Author name: editor

ಪ್ರಾದೇಶಿಕ ವಾರ್ತೆಗಳು

ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಸಂಪನ್ನ

ಉಡುಪಿಯಲ್ಲಿ ನಡೆದ ಕ್ರೀಡಾ ಹಬ್ಬ — Big Beaters ಅಂಬಲ್ಪಾಡಿ ತಂಡ ಚಾಂಪಿಯನ್, Malsi Smashers ರನ್ನರ್-ಅಪ್ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಅಕ್ಟೋಬರ್ 11 ರಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (Torpedoes Badminton Premier League) ಭರ್ಜರಿಯಾಗಿ ನೆರವೇರಿತು. ತೀರ್ಥಹಳ್ಳಿ, ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ 12 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದವು.ಫೈನಲ್ ಪಂದ್ಯದಲ್ಲಿ Big Beaters ಅಂಬಲ್ಪಾಡಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಕೈಸೇರಿಸಿತು. Malsi Smashers ತಂಡ ರನ್ನರ್-ಅಪ್ ಆಗಿ ತೃಪ್ತಿಪಟ್ಟಿತು.ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅತ್ಯಂತ ಶಿಸ್ತಿನೊಂದಿಗೆ, ಉತ್ತಮ ಕ್ರೀಡಾ ಸೌಹಾರ್ದತೆಯನ್ನು ಉತ್ತೇಜಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಆಟಗಾರರು ಮತ್ತು ತಂಡದ ಪ್ರತಿನಿಧಿಗಳು ಈ ಕ್ರೀಡಾಕೂಟದ ಶಿಸ್ತು, ವ್ಯವಸ್ಥೆ ಹಾಗೂ ಆಯೋಜನೆಯ ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು. ಕ್ರೀಡಾಪಟುಗಳ ಶ್ರಮ, ತಂಡಗಳ ಸಮ್ಮಿಲನ ಮತ್ತು ಪ್ರೇಕ್ಷಕರ ಉತ್ಸಾಹ ಕಾರ್ಯಕ್ರಮಕ್ಕೆ ವಿಶೇಷ ಕಳೆ ತುಂಬಿತು. ಭಾಗವಹಿಸಿದ ಎಲ್ಲಾ ಆಟಗಾರರು, ತಂಡದ ಪ್ರತಿನಿಧಿಗಳು ಹಾಗೂ ಕ್ರೀಡಾಭಿಮಾನಿಗಳಿಗೆ ಆಯೋಜಕರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.ಈ ಕ್ರೀಡಾಕೂಟದ ಯಶಸ್ಸಿನ ಹಿಂದೆ ಗೌತಮ್ ಶೆಟ್ಟಿ ಮತ್ತು ಅವರ ಸಹ ತಂಡದ ಶ್ರಮ ಅಚ್ಚಳಿಯಾಗಿದೆ. ಅವರ ನೇತೃತ್ವದಲ್ಲಿ ನಡೆದ ಈ ಪ್ರೀಮಿಯರ್ ಲೀಗ್ ಉಡುಪಿ ಜಿಲ್ಲೆಯ ಬ್ಯಾಡ್ಮಿಂಟನ್ ಕ್ರೀಡೆಗೆ ಹೊಸ ಪ್ರೇರಣೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯುವ ಪ್ರತಿಭೆಗಳು ಹೊರಹೊಮ್ಮಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.ಸಂಪೂರ್ಣ ಕಾರ್ಯಕ್ರಮವನ್ನು Sports Kannada ವಾಹಿನಿ ನೇರ ಪ್ರಸಾರ ಮಾಡಿತ್ತು.

