ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಕನ್ನಗುಡ್ಡೆ ಹದಗೆಟ್ಟ ರಸ್ತೆಗೆ ಕಾಯಕಲ್ಪ ಯಾವಾಗ?

ಪ್ರತ್ಯಕ್ಷ ವರದಿ. ಮಂಗಳೂರು -ಕನ್ನಗುಡ್ಡೆ ನೂಜಿ ಸರಿಪಲ್ಲ ಹೈವೇ ಕ್ರಾಸಿಂಗ್ ಕಾಮಗಾರಿ ಇನ್ನೂ ಅಪೂರ್ಣಗೊಂಡಿದೆ. ಚುನಾವಣೆ ವೇಳೆ ತ್ವರಿತಗತಿಯಲ್ಲಿ ಸಾಗುತ್ತಿದ್ದ ರಸ್ತೆ ಕಾಮಗಾರಿ, ಬಳಿಕ ಅರ್ಧಕ್ಕೆ ನಿಂತಿದೆ. ರಸ್ತೆ ಅಗೆದು ಜಲ್ಲಿ ಹಾಕಿಸಿ ಹೋದ ಗುತ್ತಿಗೆದಾರ ನಂತರ ಈ ಕಡೆ ಮರಳಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಗುತ್ತಿಗೆದಾರನಿಗೆ, ಇಂಜಿನಿಯರ್‌ಗೆ ಫೋನ್‌ ಮಾಡಿದರೆ ಸ್ವೀಕರಿಸುತ್ತಿಲ್ಲ, ಇದರಿಂದ ನಿವಾಸಿಗಳಿಗೆ ಸಂಚಾರ ಸಂಕಷ್ಟ ಎದುರಾಗಿದ್ದು, ಈ ರಸ್ತೆಯಲ್ಲಿ ಯಾವುದಾದರೂ ದೊಡ್ಡ ವಾಹನ ಬಂದರೆ ಜನಸಾಮಾನ್ಯರೂ ಪಕ್ಕದ ಚರಂಡಿಗೆ ಇಳಿದು ನಿಲ್ಲುವ ಪರಿಸ್ಥಿತಿ ಎದುರಾಗಿದೆ.ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳು ಇಲ್ಲಿ ಸಂಚರಿಸುವುದೇ ಒಂದು ದೊಡ್ಡ ಸವಾಲಾಗಿದೆ. ಬೈಕ್ ಸವಾರರು ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಆಸ್ಪತ್ರೆ ಪಕ್ಕಾ ಎನ್ನುವಂತಿದೆ.ರಸ್ತೆಗಳ ತುಂಬಾ ತಗ್ಗು ದಿಣ್ಣೆಗಳು, ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಯಲ್ಲಿಯೇ ರಸ್ತೆಗಳಿವೆಯೋ ಎನ್ನುವ ಅನುಮಾನ ಕಾಡುತ್ತದೆ. ಪ್ರತಿನಿತ್ಯ ಈ ದಾರಿಯಲ್ಲಿ ನೂರಾರು ವಾಹನಗಳು ಸಂಚಾರ ನಡೆಸುತ್ತವೆ,ಆದರೂ ರಸ್ತೆ ಕಾಮಗಾರಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲಕರವಾದಂತಿಲ್ಲ. ಕಾಮಗಾರಿ ಆರಂಭವಾದರೂ ಸಹ ಇನ್ನೂ ಪೂರ್ಣಗೊಂಡಿಲ್ಲ. ಜನರು ವಾಹನ ಬಿಟ್ಟು ವಿಮಾನದಲ್ಲಿ ಸಂಚಾರ ನಡೆಸಬೇಕೆ? ಎಂದು ಜನ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಈ ರಸ್ತೆಯಲ್ಲಿ ಘಾಟ್ ಇದೆ. ಇಲ್ಲಿ ರಸ್ತೆ ಹಾಗೂ ತಿರುವುಗಳು ಹೊಸ ಸೇತುವೆ ನಿರ್ಮಾಣ, ಕಾರ್ಯ ನಡೆಯದೆ ಇರುವುದರಿಂದ ಮಂಗಳೂರಿನ ಕಡೆಗೆ ವಾಹನ ಕಳಿಸಿದರೆ ಮುಂಗಡವಾಗಿ ಟಯರ್ ಬುಕ್ ಮಾಡಿ ಇಡಬೇಕಾದ ಪರಿಸ್ಥಿತಿ ಇದೆ” ಎಂದು ಸ್ಥಳೀಯರು ರಸ್ತೆಯ ಸ್ಥಿತಿಯ ವಿವರ ನೀಡಿದ್ದಾರೆ.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಚಿವರುಗಳು ದಯಮಾಡಿ ಆ ರಸ್ತೆಯಲ್ಲಿ ತಮ್ಮ (ಖಾಸಗಿ ವಾಹನ) ವಾಹನದಲ್ಲಿ ಸಂಚಾರ ನಡೆಸಿ ರಸ್ತೆಯನ್ನು ಒಮ್ಮೆ ನೋಡಿ ಬರಲಿ. ರಸ್ತೆ ಬಳಕೆ ಮಾಡುವವರ ಮೇಲೆ ಸ್ವಲ್ಪ ಆದರೂ ಇವರಿಗೆ ಕಳಕಳಿ ಇರಲಿ. ರಸ್ತೆ ಅವ್ಯವಸ್ಥೆ ಬಗ್ಗೆ ಏಕೆ ಅವರು ಮಾತನಾಡುತ್ತಿಲ್ಲ” ಎಂದು ಪ್ರಶ್ನೆಮಾಡಿದ್ದಾರೆ.ಈಗ ಬಾಕಿ ಇರುವ ಕಾಮಗಾರಿಗಳನ್ನು ಯಾವಾಗ ಪೂರ್ಣ ಮಾಡುತ್ತೀರಿ. ಹೊಸ ರಸ್ತೆ ನಿರ್ಮಾಣ ಮಾಡುವ ಬದಲು ಈಗಿರುವ ರಸ್ತೆಯನ್ನು ವಾಹನ ಸವಾರರಿಗೆ ಅನುಕೂಲವಾಗುವಂತೆ ಮಾಡಿ ಎಂದು ಒತ್ತಾಯಿಸಲಾಗಿದೆ.ಕ್ಷೇತ್ರದಲ್ಲಿ ಸಾವಿರಾರು ಕೋಟಿ ಅನುದಾನದ ಕಾಮಗಾರಿಯಾಗಿದೆ ಎನ್ನುವ ಶಾಸಕರು ಇಂತಹ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹದಗೆಟ್ಟಿರುವ ಬಗ್ಗೆ ತಕ್ಷಣ ಸ್ಪಂದಿಸಿ ಜನರ ಸಮಸ್ಯೆಗೆ ಉತ್ತರ ನೀಡಬೇಕಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತು ಗ್ರಾಮಸ್ಥರೇ ನಾವೇ ರಸ್ತೆ ದುರಸ್ಥಿಗೆ ಮುಂದಾಗಬೇಕೋ ಎನ್ನುತ್ತಿದ್ದಾರೆ. ಇನ್ನಾದರೂ ಸರಕಾರ ಹಾಗೂ ಮುಖ್ಯ ಜನಪ್ರತಿನಿಧಿಗಳು ಇದರ ಕಾಮಗಾರಿ ಪೂರ್ಣಗೊಳ್ಳುವಂತೆ ಸಹಕರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಮತ ಜಾತಿ ಭೇದ ಪಕ್ಷ ಸಂಘಟನೆ ರಾಜಕೀಯ ಮಾಡದೆ ಈ ಕಾಮಗಾರಿಯ ಪ್ರಗತಿಗೆ ನಿಷ್ಪಕ್ಷಪಾತವಾಗಿ ಸಹಕರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ : ಹವ್ಯಾಸಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶ್ ಟ್ರಸ್ಟ್ ನ ಹವ್ಯಾಸಿ ಘಟಕದ ಸಭೆ ಬಲ್ಲಾಲ್ ಬಾಗ್‌ನಲ್ಲಿರುವ ಪತ್ತುಮುಡಿ ಸೌಧದಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹವ್ಯಾಸಿ ಘಟಕದ ನೂತನ ಪದಾಧಿಕಾರಿಗಳ ನೇಮಕ ನಡೆಯಿತು.ಗೌರವಾಧ್ಯಕ್ಷರಾಗಿ ಮಧುಕರ ಭಾಗವತ ಕುಳಾಯಿ, ಅಧ್ಯಕ್ಷರಾಗಿ ರಾಜಾರಾಮ ಹೊಳ್ಳ ಕೈರಂಗಳ, ಉಪಾಧ್ಯಕ್ಷರಾಗಿ ತೋನ್ಸೆ ಪುಷ್ಕಳ ಕುಮಾರ್, ದಿವಾಕರ ಆಚಾರ್ಯ ಗೇರುಕಟ್ಟೆ, ಕಾರ್ಯದರ್ಶಿಯಾಗಿ ವಿನಯ ಆಚಾರ್ ಹೊಸಬೆಟ್ಟು, ಸಂಚಾಲಕರಾಗಿ ಸದಾಶಿವ ಆಳ್ವ ತಲಪಾಡಿ, ಕೋಶಾಧಿಕಾರಿಯಾಗಿ ವಿಜಯ ಶಂಕರ ಆಳ್ವ ಮಿತ್ತಳಿಕೆ,ಸಹ ಕಾರ್ಯದರ್ಶಿಗಳಾಗಿ ಮಧುಸೂಧನ ಅಲೆವೂರಾಯ ಮತ್ತು ಕುಂಜತ್ತೂರು ಗಣೇಶ್, ಸಹ ಸಂಚಾಲಕರಾಗಿ ಚಂದ್ರಶೇಖರ ಕೊಂಕಣಾಜೆ ಮತ್ತು ಹರಿಶ್ಚಂದ್ರನಾಯ್ಕ ಮಾಡೂರು ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಡಾ ಎಂ ಪ್ರಭಾಕರ ಜೋಶಿ, ಜಬ್ಬಾರ್ ಸಮೋ ಸಂಪಾಜೆ, ಹರೀಶ್ ಬಳಂತಿಮೊಗರು, ಸುಬ್ರಹ್ಮಣ್ಯ ಬೈಪಡಿತ್ತಾಯ, ಪ್ರೊ ಭಾಸ್ಕರ್ ರೈ ಕುಕ್ಕುವಳ್ಳಿ, ಸುಂದರ ಶೆಟ್ಟಿ ಬೆಟ್ಟಂಪಾಡಿ ಆಯ್ಕೆಯಾದರು.ಇದೇ ಸಂದರ್ಭದಲ್ಲಿ ಜೂನ್ 1 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಪಟ್ಲ ಸಂಭ್ರಮದ ದಶಮ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಪ್ರಾದೇಶಿಕ ವಾರ್ತೆಗಳು

