ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬಪ್ಪನಾಡು: ಶ್ರೀ ದೇವರ ಸ್ವರ್ಣ ಪಲ್ಲಕ್ಕಿ ಉತ್ಸವ; ಸಣ್ಣ ರಥೋತ್ಸವ; ಆಯನ ಬಲಿ ಉತ್ಸವ

ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ರಾತ್ರಿ ಸ್ವರ್ಣ ಪಲ್ಲಕ್ಕಿ ಉತ್ಸವ; ಸಣ್ಣ ರಥೋತ್ಸವ; ಆಯನ ಬಲಿ ಉತ್ಸವ ನಡೆಯಿತು.ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾರ್ಯನಿರ್ವಣಾಧಿಕಾರಿ ಜಯಮ್ಮ,ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್,ಸತೀಶ್ ಭಂಡಾರಿ, ಸುನಿಲ್ ಆಳ್ವ, ಕಿಶೋರ್ ಶೆಟ್ಟಿ ಬಪ್ಪನಾಡು, ತಾರಾನಾಥ ಸುವರ್ಣ ಅಡ್ವೆ, ಗೋಪಾಲಕೃಷ್ಣ ಭಟ್ ಬಪ್ಪನಾಡು, ವಿದ್ವಾನ್ ನಾಗೇಶ್ ಬಪ್ಪನಾಡು ಮತ್ತಿತರರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ನಾಯಕರ ಹೆಸರು ಹೇಳಿ ಓಟು ಕೇಳುವವರು ಗೆದ್ದ ನಂತರ ಕ್ಷೇತ್ರದ ಕಡೆ ಮುಖವೆತ್ತಿಯೂ ನೋಡುವುದಿಲ್ಲ. ನನ್ನ ಬಗ್ಗೆ ಜನರಿಗೆ ಗೊತ್ತಿದೆ. ಖಂಡಿತ ಗೆಲ್ಲಿಸುತ್ತಾರೆ : ಜಯಪ್ರಕಾಶ್ ಹೆಗ್ಡೆ.

ಉಡುಪಿ : ಉಡುಪಿ -ಚಿಕ್ಕ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದಾರೆ. ಮಾಧ್ಯಮಗಳ ಜೊತೆಗೆ ಈ ಬಗ್ಗೆ ಮಾತನಾಡಿದ ಅವರು, ನಾನು ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಟೀಕಿಸುವುದಿಲ್ಲ. ಜನರಿಗೆ ಗೊತ್ತಿದೆ ಯಾರಿಗೆ ಓಟು ಕೊಡಬೇಕು. ಯಾರನ್ನು ಗೆಲ್ಲಿಸಬೇಕೆಂಬ ಸ್ಪಷ್ಟತೆ. ನನಗೆ ನಾಯಕರ ಹೆಸರಲ್ಲಿ ಓಟು ಕೇಳಬೇಕಾದ ಅನಿವಾರ್ಯತೆ ಇಲ್ಲ. ನಾನು ಇಲ್ಲಿ ಒಂದು ಅವಧಿಗೆ ಸಂಸದನಾಗಿದ್ದೆ. ವಾರಾಹಿ ಯೋಜನೆ ಸೇರಿದಂತೆ ಅಭಿವೃದ್ಧಿ ಕೆಲಸ ಮಾಡಿದ್ದೆ. ನಾನು ಬಂಟನೆಂದ ಮಾತ್ರಕ್ಕೆ ಬಂಟರೆಲ್ಲರೂ ಓಟು ಹಾಕುತ್ತಾರೆಂಬ ಗ್ಯಾರಂಟಿ ಇಲ್ಲ. ಅವರಿಗೆ ಬಿಲ್ಲವರೆಲ್ಲರೂ ಓಟು ಹಾಕುತ್ತಾರೆಂದು ಹೇಳಲಾಗುವುದಿಲ್ಲ. ಜಾತಿ ರಾಜಕೀಯ ಇಲ್ಲಿ ನಡೆಯವುದಿಲ್ಲ. ನಾನು ಜಾತ್ಯತೀತ ರಾಜಕಾರಣಿ. ಇಲ್ಲಿನ ಜನ ನನ್ನನ್ನು ಒಪ್ಪಿದ್ದಾರೆ. ನನ್ನ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ನನಗೆ ಇನ್ನೊಬ್ಬರ ಹೆಸರಲ್ಲಿ ಓಟು ಕೇಳುವ ಅಗತ್ಯತೆ ಬೀಳುವುದಿಲ್ಲ.ನಾಯಕರ ಹೆಸರಲ್ಲಿ ಓಟು ಕೇಳುವವರು ಗೆದ್ದ ನಂತರ ಕ್ಷೇತ್ರದ ಕಡೆಗೆ ಮುಖವೆತ್ತಿಯೂ ನೋಡುವುದಿಲ್ಲವೆಂದು ಜಯಪ್ರಕಾಶ್ ಹೆಗ್ಡೆ ಟೀಕಿಸಿದರು

ಪ್ರಾದೇಶಿಕ ವಾರ್ತೆಗಳು

ಪೂಜಾರಿಯವರು ಹಾಕಿಕೊಟ್ಟ ಹೆಜ್ಜೆಯಲ್ಲಿ ಮುಂದುವರಿಯುವೆ. ಅಭಿವೃದ್ಧಿ ಪರ, ಸೌಹಾರ್ದ ದಕ್ಷಿಣ ಕನ್ನಡ ಕನಸು : ಪದ್ಮರಾಜ್ ಆರ್. ಹೇಳಿಕೆ

ಮಂಗಳೂರು: ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಹಾರ ತುರಾಯಿ ಚೆಂಡೆ ವಾದ್ಯಗಳ ಜೊತೆ ಭರ್ಜರಿಯಾಗಿ ಬರಮಾಡಿಕೊಂಡರು. ಗುರುವಾರ ರಾತ್ರಿ ಪದ್ಮರಾಜ್ ಅವರಿಗೆ ಟಿಕೆಟ್ ಘೋಷಣೆಯಾಗಿತ್ತು. ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಮರಳಿದ ಪದ್ಮರಾಜ್ ಅವರು ಕಾರ್ಯಕರ್ತರು ಮತ್ತು ಬೆಂಬಲಿಗರ ಸಂಭ್ರಮದಲ್ಲಿ ಜೊತೆಯಾದರು. ಬಳಿಕ ಆಧುನಿಕ ಮಂಗಳೂರು ಶಿಲ್ಪಿ ಉಳ್ಳಾಲ ಶ್ರೀನಿವಾಸ್ ಮಲ್ಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಕದ್ರಿಯ ವೀರ ಯೋಧರ ಸ್ಮಾರಕ್ಕೆ ತೆರಳಿ ದೇಶಕ್ಕಾಗಿ ಮಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಬಳಿಕ ಎಂ.ಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಾಷ್ಟ್ರಪಿತ, ಮಂಗಳೂರು ಪುರಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಗೌರವ, ಬಾವುಡಗುಡ್ಡೆಯಲ್ಲಿ ಹಿರಿಯ ಸ್ವಾತಂತ್ರೃ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ನಮನ ಸಲ್ಲಿಸಿ, ಟಾಗೋರ್ ಪಾರ್ಕ್‌ನಲ್ಲಿ ರವೀಂದ್ರನಾಥ ಟಾಗೋರ್ ಪ್ರತಿಮೆಗೆ ನಮನ ಸಲ್ಲಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಹೈಕಮಾಂಡ್ ನಾಯಕರಿಗೆ ಮತ್ತು ತನ್ನನ್ನು ಬೆಂಬಲಿಸಿದ ರಾಜ್ಯ ನಾಯಕರು ಮತ್ತು ಜಿಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸಿದರು. ತನ್ನ ರಾಜಕೀಯ ಗುರುಗಳಾದ ಜನಾರ್ದನ ಪೂಜಾರಿಯವರ ಹಾದಿಯಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜಕಾರಣ ಮಾಡುವುದಾಗಿ ತಿಳಿಸಿದರು. ತುಳುನಾಡಿನ ಸಮಗ್ರ ಅಭಿವೃದ್ಧಿ ಜತೆಗೆ ಸೌಹಾರ್ದ ಪರಂಪರೆಯನ್ನು ಮರಳಿ ಕಟ್ಟುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಗತವೈಭವ ಮರುಕಳಿಸುವಂತೆ ಮಾಡುವುದು ನನ್ನ ಉದ್ದೇಶ ಎಂದು ಅವರು ತಿಳಿಸಿದರು. ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಪೋರೇಟರ್‌ಗಳು, ಮಾಜಿ ಕಾಪೋರೇಟರ್‌ಗಳು ಇದ್ದರು.

