ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ.

ಸುರತ್ಕಲ್, ಜೂ. 20:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಡೇವಿಡ್ ರೊಸಾರಿಯೊ ಅವರು ಮಾತನಾಡುತ್ತಾ,ಈ ಸಂದರ್ಭದಲ್ಲಿ ಆಸ್ಪತ್ರೆಯ ಪ್ರಮುಖರು ಮಾತನಾಡಿ, “ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರ ಆರೋಗ್ಯ ಕಾಪಾಡುವುದು ನಮ್ಮ ಸಾಮಾಜಿಕ ಜವಾಬ್ದಾರಿ. ಅವರ ಸಂಘದ ಜೊತೆ ಸೇವಾ ಕಾರ್ಯ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ನಮಗೆ ಅತೀವ ಸಂತಸವಿದೆ. ಮುಂದೆಯೂ ಪತ್ರಕರ್ತರ ಆರೋಗ್ಯದ ವಿಷಯದಲ್ಲಿ ಅವರಿಗೊಂದು ವಿಶೇಷ ಆರೋಗ್ಯ ಕಾರ್ಡ್ ಒದಗಿಸಿ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ,” ಎಂದು ಭರವಸೆ ನೀಡಿದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಮೊದಲ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಾ,“ಪತ್ರಕರ್ತರು, ಛಾಯಾಗ್ರಾಹಕರು, ಟಿವಿ ಮಾಧ್ಯಮದ ಕ್ಯಾಮೆರಾಮನ್‌ಗಳು ಸೇರಿದಂತೆ ಬಹುತೇಕರು ಸಮಯ-ಸಂದರ್ಭ ನೋಡದೆ, ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸುದ್ದಿಯ ಬೆನ್ನುಹತ್ತಿ ಓಡುವ ಈ ನಿತ್ಯ ಜಂಜಾಟದ‌ ನಡುವೆ ನಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸದೆ ಅನಾರೋಗ್ಯಕ್ಕೆ ಈಡಾಗುವ ಸಂದರ್ಭ ಎದುರಾಗುತ್ತಿವೆ ಈ ಹಿನ್ನೆಲೆಯಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಪತ್ರಕರ್ತರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಶ್ರೀನಿವಾಸ ಆಸ್ಪತ್ರೆಯ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಅವರಿಗೆ ಸಂಘದ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಮಾತನಾಡಿ, ಎ. ಶ್ಯಾಮ ರಾವ್ ಫೌಂಡೇಶನ್ ಸೇವಾ ಮನೋಭಾವದಿಂದ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಅದನ್ನು ಯಾರೂ ಮರೆಯುವಂತಿಲ್ಲ. ಇದೀಗ ಪತ್ರಕರ್ತರ ಸಂಘದೊಂದಿಗೆ ಶ್ರೀನಿವಾಸ ಆಸ್ಪತ್ರೆ ಕೈಜೋಡಿಸಿ ನಮ್ಮ ಸದಸ್ಯರ ಮತ್ತು ಅವರ ಕುಟುಂಬದ ಉಚಿತ ಆರೋಗ್ಯ ತಪಾಸಣೆಗೆ ಎಲ್ಲಾ ರೀತಿಯ ಸಹಕಾರ ನೀಡಿರುವುದು ನಿಜಕ್ಕೂ ಶ್ಲಾಘನೀಯ,ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ,ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ,ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ. ಸತ್ಯನಾರಾಯಣ ರೆಡ್ಡಿವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ್ ಕುಮಾರ್, ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಉದಯ್ ಕುಮಾರ್ ರಾವ್, ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಸುರತ್ಕಲ್,ಸೇರಿದಂತೆ ಆಸ್ಪತ್ರೆಯ ಹಿರಿಯ ವೈದ್ಯರು, ಆಡಳಿತ ವರ್ಗದವರು ಉಪಸ್ಥಿ ತರಿದ್ದರು.ಝರೀನಾ ಕಾರ್ಯ ಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಭೆ

ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ ಕಾಸ್ಸಿಯಾ, ಜೆಪ್ಪು ಮಂಗಳೂರು ಇಲ್ಲಿ 2026-27ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆಯು ದಿನಾಂಕ: 20.06.2026 ರಂದು ರೆ ಫಾ. ರಿತೇಶ್ ರೊಡ್ರಿಗಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಕ್ಕಳನ್ನು ನಮ್ಮ ಆಸ್ತಿಯನ್ನಾಗಿ ಮಾಡೋಣ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಧರ್ಮ ಅಧ್ಯಯನ ಪೀಠದ ಮುಖ್ಯಸ್ಥರು ವಂದನೀಯ ಗುರುಗಳು ಡಾ|| ಸುನಿಲ್ ಜಾರ್ಜ್ ಡಿಸೋಜಾ ರವರು ಮಾತನಾಡಿದರು.ದೀಪ ಬೆಳಗಿಸುವುದರ ಮೂಲಕ 2026 – 27 ನೇ ಸಾಲಿನ ಸಭೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯವನ್ನು ಪ್ರಸ್ತುತಪಡಿಸಲಾಯಿತು. 2025-26 ನೇ ಸಾಲಿನ ಶಿಕ್ಷಕ – ರಕ್ಷಕ ಸಂಘದ ಕಾರ್ಯ ಚಟುವಟಿಕೆಗಳ ಒಂದು ಸಂಕ್ಷಿಪ್ತ ಪ್ರಸ್ತುತಿಯನ್ನು ಹೆತ್ತವರಿಗೆ ಪ್ರದರ್ಶಿಸಲಾಯಿತು. 2025 – 26 ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ 16 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ಮುಖ್ಯ ಅತಿಥಿಗಳು ಹೆತ್ತವರಿಗೆ ಮಕ್ಕಳನ್ನು ಯಾವ ರೀತಿ ಭಾವನಾತ್ಮಕವಾಗಿ ಬೆಳೆಸಬಹುದು ಎಂದು ಮಾರ್ಗದರ್ಶನ ನೀಡಿದರು. ಮುಖ್ಯ ಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾರವರು ಶಾಲಾ ನಿಯಮ ನಿರ್ಬಂಧನೆಗಳ ಬಗ್ಗೆ ಪೋಷಕರಿಗೆ ವಿವರಿಸಿದರು. ಪ್ರಸ್ತುತ 2026-27ನೇ ಸಾಲಿನ ಶಿಕ್ಷಕ – ರಕ್ಷಕ ಸಂಘದ ಕಾರ್ಯಕಾರಿ ಸಮಿತಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.ಹಾಗೂ ಹೂ ನೀಡಿ ಅವರನ್ನು ಅಭಿನಂದಿಸಲಾಯಿತು ತದನಂತರ ವಂದನೀಯ ಗುರುಗಳಾದ ರಿತೇಶ್ ರೊಡ್ರಿಗಸ್ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಶಿಕ್ಷಕ – ರಕ್ಷಕ ಸಂಘದ ಕೋಶಾಧಿಕಾರಿಯಾಗಿರುವ ಮೊಹಮ್ಮದ್ ಇಮ್ರಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕಿಯಾದ ಶ್ರೀಮತಿ ಶಾಂತಿ ಡಿಸೋಜರವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ರೈನಾ ಫ್ಲೋರ ಡಿಸೋಜರವರು ವಂದಿಸಿದರು. ಶ್ರೀಮತಿ ಚೈತ್ರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರಂಗಭಾಸ್ಕರ ಪ್ರಶಸ್ತಿಗೆ ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ ಶ್ರೀ ಪರಮಾನಂದ ಸಾಲ್ಯಾನ್ ಆಯ್ಕೆ. ರಂಗಸಂಗಾತಿ ಹದಿನೆಂಟನೆಯ ವಾರ್ಷಿಕೋತ್ಸವ

