Author name: editor

ಪ್ರಾದೇಶಿಕ ವಾರ್ತೆಗಳು

ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ, ಭಾರತದ ಮೊಟ್ಟ ಮೊದಲ ಸಂಪೂರ್ಣ ಬೀಚ್‌ ಫೇಸಿಂಗ್ ಐಷಾರಾಮಿ ಮನೆಗಳ ಯೋಜನೆ – “ರೋಹನ್ ಮರೀನಾ ಒನ್”

ಮಂಗಳೂರು: ಮೂರು ದಶಕಗಳ ಅನುಭವ ಹೊಂದಿರುವ ಭಾರತದ ಅತ್ಯಂತ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ಮಂಗಳೂರಿನ ರೋಹನ್ ಕಾರ್ಪೊರೇಷನ್, ತನ್ನ ಮಹತ್ವಾಕಾಂಕ್ಷಿ ಯೋಜನೆ – ರೋಹನ್ ಮರೀನಾ ಒನ್ ಅನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. ಭಾರತದ ರಿಯಲ್‌ ಎಸ್ಟೇಟ್‌ ಇತಿಹಾಸದಲ್ಲೇ ಒಂದು ವಿನೂತನ ಪ್ರಯೋಗವಾಗಿರುವ ರೋಹನ್ ಮರೀನಾ ಒನ್, ಅರಬ್ಬಿ ಸಮುದ್ರದ ಸುಂದರ ಕಡಲತೀರದ ದೃಶ್ಯವು ಪ್ರತಿಯೊಂದು ಅಪಾರ್ಟ್‌ಮೆಂಟ್ಗೂ ಕಾಣಿಸುವಂತೆ ಇರುವ ಉತ್ಕೃಷ್ಟ ವಸತಿ ಯೋಜನೆಯಾಗಿದೆ. ಮಂಗಳೂರಿನ ಸುರತ್ಕಲ್‌ NITK ಬೀಚ್ ರಸ್ತೆಯಲ್ಲಿರುವ ರೋಹನ್ ಮರೀನಾ ಒನ್, ಒಟ್ಟು 8.2 ಎಕರೆ ವಿಸ್ತರಿಸಿದ್ದು ಮತ್ತು ಕಡಲ ತೀರದಲ್ಲಿ ಐಷಾರಾಮಿ ಜೀವನಶೈಲಿಯನ್ನು ನೀಡಬಲ್ಲ 433 ಅಲ್ಟ್ರಾ-ಲಕ್ಷುರಿ ಅಪಾರ್ಟ್ಮೆಂಟ್‌ ಗಳನ್ನು ಹೊಂದಿದೆ. ಈ ಯೋಜನೆಯಲ್ಲಿ, 39 ಮಹಡಿಗಳಿರುವ “ದಿ ರಿಟ್ರೀಟ್” ಮತ್ತು 47 ಮಹಡಿಗಳಿರುವ “ದಿ ರಿಸಾರ್ಟ್” ಎಂಬ ಎರಡು ಟವರ್ ಗಳಿದ್ದು, ರೋಹನ್ ಮರೀನಾ ಒನ್ ಅನ್ನು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೇ ಹೊಸ ಮೈಲಿಗಲ್ಲಾಗಿ ನಿಲ್ಲುವಂತೆ ಮಾಡಿದೆ.ಕರಾವಳಿ ಜೀವನಶೈಲಿಯಲ್ಲೇ ಹೊಸ ಅಧ್ಯಾಯ:ರೋಹನ್ ಮರೀನಾ ಒನ್ ನಲ್ಲಿ ಭಾರತದಲ್ಲೇ ಮೊದಲ ಬಾರಿಗೆ, ಮನೆಮಾಲೀಕರೆಲ್ಲರೂ ಪ್ರತಿ ಮನೆಯಿಂದಲೂ ಸಾಗರದ ದೃಶ್ಯಗಳನ್ನು ಆಸ್ವಾದಿಸುವಂಥ ಐಷಾರಾಮಿ ಜೀವನವನ್ನು ಪಡೆಯಬಹುದಾಗಿದೆ. ಮನೆಗಳ ಒಳಭಾಗದ ವಿನ್ಯಾಸವೂ ಸಮುದ್ರದ ಸೌಂದರ್ಯಕ್ಕೆ ಕನ್ನಡಿ ಹಿಡಿದಂತೆ ರಚಿಸಲಾಗಿದೆ.