ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮಕ್ಕಳಲ್ಲಿ ಡಿಜಿಟಲ್ ಸುರಕ್ಷತೆ ಬಗ್ಗೆ ಗಂಭೀರ ಮುತುವರ್ಜಿ ಅತ್ಯಗತ್ಯ- ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತಾನಾಡಿದ ಯುನಿಸೆಫ್ ಸಂವಹನ ವಕಾಲತ್ತು ಮತ್ತು ಪಾಲುದಾರಿಕೆ ತಜ್ಞ ಪ್ರೊಸೂನ್ ಸೇನ್.

ಮಂಗಳೂರು- ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಸುಲಭದಲ್ಲಿ ತಂತ್ರಜ್ಞಾನ ಕೈಗೆ ಎಟಕುತ್ತಿದ್ದು, ಡಿಜಿಟಲ್ ಸುರಕ್ಷತೆ ಕಡೆಗೆ ಗಂಭೀರವಾಗಿ ಮುತುವರ್ಜಿ ವಹಿಸಬೇಕು ಎಂದು ಯುನಿಸೆಫ್ ಸಂವಹನ ವಕಾಲತ್ತು ಮತ್ತು ಪಾಲುದಾರಿಕೆ ತಜ್ಞ ಪ್ರೊಸೂನ್ ಸೇನ್ ಹೇಳಿದರು.ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾರ್ಚ್ 27ರ ಗುರುವಾರ ಮೈಸೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಯುನಿಸೆಫ್ ಹೈದ್ರಾಬಾದ್ ಹಾಗೂ ಸಂತ ಅಲೋಶಿಯಸ್ ಡೀಮ್ಡ್ ವಿ.ವಿ .ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ ಸಾಂಕ್ರಮಿಕವಲ್ಲದ ರೋಗಗಳು, ಮಾನಸಿಕ ಆರೋಗ್ಯ ಮತ್ತು ಡಿಜಿಟಲ್ ಸುರಕ್ಷತೆ ವಿಷಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಹರೆಯದಲ್ಲಿ ಮಕ್ಕಳಲ್ಲಿ ದೈಹಿಕ ಬದಲಾವಣೆ ಸಹಜ .ಈ ವೇಳೆ ಅವರ ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು .ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಒಳಿತು -ಕೆಡುಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದವರು ಹೇಳಿದರು.ಸಂತ ಅಲೋಶಿಯಸ್ ಡೀಮ್ಡ್ ವಿವಿ ರಿಜಿಸ್ಟರ್ ಡಾ .ರೊನಾಲ್ಡ್ ನಜಾರತ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಸಮಾಜದ ನೈಜತೆ ಅರಿಯುವ ಶಿಕ್ಷಣ ನೀಡಬೇಕಾಗಿದೆ. ವ್ಯಕ್ತಿತ್ವ ನಿರ್ಮಾಣದ ಕಡೆಗೆ ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ ಎಂದರು.ಮೈಸೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ.ಸಪ್ನಾ ಎಂ.ಎಸ್ ಪ್ರಸ್ತಾವನೆಗೈದರು. ಸಂತ ಅಲೋಶಿಯಸ್ ಡೀಮ್ಡ್ ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಶೆಟ್ಟಿ ವಂದಿಸಿದರು. ಮಂಜುನಾಥ್ ಸುಬೇದಾರ್ ಕಾರ್ಯಕ್ರಮ ನಿರೂಪಿಸಿದರು.ಮಕ್ಕಳ ರಕ್ಷಣೆ ಮನೆಯಿಂದ ಆರಂಭವಾಗಲಿ.ಮಕ್ಕಳ ರಕ್ಷಣೆಗೆ ದೇಶದಲ್ಲಿ ಹಲವಾರು ಕಾನೂನು, ಕಾಯಿದೆಗಳಿವೆ .ಆದರೆ, ಇದು ಮೊದಲು ಮನೆಯವರಿಂದ ರಕ್ಷಣೆ ಆಗಬೇಕು .ಮಕ್ಕಳ ಹಕ್ಕುಗಳನ್ನು ಅರ್ಥ ಮಾಡಿಕೊಂಡು ಅದರ ಪಾಲನೆ ಮಾಡಬೇಕು. ಯಾರಿಗೂ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ತಡೆ ಹಿಡಿಯುವ ಅಧಿಕಾರ ಇಲ್ಲ. ಮಾಧ್ಯಮ ವರದಿಗಾರರು ಸುದ್ದಿ ಬರವಣಿಗೆಯಲ್ಲಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆ ಎಚ್ಚರ ವಹಿಸುವ ಅಗತ್ಯ ಇದೆ. ಘಟನೆಯ ವರದಿ ಜತೆ ಕಾನೂನು ಮಾಹಿತಿಯೂ ಸೇರಿಸಿಕೊಂಡರೆ ಉತ್ತಮ ಎಂದು ಪಡಿ ಸಂಸ್ಥೆಯ ಸಿಇಒ ರೆನ್ನಿ ಡಿಸೋಜ ಹೇಳಿದರು.ಯುನಿಸೆಫ್ ಕಚೇರಿಯ ಆರೋಗ್ಯ ತಜ್ಞ ಡಾ.ಶ್ರೀಧರ್ ಪ್ರಹ್ಲಾದ್ ರಾಯವಾಂಕಿ ಅವರು ಮಕ್ಕಳ ಆರೋಗ್ಯ ಸಮಸ್ಯೆ ಹೆಚ್ಚಳ ವಿಷಯದಲ್ಲಿ ವಿಚಾರ ಮಂಡಿಸಿದರು.

