Author name: editor

ಪ್ರಾದೇಶಿಕ ವಾರ್ತೆಗಳು

ಸೆ.12ಕ್ಕೆ “ರಾನಿ” ಕನ್ನಡ ಸಿನಿಮಾ ಬಿಡುಗಡೆ

ಮಂಗಳೂರು: “ಸೆ.12ಕ್ಕೆ ಬಹು ನಿರೀಕ್ಷಿತ ರಾನಿ ಕನ್ನಡ ಸಿನಿಮಾ ಬಿಡುಗಡೆಗೊಳ್ಳಲಿದೆ. ಆಕ್ಷನ್ ಜೊತೆಗೆ ಫ್ಯಾಮಿಲಿ ಒರಿಯೆಂಟೆಡ್ ಕಥಾನಕ ಇದರಲ್ಲಿದ್ದು ಪ್ರೇಕ್ಷಕರು ಸಿನಿಮಾ ಇಷ್ಟಪಡಲು ಬೇಕಾದ ಎಲ್ಲಾ ಅಂಶಗಳು ಸಿನಿಮಾದಲ್ಲಿ ಇರಲಿದೆ” ಎಂದು ಚಿತ್ರ ನಿರ್ದೇಶಕ ಗುರುತೇಜ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.“ಸಿನಿಮಾದಲ್ಲಿ ಕನ್ನಡದ ಖ್ಯಾತ ನಟರಾದ ರವಿಶಂಕರ್, ಬಿ.ಸುರೇಶ್, ಯಶ್ ಶೆಟ್ಟಿ, ಉಗ್ರಂ ಮಂಜು ಮತ್ತಿತರರು ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ರಾಧ್ಯ ಮೈಸೂರು, ಸಮೀಕ್ಷಾ ಮೈಸೂರು, ಅಪೂರ್ವ ಮೂವರು ನಾಯಕಿಯರಿದ್ದಾರೆ. ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಕುನಾಲ್ ಗಾಂಜಾವಾಲ, ಹನ್ಸಿಕಾ ಅಯ್ಯರ್, ವಿಸ್ಮಯ ವಿನಾಯಕ್ ಸಹಿತ ಖ್ಯಾತ ಗಾಯಕರು ಹಾಡಿದ್ದಾರೆ.ಕಿರಣ್ ರಾಜ್ ಕನ್ನಡತಿ ಧಾರವಾಹಿ ಖ್ಯಾತಿಯ ನಟರಾಗಿದ್ದು ಈಗಾಗಲೇ ರಾಜ್ಯದ ಮನೆಮಾತಾಗಿದ್ದಾರೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ನಾಯಕ ಕಿರಣ್ ರಾಜ್, ಚಂದ್ರಕಾಂತ್ ಪೂಜಾರಿ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ನಿರ್ಮಾಪಕ ಉಮೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಆ.31: ತುಳುಭವನದಲ್ಲಿ “ಸುವರ್ಣ ಸ್ಮರಣೆ”

ಮಂಗಳೂರು: “ದಿ. ಸದಾನಂದ ಸುವರ್ಣ ಅವರದ್ದು ತುಳು, ಕನ್ನಡ ರಂಗಭೂಮಿ, ಸಾಹಿತ್ಯ, ಚಲನ ಚಿತ್ರ, ಕಿರುತೆರೆ ಮಾಧ್ಯಮಗಳಲ್ಲಿ ಚಿರಸ್ಥಾಯಿಯಾದ ಹೆಸರು. 1977 ರಲ್ಲಿ ಅವರ ನಿರ್ಮಾಣದ ಘಟಶ್ರಾದ್ಧ ಸ್ವರ್ಣಕಮಲ ಪಡೆದರೆ, 1991ರಲ್ಲಿ ಅವರು ನಿರ್ಮಿಸಿ ನಿರ್ದೇಶಿಸಿದ ದೂರದರ್ಶನ ಸರಣಿ ಗುಡ್ಡದ ಭೂತ ಕರ್ನಾಟಕದ ಜನಮನಕ್ಕೆ ಲಗ್ಗೆ ಇಡುವುದರ ಜೊತೆ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಇವಲ್ಲದೆ ಅವರು ರಾಜ್ಯ ಪ್ರಶಸ್ತಿ ವಿಜೇತ ಕುಬಿ ಮತ್ತು ಇಯಾಲ ಚಲನಚಿತ್ರವನ್ನೂ ಕಾರಂತ ದರ್ಶನವೆನ್ನುವ ಸರಣಿ ಹಾಗೂ ಶ್ರೀ ನಾರಾಯಣ ಗುರುಗಳ ಬಗ್ಗೆ ಸಾಕ್ಷಚಿತ್ರವೊಂದನ್ನೂ ನಿರ್ದೇಶಿಸಿದ್ದಾರೆ. 1997ರ ನಂತರ ಮುಂಬೈ ತೊರೆದು ಮಂಗಳೂರಲ್ಲಿ ನಲೆಸಿದ ಅವರು ಇಲ್ಲಿ ನಿರ್ದೇಶಿಸಿದ ಉರುಳು, ಕೋರ್ಟ್‌ ಮಾರ್ಷಲ್, ಮಳೆ ನಿಲ್ಲುವವರೆಗೆ ನಾಟಕಗಳು ಬಹಳ ಪ್ರದರ್ಶನಗಳನ್ನು ಕಂಡಿವೆ. ಕಲಂಕ್‌ದಿ ನೀರ್ ಎಂಬ ತುಳು ನಾಟಕವನ್ನೂ ಮಂಗಳೂರಲ್ಲಿ ಅವರು ನಿರ್ದೇಶಿಸಿದ್ದಾರೆ. ಹೀಗಾಗಿ ಅವರ ಸ್ಮರಣೆಯಲ್ಲಿ ಆಗಸ್ಟ್ 31ರಂದು ಉರ್ವಾ ಸ್ಟೋರ್ ಬಳಿಯ ತುಳುಭವನದಲ್ಲಿ ಒಂದು ದಿವಸದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ“ ಎಂದು ರಂಗಕರ್ಮಿ ಚಂದ್ರಹಾಸ ಉಳ್ಳಾಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಬಳಿಕ ಮಾತಾಡಿದ ನಟೇಶ್ ಉಳ್ಳಾಲ್, ”ಆ ದಿನ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅವರ ಸಿನಿಮಾ, ಸರಣಿಗಳು, ತುಳು ಕನ್ನಡ ರಂಗಭೂಮಿಗೆ ಅವರ ಕೊಡುಗೆಗಳ ಬಗ್ಗೆ ಉಪನ್ಯಾಸ, ಸಂವಾದ ಗೋಷ್ಠಿ ಮತ್ತು ಸಮಾರೋಪದಲ್ಲಿ ಸಂಜೆ 6.30ಕ್ಕೆ ಅವರು ನಿರ್ದೇಶಿಸಿದ ಕೋರ್ಟ್‌ ಮಾರ್ಷಲ್ ನಾಟಕ ಪ್ರದರ್ಶಿಸುತ್ತಿದ್ದೇವೆ. ವಿವಿಧ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜರ್ನಿ ಥೇಟರ್‌ಗ್ರೂಪ್ (ರಿ) ಮಂಗಳೂರು, ಅಸ್ತಿತ್ವ (ರಿ)ಮಂಗಳೂರು, ಕಲಾಸಂಗಮ (ರಿ) ಮಂಗಳೂರು, ಸಂಕೇತ್ ಕಲಾವಿದರು (ರಿ) ಮಂಗಳೂರು, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಮಂಗಳೂರು, ಅರೆಹೊಳ ಪ್ರತಿಷ್ಠಾನ (ರಿ) ಮಂಗಳೂರು, ಸಮುದಾಯ ಮಂಗಳೂರು, ಆಯನ ನಾಟಕದ ಮನೆ ಮಂಗಳೂರು, ಭೂಮಿಕಾ (ರಿ) ಮಂಗಳೂರು ಮತ್ತು ಕಾರಂತೋತ್ಸವ ಸಮಿತಿ ಮುಂಬೈ ಇದರಲ್ಲಿ ಪಾಲ್ಗೊಳುತ್ತಿದೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ಆ.31: ಅಲೋಶಿಯನ್ ಫೆಸ್ಟ್ 2024. ಪಿಯು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ಉತ್ಸವ ಆಯೋಜನೆ