“ರೋಹನ್‌ ಮರೀನಾ ಒನ್” ಎರಡು ಎತ್ತರದ ಟವರ್ಗಳನ್ನು ಹೊಂದಿದೆ:*ದಿ ರಿಟ್ರೀಟ್ : 39 ಮಹಡಿಗಳ ಈ ಟವರ್‌ ನಲ್ಲಿ 2, 3 ಮತ್ತು 4 BHK ಅಪಾರ್ಟ್ಮೆಂಟ್ ಗಳಿವೆ. ಪ್ರತಿಯೊಂದು ಮನೆಯನ್ನು ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ರೂಪಿಸಿದ್ದು, ಇಲ್ಲಿನ ನಿವಾಸಿಗಳಿಗೆ ಐಷಾರಾಮಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ನೀಡುತ್ತದೆ. ವಿಶಾಲ ಕಿಟಕಿಗಳು ಮತ್ತು ಬಾಲ್ಕನಿಗಳಿಂದ ಸಮುದ್ರದ ಪ್ರಶಾಂತ ಅಲೆಗಳ ದೃಶ್ಯವನ್ನು ದಿನವಿಡೀ ಆನಂದಿಸುವ ಅವಕಾಶ ದೊರೆಯುತ್ತದೆ. ಮೇಲ್ಮಹಡಿಯಲ್ಲಿರುವ ವಿಶಿಷ್ಟ ಇನ್ಫಿನಿಟಿ-ಎಡ್ಜ್ ಸ್ವಿಮ್ಮಿಂಗ್‌ ಪೂಲ್ ವಿಶ್ರಾಂತಿಯ ಅನುಭವವನ್ನು ಇಮ್ಮಡಿಗೊಳಿಸುತ್ತದೆ.*ದಿ ರಿಸಾರ್ಟ್ : 47 ಮಹಡಿಗಳ ಈ ಗೋಪುರ, ಭಾರತದ ಅತ್ಯಂತ ಐಷಾರಾಮಿ ಟವರ್‌ಗಳಲ್ಲಿ ಒಂದಾಗಿದೆ. ಇಲ್ಲಿ 2 ಮತ್ತು 3 BHKಯ ವಿಶಾಲವಾದ ನಿವಾಸಗಳ ಜೊತೆಗೆ, ಆಕರ್ಷಕ ವಾಣಿಜ್ಯ ಅವಕಾಶಗಳೂ ಲಭ್ಯವಿದೆ. ದಿ ರಿಸಾರ್ಟ್, ಉತ್ತಮ ಜೀವನಶೈಲಿಯೊಂದಿಗೆ ಸುರಕ್ಷಿತ ಹೂಡಿಕೆ ಅವಕಾಶವನ್ನೂ ಒದಗಿಸುತ್ತದೆ. ಅತ್ಯುತ್ತಮ ಸೌಲಭ್ಯಗಳು, ಪ್ರೀಮಿಯಂ ಅನುಭವ ಮತ್ತು ಲಾಭದಾಯಕ ಪ್ರಯೋಜನಗಳೊಂದಿಗೆ ಇದು ಅತ್ಯುನ್ನತ ಐಷಾರಾಮಿ ಜೀವನವನ್ನು ಖಚಿತಪಡಿಸುತ್ತದೆ.ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಅಲ್ಟ್ರಾ- ಲಕ್ಷುರಿ ಜೀವನರೋಹನ್ ಮರೀನಾ ಒನ್‌ ಕೇವಲ ಸಮುದ್ರದ ನೋಟ ಮತ್ತು ಐಷಾರಾಮಿ ಬದುಕನ್ನಷ್ಟೇ ಖಾತರಿಪಡಿಸುವುದಲ್ಲದೆ, ದಿನನಿತ್ಯದ ಜೀವನವನ್ನು ಒಂದು ಸುಂದರ ಅನುಭವವಾಗಿಸುವುದಕ್ಕಾಗಿ 83 ಉತ್ಕೃಷ್ಟ ಗುಣಮಟ್ಟದ ಸೌಲಭ್ಯಗಳನ್ನು ನೀಡುತ್ತದೆ.