ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ನಿವೃತ್ತ ಪ್ರಿನ್ಸಿಪಾಲ್ ವಿಶ್ವನಾಥ್ ಕೆ. ನಿಧನ

ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಜನಾನುರಾಗಿ ಶಿಕ್ಷಕ, ಸಜ್ಜನ – ಸ್ನೇಹಶೀಲ ವ್ಯಕ್ತಿತ್ವದ ವಿಶ್ವನಾಥ ಜೋಗಿ ಕದ್ರಿ (72) ಅವರು ಜುಲೈ 8ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಮೂರು ದಶಕಗಳಿಂದ ಮಂಗಳೂರು ತಾಲೂಕಿನ ಬಲ್ಮಠ,ಕಾವೂರು,ಮೊಂಟೆಪದವು ಗುರುಪುರ ಮೊದಲಾದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದ ಅವರು 2014ರಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದರು. ತಮ್ಮ ಸೇವಾವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ವಿದ್ಯಾರ್ಥಿಗಳ ಹಾಗೂ ಹೆತ್ತವರ ನೆಚ್ಚಿನ ಅಧ್ಯಾಪಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ನಿವೃತ್ತರಾದ ಬಳಿಕ ನಗರದ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.ಕಳೆದ ಆರು ತಿಂಗಳಿಂದ ಅಸ್ವಸ್ಥರಾಗಿದ್ದ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರೂ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದರು. ಶಿಕ್ಷಕಿಯಾಗಿದ್ದ ಪತ್ನಿ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಏಕೈಕ ಪುತ್ರಿ – ಅಳಿಯ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.ಸಂತಾಪ:ಪ್ರೊ.ವಿಶ್ವನಾಥ್ ಕೆ. ಅವರ ನಿಧನಕ್ಕೆ ಗುರುಪುರದಲ್ಲಿ ಅವರ ಸಹೋದ್ಯೋಗಿಯಾಗಿದ್ದ ಲೇಖಕ – ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ, ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ, ಕಾಟಿಪಳ್ಳ ಪ.ಪೂ. ಕಾಲೇಜು ಪ್ರಾಚಾರ್ಯೆ ಅನುಸೂಯ ಕೆ.ಪಿ., ನಿವೃತ್ತ ಪ್ರಾಂಶುಪಾಲರುಗಳಾದ ಶ್ಯಾಮ ಮೊಯಿಲಿ, ಪದ್ಮನಾಭ ರೈ ಸಿದ್ಧಕಟ್ಟೆ ಹಾಗೂ ಜೋಗಿ ಸಮಾಜದ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದು ತಮ್ಮ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ದಿವಂಗತರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವು ಜುಲೈ 10ರಂದು ಗುರುವಾರ ಬೆಳಿಗ್ಗೆ ಗಂಟೆ 11ಕ್ಕೆ ಕದ್ರಿ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಾದೇಶಿಕ ವಾರ್ತೆಗಳು

ಕಿನ್ನಿಗೋಳಿಯ ಯುಗಪುರುಷದ ಶ್ರೀ ರಾಘವೇಂದ್ರ ಸನ್ನಿಧಾನದಲ್ಲಿ ವಿಜಯಾ ಕಲಾವಿದರ ಮನಿಪಂದೆ ಕುಲ್ಲಡೆ ತುಳು ನಾಟಕದ ಮುಹೂರ್ತ. ಮನಿಪಂದೆ ಕುಲ್ಲಡೆ ನಾಟಕ ಯಶಸ್ವಿಯಾಗಲಿ: ಭುವನಾಭಿರಾಮ ಉಡುಪ

