Author name: editor

ರಾಜಕೀಯ ವಾರ್ತೆಗಳು

3 ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿಯಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ ಗೆಲ್ಲಲಿದ್ದಾರೆ ಎಂದ ಕೃಷ್ಣ ಪಾಲೆಮಾರ್. ಬಿಜೆಪಿ ಪಾಳಯದಲ್ಲಿ ಅರುಣ್ ಪುತ್ತಿಲ ಸೇರಿದಂತೆ ಪ್ರಮುಖ ನಾಯಕರು ಚೌಟ ಪರ ಬ್ಯಾಟಿಂಗ್.

ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆಯಾಗಿರುವುದು ಬಿಜೆಪಿ ಪಾಳಯದಲ್ಲಿ ಹೊಸ ಉಲ್ಲಾಸ, ಉತ್ಸಾಹದ ಜೊತೆಗೆ ಹೊಸ ಅಲೆ ಎಬ್ಬಿಸಿದೆ. ಬೃಜೇಶ್ ಚೌಟ ಅವರು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ. ಅವರನ್ನು ಗೆಲ್ಲಿಸಿ ಕೊಡುತ್ತೇವೆಂದು ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರು ಹೇಳಿದ್ದಾರೆ. ತನಗೆ ಟಿಕೇಟ್ ಸಿಗದಿದ್ದರೂ, ಆ ಬಗ್ಗೆ ತಲೆಕೆಡಿಸಿಕೊಳ್ಳದ ನಳಿನ್‌ಕುಮಾರ್ ಕಟೀಲ್ ಅವರು ತಾನು ಬೃಜೇಶ್ ಚೌಟರ ಗೆಲುವಿಗಾಗಿ ಶಕ್ತಿಮೀರಿ ಶ್ರಮಿಸುವುದಾಗಿ ನುಡಿದಿದ್ದಾರೆ. ಈ ಹಿಂದೆ ತಾನು ಬಂಡಾಯ ಏಳುತ್ತೇನೆಂದು ಸಾರಿದ್ದ ಅರುಣ್ ಪುತ್ತಿಲ ಅವರು ಮಂಗಳೂರಿನಲ್ಲಿ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರಿ ಬೃಜೇಶ್ ಚೌಟ ಗೆಲುವಿಗಾಗಿ ದುಡಿಯುವುದಾಗಿ ಘೋಷಿಸಿದ್ದಾರೆ. ಒಟ್ಟಿನಲ್ಲಿ ಮಂಗಳೂರಲ್ಲಿ ಬೃಜೇಶ್ ಚೌಟರ ಪರ ಜನ ಅಲೆ ಎದ್ದಿದ್ದು ಪ್ರತಿಸ್ಪರ್ಧಿ ಕಾಂಗ್ರೆಸ್‌ನಲ್ಲಿ ಪದ್ಮರಾಜ್ ಆರ್. ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುದ್ಧಿ ಇದೆ.