ಮಂಗಳೂರು: “ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ಅಲೋಶಿಯಸ್ ಫೆಸ್ಟ್ 2024 ಇದರ ಉದ್ಘಾಟನಾ ಸಮಾರಂಭವನ್ನು ಎಲ್.ಸಿ.ಆರ್.ಐ. ಸಭಾಂಗಣದಲ್ಲಿಶನಿವಾರ, ಆಗಸ್ಟ್ 31 ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ“ ಎಂದು ಕುಲಪತಿ ವಂ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಬಳಿಕ ಮಾತಾಡಿದ ಸಹಆಯೋಜಕಿ ಭವ್ಯಾ ಶೆಟ್ಟಿ ”ಕಾಲೇಜಿನ ಹಳೆ ವಿದ್ಯಾರ್ಥಿ ಕೆಂಡಸಂಪಿಗೆ ಖ್ಯಾತಿಯ ನಟಿ ಮಾನ್ವಿತಾ ಕಾಮತ್ ಅವರು ಈ ಉತ್ಸವದ ಉದ್ಘಾಟನೆಯನ್ನು ನಡೆಸಲಿದ್ದಾರೆ. ಗೌರವ ಅತಿಥಿಯಾಗಿ ಲೇಖಕಿ ಸೆರಾ ಫೆಲೆಕ್ಸ್ ಆಗಮಿಸಲಿದ್ದು ಅವರು ಬರೆದಿರುವ ‘ಎ ಕ್ರೈ ಹರ್ಡ್ ಆಸ್ ಎ ಸಾಂಗ್’ ಎನ್ನುವ ಪುಸ್ತಕಈ ವೇಳೆ ಬಿಡುಗಡೆಗೊಳ್ಳಲಿದೆ. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಮಾಧಿಕಾರಿ ವಂ.ಮೆಲ್ವಿನ್ ಜೋಸೆಫ್‌ ಪಿಂಟೋ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.ಈ ಉತ್ಸವವು ‘ಹಬ್ಬಗಳ ಹಬ್ಬ’ ಹಾಗೂ ‘ಸಾಂಸ್ಕೃತಿಕ ಹಬ್ಬ’ ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗುವುದು, ‘ಹಬ್ಬಗಳ ಹಬ್ಬ’ದಲ್ಲಿ ಒಟ್ಟು 31 ಶೈಕ್ಷಣಿಕ ಸ್ಪರ್ಧೆಗಳನ್ನು ಕಲಾ, ವಾಣಿಜ್ಯ, ವಿಜ್ಞಾನ, ಬಿಸಿಎ, ಬಿಬಿಎ, ಬಿವೋಕ್ ಹಾಗೂ ವಿಜ್ಞಾನ ಪ್ರದರ್ಶನಗಳು ಹಾಗೂ ಸಾಂಸ್ಕೃತಿಕ ಹಬ್ಬಗಳಲ್ಲಿ ಶಾಸ್ತ್ರೀಯ ನೃತ್ಯ ಫೇಸ್ ಪೈಂಟಿಂಗ್, ಮೆಹೆಂದಿ, ಕಸದಿಂದ ರಸ್ತೆ ಹಾಗೂ ವೈವಿದ್ಯಮ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ“ ಎಂದರು.ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಅದ್ವಿಕಾ ಶೆಟ್ಟಿ ಮಾತನಾಡಿ ”ಸಮಾರೋಪ ಸಮಾರಂಭವು ಅಪರಾಹ್ನ ಗಂಟೆಗೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಳೆಯ ವಿದ್ಯಾರ್ಥಿ ಉದ್ಯಮಿಕನ್ಯಾನ ಸದಾಶಿವ ಶೆಟ್ಟಿಯವರು ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರವೀಣ್ ಮಾರ್ಟಿಸ್, ಎಸ್‌.ಜೆ, ಅವರು ವಹಿಸಲಿದ್ದಾರೆ. ವಿವಿಧ ಕಾಲೇಜುಗಳ 1000 ವಿದ್ಯಾರ್ಥಿಗಳನ್ನು ಒಳಗೊಂಡ ಸುಮಾರು 37 ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ಉಪಕುಲಪತಿ ಡಾ.ರೇಜಿ ಜಾನ್, ವ್ಯಾನ್ಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಆ.31-ಸೆ.1: ಮಂಗಳೂರಲ್ಲಿ 2ನೇ ಆವೃತ್ತಿಯ “ಕಬಡ್ಡಿ ಪ್ರೀಮಿಯರ್ ಲೀಗ್”

ಮಂಗಳೂರು: “ಶೆಫ್ ಟಾಕ್ ಸೀಸನ್ -2 ಕಬಡ್ಡಿ ಪ್ರೀಮಿಯರ್ ಲೀಗ್ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿದ್ದು ಆಗಸ್ಟ್ 30ರಂದು ಆಹಾರೋತ್ಸವದ ಉದ್ಘಾಟನೆ ನಡೆಯಲಿದೆ. ಇದನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಆಗಸ್ಟ್ 31ರಂದು ಕಬಡ್ಡಿ ಪಂದ್ಯಾಟದ ಉದ್ಘಾಟನೆ ನಡೆಯಲಿದ್ದು ಇದನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌ ಉದ್ಘಾಟಿಸಲಿದ್ದಾರೆ“ ಎಂದು ಕಾರ್ಯಕ್ರಮ ಆಯೋಜಕ ಸುದೇಶ್ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಬಳಿಕ ಮಾತಾಡಿದ ಗೌರವ ಸಲಹೆಗಾರ ವಿಶ್ವಾಸ್ ದಾಸ್ ಅವರು, ”ಕಳೆದ ವರ್ಷ ನಡೆದ ಸೀಸನ್ 1 ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಈ ವರ್ಷ ಗೌರವಾಧ್ಯಕ್ಷ ಪ್ರಕಾಶ್ ಕುಂಪಲ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಕಬಡ್ಡಿ ಟೂರ್ನಮೆಂಟ್ ಜೊತೆಗೆ ಈ ಬಾರಿ ಆಹಾರೋತ್ಸವ ಮತ್ತು ವಿನೋದ ಮೇಳವನ್ನು ಕೂಡಾ ಆಯೋಜಿಸಿದ್ದೇವೆ. ಜೊತೆಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಡಾ. ಸದಾನಂದ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಸದಾಶಿವ ಉಳ್ಳಾಲ ಪಾಲ್ಗೊಳ್ಳಲಿದ್ದಾರೆ. ಬಹುಮಾನ ವಿತರಣೆಯನ್ನು “ಶೆಫ್ ಟಾಕ್ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್”ನ ಮ್ಯಾನೇಜಿಂಗ್ ಡೈರೆಕ್ಟರ್ ಗೋವಿಂದ ಬಿ. ಪೂಜಾರಿ ಅವರು ನೆರವೇರಿಸಲಿದ್ದಾರೆ“ ಎಂದರು. ಮಾಜಿ ಶಾಸಕರು ಬಿಎ ಮೊಯಿದೀನ್ ಬಾವಾ ಮಾತಾಡಿ, ”ಈ ವರ್ಷ ಕಬಡ್ಡಿ ಟೂರ್ನಮೆಂಟ್‌ನಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಅಸ್ರಾ ಬ್ರಿಗೇಡ್ಸ್, ಲೈಫ್ ಲೈನ್ಸ್ ಫಾಲ್ಕನ್ಸ್, ಟೀಮ್ ಬಾವ, ಯು ಕುಂಜತ್ತೂರು, ಮಂಗಳೂರು ಯುನೈಟೆಡ್ ಕಬಡ್ಡಿ ಕ್ಲಬ್, ಪ್ರಕಾಶ್ ಕುಂಪಲ ವಾರಿಯರ್ಸ್, ಕರ್ನಾಟಕ ತುಳುವಾಸ್ ನೈಜೀರಿಯಾ, ಮತ್ತು ನ್ಯೂ ಸ್ಟಾರ್ ಮಂಗಳೂರು ಈ ತಂಡಗಳ ಆಟಗಾರರನ್ನು ಆಗಸ್ಟ್ 20ರಂದು ಸೀವೂ ಹೋಟೆಲ್‌ನಲ್ಲಿ ನಡೆದ ಹರಾಜು ಮೂಲಕ ಆಯ್ಕೆ ಮಾಡಲಾಗಿತ್ತು, ಒಟ್ಟು 99 ಆಟಗಾರರು ಆಯ್ಕೆಯಾಗಿದ್ದಾರೆ.ಈ ವರ್ಷ ನಾವು 100+ ಆಹಾರ ಮಳಿಗೆಗಳನ್ನು ನಿರೀಕ್ಷಿಸುತ್ತಿದ್ದೇವೆ. ಅವು ವಿವಿಧ ರೀತಿಯ ರುಚಿಕರ ಆಹಾರಗಳನ್ನು ಒದಗಿಸುತ್ತವೆ. ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ 2 ರಲ್ಲಿ 2 ಲಕ್ಷಕ್ಕಿಂತ ಹೆಚ್ಚು ವೀಕ್ಷಕರನ್ನು ನಿರೀಕ್ಷಿಸಲಾಗಿದ್ದು ಇದು ದಕ್ಷಿಣ ಭಾರತದ ಅತ್ಯಂತ ದೊಡ್ಡ ಈವೆಂಟ್ ಆಗಿರುವುದರ ನಿರೀಕ್ಷೆ ಇದೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ಹರೀಶ್ ನಾಯಕ್, ಅಝ್ಪರ್ ರಜಾಕ್, ಕರುಣಾಕರ್, ಹಮೀದ್ ಅಮ್ಮಿ, ದೀಪಕ್ ಪಿಲಾರ್, ವಿನೋದ್ ಶೆಟ್ಟಿ, ಸುಕೇಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕೊಡಮಾಡುವ 2022 ಮತ್ತು 2023ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಆರು ಮಂದಿ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. 2022ನೇ ಸಾಲಿನಲ್ಲಿ ಹಂಝತುಲ್ಲಾಹ್‌ ಕುವೇಂಡ ಬೆಂಗಳೂರು (ಬ್ಯಾರಿ ಭಾಷೆ ಮತ್ತು ಸಂಘಟನೆ), ಮರಿಯಮ್‌ ಇಸ್ಮಾಈಲ್‌ ಉಳ್ಳಾಲ (ಬ್ಯಾರಿ ಸಾಹಿತ್ಯ) ಮತ್ತು ಎಂ.ಜಿ. ಶಾಹುಲ್‌ ಹಮೀದ್‌ ಗುರುಪುರ (ಬ್ಯಾರಿ ಸಂಸ್ಕೃತಿ ಮತ್ತು ಕಲೆ) ಹಾಗೂ 2023ನೇ ಸಾಲಿನಲ್ಲಿ ಟಿ.ಎ. ಆಲಿಯಬ್ಬ ಜೋಕಟ್ಟೆ (ಬ್ಯಾರಿ ಭಾಷೆ ಮತ್ತು ಸಂಘಟನೆ), ಅಶ್ರಫ್‌ ಅಪೋಲೊ ಕಲ್ಲಡ್ಕ (ಬ್ಯಾರಿ ಸಂಸ್ಕೃತಿ ಮತ್ತು ಕಲೆ) ಮತ್ತು ಮುಹಮ್ಮದ್‌ ಶರೀಫ್‌ ನಿರ್ಮುಂಜೆ (ಬ್ಯಾರಿ ಸಾಹಿತ್ಯ) ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಅಕಾಡೆಮಿಯ ಮಾಜಿ ಅಧ್ಯಕ್ಷ ಮುಹಮ್ಮದ್‌ ಕರಂಬಾರು, ಮಾಜಿ ಸದಸ್ಯರಾದ ಅತ್ತೂರು ಚೆಯ್ಯಬ್ಬ, ಆಯಿಶಾ ಯು.ಕೆ. ಮತ್ತು ಹುಸೈನ್‌ ಕಾಟಿಪಳ್ಳ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದು ಸಹಕರಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಯಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ.ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆ. 