Author name: editor

ಹೊರ ರಾಜ್ಯ ವಾರ್ತೆಗಳು

ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ನೇತೃತ್ವದಲ್ಲಿ ಡಾ. ಸುಧಾಕರ್ ಶೆಟ್ಟಿ ಸಂಯೋಜನೆಯಲ್ಲಿ ಪುಣೆಯಲ್ಲಿ ಜ. 19 ರಂದು ಮಲ್ಟಿ ಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪುಣೆ: ಬಂಟ್ಸ್ ಅಸೋಸಿ ಯೇಶನ್ ಪುಣೆ ವತಿಯಿಂದ ಸಮಾಜ ಕಲ್ಯಾಣ ಸೇವಾ ಕಾರ್ಯದ ಪ್ರಯುಕ್ತ ಪುಣೆಯ ಸಮಸ್ತ ಬಂಟ ಸಮಾಜ ಬಾಂಧವರಿಗಾಗಿ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣ ಶಿಬಿರವು ಜ. 19ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಗುರುನಾನಕ್ ಮೆಡಿಕಲ್ ಫೌಂಡೇಶನ್‌ನ ಗುರುನಾನಕ್ ದರ್ಬಾರ್ ಹಾಲ್, ಹಾಲಿವುಡ್ ಗುರುದ್ವಾರ ಕ್ಯಾಂಪ್ ಪುಣೆ ಇಲ್ಲಿ ನಡೆಯಲಿದೆ.ಪುಣೆ ಬಂಟ್ಸ್ ಅಸೋಸಿಯೇಶನ್ ಅಯೋಜನೆಯಲ್ಲಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗ ದೊಂದಿಗೆ ನಡೆಯಲಿರುವ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸ್ತ್ರೀರೋಗ ಶಾಸ್ತ್ರ ಮಕ್ಕಳ ರೋಗ ತಪಾಸಣೆ, ಕಣ್ಣು ಹಲ್ಲು ತಪಾಸಣೆ, ಔಷಧ ಮತ್ತು ರೋಗಶಾಸ್ತ್ರದ ಬಗ್ಗೆ ಮಾಹಿತಿ, ತುರ್ತು ರೋಗಿಗಳಿಗೆ ಉಚಿತ ಇಸಿಜಿ ಮತ್ತು ಉಚಿತ ಸಕ್ಕರೆ ತಪಾಸಣೆ ನಡೆಯಲಿದೆ. ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರ ಆಯೋಜನೆಯಲ್ಲಿ ನಡೆಯಲಿರುವ ಶಿಬಿರವು ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ. ಸುಧಾಕ‌ರ್ ಶೆಟ್ಟಿ ಸಂಯೋಜನೆಯಲ್ಲಿ ನಡೆಯಲಿದೆ.ಆರೋಗ್ಯ ತಪಾಸಣಾ ಶಿಬಿರದ ವೈದ್ಯ ಕೀಯ ಸಲಹೆಗಾರರ ಬೋರ್ಡ್‌ನ ಪ್ರಮುಖರಾದ ಡಾ. ಹಂಸರಾಜ್ ಶೆಟ್ಟಿ ಎಂಬಿಎ, ಡಾ.ಸಂಜಯ್ ಕುಲಕರ್ಣಿ, ಡಾ. ಸುಜಯ್ ಹೆಗ್ಡೆ, ಡಾ. ಜ್ಯೋತಿ ಶೆಟ್ಟಿ, ಡಾ. ಪ್ರವೀಣ್ ಆರ್. ಶೆಟ್ಟಿ, ಡಾ.ವಿವೇಕ್ ಹೆಗ್ಡೆ, ಡಾ. ಸಂಜಯ್ ತೆಕವಡೆಯವರ ಸಲಹೆಯೊಂದಿಗೆ ಪುಣೆಯ ಖ್ಯಾತ ವೈದ್ಯರಾದ ಡಾ. ಚಿತ್ತರಂಜನ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ಉರ್ವಿ ಕೊಠಾರಿ, ಡಾ. ರೋಬರ್ಟ್ ಲೋಬೊ, ವಿಕಾಸ್ ಮಂತೋಲೆ, ಡಾ.ಸಮಿತಾ ಮೂಲಾನಿ, ಡಾ. ಸತ್ಯಶೀಲ ನ್ಯಾಕ್ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ರೋಹಿತ್ ಶೆಟ್ಟಿ (9960337625), ಡಾ.ಸುಧಾಕರ್ ಶೆಟ್ಟಿ (9657616322), ದಿನೇಶ್ ಶೆಟ್ಟಿ (9823019020), ರೇಷ್ಮಾಆರ್. ಶೆಟ್ಟಿ (9881461181) ಅವರನ್ನು ಸಂಪರ್ಕಿಸಬಹುದು.ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳು ವಂತೆ ಪುಣೆ ಬಂಟ್ಸ್ ಅಸೋಸಿಯೇ ಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿ ಗುತ್ತು, ನಿಕಟಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಣೂರು, ಉಪಾ ಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ,ಸತೀಶ್ ರೈ ಕಲ್ಲಂಗಳಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೋಶಾಧಿಕಾರಿ ಸಿಎ ಮನೋಹರ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಆರ್. ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನಾನು ತುಳುನಾಡಿನವ “ತುಳುವ“ ಎನ್ನುವುದೇ ಹೆಮ್ಮೆ! – ಸುನಿಲ್ ಶೆಟ್ಟಿ