ಮಂಗಳೂರು: ಮಂಗಳೂರಿನ ಪ್ರಸಿದ್ಧ ಕ್ರಿಯಾಶೀಲ ರಂಗತಂಡ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವರ್ಷಂಪ್ರತಿ ಕೊಡಮಾಡುವ ರಂಗಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪ್ರತಿಭಾನ್ವಿತ ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ ಶ್ರೀ ಪರಮಾನಂದ ಸಾಲ್ಯಾನ್ ಅವರಿಗೆ ಘೋಷಿಸಲಾಗಿದೆ.ಶ್ರೀ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ, ರಂಗಕರ್ಮಿ ದಿವಂಗತ ಭಾಸ್ಕರ ನೆಲ್ಲಿತೀರ್ಥ ನೆನಪಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ, ರಂಗ ಸುದರ್ಶನ ತಂಡದ ಸಂಸ್ಥಾಪಕ ಶ್ರೀ ಪರಮಾನಂದ ಸಾಲ್ಯಾನ್ ಅವರನ್ನು ಡಾ.ನಾ.ದಾಮೋದರ ಶೆಟ್ಟಿ, ಡಾ.ಮೀನಾಕ್ಷಿ ರಾಮಚಂದ್ರ ಮತ್ತು ಮೆಗಾಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ರವರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡಿದೆ.ಪ್ರಶಸ್ತಿ ಸ್ಮರಣಿಕೆ, ನಗದು, ಸನ್ಮಾನ ಪತ್ರ ಮುಂತಾದುವನ್ನು ಒಳಗೊಂಡಿದ್ದು 21-6-2026 ರಂದು ಶ್ರೀಯುತರ ಸ್ವಗೃಹದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಗೋಪಾಲಕೃಷ್ಣ ಶೆಟ್ಟಿಯವರು ತಿಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಗರಿ ಎಂಟರ್ಪ್ರೈಸಸ್ ನ ಶ್ರೀ ಅಗರಿ ರಾಘವೇಂದ್ರ ರಾವ್, ರಂಗಸಂಗಾತಿ ಕಲಾಪೋಷಕರು ಶ್ರೀ ಉಡುಪಿ ವಿಶ್ವನಾಥ ಶೆಣೈ, ಬಂಟರ ಸಂಘದ ಕಾರ್ಯದರ್ಶಿ ಎಂ.ಕರುಣಾಕರ ಶೆಟ್ಡಿ, ಹಿರಿಯ ನಟ ನವೀನ್ ಡಿ ಪಡೀಲ್, ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಜಗನ್ನಾಥ ಕಲ್ಲಾಪು, ಮೈಮ್ ರಾಮದಾಸ್, ಕನ್ನಡ ಸಂಸ್ಕೃತಿ ಇಲಾಖೆಯ ಶ್ರೀ ರಾಜೇಶ್ ಬಿ, ಮುಂತಾದವರ ಉಪಸ್ಥಿತಿ ಇರಲಿದೆ.ಪರಮಾನಂದ ಸಾಲ್ಯಾನ್ ಕಿರು ಪರಿಚಯ-ಮುಂಗಾರು ಮತ್ತು ಹೊಸ ದಿಗಂತ ದಿನ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡುತ್ತಾ ಬಿಲ್ಲವರ ವಿಶ್ವವಾಣಿ ಮತ್ತು ಯುವವಾಹಿನಿ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಖ್ಯಾತಿ.ರಂಗ ಸುದರ್ಶನ, ಪರಮ ಪದ್ಮ ಕಲಾವಿದರು, ಸುದರ್ಶನ್ ಕ್ರಿಯೇಶನ್ಸ್ ಎಂಬ ಸಂಸ್ಥೆಗಳ ನಿರ್ದೇಶಕರಾಗಿ ದುಬೈ, ಅಬುದಾಬಿ ಮಾತ್ರವಲ್ಲದೆ ದೇಶದ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ನೀಡಿ ಪ್ರಸಿದ್ದಿ.ಬಾರೆರ್ ಬೀರೆರ್, ದೇಯಿ, ಅಮ್ಮ ಬತ್ತೆರ್, ಸಿರಿಗಂಧದ ಕರಿಯಜ್ಜೆರ್, ಸಸಿಬಿತ್ಲ್ ಉಳ್ಳಾಯನ ಧರ್ಮ ನಡೆ ಮುಂತಾದ ಸಾಕ್ಷ್ಯ ಚಿತ್ರಗಳು, ಸೇವೆ ಮತ್ತು ನೋವು, ನಾಯೆರ್, ಅರುವದೆ, ಬೂತಲೆ, ಮಸಣ ಮುಂತಾದ ಕಿರುಚಿತ್ರಗಳು, ಮಾಯದ ದೈಯೊಂಗುಲು, ಬಾಲೆಗೊಲಿನ ಭ್ರಾಮರಿ, ಕಡಲ್ ಉರ್ಕರ್ಂಡ್, ಸೀತೆಗ್ ಇತ್ತೆ ಅರ್ಥಾಂಡ್, ಲೀಲೆದ ಬಾಲೆ ಗೋಪಾಲೆ, ಬಲಿದಾನ, ಚೌತಿದ ಚಂದ್ರೆ, ಶನಿದೃಷ್ಟಿ, ಬೃಂದಾ ಮೂಲೆ ತುಳಸಿ, ಪುಟ್ಟುದ ಗುಟ್ಟು, ಪಾಂಚಾಲಿ, ಮಾಯಕದ ಮಾಣಿ, ವರ್ಣ ಯಾವುದು ಕರ್ಣ ನಿನ್ನ? ಶಿವಪ್ರಸಾದ ಬಬ್ಬರ್ಯೆ, ತೆಡಿಲ ಕಿಡಿ, ತಿಗಲೆ ಮಂಜಣೆ, ತಂಕದ ಪೂಂಜೆ, ಅರುವದ ಬೂತಾಲೆ, ಅಬ್ಬ ಅಬ್ಬಕ್ಕನೆ, ಮಡ್ಡಿ ಕಳೆದ್ ಮಡಿ, ಅಮರ್ ಸಿರಿಕುಲು, ಒಂಜಿ ಸಿರಿ ರಡ್ಡ್ ಬೊಂಡ, ದರ್ಪು ದಂಟಿನ ಸಿರಿ, ಉಳ್ಳಾಯೆ ಮಲ್ಲಾಯೆ, ಶಿಲುಬೆ ಮತ್ತು ಗಲಭೆ, ಶಿವದೂತೆ ಗುಳಿಗೆ (ಸಂಭಾಷಣೆ), ಮಸ್ತ್ ಮಸ್ತ್ ಮೋಕೆ, ಮೆಗ್ದಿಗಾದ್, ಸತ್ಯ ತೆರಿಯೆ, ಪುರಲ್, ಒಂಜಿ ರಾತ್ರೆ ಒಂಜಿ ಪಗೆಲ್, ದಯೆ ಪಿದಡಿಯೆ ಹೀಗೆ ನೂರಾರು ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ನಾಟಕ, ಕಿರುನಾಟಕ, ಪ್ರಹಸನಗಳನ್ನು ಬರೆದು ನಿರ್ದೇಶನ.

ಪ್ರಾದೇಶಿಕ ವಾರ್ತೆಗಳು

ಎಂ.ಆರ್.ಜಿ. ಸಮೂಹದಿಂದ ಗೋವಾದಲ್ಲಿ ಗೋಲ್ಡ್ ಫಿಂಚ್, ಆತಿಥ್ಯ ಕ್ಷೇತ್ರಕ್ಕೆ ಮತ್ತೊಂದು ಮೈಲಿಗಲ್ಲು