ಮೂಲ್ಕಿ: ಗ್ರಾಮೀಣ ಭಾಗದಲ್ಲಿದ್ದುಕೊಂಡು ವರ್ಷಕ್ಕೆ ನೂರಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿ ಮಹಾರಾಷ್ಟ್ರ, ಕೇರಳ, ಗುಜರಾತ್ ಸಹಿತ ಬೆಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಅನೇಕ ಕಡೆಗಳಲ್ಲಿ ನಾಟಕ ಪ್ರದರ್ಶನ ನೀಡಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಕಿನ್ನಿಗೋಳಿ ವಿಜಯಾ ಕಲಾವಿದರ ಹೊಸ ನಾಟಕ ಮನಿಂಪದೆ ಕುಲ್ಲಡೆ ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೆ.ಅಭುವನಾಭಿರಾಮ ಉಡುಪ ಹೇಳಿದರು.ಅವರು ಕಿನ್ನಿಗೋಳಿಯ ಯುಗಪುರುಷದ ಶ್ರೀ ರಾಘವೇಂದ್ರ ಸನ್ನಿಧಾನದಲ್ಲಿ ವಿಜಯಾ ಕಲಾವಿದರ ಮನಿಪಂದೆ ಕುಲ್ಲಡೆ ನೂತನ ತುಳು ನಾಟಕದ ಮುಹೂರ್ತ ನೆರವೇರಿಸಿ ಮಾತನಾಡಿದರು. ತಂಡದ ಸಂಚಾಲಕ ಸಾಯಿನಾಥ ಶೆಟ್ಟಿ ಮುಂಡ್ಕೂರು ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ನಾಟಕ ಪ್ರದರ್ಶನದೊಂದಿಗೆ ಜಾಗೃತಿ ಮೂಡಿಸುವ ಕಥೆಯನ್ನು ಹಾಸ್ಯದ ಮಿಶ್ರಣದೊಂದಿಗೆ ಕಲಾವಿದರು ಪ್ರಾಮಾಣಿಕವಾಗಿ ತಮ್ಮ ಕಲಾ ಸೇವೆಯನ್ನು ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ತಂಡವಾದರೂ ಅತಿ ಹೆಚ್ಚು ಪ್ರದರ್ಶನ ನೀಡುತ್ತಿರುವ ಸಂಸ್ಥೆಯಾಗಿ ಬೆಳೆದಿದೆ ಎಂದರು.ಕಿನ್ನಿಗೋಳಿ ವಿಜಯಾ ಕಲಾವಿದರ ಅಧ್ಯಕ್ಷ ಮುಂಡ್ಕೂರು ದೊಡ್ಡಮನೆ ಶರತ್ ಶೆಟ್ಟಿ ಮಾಹಿತಿ ನೀಡಿ, ಹರೀಶ್ ಪಡುಬಿದ್ರಿ ರಚನೆಯ ಮನಿಪಂದೆ ಕುಲ್ಲಡೆ ತುಳು ನಾಟಕವನ್ನು ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶಿಸಲಿದ್ದಾರೆ. ಸಂಗೀತ ದಿನೇಶ್ ಪಾಪು ಮುಂಡ್ಕೂರು, ರಂಗವಿನ್ಯಾಸ ಹಾಗೂ ಧ್ವನಿ-ಬೆಳಕನ್ನು ಸುರೇಶ್ ಸಾಣೂರು, ಗೀತಾ ಸಾಹಿತ್ಯವನ್ನು ಅಶೋಕ್ ಪಳ್ಳಿ ನೀಡಲಿದ್ದಾರೆ, ಪ್ರಥಮ ಪ್ರದರ್ಶನವನ್ನು ಆಗಸ್ಟ್ 27ರಂದು ಪಕ್ಷಿಕೆರೆ-ಪಂಜದಲ್ಲಿ ನೀಡಲಿದ್ದೇವೆ, ಜನವರಿಯಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರದ ವಿವಿಧೆಡೆ ಪ್ರಕಾಶ ಎಂ. ಶೆಟ್ಟಿ ಸುರತ್ಕಲ್ ಇವರ ಸಂಚಾಲಕತ್ವದಲ್ಲಿ ಪ್ರವಾಸ ನಡೆಯಲಿದೆ ಎಂದರು.ಕೊಡೆತ್ತೂರು ಗುತ್ತುವಿನಲ್ಲಿ ನಾಟಕದ ಪೋಸ್ಟರ್‌ನ್ನು ಗುತ್ತಿನಾರ್ ನಿತಿನ್ ಶೆಟ್ಟಿ ಕೊಡೆತ್ತೂರು ಲೋಕಾರ್ಪಣೆಗೊಳಿಸಿದರು.ಸಮಾಜ ಸೇವಕ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಉದ್ಯಮಿ ಮುಂಬೈ ಸದಾಶಿವ ಪೂಜಾರಿ ಏಳಿಂಜೆ, ಅನುಗ್ರಹ ಪೃಥ್ವಿರಾಜ್ ಆಚಾರ್ಯ, ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ತಾಳಿಪಾಡಿಗುತ್ತು ಉದಯ ಪೂಂಜಾ, ಕಿನ್ನಿಗೋಳಿ ಯಕ್ಷಲಹರಿಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ, ಕಿನ್ನಿಗೋಳಿ ಸಜ್ಜನ ಬಂಧುಗಳು ಸಂಘಟನೆಯ ದಾಮೋದರ ಶೆಟ್ಟಿ ಕೊಡೆತ್ತೂರು ಗುತ್ತು, ಅರುಣ್ ಶೆಟ್ಟಿ ಕೊಡೆತ್ತೂರು ಗುತ್ತು, ಹರೀಶ್ ಶೆಟ್ಟಿ ಏಳಿಂಜೆ, ಸಮಾಜ ಸೇವಕಿ ಸರೋಜಿನಿ ಅಂಚನ್ ಮಧ್ಯ, ನಾಟಕ ರಚನೆಕಾರ ಹರೀಶ್ ಪಡುಬಿದ್ರಿ, ಸಂಗೀತ ನಿರ್ದೇಶಕ ದಿನೇಶ್ ಪಾಪು ಮುಂಡ್ಕೂರು, ಕಲಾವಿದರಾದ ನರೇಂದ್ರ ಕೆರೆಕಾಡು, ಕಾಪೇಡಿಗುತ್ತು ಸೀತಾರಾಮ ಶೆಟ್ಟಿ ಎಳತ್ತೂರು, ಭಗವಾನ್ ಸುರತ್ಕಲ್, ಚಿತ್ರಾ ಸುರತ್ಕಲ್, ಶಶಿ ಗುಜರನ್ ಪಡುಬಿದ್ರಿ, ಉದಯಕುಮಾರ್ ಹಳೆಯಂಗಡಿ, ಭಾಸ್ಕರ ಕುಲಾಲ್ ಪಕ್ಷಿಕೆರೆ, ರಾಜೇಶ್ ಅಮೀನ್ ಕಡಂದಲೆ, ಸತೀಶ್ ಪಿಲಾರ್, ಕೃತಿಕಾ ಉಲ್ಲಂಜೆ, ದೀಕ್ಷಿತಾ ಕೆರೆಕಾಡು, ಮಂಜೂಷಾ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.ತಂಡದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಬಿ.ಬಿ. ಏಳಿಂಜೆ ಸ್ವಾಗತಿಸಿದರು, ಪ್ರಕಾಶ್ ಆಚಾರ್ಯ ವಂದಿಸಿದರು, ಸುಧಾಕರ ಸಾಲ್ಯಾನ್ ಸಂಕಲಕರಿಯ ಕಾರ್ಯಕ್ರಮವನ್ನು ನಿರ್ವಹಿಸಿದರು..ಅಭುವನಾಭಿರಾಮ