ಪ್ರಾದೇಶಿಕ ವಾರ್ತೆಗಳು

ಭಾರತದ ಅಭಿವೃದ್ಧಿ ಪರ್ವಕ್ಕೆ ಮತ್ತೊಮ್ಮೆ ಮೋದಿ ಸರಕಾರ ಅನಿವಾರ್ಯ: ಕ್ಯಾ. ಗಣೇಶ್ ಕಾರ್ಣಿಕ್

ಮಂಗಳೂರು: ಮುಂಬರುವ 18ನೇ ಲೋಕಸಭಾ ಚುನಾವಣೆಯು ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಇದು ಪರಿಣಾಮಕಾರಿ ಹೆಜ್ಜೆಯಾಗಲಿದೆ. ಕಳೆದ 10 ವರ್ಷಗಳಲ್ಲಿ ಮಾಡಲಾದ ಅಭಿವೃದ್ಧಿಪರ ಆಡಳಿತದ ಮುಂದುವರಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೊಮ್ಮೆ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೆ ಬರಬೇಕಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅವರು ಇಂದು ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿಯವರ ಸಮರ್ಥ ಹಾಗೂ ದಕ್ಷ ಆಡಳಿತವು ಕಳೆದ 10 ವರ್ಷಗಳಲ್ಲಿ ಜನಮಾನಸದಲ್ಲಿ ಅಗಾಧ ಪ್ರಭಾವ ಬೀರಿದೆ. ಜತೆಗೆ ದೇಶದಲ್ಲಿ ಅಭಿವೃದ್ಧಿಯ ಹೊಸ ಯುಗವನ್ನೇ ಪ್ರಾರಂಭಿಸಿದೆ. ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಮತ್ತು ಸಬ್‌ ಕಾ ಪ್ರಯಾಸ್‌ ಎನ್ನುವ ನೀತಿಯೊಂದಿಗೆ ಕಳೆದ ಹಲವು ದಶಕಗಳ ಒಡೆದಾಳುವ ನೀತಿಗೆ ತಡೆ ಹಾಕಿ, ದೇಶದ ಹಿತಾಸಕ್ತಿಯೇ ಪರಮೋಚ್ಚವಾಗಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಆಧಾರದಲ್ಲಿ ಭಾರತದ ಅಭಿವೃದ್ಧಿಯನ್ನು ಕಳೆದ 10 ವರ್ಷಗಳಿಂದ ಸಾಧಿಸಿ ತೋರಿಸಿದ್ದಾರೆ. ಈ ಪರಂಪರೆ ಮುಂದುವರಿಯಲು ಈ ಬಾರಿ 400ಕ್ಕೂ ಅಧಿಕ ಸ್ಥಾನಗಳೊಂದಿಗೆ ಮತ್ತೆ ಮೋದಿ ಸರರಕಾರ ಬರಬೇಕಾಗಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಪ್ರತಿಪಾದಿಸಿದರು. ಮೋದಿ ಆಡಳಿತದಲ್ಲಿ ದೇಶಕ್ಕೆ ಹಿಂದೆಂದೂ ಕಂಡಿರದಷ್ಟು ಅಂತಾರಾಷ್ಟ್ರೀಯ ಮನ್ನಣೆ ದೊರೆತಿದ್ದು, ಜಗತ್ತಿನ ಆರ್ಥಿಕ ಹಿನ್ನಡೆಯ ನಡುವೆಯೂ ಆರ್ಥಿಕ ಭದ್ರತೆ, ಗಡಿ ಸುರಕ್ಷತೆ, ಆತ್ಮನಿರ್ಭರತೆಗಳನ್ನು ಸಾಧಿಸುತ್ತ ಬಂದಿದೆ. ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳ ನೇರ ವರ್ಗಾವಣೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ. ಹಿಂದೆಂದೂ ಕಂಡಿರಿಯದಷ್ಟು ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವೈಜ್ಞಾನಿಕ, ತಾಂತ್ರಿಕ ಸಾಧನೆಗಳ ಮುನ್ನಡೆ ಆಗಿದೆ. ಈ ಕಾರಣಕ್ಕಾಗಿ ಪ್ರಧಾನಿ ಮೋದಿ ಅವರನ್ನು ದೇಶವು ಮತ್ತೊಮ್ಮೆ ಆಯ್ಕೆಮಾಡಬೇಕಾಗಿದೆ ಎಂದು ಕ್ಯಾ. ಕಾರ್ಣಿಕ್ ನುಡಿದರು. ದೇಶ ವಿರೋಧಿ ಶಕ್ತಿಗಳಿಗೆ ಮಣೆ ಹಾಕಬೇಡಿ: ರಾಜಕೀಯ ಮುಖವಾಡದೊಂದಿಗೆ ದೇಶವಿರೋಧಿ ಶಕ್ತಿಗಳು ಮೇಲುಗೈ ಪಡೆಯಲು ನಾನಾ ರೂಪದಲ್ಲಿ ಹವಣಿಸುತ್ತಿರುವುದು ಎದ್ದು ಕಾಣುವಂತಿದೆ. ಅಧಿಕಾರಕ್ಕಾಗಿ ಮಿತಿಮೀರಿದ ತುಷ್ಟೀಕರಣ ಮತ್ತು ದೇಶ ವಿಭಜನೆಯ ಒಡಕು ಮಾತುಗಳೊಂದಿಗೆ ಹೀನ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳ ನಡೆ ಖಂಡನೀಯ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ, ಹನುಮಾನ್ ಚಾಲೀಸ ವಿರೋಧಿಸಿ ಮೂಲಭೂತವಾದಿಗಳು ನಡೆಸಿದ ಹಲ್ಲೆ ಮುಂತಾದ ಘಟನೆಗಳು ಕಾಂಗ್ರೆಸ್‌ನ ಅತಿರೇಕದ ತುಷ್ಟೀಕರಣಕ್ಕೆ ಜ್ವಲಂತ ಸಾಕ್ಷಿ ಎಂದು ಕಾರ್ಣಿಕ್ ವಿವರಿಸಿದರು.