ಪಹಲ್ಗಾಮಿನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಹಾಗೂ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ಪಹಲ್ಗಾಮಿನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಮೃತರಿಗೆ ಸಂತಾಪ ಸೂಚಿಸುತ್ತೇವೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಕಥೊಲಿಕ್ ಸಭಾ ಕೂಡ ಜೊತೆಗಿರಲಿದೆ. ಭಾರತದ ಪ್ರತಿ ಜನರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಭಯೋತ್ಪಾದನೆ ದಾಳಿ ಕ್ರೂರ ಅಪರಾಧ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ.ಭಯೋತ್ಪಾದಕರನ್ನು ನಿರ್ಮೂಲನೆ ಗೊಳಿಸುವ ಮೂಲಕ, ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ನಿಜಕ್ಕೂ ಕೆಟ್ಟ ಬೆಳವಣಿಗೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಮ್ರತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಭಗವಂತನು ಕೊಡಲಿ. ಅವರ ಅಕಾಲಿಕ ಮರಣ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ.ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಹಾಗೂ ಅಖಿಲ ಭಾರತ ಕ್ರೈಸ್ತ ಒಕ್ಕೂಟ ಇದನ್ನು ಖಂಡಿಸುತ್ತದೆ. ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಭಯೋತ್ಪಾದಕರನ್ನು ಸದೆಬಡೆಯಬೇಕು. ಇಂತಹ ಸಂಘಟನೆಗಳು ಯಾವುದೇ ದೇಶಕ್ಕೆ ಸಂಬಂಧಿಸಿದರು ಆಗಲಿ ಇವುಗಳನ್ನು ಬುಡ ಸಮೇತ ಕಿತ್ತೊಗೆಯಬೇಕು. ಆತ್ಮಗಳಿಗೆ ಶಾಂತಿ ಕೋರುತ್ತೇವೆ ಗಾಯಾಳುಗಳ ಚೇತರಿಕೆಗೆ ಪ್ರಾರ್ಥಿಸುತ್ತೇವೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಹಾಗೂ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣೆ – ಕೃತಿ ಸಂಚಯ ಬಿಡುಗಡೆ.’ಚರಾ ಬದುಕು-ಬರಹಗಳ ದಾಖಲೀಕರಣ ಶ್ರೇಷ್ಠ ಕಾರ್ಯ’: ಡಾ. ಬನಾರಿ