ಪ್ರಾದೇಶಿಕ ವಾರ್ತೆಗಳು

ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ನವಂಬರ್ 14 ರಂದು ತೆರೆಗೆ

ಮಂಗಳೂರು: ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ತುಳು ಸಿನಿಮಾ ನವಂಬರ್ 14 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.ಮೊನ್ನೆ ಶಿವರಾಜ್ ಕುಮಾರ್ ಅವರು ಬೆಂಗಳೂರಿನಲ್ಲಿ ಬಿಡುಗಡೆಯ ದಿನಾಂಕವನ್ನು ಬಿಡುಗಡೆಗೊಳಿಸಿದರು.“ಜೈ” ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು, ಸಿನಿಮಾಕ್ಕೆ ಮಂಗಳೂರನ್ನು ಕೇಂದ್ರೀಕರಿಸಿ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ.ಜಿಲ್ಲೆಯ ಖ್ಯಾತನಾಮ ಕಲಾವಿದರು ಸಿನಿಮಾದಲ್ಲಿದ್ದಾರೆ.ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್.“‘ಜೈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮೊದಲಾದವರು ಅಭಿನಯಿಸಲಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸುತ್ತಿದ್ದಾರೆ.ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆದಿದೆ.ನವಂಬರ್ 14 ರಂದು “ಜೈ” ಸಿನಿಮಾ ತೆರೆ ಕಾಣಲಿದೆ.