ಮಂಗಳೂರು: ”ನಾನು ತುಳುನಾಡಿನವ, ಮೂಲ್ಕಿ ಬಳಿಯ ಬಪ್ಪನಾಡು ನನ್ನ ಹುಟ್ಟೂರು. ನಾನು ವರ್ಷಕ್ಕೆ ನಾಲ್ಕು ಬಾರಿ ಇಲ್ಲಿಗೆ ಭೇಟಿ ಕೊಡುತ್ತೇನೆ. ನಾನು ತುಳುವ ಎನ್ನುವುದೇ ನನಗೆ ಹೆಮ್ಮೆ. ತುಳು ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನುವ ಆಸೆ ಹಿಂದಿನಿಂದಲೂ ಇತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಈಗ ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಬರುತ್ತಿರುವ ಜೈ ಸಿನಿಮಾ ಕಥೆ ಕೇಳಿ ಇಷ್ಟಪಟ್ಟು ನಟಿಸುತ್ತಿದ್ದೇನೆ“ ಎಂದು ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.”ಕಾಮಿಡಿ ಸಿನಿಮಾಗಳಲ್ಲಿ ಅಭಿನಯ ಮಾಡಬೇಕು ಅನ್ನುವ ಆಸೆ ಇದೆ. ನನಗೆ ತುಳು ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಿಡಿಯನ್ ಆಗಿ ಅಭಿನಯಿಸಬೇಕು. ಆದರೆ ಈಗ ಜೈ ಸಿನಿಮಾದಲ್ಲಿ ಅತಿಥಿ ಪಾತ್ರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನೋಡೋಣ“ ಎಂದರು.ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದಲ್ಲಿ ಜೈ ತುಳು ಸಿನಿಮಾದಲ್ಲಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸುತ್ತಿದ್ದಾರೆ. ಸದ್ಯ ಮಂಗಳೂರಿನಾದ್ಯಂತ ಶೂಟಿಂಗ್ ನಡೆಯುತ್ತಿದ್ದು ಇನ್ನು ಕೆಲವು ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ಜೈ ಸಿನಿಮಾಕ್ಕೆ ಮೂರನೆ ಹಂತದ ಚಿತ್ರೀಕರಣ ನಡೆಯುತ್ತಿದ್ದು ಹಾಡಿನ ಚಿತ್ರೀಕರಣ ಇನ್ನು ನಡೆಯಲಿದೆ. ಜೈ ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು ಸಿನಿಮಾಕ್ಕೆ ಕರಾವಳಿಯನ್ನು ಕೇಂದ್ರೀಕರಿಸಿ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಉಡುಪಿ, ಕುಂದಾಪುರ ಮಂಗಳೂನಲ್ಲಿ ಚಿತ್ರೀಕರಣ ನಡೆದಿದೆ. ಜಿಲ್ಲೆಯ ಖ್ಯಾತನಾಮ ಕಲಾವಿದರುಸಿನಿಮಾದಲ್ಲಿದ್ದಾರೆ.ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತಿದ್ದು, ಅನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ ಹಾಗೂ ಮಂಜುನಾಥ್ ಅತ್ತಾವರ ನಿರ್ಮಾಪಕರಾಗಿದ್ದು ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು ಕಥೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ, ಬೈಲೂರು ಬರೆದಿದ್ದಾರೆ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ಮಾನ, ಸಂಕಲನ ರಾಹುಲ್ ವಸಿಷ್ಠ, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್.ಜೈ ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ರಾಜ್ ದೀಪಕ್ ಶೆಟ್ಟಿ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮಾಣಿಬೆಟ್ಟು, ಉಮೇಶ್ ಮಿಜಾರ್, ಮೊದಲಾದವರು ಅಭಿನಯಿಸಲಿದ್ದಾರೆ.ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಜೈ ತುಳು ಚಿತ್ರ ಆದಷ್ಟು ಬೇಗ ತೆರೆಕಾಣಲಿದೆ.ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಮಂಜುನಾಥ್ ಅತ್ತಾವರ, ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವಿಶಿಷ್ಟರಿಗಾಗಿ ವಿಶಿಷ್ಟ ಮೇಳ 2025.

