ ರಾಮಯ್ಯ ಶೆಟ್ಟರ ಸೇವೆ ಸ್ಮರಣೀಯವಾಗಿದ್ದು, ಆ ಪರಂಪರೆಯನ್ನು ಪುತ್ರ ಶ್ರೀಧರ ಶೆಟ್ಟಿ ಪುಳಿಂಚ ಮತ್ತವರ ಪತ್ನಿ ಮುಂದುವರಿಸುತ್ತಿರುವುದು ಶ್ಲಾಘನೀಯವಾಗಿದೆ’ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಸಂಚಾಲಕ ಕಲ್ಲಡ್ಕ ಪ್ರಭಾಕರ ಭಟ್ ಅವರು ಹೇಳಿದರು. ಅವರು ಕಲ್ಲಡ್ಕ ಸಮೀಪ ಬಾಳ್ತಿಲ ಗ್ರಾಮದ ಚೆಂಡೆಯಲ್ಲಿ ಶ್ರೀ ಕಲ್ಲುರ್ಟಿ ದೈವಸ್ಥಾನ ಹಾಗೂ ಪುಳಿಂಚ ಸೇವಾ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಬೆಜ್ಜದಗುತ್ತು ದಿ.ಪುಳಿಂಚ ರಾಮಯ್ಯ ಶೆಟ್ಟಿ ಅವರ ಸ್ಮರಣಾರ್ಥ ಬೊಳ್ನಾಡುಗುತ್ತು ದಿ.ಸರೋಜಿನಿ ರಾಮಯ್ಯ ಶೆಟ್ಟಿ ಪುಳಿಂಚ ವೇದಿಕೆಯಲ್ಲಿ ಮೇ24,ಶನಿವಾರ ನಡೆದ ಪಂಚಮ ತ್ರೈವಾರ್ಷಿಕ ‘ಪುಳಿಂಚ ಪ್ರಶಸ್ತಿ ಪ್ರದಾನ’ , ಮಂಗಳೂರು ಪುಳಿಂಚ ಚಿಟ್ಸ್(ಒಪಿಸಿ) ಪ್ರೈ.ಲಿಮಿಟೆಡ್ ನ ದಶಮ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.‘ಹಿಂದೂ ಧರ್ಮದ ನಾಶಕ್ಕೆ ನಿರಂತರವಾಗಿ ಪ್ರಯತ್ನ ನಡೆಯುತ್ತಿದ್ದು, ಪಹಲ್ಗಾಮ್ ಘಟನೆಯು ಅದಕ್ಕೊಂದು ಜ್ವಲಂತ ಉದಾಹರಣೆಯಾಗಿದೆ. ದೇಶಕ್ಕೆ ಒಳಗಿನ ಶತ್ರುಗಳು ಅಪಾಯಕಾರಿಯಾಗಿದ್ದು, ಈ ಕುರಿತು ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು. ‘ಚೆಂಡೆ ಕಲ್ಲುರ್ಟಿ’ ಕೃತಿ ಬಿಡುಗಡೆ:ಸಮಾರಂಭದಲ್ಲಿ ಲೇಖಕ – ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಬರೆದ ‘ಮಹಿಮೆಯ ಮಹಾಮಾತೆ ಚೆಂಡೆ ಕಲ್ಲುರ್ಟಿ’ ಕೃತಿಯನ್ನು ಹೊಸದಿಗಂತ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ. ಎಸ್. ಪ್ರಕಾಶ್ ಬಿಡುಗಡೆಗೊಳಿಸಿದರು. ಅಲ್ಲದೆ ಮಂಗಳೂರಿನ ಪ್ರಸಿದ್ಧ ಜ್ಯೋತಿಷಿ ಮತ್ತು ದೈವಜ್ಞರಾದ ಶಶಿ ಕುಮಾರ್ ಪಂಡಿತ್ ಅವರು ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಶಶಿರಾಜ್ ರಾವ್ ಕಾವೂರು ರಚಿಸಿದ ‘ಚೆಂಡೆದಪ್ಪೆನ ಸುಗಿಪು’ ಕನ್ನಡ – ತುಳು ಭಕ್ತಿಗೀತೆಗಳ ಧ್ವನಿ ಮುದ್ರಿಕೆಯನ್ನು ಬಿಡುಗಡೆಗೊಳಿಸಿದರು.