ಪ್ರಾದೇಶಿಕ ವಾರ್ತೆಗಳು

ಸೌಹಾರ್ದ ಬದುಕು ಕಟ್ಟೋಣ: ಡಾ.ಎನ್.ಇಸ್ಮಾಯಿಲ್. ತುಳು ಅಕಾಡೆಮಿಯ ನಾಟಕ ಪ್ರದರ್ಶನ ಉದ್ಘಾಟನೆ

ಮಂಗಳೂರು: ನಮ್ಮೊಳಗಿನ ಜಾತಿ, ಧರ್ಮ, ಭಾಷೆಯ ವೈವಿಧ್ಯತೆಯನ್ನು ಜೊತೆಗಿರಿಸಿಕೊಂಡು ನಾವೆಲ್ಲರೂ ಒಂದೇ ಅನ್ನುವ ಸೌಹರ್ದತೆಯ ಸಮಾಜವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರ ಜವಬ್ದಾರಿ ಮಹತ್ವವಾದುದು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್ ಅವರು ಹೇಳಿದರು.ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡಿನ ಸೌಹಾರ್ದ ಬದುಕಿನ ಬಗ್ಗೆ ರಂಗಚಲನ ತಂಡದ ಮೂಲಕ ನಿರ್ಮಾಣಗೊಂಡ “ಜಾಗ್ ರ್ತೆ” ತುಳು ನಾಟಕದ ಪ್ರಥಮ ಪ್ರದರ್ಶನವನ್ನು ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದರು. ನಾವು ಕತ್ತರಿಸುವ ಕತ್ತರಿ ಆಗಬಾರದು ಹೊಲಿದು ಒಟ್ಟುಗೂಡಿಸುವ ಸೂಜಿ ದಾರ ಆಗಬೇಕು, ನಮ್ಮ ಜಾತಿ ಧರ್ಮ ಮನೆಯಲ್ಲಿ ಮತ್ತು ಆರಾಧನಾಲಯಗಳಲ್ಲಿ ಮಾತ್ರ ಇರಬೇಕು, ಹೊರತಾಗಿ ಸಮಾಜದಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಇರಬೇಕು. ಧರ್ಮ, ಜಾತಿ ಭಾಷೆ ಯಾವುದೇ ಇರಲಿ ಮನುಷ್ಯರು ಒಂದೇ, ಅದನ್ನು ಸಾರುವ ಪ್ರಯತ್ನ ತುಳು ಅಕಾಡೆಮಿ ಈ ನಾಟಕದ ಮೂಲಕ ಮಾಡುತ್ತಿದೆ ಎಂದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುನಾಡಿನ ಸೌಹಾರ್ದ ಪರಂಪರೆಯ ಬಗ್ಗೆ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತುಳು ಅಕಾಡೆಮಿಯು ಎರಡು ಹೊಸ ನಾಟಕಗಳನ್ನು ನಿರ್ಮಾಣ ಮಾಡಿದೆ ಎಂದು ತಿಳಿಸಿದರು.ನಾಟಕ ಹಾಗೂ ಚಲನಚಿತ್ರ ನಟಿ ಸುನೀತಾ ಎಕ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಂಗ ಸಂಚಲನ ನಿರ್ದೇಶಕ ದಿನೇಶ್ ಅತ್ತಾವರ, ಅಕಾಡೆಮಿ ಸದಸ್ಯರಾದ ಬೂಬ ಪೂಜಾರಿ, ಕುಂಬ್ರ ದುರ್ಗಾಪ್ರಸಾದ್ ರೈ, ಮಿಲಾಗ್ರಿಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಫಾ.ಉದಯ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಸಂತೋಷ್ ಶೆಟ್ಟಿ ಹಿರಿಯಡ್ಕ ನಿರೂಪಿಸಿದರು. ಮಿಲಾಗ್ರಿಸ್ ಪಿಯು ಕಾಲೇಜ್ ಪ್ರಾಂಶುಪಾಲರಾದ ಮೇಲ್ವಿನ್ ವಾಸ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಎಸ್.ಎಸ್.ವಿ. ಪಿ. ಅಂಜೆಲೋರ್ ಘಟಕ ವತಿಯಿಂದ ಎರಡು ಮನೆ ಕೊಡುಗೆ