ಪ್ರಾದೇಶಿಕ ವಾರ್ತೆಗಳು

ಎನ್ ನಾಗೇಂದ್ರ ಅವರಿಗೆ ವಿಶ್ವೇಶ್ವರಯ್ಯ ಇಂಟರ್ನ್ಯಾಷನಲ್ ಪ್ರಶಸ್ತಿ

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್,ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು,ಇವರ ಸಹ ಯೋಗದೊಂದಿಗೆ ದಿ. 16.10.2025 ರಂದು ನಡೆದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನ ಕಾರ್ಯಕ್ರಮದಲ್ಲಿ ಶ್ರೀ ಎನ್. ನಾಗೇಂದ್ರ ರವರ ಗಾಯನ ಕ್ಷೇತ್ರ ಹಾಗೂ ಬಹುಮುಖ ಪ್ರತಿಭೆ ಸಾಧನೆ ಇವುಗಳನ್ನ ಪರಿಗಣಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಮಾಜಿ ಲೋಕಾಯುಕ್ತರು ಹಾಗೂ ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಆದ ಡಾ. ಏನ್ ಸಂತೋಷ್ ಹೆಗ್ಡೆ ರವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿರುತ್ತಾರೆ.ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್,ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು,ಡಾ. ಎಮ್ ಎಸ್ ಮುತ್ತುರಾಜ್, ಕರ್ನಾಟಕ ಸವಿತಾ ಸಮಾಜ ಅಧ್ಯಕ್ಷರು, ಶ್ರೀ ಶ್ರೀ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು ಅಥಣಿ, ಶ್ರೀ ಶ್ರೀ ರಮಾನಂದ ಗುರೂಜಿ, ದೊಡ್ಡನಗುಡ್ಡೆ ಉಡುಪಿ ಹಾಗೂ ಎಸ್ ಜಿ ನಂಜಯ್ಯನಮಠ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಕರ್ನಾಟಕ ಸರ್ಕಾರ,ಇವರು ಹಾಜರಿರುತ್ತಾರೆ. ಈ ಕಾರ್ಯಕ್ರಮ ಅಕ್ಟೋಬರ್ 15 ರಂದು ನವ ದೆಹಲಿಯ ನೆಹರು ಭವನದಲ್ಲಿ ಜರುಗಬೇಕಾಗಿತ್ತು ಸರ್ಕಾರಿ ಕಾರ್ಯಕ್ರಮಗಳ ನಿಮಿತ್ತ ಕಾರಣದಿಂದಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಮುಂದೂಡಲಾಗಿತ್ತು