ಮಂಗಳೂರು: ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಶಿಷ್ಟs ಸ್ಥಾನ ಪಡೆದಿರುವ ಗೋವಾ, ತನ್ನ ಸೂರ್ಯಕಿರಣಗಳಿಂದ ಕಂಗೊಳಿಸುವ ಕಡಲತೀರಗಳು, ಸಮೃದ್ಧ ಸಾಂಸ್ಕೃತಿಕ ಪರಂಪರೆ, ಆಹ್ಲಾದಕರ ಹವಾಮಾನ ಹಾಗೂ ಅಪರೂಪದ ನೈಸರ್ಗಿಕ ಸೌಂದರ್ಯದಿಂದ ದೇಶ-ವಿದೇಶಗಳ ಪ್ರವಾಸಿಗರನ್ನು ನಿರಂತರವಾಗಿ ಆಕರ್ಷಿಸುತ್ತಿದೆ. ಗೋವಾದ ರಾಜಧಾನಿಯಾದ ಪಣಜಿಯ ಹೃದಯಭಾಗದಲ್ಲಿ ನೆಲೆಗೊಂಡಿರುವ ‘ಗೋಲ್ಡ್ ಫಿಂಚ್ ಪಣಜಿ ಗೋವಾ’ ಅತ್ಯಾಧುನಿಕ ಆತಿಥ್ಯ ಸೇವೆಗಳನ್ನು ಗೋವಾದ ವಿಶಿಷ್ಟ ಸೊಬಗಿನೊಂದಿಗೆ ಸಂಯೋಜಿಸಿ ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡುತ್ತಿದೆ. ಸುಂದರ ಮಂಡೋವಿ ನದಿಯ ನೋಟವನ್ನು ಹೊಂದಿರುವ ಈ ಹೋಟೆಲ್, ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿಯ ದೇಶಾದ್ಯಂತ ಬೆಳೆಯುತ್ತಿರುವ ಹೋಟೆಲ್ ಜಾಲಕ್ಕೆ ಹೊಸ ಸೇರ್ಪಡೆಯಾಗಿದೆ. ವ್ಯಾಪಾರ ಮತ್ತು ಪ್ರವಾಸ ಉದ್ದೇಶದ ಅತಿಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಹೋಟೆಲ್, ಆರಾಮ, ಅನುಕೂಲತೆ ಮತ್ತು ಆಧುನಿಕ ಸೊಬಗನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ.ಒಟ್ಟು 98 ಸುಸಜ್ಜಿತ ಕೊಠಡಿಗಳನ್ನು ಹೊಂದಿರುವ ಈ ಹೋಟೆಲ್‌ನಲ್ಲಿ ಏಳು ವಿಶಾಲ ಸೂಟ್‌ಗಳಿವೆ. ಆಧುನಿಕ ಸೌಲಭ್ಯಗಳು, ವಿಶಾಲ ಲಾಬಿ, ಹಸಿರು ಪರಿಸರ ಹಾಗೂ ಆಕರ್ಷಕ ಒಳಾಂಗಣ ವಿನ್ಯಾಸಗಳು ಗೋವಾದ ನಿರಾಳ ಮತ್ತು ಉತ್ಸಾಹಭರಿತ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತವೆ.ಹೋಟೆಲ್‌ನ ಪ್ರಮುಖ ಆಕರ್ಷಣೆಯಾದ ‘ಬಂಜಾರಾ’ ರೆಸ್ಟೋರೆಂಟ್ ದಿನಪೂರ್ತಿ ಆಹಾರ ಸೇವೆಯನ್ನು ಒದಗಿಸುತ್ತಿದ್ದು, ಅಂತರರಾಷ್ಟ್ರೀಯ ಖಾದ್ಯಗಳ ಜೊತೆಗೆ ಸ್ಥಳೀಯ ಸುವಾಸನೆಗಳನ್ನೊಳಗೊಂಡ ವೈವಿಧ್ಯಮಯ ಪಾಕಶೈಲಿಯನ್ನು ಅತಿಥಿಗಳಿಗೆ ಪರಿಚಯಿಸುತ್ತದೆ. ಗೋವಾದ ಶ್ರೀಮಂತ ಮತ್ತು ವೈವಿಧ್ಯಮಯ ಆಹಾರ ಸಂಸ್ಕೃತಿಯ ಸೊಗಡನ್ನು ಇಲ್ಲಿ ಸವಿಯಬಹುದು. ಈ ಕುರಿತು ಎಂ.ಆರ್.ಜಿ. ಸಮೂಹದ ಸ್ಥಾಪಕಾಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, “ದೀರ್ಘಕಾಲ ಸಮಾಜಕ್ಕೆ ಉಪಯುಕ್ತವಾಗುವ ಸಂಸ್ಥೆಗಳು ಮತ್ತು ಯೋಜನೆಗಳನ್ನು ನಿರ್ಮಿಸುವುದೇ ಎಂ.ಆರ್.ಜಿ. ಸಮೂಹದ ಆಶಯವಾಗಿದೆ. ಗೋಲ್ಡ್‌ಫಿಂಚ್ ಪಣಜಿ ಗೋವಾದ ಆರಂಭವು ಆತಿಥ್ಯ ಕ್ಷೇತ್ರದಲ್ಲಿ ನಮ್ಮ ಬೆಳವಣಿಗೆಯ ಪಯಣದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಮುಂದೆಯೂ ಸುಸ್ಥಿರ ಬೆಳವಣಿಗೆ, ಉತ್ತಮ ಸೇವೆ ಮತ್ತು ಅತಿಥಿಗಳಿಗೆ ಮರೆಯಲಾಗದ ಅನುಭವಗಳನ್ನು ನೀಡುವ ಮೂಲಕ ನಮ್ಮೊಂದಿಗೆ ಕೈಜೋಡಿಸಿರುವ ಎಲ್ಲರಿಗೂ ದೀರ್ಘಕಾಲಿಕ ಮೌಲ್ಯವನ್ನು ಸೃಷ್ಟಿಸುವ ಪ್ರಯತ್ನವನ್ನು ನಾವು ಮುಂದುವರಿಸುತ್ತೇವೆ,” ಎಂದು ಹೇಳಿದರು.ಎಂ.ಆರ್.ಜಿ. ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಗೌರವ್ ಶೆಟ್ಟಿ ಮಾತನಾಡಿ,“ಗೋಲ್ಡ್ ಫಿಂಚ್ ಪಣಜಿ ಗೋವಾದ ಆರಂಭವು ಎಂ.ಆರ್.ಜಿ. ಸಮೂಹದ ಆತಿಥ್ಯ ಕ್ಷೇತ್ರದ ಬೆಳವಣಿಗೆಯ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಸಂಸ್ಕೃತಿ, ಮನರಂಜನೆ ಹಾಗೂ ನೈಸರ್ಗಿಕ ಸೌಂದರ್ಯದ ಅಪೂರ್ವ ಸಂಗಮವಾಗಿರುವ ಗೋವಾ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ಕ್ರಿಯಾಶೀಲ ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಪಣಜಿಯ ಹೃದಯಭಾಗಕ್ಕೆ ಗೋಲ್ಡ್ ಫಿಂಚ್ ಅನುಭವವನ್ನು ತರುವ ಅವಕಾಶ ದೊರೆತಿರುವುದು ಸಂತಸದ ಸಂಗತಿಯಾಗಿದೆ. ದೇಶದ ಪ್ರಮುಖ ಪ್ರವಾಸ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಅರ್ಥಪೂರ್ಣ ಆತಿಥ್ಯ ಅನುಭವಗಳನ್ನು ಸೃಷ್ಟಿಸುವ ನಮ್ಮ ನಿರಂತರ ಬದ್ಧತೆಯ ಪ್ರತಿಬಿಂಬವೇ ಈ ಹೊಸ ಹೋಟೆಲ್,” ಎಂದು ಹೇಳಿದರು.ಗೋಲ್ಡ್ ಫಿಂಚ್ ಪಣಜಿ ಗೋವಾದ ಆರಂಭವು ಭಾರತದ ಆತಿಥ್ಯ ಕ್ಷೇತ್ರದಲ್ಲಿ ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿಯ ಬೆಳೆಯುತ್ತಿರುವ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ವಿಶ್ವಮಟ್ಟದ ಆತಿಥ್ಯ ಮೂಲಸೌಕರ್ಯಗಳನ್ನು ನಿರ್ಮಿಸುವ ಎಂ.ಆರ್.ಜಿ. ಸಮೂಹದ ದೂರದೃಷ್ಟಿಗೆ ಸಾಕ್ಷಿಯಾಗಿದೆ. ವಿನೂತನ ವಿನ್ಯಾಸ, ಗುಣಮಟ್ಟದ ಸೇವೆ ಮತ್ತು ಸ್ಥಳೀಯ ಸಂಸ್ಕೃತಿಯ ನೈಜ ಅನುಭವಗಳ ಮೂಲಕ ಅತಿಥಿಗಳಿಗೆ ವಿಶಿಷ್ಟ ಅನುಭವವನ್ನು ನೀಡುವುದೇ ಸಂಸ್ಥೆಯ ಪ್ರಮುಖ ಗುರಿಯಾಗಿದೆ.ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿ ಕುರಿತು ಎಂ.ಆರ್.ಜಿ. ಸಮೂಹದ ಆತಿಥ್ಯ ವಿಭಾಗವಾದ ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿ, ಬೆಂಗಳೂರು, ಮಂಗಳೂರು, ಮುಂಬೈ ಹಾಗೂ ಇದೀಗ ಗೋವಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಹೋಟೆಲ್ ಜಾಲವನ್ನು ವಿಸ್ತರಿಸಿದೆ. ಅತ್ಯಾಧುನಿಕ ವಸತಿ ವ್ಯವಸ್ಥೆ, ವೈವಿಧ್ಯಮಯ ಆಹಾರ ಸೇವೆಗಳು ಹಾಗೂ ಆತ್ಮೀಯ ಸೇವೆಯ ಮೂಲಕ ಅತಿಥಿಗಳಿಗೆ ಉತ್ತಮ ಅನುಭವವನ್ನು ನೀಡುವಲ್ಲಿ ಈ ಬ್ರ್ಯಾಂಡ್ ಹೆಸರುವಾಸಿಯಾಗಿದೆ. ಗುಣಮಟ್ಟ, ನಿರಂತರತೆ ಹಾಗೂ ಅತಿಥಿಗಳ ತೃಪ್ತಿಗೆ ಆದ್ಯತೆ ನೀಡುವ ಮೂಲಕ ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತಿದೆ.ಎಂ.ಆರ್.ಜಿ. ಸಮೂಹ ಕುರಿತುಆತಿಥ್ಯ, ಆರೋಗ್ಯ, ಶಿಕ್ಷಣ, ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಜಿ. ಸಮೂಹವು ಗ್ರಾಹಕ ಕೇಂದ್ರಿತ ಸೇವೆಗಳು ಮತ್ತು ದೂರದೃಷ್ಟಿಯ ಹೂಡಿಕೆಗಳ ಮೂಲಕ ಮೌಲ್ಯ ಸೃಷ್ಟಿಸುತ್ತಿದೆ.ಸ್ವಾಮ್ಯ ಹಾಗೂ ನಿರ್ವಹಣೆಯಲ್ಲಿರುವ ಆತಿಥ್ಯ ಸಂಸ್ಥೆಗಳು