ಪ್ರಾದೇಶಿಕ ವಾರ್ತೆಗಳು

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಮತ್ತು ಸಂಕಲ್ಪ್ ಇಂಡಿಯಾ ಫೌಂಡೇಶನ್ ಸಹಕಾರದಲ್ಲಿ ಫಾದರ್ ಮುಲ್ಲರ್ ಥಲಸೇಮಿಯಾ ಸೆಂಟರ್ ಉದ್ಘಾಟನೆ

ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು (ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಘಟಕ) ಸಂಕಲ್ಪ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಫಾದರ್ ಮುಲ್ಲರ್ ಥಲಸೇಮಿಯಾ ಕೇಂದ್ರವನ್ನು ಸ್ಥಾಪಿಸಿದ್ದು, ಅದರ ಉದ್ಘಾಟನೆಯು ಇಂದು ನೆರವೇರಿತು.ಕಂಕನಾಡಿಯ ಫಾದರ್‌ ಮುಲ್ಲರ್‌ ಆಸ್ಪತ್ರೆಯ ಸಾಮಾನ್ಯ ವಾರ್ಡ್ ‘ಎಲ್ ವಾರ್ಡ್’ನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಉದ್ಘಾಟನಾ ಕಾರ್ಯಕ್ರಮವು ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ ನಡೆಯಿತು.ಸಮಾರಂಭದಲ್ಲಿ ಕೆಎಂಸಿ ಮಣಿಪಾಲದ ವೈದ್ಯಕೀಯ ತಳಿಶಾಸ್ತ್ರ ವಿಭಾಗದ ಅಸಿಸ್ಟೆಂಟ್‌ ಪ್ರೊಫೆಸರ್‌ ಡಾ.ವಿವೇಕಾನಂದ ಭಟ್‌ ಮುಖ್ಯ ಅತಿಥಿಯಾಗಿದ್ದು, ಫಾದರ್‌ ಮುಲ್ಲರ್ ಚಾರಿಟೆಬಲ್‌ ಸಂಸ್ಥೆಗಳ ನಿರ್ದೇಶಕ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಮಿತಿ, ಪೀಡಿಯಾಟ್ರಿಕ್ಸ್ ವಿಭಾಗ ಮತ್ತು ಐ.ಎಚ್.ಬಿ.ಟಿ. ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.ಫಾದರ್ ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಜೀವನ್ ಅವರು ಪ್ರಸ್ತಾವನೆಗೈದು ಥಲಸ್ಸೆಮಿಯಾ ಕೇಂದ್ರದ ಅಗತ್ಯತೆಯ ಕುರಿತು ವಿವರಿಸಿದರು. ನಿರ್ದೇಶಕರು ಪ್ರಾರ್ಥನೆಯನ್ನು ಹಾಗೂ ಮೆಡಿಕಲದ ಕಾಲೇಜಿನ ಆಡಳಿತಾಧಿಕಾರಿ ಫಾ.ಅಜಿತ್ ಬಿ. ಮಿನೇಜಸ್ ಸ್ತುತಿಗೀತೆಗಳನ್ನು ಹಾಡಿದರು. ಪೀಡಿಯಾಟ್ರಿಕ್ಸ್ ವಿಭಅಗದ ಮುಖ್ಯಸ್ಥ ಡಾ. ಶ್ರೀಧರ್ ಅವಭಾರತ ಅವರು ಥಲಸ್ಸೆಮಿಯಾ ಕೇಂದ್ರದ ಕುರಿತು ವಿವರಿಸಿ ಥೆಲಸೇಮಿಯಾದಿಂದ ಬಳಲುತ್ತಿರುವ ಜನರಿಗೆ ಉಚಿತ ಆರೈಕೆ ನೀಡುವಲ್ಲಿ ಫಾದರ್‌ ಮುಲ್ಲರ್ ಸಂಸ್ಥೆಯ ಪಾತ್ರವನ್ನು ವಿವರಿಸಿದರು. ಡಾ.