ಪ್ರಾದೇಶಿಕ ವಾರ್ತೆಗಳು

ಮೂಡುಬಿದಿರೆ: ಪತ್ರಿಕಾ ಭವನದ ಕಾಮಗಾರಿ ವೀಕ್ಷಿಸಿದ ಕೆ.ವಿ ಪ್ರಭಾಕರ್

ಮೂಡುಬಿದಿರೆ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘ (ಪ್ರೆಸ್‌ಕ್ಲಬ್) ವತಿಯಿಂದ ನಿರ್ಮಾಣವಾಗುತ್ತಿರುವ ಪತ್ರಿಕಾಭವನ ಕಾಮಗಾರಿಯನ್ನು ಮಂಗಳವಾರ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಸುಮಾರು ೨ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಭವನದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸರ್ಕಾರದಿಂದ ಅನುದಾನ ಒದಗಿಸಲು ಸಹಕರಿಸುವಂತೆ ಕೋರಿ ಮನವಿ ಪತ್ರವನ್ನು ಪ್ರೆಸ್‌ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಕೆ. ವಿ ಪ್ರಭಾಕರ್ ಅವರಿಗೆ ಸಲ್ಲಿಸಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ ಎನ್ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡ0ಗಡಿ,ಮೂಡುಬಿದಿರೆ ಪ್ರೆಸ್‌ಕ್ಲಬ್ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ಗುತ್ತಿಗೆದಾರ ಗುರು ಹಾಗೂ ಪ್ರೆಸ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಹೀರೋಸ್ ಆ್ಯಂಡ್‌ ಹೀರೋಯಿನ್ಸ್ ಆಫ್‌ ಟ್ವೆಂಟಿಯತ್ ಸೆಂಚುರಿ ಲೆಪ್ರಸಿ ವರ್ಕ್ ಇನ್‌ ಇಂಡಿಯಾ’ ಕೃತಿ ಲೋಕಾರ್ಪಣೆ

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್‌ ಕಾಲೇಜಿನ ಚರ್ಮ ರೋಗ ಶಾಸ್ತ್ರ, ಲೈಂಗಿಕ ರೋಗ ಶಾಸ್ತ್ರ ಮತ್ತು ಕುಷ್ಠ ರೋಗ ಶಾಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಕರಾವಳಿ ಚರ್ಮರೋಗ ಚಿಕಿತ್ಸಾ ತಜ್ಞರ ಸಂಘದ ಸಹಕಾರದೊಂದಿಗೆ ‘ಹೀರೋಸ್ ಆ್ಯಂಡ್‌ ಹೀರೋಯಿನ್ಸ್ ಆಫ್‌ ಟ್ವೆಂಟಿಯತ್ ಸೆಂಚುರಿ ಲೆಪ್ರಸಿ ವರ್ಕ್ ಇನ್‌ ಇಂಡಿಯಾ’ ಎಂಬ ಪುಸ್ತಕ ಬಿಡುಗಡೆ ಸಮಾರಂಭ ಮಾರ್ಚ್ 22 ರಂದು ಕಾಲೇಜಿನ ದಶಮಾನೋತ್ಸವ ಸ್ಮಾರಕ ಸಭಾಂಗಣದ ನಾಲಡ್ಜ್ ಸೆಂಟರ್‌ ನಲ್ಲಿ ನಡೆಯಿತು.ಫಾದರ್ ಮುಲ್ಲರ್‌ ಚಾರಿಟೆಬಲ್‌ ಸಂಸ್ಥೆಗಳ ನಿರ್ದೇಶಕ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ, ನಿಯೋಜಿತ ನಿರ್ದೇಶಕ ಫಾ. ಫೌಸ್ತಿನ್‌ ಲೂಕಸ್‌ ಲೋಬೊ, ಹೊಸದಿಲ್ಲಿಯ ಸಾಸಕಾವಾ ಇಂಡಿಯಾ ಲೆಪ್ರಸಿ ಫೌಂಡೇಶನಿನ ಸಿಇಒ ಗೌರಬ್‌ ಸೇನ್ ಅವರು ಉಪಸ್ಥಿತರಿದ್ದು. ಕೃತಿಯನ್ನು ಬಿಡುಗಡೆ ಮಾಡಿದರು.ಫಾದರ್‌ ಮುಲ್ಲರ್ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಕುಷ್ಠ ಮತ್ತು ಇತರ ರೋಗಗಳ ನಿರ್ಮೂಲನಾ ವಿಭಾಗದ ಮಾಜಿ ಸಲಹೆಗಾರ ಹಾಗೂ ಸಾಸಕಾವಾ ಇಂಡಿಯಾ ಲೆಪ್ರಸಿ ಫೌಂಡೇಶನಿನ ಟ್ರಸ್ಟಿ ಡಾ. ಡೆರಿಕ್‌ ಎ. ಲೋಬೊ ಅವರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಕುಷ್ಠ ರೋಗ ನಿರ್ಮೂಲನೆಯ ತಾಂತ್ರಿಕ ಸಲಹಾ ತಂಡದ ಮಾಜಿ ಅಧ್ಯಕ್ಷ ಡಾ. ಮೋಹನ್‌ ಡಿ. ಗುಪ್ತೆ ಅವರು ರಚಿಸಿರುವ ಈ ಕೃತಿಯಲ್ಲಿ 20 ನೇ ಶತಮಾನದಲ್ಲಿ ಭಾರತದಲ್ಲಿ ಕುಷ್ಠ ರೋಗ ನಿವಾರಣೆಗಾಗಿ ಶ್ರಮಿಸಿದ ಫಾದರ್‌ ಮುಲ್ಲರ್ ಸಂಸ್ಥೆಗಳ ಸ್ಥಾಪಕ ಫಾ. ಅಗಸ್ಟಸ್‌ ಮುಲ್ಲರ್‌ ಸೇರಿದಂತೆ 45 ಜನ ಹೀರೋಗಳು ಮತ್ತಿ ಹೀರೋಯಿನ್‌ಗಳು ಹಾಗೂ 16 ಸಂಸ್ಥೆಗಳ ಮಾಹಿತಿ ಇದೆ.ಫಾದರ್‌ ಮುಲ್ಲರ್‌ ಅವರು 1890 ರಲ್ಲಿ ಸೈಂಟ್ ಜೋಸೆಫ್‌ ಕುಷ್ಠ ರೋಗ ಚಿಕಿತ್ಸಾಲಯವನ್ನು ಸ್ಥಾಪಿಸಿ ಕುಷ್ಠ ರೋಗಿಗಳ ಸೇವೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ವಿಷಯ ಈ ಕೃತಿಯಲ್ಲಿದೆ. ಡಾ. ಡೆರಿಕ್‌ ಎ ಲೋಬೊ ಅವರನ್ನು ಕುಷ್ಠ ರೋಗ ನಿವಾರಣೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಫಾದರ್‌ ಮುಲ್ಲರ್‌ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.