ಪ್ರಾದೇಶಿಕ ವಾರ್ತೆಗಳು

ಚಿಣ್ಣರ ಬಿಂಬ ಮುಂಬಯಿ: ಎಸ್.ಎಂ. ಶೆಟ್ಟಿ ಶಿಬಿರ ಉದ್ಘಾಟನೆ

ಚಿಣ್ಣರ ಬಿಂಬದ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಶ್ರಮ ಹಾಗೂ ದೇಶಭಕ್ತಿ ಕಾಣಬಹುದು – ನ್ಯಾಯವಾದಿ ಆರ್.ಜಿ. ಶೆಟ್ಟಿಮುಂಬಯಿ: ಚಿಣ್ಣರ ಬಿಂಬ ಸಂಸ್ಥೆ ಪ್ರಕಾಶ್ ಭಂಡಾರಿ ಮಾರ್ಗದರ್ಶನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಹಾಗೂ ಸಂಸ್ಕಾರಗಳನ್ನು ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಚಿಣ್ಣರ ಬಿಂಬದ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಶ್ರಮ ಮತ್ತು ದೇಶಭಕ್ತಿಯನ್ನು ಕಾಣಬಹುದು. ಸರಕಾರ ಮಾಡಬೇಕಾದ ಅನೇಕ ಕಾರ್ಯಗಳನ್ನು ಈ ಸಂಸ್ಥೆ ಸಮರ್ಥವಾಗಿ ನಿರ್ವಹಿಸುತ್ತಿದೆ. ಮಕ್ಕಳ ಭಜನೆ ಹಾಗೂ ಗಾಯನವನ್ನು ಆಲಿಸಿ ಅಪಾರ ಸಂತೋಷವಾಯಿತು. ನನ್ನ ಮಗಳು ಕೂಡ ಚಿಣ್ಣರ ಬಿಂಬದ ವಿದ್ಯಾರ್ಥಿನಿಯಾಗಿದ್ದಾಳೆ ಎನ್ನುವುದು ಹೆಮ್ಮೆಯ ವಿಷಯ ಎಂದು ಪೊವಾೈ ಕನ್ನಡ ಸೇವಾ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್. ಜಿ. ಶೆಟ್ಟಿ ನುಡಿದರು. ಅವರು ಜೂನ್ 14ರ ಆದಿತ್ಯವಾರ ಮಧ್ಯಾಹ್ನ ಎಸ್. ಎಂ. ಶೆಟ್ಟಿ ಶಾಲೆಯಲ್ಲಿ ನಡೆದ ಮುಂಬಯಿಯ ಮಕ್ಕಳ ಸಾಂಸ್ಕೃತಿಕ ಸಂಸ್ಥೆಯಾದ ಚಿಣ್ಣರ ಬಿಂಬದ 2026-27ನೇ ಸಾಲಿನ ಕನ್ನಡ ಹಾಗೂ ಭಜನಾ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು.ಸೆಂಟ್ರಲ್ ಕಮಿಟಿಯ ಸದಸ್ಯ ರಮೇಶ್ ಡಿ. ರೈ ಮಾತನಾಡಿ, ಚಿಣ್ಣರ ಬಿಂಬವು ಯಾವುದೇ ತಾರತಮ್ಯವಿಲ್ಲದೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ಆದರ್ಶ ಸಂಸ್ಥೆಯಾಗಿದೆ. ಪ್ರತಿಯೊಬ್ಬ ಪಾಲಕರೂ ಇತರರ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲಾ ಮಕ್ಕಳಿಗೂ ಭಾಗವಹಿಸುವ ಅವಕಾಶ ದೊರೆಯಬೇಕು. ಮುಂದಿನ ವರ್ಷ ನಡೆಯಲಿರುವ 25ನೇ ವರ್ಷದ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಯೋಜನೆ ರೂಪಿಸಲಾಗಿದ್ದು ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು. ಡಾ.ಪೂರ್ಣಿಮಾ ಎಸ್. ಶೆಟ್ಟಿ ಮಾತನಾಡಿ, ಚಿಣ್ಣರ ಬಿಂಬದ ಈ ಶಿಬಿರದಲ್ಲಿ ತುಂಬಾ ಜನ ಉತ್ತಮ ಕೆಲಸ ಮಾಡಿದ್ದಾರೆ. ಈಗ ಇರುವ ಪದಾಧಿಕಾರಿಗಳು, ಸದಸ್ಯರು, ಪಾಲಕರು ನಿರಂತರವಾಗಿ ಶಿಬಿರದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಮಕ್ಕಳನ್ನು ಈ ಶಿಬಿರಕ್ಕೆ ಅಥವಾ ಮುಂಬಯಿಯ ಇತರ ಚಿಣ್ಣರ ಬಿಂಬ ಶಿಬಿರಗಳಿಗೆ ಸೇರಿಸಲು ಪ್ರೋತ್ಸಾಹಿಸಬೇಕು. ಇಲ್ಲಿ ಜಾತಿ-ಮತ-ಬೇಧವಿಲ್ಲ. ಚಿಣ್ಣರ ಬಿಂಬವು ಒಬ್ಬ ವ್ಯಕ್ತಿಯ ಅಥವಾ ಒಂದು ಶಿಬಿರದ ಜವಾಬ್ದಾರಿಯಲ್ಲ. ಇದು ಕೂಡು ಕುಟುಂಬದ ವ್ಯವಸ್ಥೆಯಂತೆ ಎಲ್ಲರ ಸಹಕಾರದಿಂದ ಸಾಗುವ ಸಂಸ್ಥೆಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ನುಡಿದರು. ಈ ಸಂದರ್ಭದಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬೇಬಿ ಆರ್. ಪೂಜಾರಿ ಶಿಬಿರದ ಮುಖ್ಯಸ್ಥೆಯಾಗಿ ವಿದ್ಯಾ ಎಸ್. ಶೆಟ್ಟಿ ಸಾಂಸ್ಕøತಿಕ ಮುಖ್ಯಸ್ಥೆಯಾಗಿ ಅನಿತಾ ಎಸ್. ಶೆಟ್ಟಿ, ಕನ್ನಡ ಶಿಕ್ಷಕಿಯಾಗಿ ಹಾಗೂ ವಿಮಲಾ ಎಸ್. ದೇವಾಡಿಗ ಭಜನಾ ಶಿಕ್ಷಕಿಯಾಗಿ ಆಯ್ಕೆ ಮಾಡಲಾಯಿತು. ಜೊತೆಗೆ ಸಾಂಸ್ಕøತಿಕ ಸಮಿತಿಯನ್ನೂ ರಚಿಸಲಾಯಿತು.ಅತಿಥಿ ಆರ್. ಜಿ. ಶೆಟ್ಟಿಯವರಿಗೆ ಶಾಲು ಹಾಗೂ ಹೂ ಗುಚ್ಛ ನೀಡಿ ಗೌರವಿಸಲಾಯಿತು. ನಂತರ ಹಳೆಯ ಪದಾಧಿಕಾರಿಗಳಿಗೆ ಮತ್ತು ಹೊಸ ಪದಾಧಿಕಾರಿಗಳಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಸೆಂಟ್ರಲ್ ಕಮಿಟಿಯ ಸದಸ್ಯ ರಮೇಶ್ ಡಿ. ರೈ, ಕನ್ನಡ ವಿಭಾಗದ ಸಂಯೋಜಕಿ ಡಾ. ಪೂರ್ಣಿಮಾ ಎಸ್.ಶೆಟ್ಟಿ, ಕನ್ನಡ ಶಿಕ್ಷಕಿ ಅನಿತಾ ಎಸ್.ಶೆಟ್ಟಿ, ಭಜನಾ ಶಿಕ್ಷಕಿ ವಿಮಲಾ ಎಸ್. ದೇವಾಡಿಗ ಹಾಗೂ ಕಮಿಟಿಯ ಸದಸ್ಯೆಯರಾದ ಆಶಾ ಎಸ್.ಶೆಟ್ಟಿ, ದೇವಿಕಾ ಪಿ. ಶೆಟ್ಟಿ ಮತ್ತು ವಲಯ ಮುಖ್ಯಸ್ಥೆ ಸುಜಾತ ಎಸ್. ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪಾಲಕರು ಸೇರಿ ‘ವಂದೇ ಮಾತರಂ’.. ಹಾಡಿದರು. ಅನಿತಾ ಎಸ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಪ್ರಾದೇಶಿಕ ವಾರ್ತೆಗಳು