ಚಂದನಾ ಪೈ ಅವರು ಥೆಲಸ್ಸೇಮಿಯಾ ಕೇಂದ್ರದ ಅಗತ್ಯತೆಯನ್ನು ಮತ್ತು ಅನಾರೋಗ್ಯ ಪೀಡಿತ ರೋಗಿಗಳಿಗೆ ಇದರಿಂದ ಆಗುವ ಪ್ರಯೋಜನ ವಿವರಿಸಿ ಜೀವಗಳನ್ನು ಉಳಿಸಲು ಆಗಾಗ್ಗೆ ರಕ್ತದಾನ ಮಾಡಲು ಜನರನ್ನು ಒತ್ತಾಯಿಸಿದರು. ಥೆಲಸ್ಸೆಮಿಯಾವು ಅಸಹಜ ಹಿಮೋಗ್ಲೋಬಿನ್ ಉತ್ಪಾದನೆಯಿಂದ ಆಗುವ ಒಂದು ಆನುವಂಶಿಕ ರಕ್ತದ ಕಾಯಿಲೆಯಾಗಿದ್ದು, ಇದು ತೀವ್ರವಾದ ರಕ್ತಹೀನತೆಗೆ ಕಾರಣವಾಗುತ್ತದೆ ಎಂದರು. .ಈ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಕೇಂದ್ರವನ್ನು ಹಣದ ಕೊರತೆಯಿಂದಾಗಿ ಕ್ಯಾಂಪಸ್‌ಗೆ ಸ್ಥಳಾಂತರಿಸ ಬೇಕಾಯಿತು.ಐ.ಎಚ್.ಬಿ.ಟಿ. ಯ ಇಮ್ಯುನೊಹೆಮೊಟಾಲಜಿ ಮತ್ತು ರಕ್ತ ವರ್ಗಾವಣೆಯ ಮುಖ್ಯಸ್ಥರಾದ ಡಾ. ಕಿರಣ ಪೈಲೂರ್ ಅವರು ಥೆಲಸ್ಸೆಮಿಯಾ ರೋಗಿಗಳಿಗೆ ನಿರಂತರ ರಕ್ತ ಪೂರೈಕೆಯನ್ನು ಏರ್ಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು,ಪೀಡಿಯಾಟ್ರಿಕ್ ವಿಭಾಗದ ಹೆಮಟಾಲಜಿಸ್ಟ್ ಆಂಕೊಲಾಜಿಸ್ಟ್ ಡಾ. ಚಂದನ ಪೈ ಅವರ ಪರಿಣತಿಯಲ್ಲಿ ಮತ್ತು ರೆ.ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಮತ್ತು ಆಡಳಿತಾಧಿಕಾರಿ ರೆ. ಫಾ. ಜೀವನ್ ಜಾರ್ಜ್ ಸಿಕ್ವೇರಾ ಅವರ ನೇತೃತ್ವದಲ್ಲಿ ಥೆಲಸ್ಸೆಮಿಯಾ ಕೇಂದ್ರವು ಪ್ರಾರಂಭಗೊಂಡಿದೆ. ಈ ಕೇಂದ್ರವು 150 ಕ್ಕೂ ಹೆಚ್ಚು ಮಕ್ಕಳು ಮತ್ತು ವಯಸ್ಕರಿಗೆ ಪ್ರಯೋಜನವನ್ನು ನೀಡಲಿದೆ. ತಲಸ್ಸೆಮಿಯಾದಿಂದ ಬಳಲುತ್ತಿರುವ ಒಬ್ಬ ವ್ಯಕ್ತಿಗೆ ರಕ್ತ ಮತ್ತು ಅದರ ಘಟಕಗಳನ್ನು ಒದಗಿಸಲು ಸುಮಾರು ಎರಡರಿಂದ ಮೂರು ದಾನಿಗಳ ಅಗತ್ಯವಿದೆ. ಉಚಿತ ರಕ್ತ ವರ್ಗಾವಣೆಯ ಜತೆಗೆ ಉಚಿತ ಔಷಧಿ ಮತ್ತು ಸಮಾಲೋಚನೆಯನ್ನು ಕೂಡಾ ನೀಡಲಾಗುತ್ತದೆ.ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಸಂಕಲ್ಪ್ ಇಂಡಿಯಾ ಫೌಂಡೇಶನ್ ನಡುವಿನ ಸಹಯೋಗವು ಥೆಲಸ್ಸೆಮಿಯಾ ವಿರುದ್ಧ ಹೋರಾಡುತ್ತಿರುವವರಿಗೆ ಭರವಸೆಯ ಕಿರಣವಾಗಿದ್ದು, ಇದು ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