ಚರ್ಮ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಸಿಂತಾ ಮಾರ್ಟಿಸ್‌ ಸ್ವಾಗತಿಸಿದರು. ವಿಭಾಗದ ಮಾಜಿ ಮುಖ್ಯಸ್ಥ ಡಾ. ನಂದ ಕಿಶೋರ್‌ ಅವರು ಕೃತಿ ಪರಿಚಯ ಮಾಡಿದರು. ಡಾ. ಡೆರಿಕ್‌ ಎ. ಲೋಬೊ ಅವರು ಪುಸ್ತಕವನ್ನು ಹೊರ ತರಲು ಮಾಹಿತಿ ಕಲೆ ಹಾಕುವಲ್ಲಿ ಪಟ್ಟ ಶ್ರಮವನ್ನು ವಿವರಿಸಿದರು. ಜಗತ್ತಿನಲ್ಲಿರುವ ಕುಷ್ಠ ರೋಗದಲ್ಲಿ ಶೇ. 60 ರಷ್ಟು ಪ್ರಮಾಣ ಭಾರತದಲ್ಲಿ ಇರುವುದಕ್ಕೆ ಕಾರಣವೇನೆಂದು ಕಂಡುಕೊಳ್ಳುವ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್‌ ಚಾರಿಟೆಬಲ್‌ ಸಂಸ್ಥೆಗಳ ನಿರ್ದೇಶಕ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ ಮಾತನಾಡಿ ಕುಷ್ಠ ರೋಗಿಗಳಿಗಾಗಿ ಆಸ್ಪತ್ರೆ ತೆರೆದು ಸೇವೆ ಸಲ್ಲಿಸಿದ ಫಾದರ್‌ ಮುಲ್ಲರ್‌ ಅವರ ಸೇವೆಯನ್ನು ಸ್ಮರಿಸಿದರು.ಕಾಲೇಜಿನ ಡೀನ್ ಡಾ. ಆ್ಯಂಟನಿ ಸಿಲ್ವನ್‌ ಡಿ’ಸೋಜಾ, ಮೆಡಿಕಲ್‌ ಕಾಲೇಜಿನ ಆಡಳಿತಾಧಿಕಾರಿ ಫಾ. ಅಜಿತ್‌ ಮಿನೇಜಸ್‌, ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಜಾರ್ಜ್ ಜೀವನ್‌ ಸಿಕ್ವೇರಾ ಮತ್ತು ಇತರರು ಉಪಸ್ಥಿತರಿದ್ದರು. ಕರಾವಳಿ ಚರ್ಮ ರೋಗ ಚಿಕಿತ್ಸಾ ತಜ್ಞರ ಸಂಘದ ಅಧ್ಯಕ್ಷರಾದ ಡಾ. ರೋಚೆಲ್‌ ಮೊಂತೇರೊ ವಂದಿಸಿದರು. ಡಾ. ಸೋನಲ್‌ ಫೆರ್ನಾಂಡಿಸ್‌ ಮತ್ತು ಡಾ. ಪ್ರಜ್ಞಾ ಶೆಟ್ಟಿ ಅವರು ಕಾರ್ಯಕ್ಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು -ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು: ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಪ್ರಸಾದ್ ನೇತ್ರಾಲಯ ಹಾಗೂ ಪ್ರಸಾದ್ ಮಲ್ಟಿ ಸ್ಪೆಷ್ಟಾಲಿಟಿ ಐ ಹಾಸ್ಪಿಟಲ್ ಸಹಯೋಗದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆಯೋಜಿಸಲಾದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಅವರು ಹೇಳಿದರು.ರೋಟರಿ ಕ್ಲಬ್‌ನ ಮಾಜಿ ಗವರ್ನರ್ ಡಾ.ದೇವದಾಸ್ ರೈ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್.,ಕಾರ್ಯಕಾರಿ ಸಮಿತಿ ಸದಸದ್ಯ ರಾಜೇಶ್ ದಡ್ಡಂಗಡಿ, ಪ್ರಸಾದ್ ನೇತ್ರಾಲಯದ ವೈದ್ಯ ಡಾ. ನಿರಂಜನ್, ಸಾರ್ವಜನಿಕ ಸಂಪರ್ಕಧಿಕಾರಿಯೂಸುಫ್ ಉಪಸ್ಥಿತರಿದ್ದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಜೀವನ ಶಿಕ್ಷಣ ನೀಡುತ್ತಿರುವ ಶಾಲೆ ರಾಜ್ಯಕ್ಕೆ ಮಾದರಿ – ಕೆ‌.ವಿ.ಪ್ರಭಾಕರ್

ಕುತ್ಲೂರು,ಮಾ.25; ಕುತ್ಲೂರಿನಲ್ಲಿ ಶಾಲಾ ಪಠ್ಯದ ಜೊತೆ ಪರಿಸರದ ಜೊತೆ ಬದುಕುವ ಜೀವನ ಶಿಕ್ಷಣ ನೀಡುತ್ತಿರುವ ಶಾಲೆ ರಾಜ್ಯಕ್ಕೆ ಮಾದರಿ ಎಂದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಾಭಾಗಿತ್ವದಲ್ಲಿ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮರಳಿ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸೋಣ ಅಭಿಯಾನ ಹಾಗೂ ಮಕ್ಕಳು ಮತ್ತು ಶಿಕ್ಷಕರು ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಜೊತೆ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಕುತ್ಲೂರಿನಲ್ಲಿ ಶಾಲೆ ವಿಶ್ವ ವಿದ್ಯಾನಿಲಯ ದ ರೀತಿ ಕಾರ್ಯ ನಿರ್ವಹಿ ಸುತ್ತಿದೆ.ನಾವು ಪಡೆಯುವ ಪ್ರತಿ ಜ್ಞಾನವೇ ಶಿಕ್ಷಣ.