ಮನರಂಜನೆ: ಆಕಾಶದೆತ್ತರದ ಬ್ಯಾಂಕ್ವೆಟ್ ಹಾಲ್‌ಗಳು, ಪಾರ್ಟಿ ಲೌಂಜ್‌ಗಳು, ಡಿಸ್ಕೊಥೆಕ್, ಫೈನ್-ಡೈನಿಂಗ್ ರೆಸ್ಟೋರೆಂಟ್‌ಗಳು, ಕಾಫೆ ಹಾಗೂ ಬಿಬಿಕ್ಯೂ ಡೆಕ್ ಹಾಗೂ ಇನ್ನೂ ಹೆಚ್ಚಿನದು. ಇನ್ಫಿನಿಟಿ ಎಡ್ಜ್ ಸ್ವಿಮ್ಮಿಂಗ್ ಪೂಲ್, ಜೊತೆಗೆ ಒಲಿಂಪಿಕ್ ಗಾತ್ರದ ಈಜುಕೊಳ, ವಾಟರ್ ಜೆಟ್, ಬಬಲ್ ಜೆಟ್‌ಗಳು ಮತ್ತು ವಿಶಿಷ್ಟವಾದ ತೇಲುವ ಪೆವಿಲಿಯನ್ ನಿಮ್ಮ ಅನುಭವವನ್ನು ರಿಸಾರ್ಟ್‌ನಂತೆ ಮಾಡುತ್ತದೆ. ಕ್ರೀಡೆ ಮತ್ತು ಫಿಟ್ನೆಸ್: ಬ್ಯಾಡ್ಮಿಂಟನ್, ಸ್ಕ್ವಾಶ್ ಮತ್ತು ಟೆನಿಸ್ ಕೋರ್ಟ್‌ಗಳು, ವಿಶ್ವದರ್ಜೆಯ ಫಿಟ್ನೆಸ್ ಸೆಂಟರ್, ಮಿನಿ ಸಾಕರ್ ಮೈದಾನ ಮತ್ತು ಜಾಗಿಂಗ್ ಟ್ರ್ಯಾಕ್‌ಗಳು ಪ್ರತಿಯೊಬ್ಬ ಫಿಟ್ನೆಸ್ ಪ್ರಿಯರ ಅಗತ್ಯವನ್ನು ಪೂರೈಸುತ್ತದೆ. ಮಾತ್ರವಲ್ಲದೆ ಯೋಗ ಡೆಕ್‌ಗಳು, ಧ್ಯಾನ ಕೊಠಡಿಗಳು, ಪ್ರತ್ಯೇಕ ಪುರುಷ ಮತ್ತು ಮಹಿಳಾ ಸ್ಪಾಗಳು ಇಲ್ಲಿವೆ.ಕುಟುಂಬಗಳಿಗಾಗಿ: ಮಕ್ಕಳ ಆಟದ ವಲಯಗಳು, ಪೆಟ್ಸ್ ಪಾರ್ಕ್, ವಿಡಿಯೋ ಗೇಮ್ ರೂಂ, ಪಿಕ್ನಿಕ್ ಲಾನ್ಸ್, ವೀಕ್ಷಣಾ ಡೆಕ್‌ಗಳು, ಎಂಟರ್‌ಟೈನ್‌ಮೆಂಟ್ ಡೆಕ್‌ಗಳು, ಡೋಮ್ ಪೆವಿಲಿಯನ್‌ಗಳು, ಪಾರ್ಟಿ ಲಾನ್ಸ್, ಗ್ಲಾಸ್‌ಹೌಸ್ ಇತ್ಯಾದಿಗಳು ಅವಿಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಲು ಪರಿಪೂರ್ಣ ವಾತಾವರಣವನ್ನು ಒದಗಿಸುತ್ತವೆ“ಐಷಾರಾಮಿ ಜೀವನಶೈಲಿಯೊಂದಿಗೆ, ಕಡಲತೀರದ ಪ್ರಶಾಂತತೆ ಮತ್ತು ವಿಶ್ವದರ್ಜೆಯ ಸವಲತ್ತುಗಳ ಸಮ್ಮಿಲನವಾಗಿ “ರೋಹನ್‌ ಮರೀನಾ ಒನ್” ಅನ್ನು ನಾವು ಪರಿಚಯಿಸುತ್ತಿದ್ದು, ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ. ರೋಹನ್ ಮರಿನಾ ಒನ್ ನಮ್ಮ ಕನಸಿನ ಯೋಜನೆ, ಮತ್ತು ಈ ಯೋಜನೆ ಕರಾವಳಿಯ ಜೀವನಕ್ಕೆ ಹೊಸ ಅರ್ಥವನ್ನು ನೀಡುಲು ನಮ್ಮ ಪ್ರಯತ್ನವಾಗಿದೆ. ಪ್ರತಿಯೊಂದು ಅಪಾರ್ಟ್‌ಮೆಂಟ್‌ನಿಂದಲೂ ಅರಬ್ಬಿ ಸಮುದ್ರದ ಆಹ್ಲಾದಕರ ನೋಟ ದೊರಕುವುದು ದೇಶದಲ್ಲಿ ಇದೇ ಮೊದಲು. ಪ್ರತಿದಿನ ಪ್ರಕೃತಿಯ ಅದ್ಭುತ ನೋಟದೊಂದಿಗೆ ದಿನವನ್ನು ಆರಂಭಿಸುವ ಅವಕಾಶವನ್ನು ನೀಡುತ್ತಿರುವುದು ಮಂಗಳೂರು ನಗರಕ್ಕೆ ನಾವು ನೀಡುವ ಗೌರವ ಮತ್ತು ನಮ್ಮ ಕರಾವಳಿಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ”