ಉದ್ಘಾಟಕರಾದ ಕಲ್ಲಡ್ಕ ಪ್ರಭಾಕರ ಭಟ್ ಕೃತಿಕರ್ತರನ್ನು ಕ್ಷೇತ್ರದ ಪರವಾಗಿ ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮುಖ್ಯ ಅತಿಥಿಗಳಾಗಿದ್ದರು.ಪುಳಿಂಚ ಪ್ರಶಸ್ತಿ -2025 ಪ್ರದಾನ:ಪುಳಿಂಚ ಸೇವಾ ಪ್ರತಿಷ್ಠಾನವು ಕೀರ್ತಿಶೇಷ ಕಲಾವಿದ ಪುಳಿಂಚ ರಾಮಯ್ಯ ಶೆಟ್ಟಿ ಅವರ ಹೆಸರಿನಲ್ಲಿ ತ್ರೈವಾರ್ಷಿಕವಾಗಿ ನೀಡುವ ಪಂಚಮ ಪುಳಿಂಚ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು ಮತ್ತು ಮಿಜಾರು ತಿಮ್ಮಪ್ಪ ಅವರಿಗೆ ಪ್ರದಾನ ಮಾಡಲಾಯಿತು.ಕಳೆದ ವರ್ಷ ನಿಧನರಾದ ಯಕ್ಷಗಾನದ ಹಾಸ್ಯ ಕಲಾವಿದ ದಿ.ಜಯರಾಮ ಆಚಾರ್ಯ ಬಂಟ್ವಾಳ ಅವರಿಗೆ ಮರಣೋತ್ತರ ಪುಳಿಂಚ ಪ್ರಶಸ್ತಿ ನೀಡಲಾಯಿತು.ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ. 25,000/- ನಗದು, ಶಾಲು – ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ನೀಡಿ ಗಣ್ಯರು ಸನ್ಮಾನಿಸಿದರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು.ಚೆಂಡೆ ಕಲ್ಲುರ್ಟಿ ದೈವಸ್ಥಾನದ ಆಡಳಿತದಾರ ಮತ್ತು ಪುಳಿಂಚ ಸೇವಾ ಟ್ರಸ್ಟ್ ಅಧ್ಯಕ್ಷ, ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿ ಪ್ರಸ್ತಾವನೆಗೈದರು. ಕಲಾವಿದ ಸಂಜಯಕುಮಾರ್ ಶೆಟ್ಟಿ ಗೋಣಿಬೀಡು ಸಂಸ್ಮರಣಾ ಭಾಷಣ ಮಾಡಿದರು. ಟ್ರಸ್ಟ್ ಕೋಶಾಧಿಕಾರಿ ಪ್ರತಿಭಾ ಶ್ರೀಧರ ಶೆಟ್ಟಿ ವಂದಿಸಿದರು. ಯಕ್ಷಗಾನ ಅರ್ಥಧಾರಿ ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ ಸಹಕರಿಸಿದರು.ಸಾಂಸ್ಕೃತಿಕ ರಂಜನೆ:ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ‘ಕುರುಬನ ರಾಣಿ’ ಹಾಸ್ಯ ಪ್ರಸಂಗ, ‘ಬಲೆ ತೆಲಿಪುಲೆ’ ಹಾಸ್ಯ ವೈಭವ, ‘ಪುದರ್ ದೀತಿಜಿ’ ತುಳು ನಾಟಕ ಜರಗಿತು. ಬಳಿಕ ಚೆಂಡೆ ಕಲ್ಲುರ್ಟಿ ದೈವದ ಕೋಲ ಸೇವೆ ಮತ್ತು ಹರಕೆಯ ಕೋಲ ನಡೆಯಿತು.

Scroll to Top