ಹೊರ ರಾಜ್ಯ ವಾರ್ತೆಗಳು

ನಮ್ಮನ್ನು ನಾವು ಗಟ್ಟಿಗೊಳಿಸಿದಂತೆ ನಮ್ಮವರನ್ನು ಗಟ್ಟಿಗೊಳಿಸುವ ಕಾರ್ಯ ಆಗಲಿ -ಕನ್ಯಾನ ಸದಾಶಿವ ಶೆಟ್ಟಿ

ಪುಣೆ : ಒಗ್ಗಟ್ಟೇ ಮೂಲವೆಂದು ಸಂಘಟಿತ ಬಂಟರಾದ ನಾವು ಶ್ರೀಮಂತಿಕೆಯಲ್ಲಿ ಇಂದು ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಆದರೆ, ಬಡ ಸಮಾಜಕ್ಕಾಗಿ ಸೇವಾ ಕಾರ್ಯ ಮಾಡುವಾಗ ಸಂಘ ನನಗಾಗಿ ಅಲ್ಲ ಸಮಾಜಕ್ಕಾಗಿ ಇರುವುದು ಎಂಬ ಆತ್ಮ ಸ್ಮರಣೆ ಇರಲಿ ಹಾಗೂ ಸೇವೆ ಕೂಡಾ ಸಮಾಜಕ್ಕಾಗಿ ಮಾಡಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ. ಸಮಾಜ ಕಾರ್ಯ ಯಾವುದೇ ಇರಲಿ ಧನಾತ್ಮಕವಾಗಿ ನಡೆದಾಗ ಅದಕ್ಕೆ ಫಲ ಸಿಗುವುದು ಸೃಷ್ಟಿಯ ನಿಯಮ. ನಿರ್ಮಲ ಮನಸ್ಸಿನ ಸೇವೆಯಿಂದ ಚಿತ್ತ ಶುದ್ಧಿಯನ್ನು ಪಡೆಯಲು ಸಾಧ್ಯ. ನಮ್ಮನ್ನು ನಾವು ಗಟ್ಟಿಗೊಳಿಸಿದಂತೆ ನಮ್ಮವರನ್ನು ಗಟ್ಟಿಗೊಳಿಸುವ ಕಾರ್ಯ ಆಗಲಿ. ನಮ್ಮ ಶ್ರೀಮಂತ ಸಂಸ್ಕ್ರತಿಗೆ ತಕ್ಕಂತೆ ಕೈಗೊಂಡ ಕಾರ್ಯ ಪರಿಪೂರ್ಣಗೊಳ್ಳುವ ತನಕ ವಿರಮಿಸದೇ ಸಮಾಜಕ್ಕಾಗಿ ಅರ್ಪಣೆ ಮಾಡುವ ಛಲವೊಂದಿದ್ದರೆ ಅದು ಬಂಟರಲ್ಲಿ ಕಾಣಬಹುದು. ನಮಗೆ ಬಂದ ಶ್ರೀಮಂತಿಕೆಯಲ್ಲಿ ಮೆರೆಯದೆ ದಾನ ಧರ್ಮದ ಮೂಲಕ ನಾವು ಸಮಾಜದಲ್ಲಿ ಶ್ರೇಷ್ಠರಾಗಬೇಕು ಎಂದು ಹೇರಂಬ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ನುಡಿದರು. ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕೊತ್ಸವ, ಸ್ನೇಹ ಸಮ್ಮಿಲನ ಸಮಾರಂಭವು ಮಾರ್ಚ್ 10ರಂದು ಚಿಂಚ್ವಾಡ್ ನ ಪ್ರೊ ರಾಮಕೃಷ್ಣ ಮೋರೆ ಆಡಿಟೋರಿಯಂನಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸದಾಶಿವ ಶೆಟ್ಟಿಯವರು ಮಾತನಾಡಿ ನಾವು ದೈವ ದೇವರ ಆಶೀರ್ವಾದಿಂದ ಪ್ರಯತ್ನ ಮತ್ತು ಸಾಹಸ ಮಾಡಿ ಆರ್ಥಿಕವಾಗಿ ಬೆಳೆದವರು. ವಿಶ್ವ ಬಂಟರ ಶ್ರೆಯೋಭಿವೃದ್ದಿಗಾಗಿ ಸಂಘಟನಾತ್ಮಕ ಹಲವಾರು ಕಾರ್ಯ ಯೋಜನೆಗಳು ನಡೆಯುತ್ತಿವೆ. ವಿಶ್ವ ಬಂಟ ಕೋಶ ಎಂಬ ಕಾರ್ಯವು ಆರಂಭವಾಗಿದೆ. ನಮ್ಮ ಬಡ ಕುಟುಂಬಗಳ ಉದ್ದಾರ ಕೂಡಾ ನಮ್ಮ ಕರ್ತವ್ಯ ಎಂದು ಅರಿತು ಸೇವಾ ಕಾರ್ಯದಲ್ಲಿ ಮುನ್ನಡೆಯೋಣ. ಈ ಎಲ್ಲಾ ಕಾರ್ಯಗಳು ಅರ್ಥಪೂರ್ಣವಾಗಿ ನಡೆಯಲು ತಮ್ಮೆಲ್ಲರ ಸಹಕಾರ ಸದಾ ಇರಲಿ. ಇಲ್ಲಿ ಇಂದು ಉತ್ತಮ ಸಂದೇಶ ನೀಡುವ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಸಂಘಟಿತ ಸಮಾರಂಭ ನಡೆದಿದೆ. ಹೃದಯ ತುಂಬಿ ಬಂದಿದೆ ಎಂದರು.ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಾರ್ಷಿಕೋತ್ಸವ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಕರ್ನಾಟಕ ವಿಧಾನಸಭಾ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ, ಗುಜರಾತ್ ನ ಸಿಲ್ವಾಸ ದಾದರ್ ನಗರ ಹವೇಲಿ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ರಜನಿ ಜಿ ಶೆಟ್ಟಿ, ಸಂಘದ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ವಿಜಯ್ ಶೆಟ್ಟಿ ಬೋರ್ಕಟ್ಟೆ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಪೆಲತ್ತೂರು, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಕೆ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯಾನಂದ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜ್ಯೋತಿ ವಿ ಶೆಟ್ಟಿ, ಸುನಿತಾ ರಾಕೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಡಿ ಶೆಟ್ಟಿ, ರಘುರಾಮ್ ಶೆಟ್ಟಿ, ಎರ್ಮಾಳ್ ನಾರಾಯಣ ಶೆಟ್ಟಿ, ಎರ್ಮಾಳ್ ವಿಶ್ವನಾಥ್ ಶೆಟ್ಟಿ, ಪದ್ಮನಾಭ ಕೆ ಶೆಟ್ಟಿ, ಎರ್ಮಾಳ್ ಸೀತಾರಾಂ ಶೆಟ್ಟಿ, ಮಹೇಶ್ ಹೆಗ್ಡೆಯವರು ಉಪಸ್ಥಿತರಿದ್ದರು. ನಳಿನಿ ಶೆಟ್ಟಿ, ಶೋಭಾ ಶೆಟ್ಟಿ, ರೇಖಾ ಶೆಟ್ಟಿ ಪ್ರಾರ್ಥನೆಗೈದರು. ನಿಕಟ ಪೂರ್ವ ಅಧ್ಯಕ್ಷ ವಿಜಯ್ ಶೆಟ್ಟಿ ಸ್ವಾಗತಿಸಿದರು. ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಎಲ್.ಇ.ಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಅತಿಥಿ ಗಣ್ಯರನ್ನು ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಮತ್ತು ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಗೌರವಿಸಿದರು ಹಾಗೂ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘಕ್ಕೆ ಆಗಮಿಸಿದ ಗಣ್ಯರು ತಮ್ಮ ಸಂದೇಶಗಳನ್ನು ತಿಳಿಸುವ ಅತಿಥಿ ದೇವೋಭವ ಎಂಬ ಪುಸ್ತಕವನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಗೌರವ ಅತಿಥಿಗಳಾದ ಗುರುರಾಜ್ ಗಂಟಿಹೊಳೆ, ರಜನಿ ಜಿ .