ಪ್ರಾದೇಶಿಕ ವಾರ್ತೆಗಳು

ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲ: ಶಾಸಕ ಕಾಮತ್ ವಾಗ್ದಾಳಿ

ಮಂಗಳೂರು: ಬರಗಾಲ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದ್ದು, ರೈತರ ಸಂಕಷ್ಟಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ವಾಗ್ದಾಳಿ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತಮ್ಮ ಆಕ್ರೋಶವನ್ನು ಹೊರಹಾಕಲಿದ್ದಾರೆ ಎಂದು ಅವರು ನುಡಿದರು. ರಾಜ್ಯದಲ್ಲಿ ಭೀಕರ ಬರಗಾಲವಿದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬರಗಾಲದಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ಹೊತ್ತಿನಲ್ಲಿ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿ ಮರೆತು, ದೇಶವಿರೋಧಿಗಳನ್ನು ಓಲೈಸುವ ತುಷ್ಟೀಕರಣ ರಾಜಕೀಯವನ್ನೇ ಮಾಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಬೆಂಗಳೂರಿನ ನೀರಿನ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ. ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಟ್ಯಾಂಕರ್‍‌ಗಳನ್ನು ವಶಪಡಿಸಿಕೊಂಡು ನೀರಿನ ದಂಧೆ ನಡೆಸುತ್ತಿದ್ದಾರೆ ಎಂದು ಶಾಸಕ ಕಾಮತ್ ಆರೋಪಿಸಿದರು. *ಬೆಂಗಳೂರಿನ ಮಾನ ಹರಾಜು ಹಾಕಿದ ಸರಕಾರ:ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವ ಮೊದಲು ಅಳೆದು ತೂಗಿ 3 ತಿಂಗಳು ಕಾಲಹರಣ ಮಾಡಿದರು. ರಾಜ್ಯ ಸರಕಾರದ ಬೊಕ್ಕಸದಲ್ಲಿ ಹಣವಿಲ್ಲದ ಕಾರಣ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಅವೈಜ್ಞಾನಿಕವಾದ, ಅಪ್ರಾಯೋಗಿಕವಾದ ಉಚಿತ ಗ್ಯಾರಂಟಿಗಳ ಪೂರೈಕೆಗೆ ಬೊಕ್ಕಸವನ್ನು ಖಾಲಿ ಮಾಡಿಕೊಂಡು ಇದೀಗ ಬರ ನಿರ್ವಹಣೆಗೆ ಹಣವಿಲ್ಲದಂತಾಗಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾದೆ. ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಇದು ಪ್ರಸಾರವಾಗಿ ಬೆಂಗಳೂರಿನ ಮಾನವನ್ನು ಕಾಂಗ್ರೆಸ್ ಸರಕಾರ ಹರಾಜು ಹಾಕಿದೆ ಎಂದು ಕಾಮತ್ ಟೀಕಿಸಿದರು. ಐಟಿ, ಬಿಟಿ ಸಿಟಿ ಎಂಬ ಖ್ಯಾತಿ ಪಡೆದ ಬೆಂಗಳೂರಿಗೆ ಪೂರೈಕೆಯಾಗುವ ಕಾವೇರಿ ನೀರನ್ನೂ ‘ಇಂಡಿ’ ಒಕ್ಕೂಟದ ಭಾಗಿದಾರನೆಂಬ ಕಾರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರ ಕೋರಿಕೆಯಂತೆ ತಮಿಳುನಾಡಿಗೆ ಬಿಟ್ಟಿದ್ದಾರೆ. ಈಗ ಶೇ 60ರಷ್ಟು ಬೋರ್ ವೆಲ್‌ಗಳು ಬತ್ತಿಹೋಗಿವೆ. ದುಷ್ಟ, ರೈತ ವಿರೋಧಿ, ಬಡವರ ವಿರೋಧಿ ಸರಕಾರಕ್ಕೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಉತ್ತರ ಕೊಟ್ಟೇ ಕೊಡುತ್ತಾರೆ ಎಂದು ಶಾಸಕ ಕಾಮತ್ ಹೇಳಿದರು. *ರೈತ ವಿರೋಧಿ ಕಾಂಗ್ರೆಸ್‌:*ಬರಗಾಲದಿಂದ ಬೆಳೆ ನಷ್ಟವಾದ ಬಗ್ಗೆ ಈ ವರೆಗೂ ವೈಜ್ಞಾನಿಕ ಸಮೀಕ್ಷೆ ಮಾಡದೆ ರೈತ ವರ್ಗವನ್ನು ಸಂಕಷ್ಟಕ್ಕೆ ದೂಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರಕಾರ ಪ್ರತಿ ವರ್ಷ ರೈತರಿಗೆ 6,000 ರೂ ಪ್ರೋತ್ಸಾಹ ಧನ ನೀಡುತ್ತಿದೆ. ಹಿಂದಿನ ಬಿಜೆಪಿ ಸರಕಾರವೂ ಇದೇ ಯೋಜನೆಗೆ 4,000 ರೂ.ಗಳ ಸೇರಿಸಿ, ಒಟ್ಟಾರೆ 10,000 ರೂ.ಗಳನ್ನು ರೈತರಿಗೆ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಇದನ್ನು ಸ್ಥಗಿತಗೊಳಿಸಿದೆ. ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ರೈತ ವಿದ್ಯಾನಿಧಿ ಯೋಜನೆಯನ್ನೂ ಈಗಿನ ಕಾಂಗ್ರೆಸ್ ಸರಕಾರ ನಿಲ್ಲಿಸಿದೆ. ಪ್ರತಿ ಲೀಟರ್ ಹಾಲಿಗೆ 7 ರೂ ಪ್ರೋತ್ಸಾಹಧನ ನೀಡುವುದಾಗಿ ಹೇಳಿದ್ದ ಸರಕಾರ ಈ ವರೆಗೂ ಅದನ್ನು ಈಡೇರಿಸಿಲ್ಲ. ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಿ ರೈತರಿಗೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಭಾರೀ ಹೊಡೆತ ನೀಡಿದೆ ಎಂದು ಶಾಸಕ ಕಾಮತ್ ವಿವರಿಸಿದರು. ರೈತರು ಬೆಳೆದ ಬೆಳೆಗಳ ನಿರ್ವಹಣೆಗೆ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕಾಗಿ ಹಿಂದಿನ ಬಿಜೆಪಿ ಸರಕಾರ ನೀಡಿದ್ದ 100 ಕೋಟಿ ರೂ ಹಣವನ್ನು ಕಾಂಗ್ರೆಸ್ ಸರಕಾರ ಸ್ಥಗಿತಗೊಳಿಸಿದೆ. 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳ ರೈತರಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ಜಾರಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಅದನ್ನೂ ಸಹ ರದ್ದುಗೊಳಿಸಿದೆ ಎಂದು ಶಾಸಕರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ ಉಸ್ತುವಾರಿ ನಿತಿನ್ ಕುಮಾರ್, ಜಿಲ್ಲಾ ಬಿಜೆಪಿ ಖಜಾಂಚಿ ಸಂಜಯ ಪ್ರಭು, ಮಾಜಿ ಮೇಯರ್ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ಮಾಧ್ಯಮ ಕಾರ್ಯದರ್ಶಿ ವಸಂತ ಜೆ ಪೂಜಾರಿ, ಮಾಜಿ ಕಾರ್ಪೊರೇಟರ್ ಭಾಸ್ಕರಚಂದ್ರ ಶೆಟ್ಟಿ ಅವರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಿಂದ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳಿಗೆ ಶ್ರೀರಾಮ ದಿವಾಣ ಆಗ್ರಹ.