ಶಾಲೆಯಲ್ಲಿ ನಿರ್ಮಿಸಲಾದ ಕೈ ತೋಟ ಜೀವನದ ಅನುಭವ ನೀಡುತ್ತದೆ. ಸಮಾಜದಿಂದ ಏನು ಪಡೆದಿದ್ದೇನೆ ಎನ್ನುವ ಬದಲು ಸಮಾಜಕ್ಕೆ ಏನು ಮಾಡಬೇಕು ಎನ್ನುವುದು ಮುಖ್ಯ ಎಂದರು.ತಾನು ಸರಕಾರಿ ಶಾಲೆಯಲ್ಲಿ ಓದಿ ಇಂದು ಸಮಾಜದಲ್ಲಿ ಸ್ಥಾನ ಮಾನ ಪಡೆದಿದ್ದೇನೆ.ಆ ಕಾರಣದಿಂದ ರಾಜ್ಯದ ಸರಕಾರಿ ಶಾಲೆಗಳ ಬಗ್ಗೆ ನಾನು ಕಲಿತ ಶಾಲೆಯ ಬಗ್ಗೆ ನನಗೆ ಅಭಿಮಾನವಿದೆ.ಅದೇ ರೀತಿ ಕುತ್ಲೂರು ಶಾಲೆಯ ಅಭಿವೃದ್ಧಿ ಗೆ ಶಾಲೆಯವರು ಸಲ್ಲಿಸಿದ ಮನವಿಯ ಪ್ರಕಾರ ನನ್ನಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ. ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಮಚಂದ್ರ ಭಟ್ ಮಾತನಾಡುತ್ತಾ, ಆರಂಭದಲ್ಲಿ ಮಕ್ಕಳ ಸಂಖ್ಯೆ 38 ಇಳಿಮುಖ ವಾಗಿದ್ದ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಪತ್ರಕರ್ತರ ಗ್ರಾಮವಾಸ್ತವ್ಯ ಶಾಲಾ ಕೈ ತೋಟದ ಜೊತೆ400 ಅಡಿಕೆ ಗಿಡ 50 ತೆಂಗಿನ ಸಸಿ ನೆಟ್ಟು ಬೆಳೆಸಿದ್ದೇವೆ.ಪತ್ರಕರ್ತರ ಗ್ರಾಮವಾಸ್ತವ್ಯ ಈ ನಿಟ್ಟಿನಲ್ಲಿ ಪ್ರೇರಣೆ ಯಾಗಿದೆ.ಖಾಸಗಿ ಶಾಲೆಯಲ್ಲಿ ವಾಹನ ವ್ಯವಸ್ಥೆ ಇರುವಂತೆ ಕುತ್ಲೂರು ಶಾಲಾ ಮಕ್ಕಳಿಗೆ ಎರಡು ವಾಹನ ವ್ಯವಸ್ಥೆ ಮಾಡಲಾಗಿದೆ.ಆದರೆ ಸರಕಾರಿ ಶಾಲೆಗೆಸರಕಾರದಿಂದ ಅಥವಾ ಸಂಸ್ಥೆ ಗಳಿಂದ ಇನ್ನಷ್ಟು ಸಹಕಾರ ದೊರೆತರೆ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ದಂತಾಗುತ್ತದೆ ಎಂದು ರಾಮಚಂದ್ರ ಭಟ್ ತಿಳಿಸಿದ್ದಾರೆ.ಸಮಾರಂಭದ ವೇದಿಕೆಯಲ್ಲಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ,ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ,ಮುಖ್ಯ ಮಂತ್ರಿ ಗಳ ಮಾಜಿ ಸಲಹೆ ಗಾರ ಶಶಿಕಾಂತ ಅರಿಗ , ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥ ಮಿಕ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆಶ್ವೇತಾ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕಿ ಸುಶ್ಮಾ ವಂದಿಸಿದರು.ಶಿಕ್ಷಕ ರಾಜಾ ಕಳಸಪ್ಪನವರ್ ಕಾರ್ಯಕ್ರಮ ನಿರೂಪಿಸಿದರು. ಈ ಸರಕಾರಿ ಶಾಲೆಯಲ್ಲಿ ಸಾವ ಯವ ತರಕಾರಿ ತೋಟ, ಅಡಿಕೆ ತೋಟ ನೋಡಿ ತುಂಬಾ ಖುಷಿಯಾಗಿದೆ ಈ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ..ವಿದ್ಯಾರ್ಥಿಗಳ ಚಟುವಟಿಕಗಳನ್ನು ಕಂಡು ಖುಷಿಯಾಗಿದೆ.ವಿದ್ಯಾರ್ಥಿಗಳ ಅಧ್ಯಯನ ಕ್ಕೆ ಅನುಕೂಲ ವಾಗುವ ದ್ರಷ್ಟಿಯಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವಾಗ ಈ ಶಾಲೆಗೆ 2 ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಟಿ ಶರ್ಟ್, ಪ್ಯಾಂಟ್ ತನ್ನ ವೈಯುಕ್ತಿಕ ಕೊಡುಗೆಯಾಗಿ ನೀಡಲಾಗುವುದು. ರಾಜ್ಯ ಸರಕಾರದಿಂದಲೂ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.ಮಾಧ್ಯಮ ಸಲಹೆಗಾರರಿಗೆ ತರಕಾರಿ ಸಮರ್ಪಣೆ :ಈ ಶಾಲೆಯ ಸಾವಯವ ತರಕಾರಿ ತೋಟದಲ್ಲಿ ಬೆಳೆದ 10 ಕೆಜಿ ಸೌತೆ ಹಾಗೂ 3 ಕೆಜಿ ಬೆಂಡೆ ಕಾಯಿಯನ್ನು ವಿದ್ಯಾರ್ಥಿಗಳು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರಿಗೆ ಹಸ್ತಾಂತರಿಸಿದರು.ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಶಾಲೆಯ ಸಾವಯವ ತೋಟದಲ್ಲಿ ಬೆಳೆದ ತರಕಾರಿಯನ್ನು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕೃಷ್ಣಗೆ ತೆರಳಿ ವಿದ್ಯಾರ್ಥಿಗಳು ಹಸ್ತಾಂತರ ಮಾಡಲಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ತಿಳಿಸಿದರು.