ಶೆಟ್ಟಿಯವರನ್ನು ಶಾಲು, ಹಾರ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇವರ ಪರಿಚಯವನ್ನು ಕ್ರಮವಾಗಿ ಅವಿನಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಸ್ಮಿತಾ ಎಂ ಹೆಗ್ಡೆ ಓದಿದರು. ಇದೇ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘಕ್ಕೆ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆಗೈದ ಸಮಿತಿಯ ಸೇವಾ ಪ್ರಮುಖರಾದ ಪುಚ್ಚೊಟ್ಟು ಬೀಡು ಎರ್ಮಾಳ್ ಬಾಲಚಂದ್ರ ಶೆಟ್ಟಿ, ಅವಿನಾಶ್ ಶೆಟ್ಟಿ ಮಂದಾಡಿಗುತ್ತು, ಜಯಾನಂದ ಶೆಟ್ಟಿ ಪುತ್ತೂರುರವರನ್ನು ಸನ್ಮಾನಿಸಲಾಯಿತು. ಇವರ ಸಾಧನೆಗಳ ವರದಿಯನ್ನು ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಪೆಲತ್ತೂರು ಪರಿಚಯಿಸಿದರು. ಸಂಘದ ನಾಯಕತ್ವ ವಹಿಸಿ ಪಾದರಸದಂತೆ ಕಾರ್ಯಗೈದು ಕಳೆದ ವರ್ಷ ರಜತ ಸಂಭ್ರಮ ಹಾಗೂ ಸಂಘವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಸುನಿತಾ ಅರ್ ಶೆಟ್ಟಿ ದಂಪತಿಗಳನ್ನು ಸಮಾಜ ಬಾಂಧವರ ಪರವಾಗಿ ಅತಿಥಿಗಳು ಸನ್ಮಾನಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಸಮಾಜಕ್ಕೆ ಮತ್ತು ಸಮಾಜ ಸೇವೆಗೆ ಉತ್ತೇಜನ ನೀಡುವಂತಹ ನುಡಿ ನಮನಗಳನ್ನು ಸಲ್ಲಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಮತ್ತು ಬಂಟ ಸಮಾಜ ಬಾಂಧವರಿಂದ ವಿವಿದ ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು ಹಾಗೂ ಅರ್ಥಗರ್ಭಿತ ಸಂದೇಶ ನೀಡುವ ಹಾಸ್ಯ ಪ್ರಹಸನ ತುಂಬಿದ ಸಭಾಂಗಣದಲ್ಲಿದ್ದ ಭಾಂದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ಸಾವಿರಾರು ಸಂಖ್ಯೆಯ ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳು, ಹಿರಿಯರು, ದಾನಿಗಳು, ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗದವರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮದ ನಂತರ ತುಳುನಾಡ ಶೈಲಿಯ ಪ್ರೀತಿ ಭೋಜನ ನಡೆಯಿತು. ಅಭಿಷೇಕ್ ಶೆಟ್ಟಿ ಪಡೀಲ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಶೆಟ್ಟಿ ಪೆಲತ್ತೂರು ವಂದಿಸಿದರು. ಚಿತ್ರ, ವರದಿ : ಹರೀಶ್ ಮೂಡಬಿದ್ರಿ

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಹೋಲಿ ಕ್ರಾಸ್ ಚರ್ಚ್ ಕೊರ್ಡೇಲ್ ಅವರ ನೇತೃತ್ವದಲ್ಲಿ ಮಾರ್ಚ್ 25 ರ ಸಂಜೆ 4.30 ಕ್ಕೆ ‘ಶಿಲುಬೆಯ ಹಾದಿ’.