ಮಂಗಳೂರು: ಮಂಗಳೂರಿನ ನಾಗುರಿ ಬಳಿ ಇರುವ ಅಂಜೆಲೋರ್ ಚರ್ಚ್ ಎಂದೇ ಕರೆಯಲ್ಪಡುವ ಗಾರ್ಡಿಯನ್ ಏಂಜೆಲ್ ಚರ್ಚ್ ನ ಸಮಾಜ ಸೇವಾ ಸಂಘಟನೆ ಸೈಂಟ್ ವಿನ್ಸೆಂಟ್ ಪಾವ್ಲ್ ಸಭಾ ಇದರ ಸುವರ್ಣಹೋತ್ಸವ ವರ್ಷಾಚರಣೆ ಅಂಗವಾಗಿ ಎರಡು ಬಡ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟಿದೆ.ಅಡ್ಯಾರ್ ಗ್ರಾಮದ ಎರಡು ಬಡ ಕುಟುಂಬಗಳಿಗಾಗಿ ತಲಾ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿರುವ ಈ ಮನೆಗಳ ಉದ್ಘಾಟನೆ ಸೋಮವಾರ ನೆರವೇರಿತು. ಅಂಜೆಲೋರ್ ಚರ್ಚ್ ನ ಸೈಂಟ್ ವಿನ್ಸೆಂಟ್ ಪಾವ್ಲ್ ಸಭಾ ಘಟಕವು 1971 ರಲ್ಲಿ ಸ್ಥಾನೆಯಾಗಿದ್ದು 2021 ರಲ್ಲಿ 50. ವರ್ಷಗಳ ಸೇವೆಯನ್ನು ಪೂರ್ತಿಗೊಳಿಸಿತ್ತು. ಈ ಸಂದರ್ಭದಲ್ಲಿ ಬಡವರಿಗೆ ಮನೆ ಕಟ್ಟಿಸಿ ಕೊಡುವ ಸಾಮಾಜಿಕ ಕಳಕಳಿಯ ಯೋಜನೆ ಹಮ್ಮಿಕೊಂಡಿತ್ತು. ಖ್ಯಾತ ಸಂಗೀತ ಕಲಾವಿದ ಮೆಲ್ವಿನ್ ಪೆರಿಸ್ ಅವರಿಂದ ಕಪಿತಾನಿಯೋ ಶಾಲೆಯಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ ಹಣಕಾಸು ಸಂಗ್ರಹವನ್ನು ಮಾಡಿತ್ತು.ಆದರೆ ಆಗ ಕೋವಿಡ್ ಬಂದ ಕಾರಣ ಯೋಜನೆ ಕಾರ್ಯಗತ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಸೋಮವಾರ ಅಡ್ಯಾರಿನ ಜೆಸ್ಸಿ ಡಿ ಸೋಜಾ ಮತ್ತು ಕುಟುಂಬಕ್ಕೆ ಹಾಗೂ ಪ್ರಫುಲ್ಲ ಡಿ ಕೋಸ್ತಾ ಮತ್ತು ಕುಟುಂಬಕ್ಕೆ ಮನೆಗಳನ್ನು ಹಸ್ತಾಂತರ ಮಾಡಲಾಯಿತು.ಸಮಾರಂಭದಲ್ಲಿ ಅಂಜೆಲೋರ್ ಚರ್ಚ್ ಧರ್ಮಗುರು ವಂದನೀಯ ಫಾ. ಫ್ರೆಡ್ರಿಕ್ ಮೊಂತೆರೊ, ಫಾ. ಪಾವ್ಲ್ ಪಿಂಟೊ ಮೇರ್ಲಪದವು, ಫಾ. ವಿಲಿಯಂ ಮಿನೇಜಸ್ ಒಮ್ಜೂರ್, ಫಾ. ಸ್ಟೇನಿ ಫೆರ್ನಾಂಡಿಸ್ ಅಂಜೆಲೋರ್, ಎಸ್.ಎಸ್.ವಿ. ಪಿ. ಮಂಗಳೂರು ಸಿಟಿ ವಲಯದ ಅಧ್ಯಕ್ಷ ರಿಚಾರ್ಡ್ ವಿಲ್ಸನ್ ಪಿಂಟೊ, ಮಾಜಿ ಅಧ್ಯಕ್ಷ ಜಾರ್ಜ್ ಬೊರೆಮಿಯೊ,ಅಂಜೆಲೋರ್ ಘಟಕದ ಅಧ್ಯಕ್ಷ ಐವನ್ ಡಿ ಸಿಲ್ವಾ, ಪೆರಿಸ್ ನೈಟ್ ಸಂಘಟಕ ಮೆಲ್ವಿನ್ ಪೆರಿಸ್, ಅಂಜೆಲೋರ್ ಚರ್ಚ್ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಲಾ ಲೊಲಿನಾ ಡಿ ಸೋಜಾ, ಅಡ್ಯಾರ್ ಪಂಚಾಯತ್ ಪಿಡಿಒ ಕೃಷ್ಣ ನಾಯ್ಕ್ , ಪಂಚಾಯತ್ ಅಧ್ಯಕ್ಷ ರೊನಾಲ್ಡ್ ಸಲ್ದಾನ್ಹಾ, ಎಸ್.ಎಸ್.ವಿ. ಪಿ. ಸಿಟಿ ವಲಯದ ಸಿರಿಲ್ ಡಿ ಸೋಜಾ ಮತ್ತು ಉಪಾಧ್ಯಕ್ಷ ಜೋಕಿಮ್ ಡಿ ಸೋಜಾ, ಸಿವಿಲ್ ಎಂಜಿನಿಯರ್ ಗಳಾದ ಪ್ರವೀಣ್ ಸಲ್ದಾನ್ಹಾ ಮತ್ತು ಕಿರಣ್ ಡಿ ಸೋಜಾ, ಗುತ್ತಿಗೆದಾರ ಎಡ್ವಿನ್ ಡಿ ಸೋಜಾ, ಎಸ್ ಎಸ್.ವಿ. ಪಿ. ಅಂಜೆಲೋರ್ ಘಟಕದ ಐವನ್ ಡಿ ಸಿಲ್ವಾ, ವಿಲ್ ಫ್ರೆಡ್ ಪಿಂಟೊ, ಐಡಾ ಡಿ ಮೆಲ್ಲೊ, ಯೂಜೀನ್ ಲೋಬೊ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್: ಐಸಿವೈಎಂ ಸಿಟಿ ವಲಯದ ಅಧ್ಯಕ್ಷರಾಗಿ ರಾಯನ್ ಮಾರ್ಸೆಲ್‌ ನೊರೊನ್ಹಾ ಆಯ್ಕೆ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಐಸಿವೈಎಂ ಘಟಕದ ಸದಸ್ಯ ರಾಯನ್ ಮಾರ್ಸೆಲ್‌ ನೊರೊನ್ಹಾ ಅವರು 12 ಚರ್ಚ್ ಗಳನ್ನು ಒಳಗೊಂಡ ಸಿಟಿ ವಲಯದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಆ ಪ್ರಯುಕ್ತ ಅವರನ್ನು ಪಾಲ್ದನೆ ಚರ್ಚ್ ವತಿಯಿಂದ ಬಲಿಪೂಜೆಯ ಬಳಿಕ ಸನ್ಮಾನಿಸಲಾಯಿತು.ಚರ್ಚಿನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಸನ್ಮಾನವನ್ನು ನೆರವೇರಿಸಿ ಈ ಸನ್ಮಾನವನ್ನು ಚರ್ಚಿನ ಸಮಸ್ತ ಭಕ್ತ ವೃಂದದ ಪರವಾಗಿ ಮಾಡಲಾಗುತ್ತಿದೆ. ಈ ಹುದ್ದೆಯು ಚರ್ಚಿಗೆ ಗೌರವ ತಂದಿದೆ ಎಂದರು.ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಐಸಿವೈಎಂ ಸಚೇತಕ ರೋಶನ್‌ ಮೊತೇರೊ, ಘಟಕದ ಅಧ್ಯಕ್ಷೆ ವಿಲೀಶಾ ಬ್ರ್ಯಾಗ್ಸ್, ಕಾರ್ಯದರ್ಶಿ ಆ್ಯಶೆಲ್ ಲೋಬೊ ಉಪಸ್ಥಿತರಿದ್ದರು. ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯವು ಆಂಜೆಲೋರ್‌, ಬಜಾಲ್‌, ಬಜ್ಜೋಡಿ, ಬೋಂದೆಲ್, ಕುಲಶೇಖರ(ಕೋರ್ಡೆಲ್), ದೇರೆಬೈಲ್, ಫೆರ್ಮಾಯ್, ಕೆಲರಾಯ್‌, ನೀರುಮಾರ್ಗ, ಪಾಲ್ದನೆ, ಶಕ್ತಿನಗರ, ಮತ್ತು ವಾಮಂಜೂರು ಚರ್ಚ್ ಗಳನ್ನು ಒಳಗೊಂಡಿರುತ್ತದೆ.