ಮಂಗಳೂರು :ಸೇವಾ ಭಾರತಿ(ರಿ) ಮಂಗಳೂರು ಕಳೆದ 33 ವರ್ಷಗಳಿಂದ ದಿವ್ಯಾಂಗರ ಜೀವನ ಸ್ತರ ಸುಧಾರಿಸಲು ಶ್ರಮಿಸುತ್ತಿದೆ. ತನ್ನ ಅಂಗಸಂಸ್ಥೆಗಳ ಮೂಲಕ ಅವರಿಗೆ ಅವಶ್ಯವಿರುವ ಶಿಕ್ಷಣ, ತರಬೇತಿ, ಚಿಕಿತ್ಸೆ ಇತ್ಯಾದಿ ಸೌಕರ್ಯಗಳನ್ನು ಒದಗಿಸಿಕೊಟ್ಟು ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಈ ಪೈಕಿ,1998 ರಲ್ಲಿ ಆರಂಭವಾದ “ಆಶಾ ಜ್ಯೋತಿ”ಯೂ ಒಂದು. ಆಶಾಜ್ಯೋತಿಯು ದಿವ್ಯಾಂಗರು ಮತ್ತು ಅವರ ಹೆತ್ತವರ ಒಂದು ವೇದಿಕೆ. ಅದು ಈ ಕೆಳಗಿನ ಚಟುವಟಿಕೆಗಳನ್ನು ನಡೆಸುವ ಉದ್ದೇಶ ಹೊಂದಿದೆ.ದಿವ್ಯಾಂಗರಲ್ಲಿರುವ ಸುಪ್ತ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ, ಅರಳಿಸುವುದು.ಅವರನ್ನು ಯಥಾಸಾಧ್ಯ ಸ್ವಾವಲಂಬಿಗಳನ್ನಾಗಿ ಮಾಡುವುದು.ದಿವ್ಯಾಂಗರಲ್ಲಿ ಹಾಗೂ ಪೋಷಕರಲ್ಲಿರುವ ಅಸಹಾಯಕತೆಯ ವಾತಾವರಣವನ್ನು ನೀಗಿಸಿ ಅವರಲ್ಲಿ ವಿಶ್ವಾಸ ತುಂಬಿಸುವುದು.ಅಂಗವಿಕಲತೆಯ ಗುರುತುಚೀಟಿಯನ್ನು ಪಡೆಯಲು ಸಹಕರಿಸುವುದು.ಅವರಿಗಾಗಿ ವೈದ್ಯಕೀಯ ತಪಾಸಣಾ ಶಿಬಿರ/ಆಪ್ತ ಸಲಹಾ ಶಿಬಿರಗಳನ್ನು ನಡೆಸುವುದು.ಸರಕಾರಿ ಹಾಗೂ ಅರೆಸರಕಾರಿ ಸಂಸ್ಥೆಗಳಿಂದ ದಿವ್ಯಾಂಗರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಒದಗಿಸುವುದು.ದಿವ್ಯಾಂಗರಿಗಾಗಿ ವರ್ಷಕ್ಕೊಂದು ಬಾರಿ ಪ್ರವಾಸ ಹಾಗೂ ಮೇಳ ಆಯೋಜಿಸುವುದು.ವಿಶೇಷ ಸಾಧನೆ ಮಾಡಿದ ದಿವ್ಯಾಂಗರನ್ನು ಸನ್ಮಾನಿಸುವುದು. ಆಶಾಜ್ಯೋತಿಯು ಪ್ರತಿ ವರ್ಷ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ఎంబ ಕಾರ್ಯಕ್ರಮವನ್ನು ದಿವ್ಯಾಂಗರಿಗಾಗಿಯೇ ಆಯೋಜಿಸುತ್ತದೆ. ಅವರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಅವರಲ್ಲಿ ಚೈತನ್ಯ, ವಿಶ್ವಾಸ ತುಂಬಿಸುವುದೂ ಇದರ ಉದ್ದೇಶ. ಆರಂಭಿಕ ಕೆಲವು ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದಿವ್ಯಾಂಗರು ಸೇರಿದ್ದರೆ 2024ರಲ್ಲಿ ಸುಮಾರು 1200 ದಿವ್ಯಾಂಗರು ಹಾಗೂ 1600 ಹೆತ್ತವರು, ಹಿತೈಷಿಗಳು ಸೇರಿ ಸುಮಾರು 2800ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಮೇಳದಲ್ಲಿ ದಿವ್ಯಾಂಗರು ಖುಷಿ ಪಡುವುದರ ಜೊತೆಗೆ ಹಾಡುವುದು, ಕುಣಿಯುವುದು, ಸ್ಪರ್ಧೆ ಹಾಗೂ ಆಟೋಟಗಳಲ್ಲಿ ಭಾಗವಹಿಸುವುದು, ಕುದುರೆ ಸವಾರಿ ಸಹಿತ ಅನೇಕ ಮೋಜಿನ ಆಟಗಳ ವ್ಯವಸ್ಥೆ ಇರುತ್ತದೆ. ಹೆತ್ತವರನ್ನೂ ಸೇರಿಸಿದಂತೆ ಮನರಂಜನಾ ಸ್ಪರ್ಧೆಗಳು ಇರುತ್ತವೆ. ಮೇಳದಲ್ಲಿ ವಿಶಿಷ್ಟರಿಗೆ ಎಲ್ಲವೂ ಮುಕ್ತ ಮತ್ತು ಉಚಿತ. ಆಶಾಜ್ಯೋತಿಯ ಚಟುವಟಿಕೆಗಳು ಸಾರ್ವಜನಿಕರು ಹಾಗೂ ಸರ್ಕಾರಿ ಸಂಸ್ಥೆಗಳ ಆರ್ಥಿಕ ಸಹಕಾರದಿಂದಲೇ ನಡೆಯುತ್ತವೆ. ಈ ವರ್ಷದ ಮೇಳವು ಕೆನರಾ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್‌ನ ಸಹಭಾಗಿತ್ವದಲ್ಲಿ ದಿನಾಂಕ 19.01.2025 ನೇ ಆದಿತ್ಯವಾರದಂದು ಬೆಳಿಗ್ಗೆ 8.30ರಿಂದ ಸಾಯಂಕಾಲ 4.15ರ ತನಕ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವುದು. ಅಂದು ಬೆಳಿಗ್ಗೆ 9.30 ಗಂಟೆಗೆ ಮೇಳದ ಉದ್ಘಾಟನೆಯನ್ನು ಮನೋಜ್ ಕುಮಾರ್, ಮಹಾ ಪೌರರು, ಮಂಗಳೂರು ಮಹಾನಗರಪಾಲಿಕೆ ಇವರು ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಮ್ ಕುಮಾರ್ ಬೇಕಲ್,ನಿರ್ದೇಶಕರು, M/s ಸಿಟಾಡೆಲ್ ಪ್ರೊಜೆಕ್ಟ್ ಮತ್ತು ಡೆವೆಲಪರ್ಸ್, ಲಾಂಚೂಲಾಲ್ ಕೆ.ಎಸ್., ಸಿ.ಇ.ಒ.ಅಸ್ತ್ರ ಗ್ರೂಪ್ ಇವರು ಮುಖ್ಯ ಅತಿಥಿಗಳಾಗಿರುತ್ತಾರೆ. ಸರ್ಕಾರದಿಂದ ದಿವ್ಯಾಂಗರಿಗೆ ಲಭ್ಯವಾಗುವ ಸೌಲಭ್ಯಗಳ ಕುರಿತು ಶ್ರೀಮತಿ ಮಾಲಿನಿ ರಾಡ್ರಿಗಸ್, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಇವರು ವಿವರಗಳನ್ನು ನೀಡಲಿದ್ದಾರೆ.ಆಶಾಜ್ಯೋತಿಯು ದಿವ್ಯಾಂಗರು ಮತ್ತು ಅವರ ಹೆತ್ತವರಿಗೆ 22.12.2024ರಂದು ಪ್ರವಾಸವನ್ನು ಆಯೋಜಿಸಿದ್ದು, ಮುದ್ದಾಣು ಮಹಾಲಿಂಗೇಶ್ವರ ಕ್ಷೇತ್ರ, ಇನ್ನ ತಣ್ಣೀರುಬಾವಿ ಟ್ರೇ ಪಾರ್ಕ್‌ಗೆ ಕರೆದುಕೊಂಡು ಹೋಗಲಾಯಿತು. 190 ಮಂದಿ ದಿವ್ಯಾಂಗರು ಮತ್ತು ಪೋಷಕರು, ಶಿಕ್ಷಕರು ಈ ಪ್ರವಾಸದಲ್ಲಿ ಭಾಗವಹಿಸಿದ್ದರು.18 ವರ್ಷ ಮೇಲ್ಪಟ್ಟ ಸ್ವಲೀನತೆ (Autism), ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತ(Mental Retardation) ದಿವ್ಯಾಂಗರಿಗೆ ಕಾನೂನು ಬದ್ಧ ಪೋಷಕತ್ವ ಪ್ರಮಾಣ ಪತ್ರ (Legal Guardianship Certificate) ಪಡೆಯುವ ಬಗ್ಗೆ ಮತ್ತು ನಿರಾಮಯ ಆರೋಗ್ಯ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಬಾರಿಯ ಮೇಳದಲ್ಲಿ ನೀಡಲಾಗುವುದು. ಅದೇ ರೀತಿ ‘ಸಕ್ಷಮ’ ಸಂಸ್ಥೆಯ ವತಿಯಿಂದ ದಿವ್ಯಾಂಗರ ಬಗ್ಗೆ ಮತ್ತು ನೇತ್ರದಾನದ ಬಗ್ಗೆ ಮಾಹಿತಿ ನೀಡಲಾಗುವುದು. ನಮ್ಮ ಸುತ್ತಮುತ್ತ ಇರುವ ದಿವ್ಯಾಂಗರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಹಾಗೂ ಅವರ ಸಬಲೀಕರಣಕ್ಕಾಗಿ ಯೋಜಿಸಲಾಗಿರುವ ಈ ಕಾರ್ಯಕ್ರಮದ ಕುರಿತಾಗಿ ವಿವರವಾದ ಮಾಹಿತಿಗಳನ್ನು ತಮ್ಮ ಮುದ್ರಣ/ದೃಶ್ಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟಿಸುವ ಮೂಲಕ ಸಹಕರಿಸಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಈ ಹಿಂದಿನ ವರ್ಷಗಳಲ್ಲಿ ಕೂಡಾ ತಾವುಗಳು ಮೇಳದ ಮುನ್ನ ಮತ್ತು ಆ ಬಳಿಕವೂ ತಮ್ಮ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಕೊಟ್ಟಿರುವ ವ್ಯಾಪಕ ಪ್ರಚಾರಕ್ಕಾಗಿ ನಾವು ಕೃತಜ್ಞರು.ಪತ್ರಿಕಾಗೋಷ್ಠಿಯಲ್ಲಿ ಆಶಾಜ್ಯೋತಿಯ ಗೌರವಾಧ್ಯಕ್ಷರಾದ ವಿ. ಮುರಳೀಧರ ನ್ಯಾಕ್, ಅಧ್ಯಕ್ಷರಾದ ಶ್ರೀಮತಿ ಗೀತಾ ಲಕ್ಷ್ಮೀಶ್, ಕಾರ್ಯದರ್ಶಿಯವರಾದ ಎಸ್. ರವಿನಾಥ ಕುಡ, ಜೊತೆ ಕಾರ್ಯದರ್ಶಿ ಗಣರಾಜ.ವೈ,ಖಜಾಂಚಿಯಾದ ಕೆ ವಿಶ್ವನಾಥ ಪೈ, ಜೊತೆ ಖಜಾಂಚಿಯಾದ ಬಿ ಅಶ್ವತ್ಥಾಮ ರಾವ್ ಮತ್ತು ಸೇವಾಭಾರತಿ (ರಿ) ಮಂಗಳೂರು ಇದರ ಗೌರವ ಕಾರ್ಯದರ್ಶಿಯಾದ ಹೆಚ್ ನಾಗರಾಜ ಭಟ್, ಖಜಾಂಚಿಯಾದ ಶ್ರೀ ಪಿ ವಿನೋದ್ ಶೆಣೈ ಇವರು ಉಪಸ್ಥಿತರಿದ್ದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