ಮಂಗಳೂರು: ‘ಚರಾ ಎಂಬ ಅಭಿಧಾನದಲ್ಲಿ ಬರೆಯುತ್ತಿದ್ದ ರಾಮಚಂದ್ರ ಉಚ್ಚಿಲರ ಲೇಖನಗಳು ವಿಡಂಬನಾತ್ಮಕವಾಗಿದ್ದು ಓದುಗರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದವು. ಅವರು ಮುಂಬೈ ಬಿಟ್ಟು ಊರಲ್ಲಿ ನೆಲೆಸಿದ 25 ವರ್ಷಗಳಲ್ಲಿ ತಾವಿಬ್ಬರೂ ಅತ್ಯಂತ ಆಪ್ತರಾಗಿದ್ದೆವು’ ಎಂದು ಹಿರಿಯ ವೈದ್ಯ ಮತ್ತು ಸಾಹಿತಿ ಡಾ. ರಮಾನಂದ ಬನಾರಿ ಹೇಳಿದ್ದಾರೆ. ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣ ಸಮಿತಿ, ಗುರು ಶಿಷ್ಯ ಒಕ್ಕೂಟ ಮತ್ತು ಚ.ರಾ. ಪ್ರಕಾಶನ ಇವರ ಆಶ್ರಯದಲ್ಲಿ ಸೋಮೇಶ್ವರ ಉಚ್ಚಿಲದ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಸ್ಮಾರಕ ಕಟ್ಟಡ ಸಭಾಗೃಹದಲ್ಲಿ ಏಪ್ರಿಲ್ 20 ಭಾನುವಾರ ಜರಗಿದ ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣೆ, ತಾಳಮದ್ದಳೆ ಮತ್ತು ಕೃತಿ ಬಿಡುಗಡೆ ಸಮಾರಂಭವನ್ನು ದೀಪೋಜ್ವಲನೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.‘ಮುಂಬೈಯ ಮರ್ಕೆಂಟೈಲ್ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ನಿಷ್ಠರಾಗಿದ್ದು ಪತ್ರಿಕಾ ಅಂಕಣಕಾರರಾಗಿ, ರಾತ್ರಿ ಶಾಲೆಯ ಅಧ್ಯಾಪಕರಾಗಿ ಅಪಾರ ಶಿಷ್ಯ ಸಂಪತ್ತನ್ನು ಹೊಂದಿದ್ದ ಉಚ್ಚಿಲರು ತಮ್ಮ ಜ್ಞಾನ ಶಕ್ತಿ, ಸ್ಮರಣ ಶಕ್ತಿ ಮತ್ತು ಇಚ್ಛಾಶಕ್ತಿಗೆ ಹೆಸರಾಗಿದ್ದರು. ಅವರ ಬದುಕು – ಬರಹಗಳನ್ನು ದಾಖಲೀಕರಿಸಿದ ಪುತ್ರಿ ಡಾ. ವಾಣಿ ಉಚ್ಚಿಲ್ಕರ್ ಅವರದು ಶ್ರೇಷ್ಠ ಕಾರ್ಯ’ ಎಂದು ಡಾ. ಬನಾರಿ ನುಡಿದರು. ಹಿರಿಯ ಸಾಹಿತಿ, ಸಂಶೋಧಕ ಹಾಗೂ ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಾಳ್ತಜೆ ವಸಂತಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ‘ವಜ್ರಕುಸುಮ’ ಉಚ್ಚಿಲ್: ಡಾ.ಜೋಶಿಸಂಸ್ಮರಣ ಭಾಷಣ ಮಾಡಿದ ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ‘ರಾಮಚಂದ್ರ ಉಚ್ಚಿಲ್ ಬದುಕಿದ್ದಾಗ ಪ್ರೊ. ಅಮೃತ ಸೋಮೇಶ್ವರರ ಸಂಪಾದಕತ್ವದಲ್ಲಿ ‘ವಜ್ರ ಕುಸುಮ’ ಎಂಬ ಅಭಿನಂದನಾ ಗ್ರಂಥ ಸಮರ್ಪಣೆಯಾಗಿತ್ತು; ಅವರು ಹಾಗೆಯೇ ಬದುಕಿದವರು. ಮುಂಬೈಯಲ್ಲಿ ಖ್ಯಾತ ವಿಮರ್ಶಕರಾಗಿ, ಪತ್ರಕರ್ತರಾಗಿ ಅವರು ದೀರ್ಘಕಾಲ ದುಡಿದಿದ್ದಾರೆ. ಯಕ್ಷಗಾನದ ವಿಶೇಷ ಅಭಿಮಾನಿಯಾಗಿ ಅದರ ಲೋಪ ದೋಷಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯಕ್ಷಗಾನ ತನ್ನ ಪರಂಪರೆಯನ್ನು ಬಿಟ್ಟು ಬೇರೆ ದಾರಿ ಹಿಡಿದಾಗ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದ ಛಾತಿ ಅವರದು. ಕಾಲ್ಚೆಂಡಿನ ತರಬೇತುದಾರರಾಗಿ ಕ್ರೀಡಾ ಮನೋಭಾವ ಹೊಂದಿದ್ದ ಉಚ್ಚಿಲ್ ತಮ್ಮ ನಡೆ ನುಡಿಗಳಲ್ಲಿ ನಿರ್ಭಿಡೆ ಹಾಗೂ ಕಾಠಿಣ್ಯ ತೋರಿದರೂ ಸ್ನೇಹ ವಿಶ್ವಾಸಗಳಿಗೆ ತೆರೆದುಕೊಳ್ಳುವ ಹೂವಿನಂತಹ ಹೃದಯ ಹೊಂದಿದ್ದರು’ ಎಂದರು. ಚರಾ ನೆನಪಿನ ಸಂಪುಟ ಅನಾವರಣ:ದಿ| ರಾಮಚಂದ್ರ ಉಚ್ಚಿಲರ ನೆನಪಿನ 4 ಸಂಪುಟಗಳು ಸೇರಿದಂತೆ ಒಟ್ಟು ಎಂಟು ಕೃತಿಸಂಚಯಗಳನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಚರಾ ನೆನಪಿನ ಸಂಪುಟ ೧,೨,೩ ಮತ್ತು ೪ ಕೃತಿಗಳನ್ನು ಡಾ‌.