ದೂರದರ್ಶನದ ಬಿ-ಗ್ರೇಡ್ ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ಆಯ್ಕೆಯಾದ ರೆಮೋನಾ ಎವೆಟ್ ಪೆರೇರಾ

ಮಂಗಳೂರು: ಮಂಗಳೂರಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಬಿ.ಎ. (ಇಂಗ್ಲಿಷ್ ಸಾಹಿತ್ಯ ಮತ್ತು ಇತಿಹಾಸ) ವಿದ್ಯಾರ್ಥಿನಿ ಕುಮಾರಿ ರೆಮೋನಾ ಎವೆಟ್ ಪೆರೇರಾ ಅವರು ಪ್ರಸಾರ ಭಾರತಿ ಅಧೀನದ ದೂರದರ್ಶನ ಚಂದನ ವಾಹಿನಿ ನಡೆಸಿದ ಆಡಿಷನ್ನಲ್ಲಿ ಯಶಸ್ವಿಯಾಗಿ ಭಾಗವಹಿಸಿ, ಬಿ-ಗ್ರೇಡ್ ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ. ಸೌರಭ ಸಂಗೀತ ನೃತ್ಯ ಕಲಾ ಪರಿಷತ್ನ ಗುರು ಡಾ. ಶ್ರೀವಿದ್ಯಾ ಅವರ ಶಿಷ್ಯೆಯಾಗಿರುವ ರೆಮೋನಾ ಅವರು ಕಳೆದ 18 ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದು, ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ನಿರಂತರವಾಗಿ ಕಲಾ ಪ್ರತಿಭೆಯನ್ನು ಬೆಳೆಸಿಕೊಂಡಿದ್ದಾರೆ. ಈ ಸಾಧನೆಯು ಅವರ ಹಲವು ವರ್ಷಗಳ ಕಠಿಣ ಪರಿಶ್ರಮ, ಶಿಸ್ತು, ಕಲೆಯ ಮೇಲಿನ ಬದ್ಧತೆ ಹಾಗೂ ಅಪಾರ ಆಸಕ್ತಿಯ ಫಲವಾಗಿದೆ. ಈ ಹಿಂದೆ 2025ರ ಜುಲೈ 21ರಿಂದ 28ರವರೆಗೆ ಸತತ 170 ಗಂಟೆಗಳ ಕಾಲ ನೃತ್ಯ ಪ್ರದರ್ಶಿಸುವ ಮೂಲಕ ‘ಅತ್ಯಂತ ದೀರ್ಘ ನೃತ್ಯ ಮ್ಯಾರಥಾನ್’ ಸಾಧನೆ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದ ಅವರು ರಾಷ್ಟ್ರದಾದ್ಯಂತ ಗಮನ ಸೆಳೆದಿದ್ದರು. ದೂರದರ್ಶನದ ಮಾನ್ಯತೆ ಪಡೆದ ಕಲಾವಿದರ ಸಾಲಿನಲ್ಲಿ ಸ್ಥಾನ ಪಡೆದಿರುವುದು ಅವರ ಕಲಾ ಪಯಣದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಭರತನಾಟ್ಯದ ಕ್ಷೇತ್ರದಲ್ಲಿ ಅವರ ನಿರಂತರ ಸಾಧನೆಗೆ ಮತ್ತೊಂದು ಗರಿಮೆಯನ್ನು ತಂದಿದೆ. ರೆಮೋನಾ ಅವರ ಈ ಸಾಧನೆಗೆ ಕುಟುಂಬದವರು, ಗುರುಗಳು, ಕಲಾಭಿಮಾನಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು, ಗೌರವ ಮತ್ತು ಸಾಧನೆಗಳು ದೊರಕಲಿ ಎಂದು ಹಾರೈಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕದ್ರಿ ಆಶ್ರಮ ಶಾಲಾ ಮಕ್ಕಳಿಗೆ ಯೋಗ ಶಿಬಿರ