“ಮಿಡ್ಲ್ ಕ್ಲಾಸ್ ಫ್ಯಾಮಿಲಿ'” ತುಳು ಚಿತ್ರದೊಂದಿಗೆ ಕೈಜೋಡಿಸಿದ ರೋಹನ್ ಮೊಂತೇರೊ

ಮಂಗಳೂರು: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಜನವರಿ 24 ರಂದು ತೆರೆಕಾಣಲಿದೆ.ತುಳು ಭಾಷೆಯ ಬೆಳವಣಿಗೆಗೆ ತುಳು ಚಿತ್ರ ರಂಗದ ಬೆಳವಣಿಗೆ ಕೂಡ ಅತ್ಯಗತ್ಯ. ಪ್ರತಿಯೊಬ್ಬ ತುಳುವನು ತುಳು ಚಿತ್ರ ನೋಡಿ ಇಷ್ಟ ಪಟ್ಟು ಹರಸಿದರೆ, ಚಿತ್ರರಂಗ ಉತ್ತಮವಾಗಿ ಬೆಳೆಯುತ್ತದೆ.ತುಳು ಚಿತ್ರಗಳನ್ನು ಜನ ಮನ ಮುಟ್ಟುವ ರೀತಿಯಲ್ಲಿ ತಯಾರಿಸಿ ಪ್ರಸ್ತುತ ಪಡಿಸಲು ಎಷ್ಟೇ ಪ್ರಯತ್ನಪಟ್ಟರು , ವಿಸ್ತಾರವಾದ ತುಳುನಾಡಿನಲ್ಲಿ ಒಂದು ಪರಿಧಿಯವರೆಗೂ ಮಾತ್ರ ಅದನ್ನು ತಲುಪಿಸಲು ಸಾಧ್ಯವಾಗುತ್ತಿದೆ. ತುಳು ಚಿತ್ರರಂಗ ತನ್ನ ಪರಿಧಿಯನ್ನು ವಿಸ್ತರಿಸಲು ಪ್ರೋತ್ಸಾಹಬೇಕಾಗಿದೆ. ಈ ಪ್ರೋತ್ಸಾಹಕ್ಕಾಗಿ ಹಲವಾರು ಮಂದಿಯ ಬಾಗಿಲು ತಟ್ಟುವುದು ನಮ್ಮ ಕರ್ತವ್ಯ ಹಾಗೂ ಅನಿವಾರ್ಯತೆಯೂ ಹೌದು. ಇಂಥಾ ಅನಿವಾರ್ಯತೆಯ ಸಂದರ್ಭದಲ್ಲಿ ಬಾಗಿಲು ತೆರೆದು ನಮ್ಮನ್ನು ಬಾಚಿ ತಬ್ಬಿಕೊಂಡವರು ರೋಹನ್ ಕಾರ್ಪೊರೇಷನ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆದಂತಹಾ ರೋಹನ್ ಮೊಂತೇರೊರವರು. ಪ್ರಪ್ರಥಮ ಬಾರಿಗೆ ಒಬ್ಬ ಬಿಸಿನೆಸ್ ಜಾಯoಟ್ ತುಳು ಚಿತ್ರರಂಗಕ್ಕೆ ಈ ರೀತಿಯ ಸಹಕಾರ ನೀಡಿದ್ದು, ಶ್ಲಾಘನೀಯ. ರೋಹನ್ ಮೊಂತೇರೊರವರು ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಚಿತ್ರವನ್ನು ವೀಕ್ಷಿಸಿ , ಇಷ್ಟ ಪಟ್ಟು ತನ್ನ ಬೆಂಬಲವನ್ನು ಘೋಷಿಸಿದ್ದಾರೆ. ಇದೀಗ ರೋಹನ್ ಹಾಗೂ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಸಮಾಗಮದಲ್ಲಿ ತುಳು ಚಿತ್ರ ತನ್ನ ವಿಜಯದ ಇನ್ನೊಂದು ಮೆಟ್ಟಿಲು ಹತ್ತಲು ತಾಯಾರಾಗಿರುವುದು ಖಚಿತ.‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇಲ್ಲಿ ದುಡಿದಿದ್ದಾರೆ. ಮುಖ್ಯವಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಇಲ್ಲೂ ನಿರ್ದೇಶಕರಾಗಿದ್ದಾರೆ‌. ವಿನೀತ್ ಕುಮಾರ್ ನಾಯಕ ನಟನಾಗಿ ಸಮತಾ ಅಮೀನ್ ನಾಯಕಿಯಾಗಿ ಹಾಗೂ ತುಳು ಚಿತ್ರರಂಗದ ಮೇರು ಕಲಾವಿದರಾದ ನವೀನ್ ಡಿ.ಪಡೀಲ್,ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪ ವರ್ಕಾಡಿ, ರವಿ ರಾಮಕುಂಜ ಮತ್ತಿತರರು ಅಭಿನಯಿಸಿದ್ದಾರೆ‌. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್ ಪಿ, ಸಂಕಲನ ವಿಶಾಲ್ ದೇವಾಡಿಗ, ವಸ್ತ್ರ ವಿನ್ಯಾಸ ವರ್ಷ ಆಚಾರ್ಯ ಹಾಗೂ ನವೀನ್ ಕುಮಾರ್ ಶೆಟ್ಟಿ ಮತ್ತು ವಿನಾಯಕ ಆಚಾರ್ಯ ನೃತ್ಯ ಸಂಯೋಜಿಸಿದ್ದಾರೆ.ಪವನ್ ಕುಮಾರ್,ನಿತಿನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಭರತ್ ಕುಮಾರ್ ಗಟ್ಟಿ, ಗಣೇಶ್ ಕೊಲ್ಯ, ಅಶ್ವಿನಿ ರಕ್ಷಿತ್, ಕ್ಷಿತಿಂದ್ರ ಕೋಟೆಕಾರ್, ಮಿತ್ರಂಪಾಡಿ ಜಯರಾಮ್ ರೈ, ಕಿರಣ್ ಶೆಟ್ಟಿ, ಸ್ವಸ್ತಿಕ್ ಆಚಾರ್ಯ ಸಹ ನಿರ್ಮಾಪಕರಾಗಿದ್ದಾರೆ.ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ ಹಾಗೂ ನಿತಿನ್ ಶೇರಿಗಾರ್ ಮತ್ತು ಆಯುಷ್ಮಾನ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.ಈಗಾಗಲೇ ಈ ಚಿತ್ರವನ್ನು ಯುಎಇ ರಾಷ್ಟ್ರದಲ್ಲಿ ಮೋನಿಷ ಶರತ್ ಶೆಟ್ಟಿ , ಹರೀಶ್ ಬಂಗೇರ, ಹರೀಶ್ ಶೇರಿಗಾರ್, ಗಿರೀಶ್ ನಾರಾಯಣ್, ದೀಪಕ್ ಕುಮಾರ್ ರವರು ಅರ್ಪಿಸಲು ಮುಂದಾಗಿದ್ದು, ದುಬೈನ ಗಮ್ಮತ್ ಕಲಾವಿದರ ಪೈಕಿ 5 ಕಲಾವಿದರಾದ ಚಿದಾನಂದ ಪೂಜಾರಿ , ಗಿರೀಶ್ ನಾರಾಯಣ್, ಡೋನಿ ಕೊರಿಯ, ಆಶಾ ಕೊರಿಯ , ದೀಪ್ತಿ ದಿನ್ ರಾಜ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.ಜನವರಿ 18, 19 ರಂದು ಯುಎಇ ಯಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಸಿನಿಮಾ ಬಿಡುಗಡೆಯ ಮೊದಲೇ ಯುಎಇಯಲ್ಲಿ 30 ಲಕ್ಷಗಳ ಗಳಿಕೆಯನ್ನು ಮಾಡಿದೆ. ಇದು ತುಳು ಸಿನಿಮಾರಂಗದಲ್ಲಿ ದಾಖಲೆಯಾಗಿದೆ.ಸಿನಿಮಾ ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಹಾಸ್ಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಸಿನಿಮಾದಂತೆ ಈ ಸಿನಿಮಾ ಕೂಡಾ ತುಳುಚಿತ್ರರಂಗದಲ್ಲಿ ದೊಡ್ಡ ಸೌಂಡ್ ಮಾಡಲಿದೆ. ಈಗಾಗಲೇ ಸಿನಿಮಾದ ಟೈಟಲ್ ಸ್ವಾಂಗ್ ಸೂಪರ್ ಹಿಟ್ ಆಗಿದೆ. ಜೊತೆಗೆ ಸಿನಿಮಾದ ನಾಯಕ ನಟ ವಿನೀತ್ ಕುಮಾರ್ ಮತ್ತು ನಾಯಕಿ ನಟಿ ಸಮತಾ ಅಮೀನ್ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ.