ರಮಾನಂದ ಬನಾರಿ ಬಿಡುಗಡೆಗೊಳಿಸಿದರು. ಇದರೊಂದಿಗೆ ಡಾ.ವಾಣಿ ಎನ್.ಉಚ್ಙಿಲ್ಕರ್ ಅವರ ‘ಭಾವ ತರಂಗ’ ಕವನ ಸಂಕಲನ, ‘ಜ್ಞಾನ ದರ್ಶನ’ ಪ್ರಬಂಧ ಸಂಗ್ರಹ, ‘ನನ್ನ ಚೇತನ’ ಸಂಸ್ಮರಣ ಲೇಖನಗಳು ಹಾಗೂ ನವೀನ್ ಎನ್.ಉಚ್ಚಿಲ್ಕರ್ ಮತ್ತು ನವನೀತ ಎನ್.ಉಚ್ಚಿಲ್ಕರ್ ಸಂಪಾದಿಸಿದ ‘ಎಲೆಮರೆಯ ಬರಹಗಾರ ದಿವಂಗತ ನಾರಾಯಣ ಕೆ. ಉಚ್ಚಿಲ್ಕರ್’ ಕೃತಿಗಳನ್ನು ಡಾ. ತಾಳ್ತಜೆ ವಸಂತ ಕುಮಾರ್ ಬಿಡುಗಡೆಗೊಳಿಸಿದರು.ಕೃತಿ ವಿಮರ್ಶೆ ಅಗತ್ಯ: ಡಾ. ತಾಳ್ತಜೆಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಿ ‘ಮುಂಬೈಯಲ್ಲಿ ಸಾಹಿತಿಯಾಗಿ ಹಾಗೂ ಸಂಘಟಕರಾಗಿ ಅತ್ಯಂತ ಕ್ರಿಯಾಶೀಲರಾಗಿದ್ದ ರಾಮಚಂದ್ರ ಉಚ್ಚಿಲರು ಉತ್ತಮ ವಾಗ್ಮಿ ಮತ್ತು ಅಧ್ಯಯನಶೀಲ ಬರಹಗಾರರು. ಅವರ ಚಿಂತನಾರ್ಹವಾದ ಭಾಷಣ ಮತ್ತು ಪ್ರಬಂಧಗಳು ಪುನ: ಪುನ: ಕೇಳುವಂತಿರುತ್ತಿದ್ದವು. ಚರಾ ಅವರ ಸಮಗ್ರ ಕೃತಿಗಳ ವಿಮರ್ಶೆ ಸರಿಯಾದ ರೀತಿಯಲ್ಲಿ ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.ಚರಾ ಜನ್ಮ ಶತಮಾನೋತ್ಸವ ಸಲಹಾ ಸಮಿತಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಗ್ರಂಥ ಸಂಪಾದಕಿ ಹಾಗೂ ಚರಾ ಪ್ರಕಾಶನದ ಕಾರ್ಯದರ್ಶಿ ಡಾ.ವಾಣಿ ಎನ್. ಉಚ್ಚಿಲ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕೃತಿ ಪರಿಚಯ ನೀಡಿದರು. ಕಲಾ ಗಂಗೋತ್ರಿಯ ಕೆ.ಸದಾಶಿವ ಮಾಸ್ಟರ್ ವಂದಿಸಿದರು. ಅಡ್ಕ ಭಗವತಿ ಕ್ಷೇತ್ರದ ಮೂಲ್ಯಚ್ಚ ರವೀಂದ್ರನಾಥ ಆರ್‌.ಉಚ್ಚಿಲ್, ಕಾರ್ಯಕಾರಿ ಸಮಿತಿಯ ಚಿದಾನಂದ ಆರ್. ಉಚ್ಚಿಲ್, ರಾಜಶೇಖರ ಆರ್. ಉಚ್ಚಿಲ್, ನವನೀತ ಎನ್. ಉಚ್ಚಿಲ್ಕರ್, ವಾಸುದೇವ ಉಚ್ಚಿಲ್, ನಿಧೀಶ್ ಉಪಸ್ಥಿತರಿದ್ದರು.‘ಕರ್ಣ ಪರ್ವ’ ತಾಳಮದ್ದಳೆ : ಕಾರ್ಯಕ್ರಮದ ಅಂಗವಾಗಿ ಹಿರಿಯ ಕಲಾವಿದರಿಂದ ‘ಕರ್ಣ ಪರ್ವ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ. ಎಂ.ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಸದಾಶಿವ ಆಳ್ವ ತಲಪಾಡಿ, ವಿನಯ ಆಚಾರ್ಯ ಹೊಸಬೆಟ್ಟು, ಪ್ರವೀಣ್ ರೈ ಎಲಿಯಾರ್ ಅರ್ಥಧಾರಿಗಳಾಗಿದ್ದರು. ರಾಜಾರಾಮ ಹೊಳ್ಳ ಕೈರಂಗಳ ಭಾಗವತಿಕೆ ಹಾಗೂ ಮಯೂರ್ ನಾಯಗ ಮಾಡೂರು ಮತ್ತು ಸ್ಕಂದ ಪ್ರಸಾದ್ ಮಯ್ಯ ವರ್ಕಾಡಿ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್‌-ಬಿ.ಸಿ.ರೋಡ್‌ ಹೈವೇ ಅಭಿವೃದ್ಧಿ ಕಾಮಗಾರಿಗಳಿಗೆ ನಾಳೆ ಸಂಸದ ಕ್ಯಾ. ಚೌಟ ನೇತೃತ್ವದಲ್ಲಿ ಚಾಲನೆ. 28.58 ಕೋಟಿ ರೂ. ವೆಚ್ಚದಲ್ಲಿ ಒಟ್ಟು 37.42 ಕಿಮೀ. ದೂರದ ಹೆದ್ದಾರಿ ರಿಪೇರಿ ಕೆಲಸ ಆರಂಭ