6ರಂದು ಸಂಜೆ 4.30ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಉಮರ್‌ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಮುಸ್ಲಿಮ್ ಬರಹಗಾರರ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿವರ್ಷ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕನ್ನಡ ಕೃತಿಗೆ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದ್ದು, 2023ನೇ ಸಾಲಿನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ.ಆಸಕ್ತ ಮುಸ್ಲಿಮ್ ಬರಹಗಾರರು ಕನ್ನಡದಲ್ಲಿ ಪ್ರಕಟಿತ 2023ನೇ ಸಾಲಿನ ಕೃತಿಯ ನಾಲ್ಕು ಪ್ರತಿಗಳನ್ನು ಸೆಪ್ಟೆಂಬರ್ 10ರ ಒಳಗಾಗಿ ಸಂಚಾಲಕರು, ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ, ಮುಸ್ಲಿಮ್ ಲೇಖಕರ ಸಂಘ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು–575001(ದೂ.ಸಂ. 9845054191, 0824-2410358) ಈ ವಿಳಾಸಕ್ಕೆ ಕಳುಹಿಸು ವಂತೆ ಕೋರಲಾಗಿದೆ.ಅನುವಾದಿತ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಹಾಗೂ ಪ್ರಶಸ್ತಿಗಾಗಿ ಕಳುಹಿಸುವ ಕೃತಿಗಳನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊರ ರಾಜ್ಯ ವಾರ್ತೆಗಳು

ಅಜೆಕಾರು ಬಳಗ ಆಶ್ರಯದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರ ಕೃತಿದ್ವಯ ಲೋಕಾರ್ಪಣೆ – ಸರಣಿ ತಾಳಮದ್ದಳೆ. ‘ತುಳುನಾಡಿನ ಜನರಲ್ಲಿ ಜಾತಿ ಸಂಕಟವಿಲ್ಲ: ಡಾ.ಸುನೀತಾ ಎಂ. ಶೆಟ್ಟಿ

ಮುಂಬಯಿ: ‘ತುಳುನಾಡು ಸಂಸ್ಕೃತಿ ಸಂಸ್ಕಾರಗಳಿಗೆ ಹೆಸರಾಗಿದೆ. ಇಲ್ಲಿನ ಜನರಲ್ಲಿ ಜಾತಿ ಸಂಕಟವಿಲ್ಲ; ಮತ- ಧರ್ಮಗಳ ಸಂಘರ್ಷವಿಲ್ಲ. ಆದ್ದರಿಂದ ತುಳುವರ ಸಾಹಿತ್ಯ ಕೃತಿಗಳಲ್ಲಿ ಸಮಕಾಲೀನ ಸಂಗತಿಗಳೊಂದಿಗೆ ಸಹಬಾಳ್ವೆ – ಸಮಭಾವಗಳ ಸಂದೇಶವಿರುತ್ತದೆ. ಭಾಸ್ಕರ ರೈಯವರ ಗದ್ಯ ಮತ್ತು ಕಾವ್ಯ ಕೃತಿಗಳಲ್ಲಿ ಇದು ಹಾಸು ಹೊಕ್ಕಾಗಿರುವುದರಿಂದ ನಾಡು – ಹೊರನಾಡುಗಳಲ್ಲಿ ಅವರದೇ ಆದ ಅಭಿಮಾನಿ ವರ್ಗ ಸೃಷ್ಟಿಯಾಗಿದೆ’ ಎಂದು ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಹೇಳಿದ್ದಾರೆ. ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ಆಗಸ್ಟ್ 24ರಂದು ಕವಿ-ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಎರಡು ಕವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ 2024ನೇ ಸಾಲಿನ ಯಕ್ಷಗಾನ ತಾಳಮದ್ದಳೆ ಸರಣಿಯನ್ನು ಅಂಬಿಕಾ ಮಂದಿರದ ಧರ್ಮದರ್ಶಿ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್ ದೇವಿ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.ಮುಂಬೈಯ ಹಿರಿಯ ಯಕ್ಷಗಾನ ಅರ್ಥಧಾರಿ ಕೆ. ಕೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಾಧನೆಗೆ ಯಕ್ಷಗಾನ ಪೂರಕ: ಪೆರ್ಣಂಕಿಲ ಹರಿದಾಸ ಭಟ್ಇದೇ ಸಂದರ್ಭದಲ್ಲಿ ಮೈಸೂರಿನ ರಾಜ್ ಪ್ರಕಾಶನವು ಪ್ರಕಟಿಸಿದ ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೃಷ್ಟಿ ಸಿರಿಯಲ್ಲಿ ಪುಷ್ಪವೃಷ್ಠಿ’ : ಭಾವ – ಅನುಭಾವ ಗೀತೆಗಳ ಗುಚ್ಛ ಕನ್ನಡ ಕವನ ಸಂಕಲನವನ್ನು ಹರಿದಾಸ ಭಟ್ ಅನಾವರಣಗೊಳಿಸಿದರು. ಅವರು ಮಾತನಾಡಿ ‘ ಯಕ್ಷಗಾನ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕ. ಭಾಸ್ಕರ ರೈಯವರು ಸ್ವತಃ ಯಕ್ಷಗಾನ ಕಲಾವಿದರಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಅವರು ರಚಿಸಿದ ಭಕ್ತಿ ಹಾಗೂ ಭಾವಗೀತೆಗಳು ವಿವಿಧ ಧ್ವನಿಸುರುಳಿಗಳ ಮೂಲಕ ಜನಪ್ರಿಯವಾಗಿವೆ’ ಎಂದರು.