ಪ್ರಾದೇಶಿಕ ವಾರ್ತೆಗಳು

ಯಕ್ಷ ಸಾಧಕರಿಗೆ ಪೂಲ ವಿಠಲ ಶೆಟ್ಟಿ ಪ್ರಶಸ್ತಿ

ಮಂಗಳೂರು: ಕಟೀಲು ಮೇಳದ ಭಾಗವತ ಅಂಡಾಲ ದೇವಿ ಪ್ರಸಾದ ಆಳ್ವ ಹಾಗೂ ಬಣ್ಣದ ವೇಷಧಾರಿ ಸುರೇಶ ಕುಪ್ಪೆಪದವು ಅವರಿಗೆ ಈ ವರ್ಷದ “ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ ” ಯನ್ನು ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಲ್ಲಿ ನಡೆದ ಪಡುಬಿದ್ರೆ ಕಲ್ಲಟೆಗುತ್ತು ಮೂಲ ಕುಟುಂಬಸ್ಥರಾದ ರಾಧಾ ವಿಠ್ಠಲ ಶೆಟ್ಟಿ ಮತ್ತು ಮಕ್ಕಳ ಶ್ರೀ ಕಟೀಲು ಮೇಳದ 28 ನೇ ವರ್ಷದ ಸೇವೆ ಬಯಲಾಟ ದ ವೇದಿಕೆಯಲ್ಲಿ ವಿತರಿಸಲಾಯಿತು.ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು,ಪರಾಧೀನ ವಾಗಿದ್ದ ಕಟೀಲು ಮೂಲ ಕುದುರನ್ನು ಶ್ರೀ ಕ್ಷೇತ್ರಕ್ಕೆ ಮರಳಿಸಿದ ದಾನಿಗಳಾದ ಪೂಲ ವಿಠ್ಠಲ ಶೆಟ್ಟಿ ಪರಿವಾರದ ಸೇವೆ ಯನ್ನು ಸ್ಮರಿಸಿದರು.ಕದ್ರಿ ನವನೀತ ಶೆಟ್ಟಿ ಅವರು“ಅಂಡಾಲ ದೇವೀ ಪ್ರಸಾದ ಅವರು ಕಳೆದು ಮೂರುವರೆ ದಶಕ ಗಳಿಂದ ಯಕ್ಷಗಾನ ರಂಗದಲ್ಲಿ ಪ್ರಸಂಗ ರಚನೆ ಹಾಗೂ ಭಾಗವತಿಕೆಯಲ್ಲಿ ಪ್ರಬುದ್ಧತೆ ಮೆರೆದವರು.ತೆಂಕು ಹಾಗೂ ಬಡಗು ತಿಟ್ಟಿನ ಟೆಂಟ್ ಮೇಳಗಳಲ್ಲೂ ಅವರ ಪ್ರಸಂಗ ಗಳು ಯಶಸ್ವಿ ಪ್ರದರ್ಶನ ಕಂಡಿವೆ. ಕಟೀಲು ಮೇಳದಲ್ಲೇ ಬಣ್ಣದ ವೇಷಧಾರಿ ಯಾಗಿ ರೂಪುಗೊಂಡು ಕಳೆದ 35 ವರ್ಷ ಗಳಿಂದ ಕಲಾ ಸೇವೆಗೈಯ್ಯುತ್ತಿರುವ ಸುರೇಶ ಕುಪ್ಪೆಪದವು ಅವರು ಮಹಿಷಾಸುರ ಪಾತ್ರ ನಿರ್ವಹಣೆ ಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದಾರೆ” ಎಂದು ಅಭಿನಂದಿಸಿದರು.ಕಂಬಳ ಕೋಣಗಳ ಮಾಲಕರಾಗಿ ಖ್ಯಾತಿ ಪಡೆದಿದ್ದ ಮುಂಬೈ ಘಾಟಿಕೋಪರ್ ನ ಭಾರತ್ ಕೆಫೆ ಸಂಸ್ಥಾಪಕ ಪೂಲ ವಿಠ್ಠಲ ಶೆಟ್ಟಿ ಅವರ ಸ್ಮರಣಾರ್ಥ ಪ್ರತೀ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಸೇವಾಕರ್ತ ಸತೀಶ್ ವಿಠಲ ಶೆಟ್ಟಿ ಸ್ವಾಗತಿಸಿದರು. ಉದಯ ಶೆಟ್ಟಿ ಎರ್ಮಾಳ್, ಐಕಳ ವಿಶ್ವನಾಥ ಶೆಟ್ಟಿ ಮತ್ತು ವಿಶುಕುಮಾರ್ ಬ್ರಹ್ಮಾವರ ಉಪಸ್ಥಿತರಿದ್ದರು.ಶ್ರೀ ಕಟೀಲು ಮೇಳದವರಿಂದ ” “ರಾಮ -ಕೃಷ್ಣ – ಗೋವಿಂದ ” ಯಕ್ಷಗಾನ ಬಯಲಾಟ ಜರಗಿತು.