ಮಂಗಳೂರು: ನವ ಮಂಗಳೂರು ಬಂದರು ವ್ಯಾಪ್ತಿ (NMPRCL)ಗೆ ಸೇರಿದ ಸುರತ್ಕಲ್‌-ಬಿ.ಸಿ. ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ, ಮರು ಡಾಂಬರೀಕರಣ ಹಾಗೂ ಸುರಕ್ಷತಾ ವ್ಯವಸ್ಥೆ ಅಳವಡಿಕೆ ಸಂಬಂಧಪಟ್ಟ ಕಾಮಗಾರಿಗಳ ಆರಂಭಕ್ಕೆ ನಾಳೆ(ಏ. 24) ಸಂಜೆ 3.30ಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಚಾಲನೆ ದೊರೆಯಲಿದೆ.ಸುರತ್ಕಲ್ ನ ಗೋವಿಂದದಾಸ್ ಕಾಲೇಜಿನ ಸಮೀಪದ ಹೆದ್ದಾರಿ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಬಹುಬೇಡಿಕೆ ಹಾಗೂ ನಿರೀಕ್ಷೆಯ ಕಾಮಗಾರಿಗೆ ಚಾಲನೆ ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಜತೆಗೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ. ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್ ಹಾಗೂ ನವ ಮಂಗಳೂರು ಬಂದರು ರಸ್ತೆ ಕಂಪೆನಿ ಲಿಮಿಟೆಡ್‌(ಎನ್‌ಎಂಪಿಆರ್‌ಸಿಎಲ್‌)ನ ಅಧಿಕಾರಿಗಳು ಭಾಗವಹಿಸಲಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಅದರಲ್ಲೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾದು ಹೋಗುವ ಸುರತ್ಕಲ್‌-ನಂತೂರು, ಬಿಸಿ.ರೋಡ್‌-ಪಡೀಲ್‌ ಹಾಗೂ ನಂತೂರು ಜಂಕ್ಷನ್‌ನಿಂದ ಪಡೀಲ್‌ವರೆಗಿನ ಬೈಪಾಸ್‌ ರಸ್ತೆ ಸೇರಿದಂತೆ ಒಟ್ಟು 37.42 ಕಿಮೀ. ದೂರದ ಹೆದ್ದಾರಿಗಳ ರಿಪೇರಿ, ಮರುಡಾಂಬರೀಕರಣ ಹಾಗೂ ನಿರ್ವಹಣೆ ಕೆಲಸಗಳಿಗಾಗಿ ನವ ಮಂಗಳೂರು ಬಂದರು ರಸ್ತೆ ಕಂಪೆನಿ ಲಿಮಿಟೆಡ್‌(ಎನ್‌ಎಂಪಿಆರ್‌ಸಿಎಲ್‌) ಒಟ್ಟು 28.58 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿವೆ. ಮುಗ್ರೋಡಿ ಕನ್ಸ್‌ಸ್ಟ್ರಕ್ಷನ್‌ ಈ ಎಲ್ಲ ಹೆದ್ದಾರಿ ಕಾಮಗಾರಿಗಳ ಗುತ್ತಿಗೆಯನ್ನು ಪಡೆದುಕೊಂಡಿದೆ.ಒಟ್ಟು 28.58 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್‌ನಿಂದ ಎಪಿಎಂಸಿ, ಕೂಳೂರಿನಿಂದ ಎಜೆ ಆಸ್ಪತ್ರೆ ಹಾಗೂ ನಂತೂರಿನಿಂದ ಪಡೀಲ್‌ವರೆಗಿನ 11.084 ಕಿಮೀ. ಉದ್ದದ ರಸ್ತೆಯ ಡಾಂಬರೀಕರಣ ನಡೆಯಲಿದೆ. ಅಲ್ಲದೆ, ಹೆದ್ದಾರಿ ಬದಿ ಬೆಳೆದಿರುವ ಗಿಡ-ಗಂಟಿ ತೆಗೆಯುವ ಹಾಗೂ ಸ್ವಚ್ಛತಾ ಕಾರ್ಯ ನಡೆಯಲಿದೆ. ಜತೆಗೆ ರಸ್ತೆ ಬದಿ ಜಾಗದ ನಿರ್ವಹಣೆ, ಇತರ ನಿರ್ವಹಣಾ ಕಾಮಗಾರಿ ಹಾಗೂ ಹೆದ್ದಾರಿಯ ಸುರಕ್ಷತಾ ಕ್ರಮಗಳ ಅಳವಡಿಕೆ ಕಾರ್ಯ ಕೂಡ ನಡೆಯಲಿದೆ.ನವಮಂಗಳೂರು ಬಂದರು ಸಂಪರ್ಕಿಸುವ ಹೆದ್ದಾರಿಗಳ ನವೀಕರಣ ಹಾಗೂ ಸುರಕ್ಷತಾ ಕ್ರಮ ಅಳವಡಿಕೆ ಕಾರ್ಯವು ಅನುದಾನದ ಕೊರತೆಯಿಂದಾಗಿ ಬಹು ದಿನಗಳಿಂದ ಬಾಕಿಯಾಗಿತ್ತು. ಆದರೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅವಿರತ ಪರಿಶ್ರಮದ ಫಲವಾಗಿ ಈ ಹೆದ್ದಾರಿಗಳಿಗೆ ಇದೀಗ ಕಾಯಕಲ್ಪ ದೊರೆಯುತ್ತಿರುವುದು ಗಮನಾರ್ಹ.