ಪ್ರಾದೇಶಿಕ ವಾರ್ತೆಗಳು

ನೀಲಪದ್ಮ ಯಕ್ಷಪ್ರಶಸ್ತಿ ಪ್ರದಾನ – ನುಡಿ ನಮನ. ‘ಸಾಧಕರ ನೆನಪಿಂದ ಬದುಕು ಸ್ಮರಣೀಯ’: ಕುಕ್ಕುವಳ್ಳಿ

ಉಪ್ಪಿನಂಗಡಿ: ‘ಸಮಾಜದ ಬೇರೆ ಬೇರೆ ರಂಗಗಳಲ್ಲಿ ತಮ್ಮಿಂದಾದ ಕೊಡುಗೆ ನೀಡಿ ಗತಿಸಿ ಹೋದ ಹಿರಿಯರನ್ನು ಎಂದಿಗೂ ಮರೆಯಲಾಗದು. ಕನಿಷ್ಠಪಕ್ಷ ಅವರ ಕುಟುಂಬದವರಿಗಾದರೂ ಅದು ನೆನಪಿರಬೇಕು. ಅದರಲ್ಲೂ ಯಕ್ಷಗಾನದಂತಹ ಶ್ರೇಷ್ಠ ಕಲೆಗಾಗಿ ಶ್ರಮಿಸಿದ ಸಾಧಕರಿಗೆ ಇಡೀ ಸಮಾಜವೇ ಒಂದು ಕುಟುಂಬ. ಅಂಥವರ ನೆನಪಿಂದ ಉಳಿದವರ ಬದುಕು ಸ್ಮರಣೀಯವಾಗುತ್ತದೆ; ಅದುವೇ ಮುಂದಿನವರಿಗೆ ಮಾದರಿಯಾಗಬಲ್ಲುದು’ ಎಂದು ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಉಪ್ಪಿನಂಗಡಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಜರಗಿದ ‘ಶ್ರೀ ಮಹಾಭಾರತ ಸರಣಿ ಸುವರ್ಣ ಶತಕ ತಾಳಮದ್ದಳೆ’ ಕಾರ್ಯಕ್ರಮದ ವೇದಿಕೆಯಲ್ಲಿ ಸೆಪ್ಟೆಂಬರ್ 7ರಂದು ಹರಿಹರ ಪಲ್ಲತಡ್ಕ ದಿ‌‌.ನೀಲಾವತಿ ಮತ್ತು ಪದ್ಮನಾಭ ಕೊಂಬೋಟು ದಂಪತಿಯ ಸಂಸ್ಮರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಅರ್ಥಧಾರಿ ಗೋಪಾಲ ಶೆಟ್ಟಿ ಕಳೆಂಜ ಅವರಿಗೆ ಪ್ರಥಮ ವರ್ಷದ ‘ನೀಲಪದ್ಮ ಯಕ್ಷಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪಾತಾಳ – ಶೀನ ಶೆಟ್ಟಿ ನುಡಿ ನಮನ:ಇತ್ತೀಚೆಗೆ ನಿಧನರಾದ ಯಕ್ಷಗಾನ ರಂಗದ ಹಿರಿಯ ಸ್ತ್ರೀ ವೇಷಧಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ ಹಾಗೂ ಉಪ್ಪಿನಂಗಡಿಯ ಜನಪ್ರಿಯ ಆಯುರ್ವೇದ ಪಂಡಿತ ಮತ್ತು ಯಕ್ಷಗಾನ ಕಲಾಪೋಷಕ ವೈದ್ಯ ದಿ.ಶ್ರೀನಿವಾಸ ಶೆಟ್ಟಿ ಅವರಿಗೆ ಸಭೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು. ಶ್ರೀರಾಮಕುಂಜೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಮತ್ತು ಅರ್ಥಧಾರಿ ಗಣರಾಜ ಕುಂಬಳೆ ನುಡಿ ನಮನ ಸಲ್ಲಿಸಿದರು. ರಾಮನಗರ ಶಾರದಾ ಕಲಾ ಮಂಟಪದ ಸಂಚಾಲಕ ಉಮೇಶ ಶೆಣೈ, ಸಂತ ಆನ್ಸ್ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ದೈಹಿಕ ಶಿಕ್ಷಕ ಡಾ.ಸುರೇಶ್ ಶೆಟ್ಟಿ, ಯಕ್ಷಗಾನ ಕಲಾವಿದ ಅಂಬಾ ಪ್ರಸಾದ್ ಪಾತಾಳ, ವೈದ್ಯ ಶಾಲೆಯ ಜಗದೀಶ ಶೀನ ಶೆಟ್ಟಿ, ದೇವದಾಸ ಎಸ್.ಪಿ. ಹರಿಹರ ಅತಿಥಿಗಳಾಗಿದ್ದರು.ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿದರು. ಸಂಸ್ಮರಣಾ ಸಮಿತಿ ಸಂಚಾಲಕ ಶ್ರೀಧರ ಎಸ್.ಪಿ.ಕೃಷ್ಣಾಪುರ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ಪುಷ್ಪಲತಾ ವಂದಿಸಿದರು. ಕೊಂಬೋಟು ಕುಟುಂಬಸ್ಥರು ಹಾಗೂ ಯಕ್ಷಕಲಾ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.ತಾಳಮದ್ದಳೆ – ‘ಭೀಷ್ಮ ಸೇನಾಧಿಪತ್ಯ’:ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ನ ಸ್ವರ್ಣ ಶತಕ ಶ್ರೀ ಮಹಾಭಾರತ ಸರಣಿ ಅಂಗವಾಗಿ ದ.ಕ. ಜಿಲ್ಲೆಯ ವಿವಿಧ ಯಕ್ಷಗಾನ ತಂಡಗಳಿಂದ ಸೆ.6 ಮತ್ತು 7ರಂದು ಎರಡು ದಿನಗಳ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು. ಕೊನೆಯಲ್ಲಿ ಸರಣಿಯ 97ನೇ ಕಾರ್ಯಕ್ರಮವಾಗಿ ಸಂಘದ ಸದಸ್ಯರಿಂದ ‘ಭೀಷ್ಮ ಸೇನಾಧಿಪತ್ಯ’ ತಾಳಮದ್ದಳೆ ನೆರವೇರಿತು.ಭೀಷ್ಮನಪಾತ್ರದಲ್ಲಿ ಅತಿಥಿ ಕಲಾವಿದರಾಗಿ ಭಾಸ್ಕರ ರೈ ಕುಕ್ಕುವಳ್ಳಿ ಭಾಗವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಸೆಪ್ಟೆಂಬರ್ 11: ಸಂತ ಮದರ್ ತೆರೇಸಾರವರ ನೆನಪಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತಾ. 11-09-2025ರಂದು ಗುರುವಾರ ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ. ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಸಾಹಿತಿಗಳಾದ ಡಾ. ಕೆ. ಶರೀಫಾ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷರಾದ ಅತೀ. ವಂ. ಡಾ| ಎಲೋಶಿಯಸ್ ಪೌಲ್ ಡಿ’ಸೋಜರವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವಹಿಸಲಿದ್ದಾರೆ. ಅಂದು ಬೆಳಿಗ್ಗೆ 8.30ಕ್ಕೆ ಏಕತಾರಿ ಹಾಡುಗಾರರಾದ ನಾದಾ ಮಣಿನಾಲ್ಕೂರುರವರಿಂದ ‘ಪ್ರೀತಿಯ ಸಿಂಚನ’ ಎಂಬ ‘ಸೌಹಾರ್ದ ಗಾಯನ’ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಸಮುದಾಯದ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಹಿರಿಯ ಚೇತನ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ನಾಯಕರಾದ ಹಾಗೂ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ವಿಜೇತರಾದ ಕರಿಯ ಕೆ. ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು. ಪ್ರೀತಿ ಮತ್ತು ಸೇವೆಯ ಮೂಲಕ ಜಗತ್ತಿಗೆ ಮಹಾತಾಯಿ ಎಂದು ಗುರುತಿಸಿಕೊಂಡಿರುವ ಸಂತ ಮದರ್ ತೆರೇಸಾರವರ ವಿಚಾರ ಧಾರೆಯನ್ನು ಇಂದಿನ ಯುವಪೀಳಿಗೆಗೆ ತಿಳಿಸಿಕೊಡುವ ಮಹತ್ತರ ಜವಾಬ್ದಾರಿ ಸಮಾಜದ ಮೇಲಿದೆ. ಕಳೆದ 8 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯಲ್ಲಿ ಸರ್ವಧರ್ಮದ ಸೌಹಾರ್ದಪ್ರಿಯ ಜನತೆ, ವಿದ್ಯಾರ್ಥಿ, ಯುವಜನ, ಮಹಿಳಾ, ದಲಿತ, ಆದಿವಾಸಿ, ರೈತ, ಕಾರ್ಮಿಕ ಸಂಘಟನೆಗಳ ನಾಯಕರು, ಮಧ್ಯಮವರ್ಗದ ನೌಕರರು, ಸಾಹಿತಿಗಳು, ಪ್ರಗತಿಪರ ಚಿಂತಕರು, ಶಿಕ್ಷಣ ತಜ್ಞರು, ವಕೀಲರು, ವೈದ್ಯರು, ಬುದ್ದಿಜೀವಿಗಳನ್ನೊಳಗೊಂಡ ಜಾತ್ಯಾತೀತ ನೆಲೆಗಟ್ಟಿನ ಮನಸ್ಸುಗಳು ಸೌಹಾರ್ದ ತಂಡವಾಗಿ ವಿವಿಧ ಹಂತದ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಲಾಗುತ್ತದೆ. ಪ್ರತಿಯೊಂದು ಧರ್ಮದ ಹಬ್ಬಗಳು ಸರ್ವಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ ಸೌಹಾರ್ದ ದೀಪಾವಳಿ, ಸೌಹಾರ್ದ ಕ್ರಿಸ್‍ಮಸ್, ಸೌಹಾದ್ ಇಫ್ತಾರ್‍ಕೂಟ ಹಾಗೂ ನಾಡಹಬ್ಬ ದಸರಾವನ್ನು ಸಾಮರಸ್ಯ ದಸರವನ್ನಾಗಿ ಆಚರಿಸಲಾಗುತ್ತಿದೆ. ಮದರ್ ತೆರೇಸಾರವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ‘ಚಿಣ್ಣರ ಕಲರವ’ ಎಂಬ ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವನ್ನು ಕೂಡ ನಡೆಸಲಾಗಿದೆ. ಸೌಹಾರ್ದತೆ ಹಾಗೂ ಜನತೆಯ ಬದುಕಿನ ಪ್ರಶ್ನೆಗಳು ಎದುರಾದಾಗ ಇತರ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡು ಶಕ್ತಿಮೀರಿ ಶ್ರಮಿಸಲಾಗಿದೆ.ಈ ಹಿನ್ನೆಲೆಯಲ್ಲಿ ತಾ. 11-09-2025ರಂದು ನಗರದ ಪುರಭವನದಲ್ಲಿ ನಡೆಯುವ ಅತ್ಯಂತ ಮಹತ್ವದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಜ್ಞಾವಂತ ಜನತೆ, ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತಿದ್ದೇವೆ.ವಂದನೆಗಳೊಂದಿಗೆ,-ರೋಯ್ ಕ್ಯಾಸ್ಟಲಿನೋಅಧ್ಯಕ್ಷರುಸುನಿಲ್‍ಕುಮಾರ್ ಬಜಾಲ್ಪ್ರಧಾನ ಕಾರ್ಯದರ್ಶಿಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದವರು:*ಸಂತೋಷ್ ಡಿ’ಸೋಜ ಬಜ್ಪೆ* , ಅಧ್ಯಕ್ಷರು, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ)*ಇಲಿಯಾಸ್ ಫೆರ್ನಾಂಡಿಸ್,* ಉಪಾಧ್ಯಕ್ಷರು, ಸಂತ ಮದರ್ ತೆರೇಸಾ ವಿಚಾರ ವೇದಿಕೆ*ಮಂಜುಳಾ ನಾಯಕ್,* ಅಧ್ಯಕ್ಷರು, ಸಾಮರಸ್ಯ, ಮಂಗಳೂರು*ರಾಕೇಶ್ ಕುಂದರ್,* ದಲಿತ ಚಳುವಳಿಯ ಯುವ ನಾಯಕರು*ರೆಹಮಾನ್‍ಖಾನ್ ಕುಂಜತ್ತಬೈಲ್* , ಸಾಮಾಜಿಕ ಚಿಂತಕರು*ಸುಮತಿ ಎಸ್. ಹೆಗ್ಡೆ,* ಜಿಲ್ಲಾ ಮಹಿಳಾ ಮುಖಂಡರು*ಡೋಲ್ಫಿ ಡಿಸೋಜ**ವಿಲ್ಮಾ ಮೊಂತೆರೋ**ಜ್ಯೋತಿ*ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಮುಖಂಡರು

ಪ್ರಾದೇಶಿಕ ವಾರ್ತೆಗಳು

ಜೈಭಾರತಿ ಟ್ರೋಫಿ ದ.ಕ.ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ. ‘ಕಬಡ್ಡಿ ವಿಶ್ವ ಮಾನ್ಯತೆ ಉತ್ತಮ ಬೆಳವಣಿಗೆ’ -ವಿವೇಕ್ ಆಳ್ವ

ಮಂಗಳೂರು : ನಗರದ ಉರ್ವ ಹೊಯ್ಗೆಬೈಲಿನ ಜೈಭಾರತಿ ತರುಣ ವೃಂದದ ವಜ್ರಮಹೋತ್ಸವದ ಅಂಗವಾಗಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಾಗೂ ಮಂಗಳೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಉರ್ವ ಮಾರ್ಕೆಟ್ ಬಳಿಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಜೈಭಾರತಿ ಟ್ರೋಫಿ ದ.ಕ.ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಿತು.’ಪಂದ್ಯಾಟ ಉದ್ಘಾಟಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಅವರು ಮಾತನಾಡಿ, ಅಪ್ಪಟ ದೇಸಿಕ್ರೀಡೆಯಾಗಿರುವ ಕಬಡ್ಡಿ ಆಟಕ್ಕೆ ಇತ್ತೀಚಿನ ವರ್ಷಗಳಲ್ಲಿ ವಿಶ್ವ ಮಾನ್ಯತೆ ದೊರಕಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜೈಭಾರತಿ ತರುಣ ವೃಂದದ ಸೇವಾ ಚಟುವಟಿಕೆಗಳು ಸಮಾಜಕ್ಕೆ ಮಾದರಿಯಾಗಿದೆ ಎಂದರು.ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ದ.ಕ.ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸುಪ್ರೀತ್ ಆಳ್ವ, ಕಬಡ್ಡಿ ಅಸೋಸಿಯೇಶನ್‌ನ ಪದಾಧಿಕಾರಿಗಳಾಗಿರುವ ಗಿರಿಧರ್ ಶೆಟ್ಟಿ,ದಿನಕರ ಶೆಟ್ಟಿ, ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಇಂಜಿನಿಯರ್ ಬಾಬಾ ಅಲಂಕಾರ್, ಮುಡಾರೆ ಫೌಂಡೇಶನ್ ಅಧ್ಯಕ್ಷ ಸತೀಶ್ ಆಳ್ವ ಮುಡಾರೆ, ಉರ್ವ ಬಿಲ್ಲವ ಸಂಘದ ಅಧ್ಯಕ್ಷ ಬಿ.ಹರಿಪ್ರಸಾದ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಭಾಸ್ಕರ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಜೈಭಾರತಿ ತರುಣ ವೃಂದದ ಗೌರವಾಧ್ಯಕ್ಷ ಕೇಶವ ಕುಲಾಲ್, ಅಧ್ಯಕ್ಷ ವಿಕ್ರಮ್, ಕಾರ್ಯದರ್ಶಿಜಿತೇಂದ್ರ ದೇವಾಡಿಗ, ಜತೆ ಕಾರ್ಯದರ್ಶಿಲತೀಶ್ ದೇವಾಡಿಗ, ಕೋಶಾಧಿಕಾರಿ ಸುನಿಲ್ ದೇವಾಡಿಗ, ಕ್ರೀಡಾ ಕಾರ್ಯದರ್ಶಿ ತ್ರಿಶಾಂತ್ ಅಮೀನ್, ಜತೆ ಕ್ರೀಡಾ ಕಾರ್ಯದರ್ಶಿತಿಲಕ್‌ರಾಜ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿದರು.ಮಾಜಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮೊಂತಿ ಹಬ್ಬಕ್ಕೆ ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರ ಸಂದೇಶ