ಪ್ರಾದೇಶಿಕ ವಾರ್ತೆಗಳು

ಪ್ರಯತ್ನ, ಹೋರಾಟಗಳಿಂದ ಯಶಸ್ಸು ಸಾಧ್ಯ- ಎಂಎಲ್‌ಸಿ ಐವನ್

ಮಂಗಳೂರು- ಕೆಲಸಗಳು ಸುಲಭದಲ್ಲಿ ಆಗೋದಿಲ್ಲ. ಇದಕ್ಕೆ ನಿರಂತರವಾದ ಹೋರಾಟ, ಪ್ರಯತ್ನಗಳ ಜತೆಗೆ ಎಲ್ಲರ ಒಗ್ಗಟ್ಟುತನ ಇದ್ದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.ಅವರು ಶುಕ್ರವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಮಂಗಳೂರು ಜು.1,2022ರಿಂದ ಜು.31,2024ರ ಅವಧಿಯಲ್ಲಿ ನಿವೃತ್ತರಾದ ಸರಕಾರಿ ನೌಕರರ ರಾಜ್ಯ ಕಾರ‍್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಸಿಎಂ ಮನೆ ಮುಂದೆ ಧರಣಿಗೆ ಚಿಂತನೆ: ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಇದರ ರಾಜ್ಯ ಮಹಾಪ್ರಧಾನ ಸಂಚಾಲಕ ಡಾ.ಎಂ.ಪಿ.ಎ ಷಣ್ಮುಖಯ್ಯ ಮಾತನಾಡಿ, ಇದು ಸರಕಾರ ಮಾಡಿದ ಅನ್ಯಾಯವಲ್ಲ. ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಅಧ್ಯಕ್ಷ ಸಿ.ಎಚ್.ಷಡಕ್ಷರಿ ಮತ್ತು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಎಲ್. ಭೈರಪ್ಪ ಅವರು 7ನೇ ವೇತನ ಆಯೋಗದ ವರದಿ ಒಪ್ಪಿ ಮಂಜೂರು ಮಾಡಿದ ಮಹಾತ್ಮರು ಅವರಿಂದ ನಾವು ಹಿರಿಯ ನಾಗರಿಕರು ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗಿ ಬಂತು. ನವೆಂಬರ್‌ನಲ್ಲಿ ಮೈಸೂರಿನ ಸಿಎಂ ಮನೆ ಮುಂದೆ ನಿವೃತ್ತ ಸರಕಾರಿ ನೌಕರರಿಂದ ಧರಣಿ ಮಾಡುವ ಜತೆಗೆ ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುವ ಕರ‍್ಯ ಮಾಡಲಾಗುತ್ತದೆ ಎಂದರು.ಪರಿಷ್ಕೃತ ಆದೇಶ ನೀಡಿ: ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಮಂಗಳೂರು ಇದರ ಜಿಲ್ಲಾ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಮಾತನಾಡಿ, ಸರಿಸುಮಾರು 25-40 ವರ್ಷಗಳ ಕಾಲ ಸರಕಾರಿಯ ನಾನಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದಂತಹ ನೌಕರರಿಗೆ ಸಂಧ್ಯಾಕಾಲದಲ್ಲಿ ಆರ್ಥಿಕವಾಗಿ ವಂಚಿತರನ್ನಾಗಿ ಮಾಡುವುದು ಸರಿಯಲ್ಲ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಪೂರ್ಣ ಪ್ರಮಾಣದ ವೇತನ ಪಡೆಯುತ್ತಿದ್ದಾರೆ. ನಿವೃತ್ತ ನೌಕರರ ಮೇಲೆ ಯಾಕೆ ಈ ತಾರತಮ್ಯ ಮಾಡಲಾಗುತ್ತಿದೆ ಎಂದರು.ಈ ಸಂದರ್ಭ ರಾಜ್ಯ ಸಂಚಾಲಕರಾದ ಅಶೋಕ ಎಂ. ಸಜ್ಜನ, ಶಂಕರಪ್ಪ ಲಮಾಣಿ, ಎಸ್.ಬಿ. ಬಿಸೇರೊಟ್ಟಿ, ಮಹಾಂತೇಶ ವಿ. ಹಿರೇಮಠ ಸೇರಿದಂತೆ ರಾಜ್ಯದ 31 ಜಿಲ್ಲೆಗಳಿಂದ ಬಂದ ಪ್ರಧಾನ ಸಂಚಾಲಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಾದಗಿರಿಯ ಬೀಮಣ್ಣ ಪ್ರಾರ್ಥಿಸಿದರು. ವಿಜಯನಗರದ ಹುಳು ಬಸಪ್ಪ ವಂದಿಸಿದರು. ಮಂಡ್ಯದ ನಾರಾಯಣ ಸ್ವಾಮಿ ಕಾರ‍್ಯಕ್ರಮ ನಿರೂಪಿಸಿದರು. ನಿವೃತ್ತ ಸರಕಾರಿ ನೌಕರರ ಸಮಸ್ಯೆಗೆ ಪರಿಹಾರ ಕೊಡಿಸಲು ಆಗ್ರಹಜು.1, 2022ರಿಂದ ಜು.31,2024 ನೌಕರರಿಗೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕಾಲ್ಪನಿಕವಾಗಿ ವೇತನ ಪರಿಷ್ಕರಣೆ ಮಾಡಿ ಆದೇಶ ಮಾಡಲಾಗಿದೆ. ಆದರೆ ನಗದು ರೂಪದಲ್ಲಿ ಆ.1, 2024 ರಿಂದ ಅನ್ವಯವಾಗುವಂತೆ ಆದೇಶ ಮಾಡಿರುವುದರಿಂದ ಈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ನಿವೃತ್ತಿ ಪಿಂಚಣಿ ಹೊಸ ವೇತನದಂತೆ ನಿಗದಿ ಪಡಿಸಲು ಆದೇಶ ಮಾಡಿರುವುದರಿಂದ ಡಿ.ಸಿ.ಆರ್.ಜಿ.. ಕಮ್ಯುಟೇಶನ್, ಇ.ಎಲï. ನಗದೀಕರಣ ಸೌಲಭ್ಯಗಳನ್ನು 6 ನೇ ವೇತನದ ಆಯೋಗದ ಅಡಿ ಪಡೆಯುತ್ತಿದ್ದ ಮೂಲ ವೇತನದ ಮೇಲೆ ಪಾವತಿಸುವುದರಿಂದ ಸುಮಾರು 26,500 ನಿವೃತ್ತ ನೌಕರರು ಆರ್ಥಿಕವಾಗಿ ವಂಚಿತರಾಗುತ್ತಾರೆ ಎನ್ನುವುದು ನಿವೃತ್ತ ಸರಕಾರಿ ನೌಕರರ ಆಳಲು ಇದಕ್ಕೆ ರಾಜ್ಯದ ಸಿಎಂ ಪರಿಹಾರ ಕೊಡಬೇಕು ಎನ್ನುವುದು ಇವರ ಆಗ್ರಹ.….ಚಿತ್ರ: 17ಎಂ-ಸರಕಾರಿನಿವೃತ್ತರಾದ ಸರಕಾರಿ ನೌಕರರ ರಾಜ್ಯ ಕಾರ‍್ಯಕಾರಿಣಿ ಸಭೆಯ ಉದ್ಘಾಟನೆ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮನಾಭ ಕೋಟ್ಯಾನ್

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಮಂಗಳೂರು ಉತ್ತರ ವಿಧಾನ ಸಭೆ ಕ್ಷೇತ್ರದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಪದ್ಮನಾಭ ಕೋಟ್ಯಾನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ

ಪ್ರಾದೇಶಿಕ ವಾರ್ತೆಗಳು

ದ.ಕ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ವಾರ್ಷಿಕ ಸಭೆ: ಮಾನವೀಯ ಸೇವೆ ರೆಡ್‌ಕ್ರಾಸ್ ಸಂಸ್ಥೆಯ ಗುರಿ-ದ.ಕ.ಜಿಲ್ಲಾಧಿಕಾರಿ ದರ್ಶನ್.ಎಚ್.ವಿ.