ಮಂಗಳೂರು :ಮಂಗಳೂರಿನ ಹೋಲಿ ಕ್ರಾಸ್ ಚರ್ಚು ಕೊರ್ಡೆಲ್ ಅವರ ನೇತೃತ್ವದಲ್ಲಿ ಮಾರ್ಚ್ 25 ರಂದು ಸಂಜೆ 4.3೦ ಗಂಟೆಗೆ “ಶಿಲುಬೆಯ ಹಾದಿ” (ಕುರ್ಸಾಚಿ ವಾಟ್) ನ್ನು ಸಿಟಿ ವಲಯದ 12 ಚರ್ಚುಗಳ ಸಹಯೋಗದಿಂದ ನಡೆಸಲಾಗುತ್ತದೆ. ಕೊರ್ಡೆಲ್, ವಾಮಂಜೂರ್, ಪಾಲ್ದಾನೆ, ಬೊಂದೇಲ್, ದೆರೆಬೈಲು, ನೀರುಮಾರ್ಗ, ಕೆಲರೈ, ಬಜ್ಜೊಡಿ, ಕಪಿತಾನಿಯೋ, ಬಜಾಲ್, ಪೆರ್ಮಾಯಿ, ಶಕ್ತಿನಗರ ಚರ್ಚುಗಳು ಭಾಗವಹಿಸಲಿದ್ದು, ಏಸುಕ್ರಿಸ್ತರು ಶಿಲುಬೆಯ 14 ಹಾದಿಗಳನ್ನು ಈ ಚರ್ಚುಗಳ ಕಲಾವಿದರ ನಟನೆಯ ಮೂಲಕ ಚರ್ಚಿನ ಆವರಣದ ಒಳಗೆ ನಡೆಸಲಾಗುವುದು. ಶಿಲುಬೆಯ ಹಾದಿಯ 14 ನಿಲ್ದಾಣಗಳನ್ನು (ಸ್ಟೇಶನ್) ನ್ನು ವಲಯದ 12 ಚರ್ಚುಗಳ ಹಾಗೂ ಧರ್ಮಗುರುಗಳ ಮತ್ತು ಧರ್ಮಭಗಿನಿಯರ ಪ್ರತಿನಿಧಿಗಳು ನಡೆಸಿಕೊಡುತ್ತಾರೆ. ಸಂಜೆ 4.30ಕ್ಕೆ ಬಲಿಪೂಜೆ, ನಂತರ ಶಿಲುಬೆಯ ಹಾದಿ, 12ನೇ ನಿಲ್ದಾಣದಲ್ಲಿ ಪ್ರವಚನವನ್ನು ನಡೆಸಿಲಾಗುವುದು.ಈ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಕ್ಲಿಫರ್ಡ್ ಫೆರ್ನಾಂಡಿಸ್ ಅವರು ಸ್ಕಿçಪ್ಟ್ ಬಿಡುಗಡೆ ಮಾಡಿದರು. ಸಹಾಯಕ ಧರ್ಮಗುರುಗಳಾದ ವಂ| ಪಾ| ಪಾವುಲ್ ಡಿ’ಸೋಜ, ಧರ್ಮಪ್ರಾಂತ್ಯದ ಪಿ.ಆರ್.ಓ. ರೋಯ್ ಕ್ಯಾಸ್ಟಲಿನೋ, ಚರ್ಚಿನ ಉಪಾಧ್ಯಕ್ಷ ರೂತ್ ಕ್ಯಾಸ್ಟಲಿನೋ, ಕಾರ್ಯದರ್ಶಿ ಅನಿಲ್ ಡೆಸಾ, ಸರ್ವ ಆಯೋಗದ ಸಂಚಾಲಕ ಡೊಲ್ಫಿ ಡಿ’ಸೋಜ,12 ಚರ್ಚುಗಳ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಕಲಾವಿದರಿಗೆ ನಿರ್ದೇಶಕರಾಗಿ ಡೆನ್ನಿಸ್ ಮೊಂತೆರೋ ಹಾಗೂ ಸ್ಟ್ಯಾನ್ಲಿ ಅಲ್ವಾರೀಸ್, ಏಸು ಕ್ರಿಸ್ತರ ಪಾತ್ರವನ್ನು ವಿಕಾಸ್ ಕುಲಾಕುಲ್, ಮದರ್ ಮೇರಿಯ ಪಾತ್ರವನ್ನು ಆ್ಯಶೆಲ್ ಡಿ’ಸಿಲ್ವಾ, ಪಿಲಾತನ ಪಾತ್ರವನ್ನು ಆಲ್ವಿನ್ ಪಾಯಸ್ ಮುಂತಾದವರು ನಿರ್ವಹಿಸಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

9 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್ ಕ್ಲಬ್ ಗೌರವ ಸನ್ಮಾನ. ಮೈಮುನಾ-ಮರ್ಝಿನಾರಿಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ. ಸಾಧಕರನ್ನು ಗುರುತಿಸುವುದು ಸಮಾಜಕ್ಕೆ ಪ್ರೇರಣೆ- ಡಾ.ವೈ.ಭರತ್ ಶೆಟ್ಟಿ