ಪ್ರಾದೇಶಿಕ ವಾರ್ತೆಗಳು

ಕವಿ ಸರ್ವಜ್ಞ ವೃತ್ತ ನಿರ್ವಹಣೆ ಪಾಲಿಕೆ ಮಾಡುವಂತೆ ಮನವಿ

ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಗಳ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ ರಿ. ಮಂಗಳೂರುಇದರ ಕೋರಿಕೆಯ ಮೇರೆಗೆ ಮಂಗಳೂರು ಉತ್ತರದ ಶಾಸಕರಾದ ಡಾ ಭರತ್ ಶೆಟ್ಟಿ ಹಾಗು ಮನಪಾ ಶಿಫಾರಸ್ಸಿನಂತೆ , ಮಂಗಳೂರು ನಗರಾಭಿವೃದಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿದ ಬೋಂದೆಲ್ ಏರ್ ಪೋರ್ಟ್ ರಸ್ತೆಯಲ್ಲಿರುವ ಸಂತ ಕವಿ ಸರ್ವಜ್ಞ ವೃತ್ತದ ನಿರ್ವಹಣೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಮಾಡಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅವರಿಗೆ ಮನವಿಯನ್ನು ನೀಡಿವಿನಂತಿಸಲಾಯಿತು. ಇದಕ್ಕೆ ಸ್ಪಂದಿಸಿದ ಮೇಯರ್ ಅವರು, ಈ ತಿಂಗಳ ಸಾಮಾನ್ಯ ಸಭೆಯಲ್ಲಿ ಇದರ ಬಗೆ ಚರ್ಚಿಸಿ, ಶೀಘ್ರದಲ್ಲಿ ಈಗಿರುವ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ ಮಂಗಳೂರು ಉತ್ತರ ವಿಧಾನ ಸಭಾ ಶಾಸಕರಾದ ಭರತ್ ಶೆಟ್ಟಿ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ಲೋಹಿತ್ ಅಮೀನ್ ಮತ್ತು ಸಂಗೀತ ನಾಯಕ್ ಅವರಿಗೂ ಮನವಿ ಪತ್ರ ನೀಡಿ ಈ ಸಮಸ್ಯೆಯನ್ನು ಪರಿಹರಿಸಲು ವಿನಂತಿ ಮಾಡಲಾಯಿತು.ಈ ಸಂದರ್ಭದಲ್ಲಿ ಕುಲಾಲ/ ಕುಂಬಾರ ಯುವ ವೇದಿಕೆ ರಾಜ್ಯಾಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವುಶು ಚಾಂಪಿಯನ್ ಶಿಪ್: ಹರ್ಷಲ್‌ಗೆ ಚಿನ್ನದ ಪದಕ

ಮಂಗಳೂರು: ಮೂರನೇ ಅಂತರ್ ಶಾಲಾ ಮತ್ತು ಅಂತರ್ ಜಿಲ್ಲಾ ವುಶು ಚಾಂಪಿಯನ್‌ಶಿಪ್-2025ಮಂಗಳೂರಿನ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜ.12 ರಂದು ನಡೆಯಿತು. ಅಂತರ್ ಶಾಲಾ ಸಬ್ ಜೂನಿಯರ್ ವಿಭಾಗದಲ್ಲಿ ಬೋಂದೆಲ್ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹರ್ಷಲ್ ಎನ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇವರು ಪಚ್ಚನಾಡಿ ಬಂಗೇರು ಸೀಮೆ ನಿವಾಸಿ ನವೀನ್‌ಚಂದ್ರ ಮತ್ತು ಜಯಶ್ರೀ ದಂಪತಿಯ ಪುತ್ರ.

ಪ್ರಾದೇಶಿಕ ವಾರ್ತೆಗಳು

ಪರೋಪಕಾರಿ, ಕಾರ್ಪೊರೇಟರ್ ಗಣೇಶ್ ಕುಲಾಲ್ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆ

ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸುವುದರ ಜತೆಗೆ ಅನಾಥ ಶವಗಳ ಅಂತ್ಯ ಸಂಸ್ಕಾರ ಸೇವೆಯಲ್ಲಿತೊಡಗಿಸಿಕೊಂಡಿರುವ ಗಣೇಶ ಕುಲಾಲ್ ಅವರು 2024-25ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿವೆ. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ನೇತೃತ್ವದ ಆಯ್ಕೆ ಸಮಿತಿಯು ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜ. 26ರಂದು ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಗಣೇಶ ಕುಲಾಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಗಣೇಶ್ ಕುಲಾಲ್ ಅವರು ವಾರೀಸುದಾರರು ಇಲ್ಲದ ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸುವ ಮಾನವೀಯ ಕಾರ್ಯದಲ್ಲಿ 25 ವರ್ಷಗಳಿಂದ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಬಡವರು, ಶ್ರೀಮಂತರು, ಅನಾಥರು ಎಂಬ ಭೇದವಿಲ್ಲದೆ ಇದುವರೆಗೆ 1500ಕ್ಕೂ ಅಧಿಕ ಮೃತದೇಹಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ ಸಾಧನೆ ಇವರದ್ದು. ಇವರು ಈ ಸೇವೆಗಾಗಿ ಯಾರಿಂದಲೂ ಏನನ್ನು ಪಡೆಯುವುದಿಲ್ಲ. ಮಂಗಳೂರು ನಗರದಲ್ಲಿ ಯಾರೇ ಆಗಲಿ ಶವದ ಅಂತ್ಯ ಸಂಸ್ಕಾರ ನೆರವೇರಿಸಲು ಕರೆದರೆ ಅಲ್ಲಿ ಗಣೇಶ್ ಕುಲಾಲ್ ಹಾಜರು. ವೆನ್ ಲಾಕ್ ಆಸ್ಪತ್ರೆಯಲ್ಲಿ ವಿಲೇವಾರಿಯಾಗದ ಅನಾಥ ಶವಗಳನ್ನು ಇವರು ಸ್ಮಶಾನಕ್ಕೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಈ ಸೇವೆಯನ್ನು ದೇವರ ಸೇವೆ ಎಂದು ನಂಬಿದವರು. ಅವರು ಜಾತಿ, ಪಕ್ಷ ಭೇದವನ್ನು ಎಣಿಸದೆ, ನಿಸ್ವಾರ್ಥ ಸೇವೆಯ ಮೂಲಕ ಆನಾಥ ಬಂಧು ಎನಿಸಿಕೊಂಡಿದ್ದಾರೆ.ತಂದೆಯೇ ಪ್ರೇರಣೆ: ತಂದೆ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಿದ್ದರು. ಅವರ ಸೇವೆಗೆ ಕೈಜೋಡಿಸಲು ಚಿಕ್ಕಂದಿನಲ್ಲಿ ಹೋಗುತ್ತಿದ್ದೆ. ಮಂದೆ ವಿಧಿವಿಧಾನವನ್ನು ಕಲಿತು,ಅದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. 30ರ ಹರೆಯಲ್ಲಿ ಈ ಸೇವೆಗೆ ಇಳಿದೆ.ಆರಂಭದಲ್ಲಿ ಮನೆಯಲ್ಲಿ ವಿರೋಧ ಕಂಡು ಬಂದಿತ್ತು. ಆದರೆ ತಾಯಿ ನನಗೆ ಪೂರ್ಣ ಬೆಂಬಲ ನೀಡಿದರು ಎನ್ನುತ್ತಾರೆ ಗಣೇಶ್ ಕುಲಾಲ್.ಗಣೇಶ್ ಕುಲಾಲ್ ಅವರು ಶವಗಳ ವಿಲೇವಾರಿ ಮಾತ್ರವಲ್ಲ, ಕಾಯಿಲೆ ಬಿದ್ದವರನ್ನು ಆಸ್ಪತ್ರೆ ಗಳಿಗೆ ಸಾಗಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಕಾರ್ಯವನ್ನು ಮಾಡುತ್ತಾರೆ. ಕೊರೋನ ಸಮಯದಲ್ಲಿ 150ಕ್ಕೂ ಅಧಿಕ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೊರೋನದಿಂದ ಮೃತಪಟ್ಟ ಶವಗಳನ್ನು ಆಸ್ಪತ್ರೆಗಳಿಂದ ಬೋಳಾರ ಮತ್ತು ನಂದಿಗುಡ್ಡೆಯ ಸ್ಮಶಾನಗಳಿಗೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಆ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು. ಲಾಕ್ ಡೌನ್ ನಿಂದ ತೊಂದರೆಗೊಳಗಾದ ದೂರದ ಊರಿನ ಕಾರ್ಮಿಕರಿಗೆ, ಬಡವರಿಗೆ ಆಹಾರದ ವ್ಯವಸ್ಥೆ, ಕಿಟ್ ವ್ಯವಸ್ಥೆ ಒದಗಿಸಿದ್ದರು. ನಿರಾಶ್ರಿತರ ಶಿಬಿರ ಆರಂಭಿಸಿ ಸುಮಾರು 30 ಮಂದಿಗೆ ಮೂರು ಹೊತ್ತು ಆಹಾರದ ವ್ಯವಸ್ಥೆಯನ್ನು ಹಲವು ತಿಂಗಳುಗಳ ನೀಡಿದ್ದರು.55 ಹರೆಯದ ಗಣೇಶ್ ಕುಲಾಲ್ ಆರ್ಥಿಕವಾಗಿ ಸ್ಥಿತಿವಂತರಲ್ಲ. 8ನೇ ತರಗತಿ ಶಿಕ್ಷಣ ಪಡೆದಿದ್ದಾರೆ. ಚಿಕ್ಕಂದಿನಲ್ಲಿ ಕೆಂಪು ಕಲ್ಲು ಹೊರುವ ಕೆಲಸದ ಮೂಲಕ ದುಡಿಯಲು ಆರಂಭಿಸಿದೆ. ಒಂದು ಕಲ್ಲಿಗೆ 50 ಪೈಸೆಯಿಂದ ಒಂದು ರೂಪಾಯಿ ಸಿಗುತ್ತಿತ್ತು. ಅದೇ ದುಡಿಮೆಯಿಂದ ಬಂದ ಆದಾಯವನ್ನು ಕೂಡಿಟ್ಟು ರಿಕ್ಷಾ ಖರೀದಿಸಿದರು.ಅದೇ ರಿಕ್ಷಾದಲ್ಲಿ ಚಾಲಕ ರಾಗಿ 10 ವರ್ಷಗಳ ಕಾಲ ದುಡಿದು , ಬಳಿಕ ಮಿನಿ ಟೆಂಪೋ ಖರೀದಿಸಿದರು. ಅದರಲ್ಲಿ ಚಾಲಕರಾಗಿ ದುಡಿಯುತ್ತಾ , ಸಣ್ಣ ಕಾರ್ಯಕ್ರಮಗಳಿಗೆ ಬಾಡಿಗೆಗೆ ಶಾಮಿಯಾನ ನೀಡುವ ಬ್ಯುಸಿನೆಸ್ ಆರಂಭಿಸಿದ್ದರು. 2019ರಲ್ಲಿ ರಾಜಕೀಯ ಪ್ರವೇಶಿಸಿ ಮನಪಾ ಸದಸ್ಯರಾದ ಬಳಿಕ ಇವರಿಗೆ ಜವಾಬ್ದಾರಿ ಜಾಸ್ತಿಯಾಗಿ ಶಾಮಿಯಾನ ಮತ್ತು ಚೆಯರ್ ಬಾಡಿಗೆಗೆ ನೀಡುವ ಇವರ ಅಂಗಡಿ ಬಂದ್ ಆಯಿತು.ಈಗ ಅವರ ಬಳಿ15 ವರ್ಷಗಳಷ್ಟು ಹಳೆಯ ಒಂದು ಸಣ್ಣ ಟೆಂಪೋ ಇದೆ. ಗಣೇಶ್ ಕುಲಾಲ್ ಅವರ ಸಮಾಜ ಸೇವೆಗೆ ಪತ್ನಿ, ಪುತ್ರ ಪ್ರೋತ್ಸಾಹ ನೀಡುತ್ತಿದ್ದಾರೆ.ಸ್ವಂತ ಮನೆಯಿಲ್ಲ: ಗಣೇಶ್ ಕುಲಾಲ್ ಅವರಿಗೆ ಸ್ವಂತ ಮನೆಯಿಲ್ಲ. ಹೆತ್ತವರು ಉರ್ವ ಮಾರಿಗುಡಿ ದೇವಸ್ಥಾನದ ಚಾಕರಿ ಮಾಡಿಕೊಂಡು ಇದ್ದವರು. ದೇವಸ್ಥಾನದ ಚಾಕರಿ ಮಾಡುವವರಿಗೆ ದೇವಸ್ಥಾನದ ವತಿಯಿಂದ ಮನೆ ನೀಡಲಾಗುತ್ತದೆ. ಅದೇ ಮನೆಯಲ್ಲಿ ಇವರು ಹುಟ್ಟಿ ಬೆಳೆದವರು. ಸ್ವಂತ ಮನೆ ಮಾಡುವ ಕಡೆಗೆ ಗಮನ ಹರಿಸಿದವರಲ್ಲ. ಕಾಯಕದಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. “ಅಮ್ಮ(ಮಾರಿಯಮ್ಮ)ನನ್ನು ಬಿಟ್ಟು ಬೇರೆ ಕಡೆಗೆ ಹೋಗಲು ಮನಸ್ಸು ಒಪ್ಪುತ್ತಿಲ್ಲ” ಎಂದು ಹೇಳುವ ದೇವರ ಬಗ್ಗೆ ಅಚಲ ವಿಶ್ವಾಸವಿಟ್ಟು ತನ್ನ ಕಾಯಕವನ್ನು ಮುಂದುವರಿಸಿದ್ದಾರೆ ಗಣೇಶ ಕುಲಾಲ್.ಗಣೇಶ್ ಕುಮಾಲ್ ನಿರ್ಗತಿಕರಿಗೆ ಮನೆ ಕಟ್ಟಿಕೊಡುವಲ್ಲಿ ಶ್ರಮಿಸಿದ್ದಾರೆ. ತಾಯಿ ಮತ್ತು ಮಗಳು ಮಾತ್ರ ಇರುವ ನಿರ್ಗತಿಕ ಕುಟುಂಬವೊಂದಕ್ಕೆ ಗಣೇಶ್ ಕುಲಾಲ್ ಅವರು ಸ್ಥಳೀಯ ಸ್ಥಳೀಯ ದಾನಿಗಳ ನೆರವಿನಲ್ಲಿ 7 ಲಕ್ಷ ರೂ.ವೆಚ್ಚದಲ್ಲಿ ಉರ್ವದಲ್ಲಿ ಮನೆ(ಅಟಲ್ ನಿಲಯ) ನಿರ್ಮಿಸಿ ಕೊಟ್ಟಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಜನವರಿ 14 ರಿಂದ ಜನವರಿ 24 ರವರೆಗೆ ನಡೆಯಲಿದೆ ಕದ್ರಿ ಶ್ರೀ ಕ್ಷೇತ್ರದ ವರ್ಷಾವಧಿ ಜಾತ್ರೆ