ಮಂಗಳೂರು : ರಕ್ತದಾನ, ಆರೋಗ್ಯ ಕಾಳಜಿ, ವಿಪತ್ತು ಪರಿಹಾರ ಸಹಿತ ಹಲವು ಸೇವಾ ಕಾರ್ಯಗಳ ಮೂಲಕ ರೆಡ್‌ಕ್ರಾಸ್ ಸಮಾಜಕ್ಕೆ ನೆರವಾಗುತ್ತಿದೆ. ವಿಶ್ವದಾದ್ಯಂತ ರೆಡ್‌ಕ್ರಾಸ್ ಪಸರಿಸಿದ್ದು ಮಾನವೀಯ ಸೇವೆಯೇ ಸಂಸ್ಥೆಯ ಗುರಿಯಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ, ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ದರ್ಶನ್.ಎಚ್.ವಿ.ಹೇಳಿದರು.ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ ಭವ್ಯ ಶತಮಾನೋತ್ಸವ ಕಟ್ಟಡದ ನಿರ್ಮಾಣ ಸಹಿತ ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದಕಾರ್ಯ ಚಟುವಟಿಕೆ ರಾಜ್ಯಕ್ಕೆ ಮಾದರಿಯಾಗಿದೆ’ ಎಂದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ‘ ದ.ಕ.ಜಿಲ್ಲಾಡಳಿತ, ದಾನಿಗಳು ಹಾಗೂ ರೆಡ್‌ಕ್ರಾಸ್ ಸದಸ್ಯರ ನೆರವಿನಿಂದ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ನಿರ್ಮಾಣವಾಗಿರುವುದು ಹೆಮ್ಮೆ ತಂದಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಇತರ ಆರೋಗ್ಯ ಸಮಸ್ಯೆ ಸಂಬಂಧಿಸಿ ದಾಖಲಾದವರಿಗೆ ಅವಶ್ಯ ಇದ್ದರೆ ರೆಡ್‌ಕ್ರಾಸ್ ಬ್ಲಡ್‌ಬ್ಯಾಂಕ್‌ನಿಂದ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮಾಹಿತಿ ಒದಗಿಸಲು ರೆಡ್‌ಕ್ರಾಸ್‌ನಿಂದ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ ಎಂದರು.ರೆಡ್‌ಕ್ರಾಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಕಟ್ಟಡ ನಿರ್ಮಣಕ್ಕೆ ನೆರವಾದ ದಾನಿಗಳನ್ನು ಮತ್ತು ಆಡಳಿತ ಮಂಡಳಿಯ ಮಾಜಿ ನಿರ್ದೇಶಕರನ್ನು ಗೌರವಿಸಲಾಯಿತು.ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಘಟಕ ಕಾರ್ಯ ನಿರ್ವಹಣೆಗಾಗಿ ಸುಳ್ಯ ಘಟಕದ ಅಧ್ಯಕ್ಷ ಪಿ.ಬಿ. ಸುಧಾಕರ ರೈ (ಪ್ರಥಮ) ಹಾಗೂ ಬೆಳ್ತಂಗಡಿ ಘಟಕದ ಹರಿದಾಸ್.ಎಸ್. ಎಂ. (ದ್ವಿತೀಯ) ಪುರಸ್ಕಾರ ಸ್ವೀಕರಿಸಿದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ವರದಿ ವಾಚಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಡಾ.ಸತೀಶ್ ರಾವ್, ಖಜಾಂಚಿ ಮೋಹನ್ ಶೆಟ್ಟಿ ಕೆ., ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಡಾ.ಬಿ. ಸಚ್ಚಿದಾನಂದ ರೈ, ಗುರುದತ್.ಎಂ. ನಾಯಕ್, ವಿಟ್ಟಲ ಎ., ಡಾ.ಸುಮನಾ ಬಿ. ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಅ.17ರಿಂದ ಸೃಜನಶೀಲ ಬರೆವಣಿಗೆ ಕಾರ್ಯಾಗಾರ

ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದ.ಕ.ಜಿಲ್ಲಾ ಸಮಿತಿ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇದರ ಮಂಗಳಗಂಗೆ ವಾರ್ಷಿಕ ಸಂಚಿಕೆ ವತಿಯಿಂದ ಅ.17 ಮತ್ತು 18 ರಂದು ವಿ.ವಿ.ಕಾಲೇಜಿನ ಶಿವರಾಮ ಕಾರಂತ‌ ಸಭಾಂಗಣದಲ್ಲಿಸೃಜನೇತರ ಬರೆವಣಿಗೆಕಾರ್ಯಾಗಾರ ನಡೆಯಲಿದೆ.ಅ.17ರಂದು ಮಧ್ಯಾಹ್ನ 2ಕ್ಕೆ ಬೆಂಗಳೂರು ಉತ್ತರ ವಿ.ವಿ.ಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಮಂಗಳೂರು ವಿ.ವಿ.ಯ ಕುಲಪತಿ ಪ್ರೊ. ಪಿ. ಎಲ್ ಧರ್ಮ ಅಧ್ಯಕ್ಷತೆ ವಹಿಸಲಿದ್ದಾರೆ.ಮಂಗಳೂರು ವಿ.ವಿ.ಯ ಕುಲ‌ಸಚಿವ ಕೆ.ರಾಜು‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿ.ವಿ.ಕಾಲೇಜು ಪ್ರಾಂಶುಪಾಲ ಪ್ರೊ.ಗಣಪತಿ ಗೌಡ, ಅಭಾಸಾಪ‌ ದ.ಕ.ಜಿಲ್ಲಾಧ್ಯಕ್ಷ ಪಿ. ಬಿ. ಹರೀಶ್ ರೈ‌ ಉಪಸ್ಥಿತರಿರುವರು.ಹಿರಿಯ‌ ಲೇಖಕ‌ ಡಾ.ಚ.ನ. ಶಂಕರ್ ರಾವ್, ‌ಪತ್ರಕರ್ತರಾದ ಆರ್.ಸಿ.ಭಟ್ , ಗುರುಪ್ರಸಾದ್ ಟಿ.ಎನ್. ಸಂಪನ್ಮೂಲ‌ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.ಅಭಾಸಾಪ‌ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರು ಸಮಾರೋಪ ಭಾಷಣ ಮಾಡಲಿದ್ದಾರೆ‌ ಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಹಿಂಸಾತ್ಮಕ ರಾಜಕೀಯ ಖಂಡನೀಯ: ಪ್ರೊಫ್‌ಕಾನ್