ಮಂಗಳೂರು : ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಮಾಜಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.ಮರವೂರಿನ ದಿ ಗ್ರ್ಯಾಂಡ್ ಬೇಯಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರುಹೈನುಗಾರಿಕೆಯ ಮೂಲಕ ಅತ್ಯಪೂರ್ವ ಸಾಧನೆ ಮಾಡಿರುವ ಮೈಮೂನಾ ಮತ್ತು ಮರ್ಝಿನಾ ಅವರು ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ. ಅವರನ್ನು ಗುರುತಿಸಿ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಟ -ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ “ಸಮಾಜದಲ್ಲಿ ಮಾಧ್ಯಮ ರಂಗ ಮಹತ್ವದ ಸ್ಥಾನವನ್ನು ಪಡೆದಿದೆ. ಗುರು , ಹಿರಿಯರನ್ನು ಗೌರವಿಸಿದರೆ ಮಾತ್ರ ಸಾಧನೆಯ ಹಾದಿಯಲ್ಲಿ ಯಶಸ್ಸು ಕಾಣಲು ಸಾಧ್ಯ ” ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಅನ್ನು ಮಂಗಳೂರು, ರವಿ ಪೊಸವಣಿಕೆ, ರಾಘವೇಂದ್ರ ಭಟ್, ಪ್ರಕಾಶ್ ಮಂಜೇಶ್ವರ, ಕೃಷ್ಣ ಕೋಲ್ಚಾರ್, ರಾಜೇಶ್ ಕಿಣಿ, ಅಶೋಕ್ ಶೆಟ್ಟಿ ಬಿ.ಎನ್., ರವೀಂದ್ರ ಶೆಟ್ಟಿ ಕುತ್ತೆತ್ತೂರು, ಶರತ್ ಸಾಲ್ಯಾನ್ ಇವರುಗಳಿಗೆ ಪ್ರೆಸ್ ಕ್ಲಬ್ ಗೌರವ ಪ್ರದಾನ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿತು.ಪ್ರೆಸ್ ಕ್ಲಬ್ ಪ್ರಶಸ್ತಿ ತೀರ್ಪು ಗಾರರಾದ ಎಸ್ ಡಿಎಂ ಕಾಲೇಜಿನ ಉಪನ್ಯಾಸಕ ಪುಷ್ಪರಾಜ್ ಮತ್ತು ವಿಶ್ರಾಂತ ಪತ್ರಕರ್ತ ಕುಮಾರ್ ನಾಥ್ ಅವರನ್ನು ಗೌರವಿಸಲಾಯಿತು.ಪ್ರೆಸ್ ಕ್ಲಬ್ ಸಿಬ್ಬಂದಿ ಚಂಚಲಾಕ್ಷಿ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭ ಮತದಾನದ ಪ್ರತಿಜ್ಞಾ ವಿಧಿಯನ್ನು ಹರೀಶ್ ಮೋಟುಕಾನ ನೆರವೇರಿಸಿದರು.ಸಮಾರಂಭದಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ, ಮಾಜಿ ಮೇಯರ್‌ ಗಳಾದ ಶಶಿಧರ್ ಹೆಗ್ಡೆ,ಭಾಸ್ಕರ ಕೆ,ಮನಪಾ ಸದಸ್ಯ ನವೀನ್ ಡಿ ಸೋಜ, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಕಾರ್ಯನಿರತ ಪತ್ರ ಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್ ಪೂರ್ವಾಧ್ಯಕ್ಷ ಅನ್ನು ಮಂಗಳೂರು, ಹಿರಿಯ ಪತ್ರಕರ್ತರಾದ ಬಿ. ರವೀಂದ್ರ ಶೆಟ್ಟಿ, ವಾಲ್ಟರ್ ನಂದಳಿಕೆ, ಉಪಸ್ಥಿತರಿದ್ದರು. ಸತೀಶ್ ಇರಾ ಪ್ರಾರ್ಥಿಸಿದರು. ಮಹಮ್ಮದ್ ಆರಿಫ್ ಪಡುಬಿದ್ರಿ, ಆರ್.ಸಿ.ಭಟ್ ಮತ್ತು ಆತ್ಮಭೂಷಣ್ ಭಟ್ ಸನ್ಮಾನಿತರನ್ನು ಪರಿಚಯಿಸಿದರು.ಪ್ರೆಸ್ ಕ್ಲಬ್ ಪ್ರದಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಕಾರ್ಯ ಕ್ರಮ ನಿರೂಪಿಸಿದರು.