ಪ್ರಾದೇಶಿಕ ವಾರ್ತೆಗಳು

ಸಿ.ಎ. ಅಂತಿಮ ಪರೀಕ್ಷೆಯಲ್ಲಿ ರತ್ವಿಕ್ ಆರ್ ನಾಯಕ್ ಇಂದಾಜೆ ಉತ್ತೀರ್ಣ

ಮಂಗಳೂರು, ಭಾರತೀಯ ಲೆಕ್ಕ ಪರಿ ಶೋಧಕರ ಸಂಸ್ಥೆ (ಐಸಿಎಐ)ನವದೆಹಲಿ ಮೇ ತಿಂಗಳನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆ ಯಲ್ಲಿ ಪ್ರಥಮ ಪ್ರಯತ್ನದಲ್ಲಿ ರತ್ವಿಕ್ ಆರ್ ನಾಯಕ್ ಇಂದಾಜೆ ಉತ್ತೀರ್ಣರಾಗಿದ್ದಾರೆ. ಇವರು ಲೆಕ್ಕ ಪರಿಶೋಧಕರಾದ ಸಿಎ ಜಗನ್ನಾಥ ಕಾಮತ್ ಅವರಲ್ಲಿ ಸಿಎ ತರಬೇತಿ ಪಡೆಯುತ್ತಿದ್ದು,ಇವರು ನಗರದ ಉದ್ಯಮಿ ರಾಮಕೃಷ್ಣ ನಾಯಕ್ ಹಾಗೂ ರಕ್ಷಿತಾ ನಾಯಕ್ ದಂಪತಿಗಳ ಪುತ್ರ.