ಮಂಗಳೂರು, ಅಕ್ಟೋಬರ್ 11, 2025 – ವಿಸ್ಡಮ್ ಇಸ್ಲಾಮಿಕ್ ಸ್ಟುಡೆಂಟ್ಸ್ ಆರ್ಗನೈಸೇಶನ್ ರಾಜ್ಯ ಸಮಿತಿ ಮಂಗಳೂರಿನಲ್ಲಿ ಆಯೋಜಿಸಿದ 29ನೇ ‘ಪ್ರೊಫ್‌ಕಾನ್’ ಜಾಗತಿಕ ವೃತ್ತಿಪರ ವಿದ್ಯಾರ್ಥಿಗಳ ಸಮ್ಮೇಳನವು ದೇಶದಾದ್ಯಂತದ ವೃತ್ತಿಪರ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೇರೂರುತ್ತಿರುವ ಅಪ್ರಜಾಸತ್ತಾತ್ಮಕ ಪ್ರವೃತ್ತಿಗಳು ಮತ್ತು ಹಿಂಸಾತ್ಮಕ ರಾಜಕೀಯವನ್ನು ತೀವ್ರವಾಗಿ ಖಂಡಿಸಿ, ಇಂತಹ ಪ್ರವೃತ್ತಿಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಒಗ್ಗೂಡಿ ಪ್ರತಿರೋಧಿಸಬೇಕೆಂದು ಮನವಿ ಮಾಡಿತು.ಶೈಕ್ಷಣಿಕ ಸಂಸ್ಥೆಗಳು ಜ್ಞಾನ ಮತ್ತು ಸಾಮಾಜಿಕ ಪ್ರಜ್ಞೆಯ ಕೇಂದ್ರಗಳಾಗಬೇಕಾದರೂ, ದುರದೃಷ್ಟವಶಾತ್ ಹಿಂಸೆ ಮತ್ತು ವಿಭಜನೆಯ ವೇದಿಕೆಗಳಾಗುತ್ತಿವೆ ಎಂದು ಸಮ್ಮೇಳನ ವ್ಯಕ್ತಪಡಿಸಿತು. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಮಾದರಿಗಳಾಗಬೇಕಾದ ಕ್ಯಾಂಪಸ್‌ಗಳಲ್ಲಿನ ಹಿಂಸಾತ್ಮಕ ರಾಜಕೀಯವನ್ನು ಸರ್ಕಾರಗಳು ಪ್ರೋತ್ಸಾಹಿಸಬಾರದು ಎಂದು ಒತ್ತಾಯಿಸಿತು. ಕ್ಯಾಂಪಸ್‌ಗಳಲ್ಲಿ ಶಾಂತಿ ಮತ್ತು ಸಹಕಾರದ ಮಾದರಿಗಳನ್ನು ಸ್ಥಾಪಿಸುವ ಅಗತ್ಯವನ್ನು ಸಭೆ ಒತ್ತಿ ಹೇಳಿತು.ಪ್ರಜಾಸತ್ತೆ ನಿರ್ಣಾಯಕ ತಿರುವಿನಲ್ಲಿದೆ: ಮಾಜಿ ಮುಖ್ಯ ಚುನಾವಣಾ ಆಯುಕ್ತರುಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಡಾ. ಎಸ್.ವೈ. ಖುರೈಶಿ ಅವರು, ಜಾಗತಿಕ ಮಟ್ಟದಲ್ಲಿ ಮತ್ತು ವಿಶೇಷವಾಗಿ ಭಾರತದಲ್ಲಿ ಪ್ರಜಾಸತ್ತೆ ನಿರ್ಣಾಯಕ ತಿರುವಿನಲ್ಲಿದೆ ಎಂದು ತಿಳಿಸಿದರು.“ಕಳೆದ ಮೂರು ದಶಕಗಳಿಗಿಂತ ಹೆಚ್ಚು ಜನರು ಈಗ ಸರ್ವಾಧಿಕಾರಿ ಆಡಳಿತಗಳ ಅಡಿಯಲ್ಲಿ ವಾಸಿಸುತ್ತಿದ್ದಾರೆ. ಪ್ರಜಾಸತ್ತಾತ್ಮಕ ರಾಷ್ಟ್ರಗಳು ಬಳಲಿಕೆಗೊಂಡ ಸ್ಥಿತಿಯಲ್ಲಿವೆ. ಮತದಾರರ ಭಾಗವಹಿಸುವಿಕೆ ಕುಸಿಯುತ್ತಿದೆ ಮತ್ತು ಸಾಂವಿಧಾನಿಕ ಸಂಸ್ಥೆಗಳಲ್ಲಿನ ನಂಬಿಕೆ ಕ್ಷೀಣಿಸುತ್ತಿದೆ. ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವಾದ ಭಾರತಕ್ಕೆ ಇದರಲ್ಲಿ ನಿರ್ಣಾಯಕ ಪಾತ್ರ ಮತ್ತು ಜವಾಬ್ದಾರಿ ಇದೆ,” ಎಂದು ಡಾ. ಖುರೈಶಿ ಅವರು ಹೇಳಿದರು.