‘ಸೀಯನ’ ಚೀಪೆ ಕೋಪೆದ ಪಾಕ ಕಬಿತೆಲು – ತುಳು ಕವಿತಾ ಸಂಕಲನವನ್ನು ಡಾ. ಸುನೀತಾ ಎಂ. ಶೆಟ್ಟಿ ಬಿಡುಗಡೆಗೊಳಿಸಿದರು. ‘ಸಬಿ,ಸೀಪೆ,ಸುಗಿಪು ಸೀಯನವೆಂಬ ಮೂರು ವಿಭಾಗಗಳಲ್ಲಿ ತುಳು ಭಾಷೆಯ ಬನಿ ಮತ್ತು ಶಬ್ಧ ಸಮೃದ್ಧಿ ಕುಕ್ಕುವಳ್ಳಿಯವರ ಕವಿತೆಗಳಲ್ಲಿ ಎದ್ದು ತೋರುತ್ತವೆ’ ಎಂದವರು ನುಡಿದರು.ಯಕ್ಷಗಾನ ಕಲಾವಿದ, ಲೇಖಕ ಸದಾಶಿವ ಆಳ್ವ ತಲಪಾಡಿ ಕೃತಿ ಪರಿಚಯ ನೀಡಿ ಎರಡೂ ಕವನ ಸಂಕಲನಗಳನ್ನು ವಿಶ್ಲೇಷಿಸಿದರು‌. ಮುಂಬಯಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಶುಭ ಹಾರೈಸಿದರು.‘ಪುಣ್ಯನೆಲ ಪೆರ್ಣಂಕಿಲ’ ಧ್ವನಿಸುರುಳಿಗೆ ಬೆಂಗಳೂರಿನ ಡಾ.ವಿದ್ಯಾಭೂಷಣರುಹಾಡಿದ ಕವಿ ಕುಕ್ಕುವಳ್ಳಿ ವಿರಚಿತ ಗಣೇಶ ಸ್ತುತಿಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕೃತಿ ಕರ್ತ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. *’ತುಳುನಾಡ ಬಲೀಂದ್ರೆ- ಜಾಬಾಲಿ ನಂದಿನಿ’ ತಾಳಮದ್ದಳೆ:ಉದ್ಘಾಟನಾ ಸಮಾರಂಭದ ಬಳಿಕ ತಾಳಮದ್ದಳೆ ಸರಣಿಯ ಮೊದಲ ಕಾರ್ಯಕ್ರಮವಾಗಿ ‘ತುಳುನಾಡ ಬಲೀಂದ್ರೆ’ (ತುಳು), ‘ಜಾಬಾಲಿ-ನಂದಿನಿ’ (ಕನ್ನಡ) ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ ಹಾಗೂ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಹಿಮ್ಮೇಳದಲ್ಲಿದ್ದರು. ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ಗುರುತೇಜ ಶೆಟ್ಟಿ ಒಡಿಯೂರು ಅರ್ಥಧಾರಿಗಳಾಗಿ ಪಾತ್ರ ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಸಮಾಜಕ್ಕೆ ಕೊಡುಗೆ ನೀಡುವ ಉನ್ನತ ಗುರಿಯೊಂದಿಗೆ ಮುನ್ನಡೆಯಿರಿ-ಮುಲ್ಲೈ ಮುಗಿಲನ್. ಪತ್ರಕರ್ತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.

ಮಂಗಳೂರು,ಆ.25; ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುವ ಉನ್ನತ ಗುರಿಯೊಂದಿಗೆ ಮುನ್ನಡೆಯಿರಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಯುವ ವಿದ್ಯಾರ್ಥಿ ಗಳಿಗೆ ಕರೆ ನೀಡಿದರು.ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ರವಿವಾರ 2023-24 ರ ಸಾಲಿನಲ್ಲಿ ಪಿ ಯು ಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 90 ಕ್ಕೂ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿ ಮಾತನಾಡುತ್ತಿದ್ದರು.ಶಿಕ್ಷಣ ನಮ್ಮನ್ನು ಸಮಾಜ ಮುಖಿಯಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಸಮಾಜದ ಸರಿ ತಪ್ಪುಗಳನ್ನು ಗುರಿತಿಸಲು ಸಹಾಯ ಮಾಡಬೇಕು.‌ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉನ್ನತ ಗುರಿಯೊಂದಿಗೆ ನಿರಂತರ ಪ್ರಯತ್ನ ಪಡಬೇಕು ಆ ಗುರಿ ಬದುಕನ್ನು ಅರ್ಥ ಪೂರ್ಣ ಗೊಳಿಸು ವಂತಿರಬೇಕು.ಪತ್ರ ಕರ್ತರು ಪ್ರಾಕೃತಿಕ ವಿಕೋಪಗಳಾದ,ಜನರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿರುವ ರೀತಿ ಅವರ ಘನತೆಯನ್ನು ಹೆಚ್ಚಿಸಿದೆ ಅದಕ್ಕಾಗಿ ಅವರಿಗೆ ತಾನು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಶಿರೂರು ದುರಂತದ ಸಂದರ್ಭ ಮಾನವೀಯ ಕೆಲಸ ಮಾಡಿರುವ ಪತ್ರಕರ್ತರ ಕಾರ್ಯ ರಾಜ್ಯದ ಎಲ್ಲ ಪತ್ರಕರ್ತರಿಗೆ ಹೆಮ್ಮೆ ತಂದಿದೆ. ಅದೇ ರೀತಿ ಬೆಂಗಳೂರಿನ ಅಂಡರ್‌ ಪಾಸ್ ನಲ್ಲಿ ಕಾರು ನೀರಿಗೆ ಸಿಕ್ಕಿದ ಸಂದರ್ಭದಲ್ಲಿ ಜೀವ ಉಳಿಸಿದ್ದೂ ಕೂಡಾ ಇಬ್ಬರು ಪತ್ರಕರ್ತರು . ಇವರಿಗೆ ಸನ್ಮಾನ ಮಾಡಿರುವುದು ನನಗೆ ಖುಷಿ ಕೊಟ್ಟಿದೆ. ಪತ್ರಕರ್ತರು ಮಾನವೀಯ ಕಾರ್ಯ ಮಾಡಿದಾಗ ಬೆನ್ನುತಟ್ಟಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು. ಮನೆಮನೆಗೆ ಬೆಳಗ್ಗೆಪತ್ರಿಕೆ ವಿತರಿಸುವ ಪತ್ರಿಕಾ ವಿತರಕರ ಕಾಯಕಕ್ಕೆ ಸರಿಸಾಟಿ ಯಾವುದೂ ಇಲ್ಲ.