ಉಡುಪಿ: ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿರುವಾಗ ಆಡಳಿತ ಪಕ್ಷದ ಅಬ್ಯರ್ಥಿಗೆ ಮತ ನೀಡುವಂತೆ ಒತ್ತಾಯಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಬೆಳಗಾವಿಯ ಸ್ವಗೃಹದಲ್ಲಿ ನಡೆಸಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಭೆಗೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಭೆಯ ಮೂಲಕ, ಸಚಿವೆ ನೀತಿ ಸಂಹಿತೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗಿರುವ ಕಾರಣ, ಕೂಡಲೇ ಸಚಿವೆಯಿಂದ ರಾಜೀನಾಮೆ ಪಡೆದುಕೊಳ್ಳುವಂತೆ ಉಡುಪಿಯ ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಒತ್ತಾಯಿಸಿದ್ದಾರೆ.ರಾಜ್ಯ ಸರಕಾರದಿಂದ ಮತದಾರರಿಗೆ ಯಾವುದೇ ಒತ್ತಡವಾಗಲೀ, ಬಲವಂತವಾಗಲಿ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ರಾಜ್ಯ ಸರಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜವಾಬ್ದಾರಿ ಮತ್ತು ಕರ್ತವ್ಯವವಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿರುವುದರಿಂದ ಮತ್ತು ನ್ಯಾಯಯುತ ಚುನಾವಣೆಗಾಗಿ ಮುಖ್ಯಮಂತ್ರಿಗಳು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ರಾಜೀನಾಮೆ ಪಡೆದುಕೊಳ್ಳುವುದು ಅತೀ ಅಗತ್ಯ ಮತ್ತು ಅನಿವಾರ್ಯ ಎಂದು ಶ್ರೀರಾಮ ದಿವಾಣ ತಿಳಿಸಿದ್ದಾರೆ.ಈ ಸಂಬಂಧವಾಗಿ ಶ್ರೀರಾಮ ದಿವಾಣ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವೇಯ್ಟ್ ಲಿಫ್ಟಿಂಗ್: ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ವಿದ್ಯಾಗಿರಿ (ಮೂಡುಬಿದಿರೆ): ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಫ್‌ನಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.ಮಂಗಳೂರಿನ ಎಸ್‌ಡಿಎಂ ಬಿಬಿಎಂ ಕಾಲೇಜಿನಲ್ಲಿ ಮಾರ್ಚ್ 18 ಮತ್ತು 19 ರಂದು ನಡೆದ ಸ್ಪರ್ಧೆಯಲ್ಲಿ ಆಳ್ವಾಸ್ ಪುರುಷರ ಮತ್ತು ಮಹಿಳೆಯರ ತಂಡವು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು, ಕಾಲೇಜು ಸಮಗ್ರ ತಂಡ ಪ್ರಶಸ್ತಿ ಜಯಿಸಿದೆ.ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು 5 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಒಟ್ಟು 61 ಅಂಕ ಪಡೆಯುವ ಮೂಲಕ ಅಗ್ರಸ್ಥಾನ ಪಡೆದಿದ್ದು, ಪ್ರೊ. ರಿಚರ್ಡ್ ರೆಬೆಲ್ಲೊ ರೋಲಿಂಗ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.40 ಅಂಕ ಪಡೆದ ಎಸ್‌ಡಿಎಂ ಕಾಲೇಜು ದ್ವಿತೀಯ ಹಾಗೂ ಅಷ್ಟೇ ಅಂಕ ಪಡೆದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ತೃತೀಯ ತಂಡ ಪ್ರಶಸ್ತಿ ಪಡೆಯಿತು. ಅತಿಥೇಯ ಎಸ್‌ಡಿಎಂ ಕಾಲೇಜು ಚತುರ್ಥ ತಂಡ ಪ್ರಶಸ್ತಿ ಪಡೆಯಿತು.ಮಹಿಳಾ ವಿಭಾಗದಲ್ಲಿ ಸತತ 20ನೇ ಬಾರಿ ತಂಡ ಪ್ರಶಸ್ತಿ ಪಡೆದ ಆಳ್ವಾಸ್ ಕಾಲೇಜು, ಒಟ್ಟು 5 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಶಿರ್ವ ಬ್ಲೊಸಮ್ ಮನ್ವಿನ್ ಸೆಲೆಸ್ಟಿನ್ ಡಿಸೋಜ ಟ್ರೋಫಿಗೆ ಮುತ್ತಿಕ್ಕಿತು.ಉಜಿರೆ ಎಸ್‌ಡಿಎಂ ಕಾಲೇಜು ದ್ವಿತೀಯ ಹಾಗೂ ಪುತ್ತೂರು ಸಂತ ಫಿಲೋಮಿನಾ ಕಾಲೇಜು ತೃತೀಯ ಸ್ಥಾನ ಪಡೆದಿದೆ.ವೇಯ್ಟ್ ಲಿಫ್ಟಿಂಗ್‌ನಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಮಾಡಿದ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾರ್ಚ್ 22,24, 26 ರಂದು ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ: ಇದೇ ಬರುವ ದಿನಾಂಕ 22, 24, 26 ಮಾರ್ಚ್ 2024 ರಂದು ಸಜೀಪ ಮಾಗಣೆ “ಪಡ್ಡೆರಮಾಡ ಜಾತ್ರೆಯ” ಪ್ರಯುಕ್ತ ಪಣೋಲಿ ಬೈಲ್ ಕಲ್ಲುರ್ಟಿ ಕ್ಷೇತ್ರದಲ್ಲಿ “ಆಗೇಲು ಸೇವೆ” ಇರುವುದಿಲ್ಲವೆಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಯುವ ಸಮಾಜ ಸೇವಕ ಸೂರಜ್ ಸಾಗರ್ ಕುಂಪಲ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಆಯ್ಕೆ