ಪ್ರಾದೇಶಿಕ ವಾರ್ತೆಗಳು

29ರಂದು ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆ. ಸರಕಾರದ ಗಮನ ಸೆಳೆಯಲು ಬೆಂಗಳೂರು ಚಲೋಗೆ ಸಿದ್ಧತೆ

ಮಂಗಳೂರು: ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ದ.ಕ. ಜಿಲ್ಲೆ, ಮಂಗಳೂರು ಮತ್ತು ದ.ಕ. ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ವತಿಯಿಂದ ಮಾ.29ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನ ತಾಲೂಕು ಮಿನಿವಿಧಾನ ಸೌಧ, ಮಂಗಳೂರು ಇಲ್ಲಿ ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆಯನ್ನು ಕರೆಯಲಾಗಿದೆ.ಜುಲೈ 1, 2022 ರಿಂದ ಜು.31, 2024ರ ಅವಧಿಯಲ್ಲಿ ನಿವೃತ್ತ ಸರಕಾರಿ ಅಧಿಕಾರಿ/ನೌಕರ ವರ್ಗದ ಸುಮಾರು ರಾಜ್ಯಾದ್ಯಂತ 26,743 ನಿವೃತ್ತರಿಗೆ 7ನೇ ವೇತನ, ಆಯೋಗದ ಲೆಕ್ಕಾಚಾರದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವ ಸಂದರ್ಭದಲ್ಲಿಆರ್ಥಿಕ ನಷ್ಟವಾಗಿರುತ್ತದೆ ಎಂದು ಸರಕಾರಕ್ಕೆ ಒತ್ತಾಯ ವಿಚಾರದಲ್ಲಿ ಈ ಸಭೆಯನ್ನು ಕರೆಯಲಾಗಿದೆ. ದ.ಕ.ಜಿಲ್ಲೆಯ ಸುಮಾರು 600ಕ್ಕೂ ಮಿಕ್ಕಿ ನಿವೃತ್ತ ನೌಕರರು ಮತ್ತು ರಾಜ್ಯದ ಸುಮಾರು 20 ಸಾವಿರ ಮಂದಿ ಸದಸ್ಯರಿಗೆ ಸಮಸ್ಯೆಯಾಗಿದೆ.ಈ ಸಭೆಗೆ ರಾಜ್ಯದ ಮಹಾ ಪ್ರಧಾನ ಸಂಚಾಲಕರಾದ ಡಾ.ಎಂ.ಪಿ.ಎಂ. ಷಣ್ಮುಖಯ್ಯ ಮತ್ತು ರಾಜ್ಯದ ತಂಡದ ಸದಸ್ಯರು, ಎಂಎಲ್‍ಸಿ ಐವನ್ ಡಿ ಸೋಜ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಸರಕಾರಕ್ಕೆ ಇನ್ನೊಮ್ಮೆ ಆರ್ಥಿಕ ನಷ್ಟದ ಬಗ್ಗೆ ಮನವರಿಕೆ ಮಾಡುವ ಏ.3ರಂದು ಮೂರನೇ ಸಲ ಬೆಂಗಳೂರು ಚಲೋ ಕಾರ್ಯಕ್ರಮ ಹಾಗೂ ಏ.4 ರಂದು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತಿ ಸಂಘದ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯ ಸಮ್ಮೇಳನದಲ್ಲಿ ಬೇಡಿಕೆ ಈಡೇರಿಸಲು ಸರಕಾರವನ್ನೂ ಒತ್ತಾಯಿಸುವ ಕುರಿತು ನಿರ್ಧಾರವನ್ನು ತಾಳಲಾಗುತ್ತದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಸಿರಿಲ್ ರಾಬರ್ಟ್ ಡಿ ಸೋಜ ಹಾಗೂ ದ.ಕ.ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ದ.ಕ. ಮಂಗಳೂರು ಅಧ್ಯಕ್ಷ ಎನ್. ಸೀತಾರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವಾರ್ತಾ ಇಲಾಖೆಗೆ ಸಿಎಂ ಮಾಧ್ಯಮ ಸಲಹೆಗಾರರ ಭೇಟಿ

ಮಂಗಳೂರು ಮಾ.25(ಕ.ವಾ):- ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್ ಅವರು ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಗೆ ಭೇಟಿ ನೀಡಿದರು.ಕಚೇರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಇಲಾಖಾ ಪ್ರಗತಿ ಮಾಹಿತಿ ಪಡೆದರು. ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಪತ್ರಕರ್ತರ ಪ್ರವಾಸಕ್ಕೆ ಹೊಸ ಬಸ್ ಒದಗಿಸುವ ಬಗ್ಗೆ ಶೀಘ್ರದಲ್ಲಿ ಸರಕಾರ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು. ಗ್ರಾಮಾಂತರ ಪತ್ರಕರ್ತರ ಬಸ್ ಪಾಸ್ ಹಾಗೂ ಪತ್ರಕರ್ತರ ಪಿಂಚಣಿ ಯೋಜನೆ ಕುರಿತು ಅವರು ಚರ್ಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ , ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ , ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ , ಕಚೇರಿ ಸಿಬ್ಬಂದಿಗಳು ಇದ್ದರು.ಇದೇ ಸಂದರ್ಭದಲ್ಲಿ ಶೀಘ್ರದಲ್ಲಿ ನಿವೃತ್ತಿ ಹೊಂದಲಿರುವ ವಾರ್ತಾ ಇಲಾಖೆ ಸಿಬ್ಬಂದಿ ವಿಶ್ವನಾಥ ಜೋಗಿ ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಸನ್ಮಾನಿಸಿದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಬಾಬುಗುಡ್ಡ- ಅತ್ತಾವರದಲ್ಲಿ ರೋಹನ್ ಕಾರ್ಪೊರೇಷನ್ ನ ಹೊಸ ರೆಸಿಡೆನ್ಸಿ ಪ್ರಾಜೆಕ್ಟ್ ರೋಹನ್ ನೆಸ್ಟ್ ಶಿಲಾನ್ಯಾಸ ಕಾರ್ಯಕ್ರಮ