ಪ್ರಾದೇಶಿಕ ವಾರ್ತೆಗಳು

ನಿವೃತ್ತ ಸರಕಾರಿ ನೌಕರರ ವೇತನ ನಷ್ಟದ ಬೇಡಿಕೆಗೆ ಪೂರಕ ಸ್ಪಂದನೆ. ಎಂಎಲ್‌ಸಿ ಐವನ್ ಡಿಸೋಜ ಜತೆಗೆ ನಿಯೋಗ ಸಿಎಂ ಭೇಟಿ

ಮಂಗಳೂರು: ಕರ್ನಾಟಕ ನಿವೃತ್ತ ಸರಕಾರಿ ನೌಕರರ ವೇದಿಕೆ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಬೇಡಿಕೆಯ ಈಡೇರಿಸಲು ಹೋರಾಟ ನಡೆಸುತ್ತಿದ್ದು, ಇತ್ತೀಚೆಗೆ ಎಂಎಲ್‌ಸಿ ಐವನ್ ಡಿಸೋಜ ಅವರ ಜತೆಗೆ ವೇದಿಕೆಯ ಪದಾಧಿಕಾರಿಗಳು ಬೆಂಗಳೂರಿನ ಮುಖ್ಯಮಂತ್ರಿ ಅವರ ಗೃಹಕಚೇರಿ ಕಾವೇರಿ ಭವನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. 7 ನೇ ವೇತನ ಆಯೋಗದಲ್ಲಿ ಜು.1,2022ರಿಂದ ಜು.31,2024ರ ಅವಧಿಯಲ್ಲಿ ನಿವೃತ್ತರಾದ ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಡಿ.ಸಿ.ಆರ್.ಜಿ. ಕಮ್ಯೂಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳನ್ನು ಆರನೇ ವೇತನ ಆಯೋಗದ ಅನ್ವಯ ನೀಡಿದ್ದು, ಇದರಿಂದ ನೌಕರರಿಗೆ ಆರ್ಥಿಕ ನಷ್ಟ ಉಂಟಾಗಿರುವುದನ್ನು ಗಮನಕ್ಕೆ ತರಲಾಯಿತು. ಮುಖ್ಯಮಂತ್ರಿ ಯವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರಕರಿ ನೌಕರರ ವೇದಿಕೆಯ ರಾಜ್ಯ ಮಹಾಪ್ರಧಾನ ಸಂಚಾಲಕ ಎಂ.ಪಿ.ಎಂ.ಷಣ್ಮುಗಯ್ಯ, ಸಂಚಾಲಕರಾದ ಸ್ಟ್ಯಾನಿ ತಾವ್ರೋ, ಸುಜಾತ, ಜಲಜ,ರಂಗಣ್ಣ, ಸಿರಿಲ್ ರಾಬರ್ಟ್ ಡಿಸೋಜ, ಜಗದೀಶ್ ರಾವ್, ಮುಬಾರಕ್, ಮಂಜುಳಾರಾಣಿ ಹಾಗೂ ಮಹೇಶ್ ಉಪಸ್ಥಿತರಿದ್ದರು.ಎಂಎಲ್‌ಸಿ ಐವನ್ ಡಿಸೋಜ ಅವರು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯ ಬೇಡಿಕೆ ಈಡೇರಿಸುವ ಕೆಲಸದಲ್ಲಿ ಸಾಕಷ್ಟು ಮುತುವರ್ಜಿ ವಹಿಸಿದ್ದು ವೇದಿಕೆಯ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದೆ ನಿರಂತರವಾಗಿ ಸಿಎಂ ಅವರ ಗಮನಕ್ಕೆ ವಿಚಾರವನ್ನು ತರುವ ಮೂಲಕ ಬೇಡಿಕೆ ಈಡೇರಿಸಲು ಸತತ ಪ್ರಯತ್ನ ಪಡಲಾಗುವುದು ಎಂದು ಸಂಚಾಲಕ ಸ್ಟ್ಯಾನಿ ತಾವ್ರೋ ಮಾಹಿತಿ ನೀಡಿದ್ದಾರೆ.ಚಿತ್ರö: 23ಎಂ- ಐವನ್

ಪ್ರಾದೇಶಿಕ ವಾರ್ತೆಗಳು

KANACHUR empowers the graduates of MANGALORE UNIVERSITY with CPR & First Aid skills.