ಮಂಗಳೂರು: ಯುವ ಸಮಾಜ ಸೇವಕ, ಉತ್ಸಾಹಿ ತರುಣ ಸೂರಜ್ ಸಾಗರ್ ಕುಂಪಲ ಅವರು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸೂರಜ್ ಸಾಗರ್ ಕುಂಪಲ ಅವರ ಸಮಾಜ ಸೇವೆಯನ್ನು ಪರಿಗಣಿಸಿ ರಲ್ಲಿ 2020 ರಲ್ಲಿ Mp mla’s ನ್ಯೂಸ್ ಸೌಹಾರ್ದ ಸಂಗಮವು ಮಂಗಳೂರು ಪುರಭವನದಲ್ಲಿ ನಡೆದಾಗ ಸೌಹಾರ್ದ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮಂಗಳೂರು ಕೆನರಾ ಕಾಲೇಜಿನಲ್ಲಿ ಬಿ.ಎ. ಪದವೀಧರ ಶಿಕ್ಷಣ ಪಡೆದಿರುವ ಸೂರಜ್ ಸಾಗರ್ ಕುಂಪಲ ಅವರು ಬಾಲ್ಯದಿಂದಲೇ ಸಮಾಜ ಸೇವೆಯತ್ತ ಒಲವು ಹರಿಸಿದವರು. ಆಸರೆ ಬಳಗ ಕುಂಪಲ ಎಂಬ ಸಮಾಜಮುಖಿ ಯುವಕ ಸಂಘಟನೆಯ ಸಂಸ್ಥಾಪಕರಾಗಿ ಅವರು 3೦ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ರಿಪೇರಿ, ಆರೋಗ್ಯ, ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಬಡ ಬಾಲಕಿಯೊಬ್ಬಳಿಗೆ ಅನಾರೋಗ್ಯ ಕಾಣಿಸಿಕೊಂಡು, ಆಕೆಯ ಚಿಕಿತ್ಸೆಗೆ 8 ಲಕ್ಷ ರೂಪಾಯಿ ಬೇಕೆಂದಾಗ ದಾನಿಗಳಿಂದ ಹಣ ಸಂಗ್ರಹಿಸಿ ಆಕೆಯ ಚಿಕಿತ್ಸೆಗೆ ಸಕಾಲಿಕ ನೆರವು ಒದಗಿಸಿ ಮಾನವೀಯತೆ ಮೆರೆದಿದ್ದರು.ಜಿ.ಪಂ.ನ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿಕಲಚೇತನರು ಮತ್ತು ಹಿರಿಯ ನಾಗರಿಕರ ವಿಭಾಗದಲ್ಲಿ ಸಮನ್ವಯ ಅಧಿಕಾರಿಯಾಗಿ ಗುತ್ತಿಗೆಯಧಾರದಲ್ಲಿ ಹಲವು ವರ್ಷಗಳ ಕಾಲ ಕಾರ‍್ಯ ನಿರ್ವಹಿಸಿದ್ದ ಅವರು ಆ ಸಂದರ್ಭ ಅನೇಕ ಮಂದಿ ವಿಕಲಚೇತನರಿಗೆ ಉಚಿತ ಗಾಲಿ ಕುರ್ಚಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ನೀಡಿ ಸಹಾಯ ಒದಗಿಸಿದ್ದರು. ವಯೋವೃದ್ಧರಿಗಾಗಿ ಸೂರಜ್ ಸಾಗರ್ ನೇತೃತ್ವದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ವಾತ್ಸಲ್ಯ ಛಾಯಾ ಟ್ರಸ್ಟ್ ವೃದ್ದಾಶ್ರಮವನ್ನು ಅತೀ ಶೀಘ್ರದಲ್ಲಿಯೇ ಆರಂಭಿಸಲಿದ್ದಾರೆ ಅವರು ವಿಸ್ತಾರ ಸಮಾಜ ಸೇವೆಗಾಗಿ ರಾಜಕೀಯ ಪಕ್ಷ ಸೇರುವ ನಿರ್ಧಾರ ಮಾಡಿ ಬಿಜೆಪಿ ಪಕ್ಷ ಸೇರಿ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಸಕ್ರಿಯರಾಗಿದ್ದಾರೆ. ಸೂರಜ್ ಸಾಗರ್ ಅವರ ರಾಜಕೀಯ ಭವಿಷ್ಯವು ಉಜ್ವಲವಾಗಿ ಪ್ರಜ್ವಲಿಸಲಿ ಎಂದು Mpmla:s ನ್ಯೂಸ್ ಶುಭ ಹಾರೈಸುತ್ತದೆ.

Scroll to Top