ರಾಜ್ಯದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್‌ನ ಹೊಸ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ನ ಶಿಲಾನ್ಯಾಸ ಕಾರ್ಯಕ್ರಮವು ಸೋಮವಾರ ನಗರದ ಅತ್ತಾವರ-ಬಾಬುಗುಡ್ಡದಲ್ಲಿ ನಡೆಯಿತು. ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ರೆ.ಫಾ. ಬೊನೆವೆಂಚರ್ ನಝ್ರತ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಶಾಸಕರಾದ ಐವನ್ ಡಿಸೋಜ, ವೇದವ್ಯಾಸ ಕಾಮತ್ ಶುಭ ಹಾರೈಸಿದರು. ರೆ.ಫಾ. ಬೊನೆವೆಂಚರ್ ನಝ್ರತ್, ಧರ್ಮಗುರು, ಮಿಲಾಗ್ರಿಸ್ ಚರ್ಚ್ ಇವರು ಮಾತನಾಡಿ ರೋಹನ್ ಮೊಂತೆರೋ ಶಿಸ್ತುಬದ್ಧ ವ್ಯಕ್ತಿ. ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗಲೂ ಗ್ರಾಹಕರ ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಒಂದಿನಿತೂ ಕುಂದುಕೊರತೆ ಇಲ್ಲದ ಯೋಜನೆಗಳನ್ನು ಪೂರ್ತಿಗೊಳಿಸುವುದು ಅವರ ಹೆಗ್ಗಳಿಕೆಯಾಗಿದೆ ಡಾ. ಎನ್.ಎಂ. ರಾಜೇಂದ್ರ ಕುಮಾರ್‌ ಮಾತನಾಡಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ರೋಹನ್ ಮೊಂತೆರೋ ತನ್ನದೇ ಆದ ಛಾಪು ಮೂಡಿಸಿದ್ದಾರೆ. ರೋಹನ್ ಮೊಂತೆರೋ ಈವರೆಗೆ ಕೈಗೆತ್ತಿಕೊಂಡ ಎಲ್ಲಾ ಯೋಜನೆಗಳೂ ಗ್ರಾಹಕರ ತೃಪ್ತಿಗೆ ಪಾತ್ರವಾಗಿವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಕೊಡುವುದರಲ್ಲಿ ಅವರು ಎತ್ತಿದ ಕೈ. ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬೈಯಲ್ಲೂ ವಿನೂತನ ಪ್ರಾಜೆಕ್ಟ್ ನಿರ್ಮಾಣದ ಗುರಿ ಹಾಕಬೇಕಾಗಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ದಾಖಲೆಗಳನ್ನು ಮಾಡುತ್ತಿರುವ ರೋಹನ್ ಮೊಂತೆರೋ ಕೇವಲ ಲಾಭಗಳಿಕೆಯ ಉದ್ದೇಶವನ್ನು ಹೊಂದಿಲ್ಲ. ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದಾರೆ. ಜನರ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿರುವ ಅವರು ಎಲ್ಲದರಲ್ಲೂ ಯಶಸ್ವಿಯಾಗುತ್ತಿರುವುದು ಶ್ಲಾಘನೀಯ.ವೇದಿಕೆಯಲ್ಲಿ ಮಾಜಿ ಕಾರ್ಪೊರೇಟರ್‌ಗಳಾದ ದಿವಾಕರ ಪಾಂಡೇಶ್ವರ, ಶೈಲೇಶ್ ಶೆಟ್ಟಿ, ಉದ್ಯಮಿ ಶಶಿಧರ ಪೈ ಮಾರೂರು, ಉದ್ಯಮಿ ಡಿಯಾನ್ ಮೊಂತೆರೋ ಉಪಸ್ಥಿತರಿದ್ದರು. ರೋಹನ್ ಕಾರ್ಪೊರೇಷನ್‌ನ ಅಧ್ಯಕ್ಷ ರೋಹನ್ ಮೊಂತೆರೋ ಸ್ವಾಗತಿಸಿ, ವಂದಿಸಿದರು. ಸಾಹಿಲ್ ಜಹೀರ್ ಕಾರ್ಯಕ್ರಮ ನಿರೂಪಿಸಿದರು. ಮಧ್ಯಮ ವರ್ಗದ ಕುಟುಂಬದ ಸ್ವಂತ ಮನೆಯನ್ನು ಹೊಂದುವ ಕನಸನ್ನು ಸಾಕಾರಗೊಳಿಸುವ ಸಲುವಾಗಿ ನಿರ್ಮಾಣಗೊಳ್ಳಲಿರುವ ರೋಹನ್ ನೆಸ್ಟ್ ಎರಡು ಬಿ.ಎಚ್.ಕೆ.ಯ 58 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿವೆ. ಮೂರು ಮಹಡಿಗಳಲ್ಲಿ ಹರಡಿಕೊಳ್ಳಲಿದ್ದು, ಪ್ರತಿ ಘಟಕವು ಉತ್ತಮ ಸ್ಥಳಾವಕಾಶವನ್ನು ಹೊಂದಿದೆ. 695ರಿಂದ 715 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್‌ಮೆಂಟ್‌ಗಳು ಆಧುನಿಕ ನಗರ ಕುಟುಂಬಗಳ ಅವಶ್ಯಗಳನ್ನು ಪೂರೈಸಲಿದೆ. ಸ್ವಯಂಚಾಲಿತ ಲಿಫ್ಟ್‌ಗಳು, ಪವರ್ ಬ್ಯಾಕಪ್, ವಿಟ್ರಿಫೈಡ್ ಟೈಲ್ ಫ್ಲೋರಿಂಗ್, ಸುರಕ್ಷತೆಗಾಗಿ ಸರ್ವಿಲೆನ್ಸ್ ಕ್ಯಾಮೆರಾಗಳು ಸಹಿತ ಹಲವು ಸೌಲಭ್ಯಗಳನ್ನು ಹೊಂದಿದೆ. ಮಳೆ ನೀರಿನ ಸಂಗ್ರಹಣಾ ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ವಾತಾವರಣವಿದೆ. ಹೆಚ್ಚಿನ ಮಾಹಿತಿ ಅಥವಾ ಬುಕ್ಕಿಂಗ್‌ಗಾಗಿ, ರೋಹನ್ ಕಾರ್ಪೊರೇಷನ್ ದೂ.