Mangalore, 22nd April : In a first of its kind skill empowerment program at Mangalore University, the leadership team lead by Dr PL Dharma – Hon’ble VC, Mangalore University & Dr Jayaraj Amin – Hon’ble Chairman, Dept of Political Science, Mangalore University inaugurated a ‘CPR & FIRST AID’ program, in association with Kanachur Institute of Medical Sciences, Natekal, Mangaluru. Dr. Rohan Monis – Cheif Administrative Officer, Kanachur Hospital & Research Centre was the Guest of Honor; Dr Srinivas (JR III) & Dr Ubedulla (JR I) from Dept of Emergency Medicine, KIMS were the resource persons. In his welcome address, Dr Jayaraj Amin expressed his gratefulness to Kanachur Institute for bringing together a team & a program for empowering their graduates with a community based essential skill. Dr Rohan lauded the efforts of the leadership team of Mangalore University for taking this leap into empowering the graduates with a life saving skill that will improve social well-being; also educating them that India’s Emergency Helpline no is 112. Dr PL Dharma expressed that emergencies happen everywhere but are we equipped with the basics? encouraging the students to do more and be more with no gender and religious boundaries, in their minds.Dr Srinivas & Dr Ubedulla did a didactic session with hands on demonstration of CPR skills. The graduates were thrilled and feedback was great.Cardio Pulmonary Resuscitaiton (CPR) is an emergency procedure that is done when someone’s heartbeat has stopped. Kanachur Institute of Medical Sciences advocates CPR skills – a vital life saving procedure.

ಪ್ರಾದೇಶಿಕ ವಾರ್ತೆಗಳು

ಕಣಚೂರು ಸಂಸ್ಥೆಯಿಂದ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಿಪಿಆರ್ ಮತ್ತು ಪ್ರಥಮ ಚಿಕಿತ್ಸೆ ತರಬೇತಿ

ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎಪ್ರಿಲ್ 22ರಂದು ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಸಂಸ್ಥೆಯಿಂದ ಸಿಪಿಆರ್ (ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್) ಮತ್ತು ಪ್ರಥಮ ಚಿಕಿತ್ಸೆಯ ತರಬೇತಿಯನ್ನು ನೀಡಲಾಯಿತು. ಕೌಶಲ್ಯ ಸಬಲೀಕರಣದ ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ| ಪಿ. ಎಲ್ ಧರ್ಮ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಯರಾಜ್ ಅಮೀನ್ ಉಪಸ್ಥಿತರಿದ್ದರು. ಕಣಚೂರು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು, ಮೆಡಿಸಿನ್ ವಿಭಾಗದ ಡಾ| ಶ್ರೀನಿವಾಸ್ ಮತ್ತು ಡಾ| ಉಬೈದುಲ್ಲಾ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು

ಪ್ರಾದೇಶಿಕ ವಾರ್ತೆಗಳು

ಜನಿವಾರ ಪ್ರಕರಣ: ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅವಮಾನಿಸಿರುವುದು ಖಂಡನೀಯ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ: ಸಂಸದ ಕ್ಯಾ. ಚೌಟ

ಮಂಗಳೂರು: ಕರ್ನಾಟಕದ ಸರ್ವ ಜನಾಂಗದ ಶಾಂತಿ ತೋಟವನ್ನು ಸರ್ವನಾಶ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಹಿಂದೂಗಳನ್ನು ದ್ವೇಷಿಸುತ್ತಿದ್ದು, ವಿದ್ಯಾರ್ಥಿಯ ಭವಿಷ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ಹಾಗೂ ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅಪಚಾರವೆಸಗಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿ ಅವಮಾನಿಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಂಸದರು, ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿಇಟಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಯಜ್ಞೋಪವೀತ ತುಂಡರಿಸಿರುವುದು ಹಿಂದೂಗಳ ಶ್ರದ್ದೆಯ ಮೇಲೆ ನಡೆದ ಆಕ್ರಮಣವಾಗಿದೆ. ಕೈಯಲ್ಲಿ ಕಟ್ಟಿಕೊಂಡಿದ್ದ ಕಾಶಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ಬಲವಂತವಾಗಿ ತೆಗೆಸಿರುವುದು ಸನಾತನ ಹಿಂದು ಧರ್ಮದ ಭಾಗವಾದ ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅವಮಾನ. ಸಿದ್ದರಾಮಯ್ಯ ಸರ್ಕಾರ ಪರೀಕ್ಷೆಯ ತಪಾಸಣೆ ನೆಪದಲ್ಲಿ ಮಾಂಗಲ್ಯವನ್ನು ತೆಗೆಯಲು, ಜನಿವಾರ ತುಂಡರಿಸಲು ಪ್ರಚೋದಿಸಿರುವುದು ಅಕ್ಷಮ್ಯ. ಉದ್ದೇಶ ಪೂರ್ವಕವಾಗಿ ಮಾಡಲಾದ ಈ ಕೃತ್ಯ ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಯಜ್ಞೋಪವೀತವು ಕೇವಲ ಒಂದು ದಾರವಲ್ಲ; ಅದು ಜ್ಞಾನದ ಸಂಕೇತ, ಸಂಯಮದ ಪ್ರತೀಕ. ಇದು ವಟುವಿನ ಬದುಕಿಗೆ ಒಂದು ಮಹತ್ವದ ತಿರುವು ನೀಡುವ ಸಂಸ್ಕಾರ. ಇಂತಹ ಪವಿತ್ರ ಸಂಸ್ಕಾರವನ್ನು ಕಡೆಗಣಿಸಿ, ಅದನ್ನು ತೆಗೆದುಹಾಕುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಯ ಭಾವನೆಯನ್ನು ಘಾಸಿಗೊಳಿಸುವುದರ ಜತೆಗೆ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ತೀವ್ರ ನೋವುಂಟು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತುತ್ತಿದ್ದು, ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ರಷ್ಟು ಮುಸ್ಲಿಮರಿಗೆ ಮೀಸಲಾತಿ, ಜಾತಿ ಗಣತಿಯಲ್ಲಿಯೂ ತಾರತಮ್ಯ, ಜನಿವಾರದಂತಹ ಕೃತ್ಯಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಜನರನ್ನು ಓಲೈಸುತ್ತಿರುವುದು ಕೋಮುವಾದದ ಅತಿರೇಕದ ನಡೆಗಳಾಗಿವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣ ರಾಜ್ಯದ ಜನತೆಯ ಕ್ಷಮೆಯಾಚಿಸಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸುಮುಖ ಪ್ರೊಡಕ್ಷನ್‌ ಎರಡನೇ ಸಿನಿಮಾ “ಕಜ್ಜ” ಕ್ಕೆ ಮುಹೂರ್ತ