ಪ್ರಾದೇಶಿಕ ವಾರ್ತೆಗಳು

ಪ್ರಿಯತಮೆಗೆ ಹಲ್ಲೆ ಮಾಡಿದ ಪ್ರೇಮಿ ನೇಣಿಗೆ ಶರಣು

ಬಂಟ್ವಾಳ: ಪ್ರೇಮಿಯೊಬ್ಬ ಪ್ರಿಯತಮೆಗೆ ಹಲ್ಲೆ ಮಾಡಿ ಬಳಿಕ ನೇಣಿಗೆ ಶರಣಾದ ಘಟನೆ ತಾಲೂಕಿನ ಪುದು ಗ್ರಾಮದ ಸುಜೀರು ದೈಯಡ್ಕ ಎಂಬಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಡ್ಮಾಣ್ ಗ್ರಾಮದ ಕಾಂಜೀಲಕೋಡಿ ನಿವಾಸಿ (30) ವರ್ಷದ ಸುಧೀರ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಯುವತಿ ದಿವ್ಯ ಯಾನೆ ದೀಕ್ಷಿತಾ(26) ಎಂಬಾಕೆಯನ್ನು ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇವರಿಬ್ಬರು ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು ಕೆಲ ತಿಂಗಳುಗಳಿಂದ ಮನಸ್ತಾಪವಿದ್ದು, ಮದುವೆಗೆ ಒತ್ತಾಯಿಸುತಿದ್ದ ವೇಳೆ ಮಾತಿಗೆ ಮಾತು ಬೆಳೆದು ಯಾವುದೋ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಸುಧೀರ್ ದಿವ್ಯ ಮೇಲೆ ಮನಬಂದಂತೆ ಥಳಿಸಿದ್ದು, ಯುವತಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ‌ ಎಂದು ತಿಳಿದು ಬಂದಿದೆ.ಗಾಯಾಳು ದಿವ್ಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಯುವಕ ಸುಧೀರ್ ಈ ಹಿಂದೆ ಕೂಡ ಟವರ್ ಹತ್ತಿ ಈಕೆಯನ್ನು ಹೆದರಿಸಿದ್ದ ಅನ್ನುವ ಮಾಹಿತಿ ಇದೆ. ಸದ್ಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದಿಂದ ಧಾರ್ಮಿಕ ಪುಸ್ತಕಗಳ ಕೊಡುಗೆ.

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ.ರಿ ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ ವತಿಯಿಂದ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದ ಧಾರ್ಮಿಕ ಗ್ರಂಥಾಲಯಕ್ಕೆ ಸದಸ್ಯರಿಂದ ಸಂಗ್ರಹಿಸಿದ ಪುಸ್ತಕಗಳನ್ನು ಅರ್ಪಿಸುವ ಕಾರ್ಯಕ್ರಮವು ದೇವಳದ ಆಡಳಿತ ಕಚೇರಿಯಲ್ಲಿ ಜರಗಿತು.ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ಪುಸ್ತಕಗಳನ್ನು ಸ್ವೀಕರಿಸಿ ಹಿರಿಯರ ಸೇವಾ ಪ್ರತಿಷ್ಠಾನವು ಜ್ಞಾನಪ್ರಸಾರದ ಕಾರ್ಯದಲ್ಲಿ ಕೈಜೋಡಿಸಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.ಪುತ್ತೂರು ಘಟಕದ ಕೇಂದ್ರ ಸಮಿತಿ ಪ್ರತಿನಿಧಿ ಮತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಹಾಬಲ ರೈ ವಳತ್ತಡ್ಕ,ಕೇಂದ್ರ ಸಮಿತಿಯ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ಪುತ್ತೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಆಳ್ವ ಪಡುಮಲೆ, ಜಿಲ್ಲಾ ಸಂಚಾಲಕ ಭಾಸ್ಕರ ಬಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಪ್ರತಿಷ್ಠಾನದ ಟ್ರಸ್ಟಿಗಳಾದ ಲೋಕೇಶ್ ಹೆಗ್ಡೆ ಪುತ್ತೂರು, ಪ್ರೊ. ವೇದವ್ಯಾಸ ರಾಮಕುಂಜ, ಪುತ್ತೂರು ಘಟಕದ ಪದಾಧಿಕಾರಿಗಳಾದ ಭವಾನಿ ಶಂಕರ ಶೆಟ್ಟಿ ಪುತ್ತೂರು,ಪದ್ಮನಾಭ ನಾಯಕ್, ಗುಂಡ್ಯಡ್ಕ ಈಶ್ವರ ಭಟ್, ಸದಾಶಿವ ರೈ,ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ವತ್ಸಲಾ ರಾಜ್ನಿ, ಶಂಕರಿ ಶರ್ಮ, ಚಂಚಲಾಕ್ಷಿ. ಎಸ್, ಪ್ರೇಮಲತಾ ರಾವ್ ಬೊಳುವಾರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಅಖಿಲ ಭಾರತ ಮಟ್ಟದ ಜೆಎಂಎಂ ಪರೀಕ್ಷೆಯಲ್ಲಿ 34ನೇ ರಾಂಕ್ ಗಳಿಸಿದ ಪೂಜಿತ್ ಕುಲಾಲ್