ಸಂ: +919845490100 ಅಥವಾ ಈಮೇಲ್: info@rohancorporation.in / ಜಾಲತಾಣ : www.rohancorporation.in ಅಥವಾ ರೋಹನ್ ಕಾರ್ಪೊರೇಶನ್, ಮುಖ್ಯ ರಸ್ತೆ, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದು.ಚಿತ್ರಗಳು – ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಕ್ಕೆ ಮಾದರಿ: ಕೆ.ವಿ. ಪ್ರಭಾಕರ್

ಮಂಗಳೂರು, ಮಾ. 25: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೇವಲ ಸಭೆ, ಸಮಾರಂಭಗಳಿಗೆ ಮಾತ್ರವೇ ಸೀಮಿತವಾಗದೆ ಸಮಾಜಮುಖಿ ಚಟುವಟಿಕೆಗಳ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮಂಗಳೂರು ಪತ್ರಿಕಾ ಭವನಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭ ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.ಮಂಗಳೂರು ಪತ್ರಿಕಾ ಭವನಕ್ಕೆ ಭೇಟಿ ನೀಡಿದಾಗ ಮನೆಗೆ ಬಂದ ಅನುಭವವಾಗುತ್ತದೆ. ಸಮಾಜ, ಜನರ ಪರ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೂ ನೆರವಿನ ಅಗತ್ಯವಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ದೊರಕುವ ಸೌಲಭ್ಯಗಳು ಪತ್ರಕರ್ತರಿಗೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಅವರು ಹೇಳಿದರು.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜತೆ ಚರ್ಚಿಸಿ ಪತ್ರಕರ್ತರ ನಿವೃತ್ತಿ ಮಾಶಾಸನವನ್ನು 15000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದಲ್ಲದೆ, ಪತ್ರಕರ್ತರ ಆರೋಗ್ಯಕ್ಕೆ ಸಂಬAಧಿಸಿ ಮಾಧ್ಯಮ ಸಂಜೀವಿನಿ ಎಂಬ ಯೋಜನೆ ಜಾರಿಗೆ ತರಲಾಗಿದ್ದು, 10 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಇರಿಸಲಾಗಿದೆ ಎಂದವರು ಹೇಳಿದರು.ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಬೇಡಿಕೆಯಂತೆ ಸಂಘಕ್ಕೆ ಸುಸಜ್ಜಿತ ಭವನ ನಿರ್ಮಾಣಕ್ಕೆ ಸಂಬಂಧಿಸಿ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಕ್ರಮ ವಹಿಸುವುದಾಗಿ ಕೆ.ವಿ.ಪ್ರಭಾಕರ್ ಈ ಸಂದರ್ಭ ಭರವಸೆ ನೀಡಿದರು.ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಈ ಸಂದರ್ಭ ಸಲ್ಲಿಸಲಾಯಿತು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಕರ್ನಾಟಕ ಕೊಯರ್ ಬೋರ್ಡ್ ಅಧ್ಯಕ್ಷ ನಟರಾಜ್,ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್., ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ದಿನಾಚರಣೆ

ಮಂಗಳೂರು: ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ದಿನಾಚರಣೆ ಮಾರ್ಚ್ 22 ರಂದು ಕಾಲೇಜು ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಜಿಲ್ಲೆಯ ಸರಕಾರಿ ವಕೀಲ, ಕ್ರಿಶ್ಚಿಯನ್ ವಿವಾಹ ನೋಂದಣಿದಾರ ಹಾಗೂ ನೋಟರಿ ಎಂ.ಪಿ. ನೊರೊನ್ಹಾ ಅವರು ಭಾಗವಹಿಸಿದ್ದರು. ಕಾಲೇಜಿನ ನಿರ್ದೇಶಕ ರೆ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲ ಡಾ. ರಿಯೊ ಡಿಸೋಜಾ ವಾರ್ಷಿಕ ವರದಿಯನ್ನು ಮಂಡಿಸಿದರು. ಉಪ ಪ್ರಾಂಶುಪಾಲ ಡಾ. ಪುರುಷೋತ್ತಮ ಚಿಪ್ಪಾರ್ ಸ್ವಾಗತಿಸಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಅತಿಥಿಗಳು ಮತ್ತು ಅಧ್ಯಕ್ಷರು ವಿವಿಧ ಕ್ರೀಡಾ ಚಟುವಟಿಕೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಮತ್ತು ಅಧ್ಯಕ್ಷರು ಪ್ರಶಸ್ತಿ ಪ್ರದಾನ ಮಾಡಿದರು. ವಿಶ್ವವಿದ್ಯಾಲಯ ಮಟ್ಟದ ರ್ಯಾಂಕ್ ಪಡೆದವರು ಮತ್ತು ಅಧ್ಯಾಪಕರ ಸಾಧನೆಗಳನ್ನು ಕೂಡಾ ಗೌರವಿಸಲಾಯಿತು.