ಮಂಗಳೂರು: ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಮೂಡಿಬರಲಿರುವ ಎರಡನೇ ಸಿನಿಮಾ “ಕಜ್ಜ” ಇದರ ಮುಹೂರ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಿತು. ಸಿನಿಮಾಕ್ಕೆ ನಿರ್ಮಾಪಕ ವಿಶಾಂತ್ ಮಿನೆಜಸ್ ಕ್ಲಾಪ್ ಮಾಡಿದರು. ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಲ್ ಬೈಲ್, ಅರವಿಂದ ಬೋಳಾರ್ ಚಾಲನೆ ನೀಡಿದರು.ಬಳಿಕ ಮಾತಾಡಿದ ಫಾದರ್ ಮೆಲ್ವಿನ್ ಪಿಂಟೊ ಎಸ್ ಜೆ ಸುಮುಖ ಪ್ರೊಡಕ್ಷನ್‌ ಮೊದಲ ಸಿನಿಮಾಕ್ಕೆ ತುಳುನಾಡಿನ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ತುಡರ್‌ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದು ಮುಂದಿನ ಸಿನಿಮಾ ಕೂಡಾ ಜನರು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಒಳ್ಳೆಯ ತಂಡ ಸಿನಿಮಾದಲ್ಲಿ ದುಡಿಯುತ್ತಿದ್ದು ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಬಾರಿ ಇನ್ನಷ್ಟು ಮನೋರಂಜನೆ ನೀಡಲು ಉತ್ಸಾಹಿ ಯುವಕರ ತಂಡ ಸಜ್ಜಾಗಿದೆ ಎಂದರು. ಬಳಿಕ ಮಾತಾಡಿದ ಅರವಿಂದ ಬೋಳಾರ್ “ಕಜ್ಜ” ಅಂದರೆ ತುಳುವಿನಲ್ಲಿ ಕಾರ್ಯ ಎಂದರ್ಥ. ಒಂದೊಳ್ಳೆಯ ಕಾರ್ಯವನ್ನು ಮಾಡಲು ನಾವೆಲ್ಲ ಒಂದಾಗಿದ್ದೇವೆ. ಆದಷ್ಟು ಬೇಗನೆ ಜನರ ಮುಂದೆ ಸಿನಿಮಾ ಬರಲಿ. ಹಿಂದಿನ ಸಿನಿಮಾಕ್ಕೆ ಕೊಟ್ಟಷ್ಟೇ ಪ್ರೋತ್ಸಾಹ ಪ್ರೀತಿಯನ್ನು ಈ ಬಾರಿಯೂ ಕೊಡುವ ಮೂಲಕ ಹೊಸಬರ ತಂಡವನ್ನು ಪ್ರೋತ್ಸಾಹಿಸಿ ಎಂದರು.ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ಕಜ್ಜ ಸಿನಿಮಾದ ಕತೆ ಚೆನ್ನಾಗಿದೆ. ಉತ್ತಮ ಕಲಾವಿದ್ದಾರೆ. ಹೊಸಬರಿಗೂ ಅವಕಾಶ ನೀಡಿದ್ದಾರೆ. ತುಡರ್ ಸಿನಿಮಾದಂತೆ ಕಜ್ಜ ಸಿನಿಮಾ ಕೂಡಾ ಜಯಬೇರಿ ಬಾರಿಸಲಿ ಎಂದರು.ಪ್ರದೀಪ್ ಕುಮಾರ್ ಕಲ್ಕೂರ, ಸಾಯಿರಾಂ, ರವಿಶಂಕರ್ ಮಿಜಾರ್, ರಮಾನಂದ ಪೂಜಾರಿ ಬೋಳಾರ್, ಉದಯ ಪೂಜಾರಿ ಬಲ್ಲಾಲ್ ಭಾಗ್, ಶಾಹಿನ್ ಶೇಖ್, ಪ್ರೇಮ್ ಶೆಟ್ಟಿ ಸುರತ್ಕಲ್, ಹರೀಶ್ ಶೆಟ್ಟಿ, ಸಿನಿಮಾದ ನಟ ನಿರ್ದೇಶಕ ಸಿದ್ಧಾರ್ಥ್‌ ಶೆಟ್ಟಿ, ಉಮೇಶ್‌ ಮಿಜಾರ್‌, ಸದಾಶಿವ ಅಮೀನ್‌, ವೆನ್ಸಿಟಾ ಡಯಾಸ್‌, ಲಂಚುಲಾಲ್, ಮೋಹನ್ ಕೊಪ್ಪಳ, ಬಾಲಕೃಷ್ಣ ಶೆಟ್ಟಿ, ರೂಪ ವರ್ಕಾಡಿ, ಮೋಹನ್ ರಾಜ್, ಅರತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಸಿನಿಮಾದಲ್ಲಿ ಸಿದ್ದಾಥ್೯ ಶೆಟ್ಟಿ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಜಯಶ್ರೀ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್, ಸನ್ನಿಧಿ ಶೆಟ್ಟಿ ಅಭಿನಯಿಸುತ್ತಿದ್ದಾರೆ.ನಿರ್ದೇಶನ : ಜಿಸ್ನು ಎಸ್ ಮೆನನ್ ಸಿದ್ದಾಥ್೯ ಶೆಟ್ಟಿ, ನಿರ್ಮಾಪಕರು: ವಿಶಾಂತ್ ಮಿನೆಜಸ್, ಛಾಯಾಗ್ರಾಹಣ: ಚಂದು ಮೆಪ್ಪಾಯೂರ್, ಸಂಕಲನ : ಶರತ್ ಹೆಗ್ಡೆ, ನೃತ್ಯ: ವಿಜೇತ್ ಆರ್ ನಾಯಕ್, ಸಾಹಸ: ಯೋಗಾನಂದ್, ಪ್ರೊಡಕ್ಷನ್ ಮ್ಯಾನೇಜರ್: ಕಾರ್ತಿಕ್ ರೈ ಅಡ್ಯನಡ್ಕ

Scroll to Top