ಫೆಡರಲ್ ವ್ಯವಸ್ಥೆಗಳನ್ನು ದುರ್ಬಲಗೊಳಿಸುವುದು, ರಾಜಕೀಯ ಪಕ್ಷಗಳೊಳಗಿನ ಆಂತರಿಕ ಪ್ರಜಾಸತ್ತೆ ದುರ್ಬಲಗೊಳ್ಳುವುದು, ಮಾಧ್ಯಮ ಸ್ವಾತಂತ್ರ್ಯ ಕುಸಿಯುವುದು, ನಕಲಿ ಸುದ್ದಿಗಳ ಹರಡುವಿಕೆ ಮತ್ತು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಧ್ರುವೀಕರಣವು ಪ್ರಜಾಸತ್ತೆಯಿಂದ ನಾವು ಗಳಿಸಿದ ಸಾಧನೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.ತಾಂತ್ರಿಕ ಕೌಶಲ್ಯಗಳನ್ನು ಪಡೆದುಕೊಳ್ಳುವ ಜೊತೆಗೆ ನಾಗರಿಕ ಪ್ರಜ್ಞೆಯನ್ನೂ ಬೆಳೆಸಿಕೊಳ್ಳಬೇಕು ಮತ್ತು ವೃತ್ತಿಪರರು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಕರಾಗಬೇಕು ಎಂದು ಅವರು ಒತ್ತಾಯಿಸಿದರು. ವೃತ್ತಿಪರ ಶಿಕ್ಷಣದಲ್ಲಿ ನಾಗರಿಕ ಸಾಕ್ಷರತೆಯನ್ನು ಸೇರಿಸಬೇಕು ಎಂದು ಅವರು ಸೇರಿಸಿದರು.ಗಮನಾರ್ಹ ವಿದ್ಯಾರ್ಥಿ ಭಾಗವಹಿಸುವಿಕೆಕರ್ನಾಟಕದ ಶೈಕ್ಷಣಿಕ ರಾಜಧಾನಿ ಎಂದು ಕರೆಯಲ್ಪಡುವ ಮಂಗಳೂರಿನಲ್ಲಿ ನಡೆದ 29ನೇ ಪ್ರೊಫ್‌ಕಾನ್ ಪ್ರಭಾವಶಾಲಿ ವಿದ್ಯಾರ್ಥಿ ಭಾಗವಹಿಸುವಿಕೆಗೆ ಗಮನಾರ್ಹವಾಯಿತು. ಕೇರಳದ ಎಲ್ಲಾ ಜಿಲ್ಲೆಗಳಿಂದ ಮತ್ತು ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳು ಮತ್ತು ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ನೂರಾರು ವಿದ್ಯಾರ್ಥಿ ಪ್ರತಿನಿಧಿಗಳು ಆಗಮಿಸಿದರು. ಕೆ.ಸಿ. ರೋಡ್, ಬಿ.ಸಿ. ರೋಡ್, ಕೊಡಗು, ಉಳ್ಳಾಳ, ದೇರಾಲಘಟ್ಟ ಮತ್ತು ಪುತ್ತೂರ್‌ನಿಂದ ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಿಂದ ಸಂಚಾರ ಸೌಲಭ್ಯಗಳನ್ನು ಏರ್ಪಡಿಸಲಾಗಿತ್ತು.ಸಮ್ಮೇಳನದ ಅಧಿವೇಶನಗಳುಮುಂಬೈನ ಸೈಯದ್ ಪಟೇಲ್, ವಿಸ್ಡಮ್ ಇಸ್ಲಾಮಿಕ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಫೈಸಲ್ ಮೌಲವಿ ಪುತುಪ್ಪರಂಬ, ಕಾರ್ಯದರ್ಶಿ ಅಬ್ದುಲ್ ಮಲಿಕ್ ಸಲಫಿ ಮತ್ತು ಇತರ ಅನೇಕ ವಿದ್ವಾಂಸರು ಮತ್ತು ಯುವ ನಾಯಕರು ವಿವಿಧ ಅಧಿವೇಶನಗಳನ್ನು ನಡೆಸಿದರು.‘ಎಕೋಸ್ ಆಫ್ ಅಲ್ ಖುದ್ಸ್: ದಿ ಪ್ಯಾಲೆಸ್ಟೈನ್ ಸ್ಟೋರಿ’ ಅಧಿವೇಶನದಲ್ಲಿ ಭೂರಾಜಕೀಯ ವಿಶ್ಲೇಷಕ ಮತ್ತು ಕಾಲಿಕಟ್ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಪಿ.ಜೆ. ವಿನ್ಸೆಂಟ್ ಮತ್ತು ಡಾ. ಅಬ್ದುಲ್ಲಾ ಬಾಸಿಲ್ ಸಿ.ಪಿ. ಭಾಗವಹಿಸಿದರು. ಸಮ್ಮೇಳನವು ಪ್ಯಾಲೆಸ್ಟೀನಿಯನ್ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿತು.‘ವೆನ್ ದಿ ರಿಜೀಮ್ ಫೇಲ್ಸ್, ದಿ ಪೀಪಲ್’ ಚರ್ಚೆಯಲ್ಲಿ ಎಂಎಸ್ಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಪಿ.ವಿ. ಅಹಮದ್ ಸಾಜು ಮತ್ತು ಯುವ ಕಾಂಗ್ರೆಸ್ ಪ್ರತಿನಿಧಿ ಡಾ. ಜಿಂಟೋ ಜಾನ್ ಭಾಗವಹಿಸಿದರು.ಶೀ ಸ್ಪೇಸ್ ಸಿಂಪೋಸಿಯಂಗೆ ವಿಸ್ಡಮ್ ವುಮೆನ್ ರಾಜ್ಯ ಅಧ್ಯಕ್ಷೆ ಡಾ. ಸಿ. ರಜೀಲಾ ಮತ್ತು ವಿಸ್ಡಮ್ ಗರ್ಲ್ಸ್ ರಾಜ್ಯ ಅಧ್ಯಕ್ಷೆ ಟಿ.ಕೆ. ಹನೀನಾ ನೇತೃತ್ವ ವಹಿಸಿದರು. ‘ಟ್ಯಾಕ್ಲಿಂಗ್ ಮಾಡರ್ನ್ ಅಡಿಕ್ಷನ್ಸ್’ ಕಾರ್ಯಾಗಾರವನ್ನು ಶೇಖ್ ಅಬ್ದುಸ್ಸಲಾಂ ಮದನಿ ಮತ್ತು ಶಫೀಖ್ ಬಿನ್ ರಹೀಂ ನಡೆಸಿದರು.ಇಂದಿನ ಕಾರ್ಯಕ್ರಮ (ಅಕ್ಟೋಬರ್ 12, ಭಾನುವಾರ)ಇಂದು ಬೆಳಿಗ್ಗೆ ನಡೆಯುವ ಓಪನ್ ಫೋರಮ್‌ನಲ್ಲಿ ಫೈಸಲ್ ಮೌಲವಿ, ಲಜ್ನತುಲ್ ಬುಹೂಸುಲ್ ಇಸ್ಲಾಮಿಯ್ಯ ಕಾರ್ಯದರ್ಶಿ ಶಮೀರ್ ಮದನಿ, ಮುಹಮ್ಮದ್ ಸ್ವಾದಿಖ್ ಮದನಿ ಮತ್ತು ಯಾಸಿರ್ ಅಲ್ ಹಿಕ್ಮಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.‘ಪ್ರೊಫ್ಲೂಮಿನಾ ಅವಾರ್ಡ್ ಫಾರ್ ಎಕ್ಸಲೆನ್ಸ್’ ಪ್ರಶಸ್ತಿಯನ್ನು ಎನ್‌ಐಟಿ ಕಾಲಿಕಟ್ ಚಿನ್ನದ ಪದಕ ವಿಜೇತ ಮುಹಮ್ಮದ್ ಅಮೀನ್‌ಗೆ ಪ್ರೊಫ್‌ಕಾನ್ ಸ್ವಾಗತ ಸಮಿತಿ ಅಧ್ಯಕ್ಷ ಅಡೂರ್ ಬಿ. ಇಬ್ರಾಹಿಂ ಐಎಎಸ್ (ನಿವೃತ್ತ) ನೀಡುತ್ತಾರೆ.‘ಟ್ಯಾಕ್ಲಿಂಗ್ ಮಾಡರ್ನ್ ಅಡಿಕ್ಷನ್ಸ್’, ‘ಮಾಸ್ಟರಿಂಗ್ ಇಸ್ಲಾಮಿಕ್ ನಾಲೆಡ್ಜ್: ವೇ & ಮೀನ್ಸ್’ ಮತ್ತು ‘ನೆಕ್ಸ್ಟ್ ಜೆನ್ ರೆಡಿ: ಸ್ಕಿಲ್ಸ್, ಎಥಿಕ್ಸ್ & ಇನ್ನೋವೇಷನ್’ ಕಾರ್ಯಾಗಾರಗಳನ್ನು ನಡೆಸಲಾಗುವುದು.ಸಮಾರೋಪ ಸಮಾವೇಶವನ್ನು ಪ್ರಮುಖ ವಿದ್ವಾಂಸ ಮತ್ತು ವಿಸ್ಡಮ್ ಇಸ್ಲಾಮಿಕ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಅಬೂಬಕರ್ ಸಲಫಿ ಉದ್ಘಾಟಿಸುತ್ತಾರೆ. ಕರ್ನಾಟಕ ವಿಧಾನಸಭಾ ಸದಸ್ಯ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಗಿರುತ್ತಾರೆ. ಶಾರ್ಜಾದ ಹುಸೇನ್ ಸಲಫಿ ಮುಖ್ಯ ಭಾಷಣ ಮಾಡುತ್ತಾರೆ.