ಮುಖ್ಯ ಅತಿಥಿ ಜಿಲ್ಲಾ ಪ್ರಧಾನ ಸರಕಾರಿ ವಕೀಲರಾದ ಎಂ.ಪಿ. ನೊರೊನ್ಹಾ ಅವರು ಮಾತನಾಡಿ ಜೀವನ ಯಶಸ್ವಿಯಾಗುವುದು ಒಳ್ಳೆಯದು; ಆದರೆ ಜೀವನವು ಯಶಸ್ವಿಯಾಗುವದರ ಜತೆಗೆ ಶಾಂತಿಯುತವಾಗುವುದು ಕೂಡಾ ಮುಖ್ಯ. ಇಂದು ಕೆಲವರು ಯಶಸ್ವಿಯಾಗಿದ್ದಾರೆ ಮತ್ತು ಕೆಲವರು ಶಾಂತಿಯುತರಾಗಿದ್ದಾರೆ. ಆದರೆ ಯಶಸ್ವಿಯೂ ಮತ್ತು ಶಾಂತಿಯುತವೂ ಆಗಿರುವವರು ಬಹಳ ವಿರಳ. ಸಾಮಾನ್ಯವಾಗಿ ಯಶಸ್ವೀ ಜನರು ಒತ್ತಡ ಮತ್ತು ಆತಂಕದ ಜೀವನವನ್ನು ನಡೆಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಯಶಸ್ವಿ ವೃತ್ತಿಪರ ಜೀವನವನ್ನು ಮಾತ್ರವಲ್ಲದೆ ಶಾಂತಿಯುತ ಜೀವನವನ್ನು ನಡೆಸ ಬೇಕು ಮತ್ತು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. ನಮ್ಮ ಮಾತುಗಳು ಸಿಹಿಯಾಗಿರ ಬೇಕು. ನೀವು ಸತ್ಯವನ್ನೇ ಹೇಳುತ್ತಿದ್ದರೂ ನಿಮ್ಮ ಮಾತುಗಳು ಕಹಿಯಾಗಿರ ಬಾರದು,ಇದರಿಂದ ನೀವು ಶಾಂತಿಯಿಂದ ಇರುತ್ತೀರಿ ಮತ್ತು ಇತರರೂ ಶಾಂತಿಯುತವಾಗಿರುತ್ತಾರೆ. ನೋಡುವುದು ಮತ್ತು ಗ್ರಹಿಸುವುದರ ನಡುವೆ ವ್ಯತ್ಯಾಸವಿದೆ. ನಾವೆಲ್ಲರೂ ಒಂದೇ ಜಗತ್ತಿನಲ್ಲಿ ವಾಸಿಸುತ್ತಿದ್ದರೂ, ಪ್ರತಿಯೊಬ್ಬರೂ ವಿಭಿನ್ನ ಗ್ರಹಿಕೆಗಳಿಂದಾಗಿ ತಮ್ಮದೇ ಆದ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಸರಿಯಾದ ಗ್ರಹಿಕೆಗಳನ್ನು ಹೊಂದ ಬೇಕು ಮತ್ತು ಆಗ ಮಾತ್ರ ಅವರು ಶಾಂತಿಯುತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ರಾಜ್ಯದ ಉನ್ನತ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಅಭಿನಂದಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕ ರೆ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ ಅವರು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಿದರು. ಶಿಕ್ಷಣವು ಪಠ್ಯಪುಸ್ತಕಗಳು ಮತ್ತು ಪರೀಕ್ಷೆಗಳಿಗಿಂತ ಹೆಚ್ಚಿನದಾಗಿದೆ, ಬಹುಕಿನ ಪಯಣದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಉತ್ತಮ ಚಾರಿತ್ರ್ಯ ನಿರ್ಮಾಣ ಅಗತ್ಯ. ಇತರರನ್ನು ಮೇಲಕ್ಕೆತ್ತಿದಾಗ ಮಾತ್ರ ಯಶಸ್ಸು ಹೆಚ್ಚು ಅರ್ಥಪೂರ್ಣವಾಗುತ್ತದೆ. ಸಣ್ಣ ಪ್ರಯತ್ನಗಳು ಕೂಡಾ ಇನ್ನೊಬ್ಬರ ಜೀವನದಲ್ಲಿ ದೊಡ್ಡ ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳು ಜೀವನದಲ್ಲಿ ಕೃತಜ್ಞತಾ ಭಾವವನ್ನು ಬೆಳೆಸಿಕೊಳ್ಳ ಬೇಕೆಂದು ಹೇಳಿದರು.ಕಾರ್ಯಕ್ರಮದ ಸಂಚಾಲಕ ಡಾ. ರವಿಕಾಂತ ಪ್ರಭು ವಂದಿಸಿದರು. ಕಾಲೇಜಿನ ಸಹಾಯಕ ನಿರ್ದೇಶಕರಾದ ರೆ. ಫಾ. ಕೆನ್ನೆತ್ ಆರ್ ಕ್ರಾಸ್ತಾ, ವಿವಿಧ ಡೀನ್ಗಳು ಮತ್ತು ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಸಹ-ಸಂಚಾಲಕ ಡಾ. ಸುನೀತಾ ಪ್ರಸಾದ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಲ್ಡ್ರಿನ್ ಸಿಯಾನ್ ಪಿರೇರಾ ಮತ್ತು ಶ್ರೀಮತಿ ಶಿಜಿ ಅಬ್ರಹಾಂ ಕಾರ್ಯಕ್ರಮವನ್ನು ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ವೈಭವದೊಂದಿಗೆ ವಿದ್ಯಾರ್ಥಿಗಳು ತಮ್ಮ ಅದ್ಭುತ ಸಂಗೀತ ಮತ್ತು ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಿದರು. ಡೈಮಂಡ್ಸ್ ಆಂಡ್ ರಸ್ಟ್ ವತಿಯಿಂದ ರೋಮಾಂಚಕ ಬ್ಯಾಂಡ್ ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೇಡೆನ್ ಡಿಸೋಜಾ ಮತ್ತು ಡಿಯೋನಾ ರೇಗೊ ನಿರೂಪಿಸಿದರು.

Scroll to Top