ಅಖಿಲ ಭಾರತ ಮಟ್ಟದ ಜೆ ಎಂ ಎಂ ಪರೀಕ್ಷೆಯಲ್ಲಿ 34ನೆ ರಾಂಕ್ ಗಳಿಸಿ ಡೆಲ್ಲಿ ಐ ಐ ಟಿ ಯಲ್ಲಿ ಪ್ರವೇಶ ಪಡೆದ ಪ್ರತಿಭಾವಂತ ಬಾಲಕ ಬಡ ಕುಟುಂಬದ ಪುಟ್ಟ ಹಾಗೂ ವಿನುತಾ ದಂಪತಿಗಳ ಪುತ್ರ ಪೂಜಿತ್ ಕುಲಾಲ್ ರವರನ್ನು ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ವತಿಯಿಂದ ಅಧ್ಯಕ್ಷ ರಾದ ಸೋಮಯ್ಯ ಹನೈನಡೆ ನೇತೃತ್ವದಲ್ಲಿ ಶಾಲು ಸ್ಮರಣಿಕೆ ಫಲ ಪುಷ್ಪ ನೀಡಿ ಹಾರ ಹಾಕಿ ಸನ್ಮಾನಿಸಿ ಸಹಾಯ ಧನ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ಇಂತಹ ಪ್ರತಿಭಾವಂತ ಬಾಲಕರನ್ನು ಗುರುತಿಸಿ ಸನ್ಮಾನಿಸುವುದು ನಮ್ಮಸಂಘಕ್ಕೆ ಹೆಮ್ಮೆ ಹಾಗೂ ಆತನಿಗೆ ಮುಂದಿನ ಭವಿಷ್ಯಕ್ಕೆ ಸ್ಫೂರ್ತಿ ಎಂದು ಅಭಿಪ್ರಾಯಪಟ್ಟು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸೋಮಪ್ಪ ಬಂಗೇರ, ಶ್ರೀನಿವಾಸ ಕುಲಾಲ್, ಶ್ರೀಮತಿ ರೋಹಿಣಿ, ಶೀನ ಟೈಲರ್ ಅಲ್ಲಿಪ್ಪಾದೆ, ಕಿಟ್ಟು ಮೂಲ್ಯ,ನೀಲಪ್ಪ ಸಾಲಿಯಾನ್, ಶ್ರೀಮತಿ ರತ್ನಾವತಿ, ವಿಠ್ಠಲ ಮೂಲ್ಯ, ದಿನಕರ ಎಂ.,ರಾಮ ಮರ್ದೋಳಿ, ಶ್ರೀಮತಿ ಶಾಂಭವಿ ಹಾಗೂ ಸದಸ್ಯರಾದ ಭಾಸ್ಕರ್ ಕೊಲ್ನಾಡು ಶ್ರೀಮತಿ ಗುಣವತಿ ಮತ್ತು ಬಾಲಕನ ತಾಯಿ ಶ್ರೀಮತಿ ವಿನುತಾ ಉಪಸ್ಥಿತರಿದ್ದರು. ಗೌರವಾಧ್ಯಕ್ಸರಾದ ಶೇಷಪ್ಪ ಮಾಸ್ಟರ್ ನಿರ್ವಹಿಸಿದರು.

Scroll to Top