ಮಂಗಳೂರು, ಜೂ.17; ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ್ ಟ್ರಸ್ಟಿನ ಜಿಲ್ಲಾಧ್ಯಕ್ಷರಾದ ಯೋಗ ಗುರು ಡಾ ಎಂ ಜಗದೀಶ್ ಶೆಟ್ಟಿ ಬಿಜೈ ಇವರು ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಾಲ್ಮೀಕಿ ಆಶ್ರಮ ಶಾಲೆ, ಕದ್ರಿ ಪದವು ಮಂಗಳೂರು ಇಲ್ಲಿ 250ನೇ ಉಚಿತ ಶಿಬಿರವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ದ. ಕ. ಜಿಲ್ಲೆ ಆಯುಷ್ ವಿಭಾಗ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಯೋಗ ಶಿಬಿರ ಆರಂಭಗೊಂಡಿದೆ. ಯೋಗ ಗುರು ಡಾ. ಜಗದೀಶ್ ಶೆಟ್ಟಿ ಮಕ್ಕಳಿಗೆ ವಿಶೇಷ ಯೋಗದ ಪ್ರಾತ್ಯಕ್ಷಿಕತೆ ಮತ್ತು ವಿವರಣೆ ನೀಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್ ಇವರು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾ ಡುತ್ತಾ,ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಪೂರಕ ಎಂದರು.ಮುಖ್ಯ ಅತಿಥಿ ಜಿಲ್ಲಾ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ. ಪ್ರಕಾಶ್ ಎ. ಜೆ.ಮಾತನಾಡುತ್ತಾ, ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಪರಿಣಾಮಕಾರಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಹಶಿಕ್ಷಕಿ ಭಾರತಿ ಶೆಟ್ಟಿ, ಶಾಲೆಯ ವಾರ್ಡನ್ ಸರಸ್ವತಿ, ಮುಖ್ಯ ಶಿಕ್ಷಕಿ ಸುನೀತಾ, ನಿರ್ಮಲ, ಧನ್ಯ, ದಿವ್ಯ, ಸವಿತ, ಸುಶ್ಮಿತ, ಚೇತನಾ, ಪ್ರಕಾಶ ಹಾಗೂ 200ಕ್ಕೂ ಮಿಕ್ಕಿ ಮಕ್ಕಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಯಶೋಧಾ ರಾಜೇಶ್ ಥೈಲ್ಯಾಂಡ್‌ನಲ್ಲಿ “ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್ 2026” ಕಿರೀಟ ಮುಡಿಗೇರಿಸಿಕೊಂಡರು

ಮಂಗಳೂರು, ಕರ್ನಾಟಕ: ಮಂಗಳೂರು, ಕರ್ನಾಟಕ ಹಾಗೂ ಭಾರತಕ್ಕೆ ಹೆಮ್ಮೆಯನ್ನು ತಂದಿರುವ ಉದ್ಯಮಿಯಾಗಿರುವ ಮತ್ತು ಹೆಮ್ಮೆಯ ಮಂಗಳೂರಿಗರಾದ ಯಶೋಧಾ ರಾಜೇಶ್ ಅವರು ಥೈಲ್ಯಾಂಡ್‌ನ ಹುವಾ ಹಿನ್‌ನಲ್ಲಿ ನಡೆದ ಪ್ರತಿಷ್ಠಿತ ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ 2026 ಸ್ಪರ್ಧೆಯಲ್ಲಿ “ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್ 2026” ಎಂಬ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಜಗತ್ತಿನ ವಿವಿಧ ದೇಶಗಳಿಂದ ಭಾಗವಹಿಸಿದ್ದ 22 ಸ್ಪರ್ಧಿಗಳ ನಡುವೆ ಯಶೋಧಾ ರಾಜೇಶ್ ತಮ್ಮ ಆತ್ಮವಿಶ್ವಾಸ, ವ್ಯಕ್ತಿತ್ವ, ಸಂಸ್ಕೃತಿ ಪ್ರತಿನಿಧಿತ್ವ ಹಾಗೂ ಅದ್ಭುತ ಪ್ರತಿಭೆಯ ಮೂಲಕ ತೀರ್ಪುಗಾರರು, ಆಯೋಜಕರು ಹಾಗೂ ಸಹ ಸ್ಪರ್ಧಿಗಳ ಗಮನ ಸೆಳೆದರು. ಅವರು ಪ್ರದರ್ಶಿಸಿದ “ಅರ್ಧನಾರೀಶ್ವರ” ನೃತ್ಯ ರೂಪಕವು ಭಗವಾನ್ ಶಿವ ಮತ್ತು ಪಾರ್ವತಿಯ ದೈವಿಕ ಏಕತೆಯನ್ನು ಪ್ರತಿಬಿಂಬಿಸಿದ್ದು, ಅವರಿಗೆ ಈ ಗೌರವಾನ್ವಿತ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರ ಅರ್ಧನಾರೀಶ್ವರ ಪ್ರದರ್ಶನವು ಸ್ಪರ್ಧೆಯ ಅತ್ಯಂತ ಚರ್ಚಿತ ಕಾರ್ಯಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿತು. ಭಾರತದ ಸಂಸ್ಕೃತಿ, ಆಧ್ಯಾತ್ಮಿಕತೆ ಹಾಗೂ ಕಲಾತ್ಮಕತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸಿದ ಯಶೋಧಾ ಅವರ ಪ್ರದರ್ಶನವನ್ನು ಕಂಡು ವಿವಿಧ ದೇಶಗಳ ಸ್ಪರ್ಧಿಗಳು ಹಾಗೂ ಅತಿಥಿಗಳು ಮೆಚ್ಚುಗೆಯ ಮಳೆಯನ್ನೇ ಸುರಿಸಿದರು. ಪ್ರತಿಭಾ ಸುತ್ತಿನ ನಂತರ ಅನೇಕರು ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳಲು ಮುಂದೆ ಬಂದದ್ದು ಅವರ ಪ್ರದರ್ಶನದ ಯಶಸ್ಸಿಗೆ ಸಾಕ್ಷಿಯಾಯಿತು. ಯಶೋಧಾ ಅವರ ಅಂತರರಾಷ್ಟ್ರೀಯ ಪಯಣವು ಮಿಸೆಸ್ ಇಂಡಿಯಾ ಆಸ್ಟ್ರಲ್ 2025 ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗುವ ಮೂಲಕ ಆರಂಭವಾಯಿತು. ಅವರ ಸಾಮರ್ಥ್ಯ, ಶ್ರಮ ಹಾಗೂ ಸಮರ್ಪಣೆಯನ್ನು ಗುರುತಿಸಿದ ರಾಷ್ಟ್ರೀಯ ನಿರ್ದೇಶಕಿ ಪ್ರತಿಭಾ ಸೌನಶಿಮಠ ಅವರು ಯಶೋಧಾರನ್ನು ಭಾರತ ಹಾಗೂ ಆಸ್ಟ್ರಲ್ ಪೇಜೆಂಟ್ಸ್ ಪರವಾಗಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಆಯ್ಕೆ ಮಾಡಿ ಮಾರ್ಗದರ್ಶನ ನೀಡಿದರು. ಥೈಲ್ಯಾಂಡ್‌ನಲ್ಲಿ ನಡೆದ ಏಳು ದಿನಗಳ ಪಯಣವು ಸಂಸ್ಕೃತಿ, ಪ್ರವಾಸೋದ್ಯಮ, ಸಾಮಾಜಿಕ ಸೇವೆ ಹಾಗೂ ಅಂತರರಾಷ್ಟ್ರೀಯ ಸ್ನೇಹದ ಅದ್ಭುತ ಸಂಗಮವಾಗಿತ್ತು. ಮೊದಲ ಆರು ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು, ಪ್ರವಾಸೋದ್ಯಮ ಪ್ರಚಾರ, ಪ್ರತಿಭಾ ಪ್ರದರ್ಶನಗಳು, ಸಂದರ್ಶನಗಳು, ಅಭ್ಯಾಸಗಳು ಹಾಗೂ ಸಮಾಜಮುಖಿ ಕಾರ್ಯಗಳು ನಡೆದರೆ, ಏಳನೇ ದಿನ ಅದ್ಧೂರಿ ಗ್ರ್ಯಾಂಡ್ ಫಿನಾಲೆ ನಡೆಯಿತು. ಈ ಪಯಣದಲ್ಲಿ ಸ್ಪರ್ಧಿಗಳು ವಿಶೇಷ ಮಕ್ಕಳಿಗಾಗಿ ಕಾರ್ಯನಿರ್ವಹಿಸುವ ಕ್ಯಾಮಿಲಿಯನ್ ಹೋಮ್‌ಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆಯುವ ಮೂಲಕ ಮಾನವೀಯ ಮೌಲ್ಯಗಳನ್ನು ಹಂಚಿಕೊಂಡರು. ಸಮುದ್ರ ಪರಿಸರ ಸಂರಕ್ಷಣೆಯ ಭಾಗವಾಗಿ ಸಮುದ್ರಕ್ಕೆ ಏಡಿಗಳನ್ನು ಬಿಡುವ ಕಾರ್ಯಕ್ರಮದಲ್ಲೂ ಭಾಗವಹಿಸಿದರು. ಹುವಾ ಹಿನ್‌ನ ಪ್ರಸಿದ್ಧ ಪ್ರವಾಸಿ ತಾಣಗಳು, ರಿವಾ ಗ್ರೂಪ್ ಹೋಟೆಲ್‌ಗಳು ಹಾಗೂ ಥಾಯ್ಲ್ಯಾಂಡ್‌ನ ಸಾಂಸ್ಕೃತಿಕ ಕೇಂದ್ರಗಳಿಗೆ ಭೇಟಿ ನೀಡುವ ಅವಕಾಶ ಸ್ಪರ್ಧಿಗಳಿಗೆ ದೊರೆಯಿತು. ಥಾಯ್ ಸಾಂಪ್ರದಾಯಿಕ ಉಡುಪುಗಳಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ ಸ್ಪರ್ಧಿಗಳು ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಹತ್ತಿರದಿಂದ ಅರಿತುಕೊಂಡರು. ರಾಷ್ಟ್ರೀಯ ವೇಷಭೂಷಣ ಸ್ಪರ್ಧೆಯಲ್ಲಿ ಯಶೋಧಾ ರಾಜೇಶ್ ಅವರು ಕರ್ನಾಟಕದ ಐತಿಹಾಸಿಕ ದೇವಾಲಯಗಳಲ್ಲಿರುವ ಶಿಲಾಬಾಲಿಕೆ ಶಿಲ್ಪಗಳಿಂದ ಪ್ರೇರಿತವಾದ ವಿಶಿಷ್ಟ ವೇಷಭೂಷಣವನ್ನು ಪ್ರದರ್ಶಿಸಿದರು. ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು, ಪರಿಶುದ್ಧತೆಯ ಸಂಕೇತವಾದ ಕಮಲ ಹಾಗೂ ಅಶೋಕ ಸ್ತಂಭದ ನಾಲ್ಕು ಸಿಂಹಗಳನ್ನು ಒಳಗೊಂಡ ಈ ವೇಷಭೂಷಣವು ಭಾರತೀಯ ಸಂಸ್ಕೃತಿ, ಶಕ್ತಿ, ಸೌಂದರ್ಯ ಮತ್ತು ಏಕತೆಯನ್ನು ಪ್ರತಿಬಿಂಬಿಸಿತು. ಸ್ಪರ್ಧಿಗಳು ಥೈಲ್ಯಾಂಡ್‌ನ ಪ್ರಸಿದ್ಧ TRIBE ಉತ್ಸವದಲ್ಲೂ ಭಾಗವಹಿಸಿ ವೈವಿಧ್ಯತೆ, ಸಮಾನತೆ ಹಾಗೂ ಸಾಂಸ್ಕೃತಿಕ ಐಕ್ಯತೆಯನ್ನು ಆಚರಿಸಿದರು. ವೈವಿಧ್ಯಮಯ ದೇಶಗಳ ಸ್ಪರ್ಧಿಗಳ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು. ವೈಯಕ್ತಿಕ ಸಂದರ್ಶನ ಸುತ್ತಿನಲ್ಲಿ ಸ್ಪರ್ಧಿಗಳು ತಮ್ಮ ಜೀವನ ಪಯಣ, ಗುರಿಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ತೀರ್ಪುಗಾರರೊಂದಿಗೆ ಹಂಚಿಕೊಂಡರು. ಉಡುಗೊರೆ ವಿನಿಮಯ ಕಾರ್ಯಕ್ರಮದ ಮೂಲಕ ವಿವಿಧ ದೇಶಗಳ ಸಂಸ್ಕೃತಿ ಮತ್ತು ಪರಂಪರೆಗಳನ್ನು ಅರಿಯುವ ಅವಕಾಶವೂ ದೊರೆಯಿತು. ಈ ಏಳು ದಿನಗಳ ಪಯಣದ ಶಿಖರವಾಗಿದ್ದು ಹುವಾ ಹಿನ್‌ನ ಮಾರ್ಕೆಟ್ ವಿಲೇಜ್‌ನಲ್ಲಿ ನಡೆದ ಅದ್ಧೂರಿ ಗ್ರ್ಯಾಂಡ್ ಫಿನಾಲೆ. ಅಂತರರಾಷ್ಟ್ರೀಯ ತೀರ್ಪುಗಾರರ ಸಮಿತಿಯ ಎದುರು 22 ದೇಶಗಳ ಸ್ಪರ್ಧಿಗಳು ಕಿರೀಟಕ್ಕಾಗಿ ಸ್ಪರ್ಧಿಸಿದರು. ಯಶೋಧಾ ಅವರ ಸಾಧನೆಯನ್ನು ಇನ್ನಷ್ಟು ವಿಶೇಷಗೊಳಿಸುವುದು ಅವರ ವೈಯಕ್ತಿಕ ಜೀವನ ಪಯಣ. ಯಶಸ್ವಿ ಉದ್ಯಮಿಯಾಗಿರುವ ಅವರು ತಮ್ಮ ಹದಿಹರೆಯದ ಪುತ್ರಿ ಸಾನ್ವಿಯನ್ನು ಒಬ್ಬರೇ ಬೆಳೆಸುತ್ತಾ ವೃತ್ತಿ ಜೀವನ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ತಮ್ಮ ಉದ್ಯೋಗ, ಕುಟುಂಬ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳ ನಡುವೆ ಸಮಯವನ್ನು ಹೊಂದಿಸಿ ಅಂತರರಾಷ್ಟ್ರೀಯ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದು ಶ್ಲಾಘನೀಯವಾಗಿದೆ. ಅವರ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಮತ್ತು ಸಮರ್ಪಣೆ ಈ ಸಾಧನೆಯ ಹಿಂದಿನ ಪ್ರಮುಖ ಕಾರಣಗಳಾಗಿವೆ. ಕೆಲಸ, ಕುಟುಂಬ, ಸೇವಾ ಕಾರ್ಯಗಳು ಮತ್ತು ಪೇಜೆಂಟ್ ಸಿದ್ಧತೆಗಳನ್ನು ಸಮತೋಲನಗೊಳಿಸಿ ಅವರು ಸಾಧಿಸಿರುವ ಯಶಸ್ಸು ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದೆ. ರಾಷ್ಟ್ರೀಯ ನಿರ್ದೇಶಕಿ ಪ್ರತಿಭಾ ಸೌನಶಿಮಠ ಅವರು ಯಶೋಧಾ ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಅವರ ಪರಿಶ್ರಮ, ವಿನಯಶೀಲತೆ, ಶಿಸ್ತು ಮತ್ತು ಸಮರ್ಪಣೆಯೇ ಈ ಗೆಲುವಿನ ಮೂಲ ಕಾರಣವೆಂದು ಅಭಿನಂದಿಸಿದರು. ಮಿಸೆಸ್ ಇಂಡಿಯಾ ಆಸ್ಟ್ರಲ್ 2025 ರನ್ನರ್ ಅಪ್‌ನಿಂದ ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್ 2026 ಆಗಿ ಹೊರಹೊಮ್ಮಿರುವ ಯಶೋಧಾ ರಾಜೇಶ್ ಅವರ ಸಾಧನೆ ಕರ್ನಾಟಕ ಮತ್ತು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಯಶೋಗಾಥೆ ಕನಸುಗಳನ್ನು ಸಾಧಿಸಲು ವಯಸ್ಸು, ಪರಿಸ್ಥಿತಿ ಅಥವಾ ಅಡೆತಡೆಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ. ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್ 2026 ಯಶೋಧಾ ರಾಜೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!