ಇಂತಹ ಕೆಲಸವನ್ನು ನಿರಂತರ 62 ವರ್ಷಗಳ ಕಾಲ ಮಾಡಿರುವ ರಮೇಶ್ ಅವರ ಕಾರ್ಯಕ್ಕೆ ನಾವು ಋಣಿಯಾಗಿರಬೇಕು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ಮೂರು ವರ್ಷಗಳಿಂದ ಪತ್ರಕರ್ತರ ಮಕ್ಕಳಿಗೆ ರಾಜ್ಯಮಟ್ಟ,‌ ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಸನ್ಮಾನ ಮಾಡುತ್ತಿದೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಏನಾದರೂ ಅನಾಹುತ ಆದರೆ ಅವರ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುತ್ತಾ ಬಂದಿದೆ ಎಂದರು.ಇದೇ ಸಂದರ್ಭದಲ್ಲಿ 64 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ 82ರ ಹರೆಯದ ರಮೇಶ್, ವಿನೂತನ ರೀತಿಯಲ್ಲಿ ಮತದಾನ ಹಾಗೂ ಡೆಂಗ್ಯು ಜಾಗೃತಿ ಮೂಡಿಸಿದ ಸನ್ನಿಧಿ ಕಶೆಕೋಡಿ, ಶಿರೂರು ಗುಡ್ಡ ಕುಸಿತ ಸಂದರ್ಭ ವೃದ್ಧೆಯ ಅಂತಿಮ ಸಂಸ್ಕಾರ ನೆರವೇರಿಸಿ ಮಾನವೀಯತೆಯನ್ನು ಸಾರಿದ ಪತ್ರಕರ್ತರನ್ನು ಸನ್ಮಾನಿಸಲಾಯಿತು.ಬಿಜೈ ಅಂಗನವಾಡಿಗೆ ಎರಡು ಫ್ಯಾನ್ ಗಳನ್ನು ಹಸ್ತಾಂತರಿಸಲಾಯಿತು.2023-24ನೆ ಸಾಲಿನ ಪಿಯುಸಿಯ ಪ್ರತಿಭಾ ವಂತ ವಿದ್ಯಾರ್ಥಿಗಳಾದ ತೇಜಸ್ ಕಿಣಿ,ಅವನಿ ಪಿ.ಬಂಗ,ದೀಪ್ತಿಭಟ್ ಹಾಗೂ ಎಸ್ ಎಸ್ ಎಲ್ ಸಿಯ ವಿದ್ಯಾರ್ಥಿ ಗಳಾದ ಬಿ.ಆರ್.ಶ್ರೀ ಹರಿ,ತಂಝಿಲ್ ರಹಮಾನ್,ಮನೀಶ್ ಎಸ್ ಶೆಟ್ಟಿ, ಮುಹಮ್ಮದ್ ಶೆಫಿಕ್,ಮಾಧವ ಕಾಮತ್,ದೇವಾಂಶು,ಸುಧನ್ವ ಕೆ.ಬಿ ಯವರನ್ನು ಪುರಸ್ಕರಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಹಿರಿಯ ಪತ್ರಕರ್ತ ಆನಂದ್ ಶೆಟ್ಟಿ, ರಾಜ್ಯ ಪತ್ರಕರ್ತರ ಸಂಘದ ಕಾರ್ಯ ಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ,ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ,ರಾಜೇಶ್ ಶೆಟ್ಟಿ,ನಿಶಾಂತ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇ ಶ್ವರ ವಂದಿಸಿದರು.ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ವಾರ್ತೆಗಳು

ದಕ್ಷಿಣ ಭಾರತದ ಸುಪ್ರಸಿದ್ದ, ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರಧ್ವಜ್ ನಿರ್ದೇಶನದ ಪ್ರೊಡಕ್ಷನ್ ನಂಬರ್ 14 ಅಮೃತ್ ಫಿಲಂಸ್ ಸೆಂಟರ್ ಅವರ ಭಾರೀ ನಿರೀಕ್ಷೆಯ ಬಹುಭಾಷಾ ಸಿನೆಮಾ “ಹೇ ಪ್ರಭು “ವಿನಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿ ಗ್ರಾಮೀಣ ವೈದ್ಯಕೀಯದ ಬಗ್ಗೆ ನೈಜ ಅಭಿನಯದ ಮೂಲಕ ಮಹತ್ವ ಸಾರಿದ ಹೊರನಾಡ ಕನ್ನಡ ರತ್ನ ಡಾ. ಸುಧಾಕರ್ ಶೆಟ್ಟಿ.

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಬೆಂಗಳೂರು :ವೈದ್ಯಕೀಯ ಸಮಾಜ ಸೇವೆ ಮೂಲಕ ರಾಷ್ಟ್ರ -ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನೆ ಮಾತಾಗಿರುವ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರು ದಕ್ಷಿಣ ಕನ್ನಡದ ಮೂಡಬಿದ್ರಿಯ ಪ್ರತಿಷ್ಠಿತ ಬಂಟ ಮನೆತನದ ಹಿನ್ನಲೆ ಹೊಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪುಣೆಯಲ್ಲಿದ್ದ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರಿಗೆ ಚಿಕಿತ್ಸೆ ನೀಡಿದ ಡಾ. ಸುಧಾಕರ್ ಶೆಟ್ಟಿಯವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚಾರ್ ಸಹಿ ಬಜಾದೆ ಅವಾರ್ಡ್, ಕಂಟೋನೂಮೆಂಟ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ ಪಡೆದಿರುವ ಡಾ. ಸುಧಾಕರ್ ಶೆಟ್ಟಿಯವರು ಪುಣೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಬೇಬಿ ಫ್ರೆಂಡ್ ಮಕ್ಕಳ ಕ್ಲಿನಿಕ್ ನ್ನು ನಡೆಸುತ್ತಿದ್ದೂ, ಪುಣೆಯ ಹೆಸರಾಂತ ಆಸ್ಪತ್ರೆಗಳಲ್ಲಿ ಪ್ರೊಫೆಸರ್ ಆಗಿದ್ದಾರೆ. ಮೂಡಬಿದ್ರಿಯ ಆಳ್ವಾಸ್ ಮೆಡಿಕಲ್ ಕಾಲೇಜ್ ನಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದಾರೆ. ಪುಣೆಯಲ್ಲಿ ಸ್ಲಂ ಮಕ್ಕಳಿಂದ ಎಲ್ಲ ವರ್ಗದ ಮಕ್ಕಳ ತನಕ ಸಾವಿರಾರು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿರುವ ಅವರು ಮೂಡಬಿದ್ರಿಯಲ್ಲಿ ಮಕ್ಕಳ ಸಂಚಾರಿ ಕ್ಲಿನಿಕ್ ನ್ನು ಡಾ. ಮೋಹನ್ ಆಳ್ವರ ಸಹಕಾರದೊಂದಿಗೆ ಕಳೆದೊಂದು ವರ್ಷಗಳಿಂದ ನಡೆಸುತ್ತಿದ್ದಾರೆ. ವೈದ್ಯಕೀಯ ಜಗತ್ತಿನಲ್ಲಿ ನೇರ ನಡೆ ನುಡಿಯ ಕಠಿಣ ಪರಿಶ್ರಮಿ, ದಣಿವರಿಯದ ವೈದ್ಯರಾಗಿರುವ ಇವರು ಹೊರನಾಡ ಕನ್ನಡ ರತ್ನ ಪ್ರಶಸ್ತಿಗೂ ಭಾಜನಾರಾಗಿದ್ದಾರೆ. ಡಾ. ಸುಧಾಕರ್ ಶೆಟ್ಟಿಯವರ ಜನಪ್ರಿಯತೆ ಇದೀಗ ಅವರನ್ನು ಸಿನೆಮಾ ಜಗತ್ತಿನಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸುವ ಪಾತ್ರಕ್ಕೆ ಸ್ವತಃ ಬಹುಭಾಷಾ ನಿರ್ದೇಶಕರೊಬ್ಬರು ಆಹ್ವಾನ ಕೊಟ್ಟಿದ್ದು, ಆಗಸ್ಟ್ 24 ರಂದು ಅದರಂತೆ ಡಾ. ಸುಧಾಕರ್ ಶೆಟ್ಟಿಯವರು ಪುಣೆಯಿಂದ ಬೆಂಗಳೂರಿಗೆ ಬಂದು’ ಹೇ ಪ್ರಭು ‘ ಎಂಬ ಭಾರೀ ನಿರೀಕ್ಷೆಯ ಬಹು ಭಾಷಾ ಸಿನೆಮಾದಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸಿದ್ದಾರೆ. ಬೆಂಗಳೂರಿನ ಬೆಂಗಳೂರು -ಮೈಸೂರು ರೋಡ್ ನಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಾ. ಸುಧಾಕರ್ ಶೆಟ್ಟಿಯವರು ಅಭಿನಯಿಸಿದ ಚಿತ್ರದ ಚಿತ್ರೀಕರಣ ನಡೆದಿದೆ. ಗ್ರಾಮೀಣ ವೈದ್ಯಕೀಯ ಕ್ಷೇತ್ರದ ಬಗ್ಗೆ ಮಹತ್ವ ಸಾರುವ ಸಂದೇಶವನ್ನು ಡಾ. ಸುಧಾಕರ್ ಶೆಟ್ಟಿಯವರ ಮೂಲಕ ಚಿತ್ರದ ನಿರ್ದೇಶಕ ವೆಂಕಟ್ ಭಾರಧ್ವಜ್ ಅವರು ನೀಡಿದ್ದಾರೆ. ‘ ಹೇ ಪ್ರಭು’ ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಇದು ಅಮೃತ ಫಿಲಂಸ್ ಸೆಂಟರ್ ಅವರ ಸಿನೆಮಾವಾಗಿದೆ. ವೆಂಕಟ್ ಭಾರಧ್ವಜ್ ನಿರ್ದೇಶನದ ಪ್ರೊಡಕ್ಷನ್ ನಂ-14 ಬಹುನಿರೀಕ್ಷೆಯ ಸಿನಿಮಾವಾಗಿದೆ. ಹಳ್ಳಿಗೆ ಹೋಗಲಿಚ್ಚಿಸದ ಚಿತ್ರದ ನಾಯಕ ಯುವ ವೈದ್ಯನಿಗೆ ಗ್ರಾಮೀಣ ವೈದ್ಯಕೀಯದ ಮಹತ್ವವನ್ನು ತಿಳಿಸುವ ಪಾತ್ರದಲ್ಲಿ ಡಾ. ಸುಧಾಕರ್ ಶೆಟ್ಟಿಯವರು ನೈಜ ಅಭಿನಯ ನೀಡಿದ್ದು, ಚಿತ್ರೀಕರಣದ ವೇಳೆ ಅನುಭವದ ಮಾತುಗಳನ್ನಾಡಿದ್ದಾರೆ. ವೆಂಕಟ್ ಭಾರದ್ವಜ್ ಅವರು ಅತ್ಯಂತ ಪ್ರತಿಭಾವಂತ, ಅತ್ಯುತ್ತಮ ಮತ್ತು ಪ್ರಶಸ್ತಿ ವಿಜೇತ ನಿರ್ದೇಶಕರಾಗಿದ್ದು, ಡಾ. ಸುಧಾಕರ್ ಶೆಟ್ಟಿಯವರು ಹೆಸರಾಂತ ಹಾಗೂ ಹಿರಿಯ ಅನುಭವಿ ಜನಪ್ರಿಯ ವೈದ್ಯರಾಗಿದ್ದು ಈ ಚಿತ್ರದ ವೈದ್ಯಕೀಯ ಪ್ರೊಫೆಸರ್ ಪಾತ್ರಕ್ಕೆ ನೈಜಕ್ಕೆ ಹೆಚ್ಚು ಒತ್ತು ಕೊಡುವ ದೃಷ್ಟಿಯಿಂದ ಅವರನ್ನು ಆಯ್ಕೆ ಮಾಡಲಾಯಿತು ಮತ್ತು ಅವರು ಚಿತ್ರದ ಪಾತ್ರಕ್ಕೆ ನಿರೀಕ್ಷೆಗಿಂತ ಹೆಚ್ಚು ನ್ಯಾಯ ಒದಗಿಸಿದ್ದಾರೆಂದಿದ್ದಾರೆ. ಹೇ ಪ್ರಭು ಚಿತ್ರದಲ್ಲಿ ಡಾ. ಸುಧಾಕರ್ ಶೆಟ್ಟಿಯವರು ಅಭಿನಯಿಸಿರುವುದ್ದರಿಂದ ಈ ಚಿತ್ರದ ಬಗ್ಗೆ ಕರ್ನಾಟಕ, ಮಹಾರಾಷ್ಟ್ರದಲ್ಲಿರುವ ಲಕ್ಷಾಂತರ ಮಂದಿ ಡಾ. ಸುಧಾಕರ್ ಶೆಟ್ಟಿಯವರ ಅಭಿಮಾನಿಗಳು ಚಿತ್ರ ವೀಕ್ಷಿಸುವ ಸಾಧ್ಯತೆ ಇದೆ.ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಆದರ್ಶ್ E ಅವರು ಕೂಡಾ ಡಾ. ಸುಧಾಕರ್ ಶೆಟ್ಟಿಯವರ ಜೊತೆ ಅಭಿನಯಿಸಿದ್ದರು.ಹೇ ಪ್ರಭುವಿನಲ್ಲಿ ಡಾ. ಸುಧಾಕರ್ ಶೆಟ್ಟಿಯವರು ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸಿದ ದೃಶ್ಯವನ್ನು ನೋಡಲು ಈ ಲಿಂಕ್ ಬಳಸಿ https://drive.google.com/file/d/1F74BbGb2WnvEmBuUWEUG4yC_odjDvAaQ/view?usp=sharing