ಪ್ರಾದೇಶಿಕ ವಾರ್ತೆಗಳು

ರಜತ ಮಹೋತ್ಸವ ಆಚರಣೆ: ಪೇಸ್ ಸಿಲ್ವಿಯೋರಾ 2025

ಪೇಸ್ ಗ್ರೂಪ್ ತನ್ನ ರಜತ ಮಹೋತ್ಸವದ ಅಂಗವಾಗಿ “ಸಿಲ್ವಿಯೋರಾ 2025” ಎಂಬ ಶೀರ್ಷಿಕೆಯಲ್ಲಿ ಅತ್ಯಂತ ಸ್ಮರಣೀಯ ಕ್ಷಣವನ್ನು 2025ರ ಅಕ್ಟೋಬರ್ 14ರಂದು ಪೇಸ್ ಜ್ಞಾನ ನಗರದಲ್ಲಿ ಅಧಿಕೃತ ಬ್ಯಾನರ್ ಅನಾವರಣದೊಂದಿಗೆ ಆಚರಿಸಿತು. ಈ ಕಾರ್ಯಕ್ರಮವು ಸಂಸ್ಥೆಯ 25 ವರ್ಷದ ಯಶಸ್ವಿ ಪ್ರಯಾಣದ ಮಹತ್ವದ ಮೈಲುಗಲ್ಲುಗಳನ್ನು ಗುರುತಿಸಿತು.ಕಾರ್ಯಕ್ರಮವು ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಯಿತು. ಪೇಸ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಅಬ್ದುಲ್ಲಾ ಇಬ್ರಾಹಿಂ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ತಮ್ಮ ಭಾಷಣದಲ್ಲಿ ಅವರು “ಸಿಲ್ವಿಯೋರಾ 2025” ಬ್ಯಾನರ್ ಅನ್ನು ಅನಾವರಣಗೊಳಿಸಿ, ಮುಂದಿನ ಮೂರು ತಿಂಗಳುಗಳ ಕಾಲ ನಡೆಯುವ ವೈಭವಶಾಲಿ ಉತ್ಸವಗಳ ಸರಣಿಗೆ ಅಧಿಕೃತ ಚಾಲನೆ ನೀಡಿದರು. ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರ್ಫ್ರಾಜ್ ಜೆ ಹಾಸಿಮ್ ಅವರು ಸಭಿಕರನ್ನು ಸ್ವಾಗತಿಸಿ, ರಜತ ಮಹೋತ್ಸವದ ಸಂಭ್ರಮದ ಕುರಿತು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೀಸ್ ಎಂ.ಕೆ. ಅವರು ಸಂಸ್ಥೆಯ 25 ವರ್ಷದ ಪ್ರಯಾಣದ ಕುರಿತು ಸ್ಮರಣೀಯ ಅನುಭವವನ್ನು ತಿಳಿಸಿ , ಭವಿಷ್ಯದ ಗುರಿಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪೇಸ್ ಗ್ರೂಪ್ನ ವಿವಿಧ ಘಟಕಗಳ ಪ್ರಾಂಶುಪಾಲರು, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲರೂ ಸಂಸ್ಥೆಯ ಇತಿಹಾಸವನ್ನು ಸ್ಮರಿಸಿ, ಮುಂಬರುವ ವಿಶ್ವವಿದ್ಯಾನಿಲಯದ ಗುರಿಯನ್ನು ಸಾಧಿಸಲು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್ ಅವರು ಹಾಜರಿದ್ದ ಸರ್ವರಿಗೂ ಧನ್ಯವಾದವನ್ನು ಸಲ್ಲಿಸಿದರು.ರಜತ ಮಹೋತ್ಸವದ ಅಂಗವಾಗಿ ನಾನಾ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೃಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಬ್ಯಾನರ್ ಅನಾವರಣ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.

Scroll to Top