ರಾಜಕೀಯ ವಾರ್ತೆಗಳು

ಟಿಕೆಟ್ ಕೈ ತಪ್ಪುವರ ಬೆಂಬಲಕ್ಕೆ ನಿಂತ ಬಿಎಸ್ ವೈ. ವಿರೋಧವಿರುವ ಹಾಲಿ 7 ಮಂದಿ ಬಿಜೆಪಿ ಸಂಸದರ ಪರ ಯಡಿಯೂರಪ್ಪ ಬ್ಯಾಟಿಂಗ್. ನಾಳೆ ಸಂಜೆಯೊಳಗೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್. ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಶಿಫಾರಸ್ಸು.

ಬ್ರೇಕಿಂಗ್ ನ್ಯೂಸ್ :ಡಾ. ಅಶೋಕ್ ಶೆಟ್ಟಿ. ಬಿ. ಎನ್. ಬೆಂಗಳೂರು :ಕಳೆದ ಒಂದು ವಾರದಿಂದ ನಳಿನ್ ಕುಮಾರ್ ಕಟೀಲ್ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲವೆಂಬ ಸುದ್ದಿ ಹಬ್ಬಿದ್ದು, ಕ್ಯಾಪ್ಟನ್ ಬೃಜೇಶ್ ಚೌಟ ಅವರಿಗೆ ದಕ್ಷಿಣ ಕನ್ನಡದಿಂದ ಎಂಪಿ ಟಿಕೆಟ್ ಫೈನಲ್ ಆಗಿದೆ ಎಂಬ ಬಗ್ಗೆ ಸುದ್ದಿಯಾಗಿತ್ತು. ಆದರೆ, ಇದೆಲ್ಲ ಗಾಸಿಪ್ ಸುದ್ದಿ ಎಂದು ಬಿಜೆಪಿ ಹೈ ಕಮಾಂಡ್ ನ ಆಪ್ತ ಮೂಲವೊಂದು mpmla’s news tvಗೆ ತಿಳಿಸಿದೆ. ಅದರ ಪ್ರಕಾರ, ಬಿ ಎಸ್ ವೈ ಅವರು ಟಿಕೆಟ್ ಕೈ ತಪ್ಪುವರ ಬೆಂಬಲಕ್ಕೆ ನಿಂತಿದ್ದಾರೆ. ಟಿಕೆಟ್ ಕೊಡಬಾರದೆಂದು ವಿರೋಧವಿರುವ ಬಿಜೆಪಿಯ 7 ಮಂದಿ ಹಾಲಿ ಸಂಸದರ ಪರ ನಿಂತು ಯಡಿಯೂರಪ್ಪ ಅವರು ಬ್ಯಾಟಿಂಗ್ ನಡೆಸುತ್ತಿದ್ದಾರೆ. ಬೆಂಗಳೂರು ಉತ್ತರದಲ್ಲಿ ಡಿ. ವಿ. ಸದಾನಂದ ಗೌಡ, ಮಂಡ್ಯದಲ್ಲಿ ಜೆಡಿಎಸ್ ಪರ, ಮೈಸೂರಿನಲ್ಲಿ ಪ್ರತಾಪ್ ಸಿಂಹ ಪರ,ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಪರ, ಬೀದರನಲ್ಲಿ ಭಗವಂತ ಖೂಬ ಪರ,ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಪರ,ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಶಿಫಾರಸ್ಸು ಮಾಡಿ ಬಿಜೆಪಿ ಹೈ ಕಮಾಂಡ್ ಗೆ ತಾನು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ನಾಳೆ ಮಾರ್ಚ್ 10 ರಂದು ದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಮೋದಿ, ನಡ್ಡಾ, ಅಮಿತ್ ಶಾ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಬಿ ಎಸ್ ವೈ ಅವರು ಪಾಲ್ಗೊ ಳ್ಳ ಲಿದ್ದಾರೆ. ನಾಳೆ ಸಂಜೆಯೊಳಗೆ ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್ ಆಗಲಿದೆ. ಕರ್ನಾಟಕದಲ್ಲಿ ಬಿಎಸ್ ವೈ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೂರಕ್ಕೆ ನೂರರಷ್ಟು ಗ್ಯಾರಂಟಿಯಾಗಿದ್ದು, ಬಿ. ಎಲ್. ಸಂತೋಷ್ ಅವರ ಕೃಪಾಕಟಾಕ್ಷವೂ ಕಟೀಲ್ ಪರವಿರುವುದ್ದರಿಂದ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ 4 ನೇ ಬಾರಿಗೆ ಬಿಜೆಪಿಯಿಂದ ಎಂಪಿ ಟಿಕೆಟ್ ಪಡೆದು ಸ್ಪರ್ಧಿಸುವುದು ಸ್ಪಷ್ಟ ಹಾಗೂ ನೂರಕ್ಕೆ ನೂರರಷ್ಟು ಸತ್ಯವೆಂದು ವರದಿಯಾಗಿದೆ. ವಿವಾದ ರಹಿತ, ನಿಷ್ಕಲ್ಮಶ ಮನಸ್ಸಿನ ನೇರ ನಡೆ ನುಡಿಯ ನಿಷ್ಕಳಂಕ ನಾಯಕರಾಗಿರುವ ಕಟೀಲ್ ಅವರು ಯಾವುದೇ ಹಗರಣವಿಲ್ಲದ, ಭ್ರಷ್ಟಾಚಾರವಿಲ್ಲದ ಜನಪರ, ಜನ ಮೆಚ್ಚಿದ ನಾಯಕರಾಗಿದ್ದಾರೆ. 2009 ರಿಂದ 2023 ರ ವರೆಗೆ ಸತತವಾಗಿ 3 ಅವಧಿಗಳಲ್ಲಿ ದಕ್ಷಿಣ ಕನ್ನಡದ ಎಂಪಿಯಾಗಿ ಒಂದು ಲಕ್ಷ ಕ್ಕೂ ಅಧಿಕ ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರದಿಂದ ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಶಕ್ತಿ ಮೀರಿ ದುಡಿದ್ದಾರೆ.ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅತಿ ಹೆಚ್ಚು ಬಾರಿ ರಾಜ್ಯ ಪ್ರವಾಸ ಮಾಡಿ ರಾಜ್ಯದ ಮೂಲೆ ಮೂಲೆಗಳನ್ನು ಸುತ್ತಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ ಬೃಹತ್ ಶಕ್ತಿಶಾಲಿ ಹೆಮ್ಮರವಾಗಿಸಿದ್ದಾರೆ. ಈ ಸಲ ಅವರು ಸ್ಪರ್ಧಿಸಿದಲ್ಲಿ ಮೂರು ಲಕ್ಷ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಪ್ರಚಂಡ ಜಯಭೇರಿ ಬಾರಿಸುವುದು ಗ್ಯಾರಂಟಿ ಎಂಬ ಸಮೀಕ್ಷೆ ವ್ಯಕ್ತವಾಗಿದೆ. ನಳಿನ್ ಕುಮಾರ್ ಕಟೀಲ್ ಅವರು 4 ನೇ ಬಾರಿಗೆ ಸ್ಪರ್ಧಿಸಿ ಎಂಪಿಯಾಗಿ ಜಯಭೇರಿ ಬಾರಿಸಲೆಂದು mp mla’s news tv ಶುಭ ಹಾರೈಸುತ್ತದೆ.

Scroll to Top