ಮಂಗಳೂರು: ಇತಿಹಾಸ ಪ್ರಸಿದ್ದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯು ಇಂದಿನಿಂದ (ಜ.14) ಆರಂಭಗೊಳ್ಳಲಿದೆ.ಜನವರಿ 24ರ ವರೆಗೆ ನಡೆಯಲಿರುವ ವಾರ್ಷಿಕ ಮಹೋತ್ಸವವು ತಾ.13ರಂದು ರಾತ್ರಿ ಮಹಾಪೂಜೆಯ ಬಳಿಕ ಮುಹೂರ್ತ ಬಲಿ, ದೇವರ ಪ್ರಾರ್ಥನೆಯೊಂದಿಗೆ ತಂತ್ರಿಗಳ ಯಾಗಶಾಲಾ ಪ್ರವೇಶದೊಂದಿಗೆ ಪ್ರಾರಂಭವಾಗುವುದು. ಇಂದು ಮಂಗಳವಾರ ಮುಂಜಾನೆ ತೀರ್ಥ ಸ್ನಾನ ಆರಂಭಗೊಂಡು, ಕದ್ರಿ ಶ್ರೀ ಯೋಗೀಶ್ವರ ಮಠಾಧಿಪತಿ ಶ್ರೀ ರಾಜಾ ನಿರ್ಮಲ್ ನಾಥಜೀಯವರಿಂದ ತೀರ್ಥ ಸ್ನಾನ ನೆರವೇರುವುದು. ಸಂಜೆ ಗಂಟೆ 6ಕ್ಕೆ ಏಳುಪಟ್ಟಣ ಮೊಗವೀರ ಮಹಾ ಸಭಾದವರಿಂದ ಧ್ವಜಸ್ತಂಭದ ಆರೋಹಣ, ಮಹಾಪೂಜೆ ಬಳಿಕ ಶ್ರೀ ಮಲರಾಯ ದೈವದ ಭಂಡಾರದ ಆಗಮನವಾಗುವುದು. ರಾತ್ರಿ 10ಕ್ಕೆ ಧ್ವಜಬಲಿ, ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವಬಲಿ,ಭೂತಬಲಿ, ಕದ್ರಿ ಕೆಳಗಿನ ಮನೆಯವರಿಂದ ಕಂಚುದೀಪ ಬೆಳಗುವುದು, ದೀಪದಬಲಿ ಉತ್ಸವ , ಸಣ್ಣ ರಥೋತ್ಸವ, ತಪ್ಪಂಗಾಯಿ ನಡೆಯುವುದು.15, ಬುಧವಾರ ರಾತ್ರಿ ಉತ್ಸವಬಲಿ,ದೀಪದಬಲಿ ಉತ್ಸವ,ಸಣ್ಣ ರಥೋತ್ಸವ ಜರಗಲಿರುವುದು. ಜ. 16 ರಂದು ಸಂಜೆ ಬಿಕರ್ನಕಟ್ಟೆ ಸವಾರಿ ಬಲಿ, ಜ.17 ರಂದು ಮಲ್ಲಿಕಟ್ಟೆ ಸವಾರಿ ಬಲಿ, ಜ.18 ರಂದು ಮುಂಡಾಣಕಟ್ಟೆ ಸವಾರಿ ಬಲಿ, ಜ.19ರಂದು ಕೊಂಚಾಡಿ ಸವಾರಿ ಬಲಿ, ಅಲ್ಲದೆ ಜ.20 ರಂದು ಏಳನೇ ದೀಪೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು , ಜ.21 ರಂದು ಸಂಜೆ ” ಶ್ರೀ ಮನ್ಮಹಾರಥೋತ್ಸವ, ಬೆಳ್ಳಿರಥೋತ್ಸವ, ಚಂದ್ರಮಂಡಲ ಉತ್ಸವದ ಬಳಿಕ ಮಹಾಪೂಜೆ, ಭೂತಬಲಿ ಹಾಗೂ ಕವಾಟ ಬಂಧನ ನೆರವೇರುವುದು.ಜ..22 ಕವಾಟೋದ್ಘಾಟನೆ, ತುಲಾಭಾರ ಸೇವೆಗಳು ನಡೆಯಲಿದ್ದು, ರಾತ್ರಿ ಚಂದ್ರಮಂಡಲ ಉತ್ಸವ ಬಳಿಕ ಕದ್ರಿ ಹತ್ತು ಸಮಸ್ತರಿಂದ ಧ್ವಜಾವರೋಹಣಗೊಳ್ಳಲಿದೆ.ಜ.24 ರಂದು‌ ಶ್ರೀ ಮಲರಾಯ ಹಾಗೂ ಪರಿವಾರ ದೈವಗಳ ನೇಮದೊಂದಿಗೆ ವರ್ಷಾವಧಿ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಎ.ಜೆ.ಶೆಟ್ಟಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷೆ ಮಲ್ಲಿಕಾ ಪಕಳ, ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷ ಪುಷ್ಪಲತಾ, ಕದ್ರಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ನಿಕಟಪೂರ್ವ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್, ಕ್ಷೇತ್ರದ ಪರ್ಯಾಯ ಅರ್ಚಕರಾದ ರಾಘವೇಂದ್ರ ಅಡಿಗ, ಪ್ರಮುಖರಾದ ಎಸ್. ಪ್ರದೀಪ ಕುಮಾರ ಕಲ್ಕೂರ, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.ಚಿತ್ರಗಳು :ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಭರತನಾಟ್ಯದಲ್ಲಿ ಶರಧಿ ಎಸ್. ರಾವ್ ಗೆ ಡಿಸ್ಟಿಂಕ್ಷನ್

ಮಂಗಳೂರು: ಮೈಸೂರಿನ ಪ್ರತಿಷ್ಠಿತ ಕರ್ನಾಟಕ ಸ್ಟೇಟ್ ಡಾ ! ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಅಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಯೂನಿವರ್ಸಿಟಿ ನಡೆಸಿದಂತ ಭರತನಾಟ್ಯ ಜ್ಯೂನಿಯರ್ ಪರೀಕ್ಷೆ ವಿಭಾಗದಲ್ಲಿ ಉರ್ವ ಕೆನರಾ ಪ್ರೌಢ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿ ಶರಧಿ ಎಸ್. ರಾವ್ ಶೇಕಡ 91.25 ಗರಿಷ್ಠ ಅಂಕಗಳೊಂದಿಗೆ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಉರ್ವ ‘ನತ್ಯರಾಧನಾ ಕಲಾಕೇಂದ್ರ ‘ ಮಂಗಳೂರು. ಸಂಸ್ಥೆಯ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಇವರ ಶಿಷ್ಯೆ ಹಾಗೂ ವಿದುಷಿ ಮಯೂರಿ ಎಸ್. ರಾವ್ ಮತ್ತು ನ್ಯಾಯವಾದಿ, ಖ್ಯಾತ ಸಾಹಿತಿ ಶಶಿರಾಜ್ ರಾವ್ ಕಾವೂರು ಇವರ ಸುಪುತ್ರಿಯಾಗಿದ್ದಾರೆ

Scroll to Top