ಪ್ರಾದೇಶಿಕ ವಾರ್ತೆಗಳು

ಜಾಗತಿಕ ಬಂಟರ ಸಂಘಗಳ ಒಕ್ಕೂಟ: ಆಡಳಿತ ಮಂಡಳಿಯ ಸಭೆಮುಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಸುಸಜ್ಜಿತ ಸಭಾಂಗಣ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಇದರ ಆಡಳಿತ ಮಂಡಳಿಯ ಸಭೆ ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು.ಮುಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ತೋನ್ಸೆ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯಲ್ಲಿ , ಕನ್ಯಾನ ಸದಾಶಿವ ಶೆಟ್ಟಿ ಹವಾನಿಯಂತ್ರಿತ ಸಭಾಂಗಣ ರಚನೆಯಾಗಲಿದೆ ಎಂದರು. ಸುಮಾರು 1,200 ಆಸನಗಳ ಸೌಲಭ್ಯ ಇರುವ ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣವನ್ನು ನಿರ್ಮಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 2025 ರ ಎಪ್ರಿಲ್ ತಿಂಗಳಲ್ಲಿ ಸಭಾಂಗಣವನ್ನು ನಿರ್ಮಾಣ ಮಾಡಿ ಸಮಾಜಕ್ಕೆ ಅರ್ಪಿಸಲಾಗುವುದು. ಇದಕ್ಕೆ ಸಮಾಜದ ಎಲ್ಲರ ಸಹಕಾರ ಅಗತ್ಯ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರು ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಒಂದು ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣದ ಅಗತ್ಯ ಇದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ದಾನಿಗಳ ನೆರವಿನಿಂದ ನಿರ್ಮಾಣ ಆಗುತ್ತಿರುವ ಹವಾ ನಿಯಂತ್ರಿತ ಸಭಾಂಗಣದ ಕಟ್ಟಡವು ವೇಗವನ್ನು ಪಡೆಯಬೇಕು. ಇದಕ್ಕೆ ನನ್ನ ಸಂಪೂರ್ಣ ಸಹಕಾರವೂ ಇದೆ. ಜೊತೆಗೆ ಎಲ್ಲಾ ದಾನಿಗಳು ಕೈಜೋಡಿಸಿ ಸಹಕಾರ ನೀಡಬೇಕು. ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣದಿಂದ ಸಾಮಾನ್ಯ ಜನರಿಗೂ ಪ್ರಯೋಜನ ಆಗಬೇಕು. ಸಮಾಜವನ್ನು ಗಟ್ಟಿಗೊಳಿಸುವ ಜವಾಬ್ದಾರಿ ಇದೆ. ಇದು ನನ್ನ ಯೋಗ, ಭಾಗ್ಯ, ಸಭಾಂಗಣದ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕೆಂದರು.ಮುಖ್ಯ ಅತಿಥಿ ಸವಣೂರು ಸೀತಾರಾಮ ರೈ ಮಾತನಾಡಿ, ಕನ್ಯಾನ ಸದಾಶಿವ ಶೆಟ್ಟಿ, ಕೆ ಪ್ರಕಾಶ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ ಅವರ ಸಮಾಜ ಸೇವೆಯನ್ನು ಯಾವಾಗಲೂ ಸ್ಮರಿಸುವಂತದ್ದು, ಸಮಾಜದ ಬಗ್ಗೆ ಅವರಿಗೆ ಇರುವ ಕಾಳಜಿ ಮತ್ತು ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಇಂತಹ ನಾಯಕರನ್ನು ಪಡೆದ ಬಂಟ ಸಮಾಜ ಯಾವತ್ತೂ ಅವರಿಗೆ ಚಿರಋಣಿಯಾಗಿರುತ್ತದೆ ಎಂದರು.ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಶಶಿಧರ ಶೆಟ್ಟಿ ಇನ್ನಂಜೆ, ಡಾ ಆರ್ ಕೆ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ವೇಣು ಗೋಪಾಲ್ ಶೆಟ್ಟಿ ಥಾಣೆ, ರತ್ನಾ ಪಿ ಶೆಟ್ಟಿ ಮುಂಬೈ, ಅಜಿತ್ ಹೆಗ್ಡೆ ಪೂನಾ, ಗಿರೀಶ್ ಶೆಟ್ಟಿ ತೆಳ್ಳಾರು, ನಾಗೇಶ್ ಹೆಗ್ಡೆ ಉಡುಪಿ, ಹರಿ ಪ್ರಸಾದ್ ರೈ ಉಡುಪಿ, ಲೋಕೇಶ್ ಶೆಟ್ಟಿ ಬಂಟ್ವಾಳ, ಶ್ರೀಧರ ಶೆಟ್ಟಿ ಬ್ರಹ್ಮಾವರ, ಸುರೇಶ್ ರೈ ಮಕರ ಜ್ಯೋತಿ, ಸಿಎ ದಯಾಚರಣ್ ಶೆಟ್ಟಿ, ವಕೀಲ ಪೃಥ್ವಿರಾಜ ರೈ ಮೊದಲಾದವರು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಚಂದ್ರಹಾಸ ಶೆಟ್ಟಿ ವಂದಿಸಿದರು. ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥನೆಗೈದರು.ಇದೇ ಸಂದರ್ಭದಲ್ಲಿ ನೀಟ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಕ್ಷಣ್ ಶೇಖ ಸಾಲೆತ್ತೂರು ಅವರನ್ನು ಒಕ್ಕೂಟದ ಅಧ್ಯಕ್ಷರು ಸನ್ಮಾನಿಸಿದರು.

Scroll to Top