ಸಪ್ಟೆಂಬರ್ 8 ಮೇರಿ ಮಾತೆಯ ಜನನದ ಹಬ್ಬದ ದಿನವಾಗಿದೆ. ಇದು ನಮ್ಮ ಮಾತೆಯ ದಿನ. ನಮಗೆ ಸಂತಸ,ಸಡಗರ, ಸಂಭ್ರಮದ ದಿನ. ಈ ದಿನದಂದು ಪುಟಾಣಿ ಮಕ್ಕಳು ಹೂವುಗಳನ್ನು ತಂದು, ನಾವು ನಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ತಂದು ದೇವರಿಗೆ ಅರ್ಪಿಸುವಾಗ ದೇವರು ನಮಗೆ ನೀಡಿದ ಹೊಸ ಬೆಳೆ ಮತ್ತು ನಮ್ಮ ಮನೆಗಳಲ್ಲಿ ಇರುವ ಹೆಣ್ಮಕ್ಕಳು ಹಾಗೂ ಮಹಿಳೆಯರು ನಿಜವಾಗಿಯೂ ನಮ್ಮ ಕುಟುಂಬದ ಭಂಡಾರ.ಹೊಸ ಬೆಳೆ, ಮೇರಿ ಮಾತೆಯ ಜನ್ಮ ದಿನ ಹಾಗೂ ನಮ್ಮ ಕುಟುಂಬದ ಹೆಣ್ಮಕ್ಕಳು- ಈ ಮೂವರ ಆರೈಕೆ ಮಾಡಲು ದೇವರು ನಮಗೆ ವಿಶೇಷ ಆಹ್ವಾನ ನೀಡಿದ್ದಾರೆ. ಈ ಆಹ್ವಾನಕ್ಕೆ ಓಗೊಟ್ಟು ಮೇರಿ ಮಾತೆಯ ಜನ್ಮ ದಿನ ಆಚರಿಸುವ ಸಂದರ್ಭ ಮಾತೆಗೆ ನೀಡುವ ಗೌರವ ಮರಳಿ ನಮಗೆ ಲಭಿಸುತ್ತದೆ.ಈ ಹಬ್ಬದ ಜತೆಗೆ ಕ್ಯಾಥೋಲಿಕ್ ಧರ್ಮ ಸಭೆಯು ಇನ್ನೊಂದು ವಿಶೇಷ ಹಬ್ಬವನ್ನು ಆಚರಿಸುತ್ತಿದೆ. ಸಪ್ಟೆಂಬರ್ 1 ರಿಂದ ಅಕ್ಟೋಬರ್ 4 ರ ವರೆಗೆ ಸಂತ ಫ್ರಾನ್ಸಿಸ್ ಆಸಿಸಿ ಅವರ ಹಬ್ಬದ ತನಕದ ಕಾಲವನ್ನು ಸೃಷ್ಟಿಯ ಕಾಲ ಎಂದು ಆಚರಿಸಲಾಗುತ್ತದೆ. ಈ ಸೃಷ್ಟಿಯ ಕಾಲದ ಆಚರಣೆಯ ಸಂದರ್ಭದಲ್ಲಿಯೇ ಮೇರಿ ಮಾತೆಯ ಜನ್ಮ ದಿನಾಚರಣೆ ಕೂಡಾ ಬರುವುದರಿಂದ ನಮ್ಮ ಮಂಗಳೂರಿನ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಹೊಸ ಬೆಳೆಗೆ, ಹೆಣ್ಮಕ್ಕಳಿಗೆ ಹಾಗೂ ಕುಟುಂಬದ ಏಕತೆಗೆ ಗಮನ ಹರಿಸುವುದರಿಂದ ನಮ್ಮ ಸಂಭ್ರಮ ಎರಡು ಪಟ್ಟಾಗುತ್ತದೆ.ಈ ಹಬ್ಬದ ಸಂದರ್ಭ ವಿಶೇಷವಾಗಿ ಸಮಗ್ರ ಸೃಷ್ಟಿಯ ಸಂರಕ್ಷಣೆ ಮಾಡಲು, ಪ್ರಾರ್ಥನೆ ಸಲ್ಲಿಸಲು, ಬಲಿ ಪೂಜೆಯನ್ನು ಅರ್ಪಿಸಲು ಕ್ರೈಸ್ತ ಧರ್ಮ ಸಭೆ ಕರೆ ನೀಡಿರುವುದರಿಂದ ನಾವು ಪ್ರಾರ್ಥನೆಯ ಮೂಲಕ ಹಾಗೂ ನಮ್ಮ ಸೃಷ್ಟಿಯ ಸಂರಕ್ಷಣೆಯ ಮೂಲಕ ಪರಸ್ಪರರ ಸೇವೆ ಮಾಡಲು , ಗೌರವಿಸಲು , ಪ್ರೀತಿಯಿಂದ ಸೃಷ್ಟಿಯನ್ನು ಉಳಿಸಲು ಹಾಗೂ ಇನ್ನಷ್ಟು ಅಧಿಕ ಪ್ರಮಾಣದಲ್ಲಿ ಅದರ ಆರೈಕೆ ಮಾಡಲು ದೇವರು ನಮಗೆ ಅನುಗ್ರಹಿಸಲಿ. ಸೃಷ್ಟಿಯನ್ನು ಉಳಿಸೋಣ ಹಾಗೂ ಈ ಸೃಷ್ಟಿಯನ್ನು ಪ್ರೀತಿಸೋಣ ಮತ್ತು ಈ ಸೃಷ್ಟಿಗಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸೋಣ.-ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾಧರ್ಮಾಧ್ಯಕ್ಷರು,ಮಂಗಳೂರು ಧರ್ಮ ಪ್ರಾಂತ್ಯ.