ಪ್ರಾದೇಶಿಕ ವಾರ್ತೆಗಳು

ಪ್ರೊ.ಬಾಲಕೃಷ್ಣ ಗಟ್ಟಿ ನಿಧನಕ್ಕೆ ಪತ್ರಕರ್ತರಿಂದ ಸಂತಾಪ ಸೂಚಕ ಸಭೆ

ಮಂಗಳೂರು, ಜೂ.16;ಹಿರಿಯ ಪತ್ರಕರ್ತ ಪ್ರೊ.ಬಾಲಕೃಷ್ಣ ಗಟ್ಟಿ ಯವರ ನಿಧನಕ್ಕೆದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸಂತಾಪ ಸೂಚಕ ಸಭೆ ನಡೆಸಿ ನುಡಿನಮನ ಸಲ್ಲಿಸಲಾಯಿತು.ಈ ಸಂತಾಪ ಸೂಚಕ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಚಿದಂಬರ ಬೈಕಂಪಾಡಿ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿಯವರು ಶಿಕ್ಷಣ, ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದವರು ಜೊತೆಗೆ ಸಂಘಟ ನೆಗೂ ಒತ್ತು ನೀಡಿದವರು ಎಂದು ಅವರ ಜೊತೆಗಿನ ಅನುಭವ ಹಂಚಿಕೊಂಡು ನುಡಿನಮನ ಸಲ್ಲಿಸಿದರು.ಹಿರಿಯ ಪತ್ರಕರ್ತ ಆನಂದ ಶೆಟ್ಟಿಯವರು ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿಯವರು ಪತ್ರಕರ್ತರ ಸಂಘಟನೆ ತಳ ಮಟ್ಟದಲ್ಲೂ ಬೆಳೆಯಬೇಕು ಎಂದು ಆಶಯ ಹೊಂದಿ ದ್ದರು ಎಂದರು .ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿ ಯವರು ಸರಳ ಸಜ್ಜನಿಕೆಯ ನೇರ ನಡೆ ನುಡಿಯ ವ್ಯಕ್ತಿಯಾಗಿದ್ದರು. ಪತ್ರಿಕೋದ್ಯಮದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕರ್ತವ್ಯ ನಿಷ್ಠೆ ಯಿಂದ ಸಾಕಷ್ಟು ಶಿಷ್ಯರನ್ನು ಪಡೆದುಕೊಂಡಿದ್ದಾರೆ. ಸಂಖ್ಯೆಯಲ್ಲಿ ಒಂದು ಸಣ್ಣ ಸಮುದಾಯದ ಮೂಲಕ ಸಮಾಜ ಗುರುತಿಸುವಂತಹ ಸಾಧನೆಯನ್ನು ತಮ್ಮ ಸ್ವ ಪ್ರಯತ್ನದ ಮೂಲಕ ಮಾಡಿದವರು ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡುತ್ತಾ,ಬಾಲಕೃಷ್ಣ ಗಟ್ಟಿಯವರು ಮಾಧ್ಯಮ ಕ್ಷೇತ್ರದ ಮೂಲಕ ಸಾಕಷ್ಟು ಮಂದಿಗೆ ಪ್ರೇರಣೆ ನೀಡುವ ಕೊಡುಗೆ ನೀಡಿದವರು ಎಂದರು‌, ಹಿರಿಯ ಪತ್ರಕರ್ತ ಯಶವಂತ ಬೋಳೂರು ಮಾತನಾಡುತ್ತಾ ಬಾಲಕೃಷ್ಣ ಗಟ್ಟಿಯವರು ಶಿಕ್ಷಣ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಮಜಲುಗಳಲ್ಲಿ ಕಾರ್ಯನಿರ್ವಹಿಸಿದ ಪ್ರತಿಭಾವಂತ ಎಂದರು.ನಂದ ಗೋಪಾಲ್ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿಯವರು ಸಾಕಷ್ಟು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು ಎಂದರು, ದ.ಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿ ಯವರು ಮಾಡಿದ ಸಾಧನೆಗೆ ಸಾಕಷ್ಟು ಪ್ರಶಸ್ತಿ ಗಳು ಅವರಿಗೆ ದೊರೆಯಬೇಕಿತ್ತು, ಆದರೆ ಅವರು ಪ್ರಶಸ್ತಿ ಗಳ ಹಿಂದೆ ಹೋಗದ ಸ್ವಾಭಿಮಾನಿ ಯಾಗಿದ್ದರು ಎಂದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ , ಹಾಗೂ ಬಾಲಕೃಷ್ಣ ಗಟ್ಟಿಯವರ ಒಡನಾಡಿಗಳಾಗಿದ್ದ, ಡೊನಾಲ್ಡ್ ಪಿರೇರಾ,ಬಶೀರ್ , ಪತ್ರಕರ್ತ ಭಾಸ್ಕರ ರೈ ಕಟ್ಟ,ನುಡಿ ನಮನ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ರಾಜೇಶ್ ಕೆ ಪೂಜಾರಿ , ಉಪಾಧ್ಯಕ್ಷ ಆರಿಫ್ ಪಡುಬಿದ್ರೆ, ಕೋಶಾಧಿಕಾರಿ ವಿಜಯ ಕೋಟ್ಯಾನ್, ಕಾರ್ಯದರ್ಶಿ ಸುರೇಶ್ ಡಿ ಪಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಕುಮಾರ್, ಮಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಬಾಲಕೃಷ್ಣ ಗಟ್ಟಿ ಯವರ ಪುತ್ರ ಸುಕುಮಾರ ಗಟ್ಟಿ, ಅಳಿಯ ಯಶವಂತ ಗಟ್ಟಿ ಕುಟುಂಬದ ಸದಸ್ಯರಾದ ಪದ್ಮನಾಭ ಗಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ರಾಣಿ ಅಬ್ಬಕ್ಕ ತುಳುವರ ಹೆಮ್ಮೆಯ ಪ್ರತೀಕ -ಡಾ.ತುಕಾರಾಮ ಪೂಜಾರಿ

ಬಂಟ್ವಾಳ: ಜೂ.16ರಾಣಿ ಅಬ್ಬಕ್ಕ ದೇವಿ ತುಳುವರ ಹೆಮ್ಮೆಯ ಪ್ರತೀಕವಾಗಿದ್ದು ವಿದೇಶಿ ದಾಸ್ಯದ ವಿರುದ್ಧ ಹೋರಾಡಿದ ವೀರ ಮಹಿಳೆ.ಪೋರ್ಚುಗೀಸರ ಅಟ್ಟಹಾಸಕ್ಕೆ ದಿಟ್ಟ ಉತ್ತರ ನೀಡಿದ ರಾಣಿ ಅಬ್ಬಕ್ಕ ಇತಿಹಾಸದ ಪುಟಗಳಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಗುರಿತಿಸಲ್ಪಟ್ಟಿದ್ದಾಳೆ ಎಂದು ರಾಣಿ ಅಬ್ಬಕ್ಕ ದೇವಿ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಹೇಳಿದರು.ಅವರು ಬಂಟ್ವಾಳ ಜೈನ್ ಮಿಲನ್ ವತಿಯಿಂದ ಸಂಸ್ಕೃತಿ – ಸಂಸ್ಮರಣೆ ಎಂಬ ಧ್ಯೇಯದೊಂದಿಗೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ವೀರ್ ರಾಜೇಂದ್ರ ಜೈನ್ ಪೆರ್ಲ ಇವರುಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ. ಸುದೀಪ್ ಸಿದ್ಧಕಟ್ಟೆ ಭಾಗವಹಿಸಿದ್ದರು.ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ , ವೇಣೂರು ಜೈನ್ ಮಿಲನ್ ಪೂರ್ವಕಾರ್ಯದರ್ಶಿ ನಿರ್ಮಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಂಟ್ವಾಳ ಅಧ್ಯಕ್ಷ ರಾಜೇಂದ್ರ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಜಯಕೀರ್ತಿ ಇಂದ್ರ ಪಾಣೆಮಂಗಳೂರು ವರದಿ ವಾಚಿಸಿದರು. ಹರ್ಷರಾಜ್ ಬಲ್ಲಾಳ್ ನಿರ್ವಹಣೆ ಮಾಡಿದರು. ಸಾಮೂಹಿಕ ಶಾಂತಿಮಂತ್ರ ಪಠಣದ ಬಳಿಕ ತುಳು ಅಧ್ಯಯನ ಕೇಂದ್ರವನ್ನು ವೀಕ್ಷಣೆ ಮಾಡಲಾಯಿತು.

Scroll to Top