ಪ್ರಾದೇಶಿಕ ವಾರ್ತೆಗಳು

ಬಂಟರ ಸಂಘ ಬಂಟ್ವಾಳ ತಾಲೂಕು ಇದರ ಮಹಿಳಾ ಘಟಕದ ಅಧ್ಯಕ್ಷರಾಗಿ ಸುಜಾತಾ ಪಿ. ರೈ ಆಯ್ಕೆ

ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು‌ ಇದರ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಸುಜಾತ ಪಿ.ರೈ ಕಲ್ಲಡ್ಕ ಅವರು ಗೆಲುವು ಸಾಧಿಸಿದ್ದಾರೆ.ಬಂಟ್ವಾಳ ಮಹಿಳಾ ಬಂಟರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸುಜಾತ ಪಿ.ರೈ ಹಾಗೂ ಸಂಧ್ಯಾರೈ ಬೆಳ್ಳೂರು ಅವರ ನಡುವೆ ಪ್ರಬಲ ಪೈಪೋಟಿ ನಡೆದಿದ್ದು,ಕೊನೆಗೆ ಚುನಾವಣೆಯ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.ಸುಜಾತ ಪಿ.ರೈ ಅವರು ಅಭೂತಪೂರ್ವ ಗೆಲುವು ಸಾಧಿಸಿ ನೂತನ ಅಧ್ಯಕ್ಷರಾಗಿ‌ ಆಯ್ಕೆಯಾಗಿದ್ದಾರೆ.ಈ ಹಿಂದೆ‌ ಇವರು‌ ಸಮಿತಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.ಉಳಿದಂತೆ ಉಪಾಧ್ಯಕ್ಷ ರಾಗಿ ಜ್ಯೋತಿ ರೈ ಮಾಣಿ,ಕಾರ್ಯದರ್ಶಿಯಾಗಿ ಮಂದಾರತಿ ಶೆಟ್ಟಿ ಸಿದ್ದಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ರೂಪ‌ಅರಳ ,ಜತೆ ಕೋಶಾಧಿಕಾರಿಯಾಗಿ ಶೋಭಾ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಭಾರತದಲ್ಲಿ ಇಂದು(ಸೆ.7) ಖಗ್ರಾಸ ಚಂದ್ರಗ್ರಹಣ

ಈ ಗ್ರಹಣ ರಾತ್ರಿ 8.50ಕ್ಕೆ ಆರಂಭವಾಗಿ ಮಧ್ಯರಾತ್ರಿ 12.22ರವರೆಗೆ ಇರುತ್ತದೆ.ಖಗೋಳ ತಜ್ಞರ ಪ್ರಕಾರ, ಬರಿಗಣ್ಣಿನಿಂದ ಈ ಗ್ರಹಣ ನೋಡಬಹುದು ಮತ್ತು ಈ ಗ್ರಹಣದ ವಿವಿಧ ಹಂತಗಳು ಒಟ್ಟು 5 ಗಂಟೆ 27 ನಿಮಿಷಗಳ ಕಾಲ ಇರುತ್ತದೆ.

ಪ್ರಾದೇಶಿಕ ವಾರ್ತೆಗಳು

ನೂರುದ್ದೀನ್ ಜುಮಾ ಮಸೀದಿ : ಬೃಹತ್ ಮೀಲಾದ್ ರ‍್ಯಾಲಿ

ಬಂಟ್ವಾಳ: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯಲ್ಲಿ ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ (ಸ. ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಮೀಲಾದ್ ರ‍್ಯಾಲಿ ನಡೆಯಿತು.ರ‍್ಯಾಲಿಯ ಉದ್ಘಾಟನೆಯನ್ನು ಖತೀಬ್ ಅಸೀಫ್ ದಾರಿಮಿ ನೆರವೇರಿಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿದ್ದಿಕ್ ಅಬೂಬಕ್ಕರ್, ನೂರುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮೊಹಮ್ಮದ್ ಸಜೀಪ, ಕಾರ್ಯದರ್ಶಿ ಅಬೂಬಕ್ಕರ್ ಮೆಲ್ಕರ್, ಮೊಹಮ್ಮದ್ ಹನೀಫ್, ಮೊಹಮ್ಮದ್ ಸಿದ್ದಿಕ್, ಅಬ್ದುಲ್ ಮಜೀದ್ ಬೋಗೋಡಿ, ಇಸ್ಮಾಯಿಲ್ ಮುಸ್ಲಿಯಾರ್, ನಾಸಿರ್ ಅಸ್ಲಾಮಿ, ಅಬ್ದುರಹ್ಮಾನ್ ಮುಸ್ಲಿಯಾರ್, ಅನ್ಸಾರ್ ಬೋಗೋಡಿ, ಝಕಾರಿಯ ಬೋಗೋಡಿ, ಫಾರೂಕ್ ಎಬಿಸಿ ಮತ್ತಿತರರು ಉಪಸ್ಥಿತರಿದ್ದರು.

Scroll to Top